ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೌಗೋಳಿಕ ದೈವಿಕ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವುದರಲ್ಲಿ ನನ್ನ ಭಾಗ

ಭೌಗೋಳಿಕ ದೈವಿಕ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವುದರಲ್ಲಿ ನನ್ನ ಭಾಗ

ಜೀವನ ಕಥೆ

ಭೌಗೋಳಿಕ ದೈವಿಕ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವುದರಲ್ಲಿ ನನ್ನ ಭಾಗ

ರಾಬರ್ಟ್‌ ನಿಜ್‌ಬೆಟ್‌ ಅವರು ಹೇಳಿದಂತೆ

ಸ್ವಾಸೀಲೆಂಡ್‌ನ ರಾಜನಾದ ಎರಡನೆಯ ಸೊಬೂಜನು ಆತನ ಅರಮನೆಗೆ ನನ್ನನ್ನು ಮತ್ತು ನನ್ನ ಸಹೋದರನಾದ ಜಾರ್ಜ್‌ನನ್ನು ಸ್ವಾಗತಿಸಿದನು. ಅದು 1936ನೆಯ ವರುಷವಾಗಿತ್ತು. ಆದರೂ, ಅಲ್ಲಿ ನಡೆದ ನಮ್ಮ ಸಂಭಾಷಣೆಯು ಈಗಲೂ ನನಗೆ ಸ್ಪಷ್ಟವಾಗಿ ಜ್ಞಾಪಕದಲ್ಲಿದೆ. ಒಬ್ಬ ರಾಜನೊಡನೆ ಇಂಥ ಉದ್ದವಾದ ಸಂಭಾಷಣೆಯನ್ನು ಮಾಡಲು, ಬೈಬಲ್‌ ಶಿಕ್ಷಣದ ಒಂದು ಮಹಾ ಕೆಲಸದಲ್ಲಿ ನನ್ನ ದೀರ್ಘಕಾಲದ ಭಾಗವಹಿಸುವಿಕೆಯೇ ಕಾರಣವಾಗಿತ್ತು. ಈಗ ನನ್ನ ಜೀವಿತದ 95ನೆಯ ವರ್ಷದಲ್ಲಿ, ಆ ಕೆಲಸದಲ್ಲಿ ಭಾಗವಹಿಸಿದರ ನನ್ನ ಪೂರ್ವ ಅನುಭವವನ್ನು ನಾನು ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತೇನೆ. ಆ ಕೆಲಸಕ್ಕಾಗಿ ನಾನು ಐದು ವಿವಿಧ ಭೂಖಂಡಗಳಿಗೆ ಪ್ರಯಾಣಿಸಬೇಕಾಯಿತು.

ಸ್ಕಾಟ್‌ಲೆಂಡಿನ ಎಡಿನ್‌ಬರ್ಗ್‌ನಲ್ಲಿದ್ದ ನನ್ನ ಕುಟುಂಬವನ್ನು, ಡಾಬ್‌ಸನ್‌ ಎಂಬ ಒಬ್ಬ ಚಹಾ ಮಾರಾಟಗಾರರು 1925ರಲ್ಲಿ ಭೇಟಿಮಾಡಲು ಆರಂಭಿಸಿದಾಗ ಇದೆಲ್ಲವೂ ಪ್ರಾರಂಭವಾಯಿತು. ನಾನು ನನ್ನ ಹದಿಹರೆಯದ ಕೊನೆಯಲ್ಲಿದ್ದೆನು ಮತ್ತು ಒಬ್ಬ ಅಪ್ರೆಂಟಿಸ್‌ ಔಷಧಿಗನಾಗಿ ಕೆಲಸಮಾಡುತ್ತಿದ್ದೆ. ನಾನಿನ್ನೂ ಚಿಕ್ಕವನಾಗಿದ್ದರೂ, 1914-18ರಲ್ಲಿ ನಡೆದ ವಿಶ್ವ ಯುದ್ಧವು ಕುಟುಂಬಗಳ ಹಾಗೂ ಜನರ ಧಾರ್ಮಿಕ ಜೀವನದ ಮೇಲೆ ತಂದ ಬದಲಾವಣೆಗಳ ಕುರಿತು ಚಿಂತಿತನಾಗಿದ್ದೆ. ಡಾಬ್‌ಸನ್‌ರವರು ತಮ್ಮ ಒಂದು ಭೇಟಿಯಲ್ಲಿ ನಮ್ಮೊಂದಿಗೆ ಯುಗಗಳ ಕುರಿತಾದ ದೈವಿಕ ಯೋಜನೆ (ಇಂಗ್ಲಿಷ್‌) ಎಂಬ ಪುಸ್ತಕದ ಒಂದು ಪ್ರತಿಯನ್ನು ಬಿಟ್ಟುಹೋದರು. ಒಂದು ನಿರ್ದಿಷ್ಟ “ಯೋಜನೆ” ಇರುವ ಒಬ್ಬ ಬುದ್ಧಿಶಕ್ತಿಯುಳ್ಳ ಸೃಷ್ಟಿಕರ್ತನ ಕುರಿತಾಗಿ ಈ ಪುಸ್ತಕದಲ್ಲಿ ನೀಡಲ್ಪಟ್ಟ ವಿವರಣೆಯು ನನಗೆ ನ್ಯಾಯಸಮ್ಮತವೆನಿಸಿತು. ಮತ್ತು ನಾನು ಆರಾಧಿಸಲು ಬಯಸಿದಂಥ ರೀತಿಯ ದೇವರು ಆತನಾಗಿದ್ದನು.

ಶೀಘ್ರವೇ ನಾನು ಮತ್ತು ತಾಯಿ, ಆ ಸಮಯದಲ್ಲಿ ಬೈಬಲ್‌ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಆರಂಭಿಸಿದೆವು. 1926ರ ಸೆಪ್ಟೆಂಬರ್‌ನಲ್ಲಿ ಗ್ಲಾಸ್‌ಗೋದಲ್ಲಿ ನಡೆದ ಒಂದು ಅಧಿವೇಶನದಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ನಾನು ಮತ್ತು ತಾಯಿ ಇಬ್ಬರೂ ಯೆಹೋವನಿಗೆ ಮಾಡಿದಂತಹ ಸಮರ್ಪಣೆಯನ್ನು ಸಂಕೇತಿಸಿದೆವು. ಪ್ರತಿಯೊಬ್ಬ ದೀಕ್ಷಾಸ್ನಾನಿತ ಅಭ್ಯರ್ಥಿಗೆ ತನ್ನ ಸ್ನಾನದ ಉಡುಪಿನ ಮೇಲೆ ಹಾಕಿಕೊಳ್ಳಲು ಒಂದು ಉದ್ದದ ಅಂಗಿಯನ್ನು ಕೊಡಲಾಯಿತು. ಆ ಅಂಗಿಯು ಮೇಲೆ ಹೋಗದಂತೆ ಅದರ ಅಂಚನ್ನು ಕಣಕಾಲುಗಳಿಗೆ ಕಟ್ಟಿಡಲು ಅದರಲ್ಲಿ ಕಣಕಾಲು ಪಟ್ಟಿಗಳಿದ್ದವು. ಇದನ್ನು ಆ ಸಮಯದಲ್ಲಿ, ಇಂಥ ಗಂಭೀರವಾದ ಸಂದರ್ಭಕ್ಕೆ ಯೋಗ್ಯವಾದ ಉಡುಗೆ ಎಂದು ಪರಿಗಣಿಸಲಾಗಿತ್ತು.

