ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಸಂಭವನೀಯವಾಗಿ ತೋರಿದ ಬೋವಜ ಮತ್ತು ರೂತಳ ವಿವಾಹ

ಅಸಂಭವನೀಯವಾಗಿ ತೋರಿದ ಬೋವಜ ಮತ್ತು ರೂತಳ ವಿವಾಹ

ಅಸಂಭವನೀಯವಾಗಿ ತೋರಿದ ಬೋವಜ ಮತ್ತು ರೂತಳ ವಿವಾಹ

ವಸಂತಕಾಲದ ಚಟುವಟಿಕೆಯಿಂದ ಬೇತ್ಲೆಹೇಮಿನ ಬಳಿಯಲ್ಲಿರುವ ಕಾಳೊಕ್ಕುವ ಕಣವು ಗಿಜಿಗುಟ್ಟುತ್ತಿತ್ತು. ಅದೊಂದು ಕಾರ್ಯಮಗ್ನ ದಿನವಾಗಿತ್ತು. ತಾಜಾ ಹುರಿಗಾಳಿನ ಸುವಾಸನೆಯು ಹಸಿದಿರುವ ಕೆಲಸಗಾರರಿಗೆ, ಅದು ಊಟದ ಸಮಯವೆಂದು ನೆನಪುಹುಟ್ಟಿಸುತ್ತಿತ್ತು. ಪ್ರತಿಯೊಬ್ಬನೂ ಅವನವನ ಕಠಿನ ಪರಿಶ್ರಮದ ಫಲಗಳನ್ನು ಆನಂದಿಸಲಿದ್ದನು.

ಒಬ್ಬ ಐಶ್ವರ್ಯವಂತ ಜಾಮೀನುದಾರನಾದ ಬೋವಜನು, ಅನ್ನಪಾನಗಳನ್ನು ತೆಗೆದುಕೊಂಡು ಸಂತುಷ್ಟನಾಗಿ ಧಾನ್ಯದ ಒಂದು ರಾಶಿಯ ಬಳಿಯಲ್ಲಿ ವಿಶ್ರಮಿಸುತ್ತಾನೆ. ನಂತರ, ಆ ದಿನದ ಕೊಯ್ಲಿನ ಕೆಲಸ ಮುಗಿದು ಪ್ರತಿಯೊಬ್ಬರೂ ವಿಶ್ರಾಂತಿಪಡೆದುಕೊಳ್ಳಲು ಒಂದು ಬೆಚ್ಚಗಿನ ಸ್ಥಳವನ್ನು ಹುಡುಕುತ್ತಾರೆ. ಸಂತುಷ್ಟನಾದ ಬೋವಜನು ಈಗ ಹೊದ್ದುಕೊಂಡು ನಿದ್ರಿಸುತ್ತಾನೆ.

ಒಂದು ಗುಪ್ತವಾದ ಭೇಟಿ

ಮಧ್ಯರಾತ್ರಿಯಲ್ಲಿ ಬೋವಜನು ಚಳಿಯಿಂದ ನಡುಗುತ್ತಾ ಎಚ್ಚರಗೊಳ್ಳುತ್ತಾನೆ. ಆಶ್ಚರ್ಯಕರವಾಗಿ, ಅವನ ಕಾಲುಗಳ ಮೇಲಣ ಹೊದಿಕೆಯು ಉದ್ದೇಶಪೂರ್ವಕವಾಗಿ ತೆಗೆಯಲ್ಪಟ್ಟಿದೆ, ಮತ್ತು ಯಾರೋ ಒಬ್ಬರು ಅವನ ಕಾಲುಗಳ ಬಳಿ ಮಲಗಿದ್ದಾರೆ! ಕತ್ತಲೆಯ ಕಾರಣ ಮಲಗಿದ್ದವರು ಯಾರೆಂದು ಗುರುತಿಸಲಾಗದೆ, “ನೀನು ಯಾರು?” ಎಂದವನು ಕೇಳುತ್ತಾನೆ. ಒಬ್ಬಾಕೆ ಹೆಂಗಸಿನ ಸ್ವರವು ಹೀಗೆ ಉತ್ತರಿಸುತ್ತದೆ: “ನಾನು ನಿನ್ನ ದಾಸಿಯಾದ ರೂತಳು. ನೀನು ಸಮೀಪಬಂಧುವಾಗಿರುವದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು.”​—ರೂತಳು 3:1-9.

ರಾತ್ರಿಹೊತ್ತಿನಲ್ಲಿ ಒಬ್ಬಂಟಿಗರಾಗಿ ಅವರು ಮಾತಾಡುತ್ತಾರೆ. ಈ ರೀತಿಯಲ್ಲಿ ಹೆಂಗಸರು ಕಾಳೊಕ್ಕುವ ಕಣಕ್ಕೆ ಬರುತ್ತಿರಲಿಲ್ಲ. (ರೂತಳು 3:​14) ಹಾಗಿದ್ದರೂ, ಬೋವಜನು ತಿಳಿಸಿದ ಮೇರೆಗೆ, ರೂತಳು ಮುಂಜಾನೆಯ ವರೆಗೆ ಅವನ ಕಾಲುಗಳ ಬಳಿಯಲ್ಲೇ ಮಲಗಿಕೊಳ್ಳುತ್ತಾಳೆ. ಆದರೆ ಯಾವುದೇ ರೀತಿಯ ಅಧಾರವಿಲ್ಲದ ಟೀಕೆಯ ಮಾತಿಗೆ ಎಡೆಕೊಡದಂತೆ ಮುಂಜಾನೆ ಸೂರ್ಯನು ಉದಯಿಸುವದಕ್ಕೆ ಮುಂಚೆಯೇ ಅವಳು ಎದ್ದು ಹೊರಟುಹೋಗುತ್ತಾಳೆ.

