ಪಟ್ಟುಹಿಡಿಯುವ ಮೂಲಕ ಯಶಸ್ಸು
ಪಟ್ಟುಹಿಡಿಯುವ ಮೂಲಕ ಯಶಸ್ಸು
ಆಧುನಿಕ ಯುಗದಲ್ಲಿ ಪಟ್ಟುಹಿಡಿಯುವ ಗುಣವು ಬಹಳ ವಿರಳವಾಗಿಬಿಟ್ಟಿದೆ. ಪಟ್ಟುಹಿಡಿಯುವುದಕ್ಕಿಂತ, ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿ ಇರುವುದರಲ್ಲೇ ಯಶಸ್ಸು ಅಡಕವಾಗಿದೆ ಎಂದು ಅನೇಕರು ನೆನಸುತ್ತಾರೆ. ಅಂಥವರನ್ನು ಯಾರು ತಾನೇ ದೂಷಿಸಸಾಧ್ಯ? ಕೇವಲ ಸ್ವಲ್ಪ ಪ್ರಯತ್ನ, ಸ್ವಲ್ಪ ಹೆಚ್ಚು ಹಣವಿದ್ದರೆ ಸಾಕು, ನೀವು ಏನೆಲ್ಲಾ ಬಯಸುತ್ತೀರೋ ಅದೆಲ್ಲವೂ ನಿಮ್ಮ ಸ್ವಾಧೀನವಾಗುವುದು ಎಂಬ ಅಭಿಪ್ರಾಯವನ್ನು, ಜನರ ಮನಸ್ಸಿನಲ್ಲಿ ಅವರಿಗರಿವಿಲ್ಲದೆ ಮೂಡಿಸುವ ಜಾಹೀರಾತುಗಳಿಂದ ವಾರ್ತಾಮಾಧ್ಯಮವು ತುಂಬಿತುಳುಕುತ್ತದೆ. ಇದ್ದಕ್ಕಿದ್ದಂತೆ ಯಶಸ್ಸನ್ನು ಗಳಿಸಿದವರ ಹಾಗೂ ಕಾಲೇಜು ಮುಗಿಸಿದ ಕೂಡಲೇ ಯಶಸ್ವಿಕರ ವ್ಯಾಪಾರಿಗಳಾಗಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿರುವ ಜಾಣ ಯುವಜನರ ಕುರಿತಾದ ಕಥೆಗಳನ್ನು ವಾರ್ತಾಪತ್ರಿಕೆಗಳು ದಿನಬೆಳಗಾದರೆ ಪ್ರಕಟಿಸುತ್ತಿರುತ್ತವೆ.
ಲೆನರ್ಡ್ ಪಿಟ್ಸ್ ಎಂಬ ಅಂಕಣಕಾರನು ಪ್ರಲಾಪಿಸುವುದು: “ಈ ರೀತಿಯ ಅಭಿಪ್ರಾಯದಿಂದ ತುಂಬಿರುವ ಸಮಾಜದಲ್ಲಿ ಪ್ರಸಿದ್ಧಿಯನ್ನು ಹೊಂದಿ, ದೊಡ್ಡ ವ್ಯಕ್ತಿಗಳಾಗುವುದು ಬಹಳ ಸುಲಭವಾಗಿರುವಂತೆ ತೋರುತ್ತದೆ. . . . ಒಬ್ಬನಿಗೆ ಕೇವಲ ಅದರ ಉಪಾಯ ಗೊತ್ತಿದ್ದು, ಸಾಮರ್ಥ್ಯವಿದ್ದರೆ ಅಥವಾ ದೈವಿಕ ಅಭಯಹಸ್ತವಿದ್ದರೆ ಸಾಕು, ಅದು ಯಾರು ಬೇಕಾದರೂ ಸಾಧಿಸಬಹುದಾದ ಸುಲಭವಾದ ವಿಷಯದಂತೆ ಕಾಣುತ್ತದೆ.”
ಪಟ್ಟುಹಿಡಿಯುವಿಕೆ ಎಂದರೇನು?
