ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಯುವ ಜನರು

ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಯುವ ಜನರು

ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಯುವ ಜನರು

ಈ ಅಧ್ಯಯನ ಲೇಖನಗಳು ವಿಶೇಷವಾಗಿ ಯೆಹೋವನ ಸಾಕ್ಷಿಗಳಲ್ಲಿರುವ ಯುವ ಜನರಿಗಾಗಿ ತಯಾರಿಸಲ್ಪಟ್ಟವು. ಆದುದರಿಂದ ಈ ವಿಷಯವನ್ನು ಜಾಗರೂಕತೆಯಿಂದ ಅಧ್ಯಯನ ಮಾಡಿ, ಸಭಾ ಕಾವಲಿನಬುರುಜು ಅಧ್ಯಯನದಲ್ಲಿ ಅದು ಚರ್ಚಿಸಲ್ಪಡುವಾಗ ಅಧಿಕಾಂಶ ಉತ್ತರಗಳನ್ನು ಕೊಡುವಂತೆ ನಾವು ಯುವ ಜನರನ್ನು ಪ್ರೋತ್ಸಾಹಿಸುತ್ತೇವೆ.

“ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.”—ಜ್ಞಾನೋಕ್ತಿ 27:11.

1, 2. (ಎ) ಲೋಕದ ವಿಷಯಗಳತ್ತ ಕೇವಲ ಆಕರ್ಷಿಸಲ್ಪಡುವುದು, ನೀವು ಕ್ರೈಸ್ತರಾಗಿರಲು ಯೋಗ್ಯರಲ್ಲ ಎಂಬುದನ್ನು ಅರ್ಥೈಸುತ್ತದೊ ಇಲ್ಲವೊ, ವಿವರಿಸಿರಿ. (ರೋಮಾಪುರ 7:21) (ಬಿ) ಆಸಾಫನ ಅನುಭವದಿಂದ ನೀವೇನನ್ನು ಕಲಿಯುತ್ತೀರಿ? (ಪುಟ 13ರಲ್ಲಿರುವ ಚೌಕವನ್ನು ನೋಡಿರಿ.)

ನೀವು ಅಂಗಡಿಯಲ್ಲಿ ಬಟ್ಟೆಯನ್ನು ಖರೀದಿಸುತ್ತಿದ್ದೀರೆಂದು ನೆನೆಸಿರಿ. ಉಡುಪಿನ ರಾಶಿಯಲ್ಲಿ ಹುಡುಕುವಾಗ ಕೂಡಲೆ ಒಂದು ಉಡುಗೆಯು ನಿಮ್ಮ ಕಣ್ಣನ್ನು ಆಕರ್ಷಿಸುತ್ತದೆ. ಅದರ ಬಣ್ಣ ಮತ್ತು ಸ್ಟೈಲ್‌ ನಿಮಗೆ ಚೆನ್ನಾಗಿ ಒಪ್ಪುವಂಥದ್ದೇ. ಬೆಲೆಯಾದರೊ ತೀರ ಅಗ್ಗವೇ ಎನ್ನಬೇಕು. ಆದರೆ ನೀವು ಅದನ್ನು ತುಸು ಹತ್ತಿರದಿಂದ ಪರೀಕ್ಷಿಸಿ ನೋಡುತ್ತೀರಿ. ಅಂಚಿನಲ್ಲಿ ಬಟ್ಟೆಯ ನೆಯ್ಗೆ ಸವೆದುಹೋಗಿದೆ, ಹೊಲಿಗೆಗಳು ಒರಟೊರಟಾಗಿವೆ. ಉಡುಪು ಆಕರ್ಷಕವಾಗಿದ್ದರೂ ತಯಾರಿಕೆಯು ಕೀಳುತರದ್ದು. ಅಂಥ ಕೆಳಮಟ್ಟದ ಕೆಲಸಕ್ಕಾಗಿ ನೀವು ನಿಮ್ಮ ಹಣವನ್ನು ಖರ್ಚುಮಾಡಲು ಸಿದ್ಧರಿರುವಿರೊ?

2 ಈ ಸನ್ನಿವೇಶವನ್ನು, ಒಬ್ಬ ಕ್ರೈಸ್ತ ಯುವ ವ್ಯಕ್ತಿಯೋಪಾದಿ ನೀವು ಎದುರಿಸಬಹುದಾದ ಒಂದು ಸನ್ನಿವೇಶಕ್ಕೆ ಹೋಲಿಸಿರಿ. ಮೊದಲ ನೋಟಕ್ಕೆ ಈ ಲೋಕದ ವಸ್ತುಗಳು​—ಆ ಉಡುಪಿನ ಹಾಗೆ​—ಅತಿ ಆಕರ್ಷಕವಾಗಿ ತೋರಬಹುದು. ಉದಾಹರಣೆಗೆ, ನಿಮ್ಮ ಸಹಪಾಠಿಗಳು ಉದ್ರೇಕಕಾರಿ ಪಾರ್ಟಿಗಳಿಗೆ ಹೋಗುತ್ತಾರೆ, ಮಾದಕದ್ರವ್ಯ ಸೇವಿಸುತ್ತಾರೆ, ಮದ್ಯ ಕುಡಿಯುತ್ತಾರೆ, ಡೇಟಿಂಗ್‌ ಮಾಡುತ್ತಾರೆ ಹಾಗೂ ವಿವಾಹಕ್ಕೆ ಮುಂಚೆ ಸೆಕ್ಸ್‌ನಲ್ಲಿ ತೊಡಗುತ್ತಾರೆ. ಅಂಥ ಜೀವನ ಶೈಲಿಯು ನಿಮ್ಮನ್ನು ಕೆಲವೊಮ್ಮೆ ಆಕರ್ಷಿಸುತ್ತದೊ? ಅವರು ಸ್ವಾತಂತ್ರ್ಯವೆಂದು ಕರೆಯುವ ಈ ಸ್ವೇಚ್ಛಾವರ್ತನೆಯನ್ನು ಸ್ವಲ್ಪ ಸವಿದುನೋಡಲು ನೀವು ಹಂಬಲಿಸುತ್ತೀರೊ? ಹಾಗಿದ್ದರೆ, ನೀವು ಕೆಟ್ಟವರಾಗಿದ್ದೀರಿ ಮತ್ತು ಕ್ರೈಸ್ತರಾಗಿರಲು ಯೋಗ್ಯರೇ ಅಲ್ಲ ಎಂಬ ದುಡುಕಿನ ತೀರ್ಮಾನವನ್ನು ಮಾಡದಿರಿ. ಈ ಲೋಕವು ದೇವರನ್ನು ಮೆಚ್ಚಿಸಬಯಸುವ ವ್ಯಕ್ತಿಯನ್ನು ಸಹ ಪ್ರಬಲವಾಗಿ ಆಕರ್ಷಿಸಲು ಸಾಧ್ಯವೆಂದು ಬೈಬಲು ತಾನೇ ಒಪ್ಪುತ್ತದೆ.​—2 ತಿಮೊಥೆಯ 4:10.

3. (ಎ) ಲೋಕದ ವಿಷಯಗಳನ್ನು ಬೆನ್ನಟ್ಟುವುದು ವ್ಯರ್ಥತೆಯಾಗಿದೆ ಏಕೆ? (ಬಿ) ಲೌಕಿಕ ಬೆನ್ನಟ್ಟುವಿಕೆಗಳ ವ್ಯರ್ಥತೆಯನ್ನು ಕ್ರೈಸ್ತಳೊಬ್ಬಳು ಹೇಗೆ ವರ್ಣಿಸಿದ್ದಾಳೆ?

