ಅಂದು ಮತ್ತು ಇಂದು ದೇವರ ವಾಕ್ಯದ ಪ್ರಭಾವ
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”
ಅಂದು ಮತ್ತು ಇಂದು ದೇವರ ವಾಕ್ಯದ ಪ್ರಭಾವ
ನೀವು ಟೋನಿಯನ್ನು ಅವನ ಹದಿಹರೆಯದಲ್ಲಿ ಭೇಟಿಯಾಗುತ್ತಿದ್ದರೆ, ಆಸ್ಟ್ರೇಲಿಯದ ಸಿಡ್ನಿಯ ಕುಖ್ಯಾತ ಭಾಗಗಳಲ್ಲಿ ಓಡಾಡುತ್ತಿದ್ದ ಒರಟಾದ, ಕಲಹಪ್ರಿಯ ಹುಡುಗನೊಬ್ಬನು ನಿಮಗೆ ಕಾಣಸಿಗುತ್ತಿದ್ದನು. ಅವನ ಸ್ನೇಹಿತರಲ್ಲಿ ಗ್ಯಾಂಗ್ಗಳ ಸದಸ್ಯರೂ ಸೇರಿದ್ದರು. ಅವರು ಅನೇಕ ಬಾರಿ ಕಳ್ಳತನ, ಗ್ಯಾಂಗ್ ಯುದ್ಧ ಮತ್ತು ರಸ್ತೆಯಲ್ಲಿ ಗುಂಡಿಕ್ಕುವುದರಲ್ಲಿಯೂ ಒಳಗೂಡಿದ್ದರು.
ಟೋನಿ ಒಂಬತ್ತು ವರ್ಷ ಪ್ರಾಯದಲ್ಲೇ ಧೂಮಪಾನವನ್ನು ಆರಂಭಿಸಿದ. 14ರ ಪ್ರಾಯದೊಳಗೆ ಅವನು ಮಾರಿವಾನವನ್ನು ಕ್ರಮವಾಗಿ ಉಪಯೋಗಿಸುತ್ತಾ ದುರಾಚಾರದ ಜೀವನಕ್ಕೆ ಇಳಿದಿದ್ದ. 16ರ ಪ್ರಾಯದೊಳಗೆ ಅವನು ಹೆರೋಯಿನ್ ವ್ಯಸನಿಯಾಗಿದ್ದರಿಂದ, ಇದು ಅವನನ್ನು ಕೊಕೇನ್ ಹಾಗೂ ಎಲ್ಎಸ್ಡಿ ಸೇವನೆಗೂ ನಡೆಸಿತು. ಟೋನಿಯೇ ಹೇಳುವಂತೆ, “ನನಗೆ ಯಾವುದರಿಂದ ಅಮಲೇರುತ್ತಿತ್ತೊ ಅದೆಲ್ಲವನ್ನೂ ನಾನು ಉಪಯೋಗಿಸುತ್ತಿದ್ದೆ.” ಆ ಬಳಿಕ ಅವನು ಎರಡು ಕುಖ್ಯಾತ ಸಂಘಟಿತ ಪಾತಕ ಸಂಸ್ಥೆಗಳೊಂದಿಗೆ ಅಮಲೌಷಧ ವ್ಯಾಪಾರ ಸಂಪರ್ಕವನ್ನು ಇಟ್ಟುಕೊಂಡ. ಸ್ವಲ್ಪದರಲ್ಲೇ ಟೋನಿ, ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಅತಿ ಭರವಸಾರ್ಹ ಅಮಲೌಷಧ ಸರಬರಾಯಿಗಾರರಲ್ಲಿ ಒಬ್ಬನೆಂದು ಕುಖ್ಯಾತನಾದ.
ಟೋನಿಯ ಹೆರೋಯಿನ್ ಮತ್ತು ಮಾರಿವಾನ ವ್ಯಸನದ ವೆಚ್ಚವು ದಿನಕ್ಕೆ 8,000ದಿಂದ ಹಿಡಿದು 16,000 ರೂಪಾಯಿಗಳ ವರೆಗೂ ಆಗುತ್ತಿತ್ತು. ಆದರೆ ಅವನ ಕುಟುಂಬವು ಇನ್ನಿತರ ವಿಧಗಳಲ್ಲೂ ಕಷ್ಟವನ್ನು ಅನುಭವಿಸಬೇಕಾಗಿತ್ತು. ಅವನು ಹೇಳುವುದು: “ಅನೇಕವೇಳೆ ನಮ್ಮ ವಾಸಸ್ಥಳದಲ್ಲಿ ಅಮಲೌಷಧ ಮತ್ತು ಹಣಕ್ಕಾಗಿ ಹುಡುಕಾಡುತ್ತಿದ್ದ ಪಾತಕಿಗಳು, ನನ್ನ ಹೆಂಡತಿಗೂ ನನಗೂ ಬಂದೂಕು ಮತ್ತು ಚೂರಿಗಳನ್ನು ತೋರಿಸಿ ಬೆದರಿಸುತ್ತಿದ್ದರು.” ಟೋನಿ ಮೂರು ಬಾರಿ ಜೈಲಿಗೆ ಹೋಗಿ ಬಂದ ಬಳಿಕ, ತನ್ನ ಜೀವನವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಪರೀಕ್ಷಿಸುವಂತೆ ನಿರ್ಬಂಧಿಸಲ್ಪಟ್ಟನು.