ಇದೊಂದು ಪ್ರಣಯಾತ್ಮಕ ಭೇಟಿಯಾಗಿತ್ತೊ? ಐಶ್ವರ್ಯವಂತನಾದ ಈ ವೃದ್ಧ ವ್ಯಕ್ತಿಯು, ಒಂದು ವಿಧರ್ಮಿ ದೇಶದವಳಾಗಿದ್ದ ಒಬ್ಬ ಬಡ ಯುವ ವಿಧವೆಯಾದ ರೂತಳಿಂದ ಜಾಣ್ಮೆಯಿಂದ ವಂಚಿಸಲ್ಪಟ್ಟನೊ? ಅಥವಾ ಬೋವಜನು ಆ ರಾತ್ರಿ ರೂತಳ ಸನ್ನಿವೇಶಗಳ ಮತ್ತು ಒಂಟಿತನದ ದುರುಪಯೋಗವನ್ನು ಮಾಡಿದನೊ? ಇಲ್ಲ. ಬದಲಾಗಿ, ಅಲ್ಲಿ ನಡೆದ ಸಂಗತಿಯು ವಾಸ್ತವದಲ್ಲಿ ನಿಷ್ಠೆ ಮತ್ತು ದೇವರ ಪ್ರೀತಿಯ ಒಂದು ಉದಾಹರಣೆಯಾಗಿತ್ತು. ಮತ್ತು ಸತ್ಯಾಂಶಗಳು ಸಹ ತುಂಬ ಹೃದಯಸ್ಪರ್ಶಿಸುವಂತಹದ್ದಾಗಿವೆ.

ಆದರೆ ರೂತಳು ಯಾರು? ಅವಳ ಉದ್ದೇಶವೇನಾಗಿತ್ತು? ಮತ್ತು ಈ ಐಶ್ವರ್ಯವಂತನಾದ ಬೋವಜನು ಯಾರು?

“ನೀನು ಗುಣವಂತೆ”

ಈ ಸಂಗತಿಯು ನಡೆಯುವುದಕ್ಕಿಂತ ಕೆಲವು ವರುಷಗಳ ಮುಂಚೆ ಯೆಹೂದದಲ್ಲಿ ಬರಗಾಲವು ಬಂದಿತ್ತು. ಎಲೀಮೆಲೆಕ, ಅವನ ಹೆಂಡತಿಯಾದ ನೊವೊಮಿ ಹಾಗೂ ಅವರ ಇಬ್ಬರು ಗಂಡು ಮಕ್ಕಳಾದ ಮಹ್ಲೋನ್‌ ಮತ್ತು ಕಿಲ್ಯೋನ್‌, ಎಂಬ ನಾಲ್ಕು ಮಂದಿ ಸೇರಿದ ಒಂದು ಇಸ್ರಾಯೇಲ್ಯ ಕುಟುಂಬವು ಫಲವತ್ತಾದ ಮೋವಾಬ್‌ದೇಶಕ್ಕೆ ವಲಸೆಹೋಯಿತು. ಆ ಗಂಡು ಮಕ್ಕಳು ಒರ್ಫಾ ಮತ್ತು ರೂತಳೆಂಬ ಇಬ್ಬರು ಮೋವಾಬ್‌ಸ್ತ್ರೀಯರನ್ನು ಮದುವೆ ಮಾಡಿಕೊಂಡರು. ಆ ಮೂವರು ಪುರುಷರು ಮೋವಾಬ್‌ದೇಶದಲ್ಲಿ ಮರಣಹೊಂದಿದ ಬಳಿಕ, ಈ ಮೂವರು ಸ್ತ್ರೀಯರು ಇಸ್ರಾಯೇಲಿನಲ್ಲಿ ಪರಿಸ್ಥಿತಿಗಳು ಉತ್ತಮಗೊಂಡಿವೆ ಎಂಬುದನ್ನು ಕೇಳಿಸಿಕೊಂಡರು. ಆದಕಾರಣ, ಮಕ್ಕಳೂ ಮೊಮ್ಮಕ್ಕಳೂ ಇಲ್ಲದೆ ದುಃಖಿತಳೂ ವಿಧವೆಯೂ ಆಗಿರುವ ನೊವೊಮಿಯು ತನ್ನ ಸ್ವದೇಶಕ್ಕೆ ಹಿಂದಿರುಗಲು ನಿರ್ಧರಿಸಿದಳು.​—ರೂತಳು 1:​1-14.

ಇಸ್ರಾಯೇಲಿಗೆ ಹೋಗುವ ದಾರಿಯಲ್ಲಿ, ಒರ್ಫಾ ತನ್ನ ಸ್ವಜನರಲ್ಲಿಗೆ ಹೋಗುವಂತೆ ನೊವೊಮಿ ಆಕೆಯ ಮನವೊಪ್ಪಿಸಿದಳು. ನಂತರ ನೊವೊಮಿಯು ರೂತಳಿಗೆ ಹೀಗಂದಳು: “ಇಗೋ, ನಿನ್ನ ಓರಗಿತ್ತಿಯು ತಿರಿಗಿ ತನ್ನ ಜನರ ಬಳಿಗೂ ದೇವತೆಗಳ ಬಳಿಗೂ ಹೋಗುತ್ತಾಳೆ; ನೀನೂ ಆಕೆಯ ಜೊತೆಯಲ್ಲಿ ಹೋಗು.” ಆದರೆ ರೂತಳು, “ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು, . . . ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು” ಎಂಬುದಾಗಿ ಹೇಳಿದಳು. (ರೂತಳು 1:15-17) ಹೀಗೆ ಆ ಇಬ್ಬರೂ ನಿರ್ಗತಿಕ ವಿಧವೆಯರು ಬೇತ್ಲೆಹೇಮಿಗೆ ಹಿಂದಿರುಗಿದರು. ಅಲ್ಲಿ, ರೂತಳು ಅತ್ತೆಗೆ ತೋರಿಸುತ್ತಿದ್ದ ಪ್ರೀತಿ ಮತ್ತು ಪರಾಮರಿಕೆಯನ್ನು ನೆರೆಯವರು ನೋಡಿ ಎಷ್ಟು ಪ್ರಭಾವಿತರಾದರೆಂದರೆ ಅವಳನ್ನು, “ಏಳು ಮಂದಿ ಗಂಡು ಮಕ್ಕಳಿಗಿಂತಲೂ [ನೊವೊಮಿಗೆ] ಉತ್ತಮಳು” ಎಂದು ಪರಿಗಣಿಸಿದರು. ಇತರರು ಅವಳನ್ನು “ಗುಣವಂತೆ” ಎಂಬುದಾಗಿ ವರ್ಣಿಸಿದರು.​—ರೂತಳು 3:11; 4:​15, NW.

