ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಕ್ರೈಸ್ತ ಸಹೋದರತ್ವಕ್ಕೆ ಸೇವೆಸಲ್ಲಿಸುತ್ತಾರೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಕ್ರೈಸ್ತ ಸಹೋದರತ್ವಕ್ಕೆ ಸೇವೆಸಲ್ಲಿಸುತ್ತಾರೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಕ್ರೈಸ್ತ ಸಹೋದರತ್ವಕ್ಕೆ ಸೇವೆಸಲ್ಲಿಸುತ್ತಾರೆ

“ಅಂತಾರಾಷ್ಟ್ರೀಯ ಸೇವಕರು” ಮತ್ತು “ಅಂತಾರಾಷ್ಟ್ರೀಯ ಸ್ವಯಂಸೇವಕರು” ಎಂಬ ಪದಗಳನ್ನು ನೀವು ಕೇಳಿದ್ದೀರೋ? ಯೆಹೋವನ ಸಾಕ್ಷಿಗಳಿಂದ ಕೂಡಿದ್ದ ಈ ಗುಂಪುಗಳು, ಬೈಬಲಿನ ರಾಜ್ಯ ಸಂದೇಶವನ್ನು ಮುದ್ರಿಸಿ ವಿತರಿಸಲು ಉಪಯೋಗಿಸಲ್ಪಡುವ ಸೌಕರ್ಯಗಳನ್ನು ಕಟ್ಟುವ ಕೆಲಸಕ್ಕಾಗಿ ತಮ್ಮ ಸಮಯ ಮತ್ತು ಕೌಶಲಗಳನ್ನು ಒಪ್ಪಿಸಿಕೊಡುತ್ತಾರೆ. ಇಂಥ ಸ್ವಯಂಸೇವಕರು, ಬೈಬಲ್‌ ಶಿಕ್ಷಣದ ಕೇಂದ್ರಗಳಾಗಿರುವ, ಸಮ್ಮೇಳನ ಹಾಲ್‌ಗಳ ಮತ್ತು ರಾಜ್ಯ ಸಭಾಗೃಹಗಳ ನಿರ್ಮಾಣ ಕೆಲಸದಲ್ಲಿ ಸಹ ಸಹಾಯಮಾಡುತ್ತಾರೆ. ಇಂದು, 34 ವಿವಿಧ ದೇಶಗಳಲ್ಲಿ​—ಮುಖ್ಯವಾಗಿ ಸೀಮಿತ ಸಂಪನ್ಮೂಲಗಳಿರುವ ದೇಶಗಳಲ್ಲಿ​—ಈ ಸ್ವಯಂಸೇವಕರು ನಿರ್ಮಾಣ ಯೋಜನೆಗಳಲ್ಲಿ ನೆರವು ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೈಸ್ತ ಸಹೋದರತ್ವಕ್ಕೆ ಸೇವೆಸಲ್ಲಿಸುವಾಗ, ಈ ಶುಶ್ರೂಷಕರು ಯಾವ ವಿಶೇಷ ಪಂಥಾಹ್ವಾನಗಳನ್ನು ಎದುರಿಸುತ್ತಾರೆ ಮತ್ತು ಆನಂದವನ್ನು ಅನುಭವಿಸುತ್ತಾರೆ? ಅವರು ಸಲ್ಲಿಸುವ “ಪವಿತ್ರ ಸೇವೆಯ” ಕುರಿತು ಅವರಿಗೆ ಹೇಗನಿಸುತ್ತದೆ? (ಪ್ರಕಟನೆ 7:​9, 15, NW) ಇದನ್ನು ತಿಳಿದುಕೊಳ್ಳಲು, ಮೆಕ್ಸಿಕೊವಿನಲ್ಲಿ ಸೇವೆಸಲ್ಲಿಸಿದ ಕೆಲವು ಸ್ವಯಂಸೇವಕರನ್ನು ಭೇಟಿಮಾಡೋಣ.

