ಧಾರ್ಮಿಕ ವರ್ಣಚಿತ್ರಗಳು ಅವುಗಳ ಪುರಾತನ ಮೂಲಗಳು
ಧಾರ್ಮಿಕ ವರ್ಣಚಿತ್ರಗಳು ಅವುಗಳ ಪುರಾತನ ಮೂಲಗಳು
“ಪವಿತ್ರ ವರ್ಣಚಿತ್ರಗಳು ದೇವರ ಮತ್ತು ಆತನ ಪವಿತ್ರರ ಸೌಶೀಲ್ಯ ಮತ್ತು ಪಾವಿತ್ರ್ಯಕ್ಕೆ ನಮ್ಮನ್ನು ಜೋಡಿಸುವ ವಿಧಗಳಲ್ಲಿ ಒಂದು.”—ಆಸ್ಟ್ರೇಲಿಯದ ಗ್ರೀಕ್ ಆರ್ತೊಡಾಕ್ಸ್ ಆರ್ಚ್‌ಡಯಸಿಸ್
ಅತಿ ಸೆಕೆಯ ಆಗಸ್ಟ್ ದಿನ. ಇಜೀಯನ್ ಸಮುದ್ರದ ಟೀನಾಸ್ ದ್ವೀಪದಲ್ಲಿರುವ “ಅತಿ ಪವಿತ್ರ ದೇವಮಾತೆ” ಸಂನ್ಯಾಸಿ ಮಠಕ್ಕೆ ನಡೆಸುವ ಸಿಮೆಂಟ್ ಮೆಟ್ಟಲುಗಳ ಮೇಲೆ ಬಿಸಿಲಿನ ಝಳ ಬಡಿಯುತ್ತಿದೆ. ಆದರೆ ಆ ಸುಡುವ ಶಾಖವು, 25,000ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿರುವ ಧರ್ಮಶ್ರದ್ಧೆಯುಳ್ಳ ಗ್ರೀಕ್ ಆರ್ತೊಡಾಕ್ಸ್ ಯಾತ್ರಾರ್ಥಿಗಳ ದೃಢತೆಯನ್ನು ಕ್ಷೀಣಿಸುವುದಿಲ್ಲ. ಅವರು ಯೇಸುವಿನ ಮಾತೆಯ ಅಲಂಕಾರಭೂಷಿತ ದ್ವಿವಿಮಿತೀಯ ವರ್ಣಚಿತ್ರವನ್ನು ತಲಪುವ ಪ್ರಯತ್ನದಿಂದ ನಿಧಾನವಾಗಿ ನಡೆದು ಹೋಗುತ್ತಾರೆ.
ಕುಂಟಿಯಾದ ಹುಡುಗಿಯೊಬ್ಬಳು ವೇದನೆಯಿಂದ ನರಳಾಡುತ್ತ, ಹತಾಶೆಯ ಮುಖದಿಂದ, ಧಾರಾಕಾರವಾಗಿ ರಕ್ತ ಸುರಿಯುತ್ತಿರುವ ತನ್ನ ಮೊಣಕಾಲುಗಳಲ್ಲಿ ತೆವಳುತ್ತಾ ಹೋಗುತ್ತಾಳೆ. ಅವಳ ಸಮೀಪದಲ್ಲಿ, ದೇಶದ ಇನ್ನೊಂದು ಮೂಲೆಯಿಂದ ಬಂದಿರುವ ಮುದುಕಿಯೊಬ್ಬಳು ತನ್ನ ಬಳಲಿದ ಕಾಲುಗಳಿಂದ ಮುಂದೆ ಸಾಗಲು ಪ್ರಯಾಸಪಡುತ್ತಿದ್ದಾಳೆ. ತೀವ್ರಾಸಕ್ತಿಯ ಮಧ್ಯ ವಯಸ್ಸಿನವನೊಬ್ಬನು ನೂಕುತ್ತಿರುವ ಜನಸಂದಣಿಯ ಮಧ್ಯೆ ದಾಟಿಹೋಗುವಾಗ ಬೆವರು ಧಾರಾಕಾರವಾಗಿ ಸುರಿಯುತ್ತದೆ. ಅವರ ಗುರಿಯು ಆ ಮರಿಯಳ ವರ್ಣಚಿತ್ರಕ್ಕೆ ಮುದ್ದಿಟ್ಟು, ಅದರ ಮುಂದೆ ಅಡ್ಡಬೀಳುವುದೇ ಆಗಿದೆ.