ಪಟ್ಟುಹಿಡಿಯುವುದೆಂದರೆ, ‘ಯಾವುದೇ ಒಂದು ಉದ್ದೇಶ, ಸ್ಥಿತಿ ಇಲ್ಲವೇ ಕೈಗೊಂಡ ಕಾರ್ಯವನ್ನು, ಏನೇ ಅಡೆತಡೆಗಳು ಬಂದರೂ ಇಲ್ಲವೇ ಸೋಲನ್ನು ಅನುಭವಿಸಿದರೂ ಬಿಟ್ಟುಕೊಡದೆ ದೃಢವಾಗಿ ಹಿಡಿದುಕೊಳ್ಳುತ್ತಾ ಅಚಲವಾಗಿರುವುದೇ ಆಗಿದೆ.’ ಸಂಕಷ್ಟಗಳ ಎದುರಿನಲ್ಲೂ ಛಲವನ್ನು ಬಿಟ್ಟುಕೊಡದೆ ದೃಢನಿಶ್ಚಯದಿಂದ ಮುಂದೆಸಾಗುವುದನ್ನು ಇದು ಅರ್ಥೈಸುತ್ತದೆ. ಈ ಗುಣಕ್ಕಿರುವ ಮಹತ್ವವನ್ನು ಬೈಬಲ್ ಎತ್ತಿತೋರಿಸುತ್ತದೆ. ಉದಾಹರಣೆಗೆ, ದೇವರ ವಾಕ್ಯವು ನಮಗೆ ಬುದ್ಧಿವಾದ ನೀಡುವುದು: “ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ [“ತವಕಪಡುತ್ತಾ ಇರಿ,” NW].” ಮತ್ತು “ತಟ್ಟಿರಿ [“ತಟ್ಟುತ್ತಾ ಇರಿ,” NW], ನಿಮಗೆ ತೆರೆಯುವದು,” “ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಿರಿ.” ಹಾಗೂ “ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.”ಮತ್ತಾಯ 6:33; ಲೂಕ 11:10; ರೋಮಾಪುರ 12:12 NW; 1 ಥೆಸಲೊನೀಕ 5:21.
—ಅನಿವಾರ್ಯ ಸೋಲುಗಳನ್ನು ನಿಭಾಯಿಸುವುದೇ ಪಟ್ಟುಹಿಡಿಯುವ ಗುಣದ ಒಂದು ಪ್ರಮುಖ ಭಾಗವಾಗಿದೆ. ಜ್ಞಾನೋಕ್ತಿ 24:16 ಹೇಳುವುದು: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು.” (ಓರೆಅಕ್ಷರಗಳು ನಮ್ಮವು.) ಕಷ್ಟತೊಂದರೆಗಳು ಇಲ್ಲವೇ ಸೋಲನ್ನು ಎದುರಿಸುವಾಗ ‘ಕೈಕಟ್ಟಿ ಕುಳಿತುಕೊಳ್ಳುವುದಕ್ಕಿಂತ’, ಪಟ್ಟುಹಿಡಿಯುವ ವ್ಯಕ್ತಿಯು ‘ಮತ್ತೆ ಏಳುತ್ತಾನೆ,’ ಬಿಡದೆ ಮುಂದುವರಿಯುತ್ತಾ ‘ಇರುತ್ತಾನೆ,’ ಪುನಃ ಪ್ರಯತ್ನಿಸುತ್ತಾನೆ.