ಇಸವಿ 1992ರ ಮೇ ತಿಂಗಳಿನಲ್ಲಿ, ವಿದೇಶದಿಂದ ಸ್ವಯಂಸೇವಕರು ಮೊದಲ ಬಾರಿ ಮೆಕ್ಸಿಕೊಗೆ ಬಂದರು. ಕೂಡಲೆ ಅವರು, ಮೆಕ್ಸಿಕೊವಿನಲ್ಲಿರುವ ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಉಸ್ತುವಾರಿಯನ್ನು ನಡೆಸುವ ಬ್ರಾಂಚ್‌ನ ಸಂಕೀರ್ಣವನ್ನು ವಿಸ್ತರಿಸುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸತೊಡಗಿದರು. ಈ ವಿಸ್ತರಣಾ ಯೋಜನೆಯಲ್ಲಿ, ಬ್ರಾಂಚ್‌ ಆಫೀಸಿನ ಸ್ವಯಂಸೇವಕರಿಗಾಗಿ ನಿವಾಸಕೋಣೆಗಳು, ಒಂದು ಮುದ್ರಣಾಲಯ, ಮತ್ತು ಆಫೀಸ್‌ಗಳಿಗಾಗಿ ಒಂದು ಕಟ್ಟಡವನ್ನೊಳಗೊಂಡು 14 ಹೊಸ ಕಟ್ಟಡಗಳ ನಿರ್ಮಾಣ ಕೆಲಸವು ಸೇರಿತ್ತು.

ನಿರ್ಮಾಣ ಯೋಜನೆಯಲ್ಲಿ ನೆರವು ನೀಡಲು, ಮೆಕ್ಸಿಕೊವಿನ ಎಲ್ಲಾ ಭಾಗದಿಂದ ಬಂದ ನೂರಾರು ಸ್ವಯಂಸೇವಕರೊಂದಿಗೆ ಅಮೆರಿಕ, ಕೆನಡ, ಗ್ರೇಟ್‌ ಬ್ರಿಟನ್‌ ಮತ್ತು ಇತರ ದೇಶಗಳಿಂದ ಬಂದ 730ಕ್ಕಿಂತಲೂ ಹೆಚ್ಚಿನ ಸ್ವಯಂಸೇವಕರು ಐಕ್ಯವಾಗಿ ಸೇವೆಸಲ್ಲಿಸಿದರು. ಇದಕ್ಕೆ ಕೂಡಿಸಿ, ಬ್ರಾಂಚ್‌ ಆಫೀಸಿನ ಸಮೀಪದಲ್ಲಿರುವ ಸುಮಾರು 1,600 ಸಭೆಗಳಿಂದ ಬಂದ 28,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು, ವಾರಾಂತ್ಯಗಳಲ್ಲಿ ಈ ನಿರ್ಮಾಣ ಕಾರ್ಯದಲ್ಲಿ ನೆರವು ನೀಡಿದರು. ಎಲ್ಲರೂ ಸಿದ್ಧಮನಸ್ಸಿನಿಂದಲೂ ಉಚಿತವಾಗಿಯೂ ತಮ್ಮ ಕೌಶಲಗಳನ್ನು ಉಪಯೋಗಿಸಿದರು. ಈ ರೀತಿಯಲ್ಲಿ ಯೆಹೋವನನ್ನು ಸೇವಿಸುವುದನ್ನು ಅವರು ಒಂದು ಸುಯೋಗವಾಗಿ ಪರಿಗಣಿಸಿದರು. ಕಟ್ಟಡ ನಿರ್ಮಾಣ ಕೆಲಸದಾದ್ಯಂತ, ಅವರು ಕೀರ್ತನೆ 127:1ರ ಪ್ರೇರಿತ ವಾಕ್ಯವನ್ನು ತಮ್ಮ ಮನಸ್ಸಿನಲ್ಲಿಟ್ಟಿದ್ದರು. ಅದು ತಿಳಿಸುವುದು: “ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ.”