3 ಈಗ, ನೀವು ಖರೀದಿಸಲು ಆಸಕ್ತರಿದ್ದ ಆ ಬಟ್ಟೆಯ ಕಡೆಗೆ ಹೇಗೊ ಹಾಗೆಯೇ ಈ ಲೋಕವು ನೀಡುವಂಥ ವಿಷಯಗಳನ್ನೂ ಇನ್ನೂ ಹತ್ತಿರದಿಂದ ನೋಡಿರಿ. ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ಈ ವಿಷಯಗಳ ವ್ಯವಸ್ಥೆಯ ನೆಯ್ಗೆ ಮತ್ತು ಹೊಲಿಗೆಯ ಗುಣಮಟ್ಟವು ಹೇಗಿದೆ?’ ಬೈಬಲು, ‘ಈ ಲೋಕವು ಗತಿಸಿಹೋಗುತ್ತದೆ’ ಎಂದು ಹೇಳುತ್ತದೆ. (1 ಯೋಹಾನ 2:17) ಲೋಕದಿಂದ ದೊರೆಯುವ ಯಾವುದೇ ಸುಖಭೋಗವು ಎಷ್ಟೆಂದರೂ ತಾತ್ಕಾಲಿಕವೇ. ಅಷ್ಟಲ್ಲದೆ, ಭಕ್ತಿಹೀನ ನಡವಳಿಕೆಯು ಗಂಭೀರವಾದ ಕೆಟ್ಟ ಪ್ರತಿಫಲವನ್ನು ಕೊಯ್ಯುತ್ತದೆ. ಅದೇನೊ ಅಗ್ಗದ ವಿಷಯವಲ್ಲ. “ತಪ್ಪುದಾರಿಯಲ್ಲಿ ಕಳೆದ ಯೌವನದಿಂದ ಉಂಟಾದ ನೋವುಗಳನ್ನು” ತಾಳಿಕೊಳ್ಳಬೇಕಾದ ಒಬ್ಬ ಕ್ರೈಸ್ತಳು ಹೇಳುವುದು: “ಲೋಕವು ಮನಮೋಹಕವಾಗಿಯೂ ಆಕರ್ಷಕವಾಗಿಯೂ ತೋರಬಹುದು. ಮತ್ತು ಅದರ ಸುಖವಿಲಾಸವನ್ನು ಯಾವುದೇ ನೋವಿಲ್ಲದೆ ಅನುಭವಿಸಬಹುದೆಂದು ನೀವು ನಂಬಬೇಕೆಂದು ಅದು ಬಯಸುತ್ತದೆ. ಆದರೆ ಅದು ಅಸಾಧ್ಯವೇ ಸರಿ. ಲೋಕವು ನಿಮ್ಮನ್ನು ಉಪಯೋಗಿಸುತ್ತದೆ ಮತ್ತು ನಿಮ್ಮನ್ನು ಉಪಯೋಗಿಸಿ ಮುಗಿಸಿದಾಗ ಬಿಸಾಡಿಬಿಡುತ್ತದೆ.” * ಆದುದರಿಂದ ಇಂಥ ಕೀಳ್ಮಟ್ಟದ ಜೀವನ ರೀತಿಯಲ್ಲಿ ನಿಮ್ಮ ಯೌವನವನ್ನೇಕೆ ಪೋಲುಮಾಡಬೇಕು?

“ಕೆಡುಕ”ನಿಂದ ಸಂರಕ್ಷಣೆ

4, 5. (ಎ) ತನ್ನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ, ಯೇಸು ಪ್ರಾರ್ಥನೆಯಲ್ಲಿ ಯೆಹೋವನಿಗೆ ಯಾವ ಬಿನ್ನಹವನ್ನು ಮಾಡಿದನು? (ಬಿ) ಈ ಬಿನ್ನಹವು ಏಕೆ ತಕ್ಕದಾದುದ್ದಾಗಿತ್ತು?

4 ಈ ಲೋಕವು, ಯಾವುದೇ ಒಳ್ಳೇ ಗುಣಮಟ್ಟದ ವಸ್ತುವನ್ನೂ ನೀಡಲಾರದು ಎಂಬುದನ್ನು ಮನಗಂಡವರಾಗಿ, ಯೆಹೋವನ ಸಾಕ್ಷಿಗಳ ಯುವ ಜನರು ಈ ಲೋಕದೊಂದಿಗಿನ ಸ್ನೇಹದಿಂದ ದೂರವಿರಲು ಪ್ರಯತ್ನಿಸುತ್ತಾರೆ. (ಯಾಕೋಬ 4:4) ಇಂಥ ನಂಬಿಗಸ್ತ ಯುವ ಜನರಲ್ಲಿ ನೀವೂ ಒಬ್ಬರಾಗಿದ್ದೀರೊ? ಹಾಗಿರುವಲ್ಲಿ, ನಿಮ್ಮನ್ನು ಪ್ರಶಂಸಿಸಲೇ ಬೇಕು. ಸಮವಯಸ್ಕರ ಒತ್ತಡವನ್ನು ಎದುರಿಸುವುದು ಹಾಗೂ ಪ್ರತ್ಯೇಕರಾಗಿ ನಿಲ್ಲುವುದು ಅಷ್ಟೇನೂ ಸುಲಭವಲ್ಲವೆಂಬದು ಗ್ರಾಹ್ಯ. ಆದರೆ ನಿಮಗೆ ಸಹಾಯ ಮಾಡುವವರು ಇದ್ದಾರೆ.

5 ತನ್ನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ ಯೇಸು ಯೆಹೋವನಿಗೆ ಪ್ರಾರ್ಥಿಸುತ್ತಾ, ತನ್ನ ಶಿಷ್ಯರನ್ನು “ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು” ಕೇಳಿಕೊಂಡನು. (ಯೋಹಾನ 17:15) ಒಂದು ಸಕಾರಣಕ್ಕಾಗಿಯೆ ಯೇಸು ಈ ಬಿನ್ನಹವನ್ನು ಮಾಡಿದನು. ತನ್ನ ಹಿಂಬಾಲಕರು ಯಾವ ಪ್ರಾಯದವರೇ ಆಗಿರಲಿ, ಸಮಗ್ರತೆಯ ಮಾರ್ಗವು ಅವರಿಗೆ ಸುಲಭವಾಗಿರುವುದಿಲ್ಲ ಎಂಬುದು ಯೇಸುವಿಗೆ ತಿಳಿದಿತ್ತು. ಯಾಕೆ? ಯಾಕೆಂದರೆ ಬಲಾಢ್ಯ ಅದೃಶ್ಯ ಶತ್ರುವೂ “ಕೆಡುಕ”ನೂ ಆದ ಪಿಶಾಚ ಸೈತಾನನನ್ನು ಅವನ ಶಿಷ್ಯರು ಎದುರಿಸಲಿಕ್ಕಿತ್ತು ಎಂದು ಯೇಸು ತಾನೇ ಹೇಳಿದ್ದನು. ಈ ದುಷ್ಟ ಆತ್ಮ ಜೀವಿಯು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” ಎಂದು ಬೈಬಲು ಹೇಳುತ್ತದೆ.​—1 ಪೇತ್ರ 5:8.

6. ಸೈತಾನನಿಗೆ ಯುವ ಜನರ ಮೇಲೆ ಯಾವ ಕನಿಕರವೂ ಇಲ್ಲವೆಂದು ನಮಗೆ ತಿಳಿದಿರುವುದು ಹೇಗೆ?

