ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಸಾಂತ್ವನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?

ನಿಜ ಸಾಂತ್ವನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?

ನಿಜ ಸಾಂತ್ವನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?

“ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ . . . ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ.”​—2 ಕೊರಿಂಥ 1:​3, 4.

1. ಯಾವ ಸನ್ನಿವೇಶಗಳು ಜನರಿಗೆ ಸಾಂತ್ವನದ ಆವಶ್ಯಕತೆಯನ್ನು ಉಂಟುಮಾಡುತ್ತವೆ?

ಅಂಗವಿಕಲಗೊಳಿಸುವಂಥ ಒಂದು ಅಸ್ವಸ್ಥತೆಯು, ಜೀವನವು ಸುಧಾರಿಸಲಾಗದಷ್ಟು ಹದಗೆಟ್ಟಿದೆ ಎಂಬ ಅನಿಸಿಕೆಯನ್ನು ಒಬ್ಬ ವ್ಯಕ್ತಿಯಲ್ಲಿ ಮೂಡಿಸಬಹುದು. ಭೂಕಂಪಗಳು, ಚಂಡಮಾರುತಗಳು, ಮತ್ತು ಬರಗಾಲವು ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತದೆ. ಯುದ್ಧದ ಫಲಿತಾಂಶವಾಗಿ ಕುಟುಂಬದ ಸದಸ್ಯರು ಮರಣಹೊಂದಬಹುದು, ಮನೆಗಳು ನಾಶವಾಗಬಹುದು, ಅಥವಾ ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷೆಗಾಗಿ ಬೇರೆ ಸ್ಥಳಗಳಿಗೆ ಪಲಾಯನಗೈಯುವಂತೆ ಒತ್ತಾಯಿಸಲ್ಪಡಬಹುದು. ಅನ್ಯಾಯವು, ತಾವು ಬಿಡುಗಡೆಯನ್ನು ಪಡೆಯಲಿಕ್ಕಾಗಿ ಆಶ್ರಯಿಸಸಾಧ್ಯವಿರುವ ಯಾವ ಸ್ಥಳವೂ ಇಲ್ಲ ಎಂದು ಜನರು ನೆನಸುವಂತೆ ಮಾಡಬಹುದು. ಇಂಥ ಸಂಕಷ್ಟಗಳಿಂದ ಬಾಧಿತರಾದವರು, ಸಾಂತ್ವನವನ್ನು ಪಡೆದುಕೊಳ್ಳಲು ಹಂಬಲಿಸುತ್ತಿರುತ್ತಾರೆ. ಈ ಸಾಂತ್ವನವು ಎಲ್ಲಿ ದೊರಕೀತು?

2. ಯೆಹೋವನಿಂದ ಒದಗಿಸಲ್ಪಡುವ ಸಾಂತ್ವನವು ಏಕೆ ಅಪೂರ್ವವಾದದ್ದಾಗಿದೆ?

2 ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಾಂತ್ವನವನ್ನು ಒದಗಿಸಲು ಪ್ರಯತ್ನಿಸುವುದುಂಟು. ದಯಾಭರಿತ ಮಾತುಗಳನ್ನು ಗಣ್ಯಮಾಡಲಾಗುತ್ತದೆ. ಆಹಾರ, ವಸತಿ, ಹಾಗೂ ಬಟ್ಟೆಬರೆಯಂಥ ಭೌತಿಕ ವಸ್ತುಗಳ ಒದಗಿಸುವಿಕೆಯು, ಸ್ವಲ್ಪ ಕಾಲಾವಧಿಯ ವರೆಗೆ ಮಾತ್ರ ಆವಶ್ಯಕತೆಗಳನ್ನು ಪೂರೈಸಲು ಸಹಾಯಮಾಡುತ್ತದೆ. ಆದರೆ ಸತ್ಯ ದೇವರಾಗಿರುವ ಯೆಹೋವನು ಮಾತ್ರ ಎಲ್ಲಾ ಹಾನಿಯನ್ನು ಸರಿಪಡಿಸಬಲ್ಲನು ಮತ್ತು ಅಂಥ ವಿಪತ್ತುಗಳು ಪುನಃ ಎಂದೂ ಸಂಭವಿಸದಿರಲು ಅಗತ್ಯವಿರುವ ಸಹಾಯವನ್ನು ಒದಗಿಸಬಲ್ಲನು. ಆತನ ಕುರಿತು ಬೈಬಲು ಹೇಳುವುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ.” (2 ಕೊರಿಂಥ 1:3, 4) ಯೆಹೋವನು ನಮ್ಮನ್ನು ಹೇಗೆ ಸಂತೈಸುತ್ತಾನೆ?

ಸಮಸ್ಯೆಗಳ ಮೂಲದೊಂದಿಗೆ ವ್ಯವಹರಿಸುವುದು

3. ದೇವರು ಕೊಡುವಂಥ ಸಾಂತ್ವನವು, ಮಾನವಕುಲದ ಸಮಸ್ಯೆಗಳ ಮೂಲದೊಂದಿಗೆ ವ್ಯವಹರಿಸಲು ಹೇಗೆ ಸಹಾಯಮಾಡುತ್ತದೆ?

3 ಆದಾಮನ ಪಾಪದ ಫಲಿತಾಂಶವಾಗಿ ಇಡೀ ಮಾನವಕುಲವು ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿದೆ, ಮತ್ತು ಅದು ಕಾಲಕ್ರಮೇಣ ಮರಣಕ್ಕೆ ನಡೆಸುವಂಥ ಅಸಂಖ್ಯಾತ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. (ರೋಮಾಪುರ 5:12) ಪಿಶಾಚನಾದ ಸೈತಾನನು “ಇಹಲೋಕಾಧಿಪತಿ”ಯಾಗಿದ್ದಾನೆ ಎಂಬ ವಾಸ್ತವಾಂಶದಿಂದ ಈ ಸನ್ನಿವೇಶವು ಇನ್ನಷ್ಟು ಉಲ್ಬಣಗೊಂಡಿದೆ. (ಯೋಹಾನ 12:31; 1 ಯೋಹಾನ 5:19) ಇಂದು ಮಾನವಕುಲವು ಎದುರಿಸುತ್ತಿರುವ ಅಸಂತೋಷಕರ ಸನ್ನಿವೇಶದ ಬಗ್ಗೆ ಯೆಹೋವನು ಕೇವಲ ದುಃಖವನ್ನು ವ್ಯಕ್ತಪಡಿಸುವುದಕ್ಕಿಂತಲೂ ಹೆಚ್ಚನ್ನು ಮಾಡಿದನು. ವಿಮೋಚನೆಯನ್ನು ಒದಗಿಸಲಿಕ್ಕಾಗಿ ಆತನು ತನ್ನ ಏಕಜಾತ ಪುತ್ರನನ್ನು ಪ್ರಾಯಶ್ಚಿತ್ತವಾಗಿ ಕಳುಹಿಸಿದನು, ಮತ್ತು ನಾವು ಆತನ ಕುಮಾರನಲ್ಲಿ ನಂಬಿಕೆಯನ್ನಿಡುವುದಾದರೆ ಆದಾಮನಿಂದ ಉಂಟಾದ ಪಾಪದ ಪರಿಣಾಮಗಳಿಂದ ಮುಕ್ತರಾಗಸಾಧ್ಯವಿದೆ ಎಂದು ಆತನು ತಿಳಿಸಿದನು. (ಯೋಹಾನ 3:16; 1 ಯೋಹಾನ 4:10) ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವನ್ನು ವಹಿಸಿಕೊಂಡಿರುವ ಯೇಸು ಕ್ರಿಸ್ತನು, ಸೈತಾನನನ್ನೂ ಅವನ ಇಡೀ ದುಷ್ಟ ವಿಷಯಗಳ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನಾಶಮಾಡುವನು ಎಂದು ಸಹ ದೇವರು ಮುಂತಿಳಿಸಿದನು.​—ಮತ್ತಾಯ 28:18; 1 ಯೋಹಾನ 3:8; ಪ್ರಕಟನೆ 6:2; 20:10.