ಅತಿ ಧಾರ್ಮಿಕರಾದ ಈ ಜನರು, ದೇವರನ್ನು ಆರಾಧಿಸುವ ತಮ್ಮ ಅಪೇಕ್ಷೆಯಲ್ಲಿ ಯಥಾರ್ಥ ಮನಸ್ಸಿನವರಾಗಿದ್ದಾರೆಂಬುದರ ಕುರಿತು ಸಂದೇಹವಿಲ್ಲ. ಆದರೆ ಧಾರ್ಮಿಕ ವರ್ಣಚಿತ್ರಗಳಿಗೆ ತೋರಿಸುವ ಇಂತಹ ಭಕ್ತಿಯ ಮೂಲವನ್ನು ಕ್ರೈಸ್ತತ್ವದ ಆರಂಭಕ್ಕಿಂತ ಶತಮಾನಗಳಷ್ಟು ಹಿಂದಿನ ಸಮಯಕ್ಕೆ ಪತ್ತೆಹಚ್ಚಬಹುದೆಂಬುದು ಎಷ್ಟು ಜನರಿಗೆ ಗೊತ್ತಿದೆ?
ಧಾರ್ಮಿಕ ವರ್ಣಚಿತ್ರಗಳ ಚಾಲ್ತಿ
ಆರ್ತೊಡಾಕ್ಸ್ ಚರ್ಚ್ ಜಗತ್ತಿನಲ್ಲಿ, ಧಾರ್ಮಿಕ ವರ್ಣಚಿತ್ರಗಳು ಎಲ್ಲೆಲ್ಲಿಯೂ ಕಂಡುಬರುತ್ತವೆ. ಚರ್ಚ್ ಕಟ್ಟಡಗಳಲ್ಲಿ ಯೇಸು, ಮರಿಯಳು ಮತ್ತು “ಸಂತರ” ಧಾರ್ಮಿಕ ವರ್ಣಚಿತ್ರಗಳು ಮುಖ್ಯ ಸ್ಥಳಗಳನ್ನು ಅಲಂಕರಿಸುತ್ತವೆ. ವಿಶ್ವಾಸಿಗಳು ಅನೇಕವೇಳೆ ಈ ಧಾರ್ಮಿಕ ವರ್ಣಚಿತ್ರಗಳನ್ನು ಚುಂಬಿಸಿ, ಅವುಗಳ ಮುಂದೆ ಧೂಪಸುಡುತ್ತಾರೆ ಮತ್ತು ಮೋಂಬತ್ತಿಗಳನ್ನು ಹಚ್ಚಿ ಗೌರವಿಸುತ್ತಾರೆ. ಇದಕ್ಕೆ ಕೂಡಿಸಿ, ಹೆಚ್ಚುಕಡಮೆ ಎಲ್ಲ ಆರ್ತೊಡಾಕ್ಸ್ ಮನೆಗಳಲ್ಲಿ ಅವರದ್ದೇ ಆದ ಧಾರ್ಮಿಕ ವರ್ಣಚಿತ್ರಗಳಿರುವ ಪೂಜೆಯ ಕೋಣೆಗಳಿವೆ. ಇಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಧಾರ್ಮಿಕ ವರ್ಣಚಿತ್ರಗಳನ್ನು ಪೂಜಿಸುವಾಗ, ತಾವು ದೇವರಿಗೆ ನಿಕಟವಾಗಿರುವ ಭಾವನೆಯಾಗುತ್ತದೆಂದು ಆರ್ತೊಡಾಕ್ಸ್ ಕ್ರೈಸ್ತರು ಹೇಳುವುದು ಅಸಾಮಾನ್ಯವೇನೂ ಅಲ್ಲ. ಅನೇಕರು ಈ ಧಾರ್ಮಿಕ ವರ್ಣಚಿತ್ರಗಳು ದೈವಿಕ ಕಟಾಕ್ಷ ಮತ್ತು ಅದ್ಭುತ ಶಕ್ತಿಯಿಂದ ತುಂಬಿವೆ ಎಂದು ನಂಬುತ್ತಾರೆ.