6 ಮಾನವ ಇತಿಹಾಸದಾದ್ಯಂತ ಜನರ ಮೇಲೆ ಅತಿ ಕ್ರೂರವಾದ ಅತ್ಯಾಚಾರವೆಸಗುವುದರಲ್ಲಿ ಸೈತಾನನು ಕ್ರೌರ್ಯ ಸಂತಸವನ್ನು ಪಡೆದಿದ್ದಾನೆ. ಯೋಬ ಮತ್ತು ಅವನ ಕುಟುಂಬದ ಮೇಲೆ ಸೈತಾನನು ತಂದ ಆ ಭೀಕರ ಸಂಕಟಗಳನ್ನು ಮನಸ್ಸಿಗೆ ತಂದುಕೊಳ್ಳಿರಿ. (ಯೋಬ 1:​13-19; 2:7) ಪ್ರಾಯಶಃ ನಿಮ್ಮ ಸ್ವಂತ ಜೀವಮಾನದಲ್ಲಿ ಸೈತಾನನ ಹಿಂಸಕ ಆತ್ಮದ ವೈಶಿಷ್ಟ್ಯವನ್ನು ಸೂಚಿಸುವ ಇತ್ತೀಚೆಗೆ ಸುದ್ದಿಯಲ್ಲಿದ್ದ ಘಟನೆಗಳನ್ನು ನೀವು ನೆನಪಿಗೆ ತರಬಲ್ಲಿರಿ. ಸೈತಾನನು ತನ್ನ ಬೇಟೆಗಾಗಿ ಹೊಂಚುಹಾಕುತ್ತಾ ತಿರುಗುತ್ತಿದ್ದಾನೆ, ಮತ್ತು ಅವನಿಗೆ ಯುವ ಜನರ ಮೇಲೆ ಯಾವ ಕರುಣೆಯೂ ಇರುವುದಿಲ್ಲ. ಉದಾಹರಣೆಗಾಗಿ ಸಾ.ಶ. ಒಂದನೆಯ ಶತಮಾನದ ಆರಂಭದಲ್ಲಿ, ಹೆರೋದನು ಬೇತ್ಲೆಹೇಮಿನಲ್ಲಿರುವ ಎರಡು ವರ್ಷದೊಳಗಿನ ಎಲ್ಲಾ ಗಂಡುಕೂಸುಗಳನ್ನು ಕೊಲ್ಲಿಸುವ ಒಂದು ಹಂಚಿಕೆಯನ್ನು ಹೂಡಿದನು. (ಮತ್ತಾಯ 2:16) ಹೀಗೆ ಮಾಡುವಂತೆ ಹೆರೋದನನ್ನು ಪ್ರೇರೇಪಿಸಿದವನು ಸೈತಾನನೇ ಆಗಿರಬೇಕು. ಇದು, ಒಂದಾನೊಂದು ದಿನ ದೇವರ ವಾಗ್ದತ್ತ ಮೆಸ್ಸೀಯನೂ, ಸೈತಾನನ ಮೇಲೆ ದಂಡನೆಯ ತೀರ್ಪನ್ನು ತರುವವನೂ ಆಗಲಿದ್ದ ಕೂಸಾದ ಯೇಸುವನ್ನು ಮುಗಿಸಿಬಿಡುವ ಪ್ರಯತ್ನವಾಗಿತ್ತು. (ಆದಿಕಾಂಡ 3:15) ಸೈತಾನನಿಗೆ ಯುವ ಜನರ ಮೇಲೆ ಯಾವ ರೀತಿಯ ಕನಿಕರವೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಆದಷ್ಟು ಹೆಚ್ಚು ಮಾನವರನ್ನು ನುಂಗಿಬಿಡುವುದೇ ಅವನ ಏಕಮಾತ್ರ ಹೇತುವಾಗಿರುತ್ತದೆ. ಈಗಲಾದರೊ ಸೈತಾನನು ಪರಲೋಕದಿಂದ ಭೂಮಿಗೆ ದೊಬ್ಬಲ್ಪಟ್ಟಿರುವುದರಿಂದ ಅದು ವಿಶೇಷವಾಗಿ ಸತ್ಯ. ಅವನು “ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವ”ನಾಗಿದ್ದಾನೆ.​—ಪ್ರಕಟನೆ 12:​9, 12.

7. (ಎ) ಸೈತಾನನೊಂದಿಗೆ ಹೋಲಿಸುವಾಗ ಯೆಹೋವನು ಹೇಗೆ ತೀರ ಭಿನ್ನನಾಗಿದ್ದಾನೆ? (ಬಿ) ನಿಮ್ಮ ಜೀವಿತಾನಂದಗಳ ಕುರಿತು ಯೆಹೋವನ ಅನಿಸಿಕೆಯೇನು?

7 “ಮಹಾ ರೌದ್ರವುಳ್ಳ” ಸೈತಾನನಿಗೆ ತೀರ ವ್ಯತಿರಿಕ್ತವಾಗಿ ಯೆಹೋವನಾದರೊ “ಅತ್ಯಂತಕರುಣೆ”ಯುಳ್ಳ ದೇವರು. (ಲೂಕ 1:77) ಆತನು ಪ್ರೀತಿಯ ಸಾಕಾರರೂಪವೇ ಆಗಿದ್ದಾನೆ. ಈ ಮಹತ್ತಾದ ಗುಣವು ನಮ್ಮ ನಿರ್ಮಾಣಿಕನಲ್ಲಿ ಎಷ್ಟು ಬಿಂಬಿತವಾಗಿದೆಯೆಂದರೆ, ಬೈಬಲು ಆತನನ್ನು “ದೇವರು ಪ್ರೀತಿಸ್ವರೂಪಿ” ಎಂದು ಕರೆದಿದೆ. (1 ಯೋಹಾನ 4:8) ಈ ವಿಷಯಗಳ ವ್ಯವಸ್ಥೆಯ ದೇವರಿಗೂ, ಯಾವ ದೇವರನ್ನು ಆರಾಧಿಸುವ ವಿಶೇಷ ಸುಯೋಗ ನಿಮಗಿದೆಯೊ ಆ ಯೆಹೋವ ದೇವರಿಗೂ ಎಷ್ಟು ಅಜಗಜಾಂತರ! ಸೈತಾನನು ಯಾರನ್ನು ನುಂಗಲಿ ಎಂದು ಹುಡುಕುತ್ತಿರುವಾಗ, ಯೆಹೋವ ದೇವರು “ಯಾವನಾದರೂ ನಾಶವಾಗುವದರಲ್ಲಿ . . . ಇಷ್ಟಪಡ”ದವನಾಗಿದ್ದಾನೆ. (2 ಪೇತ್ರ 3:9) ಪ್ರತಿಯೊಬ್ಬ ಮಾನವನ ಜೀವವು ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿದೆ, ನಿಮ್ಮದು ಸಹ. ಈ ಲೋಕದ ಭಾಗವಾಗಿರಬಾರದು ಎಂದು ಯೆಹೋವನು ತನ್ನ ವಾಕ್ಯದಲ್ಲಿ ನಿಮಗೆ ಪ್ರಬೋಧಿಸುವಾಗ, ನಿಮ್ಮ ಜೀವಿತಾನಂದಗಳನ್ನು ಕುಂಠಿತಗೊಳಿಸಲು ಅಥವಾ ನಿಮ್ಮ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಆತನು ಪ್ರಯತ್ನಿಸುವುದಿಲ್ಲ. (ಯೋಹಾನ 15:19) ಬದಲಿಗೆ, ಕೆಡುಕನಿಂದ ತಪ್ಪಿಸಿ ನಿಮ್ಮನ್ನು ಕಾಪಾಡಲು ನೋಡುತ್ತಿದ್ದಾನೆ. ಈ ಲೋಕದ ಕ್ಷಣಿಕ ಸುಖಭೋಗಗಳಿಗಿಂತಲೂ ಎಷ್ಟೊ ಹೆಚ್ಚಿನದಾದ ವಿಷಯವನ್ನು ನೀವು ಗಳಿಸುವುದೇ ನಿಮ್ಮ ಸ್ವರ್ಗೀಯ ತಂದೆಯ ಬಯಕೆಯಾಗಿದೆ. ಪರದೈಸ್‌ ಭೂಮಿಯಲ್ಲಿ ನಿತ್ಯಜೀವವನ್ನು​—“ವಾಸ್ತವವಾದ ಜೀವವನ್ನು”​—ನೀವು ಹೊಂದಬೇಕೆಂಬುದೇ ಆತನ ಅಪೇಕ್ಷೆ. (1 ತಿಮೊಥೆಯ 6:​17-19) ನೀವು ಯಶಸ್ಸನ್ನು ಗಳಿಸುವಂತೆ ಯೆಹೋವನು ಬಯಸುತ್ತಾನೆ, ಮತ್ತು ಆ ಗುರಿಯನ್ನು ಮುಟ್ಟುವಂತೆ ನಿಮ್ಮನ್ನು ಪ್ರೇರಿಸುತ್ತಿದ್ದಾನೆ. (1 ತಿಮೊಥೆಯ 2:4) ಅದಲ್ಲದೆ ನಿಮಗೊಂದು ವಿಶೇಷ ಆಮಂತ್ರಣವನ್ನು ಯೆಹೋವನು ನೀಡುತ್ತಿದ್ದಾನೆ. ಅದೇನು?