ಬೇತ್ಲೆಹೇಮಿನಲ್ಲಿ ಜವೆಗೋದಿಯ ಕೊಯ್ಲು ಆರಂಭವಾಗುವ ಸಮಯದಲ್ಲಿ, ರೂತಳು ನೊವೊಮಿಗೆ ಹೀಗಂದಳು: “ನಾನು ಹೋಗಿ ಯಾವನು ನನಗೆ ದಯೆತೋರಿಸುವನೋ ಅವನ ಹೊಲದಲ್ಲಿ ಹಕ್ಕಲತೆನೆಗಳನ್ನು ಕೂಡಿಸಿಕೊಂಡು ಬರುವೆನು.”​—ರೂತಳು 2:2.

ಆಕೆಯು ಅಕಸ್ಮಾತ್ತಾಗಿ ಅವಳ ಮಾವನಾದ ಎಲೀಮೆಲೆಕನ ಸಂಬಂಧಿಕನಾದ ಬೋವಜನ ಹೊಲಕ್ಕೇ ಹೋದಳು. ಆಕೆಯು ಕೊಯ್ಯುವವರ ಮೇಲಧಿಕಾರಿಯ ಬಳಿ ಹಕ್ಕಲಾಯ್ದುಕೊಳ್ಳಲು ಅನುಮತಿಯನ್ನು ಕೇಳಿದಳು. ಹಕ್ಕಲಾಯುವುದರಲ್ಲಿ ಅವಳ ಕಾರ್ಯತತ್ಪರತೆಯು ಗಮನಾರ್ಹವಾಗಿತ್ತು ಮತ್ತು ಮೇಲಧಿಕಾರಿಯು ಬೋವಜನ ಮುಂದೆ ಆಕೆಯ ಕೆಲಸವನ್ನು ಪ್ರಶಂಸಿಸಿದನು.​—ರೂತಳು 1:​22–2:7.

ಒಬ್ಬ ಸಂರಕ್ಷಕನು ಮತ್ತು ಅನ್ನದಾತನು

ಬೋವಜನು ಯೆಹೋವನ ಒಬ್ಬ ನಿಷ್ಠಾವಂತ ಆರಾಧಕನಾಗಿದ್ದನು. ಪ್ರತಿದಿನ ಬೆಳಿಗ್ಗೆ ಬೋವಜನು ತನ್ನ ಬಳಿ ಕೆಲಸಮಾಡುತ್ತಿದ್ದ ಕೊಯ್ಯುವವರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಎನ್ನುವ ಮಾತುಗಳ ಮೂಲಕ ವಂದಿಸುತ್ತಿದ್ದನು ಮತ್ತು ಪ್ರತ್ಯುತ್ತರವಾಗಿ ಅವರು, “ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂಬುದಾಗಿ ಹೇಳುತ್ತಿದ್ದರು. (ರೂತಳು 2:4) ಕೆಲಸದಲ್ಲಿ ರೂತಳ ಕಾರ್ಯತತ್ಪರತೆಯನ್ನು ಗಮನಿಸಿದ ಮತ್ತು ನೊವೊಮಿಯ ಕಡೆಗಿನ ಅವಳ ನಿಷ್ಠತೆಯ ಬಗ್ಗೆ ತಿಳಿದ ನಂತರ, ಬೋವಜನು ಆಕೆಗೆ ಹಕ್ಕಲಾಯಲು ವಿಶೇಷ ಏರ್ಪಾಡನ್ನು ಮಾಡಿದನು. ಸಂಕ್ಷಿಪ್ತವಾಗಿ ಅವನು ಆಕೆಗೆ ಹೀಗಂದನು: “ನನ್ನ ಹೊಲವನ್ನು ಬಿಟ್ಟು ಬೇರೆಯವರ ಹೊಲಕ್ಕೆ ಹೋಗಬೇಡ; ನನ್ನ ಹೆಣ್ಣಾಳುಗಳ ಜೊತೆಯಲ್ಲೇ ಇದ್ದುಕೊಂಡು ನನ್ನ ಆಳುಗಳು ಕೊಯ್ಯುವದಕ್ಕೋಸ್ಕರ ಯಾವ ಹೊಲಕ್ಕೆ ಹೋಗುತ್ತಾರೋ ಆ ಹೊಲಕ್ಕೆ ನೀನೂ ಹೋಗು. ನಿನ್ನನ್ನು ಯಾರೂ ಮುಟ್ಟಬಾರದೆಂದು ನನ್ನ ಸೇವಕರಿಗೆ ಅಪ್ಪಣೆಕೊಟ್ಟಿದ್ದೇನೆ. ನಿನಗೆ ದಾಹವಾದರೆ ನನ್ನ ಸೇವಕರೇ ನೀರು ತಂದು ತುಂಬಿಸಿದ ನೀರಿನ ಪಾತ್ರೆಗಳ ಬಳಿಗೆ ಹೋಗಿ ಕುಡಿ.”​—ರೂತಳು 2:​8, 9.