4. (ಎ) ಬಿಡುಗಡೆಯ ಕುರಿತಾದ ಯೆಹೋವನ ವಾಗ್ದಾನಗಳಲ್ಲಿನ ನಮ್ಮ ಭರವಸೆಯನ್ನು ಬಲಪಡಿಸಲಿಕ್ಕಾಗಿ ಆತನು ಏನನ್ನು ಒದಗಿಸಿದ್ದಾನೆ? (ಬಿ) ಬಿಡುಗಡೆಯು ಯಾವಾಗ ಬರುವುದು ಎಂಬುದನ್ನು ವಿವೇಚಿಸಲಿಕ್ಕಾಗಿ ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?

4 ದೇವರು ತನ್ನ ವಾಗ್ದಾನಗಳಲ್ಲಿರುವ ನಮ್ಮ ಭರವಸೆಯನ್ನು ಇನ್ನಷ್ಟು ಬಲಪಡಿಸಲಿಕ್ಕಾಗಿ, ಆತನು ಏನನ್ನು ಮುಂತಿಳಿಸುತ್ತಾನೋ ಅದು ಖಂಡಿತವಾಗಿಯೂ ನೆರವೇರುತ್ತದೆ ಎಂಬುದಕ್ಕೆ ಹೇರಳವಾದ ಪುರಾವೆಯನ್ನು ದಾಖಲಿಸಿದ್ದಾನೆ. (ಯೆಹೋಶುವ 23:14) ಮಾನವ ದೃಷ್ಟಿಕೋನದಿಂದ ಅಸಾಧ್ಯವಾಗಿ ಕಂಡುಬರಸಾಧ್ಯವಿರುವಂಥ ಸನ್ನಿವೇಶಗಳಿಂದ ತನ್ನ ಸೇವಕರನ್ನು ರಕ್ಷಿಸಲಿಕ್ಕಾಗಿ ಆತನು ಏನು ಮಾಡಿದ್ದಾನೆ ಎಂಬುದರ ಕುರಿತಾದ ದಾಖಲೆಯನ್ನೂ ಆತನು ಬೈಬಲಿನಲ್ಲಿ ಒಳಗೂಡಿಸಿದ್ದಾನೆ. (ವಿಮೋಚನಕಾಂಡ 14:4-31; 2 ಅರಸುಗಳು 18:​13–19:37) ಮತ್ತು ‘ಎಲ್ಲಾ ತರದ ರೋಗಗಳಿರುವ’ ಜನರನ್ನು ವಾಸಿಮಾಡುವುದರೊಂದಿಗೆ ಮೃತರನ್ನು ಪುನರುತ್ಥಾನಗೊಳಿಸುವುದು ಸಹ ತನ್ನ ಉದ್ದೇಶದಲ್ಲಿ ಒಳಗೂಡಿದೆ ಎಂಬುದನ್ನು ಯೆಹೋವನು ಯೇಸು ಕ್ರಿಸ್ತನ ಮೂಲಕ ತೋರ್ಪಡಿಸಿದನು. (ಮತ್ತಾಯ 9:35; 11:3-6) ಇದೆಲ್ಲವೂ ಯಾವಾಗ ಸಂಭವಿಸುತ್ತದೆ? ಇದಕ್ಕೆ ಉತ್ತರವಾಗಿ, ನೂತನಾಕಾಶ ಹಾಗೂ ನೂತನಭೂಮಂಡಲಕ್ಕೆ ಮುಂಚೆ ಅಸ್ತಿತ್ವದಲ್ಲಿರುವ ಈ ಹಳೇ ವ್ಯವಸ್ಥೆಯ ಕಡೇ ದಿವಸಗಳ ಕುರಿತಾದ ಒಂದು ವಿವರಣೆಯು ಬೈಬಲಿನಲ್ಲಿದೆ. ಯೇಸುವಿನ ವಿವರಣೆಯು ನಾವು ಜೀವಿಸುತ್ತಿರುವ ಸಮಯಗಳಿಗೆ ಹೊಂದಿಕೆಯಲ್ಲಿದೆ.​—ಮತ್ತಾಯ 24:3-14; 2 ತಿಮೊಥೆಯ 3:1-5.

ಸಂಕಷ್ಟದಲ್ಲಿರುವ ಜನರಿಗೆ ಸಾಂತ್ವನ

5. ಪುರಾತನ ಇಸ್ರಾಯೇಲಿಗೆ ಸಾಂತ್ವನವನ್ನು ನೀಡುತ್ತಿರುವಾಗ, ಯೆಹೋವನು ಅವರ ಗಮನವನ್ನು ಯಾವುದರ ಕಡೆಗೆ ಸೆಳೆದನು?

5 ಪುರಾತನ ಇಸ್ರಾಯೇಲಿನೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯಿಂದ, ಸಂಕಷ್ಟಕರ ಸಮಯಗಳಲ್ಲಿ ಆತನು ಅವರಿಗೆ ಹೇಗೆ ಸಾಂತ್ವನವನ್ನು ನೀಡಿದನು ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. ತಾನು ಎಂಥ ರೀತಿಯ ದೇವರಾಗಿದ್ದೇನೆ ಎಂಬುದನ್ನು ಆತನು ಅವರಿಗೆ ಜ್ಞಾಪಕಹುಟ್ಟಿಸಿದನು. ತನ್ನ ವಾಗ್ದಾನಗಳಲ್ಲಿ ಅವರ ಭರವಸೆಯನ್ನು ಬಲಪಡಿಸಿದನು. ಸತ್ಯ ಹಾಗೂ ಜೀವಸ್ವರೂಪನಾದ ದೇವರೋಪಾದಿ ಯೆಹೋವನು ತನ್ನ ಹಾಗೂ ಸ್ವತಃ ತಮಗೆ ಇಲ್ಲವೆ ತಮ್ಮ ಆರಾಧಕರಿಗೆ ಸಹಾಯಮಾಡಲು ಅಸಮರ್ಥರಾಗಿರುವ ವಿಗ್ರಹಗಳ ನಡುವಿನ ಸುಸ್ಪಷ್ಟ ವ್ಯತ್ಯಾಸಗಳನ್ನು ತನ್ನ ಪ್ರವಾದಿಗಳು ಉಪಯೋಗಿಸುವಂತೆ ಮಾಡಿದನು. (ಯೆಶಾಯ 41:10; 46:1; ಯೆರೆಮೀಯ 10:2-15) “ನನ್ನ ಜನರನ್ನು ಸಂತೈಸಿರಿ” ಎಂದು ಯೆಶಾಯನಿಗೆ ಹೇಳುವಾಗ, ಏಕಮಾತ್ರ ಸತ್ಯ ದೇವರೋಪಾದಿ ಯೆಹೋವನ ಮಹೋನ್ನತೆಯನ್ನು ಒತ್ತಿಹೇಳಲಿಕ್ಕಾಗಿ ಆತನ ಸೃಷ್ಟಿಕ್ರಿಯೆಗಳ ಕುರಿತಾದ ದೃಷ್ಟಾಂತಗಳನ್ನು ಹಾಗೂ ವರ್ಣನೆಗಳನ್ನು ತನ್ನ ಪ್ರವಾದಿಗಳು ಉಪಯೋಗಿಸುವಂತೆ ಯೆಹೋವನು ಪ್ರಚೋದಿಸಿದನು.​—ಯೆಶಾಯ 40:1-31.

6. ಬಿಡುಗಡೆಯು ಯಾವಾಗ ಬರುವುದು ಎಂಬ ವಿಷಯದಲ್ಲಿ ಕೆಲವೊಮ್ಮೆ ಯೆಹೋವನು ಯಾವ ಸೂಚನೆಗಳನ್ನು ಕೊಟ್ಟನು?