ಆದರೆ ಪ್ರಥಮ ಶತಮಾನದ ಕ್ರೈಸ್ತರು ಆರಾಧನೆಯಲ್ಲಿ ಧಾರ್ಮಿಕ ವರ್ಣಚಿತ್ರಗಳ ಉಪಯೋಗವನ್ನು ಮಾಡಿರಲಿಲ್ಲವೆಂದು ತಿಳಿಯುವಾಗ ಈ ವಿಶ್ವಾಸಿಗಳಿಗೆ ಆಶ್ಚರ್ಯವಾದೀತು. ಬೈಸಾಂಟಿಯಮ್ ಎಂಬ ಪುಸ್ತಕವು ಹೇಳುವುದು: “ಯೆಹೂದಿ ಮತದಿಂದ, ವಿಗ್ರಹಾರಾಧನೆಯ ಕಡೆಗೆ ಜುಗುಪ್ಸೆಯನ್ನು ಬಳುವಳಿಯಾಗಿ ಹೊಂದಿದ್ದ ಆದಿ ಕ್ರೈಸ್ತರು, ಪವಿತ್ರ ಜನರ ಯಾವುದೇ ಚಿತ್ರಗಳಿಗೆ ಪೂಜ್ಯಭಾವ ತೋರಿಸುವುದನ್ನು ಸಮ್ಮತಿಸುತ್ತಿರಲಿಲ್ಲ.” ಅದೇ ಪುಸ್ತಕವು ಇನ್ನೂ
ಹೇಳುವುದು: “ಐದನೆಯ ಶತಮಾನದಿಂದ ಹಿಡಿದು, ಧಾರ್ಮಿಕ ವರ್ಣಚಿತ್ರಗಳು ಅಥವಾ ಮೂರ್ತಿಗಳು ಸಾರ್ವಜನಿಕ ಮತ್ತು ಖಾಸಗಿ ಆರಾಧನೆಗಳಲ್ಲಿ ಹೆಚ್ಚೆಚ್ಚು ಚಾಲ್ತಿಗೆ ಬಂದವು.” ಹಾಗಾದರೆ, ಒಂದನೆಯ ಶತಮಾನದ ಕ್ರೈಸ್ತತ್ವದಲ್ಲಿ ಇದರ ಆರಂಭವು ಆಗದಿರುವಲ್ಲಿ, ಧಾರ್ಮಿಕ ವರ್ಣಚಿತ್ರಗಳ ಉಪಯೋಗ ಎಲ್ಲಿಂದ ಆರಂಭಗೊಂಡಿತು?ಅವುಗಳ ಮೂಲಗಳನ್ನು ಪತ್ತೆಹಚ್ಚುವುದು
ಸಂಶೋಧಕ ವಿಟಾಲಿ ಇವಾನ್ಯಿಚ್ ಪೆಟ್ರೆಂಕೋ ಬರೆದುದು: “ವಿಗ್ರಹಗಳ ಉಪಯೋಗ ಮತ್ತು ಸಂಪ್ರದಾಯವು ಕ್ರಿಸ್ತ ಶಕಕ್ಕಿಂತ ಹೆಚ್ಚು ಪೂರ್ವದಿಂದ ಬಂದಿದ್ದು, ಅದರ ‘ಮೂಲವು ವಿಧರ್ಮದಲ್ಲಿದೆ.’’’ ಇದನ್ನು ಅನೇಕ ಇತಿಹಾಸಕಾರರು ಒಪ್ಪುತ್ತಾರೆ. ವಿಗ್ರಹಾರಾಧನೆಯ ಮೂಲವು ಪ್ರಾಚೀನ ಬಾಬೆಲ್, ಐಗುಪ್ತ ಮತ್ತು ಗ್ರೀಸ್‌ನ ಧರ್ಮಗಳಲ್ಲಿದೆಯೆಂದು ಅವರು ಹೇಳುತ್ತಾರೆ. ದೃಷ್ಟಾಂತಕ್ಕಾಗಿ, ಪ್ರಾಚೀನ ಗ್ರೀಸ್‌ನಲ್ಲಿ, ಧಾರ್ಮಿಕ ಮೂರ್ತಿಗಳು ತ್ರಿವಿಮಿತೀಯ ವಿಗ್ರಹಗಳ ರೂಪದಲ್ಲಿದ್ದವು. ಇವುಗಳಲ್ಲಿ ದೈವಿಕ ಶಕ್ತಿಯಿತ್ತೆಂದು ನಂಬಲಾಗುತ್ತಿತ್ತು. ಇವುಗಳಲ್ಲಿ ಕೆಲವು ಮೂರ್ತಿಗಳು ಕೈಯಿಂದ ಮಾಡಲ್ಪಟ್ಟಿರಲಿಲ್ಲವೆಂದೂ ಅವು ಸ್ವರ್ಗದಿಂದ ಬಿದ್ದಿದ್ದವೆಂದೂ ಜನರು ನೆನಸುತ್ತಿದ್ದರು. ವಿಶೇಷ ಹಬ್ಬಗಳ ಸಮಯದಲ್ಲಿ, ಈ ಆರಾಧನಾ ಮೂರ್ತಿಗಳನ್ನು ಪಟ್ಟಣದ ಸುತ್ತಲೂ ಮೆರವಣಿಗೆಯಲ್ಲಿ ಒಯ್ಯಲಾಗುತ್ತಿತ್ತು ಮತ್ತು ಅವುಗಳಿಗೆ ಯಜ್ಞಗಳು ಅರ್ಪಿಸಲ್ಪಡುತ್ತಿದ್ದವು. “ದೇವರ ಮತ್ತು ಆತನ ಮೂರ್ತಿಯ ಮಧ್ಯೆ ವ್ಯತ್ಯಾಸವಿದೆ ಎಂದು ತೋರಿಸಲು ಪ್ರಯತ್ನಗಳು ನಡೆದಿದ್ದರೂ, ಈ ಆರಾಧನಾ ಮೂರ್ತಿಯೇ ದೇವರು ಎಂದು ಧರ್ಮಶ್ರದ್ಧೆಯುಳ್ಳ ಜನರು ಎಣಿಸುತ್ತಿದ್ದರು” ಎನ್ನುತ್ತಾರೆ ಪೆಟ್ರೆಂಕೋ.