ಟೋನಿ ಚರ್ಚಿಗೆ ಹೋಗುತ್ತಿದ್ದನಾದರೂ, ಪಾಪಿಗಳನ್ನು ನರಕದಲ್ಲಿ ಸುಡುತ್ತಾ ಅವರಿಗೆ ನಿತ್ಯಶಿಕ್ಷೆ ವಿಧಿಸುವ ದೇವರಿಂದ ದೂರವಿರುವಂತೆ ಮಾಡಿತು. ಆದರೆ ಇಬ್ಬರು ಯೆಹೋವನ ಸಾಕ್ಷಿಗಳು ಟೋನಿಯನ್ನು ಭೇಟಿಯಾದಾಗ, ದೇವರು ಅಂಥವನಲ್ಲವೆಂದು ತಿಳಿದು ಅವನಿಗೆ ಆಶ್ಚರ್ಯವಾಯಿತು. ಮತ್ತು ಖಂಡಿತವಾಗಿಯೂ ತಾನು ತನ್ನ ಜೀವನವನ್ನು ಸರಿಪಡಿಸಿಕೊಂಡು ದೇವರಿಂದ ಆಶೀರ್ವಾದಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಕೇಳಿ ಅವನಿಗೆ ಸಂತೋಷವಾಯಿತು. “ದೇವರಿಗೆ ಎಲ್ಲವು ಸಾಧ್ಯ” ಎಂಬ ಯೇಸು ಕ್ರಿಸ್ತನ ಹೇಳಿಕೆಯಿಂದ ಟೋನಿ ಪ್ರಚೋದಿತನಾದನು. (ಮಾರ್ಕ 10:27) ವಿಶೇಷವಾಗಿ “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂಬ ಮಾತುಗಳು ಟೋನಿಯ ಮನಮುಟ್ಟಿದವು.—ಯಾಕೋಬ 4:8.
ಈಗ ಟೋನಿಯ ಮುಂದೆ, ತನ್ನ ಜೀವನವನ್ನು ಬೈಬಲ್ ಮಟ್ಟಗಳಿಗೆ ಹೊಂದಿಸಿಕೊಳ್ಳುವ ಸವಾಲು ಇತ್ತು. ಅವನು ಹೇಳುವುದು: “ನಾನು ಪ್ರಥಮವಾಗಿ ಧೂಮಪಾನವನ್ನು ನಿಲ್ಲಿಸಿದೆ. ಈ ಮೊದಲು ನಾನು ಹಾಗೆ ಮಾಡಲು ಅನೇಕಾವರ್ತಿ ಪ್ರಯತ್ನಿಸಿದ್ದರೂ ಅದನ್ನು ನಿಲ್ಲಿಸಲಾಗಿರಲಿಲ್ಲ. ಯೆಹೋವನ ಶಕ್ತಿಯ ಸಹಾಯದಿಂದ, ಕಳೆದ 15 ವರುಷಗಳಿಂದ ನನ್ನ ಮೇಲೆ ನಿಯಂತ್ರಣವನ್ನು ಹೊಂದಿದ್ದ ಹೆರೋಯಿನ್ ಮತ್ತು ಮಾರಿವಾನಗಳ ಚಟವನ್ನು ಬಿಟ್ಟುಬಿಡಲು ಶಕ್ತನಾದೆ. ಈ ದುಶ್ಚಟವನ್ನು ನಿಲ್ಲಿಸುವುದು ಸಾಧ್ಯವೆಂದು ನಾನು ಯೋಚಿಸಿಯೇ ಇರಲಿಲ್ಲ.”