ಆ ಆರಂಭದ ದಿನಗಳಲ್ಲಿ, ಅನೇಕ ವಿಷಯಗಳ ಕುರಿತಾದ ನಮ್ಮ ತಿಳುವಳಿಕೆಯಲ್ಲಿ ಪರಿಷ್ಕೃತಗೊಳ್ಳುವ ಆವಶ್ಯಕತೆಯಿತ್ತು. ಎಲ್ಲರಲ್ಲದಿದ್ದರೂ, ಸಭೆಯ ಹೆಚ್ಚಿನ ಸದಸ್ಯರು ಕ್ರಿಸ್ಮಸ್‌ ಹಬ್ಬವನ್ನು ಆಚರಿಸುತ್ತಿದ್ದರು. ತೀರ ಕೊಂಚ ಮಂದಿ ಮಾತ್ರವೇ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಿದರು. ಭಾನುವಾರದ ಸಾಹಿತ್ಯ ವಿತರಣೆಯನ್ನು ಕೆಲವು ಹಿರಿಯರು ಸಹ ವಿರೋಧಿಸಿದರು. ಇದು ಸಬ್ಬತ್‌ ದಿನದಲ್ಲಿ ಕೆಲಸಮಾಡಬಾರದೆಂಬ ನಿಯಮವನ್ನು ಉಲ್ಲಂಘಿಸುತ್ತದೆಂದು ಅವರು ಭಾವಿಸಿದರು. ಹಾಗಿದ್ದರೂ, 1925ರ ಕಾವಲಿನಬುರುಜು ಲೇಖನಗಳಲ್ಲಿ, “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು” ಎಂಬುದಾಗಿ ತಿಳಿಸುವ ಮಾರ್ಕ 13:10ರಂಥ ವಚನಗಳಿಗೆ ಹೆಚ್ಚು ಮಹತ್ವವನ್ನು ಕೊಡಲಾಯಿತು.

ಈ ಲೋಕವ್ಯಾಪಕ ಕೆಲಸವು ಹೇಗೆ ಪೂರೈಸಲ್ಪಡುವುದು? ಮನೆಯಿಂದ ಮನೆಯ ಸಾರುವ ಕೆಲಸದ ನನ್ನ ಮೊದಲ ಸಾಧಾರಣವಾದ ಪ್ರಯತ್ನದಲ್ಲಿ, ನಾನು ಆಸಕ್ತಿಕರವಾದ ಧಾರ್ಮಿಕ ಪುಸ್ತಕಗಳನ್ನು ಮಾರುತ್ತಿದ್ದೇನೆ ಎಂದು ಮನೆಯವರಿಗೆ ಹೇಳಿ, ಆಮೇಲೆ, ಬೈಬಲಿನ ಹತ್ತು ಮುಖ್ಯ ಬೋಧನೆಗಳನ್ನು ವಿವರಿಸುವ ದೇವರ ಕಿನ್ನರಿ (ಇಂಗ್ಲಿಷ್‌) ಪುಸ್ತಕದ ಒಂದು ಪ್ರತಿಯನ್ನು ನೀಡಿದೆ. ಈ ಪುಸ್ತಕದಲ್ಲಿ ವಿವರಿಸಲಾದ ಬೈಬಲಿನ ಹತ್ತು ಮುಖ್ಯ ಬೋಧನೆಗಳನ್ನು ಕಿನ್ನರಿಯ ಹತ್ತು ತಂತಿಗಳಿಗೆ ಹೋಲಿಸಲಾಗಿತ್ತು. ಮುಂದಕ್ಕೆ, ನಮಗೆ ಒಂದು ಟೆಸ್ಟಿಮನಿ ಕಾರ್ಡ್‌ನ್ನು ಕೊಡಲಾಯಿತು. ಅದರಲ್ಲಿ ಮನೆಯವರು ಓದಿ ತಿಳಿಯಲು ಒಂದು ಸಂಕ್ಷಿಪ್ತವಾದ ಸಂದೇಶವಿತ್ತು. ನಾಲ್ಕುವರೆ ನಿಮಿಷದ ಭಾಷಣಗಳ ರೆಕಾರ್ಡ್‌ಗಳನ್ನೂ ಉಪಯೋಗಿಸುತ್ತಿದ್ದೆವು. ಇದನ್ನು, ಸಾಗಿಸಲು ಸಾಧ್ಯವಿರುವ ಫೋನೋಗ್ರಾಫ್‌ಗಳಲ್ಲಿ ನುಡಿಸಸಾಧ್ಯವಿತ್ತು. ಆದರೆ ಈ ಯಂತ್ರದ ಆರಂಭದ ಮಾದರಿಗಳು, ತೆಗೆದುಕೊಂಡು ಹೋಗಲು ಬಹಳ ಭಾರವಾದದ್ದಾಗಿದ್ದವು, ಆದರೆ ತದನಂತರ ಬಂದ ಮಾದರಿಗಳಾದರೋ ಕಡಿಮೆ ಭಾರವಾಗಿದ್ದವು ಮತ್ತು ಅದನ್ನು ಲಂಬಕಾರವಾಗಿಯೂ ಇಟ್ಟು ನುಡಿಸಸಾಧ್ಯವಿತ್ತು.

ಇಸವಿ 1925ರಿಂದ 1930ಗಳಲ್ಲಿ, ನಮಗೆ ಆಗ ತಿಳಿದಿರುವಷ್ಟರ ಮಟ್ಟಿಗೆ ಅತ್ಯುತ್ತಮವಾದ ರೀತಿಯಲ್ಲಿ ಸಾಕ್ಷಿಕೊಡುವ ಕೆಲಸವನ್ನು ಮಾಡಿದೆವು. ನಂತರ, 1940ರ ದಶಕದ ಆರಂಭದಲ್ಲಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ಎಲ್ಲಾ ಸಭೆಗಳಲ್ಲಿ ಸ್ಥಾಪಿಸಲಾಯಿತು. ನಮಗೆ ಕಿವಿಗೊಡುವ ಮನೆಯವರೊಂದಿಗೆ ನಾವೇ ನೇರವಾಗಿ ಮಾತಾಡುವ ಮೂಲಕ ವ್ಯಕ್ತಿಗತವಾಗಿ ರಾಜ್ಯದ ಸಂದೇಶವನ್ನು ಜನರಿಗೆ ಸಾರಲು ನಮಗೆ ಕಲಿಸಲಾಯಿತು. ಆಸಕ್ತ ಜನರೊಂದಿಗೆ ಮನೆ ಬೈಬಲ್‌ ಅಧ್ಯಯನವನ್ನು ನಡೆಸುವ ಪ್ರಾಮುಖ್ಯತೆಯನ್ನೂ ನಾವು ಕಲಿತೆವು. ಒಂದರ್ಥದಲ್ಲಿ ನಾವಿದನ್ನು ಆಧುನಿಕ ದಿನದ ಲೋಕವ್ಯಾಪಕ ಬೈಬಲ್‌ ಶಿಕ್ಷಣ ಕೆಲಸದ ಆರಂಭದ ಹಂತವೆಂದು ಹೇಳಬಹುದು.