ರೂತಳು ಸಾಷ್ಟಾಂಗನಮಸ್ಕಾರಮಾಡಿ ಹೀಗಂದಳು: “ಪರದೇಶಿಯಾದ ನನ್ನಲ್ಲಿ ಇಷ್ಟು ಕಟಾಕ್ಷವೇಕೆ”? ಅದಕ್ಕೆ ಬೋವಜನು, “ನಿನ್ನ ಗಂಡನು ಸತ್ತ ಮೇಲೆ ನೀನು ಅತ್ತೆಯನ್ನು ಪ್ರೀತಿಸಿ ತಂದೆತಾಯಿಗಳನ್ನೂ ಸ್ವದೇಶವನ್ನೂ ಬಿಟ್ಟು ನೀನು ಈ ವರೆಗೂ ಅರಿಯದ ಜನರ ಬಳಿಗೆ ಬಂದಿರುವಿಯೆಂಬದು ನನಗೆ ಚೆನ್ನಾಗಿ ಗೊತ್ತಾಗಿದೆ. ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ; . . . ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ” ಎಂದು ಉತ್ತರಕೊಟ್ಟನು.​—ರೂತಳು 2:​10-12.

ಬೋವಜನು ಅವಳ ಒಲುಮೆಯನ್ನು ಗೆಲ್ಲಲಿಕ್ಕಾಗಿ ಪ್ರಯತ್ನಿಸುತ್ತಿರಲಿಲ್ಲ. ಅವನು ನೀಡಿದಂಥ ಪ್ರಶಂಸೆಯು ಯಥಾರ್ಥವಾಗಿತ್ತು. ರೂತಳು, ಅವನ ಪುನರಾಶ್ವಾಸನ ಸಂತೈಸುವಿಕೆಗೆ ಹೃತ್ಪೂರ್ವಕ ಉಪಕಾರವನ್ನು ನಮ್ರತೆಯಿಂದ ಸಲ್ಲಿಸಿದಳು. ತಾನು ಅದಕ್ಕೆ ಯೋಗ್ಯಳಲ್ಲವೆಂದು ಅವಳು ಭಾವಿಸುತ್ತಾಳೆ ಮತ್ತು ಇನ್ನೂ ಹೆಚ್ಚು ಕಠಿನವಾಗಿ ಕೆಲಸಮಾಡುತ್ತಾ ಮುಂದುವರಿಯುತ್ತಾಳೆ. ನಂತರ ಊಟದ ವೇಳೆಯಲ್ಲಿ ಬೋವಜನು ರೂತಳನ್ನು “ಇಲ್ಲಿ ಬಾ; ರೊಟ್ಟಿಯನ್ನು ತೆಗೆದುಕೊಂಡು ಮುರಿದು ಹುಳಿರಸದಲ್ಲಿ ಅದ್ದಿ ತಿನ್ನು” ಎಂದು ಕರೆಯುತ್ತಾನೆ. ಆಕೆಯು ತಿಂದು ತೃಪ್ತಳಾಗಿ, ನೊವೊಮಿಗಾಗಿ ಮನೆಗೆ ತೆಗೆದುಕೊಂಡು ಹೋಗಲು ಆಹಾರವನ್ನು ಉಳಿಸಿಟ್ಟುಕೊಳ್ಳುತ್ತಾಳೆ.​—ರೂತಳು 2:​14.

ಸಾಯಂಕಾಲದ ವರೆಗೆ ರೂತಳು ಮೂವತ್ತು ಸೇರು ಜವೆಗೋದಿಯನ್ನು ಹಕ್ಕಲಾಯ್ದಳು. ಅವಳು ಅದನ್ನೂ ಉಳಿಸಿಟ್ಟಿದ್ದ ಆಹಾರವನ್ನೂ ಮನೆಗೆ ನೊವೊಮಿಯ ಬಳಿಗೆ ತೆಗೆದುಕೊಂಡು ಹೋಗುತ್ತಾಳೆ. (ರೂತಳು 2:​15-18) ಈ ಪುಷ್ಕಳ ಆಹಾರವನ್ನು ನೋಡಿ ಸಂತೋಷಪಟ್ಟ ನೊವೊಮಿಯು ಆಕೆಗೆ ಹೀಗೆ ಕೇಳುತ್ತಾಳೆ: “ನೀನು ಈ ಹೊತ್ತು ಯಾರ ಹೊಲದಲ್ಲಿ ಹಕ್ಕಲಾಯ್ದಿ? . . . ನಿನ್ನನ್ನು ಕಟಾಕ್ಷಿಸಿದವನಿಗೆ ಶುಭವಾಗಲಿ.” ಬೋವಜನ ಹೊಲದಲ್ಲಿ ಎಂದು ಅವಳಿಗೆ ತಿಳಿದುಬಂದಾಗ ನೊವೊಮಿಯು ಹೀಗನ್ನುತ್ತಾಳೆ: ‘ಸತ್ತವರಿಗೂ ಬದುಕುವವರಿಗೂ ಬಿಡದೆ ದಯೆತೋರಿಸುತ್ತಿರುವ ಇವನು ಯೆಹೋವನಿಂದ ಆಶೀರ್ವಾದ ಹೊಂದಲಿ ಆ ಮನುಷ್ಯನು ನಮ್ಮ ಸಂಬಂಧಿಕನೂ ಸಮೀಪಬಂಧುಗಳಲ್ಲೊಬ್ಬನೂ ಆಗಿದ್ದಾನೆ.’​—ರೂತಳು 2:​19, 20.