ಅವರು ಎದುರಿಸಿದ ಪಂಥಾಹ್ವಾನಗಳು

ಅಂತಾರಾಷ್ಟ್ರೀಯ ಸ್ವಯಂಸೇವಕರು, ವಿದೇಶ ನೇಮಕದಲ್ಲಿ ಸೇವೆಸಲ್ಲಿಸುವಾಗ ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಾರೆ? ಅವರ ಕೆಲವೊಂದು ಹೇಳಿಕೆಗಳು ಇಲ್ಲಿವೆ. ಕರ್ಟಿಸ್‌ ಮತ್ತು ಸ್ಯಾಲೀ ಎಂಬ ಅಮೆರಿಕದ ದಂಪತಿಗಳು, ಜರ್ಮನಿ, ಇಂಡಿಯ, ಪ್ಯಾರಗ್ವೈ, ಮೆಕ್ಸಿಕೊ, ರಷ್ಯಾ, ರೊಮೇನಿಯ, ಸಾಂಬಿಯ, ಮತ್ತು ಸೆನಿಗಲ್‌ನ ನಿರ್ಮಾಣ ಯೋಜನೆಗಳಲ್ಲಿ ನೆರವು ನೀಡಿದ್ದಾರೆ. ಕರ್ಟಿಸ್‌ ತಿಳಿಸುವುದು: “ಪೂರ್ಣ ಸಮಯದ ಪಯನೀಯರ್‌ ಸೇವೆಯಲ್ಲಿರುವ ನಮ್ಮ ಮಗಳನ್ನು ಮತ್ತು ಮಿನಸೋಟದಲ್ಲಿರುವ ನಮ್ಮ ಸ್ವಂತ ಸಭೆಯನ್ನು ಬಿಟ್ಟು ಬರುವುದು ಮೊದಲ ಪಂಥಾಹ್ವಾನವಾಗಿತ್ತು. ನಾನು ಮತ್ತು ನನ್ನ ಹೆಂಡತಿ, ಆ ಸಭೆಯೊಂದಿಗೆ ಸುಮಾರು 24 ವರುಷ ಸಹವಾಸಮಾಡಿದ್ದೆವು ಮತ್ತು ಅಲ್ಲಿ ನಮಗೆ ಹಾಯಾದ ಅನಿಸಿಕೆಯಾಗುತ್ತಿತ್ತು.”

ಸ್ಯಾಲೀ ತಿಳಿಸುವುದು: “ಅಪರಿಚಿತ ಪರಿಸ್ಥಿತಿಗಳ ಕೆಳಗೆ ಜೀವಿಸುವುದು, ಪುರುಷನಿಗಿಂತಲೂ ಸ್ತ್ರೀಯೊಬ್ಬಳಿಗೆ ಹೆಚ್ಚು ಪಂಥಾಹ್ವಾನದಾಯಕವಾಗಿರುತ್ತದೆ. ಆದರೆ ನಾನು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಕಲಿತುಕೊಂಡೆ. ಕ್ರಿಮಿಕೀಟಗಳ ಕಾಟವನ್ನು ಅದೂ ಸ್ವಲ್ಪವಲ್ಲ ಬಹಳಷ್ಟು ಕ್ರಿಮಿಕೀಟಗಳ ಕಾಟವನ್ನು ಸಹಿಸಿಕೊಳ್ಳಲೂ ನಾನು ಕಲಿತುಕೊಂಡೆ!” ಅವಳು ಕೂಡಿಸುವುದು: “ಒಂದು ದೇಶದಲ್ಲಿ, ಅಡಿಗೆ ಮನೆಯಿಲ್ಲದ ಮತ್ತು ಕೇವಲ ಎರಡು ಶೌಚಾಲಯಗಳಿರುವ ಒಂದು ಅಪಾರ್ಟ್‌ಮೆಂಟನಲ್ಲಿ ನಾವು ಹತ್ತು ಮಂದಿ ಸ್ವಯಂಸೇವಕರು ತಂಗಿದ್ದೆವು. ಅಲ್ಲಿ ನಾನು ಹೆಚ್ಚು ತಾಳ್ಮೆಯನ್ನು ಬೆಳೆಸಿಕೊಳ್ಳಲು ಕಲಿತುಕೊಂಡೆ.”