ಸಹೋದರ ರದರ್‌ಫರ್ಡರಿಂದ ಉತ್ತೇಜನ

ಈ ಶಿಕ್ಷಣ ಕೆಲಸದಲ್ಲಿ ಹೆಚ್ಚಾಗಿ ಭಾಗವಹಿಸಬೇಕೆಂಬ ನನ್ನ ಅಪೇಕ್ಷೆಯು, 1931ರಲ್ಲಿ ಪೂರ್ಣ ಸಮಯದ ಪಯನೀಯರ್‌ ಸೇವೆಯಲ್ಲಿ ಸೇರುವಂತೆ ನನ್ನನ್ನು ನಡಿಸಿತು. ಲಂಡನ್‌ನಲ್ಲಿನ ಒಂದು ಅಧಿವೇಶನದ ನಂತರ ನಾನು ಸೇವೆಯನ್ನು ಆರಂಭಿಸಬೇಕಿತ್ತು. ಆದರೆ ಅಧಿವೇಶನದ ಒಂದು ಮಧ್ಯಾಹ್ನದೂಟದ ಅವಧಿಯಲ್ಲಿ, ಆ ಸಮಯದಲ್ಲಿ ಪಯನೀಯರ್‌ ಕೆಲಸದ ಮೇಲ್ವಿಚಾರಕರಾಗಿದ್ದ ಸಹೋದರ ಜೋಸೆಫ್‌ ರದರ್‌ಫರ್ಡರು ನನ್ನೊಂದಿಗೆ ಮಾತಾಡಲು ಬಯಸುತ್ತಾರೆಂದು ಹೇಳಿದರು. ಅವರು ಒಬ್ಬ ಪಯನೀಯರರನ್ನು ಆಫ್ರಿಕ ದೇಶಕ್ಕೆ ಕಳುಹಿಸುವ ಯೋಜನೆಗಳನ್ನು ಮಾಡಿದ್ದರು. “ನೀನು ಹೋಗಲು ಸಿದ್ಧನಿದ್ದೀಯೋ?” ಎಂದು ಅವರು ನನ್ನನ್ನು ಕೇಳಿದರು. ನನಗೆ ಇದನ್ನು ಕೇಳಿ ಆಶ್ಚರ್ಯವಾದರೂ, “ಸರಿ, ನಾನು ಹೋಗುತ್ತೇನೆ” ಎಂದು ದೃಢನಿಶ್ಚಯದಿಂದ ಹೇಳಿದೆ.

ಆ ದಿನಗಳಲ್ಲಿ ನಮ್ಮ ಮುಖ್ಯ ಗುರಿಯು ಆದಷ್ಟು ಹೆಚ್ಚು ಬೈಬಲ್‌ ಸಾಹಿತ್ಯವನ್ನು ವಿತರಿಸುವುದೇ ಆಗಿತ್ತು ಮತ್ತು ಇದನ್ನು ಮಾಡಲು ನಾವು ಸತತವಾಗಿ ಪ್ರಯಾಣಿಸುತ್ತಾ ಇರಬೇಕಿತ್ತು. ಆ ಸಮಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಹೆಚ್ಚಿನ ಸಹೋದರರಂತೆಯೇ, ನನಗೂ ಅವಿವಾಹಿತನಾಗಿಯೇ ಉಳಿಯುವಂತೆ ಉತ್ತೇಜಿಸಲಾಯಿತು. ನನ್ನ ಕ್ಷೇತ್ರವು ದಕ್ಷಿಣ ಆಫ್ರಿಕದ ಕೇಪ್‌ ಟೌನ್‌ನಿಂದ ಆರಂಭವಾಗಿ, ಆ ಭೂಖಂಡದ ಪೂರ್ವ ಭಾಗದುದ್ದಕ್ಕೂ ಹರಡಿತ್ತು. ಇದರಲ್ಲಿ ಹಿಂದೂ ಮಹಾಸಾಗರದ ಕರಾವಳಿ ತೀರದ ದ್ವೀಪಗಳೂ ಸೇರಿದ್ದವು. ಪಶ್ಚಿಮ ಗಡಿಯನ್ನು ತಲಪಲು ನಾನು ಆಫ್ರಿಕದ ಕಾಲಹಾರೀ ಮರುಭೂಮಿಯ ಬಿಸಿಯಾದ ಮರಳನ್ನು ದಾಟುತ್ತಾ ವಿಕ್ಟೋರಿಯ ಸರೋವರದಲ್ಲಿ ನೈಲ್‌ ನದಿಯ ಉಗಮದ ವರೆಗೆ ಪ್ರಯಾಣಿಸಬೇಕಿತ್ತು. ಈ ವಿಸ್ತಾರವಾದ ಪ್ರದೇಶದಲ್ಲಿರುವ ಒಂದು ಅಥವಾ ಹೆಚ್ಚಿನ ಆಫ್ರಿಕನ್‌ ದೇಶಗಳಲ್ಲಿ ನಾನು ಮತ್ತು ನನ್ನ ಸಂಗಡಿಗನು ಪ್ರತಿ ವರ್ಷ ಆರು ತಿಂಗಳುಗಳನ್ನು ಕಳೆಯಬೇಕಿತ್ತು.

ಆತ್ಮಿಕ ಐಶ್ವರ್ಯದ ಇನ್ನೂರು ಕಾರ್ಟನ್‌ಗಳು

ನಾನು ಕೇಪ್‌ ಟೌನ್‌ಗೆ ಬಂದು ತಲಪಿದಾಗ, ಪೂರ್ವ ಆಫ್ರಿಕಕ್ಕೆ ನಿಗದಿಸಲಾದ ಸಾಹಿತ್ಯದ 200 ಕಾರ್ಟನ್‌ಗಳನ್ನು ನನಗೆ ತೋರಿಸಲಾಯಿತು. ಈ ಸಾಹಿತ್ಯವು ನಾಲ್ಕು ಯೂರೋಪಿಯನ್‌ ಮತ್ತು ನಾಲ್ಕು ಏಷಿಯನ್‌ ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿತ್ತು. ಆದರೆ ಇವುಗಳಲ್ಲಿ ಯಾವುದೇ ಸಾಹಿತ್ಯವು ಆಫ್ರಿಕನ್‌ ಭಾಷೆಗಳಲ್ಲಿರಲಿಲ್ಲ. ನಾನು ಇಲ್ಲಿಗೆ ಬರುವದಕ್ಕಿಂತಲೂ ಮುಂಚೆಯೆ ಇಷ್ಟೊಂದು ಸಾಹಿತ್ಯವು ಏಕೆ ಇಲ್ಲಿದೆ ಎಂದು ವಿಚಾರಿಸಿದೆ. ಇದೆಲ್ಲವೂ, ಇತ್ತೀಚೆಗೆ ಸಾರುವ ಕೆಲಸಕ್ಕಾಗಿ ಕೆನ್ಯಕ್ಕೆ ಹೋಗಿದ್ದ ಇಬ್ಬರು ಪಯನೀಯರ್‌ ಸಹೋದರರಾದ ಫ್ರ್ಯಾಂಕ್‌ ಮತ್ತು ಗ್ರೇ ಸ್ಮಿತ್‌ರವರಿಗಾಗಿ ಕಳುಹಿಸಲ್ಪಟ್ಟಿತ್ತು ಎಂದು ನನಗೆ ತಿಳಿಸಲಾಯಿತು. ಆ ಇಬ್ಬರು ಸಹೋದರರು ಕೆನ್ಯವನ್ನು ತಲಪಿದ ಕೂಡಲೇ ಮಲೇರಿಯ ರೋಗಕ್ಕೆ ತುತ್ತಾದರು ಮತ್ತು ದುಃಖಕರವಾಗಿ, ಆ ಕಾಯಿಲೆಯಿಂದಾಗಿ ಫ್ರ್ಯಾಂಕ್‌ ತೀರಿಕೊಂಡರು.

