ನಿಮ್ಮ ಭದ್ರತೆಯು ಯಾವುದರ ಮೇಲೆ ಆತುಕೊಂಡಿದೆ?
ನಿಮ್ಮ ಭದ್ರತೆಯು ಯಾವುದರ ಮೇಲೆ ಆತುಕೊಂಡಿದೆ?
ಪಶ್ಚಿಮ ಆಫ್ರಿಕದ ಒಂದು ಚಿಕ್ಕ ಹಳ್ಳಿಯಲ್ಲಿ, ಯುವ ಸೊಸ್ಯಾ ತನ್ನ ಕುಟುಂಬದ ಸದಸ್ಯರಿಗೂ ಸ್ನೇಹಿತರಿಗೂ ವಿದಾಯ ಹೇಳಿ ಹೊರಡುತ್ತಾನೆ. * ಆರ್ಥಿಕ ಭದ್ರತೆಗಾಗಿ ಹುಡುಕುತ್ತಾ ಅವನು ದೊಡ್ಡ ನಗರದೆಡೆಗೆ ತನ್ನ ಪ್ರಯಾಣವನ್ನು ಬೆಳೆಸುತ್ತಾನೆ. ಅವನು ಬಂದು ತಲಪಿದ ಸ್ವಲ್ಪ ಸಮಯದಲ್ಲೇ ಅವನ ನಿರೀಕ್ಷೆಯು ಕುಂದುತ್ತದೆ, ಏಕೆಂದರೆ ನಗರವು ಹೊನ್ನಿನ ಮಳೆ ಸುರಿಸುವ ಸ್ಥಳವಾಗಿಲ್ಲ ಎಂಬುದು ಅವನಿಗೆ ಅರಿವಾಗುತ್ತದೆ.
ನಗರದ ಜೀವಿತಕ್ಕೆ ಹೊಂದಿಕೊಳ್ಳಲು ಪ್ರಯಾಸಪಡುತ್ತಾ, ಸೊಸ್ಯೂ ತೀರ ನಿರಾಶೆಗೊಳ್ಳುತ್ತಾನೆ. ಅವನು ಕಲ್ಪಿಸಿಕೊಂಡಿದ್ದ ದೊಡ್ಡ ನಗರಕ್ಕೂ ವಾಸ್ತವದಲ್ಲಿದ್ದ ದೊಡ್ಡ ನಗರಕ್ಕೂ ದೊಡ್ಡ ಅಂತರವೇ ಇದ್ದಂತಿತ್ತು. ಈ ಎಲ್ಲ ಕಾಲಾವಧಿಯಲ್ಲಿ, ಆ ಚಿಕ್ಕ ಹಳ್ಳಿಯಲ್ಲಿ ಸೊಸ್ಯಾ ಬಿಟ್ಟುಬಂದ ಅವನ ಕುಟುಂಬ ಮತ್ತು ಸ್ನೇಹಿತರ ಬಳಿ ಹಿಂದಿರುಗಲು ಅವನ ಹೃದಯವು ಹಂಬಲಿಸುತ್ತದೆ. ಆದರೆ ಕೆಲವು ಹಳ್ಳಿಗರು ತನ್ನನ್ನು ಪರಿಹಾಸ್ಯ ಮಾಡಬಹುದು ಎಂಬ ಅವ್ಯಕ್ತ ಭಯ ಅವನಲ್ಲುಂಟಾಗುತ್ತದೆ. ‘ನನಗೆ ನಗರದಲ್ಲಿ ವಾಸಿಸಲು ಸಾಧ್ಯವಾಗದಿದ್ದ ಕಾರಣ, ನಾನು ಸೋತವ ಎಂದು ಜನರು ನನ್ನನ್ನು ಕರೆಯಬಹುದು’ ಎಂಬ ಚಿಂತೆ ಅವನಿಗಿದೆ.
