ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಃಖಿತರೆಲ್ಲರಿಗೆ ಸಾಂತ್ವನವನ್ನು ನೀಡಿರಿ

ದುಃಖಿತರೆಲ್ಲರಿಗೆ ಸಾಂತ್ವನವನ್ನು ನೀಡಿರಿ

ದುಃಖಿತರೆಲ್ಲರಿಗೆ ಸಾಂತ್ವನವನ್ನು ನೀಡಿರಿ

‘ದುಃಖಿತರೆಲ್ಲರನ್ನು ಸಂತೈಸಲು ಯೆಹೋವನು ನನ್ನನ್ನು ಅಭಿಷೇಕಿಸಿದ್ದಾನೆ.’​—ಯೆಶಾಯ 61:​1-3.

1, 2. ನಾವು ಯಾರಿಗೆ ಸಾಂತ್ವನವನ್ನು ನೀಡಬೇಕು, ಮತ್ತು ಏಕೆ?

ಸಕಲವಿಧವಾಗಿ ಸಂತೈಸುವ ದೇವರಾಗಿರುವ ಯೆಹೋವನು, ಇತರರು ಸಂಕಷ್ಟವನ್ನು ಅನುಭವಿಸುವಾಗ ಅವರ ಕುರಿತು ಹಿತಾಸಕ್ತಿಯನ್ನು ತೋರಿಸುವಂತೆ ನಮಗೆ ಕಲಿಸುತ್ತಾನೆ. ಆತನು ನಮಗೆ “ಮನಗುಂದಿದವರಿಗೆ ದುಃಖೋಪಶಮನವಾಗುವಂತೆ ಮಾತಾಡಲು” ಹಾಗೂ ದುಃಖಿತರೆಲ್ಲರನ್ನು ಸಂತೈಸಲು ಕಲಿಸುತ್ತಾನೆ. (1 ಥೆಸಲೊನೀಕ 5:​14, NW) ಅಂಥ ಸಹಾಯದ ಅಗತ್ಯವಿರುವಾಗ, ನಾವು ಅದನ್ನು ನಮ್ಮ ಜೊತೆ ಆರಾಧಕರಿಗೂ ನೀಡುತ್ತೇವೆ. ಸಭೆಯ ಹೊರಗಿನವರಿಗೂ ಗತ ಸಮಯಗಳಲ್ಲಿ ನಮ್ಮ ಕಡೆಗೆ ಯಾವುದೇ ರೀತಿಯ ಪ್ರೀತಿಯ ಪುರಾವೆಯನ್ನು ನೀಡದೇ ಇದ್ದವರಿಗೂ ನಾವು ಪ್ರೀತಿಯನ್ನು ತೋರಿಸುತ್ತೇವೆ.​—ಮತ್ತಾಯ 5:43-48; ಗಲಾತ್ಯ 6:10.

2 ಯೇಸು ಕ್ರಿಸ್ತನು ಈ ಮುಂದಿನ ಪ್ರವಾದನಾ ನೇಮಕವನ್ನು ಓದಿ, ಸ್ವತಃ ತನಗೆ ಅನ್ವಯಿಸಿಕೊಂಡನು: “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ . . . ದುಃಖಿತರೆಲ್ಲರನ್ನು ಸಂತೈಸುವದಕ್ಕೂ . . . ನನ್ನನ್ನು ಕಳುಹಿಸಿದ್ದಾನೆ.” (ಯೆಶಾಯ 61:1, 2; ಲೂಕ 4:16-19) ಆಧುನಿಕ ದಿನದ ಅಭಿಷಿಕ್ತ ಕ್ರೈಸ್ತರು, ಈ ನೇಮಕವು ತಮಗೂ ಅನ್ವಯವಾಗುತ್ತದೆ ಎಂದು ದೀರ್ಘ ಸಮಯದಿಂದಲೂ ಮನಗಂಡಿದ್ದಾರೆ, ಮತ್ತು ಈ ಕೆಲಸದಲ್ಲಿ “ಬೇರೆ ಕುರಿಗಳು” ಇವರೊಂದಿಗೆ ಸಂತೋಷದಿಂದ ಜೊತೆಗೂಡುತ್ತಾರೆ.​—ಯೋಹಾನ 10:16.

3. “ದೇವರು ಆಪತ್ತುಗಳನ್ನು ಏಕೆ ಅನುಮತಿಸುತ್ತಾನೆ” ಎಂದು ಜನರು ಏಕೆ ಕೇಳುತ್ತಾರೆ? ನಾವು ಅವರಿಗೆ ಹೇಗೆ ಸಹಾಯಮಾಡಬಹುದು?

3 ವಿಪತ್ತುಗಳು ಬಂದೆರಗುವಾಗ ಮತ್ತು ಜನರು ದುಃಖದಿಂದ ಎದೆಗುಂದುವಾಗ, ಅನೇಕವೇಳೆ ಅವರು “ಇಂಥ ಆಪತ್ತುಗಳನ್ನು ದೇವರು ಏಕೆ ಅನುಮತಿಸುತ್ತಾನೆ?” ಎಂದು ಕೇಳುತ್ತಾರೆ. ಬೈಬಲು ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ನೀಡುತ್ತದೆ. ಆದರೂ, ಇಷ್ಟರ ತನಕ ಬೈಬಲಿನ ವಿದ್ಯಾರ್ಥಿಯಾಗಿರದ ಒಬ್ಬ ವ್ಯಕ್ತಿಗೆ ಈ ಉತ್ತರವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಮಯ ಹಿಡಿಯಬಹುದು. ಯೆಹೋವನ ಸಾಕ್ಷಿಗಳ ಪ್ರಕಾಶನಗಳಲ್ಲಿ ಅವರು ಸಹಾಯವನ್ನು ಕಂಡುಕೊಳ್ಳಬಲ್ಲರು. * ಆದರೂ ಆರಂಭದಲ್ಲಿ, ಯೆಶಾಯ 61:​1-3ರಲ್ಲಿ ಕಂಡುಬರುವಂಥ ಒಂದು ವಚನವನ್ನು ಬೈಬಲಿನಲ್ಲಿ ನೋಡುವುದೇ ಕೆಲವು ಜನರಿಗೆ ಒಂದು ಸಾಂತ್ವನವಾಗಿ ಪರಿಣಮಿಸಿದೆ; ಏಕೆಂದರೆ ಅದು ಮಾನವರು ಸಾಂತ್ವನವನ್ನು ಪಡೆದುಕೊಳ್ಳಬೇಕೆಂದು ದೇವರು ಬಯಸುತ್ತಾನೆಂಬುದನ್ನು ವ್ಯಕ್ತಪಡಿಸುತ್ತದೆ.

4. ಪೋಲೆಂಡ್‌ನ ಸಾಕ್ಷಿಯೊಬ್ಬಳು, ಹತಾಶಳಾಗಿದ್ದ ಒಬ್ಬ ಶಾಲಾಹುಡುಗಿಗೆ ಹೇಗೆ ಸಹಾಯಮಾಡಲು ಶಕ್ತಳಾದಳು, ಮತ್ತು ಆ ಅನುಭವವು ಇತರರಿಗೆ ಸಹಾಯಮಾಡಲಿಕ್ಕಾಗಿ ನಿಮಗೆ ಹೇಗೆ ನೆರವು ನೀಡಬಲ್ಲದು?