‘ನನ್ನ ಮನಸ್ಸನ್ನು ಸಂತೋಷಪಡಿಸು’

8, 9. (ಎ) ಯೆಹೋವನಿಗೆ ನೀವು ಯಾವ ಕೊಡುಗೆಯನ್ನು ನೀಡಬಲ್ಲಿರಿ? (ಬಿ) ಯೋಬನ ವಿಷಯದಲ್ಲಿ ದೃಷ್ಟಾಂತಿಸಲ್ಪಟ್ಟಂತೆ, ಸೈತಾನನು ಯೆಹೋವನನ್ನು ಹೇಗೆ ದೂರುತ್ತಾನೆ?

8 ನಿಮ್ಮ ಆಪ್ತ ಮಿತ್ರನಿಗೆ ನೀವೆಂದಾದರೂ ಒಂದು ಕೊಡುಗೆಯನ್ನು ಖರೀದಿಸಿದ್ದೀರೊ? ಅದನ್ನು ಅವನಿಗೆ ನೀಡಿದಾಗ ಅವನ ಮುಖವು ಕೃತಜ್ಞತೆ ಮತ್ತು ಆಶ್ಚರ್ಯದ ನಸುನಗೆಯಿಂದ ಅರಳಿದ್ದನ್ನು ಗಮನಿಸಿದಿರೊ? ಆ ವ್ಯಕ್ತಿಗೆ ಯಾವ ರೀತಿಯ ಕೊಡುಗೆ ತಕ್ಕದಾಗಿರುವುದೆಂಬುದರ ಕುರಿತು ನೀವು ಬಹಳಷ್ಟು ಯೋಚಿಸಿದ್ದಿರಬಹುದು. ಈಗ ಈ ಪ್ರಶ್ನೆಯನ್ನು ಗಮನಿಸಿರಿ: ನಿಮ್ಮ ನಿರ್ಮಾಣಿಕನಾದ ಯೆಹೋವ ದೇವರಿಗೆ ನೀವು ಯಾವ ರೀತಿಯ ಕೊಡುಗೆಯನ್ನು ನೀಡಬಲ್ಲಿರಿ? ಮೊದಲನೆಯದಾಗಿ, ಆ ವಿಚಾರವೇ ನಿಮಗೆ ಅಸಂಗತವಾಗಿ ಕಂಡುಬಂದೀತು. ಬರಿಯ ಮಾನವನಿಂದ ಸರ್ವಶಕ್ತನಾದರೊ ಏನನ್ನು ಅಪೇಕ್ಷಿಸಿಯಾನು? ಆತನ ಬಳಿ ಇಲ್ಲದಿರುವ ಯಾವ ಸಂಗತಿಯನ್ನು ನೀವು ಆತನಿಗೆ ಕೊಡಬಹುದು? ಜ್ಞಾನೋಕ್ತಿ 27:11ರಲ್ಲಿ ಬೈಬಲು ಉತ್ತರಿಸುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.”

9 ಯೆಹೋವನನ್ನು ದೂರುವಾತನು ಪಿಶಾಚನಾದ ಸೈತಾನನೇ ಎಂಬುದು ನಿಮ್ಮ ಬೈಬಲಧ್ಯಯನದಿಂದ ನಿಮಗೆ ತಿಳಿದುಬಂದಿರಬಹುದು. ಯೆಹೋವನನ್ನು ಸೇವಿಸುವ ಯಾವನಾದರೂ ಸ್ವಾರ್ಥ ಲಾಭಕ್ಕಾಗಿ ಸೇವಿಸುತ್ತಾನೆಯೆ ಹೊರತು ಪ್ರೀತಿಯಿಂದಲ್ಲವೆಂಬುದು ಸೈತಾನನ ಕಂಠೋಕ್ತಿ. ಅವರು ಸಂಕಷ್ಟವನ್ನು ಅನುಭವಿಸುವಲ್ಲಿ ಕೂಡಲೆ ಸತ್ಯಾರಾಧನೆಯನ್ನು ತ್ಯಜಿಸಿಬಿಡುವರೆಂಬುದೇ ಅವನ ವಾದ. ಉದಾಹರಣೆಗಾಗಿ, ನೀತಿವಂತನಾದ ಯೋಬನ ಕುರಿತು ಸೈತಾನನು ಯೆಹೋವನಿಗೆ ಏನಂದನೆಂಬುದನ್ನು ಗಮನಿಸಿರಿ: “ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.”​—ಯೋಬ 1:10, 11.

10. (ಎ) ಯೋಬನು ಮಾತ್ರವಲ್ಲದೆ ಬೇರೆಯವರ ಸಮಗ್ರತೆಯನ್ನೂ ಸೈತಾನನು ಸಂದೇಹಕ್ಕೆ ಗುರಿಪಡಿಸಿದನೆಂಬುದು ನಮಗೆ ತಿಳಿದಿರುವುದು ಹೇಗೆ? (ಬಿ) ಪರಮಾಧಿಕಾರದ ವಿವಾದಾಂಶದಲ್ಲಿ ನೀವು ಹೇಗೆ ಒಳಗೂಡಿದ್ದೀರಿ?