6 ಕೆಲವೊಂದು ಸಂದರ್ಭಗಳಲ್ಲಿ ಯೆಹೋವನು, ತನ್ನ ಜನರು ವಿಮೋಚಿಸಲ್ಪಡಲಿದ್ದ ಸಮಯವನ್ನು​—ಅದು ತೀರ ಸಮೀಪದಲ್ಲಿರಲಿ ಇಲ್ಲವೆ ದೂರದಲ್ಲಿರಲಿ​—ಸ್ಪಷ್ಟವಾಗಿ ತಿಳಿಸುವ ಮೂಲಕ ಸಾಂತ್ವನವನ್ನು ನೀಡಿದನು. ಐಗುಪ್ತದಿಂದ ವಿಮೋಚನೆಯು ಸಮೀಪಿಸಿದಂತೆ, ದಬ್ಬಾಳಿಕೆಗೊಳಗಾಗಿದ್ದ ಇಸ್ರಾಯೇಲ್ಯರಿಗೆ ಆತನು ಹೇಳಿದ್ದು: “ಫರೋಹನಿಗೂ ಐಗುಪ್ತ್ಯರಿಗೂ ಇನ್ನೊಂದು ಉಪದ್ರವವನ್ನು ಬರಮಾಡುತ್ತೇನೆ; ಅದು ಬಂದನಂತರ ಅವನು ನಿಮಗೆ ಇಲ್ಲಿಂದ ಹೋಗುವದಕ್ಕೆ ಅಪ್ಪಣೆಕೊಡು”ವನು. (ವಿಮೋಚನಕಾಂಡ 11:1) ರಾಜನಾದ ಯೆಹೋಷಾಫಾಟನ ದಿನಗಳಲ್ಲಿ ಮೂರು ಜನಾಂಗಗಳು ಒಟ್ಟುಗೂಡಿ ಯೆಹೂದದ ಮೇಲೆ ದಾಳಿಮಾಡಿದಾಗ, “ನಾಳೆ ಬೆಳಿಗ್ಗೆ” ತಾನು ಅವರ ಪರವಾಗಿ ಕಾರ್ಯನಡಿಸುವೆನೆಂದು ಯೆಹೋವನು ಅವರಿಗೆ ಹೇಳಿದನು. (2 ಪೂರ್ವಕಾಲವೃತ್ತಾಂತ 20:1-4, 14-17) ಇನ್ನೊಂದು ಕಡೆಯಲ್ಲಿ, ಬಾಬೆಲಿನಿಂದ ಅವರ ಬಿಡುಗಡೆಯು ಸುಮಾರು 200 ವರ್ಷಗಳಿಗೆ ಮುಂಚೆಯೇ ಯೆಶಾಯನಿಂದ ದಾಖಲಿಸಲ್ಪಟ್ಟಿತ್ತು. ಮತ್ತು ವಿಮೋಚನೆಯು ಸಂಭವಿಸುವ ಒಂದು ನೂರು ವರ್ಷಗಳಿಗೆ ಮುಂಚೆಯೇ ಇನ್ನೂ ಹೆಚ್ಚಿನ ವಿವರಗಳು ಯೆರೆಮೀಯನ ಮೂಲಕ ಕೊಡಲ್ಪಟ್ಟಿದ್ದವು. ಬಿಡುಗಡೆಗಾಗಿರುವ ಸಮಯವು ಸಮೀಪಿಸಿದಾಗ, ದೇವರ ಸೇವಕರಿಗೆ ಆ ಪ್ರವಾದನೆಗಳು ಎಷ್ಟು ಉತ್ತೇಜನದಾಯಕವಾಗಿದ್ದವು!​—ಯೆಶಾಯ 44:​26–45:3; ಯೆರೆಮೀಯ 25:11-14.

7. ಬಿಡುಗಡೆಯ ವಾಗ್ದಾನಗಳಲ್ಲಿ ಅನೇಕವೇಳೆ ಏನು ಒಳಗೂಡಿತ್ತು, ಮತ್ತು ಇದು ಇಸ್ರಾಯೇಲ್‌ನ ನಂಬಿಗಸ್ತ ಜನರ ಮೇಲೆ ಹೇಗೆ ಪ್ರಭಾವಬೀರಿತು?

7 ದೇವಜನರಿಗೆ ಸಾಂತ್ವನವನ್ನು ತಂದಂಥ ವಾಗ್ದಾನಗಳು ಅನೇಕವೇಳೆ ಮೆಸ್ಸೀಯನ ಕುರಿತಾದ ಮಾಹಿತಿಯನ್ನು ಒಳಗೂಡಿದ್ದವು ಎಂಬುದು ಗಮನಾರ್ಹ ಸಂಗತಿಯಾಗಿದೆ. (ಯೆಶಾಯ 53:​1-12) ತಲತಲಾಂತರಕ್ಕೂ ನಂಬಿಗಸ್ತ ಜನರು ಅಸಂಖ್ಯಾತ ಪರೀಕ್ಷೆಗಳನ್ನು ಎದುರಿಸಿದಾಗ, ಇದು ಅವರಿಗೆ ನಿರೀಕ್ಷೆಯನ್ನು ಮೂಡಿಸಿತು. ಲೂಕ 2:25:ರಲ್ಲಿ ನಾವು ಓದುವುದು: “ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದು ಇಸ್ರಾಯೇಲ್‌ ಜನರನ್ನು ಸಂತೈಸುವವನು ಯಾವಾಗ ಬಂದಾನೆಂದು [ವಾಸ್ತವದಲ್ಲಿ ಮೆಸ್ಸೀಯನ ಬರೋಣಕ್ಕಾಗಿ] ಹಾರೈಸುತ್ತಿದ್ದನು; ಮತ್ತು ಪವಿತ್ರಾತ್ಮಪ್ರೇರಿತನಾಗಿದ್ದನು.” ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿದ್ದ ಮೆಸ್ಸೀಯ ಸಂಬಂಧಿತ ನಿರೀಕ್ಷೆಯ ಕುರಿತು ಸಿಮೆಯೋನನು ತಿಳಿದಿದ್ದನು, ಮತ್ತು ಅದರ ನೆರವೇರಿಕೆಯ ನಿರೀಕ್ಷಣೆಯು ಅವನ ಜೀವಿತವನ್ನು ಪ್ರಭಾವಿಸಿತ್ತು. ಅದು ಹೇಗೆ ನೆರವೇರುತ್ತದೆ ಎಂಬುದನ್ನು ಅವನು ಅರ್ಥಮಾಡಿಕೊಳ್ಳಲಿಲ್ಲ, ಮತ್ತು ಮುಂತಿಳಿಸಲ್ಪಟ್ಟ ರಕ್ಷಣೆಯು ನಿಜವಾಗಿಯೂ ಸಂಭವಿಸುವುದನ್ನು ನೋಡುವಷ್ಟರ ತನಕ ಅವನು ಬದುಕಿರಲಿಲ್ಲ. ಆದರೂ ದೇವರು “ನೇಮಿಸಿರುವ ರಕ್ಷಕ”ನಾಗಿ ಪರಿಣಮಿಸಲಿದ್ದಾತನನ್ನು ಅವನು ಗುರುತಿಸಿದಾಗ ಅವನಿಗೆ ಪರಮಾನಂದವಾಯಿತು.​—ಲೂಕ 2:30.

ಕ್ರಿಸ್ತನ ಮೂಲಕ ಒದಗಿಸಲ್ಪಟ್ಟ ಸಾಂತ್ವನ

8. ತಮಗೆ ಅಗತ್ಯವಿದೆ ಎಂದು ಅನೇಕ ಜನರು ನೆನಸಿದ್ದ ಸಹಾಯಕ್ಕೆ ಹೋಲಿಸುವಾಗ, ಯೇಸು ಕೊಟ್ಟ ಸಹಾಯವು ಹೇಗೆ ಭಿನ್ನವಾಗಿತ್ತು?