‘ಒಂದುವಿಶ್ರಾಂತಿದಾಣ’ ವನ್ನು ಕಂಡುಕೊಳ್ಳುವುದು

ತನ್ನ ಸೊಸೆಗೆ ‘ಒಂದು ವಿಶ್ರಾಂತಿದಾಣ’ ಅಥವಾ ಮನೆಯನ್ನು ಕಂಡುಕೊಳ್ಳುವ ಬಯಕೆಯಿಂದ ನೊವೊಮಿಯು, ದೇವರ ಧರ್ಮಶಾಸ್ತ್ರಕ್ಕೆ ಹೊಂದಿಕೆಯಲ್ಲಿ ಪುನಃ ಕೊಂಡುಕೊಳ್ಳುವ ಬಿನ್ನಹವನ್ನು ಏರ್ಪಡಿಸಲಿಕ್ಕಾಗಿ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳುತ್ತಾಳೆ. (ಯಾಜಕಕಾಂಡ 25:​25; ಧರ್ಮೋಪದೇಶಕಾಂಡ 25:​5, 6) ಈಗ ನೊವೊಮಿಯು ರೂತಳಿಗೆ, ಬೋವಜನ ಗಮನವನ್ನು ಸೆಳೆಯುವ ರೀತಿಯ ಕುರಿತು, ಕೊಂಚ ಮಟ್ಟಿಗೆ ನಾಟಕೀಯವೂ ಆದ ಅತಿ ಪರಿಣಾಮಕಾರಿಯಾದ ಉಪಾಯವನ್ನು ಹೇಳಿಕೊಡುತ್ತಾಳೆ. ನೊವೊಮಿಯಿಂದ ಪೂರ್ವಸಿದ್ಧತೆ ಮಾಡಲ್ಪಟ್ಟವಳಾಗಿಯೂ ಒಳ್ಳೆಯ ರೀತಿಯಲ್ಲಿ ಸೂಚನೆಗಳನ್ನು ಪಡೆದವಳಾಗಿಯೂ, ರೂತಳು ರಾತ್ರಿಯ ಅಂಧಕಾರದಲ್ಲಿ ಬೋವಜನಿಗೆ ಸೇರಿರುವ ಕಾಳೊಕ್ಕುವ ಕಣಕ್ಕೆ ಹೋಗುತ್ತಾಳೆ. ಅಲ್ಲಿ ಅವನು ಮಲಗಿರುವುದನ್ನು ಕಾಣುತ್ತಾಳೆ. ಅವಳು ಅವನ ಕಾಲುಮೇಲಣ ಹೊದಿಕೆಯನ್ನು ತೆಗೆದುಬಿಟ್ಟು, ಅವನು ಎಚ್ಚರವಾಗುವ ತನಕ ಕಾಯುತ್ತಾಳೆ.​—ರೂತಳು 3:​1-7.

ಬೋವಜನು ಎಚ್ಚೆತ್ತಾಗ, ‘ತನ್ನ ಹೊದಿಕೆಯ ಅಂಚನ್ನು ಆಕೆಯ ಮೇಲೆ ಹಾಕಲು’ ರೂತಳು ಮಾಡಿದ ವಿನಂತಿಯ ತಾತ್ಪರ್ಯವನ್ನು ಅರ್ಥಮಾಡಿಕೊಳ್ಳಲು ಅವಳ ಸಾಂಕೇತಾರ್ಥವುಳ್ಳ ಕ್ರಿಯೆಯು ಅವನಿಗೆ ಸಹಾಯಮಾಡಿತು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ರೂತಳ ಆ ಕ್ರಿಯೆಯು, ಯೂದಾಯದವನಾದ ಈ ವಯಸ್ಸಾದ ವ್ಯಕ್ತಿಗೆ, ಅವನು ರೂತಳ ಸತ್ತಿದ್ದ ಗಂಡನಾದ ಮಹ್ಲೋನ್‌ನ ಸಂಬಂಧಿಕನಾಗಿದ್ದ ಕಾರಣ ಪುನಃ ಕೊಂಡುಕೊಳ್ಳುವವನೋಪಾದಿ ತನಗಿರುವ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ.​—ರೂತಳು 3:9.

ರೂತಳ ಈ ರಾತ್ರಿವೇಳೆಯ ಭೇಟಿಯು ಅನಿರೀಕ್ಷಿತವಾಗಿತ್ತು. ಆದರೂ, ಪುನಃ ಖರೀದಿಸಲು ರೂತಳು ಮಾಡಿದ ವಿನಂತಿಯು ಸಂಪೂರ್ಣವಾಗಿ ಅನಿರೀಕ್ಷಿತವಾದ ವಿಷಯವಾಗಿರಲಿಲ್ಲ ಎಂಬುದನ್ನು ಬೋವಜನ ಪ್ರತಿಕ್ರಿಯೆಯು ಸೂಚಿಸುತ್ತದೆ. ರೂತಳ ವಿನಂತಿಯ ಮೇರೆಗೆ ಕ್ರಿಯೆಗೈಯಲು ಬೋವಜನು ಸಿದ್ಧನಿದ್ದನು.

ರೂತಳ ಸ್ವರದಲ್ಲಿ ಒಂದುವೇಳೆ ಸ್ವಲ್ಪ ಚಿಂತೆಯು ಕಂಡುಬಂದಿರಬೇಕು. ಆದುದರಿಂದಲೇ ಬೋವಜನು ಹೀಗೆ ಹೇಳಿ ಅವಳಿಗೆ ಪುನರಾಶ್ವಾಸನೆ ನೀಡುವಂತೆ ಪ್ರಚೋದಿಸಲ್ಪಟ್ಟನು: “ನನ್ನ ಮಗಳೇ, ಈಗ ಭಯಪಡಬೇಡ. ನೀನು ಗುಣವಂತೆಯೆಂಬದು ಊರಿನವರಿಗೆಲ್ಲಾ ಗೊತ್ತದೆ; ಆದದರಿಂದ ನೀನು ಹೇಳಿದ್ದನ್ನೆಲ್ಲಾ ಮಾಡುವೆನು.”​—ರೂತಳು 3:​11.