10 ಈ ಬೈಬಲ್‌ ವೃತ್ತಾಂತದಲ್ಲಿ ತಿಳಿಸಲ್ಪಟ್ಟ ಪ್ರಕಾರ, ಸೈತಾನನು ಕೇವಲ ಯೋಬನ ನಿಷ್ಠೆಯನ್ನು ಮಾತ್ರವಲ್ಲ, ನಿಮ್ಮನ್ನೂ ಸೇರಿಸಿ ದೇವರ ಸೇವೆಮಾಡುವ ಇತರರೆಲ್ಲರ ನಿಷ್ಠೆಯನ್ನೂ ಸಂದೇಹಕ್ಕೆ ಗುರಿಪಡಿಸಿದನು. ವಾಸ್ತವದಲ್ಲಿ ಸಾಮಾನ್ಯ ಮಾನವಕುಲದ ಕುರಿತಾಗಿ ಮಾತಾಡುತ್ತಾ ಸೈತಾನನು ಯೆಹೋವನಿಗಂದದ್ದು: “ಒಬ್ಬ ಮನುಷ್ಯನು [ಕೇವಲ ಯೋಬನಲ್ಲ, ಬದಲಾಗಿ ಯಾವುದೇ ವ್ಯಕ್ತಿಯು] ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.” (ಯೋಬ 2:4) ಈ ಪ್ರಾಮುಖ್ಯವಾದ ವಿವಾದಾಂಶದಲ್ಲಿ ನಿಮ್ಮ ಪಾತ್ರವನ್ನು ನೀವು ಕಾಣುತ್ತೀರೊ? ಜ್ಞಾನೋಕ್ತಿ 27:11ರಲ್ಲಿ ಸೂಚಿಸಲ್ಪಟ್ಟಿರುವಂತೆ, ನೀವು ಯೆಹೋವನಿಗೆ ಏನನ್ನೊ ಕೊಡಸಾಧ್ಯವಿದೆ ಎಂದು ಯೆಹೋವನು ಹೇಳುತ್ತಿದ್ದಾನೆ. ಅದೇನೆಂದರೆ, ತನ್ನ ದೂರುಗಾರನಾದ ಸೈತಾನನಿಗೆ ತಾನು ಉತ್ತರ ಕೊಡಲಾಗುವಂತೆ ಒಂದು ಆಧಾರವೇ. ವಿಶ್ವದ ಪರಮಾಧಿಕಾರಿಯು, ಅತ್ಯಂತ ಮಹಾ ವಿವಾದಾಂಶದ ಸಂಬಂಧದಲ್ಲಿ ನಿಮ್ಮ ವೈಯಕ್ತಿಕ ಉತ್ತರಕ್ಕಾಗಿ ಕೇಳಿಕೊಳ್ಳುತ್ತಿದ್ದಾನೆ. ಇದರ ಕುರಿತು ತುಸು ಯೋಚಿಸಿರಿ. ಎಂತಹ ಮಹತ್ತಾದ ಜವಾಬ್ದಾರಿ ಮತ್ತು ಸುಯೋಗ ನಿಮ್ಮದಾಗಿದೆ! ಯೆಹೋವನು ನಿಮ್ಮಿಂದ ಏನನ್ನು ಕೇಳುತ್ತಿದ್ದಾನೊ ಅದನ್ನು ನೀವು ಪೂರೈಸಬಲ್ಲಿರೊ? ಯೋಬನು ಪೂರೈಸಿದನು. (ಯೋಬ 2:​9, 10) ಅಲ್ಲದೆ, ಯೇಸು ಹಾಗೂ ಇತಿಹಾಸದಾದ್ಯಂತ ಅಸಂಖ್ಯಾತ ಜನರು​—ಇದರಲ್ಲಿ ಅನೇಕ ಮಂದಿ ಯುವ ಜನರೂ ಸೇರಿದ್ದಾರೆ​—ಈ ಕೋರಿಕೆಯನ್ನು ಪೂರೈಸಿದ್ದಾರೆ. (ಫಿಲಿಪ್ಪಿ 2:8; ಪ್ರಕಟನೆ 6:9) ನೀವು ಸಹ ಹಾಗೆ ಮಾಡಸಾಧ್ಯವಿದೆ. ಆದರೆ ಒಂದು ವಿಷಯದಲ್ಲಿ ಮಾತ್ರ ನೀವು ನಿಶ್ಚಿತರಾಗಿರಬೇಕು. ಅದೇನಂದರೆ, ಈ ಸಂಗತಿಯಲ್ಲಿ ಯಾವ ಪಕ್ಷವನ್ನೂ ವಹಿಸದೆ ತಟಸ್ಥರಾಗಿ ಉಳಿಯಲು ಸಾಧ್ಯವಿಲ್ಲ. ನಿಮ್ಮ ನಡವಳಿಕೆಯ ಮೂಲಕ, ನೀವು ಒಂದೋ ಸೈತಾನನ ದೂರುಗಳನ್ನು ಇಲ್ಲವೆ ಯೆಹೋವನ ಉತ್ತರವನ್ನು ಬೆಂಬಲಿಸುವವರಾಗಿದ್ದೀರೆಂಬದನ್ನು ತೋರಿಸಿಕೊಡುವಿರಿ. ಯಾವುದನ್ನು ಎತ್ತಿಹಿಡಿಯಲು ನೀವು ಆರಿಸಿಕೊಳ್ಳುವಿರಿ?

ಯೆಹೋವನು ನಿಮಗಾಗಿ ಚಿಂತಿಸುತ್ತಾನೆ!

11, 12. ನೀವು ಯೆಹೋವನನ್ನು ಸೇವಿಸಲು ಇಲ್ಲವೆ ಸೇವಿಸದಿರಲು ಆರಿಸಿಕೊಂಡಲ್ಲಿ, ಯೆಹೋವನು ಅದರಿಂದ ಗಮನಾರ್ಹವಾಗಿ ಬಾಧಿತನಾಗುತ್ತಾನೊ? ವಿವರಿಸಿರಿ.

11 ನೀವು ಯಾವುದನ್ನು ಆರಿಸಿಕೊಳ್ಳುತ್ತೀರೆಂಬ ವಿಷಯವು ಯೆಹೋವನಿಗೆ ನಿಜವಾಗಿಯೂ ಪ್ರಾಮುಖ್ಯವೊ? ಆತನು ಸೈತಾನನಿಗೆ ತಕ್ಕದಾದ ಉತ್ತರವನ್ನು ಕೊಡಲು ಈಗಾಗಲೇ ಸಾಕಷ್ಟು ಜನರು ನಂಬಿಗಸ್ತರಾಗಿ ಉಳಿದಿರುವುದಿಲ್ಲವೆ? ಹೌದು, ಯೆಹೋವನನ್ನು ಯಾರೊಬ್ಬರೂ ಪ್ರೀತಿಯಿಂದ ಸೇವಿಸುವುದಿಲ್ಲ ಎಂಬ ಸೈತಾನನ ವಾದವು ಈಗಾಗಲೇ ಅನೇಕ ಬಾರಿ ಸುಳ್ಳಾಗಿ ರುಜುವಾಗಿರುತ್ತದೆ ನಿಜ. ಆದರೂ, ಪರಮಾಧಿಕಾರದ ವಿವಾದಾಂಶದಲ್ಲಿ ನೀವು ಆತನ ಪಕ್ಷವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲು ಯೆಹೋವನು ಬಯಸುತ್ತಾನೆ. ಯಾಕಂದರೆ ಆತನು ನಿಮ್ಮ ಕುರಿತು ವ್ಯಕ್ತಿಪರವಾಗಿ ಚಿಂತಿಸುತ್ತಾನೆ. ಯೇಸುವಂದದ್ದು: “ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.”​—ಮತ್ತಾಯ 18:14.