4 ಯುವ ಜನರಿಗೆ ಹಾಗೂ ವೃದ್ಧರಿಗೆ ಸಾಂತ್ವನದ ಅಗತ್ಯವಿದೆ. ಪೋಲೆಂಡ್‌ನಲ್ಲಿ ಖಿನ್ನತೆಗೆ ಬಲಿಯಾಗಿದ್ದ ಒಬ್ಬ ಹದಿವಯಸ್ಕಳು ತನಗೆ ಪರಿಚಯವಿದ್ದ ಒಬ್ಬ ಸ್ತ್ರೀಯ ಬಳಿ ಸಲಹೆಯನ್ನು ಕೇಳಿದಳು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ ಈ ಸ್ನೇಹಿತೆಯು ಅವಳೊಂದಿಗೆ ದಯಾಭರಿತವಾಗಿ ಮಾತಾಡಿ ಇನ್ನಷ್ಟು ವಿಷಯಗಳನ್ನು ವಿಚಾರಿಸಿದ ಬಳಿಕ, ಆ ಹುಡುಗಿಯ ಮನಸ್ಸಿನಲ್ಲಿ ಪ್ರಶ್ನೆಗಳು ಹಾಗೂ ಸಂಶಯಗಳು ತುಂಬಿದ್ದವು ಎಂಬುದನ್ನು ಅರ್ಥಮಾಡಿಕೊಂಡಳು. ಅವುಗಳಲ್ಲಿ ಕೆಲವು ಹೀಗಿದ್ದವು: “ಇಷ್ಟೊಂದು ಕೆಟ್ಟತನವು ಏಕಿದೆ? ಜನರು ಏಕೆ ಕಷ್ಟಾನುಭವಿಸುತ್ತಾರೆ? ಪಾರ್ಶ್ವವಾಯುಪೀಡಿತಳಾಗಿರುವ ತನ್ನ ತಂಗಿಯು ಏಕೆ ಕಷ್ಟಾನುಭವಿಸುತ್ತಾಳೆ? ನನ್ನ ಹೃದಯವೇಕೆ ಆರೋಗ್ಯಕರವಾಗಿಲ್ಲ? ಇದು ಹೀಗೆಯೇ ನಡೆಯುವಂತೆ ದೇವರು ಬಯಸುತ್ತಾನೆ ಎಂದು ಚರ್ಚು ಹೇಳುತ್ತದೆ. ಆದರೆ ಇದು ನಿಜವಾಗಿರುವಲ್ಲಿ, ನಾನು ಇನ್ನು ಮುಂದೆ ಆತನಲ್ಲಿ ನಂಬಿಕೆಯಿಡುವುದಿಲ್ಲ!” ಆ ಸಾಕ್ಷಿಯು ಮೌನವಾಗಿ ಯೆಹೋವನಿಗೆ ಪ್ರಾರ್ಥಿಸಿ, ನಂತರ ಹೇಳಿದ್ದು: “ಇದರ ಕುರಿತು ನೀನು ನನ್ನನ್ನು ಕೇಳಿದ್ದಕ್ಕಾಗಿ ನನಗೆ ತುಂಬ ಸಂತೋಷವಾಗಿದೆ. ನಾನು ನಿನಗೆ ಸಹಾಯಮಾಡಲು ಪ್ರಯತ್ನಿಸುವೆ.” ಚಿಕ್ಕವಳಾಗಿದ್ದಾಗ ತನಗೂ ಅನೇಕ ಸಂಶಯಗಳಿದ್ದವು ಮತ್ತು ಯೆಹೋವನ ಸಾಕ್ಷಿಗಳು ತನಗೆ ಸಹಾಯಮಾಡಿದರು ಎಂದು ಆ ಸಾಕ್ಷಿಯು ಹೇಳಿದಳು. ಅವಳು ವಿವರಿಸಿದ್ದು: “ಜನರು ಕಷ್ಟಾನುಭವಿಸುವಂತೆ ದೇವರು ಮಾಡುವುದಿಲ್ಲ ಎಂಬುದನ್ನು ನಾನು ಕಲಿತೆ. ಆತನು ಅವರನ್ನು ಪ್ರೀತಿಸುತ್ತಾನೆ, ಅವರ ಒಳಿತನ್ನು ಮಾತ್ರ ಬಯಸುತ್ತಾನೆ, ಮತ್ತು ಬೇಗನೆ ಭೂಮಿಯ ಮೇಲೆ ಬಹು ದೊಡ್ಡ ಬದಲಾವಣೆಗಳನ್ನು ಮಾಡಲಿದ್ದಾನೆ. ಅಸ್ವಸ್ಥತೆ, ವೃದ್ಧಾಪ್ಯದ ಸಮಸ್ಯೆಗಳು, ಮತ್ತು ಮರಣವು ಇಲ್ಲದೆ ಹೋಗುವುದು, ಇದೇ ಭೂಗ್ರಹದ ಮೇಲೆ ವಿಧೇಯ ಮಾನವರು ಸದಾಕಾಲಕ್ಕೂ ಜೀವಿಸುವರು.” ಅವಳು ಆ ಹುಡುಗಿಗೆ ಪ್ರಕಟನೆ 21:3, 4, ಯೋಬ 33:​25, ಯೆಶಾಯ 35:5-7 ಮತ್ತು 65:​21-25ನ್ನು ತೋರಿಸಿದಳು. ಒಂದು ದೀರ್ಘ ಚರ್ಚೆಯ ಬಳಿಕ, ಹಗುರ ಮನಸ್ಸಿನಿಂದ ಆ ಹುಡುಗಿಯು ಹೇಳಿದ್ದು: “ಜೀವಿತದಲ್ಲಿ ನನಗೆ ಯಾವ ಉದ್ದೇಶವಿದೆ ಎಂಬುದು ಈಗ ನನಗೆ ಮನದಟ್ಟಾಗಿದೆ. ನಾನು ಪುನಃ ನಿನ್ನನ್ನು ಭೇಟಿಮಾಡಬಹುದೋ?” ವಾರಕ್ಕೆ ಎರಡಾವರ್ತಿ ಅವಳೊಂದಿಗೆ ಒಂದು ಬೈಬಲ್‌ ಅಧ್ಯಯನವು ನಡೆಸಲ್ಪಟ್ಟಿತು.

ದೇವರು ಕೊಡುವಂಥ ಸಾಂತ್ವನದಿಂದ ಇತರರನ್ನು ಸಂತೈಸಿರಿ

5. ನಾವು ಸಹಾಯನುಭೂತಿಯನ್ನು ವ್ಯಕ್ತಪಡಿಸುವಾಗ, ಯಾವುದು ನಿಜವಾದ ಸಾಂತ್ವನವನ್ನು ಒದಗಿಸುವುದು?

5 ನಾವು ಇತರರನ್ನು ಸಂತೈಸಲು ಪ್ರಯತ್ನಿಸುವಾಗ, ಸಹಾನುಭೂತಿಯ ನುಡಿಗಳು ನಿಶ್ಚಯವಾಗಿಯೂ ಅಪೇಕ್ಷಣೀಯವಾಗಿರುವವು. ದುಃಖಿಸುತ್ತಿರುವ ವ್ಯಕ್ತಿಯ ಸನ್ನಿವೇಶದ ಕುರಿತು ನಾವು ಆಳವಾಗಿ ಚಿಂತಿಸುತ್ತೇವೆ ಎಂಬುದನ್ನು, ನಮ್ಮ ಮಾತುಗಳಿಂದ ಹಾಗೂ ಸ್ವರದಿಂದ ಅವರಿಗೆ ತಿಳಿಯಪಡಿಸಲು ಪ್ರಯತ್ನಿಸುತ್ತೇವೆ. ಆದರೆ ಅರ್ಥಹೀನವಾದ ಹೇಳಿಕೆಗಳನ್ನು ಉಪಯೋಗಿಸುವ ಮೂಲಕ ಇದನ್ನು ಸಾಧಿಸಸಾಧ್ಯವಿಲ್ಲ. “ನಮ್ಮ ತಾಳ್ಮೆಯ ಮೂಲಕ ಹಾಗೂ ಶಾಸ್ತ್ರವಚನಗಳಿಂದ ಸಿಗುವ ಸಾಂತ್ವನದ ಮೂಲಕ ನಾವು ನಿರೀಕ್ಷೆಯುಳ್ಳವರಾಗಬಹುದು” ಎಂದು ಬೈಬಲು ನಮಗೆ ಹೇಳುತ್ತದೆ. (ರೋಮಾಪುರ 15:4, NW) ಇದನ್ನು ಪರಿಗಣಿಸುವಾಗ, ದೇವರ ರಾಜ್ಯವು ಏನಾಗಿದೆ ಎಂಬುದನ್ನು ನಾವು ಸೂಕ್ತವಾದ ಸಮಯದಲ್ಲಿ ವಿವರಿಸಸಾಧ್ಯವಿದೆ, ಮತ್ತು ಅದು ಸದ್ಯದ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂಬುದನ್ನು ನಾವು ಬೈಬಲಿನಿಂದ ತೋರಿಸಸಾಧ್ಯವಿದೆ. ತದನಂತರ, ಇದು ಏಕೆ ವಿಶ್ವಾಸಾರ್ಹವಾದ ನಿರೀಕ್ಷೆಯಾಗಿದೆ ಎಂಬುದರ ಕುರಿತು ಅವರೊಂದಿಗೆ ತರ್ಕಿಸಸಾಧ್ಯವಿದೆ. ಈ ರೀತಿಯಲ್ಲಿ ನಾವು ಸಾಂತ್ವನವನ್ನು ನೀಡುವೆವು.

6. ಜನರು ಶಾಸ್ತ್ರವಚನಗಳಲ್ಲಿರುವ ಸಾಂತ್ವನದಿಂದ ಪೂರ್ಣವಾದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲು, ಅವರು ಏನನ್ನು ಅರ್ಥಮಾಡಿಕೊಳ್ಳುವಂತೆ ನಾವು ಅವರಿಗೆ ಸಹಾಯಮಾಡಬೇಕು?