ಇಂತಹ ವಿಚಾರಗಳೂ ಆಚಾರಗಳೂ ಕ್ರೈಸ್ತತ್ವದೊಳಗೆ ಹೇಗೆ ನುಸುಳಿದವು? ಅದೇ ಸಂಶೋಧಕರು ಹೇಳಿದ್ದೇನಂದರೆ, ಕ್ರಿಸ್ತನ ಅಪೊಸ್ತಲರ ಮರಣಾನಂತರದ ಶತಮಾನಗಳಲ್ಲಿ, ವಿಶೇಷವಾಗಿ ಐಗುಪ್ತದಲ್ಲಿ, “ಕ್ರಿಸ್ತೀಯ ನಂಬಿಕೆಗೆದುರಾಗಿ, ಅದರೊಂದಿಗೆ ಆಚರಿಸಲ್ಪಡುತ್ತಿದ್ದ ಐಗುಪ್ತ್ಯ, ಗ್ರೀಕ್, ಯೆಹೂದಿ, ಪ್ರಾಚ್ಯ ಮತ್ತು ರೋಮನ್ ಆಚಾರ ಹಾಗೂ ನಂಬಿಕೆಗಳ ‘ವಿಧರ್ಮಿ ನಂಬಿಕೆಗಳ ಮಿಶ್ರಣವು’ ಎದ್ದು ನಿಂತಿತು.” ಇದರ ಫಲವಾಗಿ, “ಕ್ರೈಸ್ತ ಶಿಲ್ಪಿಗಳು [ಒಂದು ಅನ್ಯೋನ್ಯ ನಂಬಿಕೆಯ] ವಿಧಾನವನ್ನು ಆಯ್ದುಕೊಂಡು, ವಿಧರ್ಮಿ ಪ್ರತೀಕಗಳನ್ನು ಉಪಯೋಗಿಸತೊಡಗಿ, ಅವುಗಳನ್ನು ಕ್ರೈಸ್ತತ್ವದೊಂದಿಗೆ ಸಂಬಂಧಿಸಿರುವ ಹೊಸ ಪ್ರತೀಕಗಳನ್ನು ರಚಿಸಲು ಒಳತಂದರು. ಆದರೆ ಈ ಹೊಸ ಕ್ರೈಸ್ತ ಪ್ರತೀಕಗಳು ವಿಧರ್ಮಿ ಪ್ರಭಾವದಿಂದ ಮಲಿನಗೊಳ್ಳುವುದನ್ನು ಅವರು ಪೂರ್ತಿಯಾಗಿ ತಡೆದು ಹಿಡಿಯಲಿಲ್ಲ.”
ಬೇಗನೆ, ಈ ಧಾರ್ಮಿಕ ವರ್ಣಚಿತ್ರಗಳು, ಖಾಸಗಿ ಹಾಗೂ ಸಾರ್ವಜನಿಕ ಧಾರ್ಮಿಕ ಜೀವನದ ಕೇಂದ್ರವಾದವು. ನಂಬಿಕೆಯ ಯುಗ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಇತಿಹಾಸಕಾರ ವಿಲ್ ಡ್ಯೂರಾಂಟ್ ಇದು ಹೇಗೆ ನಡೆಯಿತೆಂಬುದನ್ನು ವರ್ಣಿಸುತ್ತಾರೆ. ಅವರು ಹೇಳುವುದು: “ಆರಾಧಿಸಲ್ಪಡುವ ಸಂತರ ಸಂಖ್ಯೆ ಹೆಚ್ಚಾದಂತೆ, ಅವರನ್ನು ಗುರುತಿಸಿ, ಜ್ಞಾಪಿಸಿಕೊಳ್ಳುವ ಅಗತ್ಯ ಎದ್ದುಬಂತು; ಅವರ ಮತ್ತು ಮರಿಯಳ ಚಿತ್ರಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸಲಾಯಿತು; ಮತ್ತು ಕ್ರಿಸ್ತನ ವಿಷಯದಲ್ಲಿ, ಅವನ ಕಲ್ಪಿತ ಶಾರೀರಿಕ ರೂಪ ಮಾತ್ರವಲ್ಲ, ಅವನ ಕ್ರೂಜೆ ಸಹ ಪೂಜ್ಯ ವಸ್ತುವಾಯಿತು. ರುಜುವಾತಿಲ್ಲದೆ