ಈ ಘಟನೆಯು, ನನ್ನ ಪರಿಸ್ಥಿತಿಯ ಕುರಿತು ನಾನು ಗಂಭೀರವಾಗಿ ಯೋಚಿಸುವಂತೆ ಮಾಡಿತಾದರೂ, ಅದು ನನ್ನ ಧೃತಿಗೆಡಿಸಲಿಲ್ಲ. ನಾನು ಮತ್ತು ನನ್ನ ಸಂಗಡಿಗನಾದ ಡೇವಿಡ್‌ ನಾರ್ಮನ್‌, ಕೇಪ್‌ ಟೌನ್‌ನಿಂದ ಹಡಗಿನಲ್ಲಿ, 5,000 ಕಿಲೊಮೀಟರ್‌ ದೂರದಲ್ಲಿದ್ದ ನಮ್ಮ ಮೊದಲ ನೇಮಕವಾದ ಟಾನ್ಸೇನಿಯಕ್ಕೆ ಹೋದೆವು. ಕೆನ್ಯದ ಮಾಂಬಾಸದಲ್ಲಿದ್ದ ಒಬ್ಬ ಟ್ರಾವೆಲ್‌ ಏಜೆಂಟನು ನಮ್ಮ ಸಾಹಿತ್ಯ ಸರಬರಾಯಿಯನ್ನು ನೋಡಿಕೊಂಡನು ಮತ್ತು ಅಲ್ಲಿಂದ ನಾವು ಕೇಳಿಕೊಂಡ ಸ್ಥಳಕ್ಕೆ ಸಾಹಿತ್ಯದ ಕಾರ್ಟನ್‌ಗಳನ್ನು ಕಳುಹಿಸುತ್ತಿದ್ದನು. ಮೊದಲಾಗಿ ನಾವು ವ್ಯಾಪಾರದ ಪ್ರಾಂತಗಳಲ್ಲಿ​—ಪ್ರತಿಯೊಂದು ಪಟ್ಟಣದಲ್ಲಿನ ಅಂಗಡಿಗಳು ಹಾಗೂ ಆಫೀಸುಗಳಲ್ಲಿ​—ಸಾಕ್ಷಿಕಾರ್ಯವನ್ನು ಮಾಡಿದೆವು. ನಮ್ಮ ಸಾಹಿತ್ಯ ಸರಬರಾಯಿಯು, 9 ಪುಸ್ತಕಗಳ ಹಾಗೂ 11 ಪುಸ್ತಿಕೆಗಳ ಸೆಟ್‌ಗಳಿಂದ ಕೂಡಿತ್ತು. ಅವುಗಳ ವಿವಿಧ ಬಣ್ಣಗಳ ಕಾರಣ, ಅದನ್ನು ಕಾಮನಬಿಲ್ಲು ಸೆಟ್‌ಗಳೆಂದು ಕರೆಯಲಾಯಿತು.

ನಂತರ, ಪೂರ್ವ ಕರಾವಳಿಯಿಂದ 30 ಕಿಲೊಮೀಟರ್‌ ದೂರದಲ್ಲಿದ್ದ ಜಾಂಜಿಬಾರ್‌ ದ್ವೀಪಕ್ಕೆ ಹೋಗಲು ನಾವು ನಿರ್ಣಯಿಸಿದೆವು. ಅನೇಕ ಶತಮಾನಗಳ ವರೆಗೆ, ಜಾಂಜಿಬಾರ್‌ ದ್ವೀಪವು ಗುಲಾಮ ವ್ಯಾಪಾರದ ಒಂದು ಕೇಂದ್ರವಾಗಿತ್ತಾದರೂ, ಅದು ಲವಂಗಗಳಿಗೂ ಹೆಸರುವಾಸಿಯಾಗಿತ್ತು. ಲವಂಗಗಳ ಸುವಾಸನೆಯು ಪಟ್ಟಣದಲ್ಲೆಲ್ಲಾ ಹರಡಿತ್ತು. ಈ ಪಟ್ಟಣವು ಯಾವುದೇ ನಕಾಸೆ ಇಲ್ಲದೆ ಕಟ್ಟಲ್ಪಟ್ಟಿದ್ದರಿಂದ ಇಲ್ಲಿ ನಮ್ಮ ದಾರಿಯನ್ನು ಕಂಡುಹಿಡಿಯುವುದು ಸ್ವಲ್ಪ ಹೆದರಿಕೆಹುಟ್ಟಿಸುವಂಥ ಕೆಲಸವಾಗಿತ್ತು. ಬೀದಿಗಳಲ್ಲಿ, ನಮ್ಮನ್ನು ಕಕ್ಕಾಬಿಕ್ಕಿಗೊಳಿಸುವಷ್ಟು ತಿರುವು ಮುರುವುಗಳಿದ್ದದರಿಂದ ನಾವು ಸುಲಭವಾಗಿ ದಾರಿ ತಪ್ಪುತ್ತಿದ್ದೆವು. ನಾವು ಉಳುಕೊಂಡಿದ್ದ ಹೋಟೆಲಿನಲ್ಲಿ ಸಾಕಷ್ಟು ಸೌಕರ್ಯಗಳಿದ್ದರೂ, ಮೊಳೆಹೊಡೆಯಲ್ಪಟ್ಟಿದ್ದ ಅದರ ಬಾಗಿಲುಗಳು ಹಾಗೂ ಅದರ ದಪ್ಪವಾದ ಗೋಡೆಗಳಿಂದಾಗಿ ಅದು ಹೋಟೆಲಿಗಿಂತ ಹೆಚ್ಚಾಗಿ ಒಂದು ಸೆರೆಮನೆಯಂತೆಯೇ ಕಾಣುತ್ತಿತ್ತು. ಆದರೂ, ಅಲ್ಲಿ ನಮಗೆ ಒಳ್ಳೆಯ ಪ್ರತಿಫಲಗಳು ದೊರೆತವು. ಅರಬ್ಬಿಗಳು, ಭಾರತೀಯರು ಮತ್ತು ಇನ್ನಿತರರು ನಮ್ಮ ಸಾಹಿತ್ಯವನ್ನು ಮನಃಪೂರ್ವಕವಾಗಿ ಸ್ವೀಕರಿಸುವುದನ್ನು ನೋಡಿ ನಾವು ಸಂತೋಷಪಟ್ಟೆವು.

ರೈಲುಗಳು, ದೋಣಿಗಳು, ಮತ್ತು ಕಾರುಗಳು

ಆ ದಿನಗಳಲ್ಲಿ ಪೂರ್ವ ಆಫ್ರಿಕದಲ್ಲಿ ಪ್ರಯಾಣಿಸುವುದು ಸುಲಭವಾಗಿರಲಿಲ್ಲ. ಉದಾಹರಣೆಗೆ, ಒಮ್ಮೆ ನಾವು ಮಾಂಬಾಸದಿಂದ ಕೆನ್ಯದ ಮೇಲ್ನಾಡುಗಳಿಗೆ ಹೋಗುತ್ತಿರುವಾಗ ಮಿಡತೆ ಉಪದ್ರವದ ಕಾರಣ ನಮ್ಮ ರೈಲನ್ನು ನಿಲ್ಲಿಸಬೇಕಾಯಿತು. ಕೋಟ್ಯಾಂತರ ಮಿಡತೆಗಳು ನೆಲವನ್ನು ಮತ್ತು ರೈಲು ಕಂಬಿಗಳನ್ನು ಮುಚ್ಚಿಕೊಂಡಿದ್ದವು. ಈ ಕಾರಣದಿಂದ ರೈಲು ಕಂಬಿಗಳ ಮೇಲೆ ರೈಲಿನ ಚಕ್ರಗಳು ತುಂಬ ಜಾರುತ್ತಿದ್ದವು. ಈ ಸಮಸ್ಯೆಯನ್ನು ಪರಿಹರಿಸಲು ಒಂದೇ ವಿಧ, ರೈಲಿನಿಂದ ಕುದಿಯುತ್ತಿರುವ ಬಿಸಿನೀರನ್ನು ಉಪಯೋಗಿಸಿ, ರೈಲು ಮುಂದೆ ಚಲಿಸುತ್ತಿರುವಾಗ ಕಂಬಿಗಳನ್ನು ತೊಳೆಯುವುದೇ ಆಗಿತ್ತು. ಈ ರೀತಿಯಲ್ಲಿ ಮಿಡತೆಗಳ ಹಿಂಡನ್ನು ದಾಟುವ ತನಕ ನಿಧಾನವಾಗಿ ಮುಂದೆ ಚಲಿಸಿದೆವು. ಮುಂದಕ್ಕೆ ರೈಲು ಎತ್ತರದ ಪ್ರದೇಶವನ್ನು ಏರಲು ಆರಂಭಿಸಿದಾಗ, ನಾವು ಒಂದು ತಂಪಾದ ವಾತಾವರಣವನ್ನು ಆನಂದಿಸಸಾಧ್ಯವಾಯಿತು ಮತ್ತು ಇದು ನಮಗೆ ಎಂತಹ ಒಂದು ಉಪಶಮನವಾಗಿತ್ತು!

