ಓಡಿ ಹೋಗುವುದು ಯಾವಾಗ ವಿವೇಕಯುತವಾಗಿರುವುದು?
ಓಡಿ ಹೋಗುವುದು ಯಾವಾಗ ವಿವೇಕಯುತವಾಗಿರುವುದು?
ಇಂದಿನ ಲೋಕವು ಅನೇಕವೇಳೆ ಧೈರ್ಯದ ಸೋಗನ್ನು ಹಾಕಿಕೊಳ್ಳುವ ಮನೋಭಾವದಿಂದ ಹಾಗೂ ಹಗೆತನದಿಂದ ಅಥವಾ ಶೋಧನಾತ್ಮಕ ಸನ್ನಿವೇಶಗಳಿಂದ ಗುರುತಿಸಲ್ಪಡುತ್ತದೆ. ಒಂದು ಸನ್ನಿವೇಶದಿಂದ ಓಡಿ ಹೋಗುವ ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದುರ್ಬಲನಾಗಿ ಅಥವಾ ಹೇಡಿಯಾಗಿ ಪರಿಗಣಿಸಲ್ಪಡುತ್ತಾನೆ. ಅವನು ಅಪಹಾಸ್ಯಕ್ಕೂ ಗುರಿಯಾಗಬಹುದು.
ಆದರೂ, ಓಡಿ ಹೋಗುವುದು ವಿವೇಕಯುತವಾದದ್ದೂ ಧೈರ್ಯಭರಿತವಾದದ್ದೂ ಆಗಿರುವ ಸಮಯಗಳಿವೆ ಎಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. ಈ ಬೈಬಲ್ ಸತ್ಯವನ್ನು ದೃಢಪಡಿಸುತ್ತಾ, ತನ್ನ ಶಿಷ್ಯರನ್ನು ಶುಶ್ರೂಷೆಯ ಕೆಲಸಕ್ಕಾಗಿ ಕಳುಹಿಸುವ ಮುಂಚೆ ಯೇಸು ಅವರಿಗೆ ಹೇಳಿದ್ದು: “ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿ ಹೋಗಿರಿ.” (ಮತ್ತಾಯ 10:23) ಹೌದು, ಯೇಸುವಿನ ಶಿಷ್ಯರು ತಮ್ಮನ್ನು ಹಿಂಸಿಸುವವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕಾಗಿತ್ತು. ಇತರರನ್ನು ಬಲವಂತವಾಗಿ ಮತಾಂತರಿಸಲು ಪ್ರಯತ್ನಿಸುತ್ತಾ, ಅವರೊಂದು ಧಾರ್ಮಿಕ ಯುದ್ಧವನ್ನು ಮುಂದುವರಿಸಿಕೊಂಡು ಹೋಗಬೇಕಾಗಿರಲಿಲ್ಲ. ಅವರ ಬಳಿ ಶಾಂತಿಯ ಸಂದೇಶವಿತ್ತು. (ಮತ್ತಾಯ 10:11-14; ಅ. ಕೃತ್ಯಗಳು 10:34-37) ಆದುದರಿಂದ, ಇತರರ ಮೇಲೆ ಕೋಪಗೊಳ್ಳುವುದಕ್ಕೆ ಬದಲಾಗಿ, ಆ ಉದ್ರಿಕ್ತ ಸನ್ನಿವೇಶದ ಮೂಲದಿಂದ ಅಂತರವನ್ನು ಕಾಪಾಡಿಕೊಳ್ಳಲಿಕ್ಕಾಗಿ ಕ್ರೈಸ್ತರು ಅಲ್ಲಿಂದ ಓಡಿ ಹೋಗಬೇಕಾಗಿತ್ತು. ಈ ರೀತಿಯಲ್ಲಿ, ಅವರು ಒಳ್ಳೇ ಮನಸ್ಸಾಕ್ಷಿಯನ್ನು ಮತ್ತು ಯೆಹೋವನೊಂದಿಗಿನ ತಮ್ಮ ಅಮೂಲ್ಯ ಸಂಬಂಧವನ್ನು ಕಾಪಾಡಿಕೊಂಡರು.—2 ಕೊರಿಂಥ 4:1, 2.
ಬೈಬಲಿನ ಜ್ಞಾನೋಕ್ತಿ ಪುಸ್ತಕದಲ್ಲಿ ವ್ಯತಿರಿಕ್ತವಾದ ಒಂದು ಉದಾಹರಣೆಯನ್ನು ಕಂಡುಕೊಳ್ಳಸಾಧ್ಯವಿದೆ. ಶೋಧನೆಯ ಎದುರಿನಲ್ಲಿ ಓಡಿ ಹೋಗುವುದಕ್ಕೆ ಬದಲಾಗಿ, ಒಬ್ಬ ವೇಶ್ಯೆಯ ಹಿಂದೆ “ಹೋರಿಯು ವಧ್ಯಸ್ಥಾನಕ್ಕೆ ಹೋಗುವ” ಹಾಗೆ ಹೋದಂಥ ಒಬ್ಬ ಯುವಕನ ಕುರಿತು ಅದು ತಿಳಿಸುತ್ತದೆ. ಫಲಿತಾಂಶವೇನು? ತನ್ನ ಜೀವವನ್ನೇ ಒಳಗೂಡಿದ್ದ ಶೋಧನೆಗೆ ಒಳಗಾದದ್ದಕ್ಕಾಗಿ ಅವನಿಗೆ ವಿಪತ್ತೇ ಫಲಿಸಿತು.—ಜ್ಞಾನೋಕ್ತಿ 7:5-8, 21-23.
ಒಂದುವೇಳೆ ನೀವು ಲೈಂಗಿಕ ಅನೈತಿಕತೆಯನ್ನು ನಡಿಸುವ ಒಂದು ಶೋಧನೆಯನ್ನು ಎದುರಿಸಬೇಕಾಗಿರುವಲ್ಲಿ ಅಥವಾ ಇನ್ನಿತರ ಸಂಭಾವ್ಯ ಅಪಾಯವನ್ನು ಎದುರಿಸಬೇಕಾಗಿರುವಲ್ಲಿ ಆಗೇನು? ದೇವರ ವಾಕ್ಯಕ್ಕನುಸಾರ, ಓಡಿ ಹೋಗುವುದು ಅಂದರೆ ಆ ಕೂಡಲೆ ಆ ಸ್ಥಳದಿಂದ ಪಲಾಯನಗೈಯುವುದು ಸೂಕ್ತವಾದ ಕ್ರಿಯೆಯಾಗಿದೆ.—ಜ್ಞಾನೋಕ್ತಿ 4:14, 15; 1 ಕೊರಿಂಥ 6:18; 2 ತಿಮೊಥೆಯ 2:22.