6 ನಾವು ನೀಡುವಂಥ ಸಾಂತ್ವನದಿಂದ ಪೂರ್ಣವಾದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಸತ್ಯ ದೇವರು ಯಾರು, ಅವನು ಎಂಥ ರೀತಿಯ ವ್ಯಕ್ತಿಯಾಗಿದ್ದಾನೆ, ಮತ್ತು ಅವನ ವಾಗ್ದಾನಗಳ ಮೇಲೆ ಎಷ್ಟರ ಮಟ್ಟಿಗೆ ಆತುಕೊಳ್ಳಸಾಧ್ಯವಿದೆ ಎಂಬುದನ್ನು ಒಬ್ಬ ವ್ಯಕ್ತಿಯು ತಿಳಿದುಕೊಳ್ಳುವ ಆವಶ್ಯಕತೆಯಿದೆ. ಯೆಹೋವನ ಆರಾಧಕನಾಗಿಲ್ಲದಿರುವಂಥ ಒಬ್ಬ ವ್ಯಕ್ತಿಗೆ ನಾವು ಸಹಾಯಮಾಡಲು ಪ್ರಯತ್ನಿಸುವಾಗ, ಅವನಿಗೆ ಈ ಅಂಶಗಳನ್ನು ವಿವರಿಸುವುದು ಸೂಕ್ತವಾದದ್ದಾಗಿದೆ. (1) ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ಸಾಂತ್ವನವು, ಸತ್ಯ ದೇವರಾಗಿರುವ ಯೆಹೋವನಿಂದ ಬಂದದ್ದಾಗಿದೆ. (2) ಯೆಹೋವನು ಸರ್ವಶಕ್ತನಾಗಿದ್ದಾನೆ, ಭೂಪರಲೋಕಗಳ ಸೃಷ್ಟಿಕರ್ತನಾಗಿದ್ದಾನೆ. ಆತನು ಪ್ರೀತಿಸ್ವರೂಪಿಯಾಗಿದ್ದಾನೆ ಮತ್ತು ಆತನಲ್ಲಿ ಪ್ರೀತಿಪೂರ್ವಕವಾದ ದಯೆ ಹಾಗೂ ಸತ್ಯತೆಯು ಯಥೇಚ್ಛವಾಗಿದೆ. (3) ದೇವರ ವಾಕ್ಯದಿಂದ ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ನಾವು ಆತನಿಗೆ ಸಮೀಪವಾಗುವುದಾದರೆ, ಸನ್ನಿವೇಶಗಳನ್ನು ತಾಳಿಕೊಳ್ಳಲು ನಾವು ಹೆಚ್ಚು ಬಲವನ್ನು ಪಡೆದುಕೊಳ್ಳುತ್ತೇವೆ. (4) ಬೇರೆ ಬೇರೆ ವ್ಯಕ್ತಿಗಳಿಂದ ಎದುರಿಸಲ್ಪಡುವ ನಿರ್ದಿಷ್ಟ ಪರೀಕ್ಷೆಗಳಿಗೆ ಸಂಬಂಧಿಸುವ ಶಾಸ್ತ್ರವಚನಗಳು ಬೈಬಲಿನಲ್ಲಿವೆ.

7. (ಎ) ದೇವರು ಕೊಡುವಂಥ ಸಾಂತ್ವನವು “ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ” ಎಂಬುದನ್ನು ಒತ್ತಿಹೇಳುವ ಮೂಲಕ ಏನನ್ನು ಸಾಧಿಸಸಾಧ್ಯವಿದೆ? (ಬಿ) ತನ್ನ ನಡತೆಯು ಕೆಟ್ಟದ್ದಾಗಿದೆ ಎಂದು ನೆನಸುವ ಒಬ್ಬ ವ್ಯಕ್ತಿಯನ್ನು ನೀವು ಹೇಗೆ ಸಂತೈಸಬಹುದು?

7 ಕೆಲವರು, ಬೈಬಲಿನೊಂದಿಗೆ ಚಿರಪರಿಚಿತರಾಗಿರುವ ದುಃಖಿತರಿಗೆ 2 ಕೊರಿಂಥ 1:​3-7ನ್ನು ಓದುವ ಮೂಲಕ ಆತ್ಮಿಕ ಉತ್ತೇಜನವನ್ನು ನೀಡಿದ್ದಾರೆ. ಹೀಗೆ ಮಾಡುವಾಗ, “ಆದರಣೆಯು [“ಸಾಂತ್ವನವು,” NW] ಕೂಡ ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ” ಎಂಬ ಅಭಿವ್ಯಕ್ತಿಯನ್ನು ಅವರು ಒತ್ತಿಹೇಳಿದ್ದಾರೆ. ಬೈಬಲು ಸಾಂತ್ವನದ ಮೂಲವಾಗಿದೆ ಮತ್ತು ಅವನು ಇದಕ್ಕೆ ಹೆಚ್ಚು ಪರಿಗಣನೆಯನ್ನು ನೀಡಬೇಕಾಗಿದೆ ಎಂಬುದನ್ನು ಒಬ್ಬ ವ್ಯಕ್ತಿಯು ಮನಗಾಣುವಂತೆ ಸಹ ಈ ಶಾಸ್ತ್ರವಚನವು ಅವನಿಗೆ ಸಹಾಯಮಾಡಬಹುದು. ಇತರ ಸಂದರ್ಭಗಳಲ್ಲಿ ಇದು ಇನ್ನೂ ಹೆಚ್ಚಿನ ಚರ್ಚೆಗಾಗಿ ಆಧಾರವನ್ನು ಒದಗಿಸಬಹುದು. ತಾನು ಅನುಭವಿಸುತ್ತಿರುವ ತೊಂದರೆಗಳು ತಾನು ಮಾಡಿರುವ ಕೆಟ್ಟ ಕೃತ್ಯಗಳ ಫಲಿತಾಂಶವಾಗಿವೆ ಎಂದು ಒಬ್ಬ ವ್ಯಕ್ತಿಗೆ ಅನಿಸುತ್ತಿರುವಲ್ಲಿ, ನಾವು ತೀರ್ಪುಮಾಡುವವರಾಗಿರದೆ, 1 ಯೋಹಾನ 2:​1, 2 ಮತ್ತು ಕೀರ್ತನೆ 103:​11-14ರಲ್ಲಿ ದಾಖಲಿಸಲ್ಪಟ್ಟಿರುವ ವಿಷಯಗಳನ್ನು ತಿಳಿದುಕೊಳ್ಳುವುದು ಸಾಂತ್ವನದಾಯಕವಾಗಿದೆ ಎಂಬುದನ್ನು ನಾವು ಅವನಿಗೆ ತಿಳಿಸಬಹುದು. ಈ ವಿಧಗಳಲ್ಲಿ ನಾವು ದೇವರು ನೀಡುವಂಥ ಸಾಂತ್ವನದಿಂದ ಇತರರನ್ನು ನಿಜವಾಗಿಯೂ ಸಂತೈಸುವವರಾಗಿರುವೆವು.

ಹಿಂಸಾಚಾರ ಅಥವಾ ಆರ್ಥಿಕ ತೊಂದರೆಗಳಿಂದ ಬಾಧಿತರಾಗಿರುವವರನ್ನು ಸಂತೈಸುವುದು

8, 9. ಹಿಂಸಾಚಾರವನ್ನು ಅನುಭವಿಸಿರುವ ಜನರಿಗೆ ಹೇಗೆ ಸೂಕ್ತವಾದ ಸಾಂತ್ವನವು ನೀಡಲ್ಪಡಸಾಧ್ಯವಿದೆ?

8 ಅಸಂಖ್ಯಾತ ಜನರ ಜೀವಿತಗಳು ಹಿಂಸಾಚಾರದಿಂದ, ಅಂದರೆ ಒಂದು ಸಮುದಾಯದಲ್ಲಿನ ಅಪರಾಧದ ಹಿಂಸಾಚಾರದಿಂದ ಅಥವಾ ಯುದ್ಧದ ಹಿಂಸಾಚಾರದಿಂದ ಬಾಧಿತವಾಗಿವೆ. ನಾವು ಅವರನ್ನು ಹೇಗೆ ಸಂತೈಸಸಾಧ್ಯವಿದೆ?

9 ಮಾತಿನಲ್ಲಾಗಲಿ ಕೃತ್ಯದಲ್ಲಾಗಲಿ ಲೋಕದ ಹೋರಾಟಗಳಲ್ಲಿ ಒಂದಲ್ಲ ಒಂದು ಪಕ್ಷವನ್ನು ಬೆಂಬಲಿಸದಿರುವಂತೆ ನಿಜ ಕ್ರೈಸ್ತರು ಜಾಗ್ರತೆ ವಹಿಸುತ್ತಾರೆ. (ಯೋಹಾನ 17:16) ಸದ್ಯದ ಕ್ರೂರ ಪರಿಸ್ಥಿತಿಗಳು ಸದಾಕಾಲಕ್ಕೂ ಹೀಗೆಯೇ ಮುಂದುವರಿಯುವುದಿಲ್ಲ ಎಂಬುದನ್ನು ತೋರಿಸಲಿಕ್ಕಾಗಿ ಅವರು ಸೂಕ್ತವಾಗಿಯೇ ಬೈಬಲನ್ನು ಉಪಯೋಗಿಸುತ್ತಾರೆ. ಯಾರು ಹಿಂಸಾಚಾರವನ್ನು ಪ್ರೀತಿಸುತ್ತಾರೋ ಅವರ ಕುರಿತು ಯೆಹೋವನಿಗೆ ಯಾವ ದೃಷ್ಟಿಕೋನವಿದೆ ಎಂಬುದನ್ನು ತೋರಿಸಲಿಕ್ಕಾಗಿ ಅವರು ಕೀರ್ತನೆ 11:5ನ್ನು ಅಥವಾ ನಾವು ಇತರರಿಗೆ ಮುಯ್ಯಿತೀರಿಸಬಾರದು, ಬದಲಿಗೆ ದೇವರಲ್ಲಿ ಭರವಸೆಯಿಡಬೇಕು ಎಂಬ ದೇವರ ಉತ್ತೇಜನವನ್ನು ಸೂಚಿಸಲಿಕ್ಕಾಗಿ ಕೀರ್ತನೆ 37:​1-4ನ್ನು ಓದಬಹುದು. ಕೀರ್ತನೆ 72:​12-14ರ ಮಾತುಗಳು, ಈಗ ಸ್ವರ್ಗೀಯ ರಾಜನಾಗಿ ಆಳುತ್ತಿರುವ ಮಹಾನ್‌ ಸೊಲೊಮೋನನಾದ ಯೇಸು ಕ್ರಿಸ್ತನಿಗೆ, ಹಿಂಸಾಚಾರವನ್ನು ಅನುಭವಿಸುವ ಮುಗ್ಧ ಜನರ ಕುರಿತು ಯಾವ ಅನಿಸಿಕೆಯಿದೆ ಎಂಬುದನ್ನು ತೋರಿಸುತ್ತವೆ.