ಒಂದು ಹೊಸ ಭಾಷೆಯನ್ನು ಕಲಿಯುವುದು, ಪ್ರಯತ್ನ ಮತ್ತು ನಮ್ರತೆಯನ್ನು ಕೇಳಿಕೊಳ್ಳುತ್ತದೆ. ಇದು ಇನ್ನೊಂದು ಪಂಥಾಹ್ವಾನವಾಗಿರುತ್ತದೆ. ತನ್ನ ಗಂಡನೊಂದಿಗೆ ವಿವಿಧ ದೇಶಗಳಲ್ಲಿ ನಿರ್ಮಾಣ ಯೋಜನೆಗಳಲ್ಲಿ ಕೆಲಸಮಾಡಿದ ಶ್ಯಾರನ್‌ ತಿಳಿಸುವುದು: “ನಾವು ಸೇವೆಮಾಡುತ್ತಿರುವ ದೇಶದ ಭಾಷೆಯನ್ನು ತಿಳಿಯದಿರುವುದು ಒಂದು ಪಂಥಾಹ್ವಾನವಾಗಿತ್ತು. ನಮ್ಮ ಭಾವನೆಗಳನ್ನು ಸರಾಗವಾಗಿ ತಿಳಿಯಪಡಿಸಲು ಅಸಾಧ್ಯವಾದದ್ದರಿಂದ, ಆರಂಭದಲ್ಲಿ ನಮ್ಮ ಆತ್ಮಿಕ ಸಹೋದರ ಸಹೋದರಿಯರೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು ಬಹಳ ಕಷ್ಟಕರವಾಗಿತ್ತು. ಇದು ಬಹಳ ನಿರಾಶೆಯನ್ನುಂಟುಮಾಡುತ್ತದೆ. ಆದರೆ ನಮ್ಮ ವಿದೇಶ ನೇಮಕಗಳಲ್ಲಿ ನಾವು ಭೇಟಿಯಾದ ಸಹೋದರರು, ಬಹಳ ದಯಾಪರರೂ ನಮ್ಮ ಒಳಿತಿನ ಕುರಿತು ಆಳವಾದ ಚಿಂತನೆಯುಳ್ಳವರೂ ಆಗಿದ್ದರು. ಭಾಷಾ ತಡೆಯಿದ್ದರೂ, ಸ್ವಲ್ಪ ದಿನಗಳಲ್ಲಿಯೇ ನಾವು ಅವರೊಂದಿಗೆ ಹೇಗೋ ಮಾತಾಡಲಾರಂಭಿಸಿದೆವು.”