ನಂಬುವವರಿಗೆ ಅವು ಮಾಂತ್ರಿಕ ತಾಯಿತಿಗಳೂ ಆದವು. ಜನರ ಸ್ವಾಭಾವಿಕ ಮನೋಕಲ್ಪನೆಗಳು ಆ ಪವಿತ್ರ ಸ್ಮಾರಕ ವಸ್ತುಗಳನ್ನು, ಚಿತ್ರಗಳನ್ನು, ಮತ್ತು ವಿಗ್ರಹಗಳನ್ನು ಪೂಜೆಯ ವಸ್ತುಗಳನ್ನಾಗಿ ಮಾಡಿದವು; ಜನರು ಅವುಗಳ ಮುಂದೆ ಅಡ್ಡಬಿದ್ದು, ಅವುಗಳನ್ನು ಚುಂಬಿಸಿ, ಅವುಗಳ ಮುಂದೆ ಮೋಂಬತ್ತಿ ಮತ್ತು ಧೂಪವನ್ನು ಸುಟ್ಟು, ಅವುಗಳಿಗೆ ಹೂವು ಮುಡಿಸಿ, ಅವುಗಳ ಮಾಂತ್ರಿಕ ಪ್ರಭಾವದಿಂದ ಅದ್ಭುತಗಳನ್ನು ಅಪೇಕ್ಷಿಸಿದರು. . . . ಚರ್ಚ್ ಲೇಖಕರೂ ಸಮಿತಿಯೂ ಆ ಮೂರ್ತಿಗಳು ದೇವರುಗಳಲ್ಲವೆಂದೂ ಬದಲಾಗಿ ಕೇವಲ ಜ್ಞಾಪನಗಳೆಂದು ಪದೇ ಪದೇ ಹೇಳಿದರೂ, ಜನರು ಅಂತಹ ವ್ಯತ್ಯಾಸಗಳನ್ನು ಮಾಡುವುದನ್ನು ಅಲಕ್ಷ್ಯಮಾಡಿದರು.”ಇಂದು ಅದೇ ರೀತಿಯಲ್ಲಿ, ಧಾರ್ಮಿಕ ಚಿತ್ರಗಳನ್ನು ಉಪಯೋಗಿಸುವವರು, ಆ ಮೂರ್ತಿಗಳು ಗೌರವಾರ್ಹ ವಸ್ತುಗಳೇ ಹೊರತು ಆರಾಧನಾ ವಸ್ತುಗಳಲ್ಲವೆಂದು ವಾದಿಸುತ್ತಾರೆ. ದೇವರನ್ನು ಆರಾಧಿಸುವುದರಲ್ಲಿ ಧಾರ್ಮಿಕ ವರ್ಣಚಿತ್ರಗಳು ಯುಕ್ತವಾಗಿರುತ್ತವೆ ಮಾತ್ರವಲ್ಲ ಆವಶ್ಯಕವೂ ಆಗಿವೆಯೆಂದು ಅವರು ವಾದಿಸಿಯಾರು. ಪ್ರಾಯಶಃ ನೀವೂ ಹಾಗೆಣಿಸಬಹುದು. ಆದರೆ, ದೇವರು ಅದರ ಬಗ್ಗೆ ಏನೆಣಿಸುತ್ತಾನೆ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ. ಒಂದು ಧಾರ್ಮಿಕ ಚಿತ್ರವನ್ನು ಪೂಜ್ಯವೆಂದು ಎಣಿಸುವುದು ಆರಾಧನೆಯೇ ಆಗಬಲ್ಲದೊ? ಇಂತಹ ಆಚಾರಗಳು ವಾಸ್ತವದಲ್ಲಿ ಅಗೋಚರವಾದ ಅಪಾಯಗಳನ್ನು ತರಬಲ್ಲವೊ?