10. ನೀವು ಅನೇಕ ವರ್ಷಗಳಿಂದ ಯುದ್ಧದ ಮಧ್ಯೆ ಜೀವಿಸಿರುವಲ್ಲಿ, ಉದ್ಧರಿಸಲ್ಪಟ್ಟಿರುವ ಶಾಸ್ತ್ರವಚನಗಳು ನಿಮಗೆ ಹೇಗೆ ಸಾಂತ್ವನ ನೀಡಬಲ್ಲವು?

10 ಹೋರಾಡುತ್ತಿರುವ ಪಕ್ಷಗಳು ವಿಷಯಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕಾದಾಡುತ್ತಿರುವಾಗ, ಕೆಲವು ಜನರು ಅನೇಕ ಸಂಘರ್ಷಗಳನ್ನು ತಾಳಿಕೊಂಡಿದ್ದಾರೆ. ಯುದ್ಧ ಹಾಗೂ ಅದರ ನಂತರದ ಪರಿಣಾಮಗಳು ಜೀವನದ ಅವಿಭಾಜ್ಯ ಅಂಗವಾಗಿವೆ ಎಂಬ ದೃಷ್ಟಿಕೋನವನ್ನು ಅವರು ಸುಲಭವಾಗಿ ಅಳವಡಿಸಿಕೊಳ್ಳುತ್ತಾರೆ. ಅವರು ಎದುರುನೋಡುವಂಥ ಏಕಮಾತ್ರ ಪ್ರತೀಕ್ಷೆಯು, ತಾವು ಒಂದುವೇಳೆ ಬೇರೊಂದು ದೇಶಕ್ಕೆ ವಲಸೆಹೋಗುವಲ್ಲಿ ಪರಿಸ್ಥಿತಿಗಳು ಹೆಚ್ಚು ಉತ್ತಮಗೊಳ್ಳಬಹುದು ಎಂಬುದೇ ಆಗಿದೆ. ಆದರೆ ಅವರಲ್ಲಿ ಹೆಚ್ಚಿನವರು ಹೀಗೆ ಮಾಡುವುದರಲ್ಲಿ ಸಫಲರಾಗುವುದಿಲ್ಲ, ಮತ್ತು ಹೀಗೆ ಮಾಡಲು ಪ್ರಯತ್ನಿಸಿದವರಲ್ಲಿ ಅನೇಕರು ಈ ಪ್ರಯತ್ನದಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. ಇನ್ನೊಂದು ದೇಶಕ್ಕೆ ಹೋಗುವುದರಲ್ಲಿ ಯಶಸ್ವಿಯಾದವರು, ಒಂದು ರೀತಿಯ ಸಮಸ್ಯೆಗಳಿಂದ ತಪ್ಪಿಸಿಕೊಂಡಿದ್ದಾರೆಂಬುದೇನೋ ನಿಜ, ಆದರೆ ಅದೇ ಸಮಯದಲ್ಲಿ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂಥ ಜನರು ವಲಸೆಹೋಗುವುದಕ್ಕಿಂತಲೂ ಹೆಚ್ಚು ವಿಶ್ವಾಸಾರ್ಹವಾದ ಒಂದು ವಿಷಯದಲ್ಲಿ ನಿರೀಕ್ಷೆ ಇಡುವಂತೆ ಸಹಾಯಮಾಡಲು ಕೀರ್ತನೆ 146:​3-6ನ್ನು ಉಪಯೋಗಿಸಬಹುದು. ಮತ್ತಾಯ 24:​3, 7, 14, ಅಥವಾ 2 ತಿಮೊಥೆಯ 3:​1-5ರಲ್ಲಿರುವ ಪ್ರವಾದನೆಯು, ಸನ್ನಿವೇಶವನ್ನು ಹೆಚ್ಚು ಪೂರ್ಣವಾಗಿ ಗ್ರಹಿಸಲು ಮತ್ತು ಅವರು ತಾಳಿಕೊಳ್ಳುತ್ತಿರುವ ಪರಿಸ್ಥಿತಿಗಳ ಅರ್ಥವನ್ನು ಮನಗಾಣಲು, ಅಂದರೆ ನಾವು ಹಳೆಯ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಸಹಾಯಮಾಡಬಹುದು. ಕೀರ್ತನೆ 46:​1-3, 8, 9 ಹಾಗೂ ಯೆಶಾಯ 2:​2-4ರಂಥ ವಚನಗಳು, ಒಂದು ಶಾಂತಿಭರಿತ ಭವಿಷ್ಯತ್ತಿಗಾಗಿರುವ ನಿರೀಕ್ಷೆಯು ನಿಜವಾಗಿಯೂ ಇದೆ ಎಂಬುದನ್ನು ಗ್ರಹಿಸಲು ಅವರಿಗೆ ಸಹಾಯಮಾಡಬಹುದು.

11. ಯಾವ ವಚನಗಳು ಪಶ್ಚಿಮ ಆಫ್ರಿಕದ ಒಬ್ಬ ಸ್ತ್ರೀಯನ್ನು ಸಂತೈಸಿದವು, ಮತ್ತು ಏಕೆ?

11 ಪಶ್ಚಿಮ ಆಫ್ರಿಕದಲ್ಲಿ ಮುಂದುವರಿಯುತ್ತಿದ್ದ ಯುದ್ಧದ ಕಾಲಾವಧಿಯಲ್ಲಿ, ಗುಂಡಿನ ಸುರಿಮಳೆಯ ಮಧ್ಯೆ ಒಬ್ಬ ಸ್ತ್ರೀಯು ತನ್ನ ಕುಟುಂಬದೊಂದಿಗೆ ತನ್ನ ಮನೆಯಿಂದ ಪಲಾಯನಮಾಡಿದಳು. ಅವಳ ಜೀವಿತವು ಭಯ, ದುಃಖ, ಹಾಗೂ ಹೃದಯವಿದ್ರಾವಕ ನಿರಾಶೆಯಿಂದ ತುಂಬಿತ್ತು. ಸಮಯಾನಂತರ, ಆ ಕುಟುಂಬವು ಬೇರೊಂದು ದೇಶದಲ್ಲಿ ವಾಸಿಸುತ್ತಿದ್ದಾಗ, ಅವಳ ಗಂಡನು ಅವರ ವಿವಾಹ ದೃಢೀಕರಣ ಪತ್ರವನ್ನು ಸುಟ್ಟುಹಾಕಿ, ಆಗ ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಮತ್ತು ಅವರ ಹತ್ತು ವರ್ಷ ಪ್ರಾಯದ ಮಗನನ್ನು ದೂರಮಾಡಿ, ಒಬ್ಬ ಪಾದ್ರಿಯಾಗಲು ನಿರ್ಧರಿಸಿದನು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳೊಂದಿಗೆ ಫಿಲಿಪ್ಪಿ 4:​6, 7 ಮತ್ತು ಕೀರ್ತನೆ 55:22ನ್ನು ಅವಳೊಂದಿಗೆ ಹಂಚಿಕೊಂಡಾಗ, ಕಟ್ಟಕಡೆಗೂ ಅವಳು ಸಾಂತ್ವನವನ್ನು ಹಾಗೂ ಜೀವಿತದಲ್ಲಿ ಒಂದು ಉದ್ದೇಶವನ್ನು ಕಂಡುಕೊಂಡಳು.

12. (ಎ) ಆರ್ಥಿಕವಾಗಿ ಒತ್ತಡಕ್ಕೆ ಒಳಗಾಗಿರುವ ಜನರಿಗೆ ಶಾಸ್ತ್ರವಚನಗಳು ಯಾವ ಪರಿಹಾರವನ್ನು ನೀಡುತ್ತವೆ? (ಬಿ) ಏಷಿಯದಲ್ಲಿರುವ ಸಾಕ್ಷಿಯೊಬ್ಬಳು ಒಬ್ಬ ಗಿರಾಕಿಗೆ ಸಹಾಯಮಾಡಲು ಹೇಗೆ ಶಕ್ತಳಾದಳು?