“ಯುವತಿಯೇ, ಯೆಹೋವನು ನಿನಗೆ ದಯೆತೋರಲಿ. ನೀನು ನನ್ನ ಮೇಲೆ ತುಂಬ ಕರುಣೆಯನ್ನು [“ಪ್ರೀತಿಪೂರ್ವಕ ದಯೆಯನ್ನು,” NW] ತೋರಿರುವೆ. ನೀನು ಮೊದಲು ನೊವೊಮಿಗೆ ತೋರಿದ ಕರುಣೆಗಿಂತಲೂ [“ಪ್ರೀತಿಪೂರ್ವಕ ದಯೆಗಿಂತಲೂ,” NW] ಹೆಚ್ಚಿನ ಕರುಣೆಯನ್ನು [“ಪ್ರೀತಿಪೂರ್ವಕ ದಯೆಯನ್ನು,” NW] ನನಗೆ ತೋರಿರುವೆ.” ಎಂದು ಬೋವಜನು ಹೇಳಿದ ಮಾತುಗಳಿಂದ, ಅವನು ರೂತಳ ಕ್ರಿಯೆಗಳನ್ನು ಸಂಪೂರ್ಣವಾಗಿ ಸದ್ಗುಣವಾದದ್ದಾಗಿ ವೀಕ್ಷಿಸಿದನೆಂಬುದನ್ನು ತೋರಿಸುತ್ತದೆ. (ರೂತಳು 3:​10, ಪರಿಶುದ್ಧ ಬೈಬಲ್‌ *) ರೂತಳು ಮುಂಚೆ ಪ್ರೀತಿಪೂರ್ವಕ ದಯೆ ಅಥವಾ ನಿಷ್ಠಾವಂತ ಪ್ರೀತಿಯನ್ನು ನೊವೊಮಿಗೆ ತೋರಿಸಿದಳು. ಆಕೆಯು ಕೊನೆಯಲ್ಲಿ ತೋರಿಸಿದ ಪ್ರೀತಿಪೂರ್ವಕ ದಯೆಯು, ಬೋವಜನು ಪುನಃ ಖರೀದಿಸುವವನಾಗಿದ್ದ ಕಾರಣ, ಅವನು ವಯಸ್ಸಾದವನಾಗಿದ್ದರೂ, ಅವನು ಪುನಃ ಕೊಂಡುಕೊಳ್ಳಬೇಕಾಗಿರುವವಳು ತಾನಾಗಿದ್ದೇನೆಂದು ನಿಸ್ವಾರ್ಥವಾಗಿ ಗುರುತಿಸಿಕೊಂಡದ್ದೇ ಆಗಿತ್ತು. ಅವಳ ಸತ್ತಿದ್ದ ಗಂಡನಾದ ಮಹ್ಲೋನ್‌ನ ಹೆಸರಿನಲ್ಲಿ ಹಾಗೂ ನೊವೊಮಿಗಾಗಿ, ಸಂತತಿಯನ್ನು ಪಡೆಯಲು ಅವಳು ಸಿದ್ಧಳಿದ್ದಳು.

ಪುನಃ ಖರೀದಿಸುವ ಹಕ್ಕುದಾರ ನಿರಾಕರಿಸುತ್ತಾನೆ

ಮರುದಿನ ಬೆಳಗ್ಗೆ, ತನಗಿಂತಲೂ ನೊವೊಮಿಗೆ ಅತಿ ಸಮೀಪಬಂಧುವಾಗಿದ್ದ ಒಬ್ಬನನ್ನು ಬೋವಜನು ಆಹ್ವಾನಿಸುತ್ತಾನೆ. ಜನರ ಮತ್ತು ಊರಿನ ಹಿರಿ ಪುರುಷರ ಮುಂದೆ ಬೋವಜನು ಹೀಗೆ ಹೇಳುತ್ತಾನೆ: ‘ನೊವೊಮಿಯು ತನ್ನ ಗಂಡನಾದ ಎಲೀಮೆಲೆಕನ ಪಾಲಿಗೆ ಬಂದ ಹೊಲವನ್ನು ಮಾರಿಬಿಡಬೇಕೆಂದಿರುವ ವಿಷಯವನ್ನು ನಿನಗೆ ಹೇಳಬೇಕೆಂದಿದ್ದೇನೆ ಏಕೆಂದರೆ ನೀನು ಅದನ್ನು ಕೊಂಡುಕೊಳ್ಳತಕ್ಕ ಬಾಧ್ಯಸ್ಥನು.’ ಬೋವಜನು ಮುಂದುವರಿಸಿ ಹೇಳಿದ್ದು: ‘ನಿನಗೆ ಅದನ್ನು ಕೊಂಡುಕೊಳ್ಳುವ ಮನಸ್ಸಿದೆಯೊ? ಇಲ್ಲದಿದ್ದರೆ, ನಾನು ಕೊಂಡುಕೊಳ್ಳುತ್ತೇನೆ.’ ಇದನ್ನು ಕೇಳಿದ ಆ ವ್ಯಕ್ತಿಯು ತಾನು ಕೊಂಡುಕೊಳ್ಳುವೆನೆಂದು ತಿಳಿಸಿದನು.​—ರೂತಳು 4:​1-4.

ಆದರೆ ಆ ವ್ಯಕ್ತಿಗೆ ಒಂದು ಆಶ್ಚರ್ಯವು ಕಾದಿತ್ತು! ಬೋವಜನು ಎಲ್ಲಾ ಸಾಕ್ಷಿಗಳ ಮುಂದೆ ಈಗ ಹೀಗೆ ಹೇಳುತ್ತಾನೆ: “ನೀನು ನೊವೊಮಿಯಿಂದ ಆ ಹೊಲವನ್ನು ತೆಗೆದುಕೊಳ್ಳುವ ದಿನದಲ್ಲಿ ಹೊಲದ ಖಾತೆಯು ಆಕೆಯ ಸತ್ತುಹೋದ ಮಗನ ಹೆಸರಿನಲ್ಲೇ ಉಳಿಯುವಂತೆ ಅವನ ಹೆಂಡತಿಯೂ ಮೋವಾಬ್‌ಸ್ತ್ರೀಯೂ ಆದ ರೂತಳನ್ನೂ ತೆಗೆದುಕೊಳ್ಳಬೇಕು.” ತನ್ನ ಸ್ವಂತ ಆಸ್ತಿಯನ್ನು ನಷ್ಟಪಡಿಸಿಕೊಳ್ಳುವೆನೊ ಎಂಬ ಭಯದಲ್ಲಿ ಆ ಸಮೀಪಬಂಧುವು, “ನನ್ನಿಂದಾಗದು” ಎಂದು ಹೇಳಿ ತನ್ನ ಪುನಃ ಖರೀದಿಸುವ ಹಕ್ಕನ್ನು ಬಿಟ್ಟುಕೊಡುತ್ತಾನೆ.​—ರೂತಳು 4:​5, 6.