12 ಆದುದರಿಂದ, ನೀವು ಆರಿಸಿಕೊಳ್ಳುವ ಮಾರ್ಗಕ್ರಮದಲ್ಲಿ ಯೆಹೋವನು ಆಸಕ್ತನಾಗಿದ್ದಾನೆಂಬುದು ಸ್ಪಷ್ಟ. ಅದಕ್ಕಿಂತಲೂ ಪ್ರಾಮುಖ್ಯವಾದ ಸಂಗತಿಯೇನೆಂದರೆ, ಆತನು ಅದರಿಂದ ಬಾಧಿತನಾಗುತ್ತಾನೆ. ಮಾನವರ ಒಳ್ಳೆಯ ಅಥವಾ ಕೆಟ್ಟ ಕೃತ್ಯಗಳಿಂದ ಯೆಹೋವನ ಆಳವಾದ ಭಾವನೆಗಳು ಕಲಕಿಸಲ್ಪಡುತ್ತವೆಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. ಉದಾಹರಣೆಗೆ, ಇಸ್ರಾಯೇಲ್ಯರು ಪದೇ ಪದೇ ಯೆಹೋವನಿಗೆ ವಿರುದ್ಧವಾಗಿ ದಂಗೆಯೆದ್ದಾಗ, ಅವರು ಆತನನ್ನು “ನೋಯಿಸಿದರು.” (ಕೀರ್ತನೆ 78:​40, 41) ನೋಹನ ದಿನಗಳ ಜಲಪ್ರಳಯಕ್ಕೆ ಮುಂಚೆ, “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿ”ದ್ದಾಗ, ಯೆಹೋವನು “ತನ್ನ ಹೃದಯದಲ್ಲಿ ನೊಂದುಕೊಂಡನು.” (ಆದಿಕಾಂಡ 6:​5, 6) ಇದೇನನ್ನು ಅರ್ಥೈಸುತ್ತದೆ ಎಂಬುದನ್ನು ಯೋಚಿಸಿರಿ. ನೀವು ಒಂದು ಕೆಟ್ಟ ಮಾರ್ಗಕ್ರಮವನ್ನು ಅನುಸರಿಸುವುದಾದರೆ, ನೀವು ನಿಮ್ಮ ನಿರ್ಮಾಣಿಕನನ್ನು ನೋಯಿಸುತ್ತಿದ್ದೀರಿ. ದೇವರು ಬಲಹೀನನೂ ಭಾವೋದ್ರೇಕಗಳಿಗೆ ಅಧೀನನೂ ಆಗಿದ್ದಾನೆಂದು ಇದರ ಅರ್ಥವಲ್ಲ. ಅದರ ನಿಜವಾದ ಅರ್ಥವು, ಆತನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಸುಕ್ಷೇಮದ ಕುರಿತು ಚಿಂತಿಸುತ್ತಾನೆ ಎಂಬುದೇ. ಆದರೆ ಯಾವುದು ಯೋಗ್ಯವೊ ಅದನ್ನು ನೀವು ಮಾಡುವಾಗ, ಯೆಹೋವನ ಮನಸ್ಸು ಸಂತೋಷಗೊಳ್ಳುತ್ತದೆ. ದೂರುಗಾರನಾದ ಸೈತಾನನಿಗೆ ಈಗ ಅಧಿಕ ಉತ್ತರವನ್ನು ನೀಡಶಕ್ತನಾಗಿರುವುದಕ್ಕಾಗಿ ಆತನು ಸಂತೋಷಿತನು ಮಾತ್ರವಲ್ಲ, ಆತನೀಗ ನಿಮಗೆ ಪ್ರತಿಫಲವನ್ನು ಕೊಡಶಕ್ತನು ಎಂಬದಕ್ಕೂ ಸಂತೋಷಿತನು. ಮತ್ತು ಪ್ರತಿಫಲ ಕೊಡುವಾತನಾಗಿರಲು ಆತನು ಬಯಸುತ್ತಾನೆ. (ಇಬ್ರಿಯ 11:6) ಯೆಹೋವನು ನಮಗೆ ಎಂತಹ ಪ್ರೀತಿಯುಳ್ಳ ತಂದೆಯಾಗಿರುತ್ತಾನೆ!

ಈಗ ಹೇರಳವಾದ ಆಶೀರ್ವಾದಗಳು

13. ಯೆಹೋವನ ಸೇವೆಯು ಈಗ ಸಹ ಆಶೀರ್ವಾದಗಳನ್ನು ತರುತ್ತದೆ ಹೇಗೆ?

13 ಯೆಹೋವನನ್ನು ಸೇವಿಸುವುದರಿಂದ ಬರುವ ಆಶೀರ್ವಾದಗಳನ್ನು ನಾವು ಅನುಭವಿಸುವುದು ಕೇವಲ ಭವಿಷ್ಯತ್ಕಾಲದಲ್ಲಿ ಮಾತ್ರವೇ ಅಲ್ಲ. ಸಕಾರಣದಿಂದಲೇ, ಯೆಹೋವನ ಸಾಕ್ಷಿಗಳಲ್ಲಿ ಅನೇಕ ಯುವ ಜನರು ಈಗಲೆ ಆ ಸಂತೋಷ ಮತ್ತು ಸಂತೃಪ್ತಿಯಿಂದ ಆಶೀರ್ವದಿತರಾಗಿದ್ದಾರೆ. “ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ” ಎಂದು ಕೀರ್ತನೆಗಾರನು ಬರೆದನು. (ಕೀರ್ತನೆ 19:8) ನಮಗೆ ಯಾವುದು ಒಳ್ಳೆಯದೆಂದು ಯಾವ ಮಾನವನಿಗಿಂತಲೂ ಹೆಚ್ಚಾಗಿ ಯೆಹೋವನಿಗೆ ತಿಳಿದಿದೆ. ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ತಿಳಿಸಿದ್ದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”​—ಯೆಶಾಯ 48:17, 18.

14. ಸಾಲದ ವೇದನೆಯಿಂದ ದೂರವಾಗಿರಲು ಬೈಬಲ್‌ ಮೂಲತತ್ತ್ವಗಳು ನಿಮಗೆ ಹೇಗೆ ಸಹಾಯಮಾಡಬಲ್ಲವು?

14 ಬೈಬಲ್‌ ಮೂಲತತ್ತ್ವಗಳಿಗೆ ವಿಧೇಯರಾಗುವುದರಿಂದ, ನೀವು ಹೆಚ್ಚಿನ ನೋವು ಮತ್ತು ಮನೋವ್ಯಥೆಯನ್ನು ತಪ್ಪಿಸಿಕೊಳ್ಳಲು ಸಹಾಯವು ದೊರಕುವುದು. ಉದಾಹರಣೆಗಾಗಿ, ಯಾರು ಹಣದಾಸೆಯನ್ನು ಬೆಳೆಸಿಕೊಳ್ಳುತ್ತಾರೊ ಅವರು “ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ” ಎಂದು ಬೈಬಲು ಹೇಳುತ್ತದೆ. (1 ತಿಮೊಥೆಯ 6:​9, 10) ಈ ವಚನದ ಕಠೋರ ವಾಸ್ತವಿಕತೆಯನ್ನು ನಿಮ್ಮ ಸಮಾನಸ್ಥರಲ್ಲಿ ಯಾರಾದರೂ ಅನುಭವಿಸಿದ್ದಾರೊ? ಕೆಲವು ಮಂದಿ ಯುವಕರೂ ಯುವತಿಯರೂ, ಪ್ರಖ್ಯಾತ ಬ್ರ್ಯಾಂಡಿನ ಡಿಸೈನರ್‌ ಬಟ್ಟೆಬರೆ ಮತ್ತು ನವನವೀನ ಯಂತ್ರಸಲಕರಣೆಗಳನ್ನು ಹೊಂದಿಯೆ ತೀರಬೇಕೆಂಬ ಆಶೆಯಿಂದಾಗಿ ತುಂಬ ಸಾಲದಲ್ಲಿ ಬಿದ್ದಿರುತ್ತಾರೆ. ನೀವು ನಿಜವಾಗಿ ಕೊಂಡುಕೊಳ್ಳಲು ಶಕ್ಯವಿಲ್ಲದಂಥ ವಸ್ತುಗಳನ್ನು ಖರೀದಿಸಿ, ಅಧಿಕ ಬಡ್ಡಿಯನ್ನು ಕೊಡಬೇಕಾಗುವ, ದೀರ್ಘಾವಧಿಯ ಹಣ ಸಂದಾಯಗಳ ಹೊರೆಯನ್ನು ಹೊತ್ತುಕೊಳ್ಳುವುದು ಒಂದು ವೇದನಾಮಯ ದಾಸ್ಯವೇ ಸರಿ!​—ಜ್ಞಾನೋಕ್ತಿ 22:7.

15. ಲೈಂಗಿಕ ಅನೈತಿಕತೆಯಿಂದ ಉಂಟಾಗುವ ವೇದನೆಯಿಂದ ಬೈಬಲ್‌ ಮೂಲತತ್ತ್ವಗಳು ನಿಮ್ಮನ್ನು ಹೇಗೆ ಕಾಪಾಡುತ್ತವೆ?