ಕರಾವಳಿ ಪ್ರದೇಶಗಳನ್ನು ರೈಲು ಹಾಗೂ ದೋಣಿಗಳಿಂದ ಸುಲಭವಾಗಿ ತಲಪಲು ಸಾಧ್ಯವಿದ್ದರೂ, ಗ್ರಾಮೀಣ ಕ್ಷೇತ್ರಗಳಿಗೆ ಹೋಗಲು ಕಾರುಗಳೇ ಅತ್ಯುತ್ತಮವಾಗಿದ್ದವು. ನನ್ನ ತಮ್ಮನಾದ ಜಾರ್ಜ್‌ ನನ್ನೊಂದಿಗೆ ಜೊತೆಗೂಡಿದಾಗ ನನಗೆ ಸಂತೋಷವಾಯಿತು. ಏಕೆಂದರೆ ಆಗ ನಾವು ದೊಡ್ಡದಾದ ಒಂದು ವ್ಯಾನ್‌ ಅನ್ನು ಖರೀದಿಸಲು ಸಾಧ್ಯವಾಯಿತು. ಅದು ಎಷ್ಟು ದೊಡ್ಡದಾಗಿತ್ತೆಂದರೆ, ಮಂಚಗಳು, ಒಂದು ಅಡಿಗೆ ಮನೆ, ಸಂಗ್ರಹಣ ಸ್ಥಳ, ಮತ್ತು ಸೊಳ್ಳೆ ನಿರೋಧಕ ಕಿಟಕಿಗಳಿಂದ ಅದನ್ನು ಸಜ್ಜುಗೊಳಿಸಸಾಧ್ಯವಿತ್ತು. ಅದರ ಚಾವಣಿಗೆ ನಾವು ಧ್ವನಿವರ್ಧಕಗಳನ್ನು ಜೋಡಿಸಿದೆವು. ಈ ರೀತಿಯಲ್ಲಿ ಸನ್ನದ್ಧರಾಗಿ, ಹಗಲಿನಲ್ಲಿ ಮನೆಯಿಂದ ಮನೆಯ ಸೇವೆಯನ್ನು ಮಾಡಲು ಮತ್ತು ಜನರನ್ನು ಮಾರುಕಟ್ಟೆ ಚೌಕಗಳಲ್ಲಿ ನಡೆಯುವ ಸಾಯಂಕಾಲದ ಸಮಯದ ಭಾಷಣಗಳಿಗೆ ಆಮಂತ್ರಿಸಲು ಸಾಧ್ಯವಾಯಿತು. ನಾವು ನುಡಿಸುತ್ತಿದ್ದ ಒಂದು ಜನಪ್ರಿಯ ಭಾಷಣದ ರೆಕಾರ್ಡಿಂಗ್‌ “ನರಕವು ಬಿಸಿಯಾಗಿದೆಯೊ?” ಎಂಬ ಶೀರ್ಷಿಕೆಯುಳ್ಳದ್ದಾಗಿತ್ತು. ನಾವು ಒಮ್ಮೆ ದಕ್ಷಿಣ ಆಫ್ರಿಕದಿಂದ ಕೆನ್ಯದ ವರೆಗೆ, ನಮ್ಮ ಈ “ಚಲಿಸುವ ಮನೆ”ಯಲ್ಲಿ 3,000 ಕಿಲೊಮೀಟರ್‌ಗಳಷ್ಟು ದೂರದ ಪ್ರಯಾಣವನ್ನು ಮಾಡಿದೆವು. ಈ ಪ್ರಯಣದ ಸಮಯದಲ್ಲಿ ಆಫ್ರಿಕನ್‌ ಭಾಷೆಗಳಲ್ಲಿ ವಿವಿಧ ಪುಸ್ತಿಕೆಗಳ ಸರಬರಾಜನ್ನು ಪಡೆದುಕೊಳ್ಳಲು ನಾವು ಬಹಳ ಸಂತೋಷಿಸಿದೆವು. ಈ ಪುಸ್ತಿಕೆಗಳನ್ನು ಅಲ್ಲಿನ ಸ್ಥಳಿಕ ಜನರು ಬಹಳ ಆಸಕ್ತಿಯಿಂದ ನಮ್ಮಿಂದ ಸ್ವೀಕರಿಸಿದರು.

ಇಂಥ ಪ್ರಯಾಣಗಳಲ್ಲಿ ನಮಗಾಗುತ್ತಿದ್ದ ಒಂದು ಹಿತಕರ ಅನುಭವವೇನಂದರೆ, ನಾವು ಆಫ್ರಿಕದ ಅನೇಕ ವನ್ಯಜೀವಿಗಳನ್ನು ನೋಡಸಾಧ್ಯವಿತ್ತು. ನಮ್ಮ ಸಂರಕ್ಷಣೆಗಾಗಿ ಕತ್ತಲಾದ ಮೇಲೆ ನಾವು ವ್ಯಾನ್‌ನಿಂದ ಹೊರಗೆ ಬರುತ್ತಿರಲಿಲ್ಲ. ಆದರೆ ಯೆಹೋವನ ಇಷ್ಟೊಂದು ವೈವಿಧ್ಯಮಯ ಪ್ರಾಣಿ ಸೃಷ್ಟಿಯನ್ನು ಅವುಗಳ ಸಹಜ ಸನ್ನಿವೇಶದಲ್ಲಿ ನೋಡುವುದು ನಿಜವಾಗಿಯೂ ನಂಬಿಕೆಯನ್ನು ಬಲಪಡಿಸುವಂಥದ್ದಾಗಿತ್ತು.