8 ಯೇಸು ಕ್ರಿಸ್ತನು ತನ್ನ ಭೂಶುಶ್ರೂಷೆಯನ್ನು ನಡೆಸುತ್ತಿದ್ದಾಗ, ತಮಗೆ ಅಗತ್ಯವಿದೆ ಎಂದು ಜನರು ನೆನಸಿದಂಥ ರೀತಿಯ ಸಹಾಯವನ್ನು ಅವನು ಯಾವಾಗಲೂ ಒದಗಿಸಲಿಲ್ಲ. ತಮ್ಮನ್ನು ರೋಮನ್‌ ಆಧಿಪತ್ಯದಿಂದ ಬಿಡುಗಡೆಗೊಳಿಸುವಂಥ ಒಬ್ಬ ಮೆಸ್ಸೀಯನಿಗಾಗಿ ಕೆಲವರು ಹಂಬಲಿಸುತ್ತಿದ್ದರು. ಆದರೆ ಯೇಸು ಎಂದೂ ಕ್ರಾಂತಿಯನ್ನು ಸಮರ್ಥಿಸಲಿಲ್ಲ; “ಕೈಸರನದನ್ನು ಕೈಸರನಿಗೆ ಕೊಡಿರಿ” ಎಂದು ಅವನು ಅವರಿಗೆ ಹೇಳಿದನು. (ಮತ್ತಾಯ 22:21) ಯಾವುದೋ ಒಂದು ರಾಜಕೀಯ ಆಳ್ವಿಕೆಯಿಂದ ಜನರನ್ನು ವಿಮೋಚಿಸುವುದಕ್ಕಿಂತಲೂ ಹೆಚ್ಚಿನದ್ದು ದೇವರ ಉದ್ದೇಶದಲ್ಲಿ ಒಳಗೂಡಿತ್ತು. ಜನರು ಯೇಸುವನ್ನು ಅರಸನಾಗಿ ಮಾಡಲು ಬಯಸಿದರು, ಆದರೆ ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುತ್ತೇನೆ’ ಎಂದು ಅವನು ಹೇಳಿದನು. (ಮತ್ತಾಯ 20:28; ಯೋಹಾನ 6:15) ಆಗ ಅವನು ರಾಜ್ಯಭಾರವನ್ನು ಸ್ವೀಕರಿಸುವ ಸಮಯವು ಇನ್ನೂ ಬಂದಿರಲಿಲ್ಲ. ಮತ್ತು ಅವನಿಗೆ ಆಳುವ ಅಧಿಕಾರವು ಅತೃಪ್ತ ಜನರ ಗುಂಪುಗಳಿಂದಲ್ಲ, ಯೆಹೋವನಿಂದ ಕೊಡಲ್ಪಡಲಿಕ್ಕಿತ್ತು.

9. (ಎ) ಯೇಸು ಸಾರಿದಂಥ ಸಾಂತ್ವನದಾಯಕ ಸಂದೇಶವು ಯಾವುದಾಗಿತ್ತು? (ಬಿ) ಆ ಸಂದೇಶಕ್ಕೂ ಜನರು ವೈಯಕ್ತಿಕವಾಗಿ ಎದುರಿಸುತ್ತಿದ್ದ ಸನ್ನಿವೇಶಗಳಿಗೂ ಇದ್ದ ಸಂಬಂಧವನ್ನು ಯೇಸು ಹೇಗೆ ತೋರಿಸಿದನು? (ಸಿ) ಯೇಸುವಿನ ಶುಶ್ರೂಷೆಯು ಯಾವುದಕ್ಕೆ ತಳಪಾಯವನ್ನು ಹಾಕಿತು?

9 ಯೇಸು ನೀಡಿದಂಥ ಸಾಂತ್ವನವು “ದೇವರ ರಾಜ್ಯದ ಸುವಾರ್ತೆ”ಯಲ್ಲಿ ಒಳಗೂಡಿತ್ತು. ಅವನು ಎಲ್ಲೆಲ್ಲಾ ಹೋದನೋ ಅಲ್ಲೆಲ್ಲಾ ಸಾರಿದ ಸಂದೇಶವು ಇದೇ ಆಗಿತ್ತು. (ಲೂಕ 4:43) ಮೆಸ್ಸೀಯ ರಾಜನೋಪಾದಿ ಅವನು ಮಾನವಕುಲಕ್ಕೆ ಏನು ಮಾಡಲಿರುವನು ಎಂಬುದನ್ನು ತೋರಿಸುವ ಮೂಲಕ, ಜನರ ದೈನಂದಿನ ಸಮಸ್ಯೆಗಳಿಗೂ ಆ ಸಂದೇಶಕ್ಕೂ ಇರುವ ಸಂಬಂಧವನ್ನು ಒತ್ತಿಹೇಳಿದನು. ಕುರುಡನನ್ನು ಹಾಗೂ ಮೂಕನನ್ನು ಸ್ವಸ್ಥಮಾಡುವ ಮೂಲಕ (ಮತ್ತಾಯ 12:22; ಮಾರ್ಕ 10:51, 52), ಅಶಕ್ತವಾಗಿದ್ದ ಕೈಕಾಲುಗಳನ್ನು ಗುಣಪಡಿಸುವ ಮೂಲಕ (ಮಾರ್ಕ 2:3-12), ಜೊತೆ ಇಸ್ರಾಯೇಲ್ಯರಿಗಿದ್ದ ಅಸಹ್ಯಕರವಾದ ರೋಗಗಳನ್ನು ವಾಸಿಮಾಡುವ ಮೂಲಕ (ಲೂಕ 5:12, 13), ಮತ್ತು ಇತರ ಗಂಭೀರ ಅಸ್ವಸ್ಥತೆಗಳಿಂದ ಅವರಿಗೆ ಉಪಶಮನ ನೀಡುವ ಮೂಲಕ (ಮಾರ್ಕ 5:25-29) ಕಷ್ಟಾನುಭವಿಸುತ್ತಿದ್ದ ವ್ಯಕ್ತಿಗಳಿಗೆ ಯೇಸು ಜೀವಿಸಲು ಹೊಸ ಕಾರಣವನ್ನು ಕೊಟ್ಟನು. ಮಕ್ಕಳನ್ನು ಪುನರುತ್ಥಾನಗೊಳಿಸುವ ಮೂಲಕ, ದುಃಖಿಸುತ್ತಿರುವ ಕುಟುಂಬದ ಸದಸ್ಯರಿಗೆ ಅತ್ಯಧಿಕ ಉಪಶಮನವನ್ನು ನೀಡಿದನು. (ಲೂಕ 7:11-15; 8:49-56) ಅಪಾಯಕರ ಬಿರುಗಾಳಿಯನ್ನು ನಿಯಂತ್ರಿಸುವ ಹಾಗೂ ದೊಡ್ಡ ಗುಂಪುಗಳ ಆಹಾರದ ಆವಶ್ಯಕತೆಯನ್ನು ತೃಪ್ತಿಪಡಿಸುವ ತನ್ನ ಸಾಮರ್ಥ್ಯವನ್ನು ಅವನು ತೋರಿಸಿದನು. (ಮಾರ್ಕ 4:37-41; 8:2-9) ಅಷ್ಟುಮಾತ್ರವಲ್ಲ, ಅಸ್ತಿತ್ವದಲ್ಲಿರುವ ಸಮಸ್ಯೆಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವಂತೆ ಜನರಿಗೆ ಸಹಾಯಮಾಡುವ, ಹಾಗೂ ಮೆಸ್ಸೀಯನ ಆಳ್ವಿಕೆಯ ಕೆಳಗೆ ನೀತಿಯ ರಾಜ್ಯಭಾರಕ್ಕಾಗಿರುವ ನಿರೀಕ್ಷೆಯನ್ನು ಅವರಲ್ಲಿ ತುಂಬಿಸುವ ಮೂಲತತ್ತ್ವಗಳನ್ನು ಯೇಸು ಕಲಿಸಿದನು. ಹೀಗೆ, ಯೇಸು ತನ್ನ ಶುಶ್ರೂಷೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾಗ, ನಂಬಿಕೆಯಿಂದ ಅವನಿಗೆ ಕಿವಿಗೊಡುತ್ತಿದ್ದವರಿಗೆ ಅವನು ಸಾಂತ್ವನವನ್ನು ನೀಡಿದನು ಮಾತ್ರವಲ್ಲ, ಬರಲಿಕ್ಕಿದ್ದ ಸಾವಿರಾರು ವರ್ಷಗಳ ವರೆಗೆ ಜನರನ್ನು ಉತ್ತೇಜಿಸಲಿಕ್ಕಾಗಿ ತಳಪಾಯವನ್ನೂ ಹಾಕಿದನು.