ಪದ್ಧತಿಯ ಪ್ರಕಾರ, ಪುನಃ ಖರೀದಿಸಲು ನಿರಾಕರಿಸುವ ವ್ಯಕ್ತಿಯು ತೆಗೆದುಕೊಳ್ಳುವವನಿಗೆ ತನ್ನ ಕೆರವನ್ನು ಕೊಡಬೇಕಿತ್ತು. ಆದುದರಿಂದ ಆ ಪುನಃ ಖರೀದಿಸುವ ಹಕ್ಕುದಾರನು ಬೋವಜನಿಗೆ “ನೀನೇ ತೆಗೆದುಕೋ” ಎಂಬುದಾಗಿ ಹೇಳಿದಾಗ ತನ್ನ ಕೆರವನ್ನೂ ತೆಗೆದುಕೊಟ್ಟನು. ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ: “ನಾನು ಎಲೀಮೆಲೆಕ್‌, ಕಿಲ್ಯೋನ್‌, ಮಹ್ಲೋನ್‌ ಎಂಬವರಿಗಿದ್ದದ್ದನ್ನೆಲ್ಲಾ ನೊವೊಮಿಯಿಂದ ತೆಗೆದುಕೊಂಡಿದ್ದೇನೆ; ಹೊಲದ ಖಾತೆಯು ಸತ್ತುಹೋದ ಮಹ್ಲೋನನ ಹೆಸರಿನಲ್ಲೇ ನಿಂತು ಅವನ ಬಂಧುಗಳಲ್ಲಿಯೂ ಊರಲ್ಲಿಯೂ ಅವನ ಸಂತಾನವು ಉಳಿಯುವಂತೆ ಮೋವಾಬ್ಯಳೂ ಅವನ ಹೆಂಡತಿಯೂ ಆದ ರೂತಳನ್ನು ಹೆಂಡತಿಯನ್ನಾಗಿ ತೆಗೆದುಕೊಂಡಿದ್ದೇನೆ; ಇದಕ್ಕೆ ನೀವು ಸಾಕ್ಷಿಗಳು” ಎಂಬುದಾಗಿ ಹೇಳಿದನು.​—ರೂತಳು 4:​7-10.

ಊರುಬಾಗಲಲ್ಲಿ ಕೂಡಿದ್ದ ಎಲ್ಲಾ ಜನರು ಬೋವಜನಿಗ ಹೀಗಂದರು: “ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ ರಾಹೇಲ್‌, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಸತ್ಕಾರ್ಯವನ್ನು ಮಾಡು; ಬೇತ್ಲೆಹೇಮಿನಲ್ಲಿ ಘನವಂತನಾಗು.”​—ರೂತಳು 4:​11, 12.

ಜನರ ಆಶೀರ್ವಾದದೊಂದಿಗೆ ಬೋವಜನು ರೂತಳನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದನು. ಅವಳು ಅವನಿಗಾಗಿ ಒಂದು ಗಂಡು ಮಗುವನ್ನು ಹೆತ್ತಳು. ಆತನ ಹೆಸರು ಓಬೇದ. ಈ ರೀತಿಯಲ್ಲಿ ರೂತಳು ಮತ್ತು ಬೋವಜನು ರಾಜ ದಾವೀದನ ಮತ್ತು ಫಲಸ್ವರೂಪವಾಗಿ ಮುಂದಕ್ಕೆ ಯೇಸು ಕ್ರಿಸ್ತನ ಪೂರ್ವಜರಾದರು.​—ರೂತಳು 4:​13-17; ಮತ್ತಾಯ 1:​5, 6, 16.

“ಉತ್ತಮವಾದ ಪ್ರತಿಫಲ”

ಈ ವೃತ್ತಾಂತದಾದ್ಯಂತ ಬೋವಜನು, ತನ್ನ ಕೆಲಸದ ಆಳುಗಳಿಗೆ ಮಾಡಿದ ಮೊದಲ ದಯಾಪರ ವಂದನೆಯಿಂದ ಹಿಡಿದು ಎಲೀಮೆಲೆಕನ ಕುಟುಂಬ ಹೆಸರನ್ನು ಉಳಿಸುವ ಜವಾಬ್ದಾರಿಯನ್ನು ಸ್ವೀಕರಿಸಿದ ತನಕ, ಕಾರ್ಯನಿಷ್ಠ ಮತ್ತು ಅಧಿಕಾರವುಳ್ಳ ಒಬ್ಬ ಗಮನಾರ್ಹ ವ್ಯಕ್ತಿಯಾಗಿ ಪರಿಣಮಿಸುತ್ತಾನೆ. ಅದೇ ಸಮಯದಲ್ಲಿ ಅವನು ಆತ್ಮನಿಯಂತ್ರಣ, ನಂಬಿಕೆ ಮತ್ತು ಸಮಗ್ರತೆಯ ವ್ಯಕ್ತಿಯಾಗಿದ್ದನು. ಬೋವಜನು, ಉದಾರ ಸ್ವಭಾವದವನೂ ದಯಾಪರನೂ ನೈತಿಕವಾಗಿ ಶುದ್ಧನೂ ಯೆಹೋವನ ಆಜ್ಞೆಗಳಿಗೆ ಪೂರ್ಣ ವಿಧೇಯತೆಯನ್ನು ತೋರಿಸುವವನೂ ಆಗಿದ್ದನು.