ಶುಶ್ರೂಷೆಯಲ್ಲಿ ಭಾಗವಹಿಸುವುದು ಧೈರ್ಯವನ್ನು ಅಗತ್ಯಪಡಿಸುತ್ತದೆ

ಸ್ವತ್ಯಾಗದ ಈ ಸ್ವಯಂಸೇವಕರು, ನಿರ್ಮಾಣ ಕಾರ್ಯದ ಪ್ರಗತಿಗೆ ಹೆಚ್ಚಿನ ಸಹಾಯವನ್ನು ನೀಡುತ್ತಾರಾದರೂ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು ತಮ್ಮ ಅತಿ ಪ್ರಾಮುಖ್ಯವಾದ ಕೆಲಸವೆಂಬುದನ್ನು ಅವರು ಗಣ್ಯಮಾಡುತ್ತಾರೆ. ಆದುದರಿಂದ, ತಾವು ಸಹವಾಸಿಸುವ ಸಭೆಯಿಂದ ನಡಿಸಲ್ಪಡುವ ಸಾರುವ ಕೆಲಸಕ್ಕೆ ಅವರು ತಮ್ಮ ಪೂರ್ಣ ಬೆಂಬಲವನ್ನು ನೀಡುತ್ತಾರೆ. ವಿದೇಶದಲ್ಲಿ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ, ಅಲ್ಲಿನ ಭಾಷೆಯನ್ನು ಉಪಯೋಗಿಸುವುದು ಧೈರ್ಯವನ್ನು ಅಗತ್ಯಪಡಿಸುತ್ತದೆ ಎಂಬುದಾಗಿ ಗ್ವಾಡೆಲೋಪ್‌, ನೈಜಿರೀಯ, ಮಲಾವಿ, ಮತ್ತು ಮೆಕ್ಸಿಕೊವಿನ ನಿರ್ಮಾಣ ಯೋಜನೆಗಳಲ್ಲಿ ನೆರವು ನೀಡಿದ ದಂಪತಿಗಳಾದ ಆಕೇ ಮತ್ತು ಇಂಗ್‌-ಮಾರಿ ತಿಳಿಸುತ್ತಾರೆ.

ಇಂಗ್‌-ಮಾರಿ ತಿಳಿಸುವುದು: “ಮೊದಲು ನಮ್ಮ ಭಾಗವಹಿಸುವಿಕೆಯು ಬಹಳ ಕಡಿಮೆಯಾಗಿತ್ತು. ಏಕೆಂದರೆ ನಾವು ಯಾವಾಗಲೂ ಸ್ಥಳಿಕ ಸಾಕ್ಷಿಗಳೊಂದಿಗೆ ಹೋಗುತ್ತಿದ್ದುದರಿಂದ ನಾಚಿಕೆಯ ಕಾರಣ ಅವರನ್ನೇ ಮಾತಾಡುವಂತೆ ಬಿಡುತ್ತಿದ್ದೆವು. ಹಾಗಿದ್ದರೂ, ಒಂದು ದಿನ ಬೆಳಿಗ್ಗೆ ನಾವು ಸ್ವತಃ ಕ್ಷೇತ್ರ ಸೇವೆಗೆ ಹೋಗಲು ನಿರ್ಣಯಿಸಿದೆವು. ಭಯದಿಂದ ತುಂಬಿದವರಾಗಿ, ನಮ್ಮ ಕಾಲುಗಳು ನಡುಗುತ್ತಿದ್ದವು ಮತ್ತು ಹೃದಯವು ರಭಸವಾಗಿ ಬಡಿಯುತ್ತಿತ್ತು. ನಾವು ಒಬ್ಬಾಕೆ ಯುವ ಸ್ತ್ರೀಯನ್ನು ಭೇಟಿಯಾದೆವು ಮತ್ತು ಆಕೆಗೆ ನನ್ನ ತಯಾರಿಸಲ್ಪಟ್ಟ ನಿರೂಪಣೆಯನ್ನು ಪ್ರಸ್ತುತಪಡಿಸಿದೆ. ಒಂದು ಶಾಸ್ತ್ರವಚನವನ್ನು ಓದಿ, ಕೆಲವು ಸಾಹಿತ್ಯವನ್ನು ನೀಡಿದೆ. ನಂತರ ಆ ಸ್ತ್ರೀಯು ಹೀಗೆಂದಳು: ‘ನನ್ನ ಸಂಬಂಧಿಕಳೊಬ್ಬಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡುತ್ತಿದ್ದಾಳೆ. ನನಗೂ ಒಂದು ಬೈಬಲ್‌ ಅಧ್ಯಯನ ಬೇಕು. ಅದಕ್ಕಾಗಿ ನಾನು ಏನು ಮಾಡಬೇಕು ಎಂಬುದನ್ನು ದಯಮಾಡಿ ತಿಳಿಸುವಿರಾ?’ ಇದನ್ನು ಕೇಳಿ ನಾನು ವಿಸ್ಮಿತಳಾದೆ. ಏನು ಹೇಳಬೇಕೆಂದು ನನಗೆ ತೋಚಲಿಲ್ಲ. ನಂತರ ನಾನು ಶಾಂತತೆಯಿಂದ ಅವಳಿಗೊಂದು ಬೈಬಲ್‌ ಅಧ್ಯಯನವನ್ನು ನೀಡಿದೆ.”