ವಿರೋಧವು ಆರಂಭಿಸಿತು

ಕಾಡು ಮೃಗಗಳ ಕುರಿತು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಇದೆಲ್ಲವೂ, ವಿವಿಧ ಸರಕಾರಿ ಅಧಿಕಾರಿಗಳ ಹಾಗೂ ಕೋಪದಿಂದ ಕುದಿಯುತ್ತಿದ್ದ ಕೆಲವು ಧಾರ್ಮಿಕ ಮುಖಂಡರ ವಿರೋಧದ ಮುಂದೆ ನಾವು ಏನನ್ನು ಮಾಡಬೇಕಾಗುತ್ತಿತ್ತೊ ಅದರೊಂದಿಗೆ ಹೋಲಿಸುವಾಗ ಏನೂ ಇಲ್ಲ. ಅವರು ನಮ್ಮ ರಾಜ್ಯ ಸಾರುವಿಕೆಯ ಕೆಲಸವನ್ನು ಬಹಿರಂಗವಾಗಿ ವಿರೋಧಿಸಲು ಆರಂಭಿಸಿದರು. ನಾವು ಎದುರಿಸಬೇಕಾದ ಒಂದು ದೊಡ್ಡ ಸಮಸ್ಯೆಯು, “ದೇವರ ಮಗ” ಎಂದು ಅರ್ಥೈಸುವ ಹೆಸರನ್ನು ಹೊಂದಿದ್ದ ಮ್ವಾನಾ ಲೀಸಾ ಎಂಬ ಒಬ್ಬ ಧರ್ಮಾಂಧನು ಮತ್ತು ಕಿಟವಲ ಎಂಬ ಹೆಸರಿನ ಅವನ ಗುಂಪಾಗಿತ್ತು. ದುಃಖಕರವಾಗಿ ಕಿಟವಲ ಎಂಬುದರ ಅರ್ಥವು “ಕಾವಲಿನಬುರುಜು [ವಾಚ್‌ಟವರ್‌]” ಎಂದಾಗಿದೆ. ನಾವು ಇಲ್ಲಿಗೆ ಬರುವುದಕ್ಕಿಂತ ಸ್ವಲ್ಪ ಸಮಯದ ಹಿಂದೆ ಈ ವ್ಯಕ್ತಿ ಅನೇಕ ಆಫ್ರಿಕನ್‌ ಜನರನ್ನು, ತಾನು ಅವರಿಗೆ ದೀಕ್ಷಾಸ್ನಾನ ಕೊಡುವುದಾಗಿ ಹೇಳಿ ನೀರಿನಲ್ಲಿ ಮುಳುಗಿಸಿ ಕೊಂದಿದ್ದನು. ಆಮೇಲೆ ಇವನನ್ನು ಹಿಡಿದು ಬಂಧಿಸಿ, ಗಲ್ಲಿಗೇರಿಸಲಾಯಿತು. ಮುಂದಕ್ಕೆ, ಅವನನ್ನು ಗಲ್ಲಿಗೇರಿಸಿದ ವ್ಯಕ್ತಿಯೊಂದಿಗೆ ಮಾತನಾಡುವ ಸಂದರ್ಭವು ನನಗೆ ಒದಗಿಬಂತು. ಮ್ವಾನಾ ಲೀಸಾಗೆ ನಮ್ಮ ವಾಚ್‌ ಟವರ್‌ ಸೊಸೈಟಿಯೊಂದಿಗೆ ಯಾವ ಸಂಬಂಧವೂ ಇರಲಿಲ್ಲ ಎಂಬುದನ್ನು ನಾನು ಆ ವ್ಯಕ್ತಿಗೆ ಸ್ಪಷ್ಟವಾಗಿ ವಿವರಿಸಿದೆ.

ಅನೇಕ ಯೂರೋಪಿಯನ್‌ ಜನರಿಂದಲೂ ನಮಗೆ ಸಮಸ್ಯೆಗಳಿದ್ದವು. ಮುಖ್ಯವಾಗಿ ಹಣಕಾಸಿನ ಕಾರಣಗಳಿಗಾಗಿ ಅವರು ನಮ್ಮ ಶೈಕ್ಷಣಿಕ ಕೆಲಸವನ್ನು ಇಷ್ಟಪಡುತ್ತಿರಲಿಲ್ಲ. ಒಬ್ಬ ಉಗ್ರಾಣದ ಮಾಲೀಕನು ವಿವರಿಸಿದ್ದು: “ಬಿಳಿಯ ಜನರು ಈ ದೇಶದಲ್ಲಿ ಉಳಿಯಬೇಕಾದರೆ, ಆಫ್ರಿಕನರಿಗೆ ತಮ್ಮ ಅಗ್ಗದ ದುಡಿಮೆಯು ಹೇಗೆ ದುರುಪಯೋಗಿಸಲ್ಪಡುತ್ತಿದೆ ಎಂಬುದು ತಿಳಿಯಬಾರದು.” ಇದೇ ಕಾರಣಕ್ಕಾಗಿ, ಚಿನ್ನದ ಗಣಿ ಕಂಪೆನಿಯ ಮುಖ್ಯಸ್ಥನು ನನ್ನನ್ನು ಅವನ ಆಫೀಸಿನಿಂದ ಹೊರಗೆ ಹೋಗುವಂತೆ ಕಡಾಖಂಡಿತವಾಗಿ ಹೇಳಿದನು. ಆಮೇಲೆ ನಾನು ಬೀದಿಯ ವರೆಗೆ ಹೋಗುವ ತನಕ ಅವನು ಕೋಪದಿಂದ ನನ್ನ ಹಿಂದೆಯೇ ಬಂದನು.

ನಿಸ್ಸಂಶಯವಾಗಿ, ಇಂಥ ಧಾರ್ಮಿಕ ಹಾಗೂ ವ್ಯಾಪಾರಸ್ಥರ ವಿರೋಧದಿಂದ ಪ್ರಭಾವಿಸಲ್ಪಟ್ಟು ರೊಡೇಶಿಯಾದ (ಈಗ ಸಿಂಬಾಬ್ವೆ) ಸರಕಾರವು ನಾವು ದೇಶವನ್ನು ಬಿಟ್ಟು ಹೋಗುವಂತೆ ಕಟ್ಟಕಡೆಗೆ ಆದೇಶವನ್ನು ಕೊಟ್ಟಿತು. ಈ ನಿರ್ಣಯವನ್ನು ನಾವು ಅಪೀಲುಮಾಡಿದೆವು ಮತ್ತು ಆ ದೇಶದಲ್ಲಿ ಉಳಿಯಲು ಸಹ ನಮಗೆ ಅನುಮತಿ ಸಿಕ್ಕಿತು. ಆದರೆ, ನಾವು ಆಫ್ರಿಕನರಿಗೆ ಸಾರಬಾರದೆಂಬ ಷರತ್ತನ್ನೂ ವಿಧಿಸಲಾಯಿತು. ನಮ್ಮ ಸಾಹಿತ್ಯ “ಆಫ್ರಿಕದ ಜನರಿಗೆ ಸೂಕ್ತವಲ್ಲ” ಎಂಬುದಾಗಿ ಒಬ್ಬ ಅಧಿಕಾರಿಯು ಇದಕ್ಕೆ ಕಾರಣವನ್ನು ನೀಡಿದನು. ಆಫ್ರಿಕದ ಇತರ ದೇಶಗಳಲ್ಲಿ, ಆಫ್ರಿಕನರ ನಡುವೆ ನಮ್ಮ ಶಿಕ್ಷಣ ಕೆಲಸ ಯಾವುದೇ ಅಡ್ಡಿಯಿಲ್ಲದೆ ನಡೆಯಿತು. ಮತ್ತು ಈ ಕೆಲಸವನ್ನು ಅವರು ಸ್ವಾಗತಿಸಿದರು ಸಹ. ಅಂಥ ದೇಶಗಳಲ್ಲಿ ಸ್ವಾಸೀಲೆಂಡ್‌ ಒಂದು.