12 ಆರ್ಥಿಕ ಕುಸಿತವು ಅನೇಕ ಜನರ ಜೀವಿತಗಳನ್ನು ಗಂಭೀರವಾಗಿ ಬಾಧಿಸಿದೆ. ಕೆಲವೊಮ್ಮೆ ಯುದ್ಧ ಹಾಗೂ ಅದರ ನಂತರದ ಪರಿಣಾಮಗಳ ಕಾರಣದಿಂದಲೂ ಇದು ಸಂಭವಿಸಿದೆ. ಇನ್ನೂ ಕೆಲವೊಮ್ಮೆ, ಬುದ್ಧಿಹೀನ ಸರಕಾರೀ ಕಾರ್ಯನೀತಿಗಳೊಂದಿಗೆ ಅಧಿಕಾರದಲ್ಲಿರುವವರ ಲೋಭ ಮತ್ತು ಅಪ್ರಾಮಾಣಿಕತೆಯು, ಜನರು ಉಳಿತಾಯಮಾಡಿರುವ ಎಲ್ಲಾ ಹಣವನ್ನು ಕಬಳಿಸಿಬಿಟ್ಟಿದೆ ಮತ್ತು ಜನರು ತಮ್ಮ ಧನಸಂಪತ್ತುಗಳನ್ನು ಕಳೆದುಕೊಳ್ಳುವಂತೆ ಒತ್ತಾಯಿಸಿದೆ. ಇನ್ನಿತರರು ಲೋಕದ ಉಪಯುಕ್ತ ವಸ್ತುಗಳಲ್ಲಿ ಹೆಚ್ಚಿನವನ್ನು ಎಂದೂ ಹೊಂದಿರಲಿಲ್ಲ. ಆದರೂ ಇಂಥವರು, ದೇವರ ಮೇಲೆ ಭರವಸೆಯಿಡುವವರಿಗೆ ಆತನು ಇದರಿಂದ ಬಿಡುಗಡೆಯ ಆಶ್ವಾಸನೆಯನ್ನು ನೀಡುತ್ತಾನೆ ಹಾಗೂ ಜನರು ತಮ್ಮ ಕೈಕೆಲಸದಲ್ಲಿ ಆನಂದಿಸುವಂಥ ಒಂದು ನೀತಿಯ ಲೋಕದ ಖಾತ್ರಿಯನ್ನು ನೀಡುತ್ತಾನೆ ಎಂಬುದನ್ನು ತಿಳಿಯುವುದರಿಂದ ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ. (ಕೀರ್ತನೆ 146:6, 7; ಯೆಶಾಯ 65:17, 21-23; 2 ಪೇತ್ರ 3:13) ಏಷಿಯದ ದೇಶವೊಂದರಲ್ಲಿ, ಒಂದು ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಸಾಕ್ಷಿಯೊಬ್ಬಳು ಅಲ್ಲಿ ಅಸ್ತಿತ್ವದಲ್ಲಿದ್ದ ಆರ್ಥಿಕ ಪರಿಸ್ಥಿತಿಯ ಕುರಿತು ಒಬ್ಬ ಗಿರಾಕಿಯು ಚಿಂತೆಯನ್ನು ವ್ಯಕ್ತಪಡಿಸುವುದನ್ನು ಕೇಳಿಸಿಕೊಂಡಾಗ, ಸ್ಥಳಿಕವಾಗಿ ಸಂಭವಿಸುತ್ತಿರುವ ವಿಷಯಗಳು ಲೋಕದಾದ್ಯಂತ ನಡೆಯುತ್ತಿರುವ ಘಟನೆಗಳ ನಮೂನೆಯ ಒಂದು ಭಾಗವಾಗಿದ್ದವು ಎಂದು ಅವಳು ಆ ಗಿರಾಕಿಗೆ ವಿವರಿಸಿದಳು. ಮತ್ತಾಯ 24:​3-14 ಮತ್ತು ಕೀರ್ತನೆ 37:​9-11ರ ಕುರಿತಾದ ಒಂದು ಚರ್ಚೆಯು, ಕ್ರಮವಾದ ಬೈಬಲ್‌ ಅಧ್ಯಯನಕ್ಕೆ ನಡಿಸಿತು.

13. (ಎ) ಸುಳ್ಳು ವಾಗ್ದಾನಗಳಿಂದ ಜನರು ನಿರಾಶರಾಗಿರುವಾಗ, ಅವರಿಗೆ ಸಹಾಯಮಾಡಲಿಕ್ಕಾಗಿ ನಾವು ಬೈಬಲನ್ನು ಹೇಗೆ ಉಪಯೋಗಿಸಬಹುದು? (ಬಿ) ಕೆಟ್ಟ ಪರಿಸ್ಥಿತಿಗಳು ದೇವರೇ ಇಲ್ಲ ಎಂಬುದನ್ನು ರುಜುಪಡಿಸುತ್ತದೆ ಎಂದು ಜನರು ನೆನಸುವಲ್ಲಿ, ನೀವು ಅವರೊಂದಿಗೆ ಹೇಗೆ ತರ್ಕಿಸಲು ಪ್ರಯತ್ನಿಸಬಹುದು?

13 ಜನರು ಅನೇಕ ವರ್ಷಗಳ ವರೆಗೆ ಕಷ್ಟಾನುಭವಿಸಿರುವಾಗ ಅಥವಾ ಅನೇಕ ಸುಳ್ಳು ವಾಗ್ದಾನಗಳಿಂದ ನಿರಾಶರಾಗಿರುವಾಗ, ಅವರು “ಮನಸ್ಸು ಕುಗ್ಗಿಹೋದದರಿಂದ” ಐಗುಪ್ತದಲ್ಲಿ ಮೋಶೆಯ ಮಾತಿಗೆ ಕಿವಿಗೊಡಲು ತಪ್ಪಿಹೋದಂಥ ಇಸ್ರಾಯೇಲ್ಯರಂತಿರಬಹುದು. (ವಿಮೋಚನಕಾಂಡ 6:9) ಇಂಥ ಸನ್ನಿವೇಶಗಳಲ್ಲಿ, ಸದ್ಯದ ಸಮಸ್ಯೆಗಳನ್ನು ಯಶಸ್ವಿಕರವಾಗಿ ನಿಭಾಯಿಸಲು ಹಾಗೂ ಅನೇಕ ಜನರ ಜೀವಿತಗಳನ್ನು ಅನಗತ್ಯವಾಗಿ ಹಾಳುಮಾಡುವ ಅಪಾಯಗಳಿಂದ ತಪ್ಪಿಸಿಕೊಳ್ಳಲು ಬೈಬಲು ಅವರಿಗೆ ಸಹಾಯಮಾಡಸಾಧ್ಯವಿರುವ ವಿಧಗಳನ್ನು ಎತ್ತಿಹೇಳುವುದು ಪ್ರಯೋಜನದಾಯಕವಾಗಿ ಕಂಡುಬರಬಹುದು. (1 ತಿಮೊಥೆಯ 4:8ಬಿ) ಕೆಲವರು ಯಾವ ಕೆಟ್ಟ ಪರಿಸ್ಥಿತಿಗಳ ಕೆಳಗೆ ಜೀವಿಸುತ್ತಾರೋ ಅದನ್ನು, ದೇವರೇ ಇಲ್ಲ ಅಥವಾ ಇದ್ದರೂ ತಮ್ಮ ಕುರಿತು ಚಿಂತಿಸುವುದಿಲ್ಲ ಎಂಬುದಕ್ಕೆ ರುಜುವಾತಾಗಿ ಪರಿಗಣಿಸಬಹುದು. ಈ ವಿಷಯದಲ್ಲಿ ದೇವರು ಸಹಾಯವನ್ನು ಒದಗಿಸಿದ್ದಾನಾದರೂ, ಅನೇಕರು ಅದನ್ನು ಸ್ವೀಕರಿಸಿಲ್ಲ ಎಂಬುದನ್ನು ಅವರು ಮನಗಾಣುವಂತೆ ಅವರಿಗೆ ಸಹಾಯಮಾಡಲಿಕ್ಕಾಗಿ ನೀವು ಸೂಕ್ತವಾದ ಶಾಸ್ತ್ರವಚನಗಳನ್ನು ಉಪಯೋಗಿಸಿ ತರ್ಕಿಸಬಹುದು.​—ಯೆಶಾಯ 48:​17, 18.

ಚಂಡಮಾರುತಗಳು ಹಾಗೂ ಭೂಕಂಪಗಳಿಂದ ಬಾಧಿತರಾದವರನ್ನು ಸಂತೈಸುವುದು

14, 15. ಒಂದು ವಿಪತ್ತು ಅನೇಕರಿಗೆ ಆಘಾತಕರ ಸನ್ನಿವೇಶವನ್ನು ತಂದೊಡ್ಡಿದಾಗ, ಯೆಹೋವನ ಸಾಕ್ಷಿಗಳು ಹೇಗೆ ಹಿತಾಸಕ್ತಿಯನ್ನು ತೋರಿಸಿದರು?