ರೂತಳು, ಯೆಹೋವನಿಗಾಗಿದ್ದ ಅವಳ ಪ್ರೀತಿ, ನೊವೊಮಿಯ ಕಡೆಗಿನ ಅವಳ ನಿಷ್ಠಾವಂತ ಪ್ರೀತಿ, ಮತ್ತು ಉದ್ಯೋಗಶೀಲತೆ ಹಾಗೂ ದೀನತೆಗಾಗಿ ಎದ್ದುಕಾಣುತ್ತಾಳೆ. ಜನರು ಅವಳನ್ನು “ಗುಣವಂತೆ” ಎಂದು ಅಭಿಪ್ರಾಯಪಟ್ಟದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಅವಳು “ಸೋಮಾರಿತನದ ಅನ್ನವನ್ನು ತಿನ್ನ”ಲಿಲ್ಲ, ಮತ್ತು ಅವಳ ಕಠಿನ ಕೆಲಸದ ಕಾರಣ, ಕೊರತೆಯಲ್ಲಿದ್ದ ತನ್ನ ಅತ್ತೆಯೊಂದಿಗೆ ಆಹಾರವನ್ನು ಹಂಚಿಕೊಳ್ಳಲೂ ಅವಳಿಗೆ ಸಾಧ್ಯವಾಯಿತು. (ಜ್ಞಾನೋಕ್ತಿ 31:27, 31) ನೊವೊಮಿಯ ಜವಾಬ್ದಾರಿಯನ್ನು ಸ್ವತಃ ಹೊರುವ ಮೂಲಕ, ಕೊಡುವುದರಿಂದ ಸಿಗುವ ಸಂತೋಷವನ್ನು ರೂತಳು ಅನುಭವಿಸಿದ್ದಿರಬಹುದು.​—ಅ. ಕೃತ್ಯಗಳು 20:35; 1 ತಿಮೊಥೆಯ 5:​3-4, 8.

ರೂತಳ ಪುಸ್ತಕದಲ್ಲಿ ಎಂಥ ಉತ್ತಮ ಮಾದರಿಗಳನ್ನು ನಾವು ಕಾಣುತ್ತೇವೆ! ನೊವೊಮಿಯನ್ನು ಯೆಹೋವನು ಜ್ಞಾಪಿಸಿಕೊಳ್ಳುತ್ತಾನೆ. ರೂತಳು ಯೇಸು ಕ್ರಿಸ್ತನ ಪೂರ್ವಿಕಳಾಗುವ “ಉತ್ತಮವಾದ ಪ್ರತಿಫಲವನ್ನು” ಪಡೆದಳು. ಬೋವಜನು “ಗುಣವಂತೆ” ಸ್ತ್ರೀಯನ್ನು ಪಡೆಯುವ ಮೂಲಕ ಆಶೀರ್ವದಿಸಲ್ಪಟ್ಟನು. ನಮಗಾದರೊ, ಅಂತಹ ವ್ಯಕ್ತಿಗಳಲ್ಲಿ ನಂಬಿಕೆಯ ಮಾದರಿಗಳು ಸಿಗುತ್ತವೆ.

[ಪುಟ 26ರಲ್ಲಿರುವ ಚೌಕ]

ಒಂದು ಆಶಾಕಿರಣ

ನೀವು ಅಸಂತೋಷದ ಸಮಯಗಳಲ್ಲಿ ಜೀವಿಸುತ್ತಿದ್ದೀರೆಂದು ನಿಮಗೆಂದಾದರೂ ಅನಿಸುವುದಾದರೆ, ರೂತಳ ಕಥೆಯು ನಿಮಗೆ ಒಂದು ಆಶಾಕಿರಣವನ್ನು ಒದಗಿಸಸಾಧ್ಯವಿದೆ. ನ್ಯಾಯಸ್ಥಾಪಕರು ಪುಸ್ತಕಕ್ಕೆ ಒಂದು ಅತಿ ಪ್ರಾಮುಖ್ಯವಾದ ಮುಕ್ತಾಯದೋಪಾದಿ ಈ ಪುಸ್ತಕವು ಎದ್ದುಕಾಣುವಂತದ್ದಾಗಿದೆ. ಯೆಹೋವನು ತನ್ನ ಜನರಿಗೆ ಒಬ್ಬ ರಾಜನನ್ನು ಸಿದ್ಧಪಡಿಸಲು, ಅನ್ಯಜನಾಂಗವಾದ ಮೋವಾಬಿನಿಂದ ಬಂದ ದೀನ ವಿಧವೆಯೊಬ್ಬಳನ್ನು ಯಾವ ರೀತಿಯಲ್ಲಿ ಉಪಯೋಗಿಸಿದನು ಎಂಬುದನ್ನು ರೂತಳು ಎಂಬ ಪುಸ್ತಕವು ತಿಳಿಸುತ್ತದೆ. ನ್ಯಾಯಸ್ಥಾಪಕರು ಪುಸ್ತಕದ ಹಿನ್ನಲೆಯಲ್ಲಿ, ರೂತಳ ನಂಬಿಕೆಯು ಆ ಕಾಲದ ಒಂದು ಜ್ಯೋತಿಯಾಗಿ ಪ್ರಕಾಶಿಸುತ್ತದೆ. ರೂತಳ ಕಥೆಯನ್ನು ಓದುವ ಮೂಲಕ, ಕಾಲಗಳು ಎಷ್ಟೇ ಕಠಿನವಾಗಿರಲಿ ದೇವರು ತನ್ನ ಜನರ ಬಗ್ಗೆ ಸದಾ ಕಾಳಜಿ ವಹಿಸುತ್ತಾನೆ ಮತ್ತು ತನ್ನ ಉದ್ದೇಶಗಳನ್ನು ನೆರವೇರಿಸುತ್ತಾನೆ ಎಂಬ ಆಶ್ವಾಸನೆಯನ್ನು ನೀವು ಹೊಂದಬಲ್ಲಿರಿ.

[ಪಾದಟಿಪ್ಪಣಿ]

^ ಪ್ಯಾರ. 24 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.