ಸ್ವಾಸೀಲೆಂಡಿಗೆ ಒಂದು ರಾಜೋಚಿತ ಸ್ವಾಗತ

ಸ್ವಾಸೀಲೆಂಡ್‌ ಒಂದು ಚಿಕ್ಕದಾದ, 17,364 ಚದರ ಕಿಲೊಮೀಟರುಗಳಷ್ಟು ಪ್ರದೇಶವನ್ನು ಆವರಿಸಿದ ಸ್ವತಂತ್ರ ದೇಶವಾಗಿತ್ತು. ಅದು ದಕ್ಷಿಣ ಆಫ್ರಿಕದೊಳಗೆ ನೆಲೆಸಿತ್ತು. ನಮ್ಮ ಈ ವೃತ್ತಾಂತದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ವಾಕ್‌ಚಾತುರ್ಯವುಳ್ಳ ರಾಜನಾದ ಎರಡನೆಯ ಸೊಬೂಜನನ್ನು ನಾವು ಭೇಟಿಯಾದದ್ದು ಇಲ್ಲಿಯೇ. ಅವನಿಗೆ ಇಂಗ್ಲಿಷ್‌ ಭಾಷೆಯ ಒಳ್ಳೇ ಜ್ಞಾನವಿತ್ತು. ಇದನ್ನು ಅವನು ಬ್ರಿಟಿಷ್‌ ವಿಶ್ವವಿದ್ಯಾನಿಲಯಕ್ಕೆ ಹೋಗುತ್ತಿದ್ದಾಗ ಗಳಿಸಿದ್ದನು. ಅವನು ಸಾಧಾರಣ ರೀತಿಯ ಬಟ್ಟೆಯನ್ನು ಧರಿಸಿದ್ದು, ನಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದನು.

ನಮ್ಮ ಸಂಭಾಷಣೆಯು, ಯೋಗ್ಯ ಪ್ರವೃತ್ತಿಯುಳ್ಳ ಜನರಿಗೆ ದೇವರು ಉದ್ದೇಶಿಸಿದಂಥ ಭೂಪರದೈಸದ ವಿಷಯದ ಮೇಲೆ ಕೇಂದ್ರೀಕರಿಸಿತ್ತು. ಈ ವಿಷಯದಲ್ಲಿ ಅವನಿಗೆ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ, ಇದಕ್ಕೆ ಸಂಬಂಧಿಸಿದಂಥ ಒಂದು ವಿಷಯವು ಅವನ ಮನಸ್ಸಿನಲ್ಲಿ ಯಾವಾಗಲೂ ಇತ್ತೆಂದು ಅವನು ತಿಳಿಸಿದನು. ಬಡವರ ಮತ್ತು ಅವಿದ್ಯಾವಂತರ ಜೀವನ ಮಟ್ಟಗಳನ್ನು ಉತ್ತಮಗೊಳಿಸುವುದರಲ್ಲಿ ರಾಜನಿಗೆ ಬಹಳ ಆಸಕ್ತಿಯಿತ್ತು. ಕ್ರೈಸ್ತಪ್ರಪಂಚದ ಅನೇಕ ಮಿಷನೆರಿಗಳ ಚಟುವಟಿಕೆಗಳನ್ನು ಆತನು ಮೆಚ್ಚುತ್ತಿರಲಿಲ್ಲ. ಏಕೆಂದರೆ ಅವರು ಶಿಕ್ಷಣಕ್ಕಿಂತಲೂ ಹೆಚ್ಚಾಗಿ ತಮ್ಮ ಚರ್ಚ್‌ನ ಸದಸ್ಯತ್ವವನ್ನು ಹೆಚ್ಚಿಸುವುದರಲ್ಲಿ ಆಸಕ್ತರಾಗಿದ್ದರು. ಹಾಗಿದ್ದರೂ, ನಮ್ಮ ಅನೇಕ ಪಯನೀಯರರ ಚಟುವಟಿಕೆಯೊಂದಿಗೆ ರಾಜನು ಚಿರಪರಿಚಿತನಾಗಿದ್ದನು. ನಮ್ಮ ಬೈಬಲ್‌ ಶಿಕ್ಷಣ ಕೆಲಸಕ್ಕಾಗಿ​—ಮುಖ್ಯವಾಗಿ ನಾವು ಯಾವುದೇ ವೇತನ ಅಥವಾ ಇನ್ನಿತರ ಉಪಕಾರ ಋಣಗಳನ್ನು ಆವಶ್ಯಪಡಿಸದೆ ಈ ಕೆಲಸವನ್ನು ಮನಃಪೂರ್ವಕವಾಗಿ ಮಾಡುವುದರಿಂದ​—ಅವನು ನಮ್ಮನ್ನು ಪ್ರಶಂಸಿಸಿದನು.

ಬೈಬಲ್‌ ಶಿಕ್ಷಣದ ವೇಗಗತಿಯು ಹೆಚ್ಚುತ್ತದೆ

ಇಸವಿ 1943ರಲ್ಲಿ ಮಿಷನೆರಿಗಳ ತರಬೇತಿಗಾಗಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ ಸ್ಥಾಪಿಸಲ್ಪಟ್ಟಿತು. ಬೈಬಲ್‌ ಸಾಹಿತ್ಯ ವಿತರಣೆಯ ಮೇಲೆ ಮುಖ್ಯವಾಗಿ ಗಮನವನ್ನು ಕೇಂದ್ರೀಕರಿಸುವ ಬದಲು ಭೇಟಿಯಾಗುವ ಎಲ್ಲಾ ಆಸಕ್ತಿಯುಳ್ಳ ಜನರ ಬಳಿ ಹಿಂದಿರುಗಿ ಹೋಗಿ ಅವರಿಗೆ ಹೆಚ್ಚಿನ ಸಹಾಯವನ್ನು ಕೊಡುವುದಕ್ಕೆ ಮಹತ್ವವನ್ನು ಕೊಡಲಾಯಿತು. 1950ರಲ್ಲಿ ಜಾರ್ಜ್‌ ಮತ್ತು ನಾನು, ಗಿಲ್ಯಡ್‌ ಶಾಲೆಯ 16ನೆಯ ತರಗತಿಗೆ ಹಾಜರಾಗುವ ಆಮಂತ್ರಣವನ್ನು ಪಡೆದೆವು. ಇಲ್ಲಿ ನಾನು ಒಬ್ಬ ಶ್ರದ್ಧಾಳು ಆಸ್ಟ್ರೇಲಿಯನ್‌ ಸಹೋದರಿಯಾದ ಜೀನ್‌ ಹೈಡ್‌ಳನ್ನು ಮೊದಲಬಾರಿಗೆ ಭೇಟಿಯಾದೆ. ನಾವಿಬ್ಬರೂ ಪದವೀಧರರಾದ ನಂತರ ಆಕೆಯನ್ನು ಮಿಷನೆರಿ ಸೇವೆಗಾಗಿ ಜಪಾನಿಗೆ ನೇಮಿಸಲಾಯಿತು. ಆ ಸಮಯದಲ್ಲಿ ಇನ್ನೂ ಅವಿವಾಹಿತತೆಯು ಬಹಳ ಪ್ರಚಲಿತವಾಗಿದ್ದ ಕಾರಣ, ನಮ್ಮ ಗೆಳೆತನವು ಆಗ ಮುಂದೆ ಬೆಳೆಯಲಿಲ್ಲ.