14 ಚಂಡಮಾರುತ, ಭೂಕಂಪ, ಬೆಂಕಿ, ಅಥವಾ ಸ್ಫೋಟನಗಳ ಫಲಿತಾಂಶವಾಗಿ ವಿಪತ್ತು ಬಂದೆರಗಬಹುದು. ದುಃಖಕರ ಸನ್ನಿವೇಶವು ವ್ಯಾಪಕವಾಗಿರಬಹುದು. ಪಾರಾಗಿ ಉಳಿಯುವವರಿಗೆ ಸಾಂತ್ವನ ನೀಡಲು ಏನು ಮಾಡಸಾಧ್ಯವಿದೆ?

15 ಯಾರೋ ಒಬ್ಬರು ನಮ್ಮ ಕುರಿತು ಚಿಂತಿಸುತ್ತಾರೆ ಎಂಬುದನ್ನು ಜನರು ತಿಳಿಯುವ ಅಗತ್ಯವಿದೆ. ಒಂದು ದೇಶದಲ್ಲಿ ಭಯೋತ್ಪಾದಕರ ದಾಳಿಯು ನಡೆದ ಬಳಿಕ ಅನೇಕರು ಆಘಾತಗೊಂಡರು. ಅನೇಕರು ಕುಟುಂಬದ ಸದಸ್ಯರನ್ನು, ಕುಟುಂಬ ಪೋಷಣೆಗಾಗಿ ದುಡಿಯುವವರನ್ನು, ಸ್ನೇಹಿತರನ್ನು, ಉದ್ಯೋಗವನ್ನು, ಅಥವಾ ಅವರು ಹೊಂದಿರಬಹುದಾಗಿದ್ದ ಯಾವುದೇ ರೀತಿಯ ಭದ್ರತಾ ಪ್ರಜ್ಞೆಯನ್ನು ಕಳೆದುಕೊಂಡರು. ಯೆಹೋವನ ಸಾಕ್ಷಿಗಳು ತಮ್ಮ ಸಮುದಾಯದಲ್ಲಿದ್ದ ನೆರೆಯವರನ್ನು ಭೇಟಿಯಾಗಿ, ಅವರಿಗಾಗಿರುವ ಭಾರೀ ನಷ್ಟಗಳ ವಿಷಯದಲ್ಲಿ ಸಹಾನುಭೂತಿಯನ್ನು ವ್ಯಕ್ತಪಡಿಸಿ, ಬೈಬಲಿನಿಂದ ಸಾಂತ್ವನದ ಮಾತುಗಳನ್ನು ತಿಳಿಸಿದರು. ಇಂಥ ಹಿತಾಸಕ್ತಿಯನ್ನು ಅನೇಕರು ಬಹಳವಾಗಿ ಗಣ್ಯಮಾಡಿದರು.

16. ಎಲ್‌ ಸಾಲ್ವಡಾರ್‌ನ ಪ್ರಾಂತವೊಂದರಲ್ಲಿ ವಿಪತ್ತು ಬಂದೆರಗಿದಾಗ, ಸ್ಥಳಿಕ ಸಾಕ್ಷಿಗಳ ಕ್ಷೇತ್ರ ಸೇವೆಯು ಏಕೆ ತುಂಬ ಪರಿಣಾಮಕಾರಿಯಾಗಿತ್ತು?

16 ಎಲ್‌ ಸಾಲ್ವಡಾರ್‌ನಲ್ಲಿ 2001ರಲ್ಲಿ ನಡೆದ ಒಂದು ಭೀಕರವಾದ ಭೂಕಂಪದ ನಂತರ, ದೊಡ್ಡ ಮಣ್ಣುಕುಸಿತವು ಸಂಭವಿಸಿ ಅನೇಕ ಜನರನ್ನು ಬಲಿತೆಗೆದುಕೊಂಡಿತು. ಒಬ್ಬ ಸಾಕ್ಷಿಯ 25 ವರ್ಷ ಪ್ರಾಯದ ಮಗನೂ, ಆ ಮಗನನ್ನು ಮದುವೆಯಾಗಲಿದ್ದ ಹುಡುಗಿಯ ತಂಗಿಯರೂ ಕೊಲ್ಲಲ್ಪಟ್ಟರು. ಒಡನೆಯೇ ಆ ಯುವಕನ ತಾಯಿ ಹಾಗೂ ಅವನು ಮದುವೆಯಾಗಲಿದ್ದ ಹುಡುಗಿ ಜೊತೆಗೂಡಿ ಕ್ಷೇತ್ರ ಸೇವೆಯಲ್ಲಿ ಕಾರ್ಯಮಗ್ನರಾದರು. ಯಾರು ಮರಣಪಟ್ಟರೋ ಆ ಜನರನ್ನು ದೇವರೇ ಕರೆಸಿಕೊಂಡನು ಅಥವಾ ಇದೇ ದೇವರ ಚಿತ್ತವಾಗಿತ್ತು ಎಂದು ಅನೇಕರು ಇವರಿಬ್ಬರಿಗೆ ಹೇಳಿದರು. ನಾವು ವೇದನೆಯನ್ನು ಅನುಭವಿಸುವುದು ದೇವರ ಚಿತ್ತವಲ್ಲ ಎಂಬುದನ್ನು ತೋರಿಸಲಿಕ್ಕಾಗಿ ಸಾಕ್ಷಿಗಳು ಜ್ಞಾನೋಕ್ತಿ 10:22ನ್ನು ಆಧಾರವಾಗಿ ಉಪಯೋಗಿಸಿದರು. ಮರಣವು ದೇವರ ಚಿತ್ತವಾಗಿರುವುದರಿಂದ ಅಲ್ಲ, ಬದಲಾಗಿ ಮನುಷ್ಯನ ಪಾಪದ ಕಾರಣದಿಂದ ಬರಮಾಡಲ್ಪಟ್ಟಿತು ಎಂಬುದನ್ನು ತೋರಿಸಲಿಕ್ಕಾಗಿ ಅವರು ರೋಮಾಪುರ 5:12ನ್ನು ಓದಿದರು. ಕೀರ್ತನೆ 34:​18, 37:29, ಯೆಶಾಯ 25:​8, ಮತ್ತು ಪ್ರಕಟನೆ 21:​3, 4ರಲ್ಲಿ ಕಂಡುಬರುವ ಸಾಂತ್ವನದಾಯಕ ಸಂದೇಶವನ್ನು ಸಹ ಅವರು ತೋರಿಸಿದರು. ವಿಶೇಷವಾಗಿ ಈ ಇಬ್ಬರೂ ಸ್ತ್ರೀಯರು ವಿಪತ್ತಿನಲ್ಲಿ ತಮ್ಮ ಸ್ವಂತ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದರಿಂದ, ಜನರು ಮನಸಾರೆ ಕಿವಿಗೊಟ್ಟರು, ಹಾಗೂ ಅನೇಕ ಬೈಬಲ್‌ ಅಧ್ಯಯನಗಳು ಆರಂಭಿಸಲ್ಪಟ್ಟವು.

17. ವಿಪತ್ತಿನ ಸಮಯಗಳಲ್ಲಿ ಯಾವ ರೀತಿಯ ಸಹಾಯವನ್ನು ನೀವು ನೀಡಬಹುದು?