ಇಂಗ್‌-ಮಾರಿ ಕೂಡಿಸುತ್ತಾ ಹೇಳುವುದು: “ನಮ್ಮ ಸ್ವಪ್ರಯತ್ನ ಮತ್ತು ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಇಚ್ಛೆಯನ್ನು ಯೆಹೋವನು ಆಶೀರ್ವದಿಸಿದ್ದಕ್ಕಾಗಿ ನಾನು ಬಹಳ ಆನಂದಿತಳೂ ಕೃತಜ್ಞಳೂ ಆಗಿದ್ದೇನೆ.” ಆ ಸ್ತ್ರೀಯು ಸತ್ಯದಲ್ಲಿ ಬಹಳ ಪ್ರಗತಿಯನ್ನು ಮಾಡಿ, ಮೆಕ್ಸಿಕೊ ನಗರದಲ್ಲಿ ನಡೆದ ಒಂದು ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸಾನ್ನವನ್ನು ಪಡೆದುಕೊಂಡಳು. ಆಕೇ ಮತ್ತು ಇಂಗ್‌-ಮಾರಿ, ತಮ್ಮ ಶುಶ್ರೂಷೆಯ ಕುರಿತು ಈ ರೀತಿಯಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತಾರೆ: “ವಿವಿಧ ನಿರ್ಮಾಣ ಯೋಜನೆಗಳ ನಮ್ಮ ನೇಮಕವನ್ನು ನಾವು ಬಹಳವಾಗಿ ಗಣ್ಯಮಾಡುತ್ತೇವೆ. ಆದರೆ ಒಬ್ಬ ವ್ಯಕ್ತಿಯು ಸತ್ಯವನ್ನು ಸ್ವೀಕರಿಸುವಂತೆ ಸಹಾಯಮಾಡುವುದರಲ್ಲಿ ಸಿಗುವ ಆನಂದ ಮತ್ತು ಸಂತೃಪ್ತಿಯನ್ನು ಯಾವುದೇ ವಿಷಯವು ಮೀರಿಸಸಾಧ್ಯವಿಲ್ಲ.”

ಒಂದು ಸ್ವತ್ಯಾಗದ ಆತ್ಮ

ತಮ್ಮ ಕುಟುಂಬವನ್ನು ಮತ್ತು ಸ್ನೇಹಿತರನ್ನು ಬಿಟ್ಟು ವಿದೇಶದಲ್ಲಿರುವ ತಮ್ಮ ಸಹೋದರರಿಗಾಗಿ ಸೇವೆಸಲ್ಲಿಸಲು, ಸ್ವಯಂಸೇವಕರು ತ್ಯಾಗಗಳನ್ನು ಮಾಡುತ್ತಾರೆಂಬುದು ನಿಜ. ಆದರೆ ಅವರು ಹೋಲಿಸಲಾಗದಂತ ಆನಂದಗಳನ್ನೂ ಅನುಭವಿಸುತ್ತಾರೆ. ಅವು ಯಾವುವು?