ನಮ್ಮ ಗಿಲ್ಯಡ್‌ ತರಬೇತಿಯ ನಂತರ, ಜಾರ್ಜ್‌ ಮತ್ತು ನಾನು, ಹಿಂದೂ ಮಹಾಸಾಗರದ ಒಂದು ದ್ವೀಪವಾದ ಮೊರೀಷಿಯಸ್‌ಗೆ ಮಿಷನೆರಿ ಸೇವೆಗಾಗಿ ನೇಮಿಸಲ್ಪಟ್ಟೆವು. ನಾವು ಜನರೊಂದಿಗೆ ಗೆಳೆತನವನ್ನು ಬೆಳೆಸಿಕೊಂಡು, ಅವರ ಭಾಷೆಯನ್ನು ಕಲಿತೆವು ಮತ್ತು ಅವರೊಂದಿಗೆ ಮನೆ ಬೈಬಲ್‌ ಅಧ್ಯಯನಗಳನ್ನೂ ನಡಿಸಿದೆವು. ಮುಂದಕ್ಕೆ, ನನ್ನ ತಮ್ಮ ವಿಲಿಯಂ ಮತ್ತು ಅವನ ಪತ್ನಿ ಮ್ಯೂರೀಅಲ್‌ ಸಹ ಗಿಲ್ಯಡ್‌ ಪದವೀಧರರಾದರು. ನನ್ನ ಹಿಂದಿನ ಸಾರುವ ಕ್ಷೇತ್ರವಾದ ಕೆನ್ಯಕ್ಕೆ ಅವರನ್ನು ಕಳುಹಿಸಲಾಯಿತು.

ಬಹಳ ಬೇಗನೆ ಎಂಟು ವರುಷಗಳು ದಾಟಿದವು. ನಂತರ ನ್ಯೂ ಯಾರ್ಕ್‌ ಸಿಟಿಯಲ್ಲಿ ನಡೆದ 1958ರ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಜೀನ್‌ ಹೈಡ್‌ಳನ್ನು ನಾನು ಪುನಃ ಭೇಟಿಯಾದೆ. ನಮ್ಮ ಗೆಳೆತನವನ್ನು ನಾವು ಪುನಃ ಆರಂಭಿಸಿದೆವು ಮತ್ತು ನಮ್ಮ ನಿಶ್ಚಿತಾರ್ಥವಾಯಿತು. ನನ್ನ ಮಿಷನೆರಿ ನೇಮಕವನ್ನು ಮೊರೀಷಿಯಸ್‌ನಿಂದ ಜಪಾನಿಗೆ ಬದಲಾಯಿಸಲಾಯಿತು. ಅಲ್ಲಿ ನಾನು 1959ರಲ್ಲಿ ಜೀನ್‌ಳನ್ನು ಮದುವೆಯಾದೆ. ನಂತರ ನಾವು ಹಿರೊಶೀಮದಲ್ಲಿ ನಮ್ಮ ಮಿಷನೆರಿ ಕೆಲಸದ ಅತಿ ಸಂತೋಷಕರ ಅವಧಿಯನ್ನು ಆರಂಭಿಸಿದೆವು. ಆ ಸಮಯದಲ್ಲಿ ಅಲ್ಲಿ ಕೇವಲ ಒಂದು ಚಿಕ್ಕ ಸಭೆಯಿತ್ತು. ಆದರೆ ಇಂದು ಆ ನಗರದಲ್ಲಿ 36 ಸಭೆಗಳಿವೆ.

ಜಪಾನಿಗೆ ವಿದಾಯ

ವರುಷಗಳು ದಾಟಿದಂತೆಯೆ, ನನ್ನ ಮತ್ತು ಜೀನಳ ಆರೋಗ್ಯ ಸಮಸ್ಯೆಗಳಿಂದಾಗಿ ನಮ್ಮ ಮಿಷನೆರಿ ಸೇವೆಯು ಬಹಳ ಕಷ್ಟಕರವಾಯಿತು. ಕ್ರಮೇಣ ನಾವು ಜಪಾನನ್ನು ಬಿಟ್ಟು ಜೀನಳ ಸ್ವದೇಶವಾದ ಆಸ್ಟ್ರೇಲಿಯಕ್ಕೆ ಹಿಂದಿರುಗಿ, ನೆಲೆಸಬೇಕಾಯಿತು. ನಾವು ಹಿರೊಶೀಮವನ್ನು ಬಿಟ್ಟು ಬಂದ ದಿನ ಬಹಳ ದುಃಖಕರವಾದ ದಿನವಾಗಿತ್ತು. ರೈಲು ನಿಲ್ದಾಣದಲ್ಲಿ, ನಮ್ಮ ಎಲ್ಲಾ ಪ್ರಿಯ ಸ್ನೇಹಿತರಿಗೆ ವಿದಾಯ ಹೇಳಿದೆವು.

ನಾವೀಗ ಆಸ್ಟ್ರೇಲಿಯದಲ್ಲಿ ನೆಲೆಸಿದ್ದೇವೆ. ನ್ಯೂ ಸೌತ್‌ ವೇಲ್ಸ್‌ ರಾಜ್ಯದಲ್ಲಿನ ಆರ್‌ಮಿಡೇಲ್‌ ಸಭೆಯೊಂದಿಗೆ, ನಮಗಿರುವ ಇತಿಮಿತಿಗಳೊಂದಿಗೆ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುತ್ತಾ, ಯೆಹೋವನನ್ನು ಸೇವಿಸುತ್ತಾ ಮುಂದುವರಿಯುತ್ತಿದ್ದೇವೆ. ಸುಮಾರು 80 ವರುಷಗಳಿಂದ ಅನೇಕಾನೇಕ ಜನರೊಂದಿಗೆ ಬೈಬಲಿನ ಸತ್ಯದ ನಿಧಿಯನ್ನು ಹಂಚಿಕೊಳ್ಳುವುದು ಎಂತಹ ಆನಂದವಾಗಿದೆ! ಈ ಬೈಬಲ್‌ ಶಿಕ್ಷಣ ಕಾರ್ಯಕ್ರಮದ ಅದ್ಭುತಕರವಾದ ಬೆಳವಣಿಗೆಯನ್ನು ಮತ್ತು ಗಮನಾರ್ಹವಾದ ಆತ್ಮಿಕ ಘಟನೆಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಯಾವುದೇ ವ್ಯಕ್ತಿ ಅಥವಾ ಜನರ ಗುಂಪು ಈ ಸಾಧನೆಗಳಿಗೆ ಕೀರ್ತಿಯನ್ನು ಪಡೆದುಕೊಳ್ಳಸಾಧ್ಯವಿಲ್ಲ. ನಿಜವಾಗಿಯೂ, ಕೀರ್ತನೆಗಾರನ ಮಾತುಗಳಲ್ಲಿ ಹೇಳುವುದಾದರೆ, “ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.”​—ಕೀರ್ತನೆ 118:23.

[ಪುಟ 28ರಲ್ಲಿರುವ ಚಿತ್ರ]

ನನ್ನ ತಮ್ಮ ಜಾರ್ಜ್‌, ನಮ್ಮ ವಸತಿ ಕಾರಿನೊಂದಿಗೆ

[ಪುಟ 28ರಲ್ಲಿರುವ ಚಿತ್ರ]

ನಾನು, ವಿಕ್ಟೋರಿಯ ಸರೋವರದ ಬಳಿಯಲ್ಲಿ

[ಪುಟ 29ರಲ್ಲಿರುವ ಚಿತ್ರ]

1938ರಲ್ಲಿ ಸ್ವಾಸೀಲೆಂಡ್‌ನಲ್ಲಿ ಒಂದು ಸಾರ್ವಜನಿಕ ಭಾಷಣಕ್ಕೆ ಹಾಜರಾದ ಪ್ರೌಢಶಾಲೆಯ ವಿದ್ಯಾರ್ಥಿಗಳು

[ಪುಟ 30ರಲ್ಲಿರುವ ಚಿತ್ರಗಳು]

1959ರಲ್ಲಿ ಜೀನ್‌ಳೊಂದಿಗೆ ನಮ್ಮ ವಿವಾಹದ ದಿನದಂದು ಮತ್ತು ಇಂದು