10. ಯೇಸುವಿನ ಯಜ್ಞದ ಫಲಿತಾಂಶವಾಗಿ ಯಾವುದು ಸಾಧ್ಯಗೊಳಿಸಲ್ಪಟ್ಟಿದೆ?

10 ಯೇಸು ತನ್ನ ಮಾನವ ಜೀವಿತವನ್ನು ಯಜ್ಞವಾಗಿ ಅರ್ಪಿಸಿ, ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಟ್ಟು 60ಕ್ಕಿಂತಲೂ ಹೆಚ್ಚು ವರ್ಷಗಳು ಕಳೆದ ಬಳಿಕ, ಅಪೊಸ್ತಲ ಯೋಹಾನನು ಹೀಗೆ ಬರೆಯುವಂತೆ ಪ್ರೇರೇಪಿಸಲ್ಪಟ್ಟನು: “ನನ್ನ ಪ್ರಿಯರಾದ ಮಕ್ಕಳೇ, ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:1, 2) ಯೇಸುವಿನ ಪರಿಪೂರ್ಣ ಮಾನವ ಯಜ್ಞದ ಪ್ರಯೋಜನಗಳ ಕಾರಣದಿಂದಲೇ ನಾವು ಮಹತ್ತರವಾಗಿ ಸಾಂತ್ವನಗೊಳಿಸಲ್ಪಟ್ಟಿದ್ದೇವೆ. ನಮ್ಮ ಪಾಪಗಳು ಕ್ಷಮಿಸಲ್ಪಡಸಾಧ್ಯವಿದೆ, ನಾವು ಶುದ್ಧ ಮನಸ್ಸಾಕ್ಷಿಯನ್ನು, ದೇವರೊಂದಿಗೆ ಅಂಗೀಕೃತ ಸಂಬಂಧವನ್ನು, ಹಾಗೂ ನಿತ್ಯಜೀವದ ನಿರೀಕ್ಷೆಯನ್ನು ಪಡೆಯಸಾಧ್ಯವಿದೆ ಎಂಬುದು ನಮಗೆ ಗೊತ್ತು.​—ಯೋಹಾನ 14:6; ರೋಮಾಪುರ 6:23; ಇಬ್ರಿಯ 9:24-27; 1 ಪೇತ್ರ 3:21.

ಸಾಂತ್ವನದಾಯಕ ಪವಿತ್ರಾತ್ಮ

11. ತನ್ನ ಮರಣಕ್ಕೆ ಮುಂಚೆ ಯೇಸು ಸಾಂತ್ವನಕ್ಕಾಗಿರುವ ಇನ್ನಾವ ಒದಗಿಸುವಿಕೆಯನ್ನು ವಾಗ್ದಾನಿಸಿದನು?

11 ತನ್ನ ಯಜ್ಞಾರ್ಪಿತ ಮರಣಕ್ಕೆ ಮುಂಚಿನ ಕಡೇ ರಾತ್ರಿಯಂದು ಯೇಸು ತನ್ನ ಅಪೊಸ್ತಲರೊಂದಿಗಿದ್ದಾಗ, ಅವರನ್ನು ಸಾಂತ್ವನಗೊಳಿಸಲಿಕ್ಕಾಗಿ ಅವನ ಸ್ವರ್ಗೀಯ ತಂದೆಯು ನೀಡಲಿರುವ ಇನ್ನೊಂದು ಒದಗಿಸುವಿಕೆಯ ಕುರಿತಾಗಿಯೂ ಅವನು ಮಾತಾಡಿದನು. ಯೇಸು ಹೇಳಿದ್ದು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು [ಸಾಂತ್ವನದಾಯಕ; ಗ್ರೀಕ್‌, ಪಾರಾಕ್ಲಿಟೋಸ್‌] ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ [“ಆತ್ಮವೇ,” NW].” ಯೇಸು ಅವರಿಗೆ ಆಶ್ವಾಸನೆ ನೀಡಿದ್ದು: “ಆದರೆ ಆ ಸಹಾಯಕನು ಅಂದರೆ . . . ಪವಿತ್ರಾತ್ಮನೇ [“ಪವಿತ್ರಾತ್ಮವೇ,” NW] ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.” (ಯೋಹಾನ 14:16, 17, 26) ವಾಸ್ತವದಲ್ಲಿ ಪವಿತ್ರಾತ್ಮವು ಅವರಿಗೆ ಹೇಗೆ ಸಾಂತ್ವನವನ್ನು ನೀಡಿತು?

12. ಯೇಸುವಿನ ಶಿಷ್ಯರಿಗೆ ನೆನಪು ಹುಟ್ಟಿಸುವ ಸಹಾಯಕದೋಪಾದಿ ಪವಿತ್ರಾತ್ಮದ ಪಾತ್ರವು, ಯಾವ ರೀತಿಯಲ್ಲಿ ಅನೇಕರಿಗೆ ಸಾಂತ್ವನವನ್ನು ನೀಡಲು ಸಹಾಯಮಾಡಿದೆ?

12 ಅಪೊಸ್ತಲರು ಯೇಸುವಿನಿಂದ ವ್ಯಾಪಕವಾದ ಬೋಧನೆಯನ್ನು ಪಡೆದುಕೊಂಡಿದ್ದರು. ಖಂಡಿತವಾಗಿಯೂ ಅವರು ಆ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿರಲಿಲ್ಲ, ಆದರೆ ಅವನು ಏನು ಹೇಳಿದನೋ ಅದನ್ನು ಅವರು ನಿಜವಾಗಿಯೂ ಜ್ಞಾಪಿಸಿಕೊಳ್ಳಲಿದ್ದರೋ? ಅವರ ಅಪರಿಪೂರ್ಣ ಜ್ಞಾಪಕಶಕ್ತಿಯ ಕಾರಣದಿಂದಾಗಿ ಪ್ರಾಮುಖ್ಯವಾದ ಬೋಧನೆಗಳನ್ನು ಅವರು ಮರೆಯಲಿದ್ದರೋ? ಪವಿತ್ರಾತ್ಮವೇ ‘ತಾನು ಅವರಿಗೆ ಉಪದೇಶಿಸಿದ್ದ ಎಲ್ಲಾ ವಿಷಯಗಳನ್ನು ಅವರ ನೆನಪಿಗೆ ತರುವುದು’ ಎಂದು ಯೇಸು ಅವರಿಗೆ ಆಶ್ವಾಸನೆ ನೀಡಿದನು. ಹೀಗೆ, ಯೇಸುವಿನ ಮರಣವು ಸಂಭವಿಸಿ ಸುಮಾರು ಎಂಟು ವರ್ಷಗಳ ಬಳಿಕ, ಮತ್ತಾಯನು ಮೊದಲ ಸುವಾರ್ತಾ ಪುಸ್ತಕವನ್ನು ಬರೆಯಲು ಶಕ್ತನಾದನು. ಅದರಲ್ಲಿ ಅವನು ಯೇಸುವಿನ ಹೃದಯೋತ್ತೇಜಕ ಪರ್ವತ ಪ್ರಸಂಗವನ್ನು, ರಾಜ್ಯದ ಕುರಿತಾದ ಅವನ ಅನೇಕ ದೃಷ್ಟಾಂತಗಳನ್ನು, ಮತ್ತು ಅವನ ಸಾನ್ನಿಧ್ಯದ ಸೂಚನೆಗಳ ಕುರಿತಾದ ಸವಿವರವಾದ ಚರ್ಚೆಯನ್ನು ದಾಖಲಿಸಿದನು. ಐವತ್ತಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ ಅಪೊಸ್ತಲ ಯೋಹಾನನು, ಯೇಸುವಿನ ಭೂಜೀವಿತದ ಕೊನೆಯ ಕೆಲವು ದಿವಸಗಳ ಕುರಿತಾದ ಸವಿಸ್ತಾರವಾದ ವಿವರಗಳುಳ್ಳ ವಿಶ್ವಾಸಾರ್ಹ ವೃತ್ತಾಂತವನ್ನು ಬರೆಯಲು ಶಕ್ತನಾದನು. ಇಂದಿಗೂ ಈ ಪ್ರೇರಿತ ದಾಖಲೆಗಳು ಎಷ್ಟು ಪ್ರೋತ್ಸಾಹದಾಯಕವಾಗಿವೆ!