ಅಂಗೋಲ, ಎಕ್ವಡಾರ್‌, ಎಲ್‌ ಸಾಲ್ವಡಾರ್‌, ಕೊಲಂಬಿಯ, ಗಯಾನ, ಪೋರ್ಟರೀಕೊ, ಮತ್ತು ಮೆಕ್ಸಿಕೊವಿನಲ್ಲಿ ತನ್ನ ಪತ್ನಿಯೊಂದಿಗೆ ಸೇವೆಸಲ್ಲಿಸಿದ ಹವರ್ಡ್‌ ವಿವರಿಸುವುದು: “ಬೇರೆ ಬೇರೆ ದೇಶಗಳ ಸಹೋದರ ಸಹೋದರಿಯರನ್ನು ಭೇಟಿಯಾಗುವುದು ಮತ್ತು ನಮ್ಮ ಅಂತಾರಾಷ್ಟ್ರೀಯ ಸಹೋದರತ್ವದಲ್ಲಿರುವ ಪ್ರೀತಿಯನ್ನು ಸಾಕ್ಷಾತ್ತಾಗಿ ಅನುಭವಿಸುವುದು ಒಂದು ವಿಶೇಷ ಸುಯೋಗವಾಗಿದೆ. ನಾವು ಅನೇಕ ಬಾರಿ ಸಹೋದರತ್ವದ ಪ್ರೀತಿಯ ಕುರಿತು ಓದುತ್ತೇವೆ, ಆದರೆ ವಿವಿಧ ಸಂಸ್ಕೃತಿಯ ಮತ್ತು ಹಿನ್ನೆಲೆಗಳಿಂದ ಬಂದ ಸಹೋದರ ಸಹೋದರಿಯರೊಂದಿಗೆ ಜೀವಿಸಿ, ಸೇವೆಸಲ್ಲಿಸುವಾಗ ಅತ್ಯಮೂಲ್ಯವಾದ ಸಹೋದರತ್ವವನ್ನು ಬಹಳ ಹೆಚ್ಚಾಗಿ ನಾವು ಗಣ್ಯಮಾಡುತ್ತೇವೆ.”

ಎಕ್ವಡಾರ್‌, ಕೊಲಂಬಿಯ, ಕೊಸ್ಟರೀಕ, ಮೆಕ್ಸಿಕೊ, ಮತ್ತು ಸಾಂಬಿಯದ ನಿರ್ಮಾಣ ಯೋಜನೆಗಳಲ್ಲಿ ನೆರವು ನೀಡಿದ ಗ್ಯಾರೀ, ತನಗೆ ಈ ಕಾರ್ಯಕ್ರಮ ಬಹಳ ಪ್ರಯೋಜನವನ್ನು ತಂದಿದೆ ಎಂಬುದಾಗಿ ತಿಳಿಸುತ್ತಾರೆ. ಅವರು ಹೇಳುವುದು: “ಈ ಕೆಲಸಕ್ಕಾಗಿ ನನ್ನನ್ನು ನೇಮಿಸಲಾದ ದೇಶಗಳ ಬ್ರಾಂಚ್‌ಗಳಲ್ಲಿರುವ ಪ್ರೌಢ ಸಹೋದರರೊಂದಿಗೆ ಅನೇಕ ವರುಷಗಳ ವರೆಗೆ ಸಹವಾಸಮಾಡಿದ್ದರಿಂದ ಪಡೆದ ತರಬೇತಿಯು, ನನ್ನ ನೇಮಕದಲ್ಲಿ ಬರಬಹುದಾದ ಪಂಥಾಹ್ವಾನಗಳನ್ನು ಎದುರಿಸಲು ನನ್ನನ್ನು ಉತ್ತಮವಾಗಿ ಸಜ್ಜುಗೊಳಿಸಿತು. ಇದೊಂದು ನಂಬಿಕೆಯನ್ನು ಬಲಪಡಿಸುವಂಥ ಕೆಲಸವಾಗಿದೆ, ಏಕೆಂದರೆ ಯೆಹೋವನ ಲೋಕವ್ಯಾಪಕ ಸಂಸ್ಥೆಯನ್ನು ಗುರುತಿಸುವ ಐಕ್ಯವನ್ನು​—ಭಾಷೆ, ಕುಲ, ಅಥವಾ ಸಂಸ್ಕೃತಿಗಳ ಭೇದವನ್ನು ಮುರಿದು ಹಾಕುವ ಐಕ್ಯವನ್ನು ಅನುಭವಿಸುವ ಸಂದರ್ಭವನ್ನು ಸಹ ಇದು ನನಗೆ ಒದಗಿಸಿತು.”