17 ವಿಪತ್ತು ಬಂದೆರಗುವಾಗ, ತತ್‌ಕ್ಷಣದ ಭೌತಿಕ ಸಹಾಯದ ಅಗತ್ಯವಿರುವಂಥ ಒಬ್ಬ ವ್ಯಕ್ತಿಯನ್ನು ನೀವು ಸಂಧಿಸಬಹುದು. ಇದರಲ್ಲಿ ಒಬ್ಬ ವೈದ್ಯನನ್ನು ಕರೆಯುವುದು, ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡುಹೋಗಲು ಸಹಾಯಮಾಡುವುದು, ಅಥವಾ ಆಹಾರ ಮತ್ತು ವಸತಿಯನ್ನು ಒದಗಿಸಲಿಕ್ಕಾಗಿ ಸಾಧ್ಯವಿರುವ ಪ್ರಯತ್ನವನ್ನು ಮಾಡುವುದು ಒಳಗೂಡಿರಬಹುದು. 1998ರಲ್ಲಿ ಇಟಲಿಯಲ್ಲಿ ನಡೆದ ಒಂದು ವಿಪತ್ತಿನಲ್ಲಿ, ಯೆಹೋವನ ಸಾಕ್ಷಿಗಳು “ಪ್ರಾಯೋಗಿಕ ರೀತಿಯಲ್ಲಿ ಕಾರ್ಯನಡಿಸುತ್ತಾರೆ; ಕಷ್ಟಾನುಭವಿಸುತ್ತಿರುವವರು ಯಾವ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂಬುದರ ಕುರಿತು ಚಿಂತಿಸದೆ, ಎಲ್ಲರಿಗೂ ಸಹಾಯವನ್ನು ಮಾಡಲು ಸದಾ ಸಿದ್ಧರಿರುತ್ತಾರೆ” ಎಂದು ಒಬ್ಬ ಪತ್ರಕರ್ತನು ಗಮನಿಸಿದನು. ಕೆಲವು ಕ್ಷೇತ್ರಗಳಲ್ಲಿ, ಕಡೇ ದಿವಸಗಳಲ್ಲಿ ಸಂಭವಿಸುವವೆಂದು ಪ್ರವಾದಿಸಲ್ಪಟ್ಟಿರುವಂಥ ಘಟನೆಗಳು ಭಾರಿ ಕಷ್ಟಾನುಭವವನ್ನು ಉಂಟುಮಾಡುತ್ತವೆ. ಅಂಥ ಸ್ಥಳಗಳಲ್ಲಿ, ಯೆಹೋವನ ಸಾಕ್ಷಿಗಳು ಬೈಬಲ್‌ ಪ್ರವಾದನೆಗಳನ್ನು ತೋರಿಸುತ್ತಾರೆ ಮತ್ತು ದೇವರ ರಾಜ್ಯವು ಮಾತ್ರ ಮಾನವಕುಲಕ್ಕೆ ನಿಜವಾದ ಭದ್ರತೆಯನ್ನು ತರುವುದು ಎಂಬ ಬೈಬಲ್‌ ಆಶ್ವಾಸನೆಯಿಂದ ಅವರು ಜನರನ್ನು ಸಂತೈಸುತ್ತಾರೆ.​—ಜ್ಞಾನೋಕ್ತಿ 1:33; ಮೀಕ 4:4.

ಕುಟುಂಬದ ಸದಸ್ಯನೊಬ್ಬನು ಮೃತಪಟ್ಟಾಗ ಸಾಂತ್ವನವನ್ನು ನೀಡುವುದು

18-20. ಒಂದು ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿರುವಾಗ, ಮನೆಯವರಿಗೆ ಸಾಂತ್ವನವನ್ನು ನೀಡಲಿಕ್ಕಾಗಿ ನೀವು ಏನು ಹೇಳಬಹುದು ಅಥವಾ ಮಾಡಬಹುದು?

18 ಪ್ರತಿ ದಿನ ಲಕ್ಷಾಂತರ ಮಂದಿ ಒಬ್ಬ ಪ್ರಿಯ ವ್ಯಕ್ತಿಯ ಮರಣದಿಂದಾಗಿ ದುಃಖಿಸುತ್ತಾರೆ. ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವಾಗ ಅಥವಾ ದೈನಂದಿನ ಜೀವಿತದ ಆವಶ್ಯಕತೆಗಳನ್ನು ಪೂರೈಸುತ್ತಿರುವಾಗ, ದುಃಖಿಸುತ್ತಿರುವಂಥ ಜನರನ್ನು ನೀವು ಭೇಟಿಯಾಗಬಹುದು. ಅವರಿಗೆ ಸಾಂತ್ವನವನ್ನು ನೀಡುವಂಥ ರೀತಿಯಲ್ಲಿ ನೀವು ಏನನ್ನು ಹೇಳಬಹುದು ಅಥವಾ ಮಾಡಬಹುದು?

19 ಆ ವ್ಯಕ್ತಿಯು ಭಾವನಾತ್ಮಕ ಸಂಕ್ಷೋಭೆಗೆ ಒಳಗಾಗಿದ್ದಾನೋ? ಆ ಮನೆಯು ದುಃಖಿಸುತ್ತಿರುವ ಸಂಬಂಧಿಕರಿಂದ ತುಂಬಿಹೋಗಿದೆಯೋ? ನೀವು ಅನೇಕ ವಿಷಯಗಳನ್ನು ಹೇಳಲು ಬಯಸಬಹುದಾದರೂ, ಅಂಥ ಸಂದರ್ಭದಲ್ಲಿ ವಿವೇಚನಾಶಕ್ತಿಯನ್ನು ಉಪಯೋಗಿಸುವುದು ಪ್ರಾಮುಖ್ಯವಾಗಿದೆ. (ಪ್ರಸಂಗಿ 3:​1, 7) ಅಲ್ಲಿ ಸಹಾನುಭೂತಿಯನ್ನು ವ್ಯಕ್ತಪಡಿಸುವುದು ಸೂಕ್ತವಾದದ್ದಾಗಿರಬಹುದು, ಮತ್ತು ಸೂಕ್ತವಾದ ಒಂದು ಬೈಬಲ್‌ ಪ್ರಕಾಶನವನ್ನು ಬಿಟ್ಟುಬನ್ನಿರಿ, ಹಾಗೂ ಅವರಿಗೆ ಇನ್ನೂ ಹೆಚ್ಚಿನ ಸಹಾಯವನ್ನು ನೀಡಸಾಧ್ಯವಿದೆಯೋ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಕೆಲವು ದಿನಗಳ ಬಳಿಕ ಅವರನ್ನು ಪುನಃ ಭೇಟಿಮಾಡಿರಿ. ಸೂಕ್ತವಾದ ಸಂದರ್ಭದಲ್ಲಿ, ಬೈಬಲಿನಿಂದ ಕೆಲವೊಂದು ಉತ್ತೇಜನದಾಯಕ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದೋ ಎಂದು ಕೇಳಿನೋಡಿರಿ. ಇದು ಅವರ ಮನಸ್ಸನ್ನು ಸಮಾಧಾನಗೊಳಿಸುವ ಹಾಗೂ ಉಪಶಮನವನ್ನು ನೀಡುವ ಪ್ರಭಾವ ಬೀರಬಹುದು. (ಜ್ಞಾನೋಕ್ತಿ 16:24; 25:11) ಯೇಸು ಮಾಡಿದಂತೆ ನೀವು ಮೃತರನ್ನು ಪುನರುತ್ಥಾನಗೊಳಿಸಲಾರಿರಿ ನಿಜ. ಆದರೆ ಇದು ತಪ್ಪು ದೃಷ್ಟಿಕೋನಗಳನ್ನು ತರ್ಕಸಮ್ಮತವಾಗಿ ರುಜುಪಡಿಸಲು ತಕ್ಕ ಸಮಯವಾಗಿಲ್ಲದಿರುವುದಾದರೂ, ಮೃತರ ಸ್ಥಿತಿಯ ಕುರಿತು ಬೈಬಲು ಏನು ಹೇಳುತ್ತದೋ ಅದನ್ನು ನೀವು ಅವರೊಂದಿಗೆ ಹಂಚಿಕೊಳ್ಳಸಾಧ್ಯವಿದೆ. (ಕೀರ್ತನೆ 146:4; ಪ್ರಸಂಗಿ 9:5, 10; ಯೆಹೆಜ್ಕೇಲ 18:4) ಪುನರುತ್ಥಾನದ ಕುರಿತಾದ ಬೈಬಲ್‌ ವಾಗ್ದಾನಗಳನ್ನು ನೀವು ಜೊತೆಗೂಡಿ ಓದಸಾಧ್ಯವಿದೆ. (ಯೋಹಾನ 5:28, 29; ಅ. ಕೃತ್ಯಗಳು 24:15) ಬಹುಶಃ ಪುನರುತ್ಥಾನದ ಕುರಿತಾದ ಒಂದು ಬೈಬಲ್‌ ವರದಿಯನ್ನು ಉಪಯೋಗಿಸುವ ಮೂಲಕ, ಇವುಗಳ ಅರ್ಥವೇನು ಎಂಬುದನ್ನು ನೀವು ಚರ್ಚಿಸಬಹುದು. (ಲೂಕ 8:49-56; ಯೋಹಾನ 11:39-44) ಅಷ್ಟುಮಾತ್ರವಲ್ಲ, ಇಂಥ ಒಂದು ನಿರೀಕ್ಷೆಯನ್ನು ನಮಗೆ ಕೊಡುವಂಥ ಪ್ರೀತಿಯ ದೇವರ ಗುಣಗಳ ಕಡೆಗೂ ಗಮನವನ್ನು ಸೆಳೆಯಿರಿ. (ಯೋಬ 14:14, 15; ಯೋಹಾನ 3:16) ಈ ಬೋಧನೆಗಳು ನಿಮಗೆ ಹೇಗೆ ಪ್ರಯೋಜನದಾಯಕವಾಗಿವೆ ಮತ್ತು ನಿಮಗೆ ಅವುಗಳಲ್ಲಿ ಏಕೆ ದೃಢಭರವಸೆಯಿದೆ ಎಂಬುದನ್ನು ವಿವರಿಸಿರಿ.