13. ಆದಿಕ್ರೈಸ್ತರಿಗೆ ಪವಿತ್ರಾತ್ಮವು ಒಬ್ಬ ಬೋಧಕನಂತೆ ಹೇಗೆ ಕಾರ್ಯನಡಿಸಿತು?

13 ಪವಿತ್ರಾತ್ಮವು ಅವರು ಕೇವಲ ಯೇಸುವಿನ ಮಾತುಗಳನ್ನು ತಮ್ಮ ಮನಸ್ಸಿಗೆ ತರುವಂತೆ ಅವರಿಗೆ ಸಹಾಯಮಾಡಿದ್ದಲ್ಲದೆ, ಶಿಷ್ಯರಿಗೆ ಬೋಧಿಸಿತು ಮತ್ತು ದೇವರ ಉದ್ದೇಶಗಳ ಪೂರ್ಣ ತಿಳಿವಳಿಕೆಯ ಕಡೆಗೆ ಅವರನ್ನು ಮಾರ್ಗದರ್ಶಿಸಿತು. ಯೇಸು ಇನ್ನೂ ತನ್ನ ಶಿಷ್ಯರೊಂದಿಗೆ ಇದ್ದಾಗಲೇ, ಅವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅಸಾಧ್ಯವಾಗಿದ್ದಂಥ ವಿಚಾರಗಳನ್ನು ಅವರಿಗೆ ತಿಳಿಸಿದ್ದನು. ಆದರೂ ಸಮಯಾನಂತರ, ಪವಿತ್ರಾತ್ಮಪ್ರೇರಿತರಾದ ಯೋಹಾನ ಪೇತ್ರ ಯಾಕೋಬ ಯೂದ ಹಾಗೂ ಪೌಲರು, ದೇವರ ಉದ್ದೇಶದಲ್ಲಿನ ಇನ್ನೂ ಹೆಚ್ಚಿನ ವಿಕಸನಗಳ ವಿವರಗಳನ್ನು ಬರೆದರು. ಹೀಗೆ ಪವಿತ್ರಾತ್ಮವು ಒಬ್ಬ ಬೋಧಕನಂತೆ ಕಾರ್ಯನಡಿಸುತ್ತಾ, ಶಿಷ್ಯರಿಗೆ ದೈವಿಕ ಮಾರ್ಗದರ್ಶನದ ಅಮೂಲ್ಯ ಆಶ್ವಾಸನೆಯನ್ನು ನೀಡಿತು.

14. ಯಾವ ವಿಧಗಳಲ್ಲಿ ಪವಿತ್ರಾತ್ಮವು ಯೆಹೋವನ ಜನರಿಗೆ ಸಹಾಯಮಾಡಿತು?

14 ಪವಿತ್ರಾತ್ಮದ ಅದ್ಭುತಕರ ವರದಾನವು, ದೇವರು ತನ್ನ ಅನುಗ್ರಹವನ್ನು ಮಾಂಸಿಕ ಇಸ್ರಾಯೇಲ್ಯರಿಂದ ಕ್ರೈಸ್ತ ಸಭೆಗೆ ವರ್ಗಾಯಿಸಿದ್ದಾನೆ ಎಂಬುದನ್ನು ಸ್ಪಷ್ಟಪಡಿಸಲು ಸಹ ಸಹಾಯಮಾಡಿತು. (ಇಬ್ರಿಯ 2:4) ಅನೇಕರ ಜೀವಿತಗಳ ಮೇಲೆ ಪವಿತ್ರಾತ್ಮವು ಬೀರುವ ಪ್ರಭಾವವು, ಯಾರು ನಿಜವಾಗಿಯೂ ಯೇಸುವಿನ ಶಿಷ್ಯರಾಗಿದ್ದಾರೆ ಎಂಬುದನ್ನು ಗುರುತಿಸುವುದರಲ್ಲಿಯೂ ಒಂದು ಪ್ರಮುಖ ಅಂಶವಾಗಿದೆ. (ಯೋಹಾನ 13:35; ಗಲಾತ್ಯ 5:22-24) ಇದಲ್ಲದೆ ಪವಿತ್ರಾತ್ಮವು ಆ ಸಭೆಯ ಸದಸ್ಯರು ಧೈರ್ಯಭರಿತ ಹಾಗೂ ನಿರ್ಭೀತ ಸಾಕ್ಷಿಗಳಾಗುವಂತೆಯೂ ಅವರನ್ನು ಬಲಪಡಿಸಿತು.​—ಅ. ಕೃತ್ಯಗಳು 4:31.

ವಿಪರೀತ ಒತ್ತಡದ ಕೆಳಗಿದ್ದಾಗ ಕೊಡಲ್ಪಟ್ಟ ಸಹಾಯ

15. (ಎ) ಗತಕಾಲದ ಹಾಗೂ ಸದ್ಯದ ಕ್ರೈಸ್ತರಿಂದ ಯಾವ ಒತ್ತಡಗಳು ಎದುರಿಸಲ್ಪಟ್ಟಿವೆ? (ಬಿ) ಕೆಲವೊಮ್ಮೆ ಉತ್ತೇಜನವನ್ನು ನೀಡುವಂಥ ವ್ಯಕ್ತಿಗಳಿಗೂ ಉತ್ತೇಜನದ ಆವಶ್ಯಕತೆಯಿರಬಹುದೇಕೆ?

15 ಯಾರೆಲ್ಲಾ ಯೆಹೋವನಿಗೆ ಸಮರ್ಪಿಸಿಕೊಂಡಿದ್ದಾರೋ ಹಾಗೂ ಆತನಿಗೆ ನಿಷ್ಠರಾಗಿದ್ದಾರೋ ಅವರು ಒಂದಲ್ಲ ಒಂದು ರೀತಿಯ ಹಿಂಸೆಯನ್ನು ಅನುಭವಿಸುತ್ತಾರೆ. (2 ತಿಮೊಥೆಯ 3:12) ಆದರೂ, ಅನೇಕ ಕ್ರೈಸ್ತರು ತುಂಬ ಗಂಭೀರವಾದ ಒತ್ತಡವನ್ನು ಅನುಭವಿಸಿದ್ದಾರೆ. ಆಧುನಿಕ ಸಮಯಗಳಲ್ಲಿ, ಕೆಲವರು ಗುಂಪುಗಲಭೆಗೆ ತುತ್ತಾಗಿದ್ದಾರೆ ಮತ್ತು ನಿರ್ದಯವಾದ ಪರಿಸ್ಥಿತಿಗಳ ಕೆಳಗೆ ಕೂಟಶಿಬಿರಗಳಲ್ಲಿ, ಸೆರೆಮನೆಗಳಲ್ಲಿ ಹಾಗೂ ಕಾರ್ಮಿಕಶಿಬಿರಗಳಲ್ಲಿ ಹಾಕಲ್ಪಟ್ಟಿದ್ದಾರೆ. ಸರಕಾರಗಳು ಕ್ರಿಯಾಶೀಲ ಹಿಂಸಕರ ಸ್ಥಾನವನ್ನು ತೆಗೆದುಕೊಂಡಿವೆ, ಅಥವಾ ಕಾನೂನುಬಾಹಿರ ಗುಂಪುಗಳು ಹಿಂಸಾತ್ಮಕವಾದ ಹಾಗೂ ಕೋಲಾಹಲಕರವಾದ ಕೃತ್ಯಗಳನ್ನು ನಡೆಸುವಂತೆ ಅವು ಅನುಮತಿಸಿವೆ. ಅಷ್ಟುಮಾತ್ರವಲ್ಲ, ಕ್ರೈಸ್ತರು ಗುರುತರವಾದ ಆರೋಗ್ಯ ಸಮಸ್ಯೆಗಳನ್ನು ಅಥವಾ ಗಂಭೀರವಾದ ಕೌಟುಂಬಿಕ ಬಿಕ್ಕಟ್ಟುಗಳನ್ನು ಎದುರಿಸಿದ್ದಾರೆ. ಕಷ್ಟಕರ ಪರಿಸ್ಥಿತಿಗಳೊಂದಿಗೆ ವ್ಯವಹರಿಸುವಂತೆ ಅನೇಕ ಜೊತೆ ವಿಶ್ವಾಸಿಗಳಿಗೆ ಸಹಾಯಮಾಡುವಂಥ ಒಬ್ಬ ಪ್ರೌಢ ಕ್ರೈಸ್ತನು ಸಹ ಒತ್ತಡವನ್ನು ಅನುಭವಿಸಿರಬಹುದು. ಇಂಥ ಸನ್ನಿವೇಶಗಳಲ್ಲಿ, ಯಾರು ಉತ್ತೇಜನವನ್ನು ನೀಡುತ್ತಾರೋ ಅವರಿಗೂ ಉತ್ತೇಜನದ ಆವಶ್ಯಕತೆಯಿರುತ್ತದೆ.