ಇದಕ್ಕಿಂತ ಮಿಗಿಲಾಗಿ, ಅವನ ಹೆತ್ತವರಿಗಾಗಬಹುದಾದ ನಿರಾಶೆಯೇ ಸೊಸ್ಯಾನ ಚಿಂತಾಭಾರವನ್ನು ಹೆಚ್ಚಿಸುತ್ತಿದೆ. ಹಣಕಾಸಿನ ಬೆಂಬಲಕ್ಕಾಗಿ ಅವರು ಅವನ ಮೇಲೆ ಆತುಕೊಂಡಿದ್ದಾರೆ. ಈ ಭಾವನಾತ್ಮಕ ಒತ್ತಡದೊಂದಿಗೆ ಹೋರಾಡುತ್ತಾ, ಅವನು ಅಷ್ಟು ಗೌರವಾರ್ಹವಲ್ಲದ ಒಂದು ಕೆಲಸವನ್ನು ಹಿಡಿಯುತ್ತಾನೆ, ದಿನವಿಡೀ ದುಡಿಯುತ್ತಾನೆ, ಆದರೆ ಅವನು ಯೋಚಿಸಿದ್ದಂಥ ಸಂಬಳದಲ್ಲಿ ಕೊಂಚಭಾಗವನ್ನೇ ಸಂಪಾದಿಸುತ್ತಾನೆ. ಮಿತಿಮೀರಿದ ಕೆಲಸದಿಂದ ಅವನು ಬಳಲಿಹೋಗಿದ್ದಾನೆ. ಮತ್ತು ಅವನು ಹೆಚ್ಚು ಮೌಲ್ಯವುಳ್ಳದ್ದೆಂದು ಪರಿಗಣಿಸುವ ಕ್ರೈಸ್ತ ಚಟುವಟಿಕೆಗಳಿಗಾಗಿ ಉಳಿದಿರುವ ಸಮಯವು, ವಾರಗಳು ಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ತನ್ನ ಕುಟುಂಬದ ಮತ್ತು ಹಳೇ ಸ್ನೇಹಿತರ ಪ್ರೀತಿವಾತ್ಸಲ್ಯದಿಂದ ಬಹಳ ದೂರವಾಗಿರುವ ಇವನಿಗೆ ದುಃಖ ಮತ್ತು ಒಂಟಿತನದ ಅನಿಸಿಕೆಯಾಗುತ್ತದೆ. ತಾನು ಬಹಳವಾಗಿ ಇಚ್ಛಿಸಿದ ಭದ್ರತೆಯನ್ನು ನಗರವು ಕೊಟ್ಟಿಲ್ಲ ಎಂಬುದನ್ನು ಅವನು ಕಂಡುಕೊಳ್ಳುತ್ತಾನೆ.
ಹೆಸರುಗಳು ಮತ್ತು ಸ್ಥಳಗಳು ವ್ಯತ್ಯಾಸವಾಗಬಹುದಾದರೂ, ಸೊಸ್ಯಾನ ಶೋಚನೀಯ ಕಥೆಯು, ಪುನಃ ಪುನಃ ಹೇಳಲ್ಪಡುವ ಒಂದು ಕಥೆಯಾಗಿದೆ. ಸೊಸ್ಯಾ ನಗರಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದ್ದರಲ್ಲಿ ಸ್ವಾರ್ಥತೆಯು ಒಳಗೂಡಿರಲಿಲ್ಲ—ಅವನು ಕೇವಲ ಭದ್ರತೆಯನ್ನು ಹುಡುಕುತ್ತಿದ್ದನು. ತನ್ನ ಚಿಕ್ಕ ಹಳ್ಳಿಗಿಂತ ನಗರದಲ್ಲಿ ತನಗೆ ಅವಕಾಶಗಳು ಹೆಚ್ಚಾಗಿರುವವು ಎಂಬುದು ಅವನ ಪ್ರಾಮಾಣಿಕವಾದ ಅನಿಸಿಕೆಯಾಗಿತ್ತು. ಕೆಲವೊಮ್ಮೆ ಒಬ್ಬ ವ್ಯಕ್ತಿಯು ಪ್ರಾಪಂಚಿಕ ರೀತಿಯಲ್ಲಿ ತನ್ನ ಅಂತಸ್ತನ್ನು ಉತ್ತಮಗೊಳಿಸಿಕೊಳ್ಳಬಹುದು ಎಂಬುದು ನಿಜ, ಆದರೆ ಅದು ನಿಜವಾದ ಭದ್ರತೆಯನ್ನು ಕೊಡುವುದಿಲ್ಲ. ಅದು, ಸೊಸ್ಯಾನ ವಿಷಯದಲ್ಲಿ ಮತ್ತು ಇದನ್ನೇ ಪ್ರಯತ್ನಿಸುವ ಹೆಚ್ಚು ಮಂದಿಯ ವಿಷಯದಲ್ಲಿ ನನಸಾಗದ ಕನಸಾಗಿಯೇ ಉಳಿಯುವುದು. ಈ ಸನ್ನಿವೇಶವು ನಮ್ಮನ್ನು, ‘ಭದ್ರತೆ ಅಂದರೆ ಏನು?’ ಎಂದು ಕೇಳುವಂತೆ ಮಾಡುತ್ತದೆ.