15 ಲೈಂಗಿಕ ಅನೈತಿಕತೆಯ ಕುರಿತಾಗಿಯೂ ತುಸು ಯೋಚಿಸಿರಿ. ಲೋಕದಾದ್ಯಂತ ಪ್ರತಿ ವರ್ಷ ಅಸಂಖ್ಯಾತ ಅವಿವಾಹಿತ ಹದಿವಯಸ್ಕ ಹುಡುಗಿಯರು ಗರ್ಭಧರಿಸುತ್ತಾರೆ. ಕೆಲವರಾದರೊ ತಮಗೆ ಅಪೇಕ್ಷೆಯೂ ಇಲ್ಲದ ಹಾಗೂ ಬೆಳೆಸಲು ಶಕ್ಯವೂ ಇಲ್ಲದ ಮಗುವಿಗೆ ಜನ್ಮ ನೀಡುತ್ತಾರೆ. ಇನ್ನಿತರರು ಗರ್ಭಪಾತವನ್ನು ಮಾಡಿಕೊಂಡು ಅಪರಾಧಿ ಮನಸ್ಸಾಕ್ಷಿಯ ಫಲಿತಾಂಶಗಳನ್ನು ಅನುಭವಿಸುತ್ತಾರೆ. ಅದಲ್ಲದೆ ಏಡ್ಸ್‌ನಂಥ ರತಿರವಾನಿತ ರೋಗದಿಂದ ಸೋಂಕಿತರಾಗುವ ಯುವಕರೂ ಯುವತಿಯರೂ ಇದ್ದಾರೆ. ಯಾರು ಯೆಹೋವನ ಸೇವಕರೊ ಅವರಿಗೆ ಮಾತ್ರ ಇಂಥ ದುರ್ನಡತೆಯು, ಯೆಹೋವನೊಂದಿಗಿನ ಸಂಬಂಧದಲ್ಲಿ ಮಹತ್ತಾದ ಹಾನಿಯ ಅರ್ಥದಲ್ಲಿದೆ. * (ಗಲಾತ್ಯ 5:​19-21) ಸಕಾರಣದಿಂದಲೆ ಬೈಬಲು ಅನ್ನುವುದು: “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.”​—1 ಕೊರಿಂಥ 6:18.

“ಸಂತೋಷವುಳ್ಳ ದೇವರನ್ನು” ಸೇವಿಸುವುದು

16. (ಎ) ನೀವು ನಿಮ್ಮ ಯೌವನದಲ್ಲಿ ಆನಂದಿಸಬೇಕೆಂದು ಯೆಹೋವನು ಬಯಸುತ್ತಾನೆಂದು ನಮಗೆ ತಿಳಿದಿರುವುದು ಹೇಗೆ? (ಬಿ) ನೀವು ಅನುಸರಿಸುವಂತೆ ಮಾರ್ಗದರ್ಶನಗಳನ್ನು ಯೆಹೋವನು ಏಕೆ ವಿಧಿಸುತ್ತಾನೆ?

16 ಬೈಬಲು ಯೆಹೋವನನ್ನು ‘ಸಂತೋಷವುಳ್ಳ ದೇವರಾಗಿ’ ವರ್ಣಿಸುತ್ತದೆ. (1 ತಿಮೊಥೆಯ 1:​11, NW) ನೀವು ಸಹ ಸಂತೋಷವುಳ್ಳವರಾಗಿರುವಂತೆ ಆತನು ಬಯಸುತ್ತಾನೆ. ವಾಸ್ತವದಲ್ಲಿ ಆತನ ಸ್ವಂತ ವಾಕ್ಯವು, “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ” ಎಂದು ಹೇಳುತ್ತದೆ. (ಪ್ರಸಂಗಿ 11:9) ಆದರೆ ಒಳ್ಳೆಯ ನಡತೆ ಮತ್ತು ಕೆಟ್ಟ ನಡತೆಯ ಅಂತಿಮ ಫಲಿತಾಂಶಗಳನ್ನು ಯೆಹೋವನು ಪ್ರಸ್ತುತ ಸಮಯಕ್ಕಿಂತಲೂ ಎಷ್ಟೋ ಮುಂದಕ್ಕೆ ನೋಡಶಕ್ತನು. ಆದುದರಿಂದಲೇ ಆತನು ನಿಮಗೆ ಬುದ್ಧಿ ಹೇಳುವುದು: “ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”​—ಪ್ರಸಂಗಿ 12:1.

17, 18. ಒಬ್ಬ ಯುವ ಕ್ರೈಸ್ತಳು ಯೆಹೋವನನ್ನು ಸೇವಿಸುವುದರಲ್ಲಿನ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದು ಹೇಗೆ, ಮತ್ತು ನೀವು ಕೂಡ ಅದೇ ಸಂತೋಷವನ್ನು ಹೇಗೆ ಕಂಡುಕೊಳ್ಳಬಲ್ಲಿರಿ?

17 ಇಂದು ಅನೇಕ ಯುವ ಜನರು ಯೆಹೋವನನ್ನು ಸೇವಿಸುವುದರಲ್ಲಿ ಮಹಾ ಸಂತೋಷವನ್ನು ಕಂಡುಕೊಂಡಿದ್ದಾರೆ. ಉದಾಹರಣೆಗೆ, 15 ವರ್ಷ ಪ್ರಾಯದ ಲೀನ ಹೇಳುವುದು: “ನನ್ನಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಗೌರವವಿದೆಯೆಂದು ನಾನು ಹೇಳಬಲ್ಲೆ. ಧೂಮಪಾನ ಮತ್ತು ಮಾದಕ ದ್ರವ್ಯಗಳಿಂದ ದೂರವಿದ್ದದ್ದರಿಂದ ನನಗೆ ಆರೋಗ್ಯಕರವಾದ ದೇಹವಿದೆ. ಸೈತಾನನ ವಿಪರೀತ ಒತ್ತಡವನ್ನು ಎದುರಿಸಲು ಸಭೆಯ ಮೂಲಕ ಕೊಡಲ್ಪಡುವ ಅಮೂಲ್ಯ ಮಾರ್ಗದರ್ಶನವು ನನಗಿದೆ. ರಾಜ್ಯ ಸಭಾಗೃಹದಲ್ಲಿ ಲಭ್ಯಗೊಳಿಸಿರುವ ಬಲವರ್ಧಕ ಸಹವಾಸದ ಕಾರಣ ನನ್ನ ಮುಖದಲ್ಲಿ ಸಂತೋಷದ ಮಿನುಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವ ಅಮೋಘ ಪ್ರತೀಕ್ಷೆಯು ನನ್ನದಾಗಿದೆ.”

18 ಲೀನಳಂತೆ ಅನೇಕ ಕ್ರೈಸ್ತ ಯುವ ಜನರು ನಂಬಿಕೆಗಾಗಿ ಕಠಿನ ಹೋರಾಟವನ್ನು ಮಾಡುತ್ತಿದ್ದಾರೆ, ಮತ್ತು ಇದು ಅವರಿಗೆ ಸಂತೋಷವನ್ನು ತರುತ್ತಿದೆ. ಅವರ ಜೀವಿತವು​—ಕೆಲವೊಮ್ಮೆ ತುಂಬ ಸಮಸ್ಯೆ ಮತ್ತು ಒತ್ತಡಗಳಿಂದ ಕೂಡಿರುವುದಾದರೂ​—ನಿಜ ಉದ್ದೇಶ ಮತ್ತು ನಿಜ ಭವಿಷ್ಯತ್ತು ಉಳ್ಳ ಜೀವಿತವಾಗಿದೆಯೆಂಬ ಮನವರಿಕೆ ಅವರಿಗಿದೆ. ಆದುದರಿಂದ, ನಿಮ್ಮ ಸುಕ್ಷೇಮದ ಕುರಿತು ನಿಜವಾಗಿ ಚಿಂತಿಸುತ್ತಿರುವ ದೇವರನ್ನು ಸೇವಿಸುತ್ತಾ ಮುಂದುವರಿಯಿರಿ. ಆತನ ಮನಸ್ಸನ್ನು ಸಂತೋಷಪಡಿಸಿರಿ, ಮತ್ತು ಆತನು ನಿಮ್ಮನ್ನು ಇಂದೂ ಎಂದೆಂದಿಗೂ ಸಂತೋಷಗೊಳಿಸುವನು!​—ಕೀರ್ತನೆ 5:11.