[ಪುಟ 4ರಲ್ಲಿರುವ ಚೌಕ/ಚಿತ್ರ]
ಧಾರ್ಮಿಕ ವರ್ಣಚಿತ್ರಗಳು
ರೋಮನ್ ಕ್ಯಾಥೊಲಿಕ್ ಆರಾಧನೆಯಲ್ಲಿ ವ್ಯಾಪಕವಾಗಿ ವಿಗ್ರಹಗಳನ್ನು ಉಪಯೋಗಿಸಲಾಗುತ್ತದೆ. ಆದರೆ ಆರ್ತೊಡಾಕ್ಸ್ ಚರ್ಚ್‌ನಲ್ಲಿ, ಕ್ರಿಸ್ತನ, ಮರಿಯಳ, “ಸಂತರ,” ದೇವದೂತರ, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವ್ಯಕ್ತಿಗಳು ಮತ್ತು ಘಟನೆಗಳು ಅಥವಾ ಆರ್ತೊಡಾಕ್ಸ್ ಚರ್ಚಿನ ಇತಿಹಾಸದ ಘಟನೆಗಳ ಕುರಿತಾದ ಅನೇಕ ವರ್ಣಚಿತ್ರಗಳಿವೆ. ಇವುಗಳನ್ನು ಸಾಮಾನ್ಯವಾಗಿ ಒಯ್ಯಲು ಸುಲಭವಾಗಿರುವ ಮರದ ಹಲಗೆಗಳಲ್ಲಿ ಚಿತ್ರಿಸಲಾಗುತ್ತದೆ.
ಆರ್ತೊಡಾಕ್ಸ್ ಚರ್ಚಿಗನುಸಾರವಾಗಿ, “ಸಂತರ ಧಾರ್ಮಿಕ ವರ್ಣಚಿತ್ರಗಳಲ್ಲಿರುವ ಚಿತ್ರಗಳು ಸಾಮಾನ್ಯ ರಕ್ತ ಮಾಂಸವಿರುವ ಮನುಷ್ಯರ ಚಿತ್ರಗಳಾಗಿ ತೋರುವುದಿಲ್ಲ.” ಅಲ್ಲದೆ, ಧಾರ್ಮಿಕ ವರ್ಣಚಿತ್ರಗಳಲ್ಲಿ “ಹಿಂದಕ್ಕೆ ಹೋದಂತೆ ಚಿತ್ರವು ಅಗಲವಾಗುವಂತೆ ಕಾಣುತ್ತದೆ.” ಅಂದರೆ, ಚಿತ್ರವು ದೂರ ಹೋದಂತೆ ಹೆಚ್ಚು ಅಗಲಕಿರಿದಾಗುವುದಿಲ್ಲ. ಮತ್ತು ಸಾಮಾನ್ಯವಾಗಿ, “ಅದರಲ್ಲಿ ನೆರಳುಗಳಾಗಲಿ, ಹಗಲು ಮತ್ತು ರಾತ್ರಿಯನ್ನು ಸೂಚಿಸುವ ವಿಧಗಳಾಗಲಿ ಇರುವುದಿಲ್ಲ.” ಇದಲ್ಲದೆ, ಒಂದು ಧಾರ್ಮಿಕ ವರ್ಣಚಿತ್ರದ ಮರವೂ ಬಣ್ಣವೂ “ದೇವರ ಸಾನ್ನಿಧ್ಯದಿಂದ ತುಂಬಿರಬಲ್ಲದು” ಎಂದೂ ನಂಬಲಾಗುತ್ತದೆ.
[ಪುಟ 4ರಲ್ಲಿರುವ ಚಿತ್ರ]
ವಿಗ್ರಹಗಳ ಉಪಯೋಗದ ಮೂಲವನ್ನು ವಿಧರ್ಮಿ ಪದ್ಧತಿಗಳಲ್ಲಿ ಪತ್ತೆಹಚ್ಚಬಹುದು
[ಪುಟ 3ರಲ್ಲಿರುವ ಚಿತ್ರ ಕೃಪೆ]
© AFP/CORBIS