ಆದರೆ, ಹೆಚ್ಚಿನವರು ತಮಗೆ ಎದುರಾಗಬಹುದಾದ ಕಷ್ಟತೊಂದರೆಗಳಿಗೆ ಮತ್ತು ಸೋಲುಗಳಿಗೆ ಮೊದಲೇ ಸಜ್ಜಾಗಿರುವುದಿಲ್ಲ. ಪಟ್ಟುಹಿಡಿಯುವ ಛಲವನ್ನು ಅವರು ಎಂದೂ ಬೆಳೆಸಿಕೊಂಡಿರುವುದಿಲ್ಲವಾದ್ದರಿಂದ ಸುಲಭವಾಗಿ ಬಿಟ್ಟುಕೊಡುತ್ತಾರೆ. “ಅನೇಕರು ಸೋಲನ್ನು ಅನುಭವಿಸುವಾಗ ತಮಗೇ ಹಾನಿಯುಂಟಾಗುವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ” ಎಂದು ಮಾರ್ಲೀ ಕ್ಯಾಲಹಾನ್ ಗಮನಿಸುತ್ತಾರೆ. “ಅವರು ತಮ್ಮ ಕುರಿತು ಮರುಕ ಪಡುವುದರಲ್ಲೇ ಮುಳುಗಿಬಿಡುತ್ತಾರೆ, ಎಲ್ಲರನ್ನೂ ದೂಷಿಸುತ್ತಾರೆ, ತೀವ್ರ ಅಸಮಾಧಾನಗೊಳ್ಳುತ್ತಾರೆ ಮತ್ತು . . . ಕೈಕಟ್ಟಿ ಕುಳಿತುಬಿಡುತ್ತಾರೆ.”
ಇದು ನಿಜವಾಗಿಯೂ ದುಃಖಕರ ಸಂಗತಿಯೇ. ಪಿಟ್ಸ್ ಸೂಚಿಸುವುದೇನೆಂದರೆ, “ಈ ವಿಷಮ ಪರೀಕ್ಷೆಗೆ ಒಳಗಾಗಲು ಒಂದು ಕಾರಣವಿದೆ. ಕಷ್ಟದ ಸಮಯಗಳಲ್ಲೂ ಯಾವುದೋ ಒಂದು ಒಳಿತನ್ನು ಕಂಡುಕೊಳ್ಳಬಹುದೆಂಬುದನ್ನು ನಾವು ಮರೆತುಬಿಡುತ್ತೇವೆ.” ಆ ಒಳಿತು ಯಾವುದು? ಅವರು ಮುಕ್ತಾಯಗೊಳಿಸುವುದು: “[ಒಬ್ಬನ] ವೈಫಲ್ಯವು ಮಾರಕವೂ ಅಲ್ಲ, ಸೋಲು ನಿತ್ಯವೂ ಅಲ್ಲ. ಒಬ್ಬನು ಸಮಸ್ಯೆಯ ಆಳವನ್ನು ಅರಿತುಕೊಳ್ಳುತ್ತಾನೆ ಮತ್ತು ಅದಕ್ಕಾಗಿ ಸನ್ನದ್ಧನಾಗುತ್ತಾನೆ.” ಇದನ್ನು ಬೈಬಲ್ ಸರಳವಾಗಿ ಹೀಗೆ ಹೇಳುತ್ತದೆ: “ಶ್ರಮೆಯಿಂದ ಸಮೃದ್ಧಿ.”—ಜ್ಞಾನೋಕ್ತಿ 14:23.
ನಿಜ, ಒಮ್ಮೆ ಸೋಲನ್ನು ಅನುಭವಿಸಿದ ಮೇಲೆ ಪುನಃ ಸ್ಫೂರ್ತಿಯಿಂದ ಮುಂದೆಸಾಗುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಕೆಲವೊಮ್ಮೆ ನಮಗೆ ಎದುರಾಗುವ ಪಂಥಾಹ್ವಾನಗಳು, ನಮ್ಮ ಎಲ್ಲಾ ಪ್ರಯತ್ನಗಳಿಗೆ ಆತಂಕವನ್ನು ಒಡ್ಡುತ್ತಿರುವಂತೆ ತೋರಬಹುದು. ನಮ್ಮ ಗುರಿಗಳು ಸನ್ನಿಹಿತವಾಗುತ್ತಿರುವ ಬದಲು, ನಮ್ಮ ಕೈಗೆ ನಿಲುಕದೆ, ಸ್ವಲ್ಪ ಸ್ವಲ್ಪವಾಗಿ ದೂರಹೋಗುತ್ತ ಮರೆಯಾಗುತ್ತಿರುವಂತೆ ಕಾಣಬಹುದು. ಎಲ್ಲವೂ ತಲೆಕೆಳಗಾದಂತೆ, ಕೈಯಲ್ಲಾಗದವರಂತೆ ನಮಗೆ ಅನಿಸಬಹುದು ಮತ್ತು ನಿರಾಶೆಗೊಳ್ಳುತ್ತಾ ನಾವು ಖಿನ್ನರೂ ಆಗಬಹುದು. (ಜ್ಞಾನೋಕ್ತಿ 24:10) ಆದರೂ, ಬೈಬಲ್ ನಮ್ಮನ್ನು ಪ್ರೋತ್ಸಾಹಿಸುವುದು: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.” (ಓರೆಅಕ್ಷರಗಳು ನಮ್ಮವು.)—ಗಲಾತ್ಯ 6:9.