ಈ ನಡುವೆ, ಮೆಕ್ಸಿಕೊವಿನ ನಿರ್ಮಾಣ ಕಾರ್ಯವು ಮುಗಿಯಿತು ಮತ್ತು ವಿಸ್ತಾರವಾದ ಬ್ರಾಂಚ್‌ ಸೌಕರ್ಯಗಳ ಪ್ರಾರಂಭೋತ್ಸವವು ಈ ವರುಷ ನಡೆಯಿತು. ಮೆಕ್ಸಿಕೊ ಮತ್ತು ಇತರ ದೇಶಗಳಲ್ಲಿ ಸತ್ಯ ಆರಾಧನೆಯು ವಿಸ್ತಾರಗೊಳ್ಳುವಂತೆ ಅಂತಾರಾಷ್ಟೀಯ ಸೇವಕರು ಮತ್ತು ಅಂತಾರಾಷ್ಟ್ರೀಯ ಸ್ವಯಂಸೇವಕರು ದೇವರಿಗಾಗಿರುವ ತಮ್ಮ ಪ್ರೀತಿಯಿಂದ ಪ್ರಚೋದಿತರಾಗಿ ಬಹಳಷ್ಟು ತ್ಯಾಗವನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಹೋದರರಿಗೆ ಸೇವೆಸಲ್ಲಿಸುವ ಅವರ ಸಿದ್ಧಮನಸ್ಸು ಮತ್ತು ಸ್ವತ್ಯಾಗದ ಆತ್ಮವನ್ನು ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳು ಬಹಳವಾಗಿ ಗಣ್ಯಮಾಡುತ್ತಾರೆ.

[ಪುಟ 25ರಲ್ಲಿರುವ ಚಿತ್ರ]

ಎಕ್ವಡಾರ್‌

[ಪುಟ 25ರಲ್ಲಿರುವ ಚಿತ್ರ]

ಕೊಲಂಬಿಯ

[ಪುಟ 25ರಲ್ಲಿರುವ ಚಿತ್ರ]

ಅಂಗೋಲ

[ಪುಟ 26ರಲ್ಲಿರುವ ಚಿತ್ರ]

ಮೆಕ್ಸಿಕೊ ಬ್ರಾಂಚ್‌ನಲ್ಲಿ ಹೊಸ ಸೌಕರ್ಯಗಳ ತಯಾರಿಗಾಗಿ ಕೆಲಸವು ಆರಂಭಗೊಳ್ಳುತ್ತದೆ

[ಪುಟ 26ರಲ್ಲಿರುವ ಚಿತ್ರ]

ಬ್ರಾಂಚ್‌ನಲ್ಲಿರುವ ತೋಟ

[ಪುಟ 26ರಲ್ಲಿರುವ ಚಿತ್ರ]

ಕೆಳಗೆ: ಹೊಸ ಸೌಕರ್ಯಗಳ ಒಂದು ಭಾಗದ ಎದುರಿನಲ್ಲಿ ನಿಂತಿರುವ ನಿರ್ಮಾಣ ಇಲಾಖೆಯ ಕೆಲವು ಸದಸ್ಯರು

[ಪುಟ 27ರಲ್ಲಿರುವ ಚಿತ್ರ]

ನಿರ್ಮಾಣ ಸ್ವಯಂಸೇವಕರು, ಸ್ಥಳಿಕ ಸಭೆಗಳೊಂದಿಗೆ ಸಾರುವ ಕೆಲಸವನ್ನು ಬೆಂಬಲಿಸುವುದರಲ್ಲಿ ಆನಂದಿಸುತ್ತಾರೆ