20 ರಾಜ್ಯ ಸಭಾಗೃಹಕ್ಕೆ ಬನ್ನಿರಿ ಎಂಬ ಆಮಂತ್ರಣವು, ತಮ್ಮ ನೆರೆಯವರನ್ನು ನಿಜವಾಗಿಯೂ ಪ್ರೀತಿಸುವ ಹಾಗೂ ಒಬ್ಬರು ಇನ್ನೊಬ್ಬರಿಗೆ ಹೇಗೆ ಭಕ್ತಿವೃದ್ಧಿಯನ್ನು ಉಂಟುಮಾಡಬೇಕು ಎಂಬುದನ್ನು ತಿಳಿದಿರುವಂಥ ಜನರ ಪರಿಚಯಮಾಡಿಕೊಳ್ಳುವಂತೆ ಈ ದುಃಖಿತರಿಗೆ ಸಹಾಯಮಾಡಬಹುದು. ಸ್ವೀಡನ್‌ನ ಸ್ತ್ರೀಯೊಬ್ಬಳು, ತನ್ನ ಜೀವಮಾನದಾದ್ಯಂತ ತಾನು ಎದುರುನೋಡುತ್ತಿದ್ದದ್ದು ಇದನ್ನೇ ಎಂಬುದನ್ನು ಕಂಡುಕೊಂಡಳು.​—ಯೋಹಾನ 13:35; 1 ಥೆಸಲೊನೀಕ 5:11.

21, 22. (ಎ) ನಾವು ಸಾಂತ್ವನವನ್ನು ನೀಡಬೇಕಾದರೆ ಯಾವುದರ ಆವಶ್ಯಕತೆಯಿದೆ? (ಬಿ) ಈಗಾಗಲೇ ಶಾಸ್ತ್ರವಚನಗಳನ್ನು ಚೆನ್ನಾಗಿ ತಿಳಿದಿರುವಂಥ ಯಾರಿಗಾದರೂ ನೀವು ಹೇಗೆ ಸಾಂತ್ವನವನ್ನು ನೀಡಸಾಧ್ಯವಿದೆ?

21 ಕ್ರೈಸ್ತ ಸಭೆಯಲ್ಲಾಗಲಿ ಹೊರಗಾಗಲಿ, ಯಾರಾದರೊಬ್ಬರು ದುಃಖವನ್ನು ಅನುಭವಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದುಬರುವಾಗ, ಕೆಲವೊಮ್ಮೆ ನಿಮಗೆ ಏನು ಹೇಳಬೇಕು ಅಥವಾ ಏನು ಮಾಡಬೇಕು ಎಂಬುದರ ಬಗ್ಗೆ ಅನಿಶ್ಚಿತತೆ ಇರುತ್ತದೋ? ಬೈಬಲಿನಲ್ಲಿ “ಸಾಂತ್ವನ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು ಅನೇಕವೇಳೆ ಅಕ್ಷರಶಃ “ಒಬ್ಬನ ಪಕ್ಕಕ್ಕೆ ಬರುವಂತೆ ಕರೆಯುವುದು” ಎಂಬುದನ್ನು ಅರ್ಥೈಸುತ್ತದೆ. ಒಬ್ಬ ನೈಜ ಸಾಂತ್ವನಗಾರನಾಗಿರುವುದು, ದುಃಖಿಸುತ್ತಿರುವವರಿಗಾಗಿ ಸ್ವತಃ ನಿಮ್ಮನ್ನು ಲಭ್ಯಗೊಳಿಸಿಕೊಳ್ಳುವುದನ್ನು ಸೂಚಿಸುತ್ತದೆ.​—ಜ್ಞಾನೋಕ್ತಿ 17:17.

22 ನೀವು ಸಂತೈಸಲು ಬಯಸುವಂಥ ಒಬ್ಬ ವ್ಯಕ್ತಿಗೆ, ಮರಣದ ಕುರಿತು, ಪ್ರಾಯಶ್ಚಿತ್ತ ಯಜ್ಞದ ಕುರಿತು, ಹಾಗೂ ಪುನರುತ್ಥಾನದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದು ಈಗಾಗಲೇ ಗೊತ್ತಿರುವಲ್ಲಿ ಆಗೇನು? ಇವೇ ನಂಬಿಕೆಗಳನ್ನು ಹಂಚಿಕೊಳ್ಳುವಂಥ ಒಬ್ಬ ಸ್ನೇಹಿತನ ಉಪಸ್ಥಿತಿಯು ತಾನೇ ಅವನಿಗೆ ಸಾಂತ್ವನದಾಯಕವಾಗಿರಸಾಧ್ಯವಿದೆ. ಅವನು ಮಾತಾಡಲು ಬಯಸುವಲ್ಲಿ, ನೀವು ಒಳ್ಳೇ ರೀತಿಯಲ್ಲಿ ಕಿವಿಗೊಡಿರಿ. ನೀವು ಅವನಿಗೆ ಒಂದು ಭಾಷಣ ಕೊಡುವ ಆವಶ್ಯಕತೆಯಿದೆ ಎಂದು ನೆನಸಬೇಡಿರಿ. ಒಂದುವೇಳೆ ಶಾಸ್ತ್ರವಚನಗಳು ಓದಲ್ಪಡುವಲ್ಲಿ, ಇವುಗಳನ್ನು ನಿಮ್ಮಿಬ್ಬರ ಹೃದಯಗಳನ್ನು ಬಲಪಡಿಸಲಿಕ್ಕಾಗಿರುವ ದೇವರ ಅಭಿವ್ಯಕ್ತಿಗಳಾಗಿ ಪರಿಗಣಿಸಿರಿ. ಶಾಸ್ತ್ರವಚನಗಳು ವಾಗ್ದಾನಿಸುವ ವಿಷಯಗಳ ಕುರಿತು ನಿಮಗಿರುವ ಬಲವಾದ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸಿರಿ. ದೈವಿಕ ಸಹಾನುಭೂತಿಯ ಕುರಿತು ಪರ್ಯಾಲೋಚಿಸುವ ಮೂಲಕ ಮತ್ತು ದೇವರ ವಾಕ್ಯದಲ್ಲಿ ಒಳಗೂಡಿರುವ ಅಮೂಲ್ಯ ಸತ್ಯತೆಗಳನ್ನು ಹಂಚಿಕೊಳ್ಳುವ ಮೂಲಕ, ನೀವು “ಸಕಲವಿಧವಾಗಿ ಸಂತೈಸುವ ದೇವ”ರಾಗಿರುವ ಯೆಹೋವನಿಂದ ಸಮಾಧಾನವನ್ನು ಹಾಗೂ ಬಲವನ್ನು ಪಡೆದುಕೊಳ್ಳಲಿಕ್ಕಾಗಿ ದುಃಖಿಸುತ್ತಿರುವವರಿಗೆ ಸಹಾಯನೀಡಸಾಧ್ಯವಿದೆ.​—2 ಕೊರಿಂಥ 1:3.

[ಪಾದಟಿಪ್ಪಣಿ]

^ ಪ್ಯಾರ. 3 ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ 8ನೆಯ ಅಧ್ಯಾಯವನ್ನು, ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕದ 393-400, 427-31ನೆಯ ಪುಟಗಳನ್ನು, ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನಿದ್ದಾನೋ? (ಇಂಗ್ಲಿಷ್‌) ಪುಸ್ತಕದ 10ನೆಯ ಅಧ್ಯಾಯವನ್ನು, ಹಾಗೂ ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರನ್ನು ನೋಡಿರಿ.

ನಿಮ್ಮ ಹೇಳಿಕೆಯೇನು?

• ಆಪತ್ತುಗಳಿಗೆ ಯಾರು ಕಾರಣನೆಂದು ಅನೇಕ ಜನರು ಹೇಳುತ್ತಾರೆ ಮತ್ತು ನಾವು ಅವರಿಗೆ ಹೇಗೆ ಸಹಾಯಮಾಡಸಾಧ್ಯವಿದೆ?

• ಬೈಬಲು ನೀಡುವಂಥ ಸಾಂತ್ವನದಿಂದ ಇತರರು ಸಂಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲು ನಾವೇನು ಮಾಡಬಹುದು?

• ನಿಮ್ಮ ಕ್ಷೇತ್ರದಲ್ಲಿ ಅನೇಕರಿಗೆ ಯಾವ ಸನ್ನಿವೇಶಗಳು ದುಃಖವನ್ನು ಉಂಟುಮಾಡುತ್ತಿವೆ ಮತ್ತು ನೀವು ಅವರನ್ನು ಹೇಗೆ ಸಂತೈಸಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರಗಳು]

ವಿಪತ್ತಿನ ಸಮಯಗಳಲ್ಲಿ ನಿಜವಾದ ಸಾಂತ್ವನದ ಸಂದೇಶವನ್ನು ಹಂಚಿಕೊಳ್ಳುವುದು

[ಕೃಪೆ]

ನಿರಾಶ್ರಿತರ ಶಿಬಿರ: UN PHOTO 186811/J. Isaac

[ಪುಟ 24ರಲ್ಲಿರುವ ಚಿತ್ರ]

ಒಬ್ಬ ಸ್ನೇಹಿತನ ಉಪಸ್ಥಿತಿಯೇ ಸಾಂತ್ವನದಾಯಕವಾಗಿರಸಾಧ್ಯವಿದೆ