16. ದಾವೀದನು ಒತ್ತಡದ ಕೆಳಗಿದ್ದಾಗ, ಅವನು ಹೇಗೆ ಸಹಾಯವನ್ನು ಪಡೆದುಕೊಂಡನು?

16 ಅರಸನಾದ ಸೌಲನು ದಾವೀದನನ್ನು ಕೊಲ್ಲಲಿಕ್ಕಾಗಿ ಅವನನ್ನು ಬೆನ್ನಟ್ಟುತ್ತಿದ್ದಾಗ, ಸಹಾಯಕ್ಕಾಗಿ ದಾವೀದನು ದೇವರ ಕಡೆಗೆ ತಿರುಗಿದನು: “ದೇವರೇ, ನನ್ನ ಪ್ರಾರ್ಥನೆಯನ್ನು ಲಾಲಿಸು; . . . ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು” ಎಂದು ಅವನು ಬೇಡಿಕೊಂಡನು. (ಕೀರ್ತನೆ 54:​2, 4; 57:1) ದಾವೀದನಿಗೆ ಸಹಾಯವು ದೊರಕಿತೋ? ಹೌದು, ದೊರಕಿತು. ಆ ಸಮಯಾವಧಿಯಲ್ಲಿ, ದಾವೀದನಿಗೆ ಮಾರ್ಗದರ್ಶನವನ್ನು ನೀಡಲಿಕ್ಕಾಗಿ ಯೆಹೋವನು ಪ್ರವಾದಿಯಾದ ಗಾದನನ್ನು ಹಾಗೂ ಯಾಜಕನಾದ ಎಬ್ಯಾತಾರನನ್ನು ಉಪಯೋಗಿಸಿದನು, ಮತ್ತು ಯುವಕನಾದ ದಾವೀದನನ್ನು ಬಲಪಡಿಸಲಿಕ್ಕಾಗಿ ಆತನು ಸೌಲನ ಮಗನಾದ ಯೋನಾತಾನನನ್ನು ಉಪಯೋಗಿಸಿದನು. (1 ಸಮುವೇಲ 22:1, 5; 23:9-13, 16-18) ಇದಲ್ಲದೆ ಫಿಲಿಷ್ಟಿಯರು ಆ ದೇಶದ ಮೇಲೆ ಹಠಾತ್ತನೆ ದಾಳಿಮಾಡುವಂತೆ ಯೆಹೋವನು ಅನುಮತಿಸಿ, ಸೌಲನು ತನ್ನ ಬೆನ್ನಟ್ಟುವಿಕೆಯಿಂದ ಬೇರೆ ಕಡೆಗೆ ಅಪಕರ್ಷಿತನಾಗುವಂತೆ ಮಾಡಿದನು.​—1 ಸಮುವೇಲ 23:​27, 28.

17. ತೀವ್ರವಾದ ಒತ್ತಡದ ಕೆಳಗಿದ್ದಾಗ, ಸಹಾಯಕ್ಕಾಗಿ ಯೇಸು ಯಾರ ಕಡೆಗೆ ತಿರುಗಿದನು?

17 ಯೇಸು ಕ್ರಿಸ್ತನ ಭೂಜೀವಿತವು ಕೊನೆಗೊಳ್ಳುತ್ತಿರುವಾಗ, ಸ್ವತಃ ಅವನೇ ತೀವ್ರವಾದ ಒತ್ತಡಕ್ಕೆ ಒಳಗಾದನು. ತನ್ನ ನಡತೆಯು ತನ್ನ ಸ್ವರ್ಗೀಯ ತಂದೆಯ ಹೆಸರಿನ ಮೇಲೆ ಯಾವ ಪರಿಣಾಮವನ್ನು ಬೀರಲಿತ್ತು ಮತ್ತು ಸರ್ವ ಮಾನವಕುಲದ ಭವಿಷ್ಯತ್ತಿಗೆ ಅದು ಏನನ್ನು ಅರ್ಥೈಸಲಿತ್ತು ಎಂಬುದರ ಸಂಪೂರ್ಣ ಅರಿವು ಅವನಿಗಿತ್ತು. ಅವನು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದನು, ಮತ್ತು ‘ಮನೋವ್ಯಥೆಯುಳ್ಳವನಾದನು.’ ಆ ಕಷ್ಟಕರ ಸಮಯದಲ್ಲಿ ಅವನಿಗೆ ಆವಶ್ಯಕವಾಗಿದ್ದ ಬೆಂಬಲವನ್ನು ಅವನು ಪಡೆದುಕೊಳ್ಳುವಂತೆ ದೇವರು ಏರ್ಪಾಡನ್ನು ಮಾಡಿದನು.​—ಲೂಕ 22:​41-44.

18. ಗಂಭೀರವಾಗಿ ಹಿಂಸಿಸಲ್ಪಟ್ಟಿದ್ದ ಆದಿಕ್ರೈಸ್ತರಿಗೆ ದೇವರು ಯಾವ ಸಾಂತ್ವನವನ್ನು ನೀಡಿದನು?

18 ಪ್ರಥಮ ಶತಮಾನದ ಸಭೆಯ ಸ್ಥಾಪನೆಯಾದ ಬಳಿಕ ಕ್ರೈಸ್ತರ ಮೇಲೆ ಬಂದ ಹಿಂಸೆಯು ಎಷ್ಟು ಭೀಕರವಾಗಿತ್ತೆಂದರೆ, ಅಪೊಸ್ತಲರನ್ನು ಬಿಟ್ಟು ಬೇರೆಲ್ಲರೂ ಯೆರೂಸಲೇಮಿನಿಂದ ಚೆದರಿಹೋದರು. ಗಂಡಸರು ಮತ್ತು ಹೆಂಗಸರನ್ನು ಮನೆಗಳಿಂದ ಹೊರಗೆ ಎಳೆದುಹಾಕಲಾಯಿತು. ದೇವರು ಅವರಿಗೆ ಯಾವ ಸಾಂತ್ವನವನ್ನು ನೀಡಿದನು? “ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿ,” ಅಂದರೆ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ನಿಶ್ಚಿತ ಬಾಧ್ಯತೆ ಇತ್ತೆಂಬ ಆಶ್ವಾಸನೆಯನ್ನು ಆತನು ಅವರಿಗೆ ನೀಡಿದನು. (ಇಬ್ರಿಯ 10:34; ಎಫೆಸ 1:18-20) ಅವರು ಸಾರುವುದನ್ನು ಮುಂದುವರಿಸಿದಂತೆ, ದೇವರ ಪವಿತ್ರಾತ್ಮವು ತಮ್ಮೊಂದಿಗೆ ಇತ್ತೆಂಬುದರ ಪುರಾವೆಯನ್ನು ಮನಗಂಡರು, ಮತ್ತು ಅವರ ಅನುಭವಗಳು ಅವರಿಗೆ ಇನ್ನಷ್ಟು ನವೋಲ್ಲಾಸವನ್ನು ನೀಡಿದವು.​—ಮತ್ತಾಯ 5:11, 12; ಅ. ಕೃತ್ಯಗಳು 8:1-40.