ಜನರಿಗೆ ನರಕದಲ್ಲಿ ನಿತ್ಯ ಯಾತನೆ ಕೊಡುವ ದೇವರಿಗೆ—ಇದರ ಕುರಿತಾದ ಸಿದ್ಧಾಂತವು ಬೈಬಲಿನಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ—ಭಯಪಡುವುದಕ್ಕೆ ಬದಲಾಗಿ, ಟೋನಿಯೂ ಅವನ ಹೆಂಡತಿಯೂ ಭೂಪರದೈಸಿನಲ್ಲಿ ನಿತ್ಯಕ್ಕೂ ಜೀವಿಸುವ ನಿರೀಕ್ಷೆಯನ್ನು ತಮ್ಮದಾಗಿ ಮಾಡಿಕೊಂಡರು. (ಕೀರ್ತನೆ 37:10, 11; ಜ್ಞಾನೋಕ್ತಿ 2:21) ಟೋನಿ ಒಪ್ಪಿಕೊಳ್ಳುವುದು: “ನನ್ನ ಜೀವನವನ್ನು ದೇವರ ಮಟ್ಟಗಳಿಗೆ ಹೊಂದಿಸಿಕೊಳ್ಳಲು ನನಗೆ ಬಹಳ ಸಮಯ ಹಿಡಿಯಿತು ಮತ್ತು ನಾನು ತುಂಬ ಪ್ರಯತ್ನವನ್ನು ಮಾಡಬೇಕಾಯಿತು, ಆದರೆ ಯೆಹೋವನ ಆಶೀರ್ವಾದದಿಂದ ನಾನು ಜಯಹೊಂದಿದೆ.”
ಹೌದು, ಈ ಮಾಜಿ ಅಮಲೌಷಧ ವ್ಯಸನಿಯು ಒಬ್ಬ ಕ್ರೈಸ್ತನಾದನು. ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಸ್ವಯಂ ಸೇವೆಗಾಗಿ ವಿನಿಯೋಗಿಸುತ್ತಾ, ಅವನೂ ಅವನ ಹೆಂಡತಿಯೂ ಸಾವಿರಾರು ತಾಸುಗಳನ್ನು ಬೈಬಲ್ ಶಿಕ್ಷಣ ಕಾರ್ಯದಲ್ಲಿ ಉಪಯೋಗಿಸಿದ್ದಾರೆ. ಅವರಿಬ್ಬರೂ ದೇವಭಯವುಳ್ಳ ಮಕ್ಕಳನ್ನು ಬೆಳೆಸುವುದರಲ್ಲಿಯೂ ಮಗ್ನರಾಗಿದ್ದಾರೆ. ಈ ದೊಡ್ಡ ಬದಲಾವಣೆಯು ದೇವರ ವಾಕ್ಯವಾದ ಬೈಬಲಿನ ಆಕರ್ಷಕ ಶಕ್ತಿಯಿಂದ ಸಾಧಿಸಲ್ಪಟ್ಟಿತ್ತು. ವಾಸ್ತವದಲ್ಲಿ, ಅಪೊಸ್ತಲ ಪೌಲನು ಹೇಳುವಂತೆ, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕ”ವಾದದ್ದಾಗಿದೆ.—ಇಂತಹ ಸಕಾರಾತ್ಮಕ ದೃಷ್ಟಾಂತಗಳಿದ್ದರೂ, ಕೆಲವರು ಯೆಹೋವನ ಸಾಕ್ಷಿಗಳ ಬೈಬಲ್ ಆಧಾರಿತ ಶೈಕ್ಷಣಿಕ ಕಾರ್ಯವು ಕುಟುಂಬಗಳನ್ನು ಹಾಳುಮಾಡಿ, ಯುವ ಜನರಲ್ಲಿರುವ ಹಿತಕರವಾದ ಮೌಲ್ಯಗಳನ್ನು ಶಿಥಿಲಗೊಳಿಸುತ್ತದೆಂದು ಅಸಮರ್ಥನೀಯವಾಗಿ ಹೇಳುತ್ತಾರೆ. ಈ ಹೇಳಿಕೆಯನ್ನು ಟೋನಿಯ ದೃಷ್ಟಾಂತವು ತಪ್ಪೆಂದು ರುಜುಪಡಿಸುತ್ತದೆ.