[ಪಾದಟಿಪ್ಪಣಿಗಳು]

^ ಪ್ಯಾರ. 3 ಎಚ್ಚರ!ದ (ಇಂಗ್ಲಿಷ್‌) ಅಕ್ಟೋಬರ್‌ 22, 1996ರ ಸಂಚಿಕೆಯಲ್ಲಿರುವ, “ಸತ್ಯವು ನನ್ನ ಬದುಕನ್ನು ನನಗೆ ವಾಪಸು ಕೊಟ್ಟಿತು” ಎಂಬ ಲೇಖನವನ್ನು ನೋಡಿರಿ.

^ ಪ್ಯಾರ. 15 ಒಬ್ಬ ವ್ಯಕ್ತಿಯು ಪಶ್ಚಾತ್ತಾಪಪಟ್ಟು, ತನ್ನ ಕೆಟ್ಟ ನಡತೆಯನ್ನು ಬಿಟ್ಟುಬಿಟ್ಟು, ತನ್ನ ಪಾಪಗಳನ್ನು ಅರಿಕೆಮಾಡುವುದಾದರೆ, ಯೆಹೋವನು “ಮಹಾಕೃಪೆಯಿಂದ ಕ್ಷಮಿಸುವನು” ಎಂಬುದು ಅದೆಷ್ಟು ಸಾಂತ್ವನದಾಯಕ.​—ಯೆಶಾಯ 55:7.

ನಿಮಗೆ ನೆನಪಿದೆಯೆ?

• “ಕೆಡುಕ”ನಾದ ಸೈತಾನನಿಂದ ಯಾವ ಅಪಾಯವು ನಿಮ್ಮ ಮುಂದಿದೆ?

• ನೀವು ಯೆಹೋವನ ಮನಸ್ಸನ್ನು ಹೇಗೆ ಸಂತೋಷಪಡಿಸಬಲ್ಲಿರಿ?

• ಯೆಹೋವನು ನಿಮ್ಮ ಕುರಿತು ಚಿಂತಿಸುತ್ತಾನೆಂದು ಬೈಬಲು ಹೇಗೆ ತೋರಿಸುತ್ತದೆ?

• ಯೆಹೋವನನ್ನು ಸೇವಿಸುವುದರಿಂದ ಬರುವ ಕೆಲವು ಆಶೀರ್ವಾದಗಳಾವುವು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚೌಕ/ಚಿತ್ರ]

ನೀತಿವಂತನಾದ ಮನುಷ್ಯನು ಎಡವಿಬೀಳುವುದರಲ್ಲಿದ್ದನು

ಆಸಾಫನು ಪುರಾತನ ಇಸ್ರಾಯೇಲಿನ ಯೆಹೋವನ ಆಲಯದಲ್ಲಿ ಮುಖ್ಯ ಗಾಯಕನಾಗಿದ್ದನು. ಸಾರ್ವಜನಿಕ ಆರಾಧನೆಯಲ್ಲಿ ಉಪಯೋಗಿಸಲ್ಪಡುತ್ತಿದ್ದ ಸಂಗೀತಗಳನ್ನೂ ಅವನು ರಚಿಸಿದ್ದನು. ಈ ಉತ್ತಮ ಸೇವಾ ಸುಯೋ ಗಗಳಿದ್ದಾಗ್ಯೂ, ತುಸು ಸಮಯ, ಆಸಾಫನು ತನ್ನ ಸಮಾನಸ್ಥರ ಭಕ್ತಿಹೀನ ನಡತೆಗೆ ಆಕರ್ಷಿಸಲ್ಪಟ್ಟನು. ಯಾವ ಕೆಟ್ಟ ಫಲಿತಾಂಶಗಳೂ ಇಲ್ಲದೆ ದೇವರ ನಿಯಮಗಳನ್ನು ಅವರು ಮೀರುತ್ತಿರುವಂತೆ ತೋರುತ್ತಿತ್ತು. “ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು. ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ” ಎಂದು ಅನಂತರ ಆಸಾಫನು ಅರಿಕೆಮಾಡಿದನು.​—ಕೀರ್ತನೆ 73:2, 3.

ತದನಂತರ ಆಸಾಫನು ದೇವರ ಪವಿತ್ರಾಲಯಕ್ಕೆ ಹೋಗಿ ಆ ವಿಷಯದ ಕುರಿತು ಪ್ರಾರ್ಥನೆ ಮಾಡಿದನು. ವಿಷಯಗಳನ್ನು ಆತ್ಮಿಕ ದೃಷ್ಟಿಕೋನದಿಂದ ಪುನಃ ತೂಗಿನೋಡಲು ಶಕ್ತನಾದ ಮೇಲೆ, ಯೆಹೋವನು ಕೆಟ್ಟತನವನ್ನು ಹೇಸುತ್ತಾನೆಂದೂ ತಕ್ಕಕಾಲದಲ್ಲಿ ದುಷ್ಟರು ಮತ್ತು ನೀತಿವಂತರು ತಾವು ಬಿತ್ತಿದ್ದನ್ನೇ ಕೊಯ್ಯಲಿದ್ದಾರೆಂದೂ ಅವನಿಗೆ ತಿಳಿದುಬಂತು. (ಕೀರ್ತನೆ 73:​17-20; ಗಲಾತ್ಯ 6:​7, 8) ನಿಜವಾಗಿಯೂ ದುಷ್ಟರು ಜಾರುವ ನೆಲದಲ್ಲಿದ್ದಾರೆ, ಅಪಾಯಕರ ಸ್ಥಳದಲ್ಲಿದ್ದಾರೆ. ಕಟ್ಟಕಡೆಗೆ ಯೆಹೋವನು ಈ ಭಕ್ತಿಹೀನ ವ್ಯವಸ್ಥೆಯನ್ನು ನಾಶಗೊಳಿಸುವಾಗ ಅವರು ಬಿದ್ದುಹೋಗುವರು.​—ಪ್ರಕಟನೆ 21:8.

[ಪುಟ 15ರಲ್ಲಿರುವ ಚಿತ್ರಗಳು]

ಯೆಹೋವನು ನಿಮ್ಮ ಹಿತಚಿಂತೆಯಲ್ಲಿ ಆಸಕ್ತನಾಗಿದ್ದಾನೆ; ಸೈತಾನನಾದರೊ ನಿಮ್ಮನ್ನು ನುಂಗಿಬಿಡಲು ಗುರಿಯಿಟ್ಟಿದ್ದಾನೆ

[ಪುಟ 16ರಲ್ಲಿರುವ ಚಿತ್ರ]

ತಮ್ಮ ಜೊತೆ ಕ್ರೈಸ್ತರೊಂದಿಗೆ ಯೆಹೋವನನ್ನು ಸೇವಿಸುವ ಮೂಲಕ ಅನೇಕ ಯುವ ಜನರು ಮಹತ್ತಾದ ಸಂತೋಷವನ್ನು ಕಂಡುಕೊಳ್ಳುತ್ತಾರೆ