ಪಟ್ಟುಹಿಡಿಯಲು ನಮಗೆ ಯಾವುದು ಸಹಾಯಮಾಡುವುದು?
ಒಂದು ನಿರ್ದಿಷ್ಟ ಮಾರ್ಗವನ್ನು ಆಯ್ಕೆಮಾಡಿದ ನಂತರ, ಅದರಲ್ಲಿ ಪಟ್ಟುಹಿಡಿದು ಮುಂದುವರಿಯಲಿಕ್ಕಾಗಿರುವ ಮೊದಲ ಹೆಜ್ಜೆಯು, ಸಾರ್ಥಕವಾದ ಹಾಗೂ ಸಾಧಿಸಬಹುದಾದ ಗುರಿಗಳನ್ನಿಡುವುದೇ ಆಗಿದೆ. ಅಪೊಸ್ತಲ ಪೌಲನು ಇದನ್ನು ನಿಶ್ಚಯವಾಗಿಯೂ ಅರ್ಥಮಾಡಿಕೊಂಡಿದ್ದನು. ಅವನು ಕೊರಿಂಥದವರಿಗೆ ಹೇಳಿದ್ದು: “ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ.” ಒಬ್ಬ ಓಟಗಾರನು ತನ್ನ ಪೂರ್ಣ ಶಕ್ತಿಯನ್ನು ಉಪಯೋಗಿಸುತ್ತಾ ಸ್ಪರ್ಧೆಯ ಅಂತಿಮ ಗೆರೆಯನ್ನು ದಾಟುವುದರ ಮೇಲೆಯೇ ತನ್ನ ಮನಸ್ಸನ್ನು ಕೇಂದ್ರೀಕರಿಸುವಂತೆ, ತನ್ನ ಪ್ರಯತ್ನಗಳು ಸಫಲವಾಗಬೇಕಾದರೆ ತನಗೆ ಸ್ಪಷ್ಟವಾದ ಗುರಿಗಳಿರಬೇಕೆಂಬುದು ಪೌಲನಿಗೆ ಗೊತ್ತಿತ್ತು. “ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ” ಎಂದು ಅವನು ಅವರನ್ನು ಪ್ರೋತ್ಸಾಹಿಸಿದನು. (1 ಕೊರಿಂಥ 9:24, 26) ಇದನ್ನು ನಾವು ಹೇಗೆ ಮಾಡಬಹುದು?
“ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಎಂದು ಜ್ಞಾನೋಕ್ತಿ 14:15 ಹೇಳುತ್ತದೆ. ಜೀವನದಲ್ಲಿ ನಾವು ಉಪಯೋಗಿಸುವ ವಿಧಾನಗಳನ್ನು ಆಗಿಂದಾಗ್ಗೆ ಪುನಃ ಮೌಲ್ಯಮಾಪನ ಮಾಡುತ್ತಾ, ನಾವು ಜೀವನದಲ್ಲಿ ಎತ್ತ ಸಾಗುತ್ತಿದ್ದೇವೆ ಮತ್ತು ಹೊಂದಾಣಿಕೆಗಳನ್ನು ಮಾಡಬೇಕಾದ ಆವಶ್ಯಕತೆಯಿದೆಯೇ ಎಂಬುದನ್ನು ಸ್ವತಃ ಕೇಳಿಕೊಳ್ಳಬೇಕು. ನಾವು ಏನನ್ನು ಸಾಧಿಸಬಯಸುತ್ತೇವೆ ಮತ್ತು ಏಕೆ ಎಂಬುದನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಟ್ಟುಕೊಳ್ಳುವುದು ಬಹು ಪ್ರಾಮುಖ್ಯ. ನಮ್ಮ ಅಂತಿಮ ಗುರಿಯನ್ನು ಮನಸ್ಸಿನಲ್ಲಿ ದೃಢವಾಗಿ ಇಟ್ಟುಕೊಳ್ಳುವುದಾದರೆ ನಾವು ಅದನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾರೆವು. “ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.” ಹೀಗೆ ಮಾಡುವುದಾದರೆ, “ನಿನ್ನ ಮಾರ್ಗಗಳೆಲ್ಲಾ ದೃಢ”ವಾಗಿರುವವು ಎಂದು ಪ್ರೇರಿತ ಜ್ಞಾನೋಕ್ತಿಯು ಪ್ರೇರೇಪಿಸುತ್ತದೆ.—ಜ್ಞಾನೋಕ್ತಿ 4:25, 26.
ನಿಮ್ಮ ಗುರಿಗಳನ್ನು ಸ್ಪಷ್ಟವಾಗಿ ತಿಳಿದುಕೊಂಡ ನಂತರ, ಮುಂದಿನ ಹೆಜ್ಜೆಯು, ಅವುಗಳನ್ನು ಸಾಧಿಸಲು ಏನು ಮಾಡಬೇಕು ಎಂಬುದರ ಕುರಿತು ವಿಶ್ಲೇಷಿಸುವುದೇ ಆಗಿದೆ. ಯೇಸು ಕೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು . . . ಎಂದು ಲೆಕ್ಕಮಾಡುವದಿಲ್ಲವೇ?” (ಲೂಕ 14:28) ಈ ತತ್ವಕ್ಕೆ ಹೊಂದಿಕೆಯಲ್ಲಿ, ಒಬ್ಬ ಮಾನಸಿಕ ಆರೋಗ್ಯ ತಜ್ಞನು ಗಮನಿಸಿದ್ದು: “ಯಶಸ್ವಿಕರ ವ್ಯಕ್ತಿಗಳಲ್ಲಿ ನಾನು ಗಮನಿಸಿರುವ ಒಂದು ವಿಷಯವೇನೆಂದರೆ, ತಮ್ಮ ಜೀವನದಲ್ಲಾಗುವ ಕಾರಣ ಮತ್ತು ಕಾರ್ಯಭಾವದ ಮಧ್ಯೆಯಿರುವ ಸಂಬಂಧವನ್ನು ಅವರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿರುತ್ತಾರೆ. ಯಶಸ್ವಿಕರ ಜನರಿಗೆ ಏನಾದರೂ ಬೇಕಿದ್ದರೆ ಅದನ್ನು ಪಡೆಯುವುದಕ್ಕಾಗಿ ಅಗತ್ಯವಿರುವ ಎಲ್ಲಾ ವಿಷಯಗಳನ್ನು ಮಾಡಬೇಕೆಂಬುದನ್ನು ಅವರು ತಿಳಿದಿರುತ್ತಾರೆ.” ನಮ್ಮ ಗುರಿಯನ್ನು ಸಾಧಿಸಲು ನಾವು ತೆಗೆದುಕೊಳ್ಳಬೇಕಾದ ಎಲ್ಲ ಅಗತ್ಯ ಹೆಜ್ಜೆಗಳ ಸ್ಪಷ್ಟ ತಿಳುವಳಿಕೆಯಿರುವುದು, ಆ ಗುರಿಯ ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯಮಾಡುವುದು. ಅಷ್ಟುಮಾತ್ರವಲ್ಲ, ಒಂದುವೇಳೆ ನಾವು ನಮ್ಮ ಪ್ರಯತ್ನದಲ್ಲಿ ಸೋಲುವುದಾದರೆ, ಮತ್ತೊಮ್ಮೆ ಅದನ್ನು ಪ್ರಾರಂಭಿಸಲು ಅದು ಸಹಾಯಮಾಡುವುದು. ಇಂಥ ವಿಶ್ಲೇಷಣೆಯು ಆರ್ವಿಲ್ ಮತ್ತು ವಿಲ್ಬರ್ ರೈಟ್ ಸಹೋದರರ ಯಶಸ್ಸಿಗೆ ಮೂಲೆಗಲ್ಲಾಗಿತ್ತು.