19. ಪೌಲನು ಗಂಭೀರವಾದ ಹಿಂಸೆಯನ್ನು ಅನುಭವಿಸಿದರೂ, ದೇವರು ಕೊಡುವಂಥ ಸಾಂತ್ವನದ ಕುರಿತು ಅವನಿಗೆ ಹೇಗನಿಸಿತು?

19 ಸಕಾಲದಲ್ಲಿ, ಈ ಮುಂಚೆ ಕ್ರೂರ ಹಿಂಸಕನಾಗಿದ್ದ ಸೌಲ (ಪೌಲ)ನು, ಈಗ ಒಬ್ಬ ಕ್ರೈಸ್ತನಾಗಿ ಪರಿಣಮಿಸಿದ್ದರಿಂದ ಸ್ವತಃ ಹಿಂಸೆಗೊಳಗಾದನು. ಕುಪ್ರದ್ವೀಪದಲ್ಲಿ ಒಬ್ಬ ಮಂತ್ರವಾದಿಯಿದ್ದನು. ಅವನು ಮೋಸವನ್ನೂ ಕೆಟ್ಟತನವನ್ನೂ ಉಪಯೋಗಿಸುವ ಮೂಲಕ ಪೌಲನ ಶುಶ್ರೂಷೆಯನ್ನು ತಡೆಗಟ್ಟಲು ಪ್ರಯತ್ನಿಸಿದನು. ಗಲಾತ್ಯದಲ್ಲಿ, ಪೌಲನು ಕಲ್ಲೆಸೆತಕ್ಕೆ ಗುರಿಯಾದನು ಮತ್ತು ಅವನು ಸತ್ತನೆಂದು ಭಾವಿಸಿ ಅವನನ್ನು ಬಿಟ್ಟುಹೋಗಲಾಯಿತು. (ಅ. ಕೃತ್ಯಗಳು 13:8-10; 14:19) ಮಕೆದೋನ್ಯದಲ್ಲಿ ಅವನಿಗೆ ಚಡಿಗಳಿಂದ ಹೊಡೆಯಲಾಯಿತು. (ಅ. ಕೃತ್ಯಗಳು 16:​22, 23) ಎಫೆಸದಲ್ಲಿ ಒಂದು ದೊಂಬೀ ಗಲಭೆಯಾದ ಬಳಿಕ ಅವನು ಬರೆದುದು: ‘ನಾವು ಬಲವನ್ನು ಮೀರಿದಂಥ ಅತ್ಯಧಿಕವಾದ ಭಾರದಿಂದ ಕುಗ್ಗಿಹೋಗಿ ಜೀವವುಳಿಯುವ ಮಾರ್ಗವನ್ನು ಕಾಣದವರಾದೆವು. ಮರಣವಾಗುತ್ತದೆಂಬ ನಿಶ್ಚಯವು ನಮ್ಮೊಳಗೆ ಉಂಟಾಯಿತು.’ (2 ಕೊರಿಂಥ 1:8, 9) ಆದರೆ ಅದೇ ಪತ್ರದಲ್ಲಿ, ಈ ಲೇಖನದ 2ನೆಯ ಪ್ಯಾರಗ್ರಾಫಿನಲ್ಲಿ ಉಲ್ಲೇಖಿಸಲ್ಪಟ್ಟ ಆ ಸಾಂತ್ವನದಾಯಕ ಮಾತುಗಳನ್ನು ಪೌಲನು ಬರೆದನು.​—2 ಕೊರಿಂಥ 1:​3, 4.

20. ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸಲಿರುವೆವು?

20 ಇಂಥ ಸಾಂತ್ವನವನ್ನು ಹಂಚಿಕೊಳ್ಳುವುದರಲ್ಲಿ ನೀವು ಹೇಗೆ ಪಾಲ್ಗೊಳ್ಳಬಲ್ಲಿರಿ? ಅನೇಕರ ಮೇಲೆ ಪರಿಣಾಮ ಬೀರುವಂಥ ಒಂದು ವಿಪತ್ತಿನ ಕಾರಣ ಅಥವಾ ಅವರಿಗೆ ಮಾತ್ರ ತಟ್ಟುವಂಥ ಸಂಕಟದ ಕಾರಣ ಜನರು ದುಃಖವನ್ನು ಅನುಭವಿಸುತ್ತಿರುವಾಗ ಸಾಂತ್ವನದ ಆವಶ್ಯಕತೆಯಿರುವ ಅನೇಕರು ನಮ್ಮ ದಿನಗಳಲ್ಲಿದ್ದಾರೆ. ಮುಂದಿನ ಲೇಖನದಲ್ಲಿ, ಈ ಎರಡೂ ಸನ್ನಿವೇಶಗಳಲ್ಲಿರುವವರಿಗೆ ಹೇಗೆ ಸಾಂತ್ವನವನ್ನು ನೀಡುವುದು ಎಂಬುದನ್ನು ನಾವು ಪರಿಗಣಿಸುವೆವು.

ನೀವು ಜ್ಞಾಪಿಸಿಕೊಳ್ಳುವಿರೋ?

• ದೇವರಿಂದ ಬರುವ ಸಾಂತ್ವನವು ಏಕೆ ಅತ್ಯಧಿಕ ಮೌಲ್ಯದ್ದಾಗಿದೆ?

• ಕ್ರಿಸ್ತನ ಮೂಲಕ ಯಾವ ಸಾಂತ್ವನವು ಒದಗಿಸಲ್ಪಟ್ಟಿದೆ?

• ಯಾವ ವಿಧದಲ್ಲಿ ಪವಿತ್ರಾತ್ಮವು ಸಾಂತ್ವನದಾಯಕವಾಗಿ ಪರಿಣಮಿಸಿದೆ?

• ತನ್ನ ಸೇವಕರು ಗಂಭೀರವಾದ ಒತ್ತಡದ ಕೆಳಗಿದ್ದಾಗ, ದೇವರಿಂದ ಒದಗಿಸಲ್ಪಟ್ಟ ಸಾಂತ್ವನದ ಉದಾಹರಣೆಗಳನ್ನು ಕೊಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರಗಳು]

ತನ್ನ ಜನರನ್ನು ಬಿಡುಗಡೆಮಾಡುವ ಮೂಲಕ ಯೆಹೋವನು ಸಾಂತ್ವನವನ್ನು ನೀಡಿದನು ಎಂದು ಬೈಬಲು ನಮಗೆ ತೋರಿಸುತ್ತದೆ

[ಪುಟ 16ರಲ್ಲಿರುವ ಚಿತ್ರಗಳು]

ಬೋಧಿಸುವ ಮೂಲಕ, ವಾಸಿಮಾಡುವ ಮೂಲಕ, ಮತ್ತು ಮೃತರನ್ನು ಪುನರುತ್ಥಾನಗೊಳಿಸುವ ಮೂಲಕ ಯೇಸು ಸಾಂತ್ವನವನ್ನು ಒದಗಿಸಿದನು

[ಪುಟ 18ರಲ್ಲಿರುವ ಚಿತ್ರ]

ಯೇಸು ಮೇಲಣಿಂದ ಸಹಾಯವನ್ನು ಪಡೆದುಕೊಂಡನು