ಭದ್ರತೆ ಎಂಬ ಶಬ್ದವು ವಿಭಿನ್ನವಾದ ಜನರಿಂದ ವಿಭಿನ್ನವಾದ ರೀತಿಯಲ್ಲಿ ಅರ್ಥನಿರೂಪಿಸಲ್ಪಡುತ್ತದೆ. ಭದ್ರತೆ ಅಂದರೆ “ಭಯದಿಂದ ವಿಮುಕ್ತಿ” ಅಥವಾ “ಚಿಂತಾಭಾರದಿಂದ ವಿಮುಕ್ತಿ” ಎಂದು ಒಂದು ನಿಘಂಟು ಹೇಳುತ್ತದೆ. ಸಂಪೂರ್ಣವಾಗಿ “ಭಯದಿಂದ ವಿಮುಕ್ತಿ”ಯು ಇಂದು ಅಸ್ತಿತ್ವದಲ್ಲೇ ಇಲ್ಲ ಎಂದು ಹೆಚ್ಚಿನ ಜನರು ಗ್ರಹಿಸುತ್ತಾರೆ. ಅವರನ್ನು ಸುತ್ತುವರಿದಿರುವ ಬೆದರಿಸುವಂಥ ಪರಿಸ್ಥಿತಿಗಳ ಹೊರತೂ, ಅವರಿಗೆ ಎಷ್ಟರ ವರೆಗೆ ಭದ್ರತೆಯಿಂದಿದ್ದೇವೆ ಎಂದು ಅನಿಸುತ್ತದೋ ಅಷ್ಟರ ಮಟ್ಟಿಗೆ ಅವರು ತೃಪ್ತರಾಗಿದ್ದಾರೆ.
ನಿಮ್ಮ ಕುರಿತಾಗಿ ಏನು? ನೀವು ಭದ್ರತೆಯನ್ನು ಎಲ್ಲಿ ಹುಡುಕುತ್ತೀರಿ? ಸೊಸ್ಯಾಗೆ ಅನಿಸಿದಂತೆ, ಅದು ಹಳ್ಳಿಯಲ್ಲಲ್ಲದೆ ನಗರದಲ್ಲಿ ಸಿಗುತ್ತದೋ? ಅಥವಾ ಹಣದಿಂದ—ಅದು ಎಲ್ಲಿಯೇ ಇಲ್ಲವೆ ಹೇಗೆಯೇ ನೀವು ಪಡೆದುಕೊಳ್ಳಲಿ—ಸಿಗುತ್ತದೋ? ಪ್ರಾಯಶಃ, ಸಮಾಜದಲ್ಲಿ ದೊಡ್ಡ ಸ್ಥಾನಮಾನವನ್ನು ಪಡೆಯುವುದರಿಂದ ಸಿಗುತ್ತದೋ? ಇವುಗಳಲ್ಲಿ ಯಾವುದರ ಮೇಲಾದರೂ ನಿಮಗೆ ಭರವಸೆಯಿದ್ದು, ಅದೇ ಭದ್ರತೆಯನ್ನು ಒದಗಿಸುತ್ತದೆಂದು ನೀವು ನಂಬುವುದಾದರೂ, ನಿಮಗೂ ನಿಮ್ಮ ಕುಟುಂಬಕ್ಕೂ ಅದು ಎಷ್ಟರ ತನಕ ಭದ್ರತೆಯನ್ನು ಒದಗಿಸುವುದು?
ಅನೇಕರು ಭದ್ರತೆಯನ್ನು ಹುಡುಕುವ ಮೂರು ವಿಧಗಳನ್ನು ನಾವು ಪರಿಗಣಿಸೋಣ—ಭೌಗೋಲಿಕ ನೆಲೆ; ಹಣ; ಸ್ಥಾನಮಾನ ಅಥವಾ ಅಂತಸ್ತು. ಅನಂತರ, ನೈಜವಾದ ಮತ್ತು ಸ್ಥಿರವಾದ ಭದ್ರತೆಯನ್ನು ಯಾವುದರ ಮೇಲೆ ಆಧಾರಿತವಾಗಿದೆ ಎಂಬುದನ್ನು ನಾವು ಪರೀಕ್ಷಿಸೋಣ.
[ಪಾದಟಿಪ್ಪಣಿ]
^ ಪ್ಯಾರ. 2 ಹೆಸರು ಬದಲಾಯಿಸಲ್ಪಟ್ಟಿದೆ.