ಟೋನಿಯಂತೆಯೇ, ಮಾರಕ ವ್ಯಸನಗಳನ್ನು ಬಿಟ್ಟುಬಿಡಸಾಧ್ಯವಿದೆ ಎಂಬುದನ್ನು ಅನೇಕರು ಕಲಿತಿದ್ದಾರೆ. ಹೇಗೆ? ದೇವರಲ್ಲಿ ನಂಬಿಕೆ, ಆತನ ಮೇಲೆ ಮತ್ತು ಆತನ ವಾಕ್ಯದ ಮೇಲೆ ಭರವಸೆ ಹಾಗೂ ಚಿಂತಿತರೂ ಪ್ರೀತಿಸುವವರೂ ಆದ ಕ್ರೈಸ್ತ ಒಡನಾಡಿಗಳ ಬೆಂಬಲದ ಮೂಲಕವೇ. ಟೋನಿ ಸಂತೋಷದಿಂದ ಮುಕ್ತಾಯಗೊಳಿಸುವುದು: “ಬೈಬಲಿನ ಮೂಲತತ್ತ್ವಗಳು ನನ್ನ ಮಕ್ಕಳನ್ನು ಹೇಗೆ ಕಾಪಾಡಿವೆ ಎಂಬುದನ್ನು ನಾನು ನೋಡಿದ್ದೇನೆ. ಬೈಬಲ್ ಬೋಧನೆಗಳು ನನ್ನ ವಿವಾಹವನ್ನು ಕಾಪಾಡಿವೆ. ಮತ್ತು ನೆರೆಯವರಿಗೆ ನನ್ನಿಂದ ಯಾವುದೇ ಅಪಾಯವಿಲ್ಲದ ಕಾರಣ ಈಗ ಅವರು ನಿರಾತಂಕದಿಂದ ಮಲಗಲು ಶಕ್ತರಾಗಿದ್ದಾರೆ.”
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಯೆಹೋವನ ಶಕ್ತಿಯ ಸಹಾಯದಿಂದ, ಕಳೆದ 15 ವರುಷಗಳಿಂದ ನನ್ನ ಮೇಲೆ ನಿಯಂತ್ರಣವನ್ನು ಹೊಂದಿದ್ದ ಅಮಲೌಷಧದ ದುಶ್ಚಟವನ್ನು ನಾನು ಬಿಟ್ಟುಬಿಡಲು ಶಕ್ತನಾದೆ.’
[ಪುಟ 9ರಲ್ಲಿರುವ ಚೌಕ]
ಕಾರ್ಯಸಾಧಕ ಬೈಬಲ್ ಮೂಲತತ್ತ್ವಗಳು
ಬೈಬಲಿನಲ್ಲಿರುವ ಅನೇಕ ಮೂಲತತ್ತ್ವಗಳು, ಅನೇಕ ಅಮಲೌಷಧ ವ್ಯಸನಿಗಳು ಈ ಶಕ್ತಿಗುಂದಿಸುವ ದುಶ್ಚಟವನ್ನು ಬಿಟ್ಟುಬಿಡುವಂತೆ ಸಹಾಯಮಾಡಿವೆ. ಈ ಮೂಲತತ್ತ್ವಗಳಲ್ಲಿ ಈ ಕೆಳಗಿನವುಗಳು ಸೇರಿವೆ:
“ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ಅಮಲೌಷಧ ಸೇವನೆಯು ದೇವರ ನಿಯಮಕ್ಕೆ ವಿರುದ್ಧವಾಗಿದೆ.
“ಯೆಹೋವನ ಭಯವೇ ಜ್ಞಾನಕ್ಕೆ ಮೂಲವು, ಪರಿಶುದ್ಧನ ತಿಳುವಳಿಕೆಯೇ ವಿವೇಕವು.” (ಜ್ಞಾನೋಕ್ತಿ 9:10) ಯೆಹೋವನ ಮತ್ತು ಆತನ ಮಾರ್ಗಗಳ ಕುರಿತಾದ ನಿಷ್ಕೃಷ್ಟ ಜ್ಞಾನದ ಮೇಲಾಧಾರಿತವಾದ ಭಯಭಕ್ತಿಯು, ಅನೇಕರು ಅಮಲೌಷಧದ ಪ್ರಭಾವದಿಂದ ತಮ್ಮನ್ನು ಬಿಡಿಸಿಕೊಳ್ಳುವಂತೆ ಸಹಾಯಮಾಡಿದೆ.
“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ದೇವರಲ್ಲಿ ಹೃತ್ಪೂರ್ವಕವಾದ ಭರವಸೆಯಿಡುವ ಮೂಲಕ ಮತ್ತು ಆತನ ಮೇಲೆ ಪೂರ್ಣವಾಗಿ ಆತುಕೊಳ್ಳುವ ಮೂಲಕ, ಧ್ವಂಸಕಾರಕ ಅಭ್ಯಾಸಗಳನ್ನು ಮುರಿಯಸಾಧ್ಯವಿದೆ.