ಆದುದರಿಂದ, ಸೋಲನ್ನು ಅನುಭವಿಸುವಾಗ, ನಿಮ್ಮಿಂದಾದಷ್ಟು ಅದನ್ನು ಸಕಾರಾತ್ಮಕ ಬೆಳಕಿನಲ್ಲಿ ವೀಕ್ಷಿಸಿ ಮತ್ತು ಕಲಿಯುವುದಕ್ಕಾಗಿರುವ ಒಂದು ಅನುಭವವಾಗಿ ತೆಗೆದುಕೊಳ್ಳಿ. ಪರಿಸ್ಥಿತಿಯನ್ನು ವಿಶ್ಲೇಷಿಸಿ, ನೀವು ಎಲ್ಲಿ ಎಡವಿದ್ದೀರೆಂಬುದನ್ನು ಗ್ರಹಿಸಿರಿ. ನಂತರ ತಪ್ಪನ್ನು ಸರಿಪಡಿಸಿರಿ ಇಲ್ಲವೇ ಆ ಬಲಹೀನತೆಗೆ ಪರಿಹಾರವನ್ನು ಹುಡುಕಿರಿ. ಜ್ಞಾನೋಕ್ತಿ 20:18) ಸ್ವಾಭಾವಿಕವಾಗಿಯೇ, ಪ್ರತಿಯೊಂದು ಪ್ರಯತ್ನದೊಂದಿಗೆ ನೀವು ಹೆಚ್ಚು ಪರಿಣತಿಯನ್ನು ಹಾಗೂ ಕುಶಲತೆಯನ್ನು ಬೆಳೆಸಿಕೊಳ್ಳುವಿರಿ. ಹೀಗೆ, ಅದು ಅಂತಿಮವಾಗಿ ನಿಮ್ಮ ಯಶಸ್ಸಿಗೆ ನೆರವಾಗುವುದು.
ಇದು ಇತರರೊಂದಿಗೆ ಮಾತಾಡಲು ಸಹಾಯಮಾಡುವುದು, ಏಕೆಂದರೆ “ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು.” (ಪಟ್ಟುಹಿಡಿಯುವಿಕೆಯಲ್ಲಿ ಮೂರನೇ ಪ್ರಮುಖ ಅಂಶವು, ಸುಸಂಗತವಾದ ಕ್ರಿಯೆಯಾಗಿದೆ. ಅಪೊಸ್ತಲ ಪೌಲನು ನಮ್ಮನ್ನು ಪ್ರೇರೇಪಿಸುವುದು: “ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.” (ಫಿಲಿಪ್ಪಿ 3:16) ಒಬ್ಬ ಶಿಕ್ಷಕನು ಬರೆದಂತೆ, “ಮಿತವಾದ ಹಾಗೂ ಸುಸಂಗತವಾದ ಕ್ರಿಯೆಗಳು ಸ್ವಲ್ಪಕಾಲದ ನಂತರ ಅತ್ಯುತ್ತಮವಾದ ಫಲಿತಾಂಶಗಳನ್ನು ನೀಡುವವು.” ಮೊಲ ಮತ್ತು ಆಮೆಯ ಕುರಿತ ಪ್ರಸಿದ್ಧ ಕಾಲ್ಪನಿಕ ನೀತಿಕಥೆಯಲ್ಲಿ ಇದನ್ನು ಚೆನ್ನಾಗಿ ದೃಷ್ಟಾಂತಿಸಲಾಗಿದೆ. ಆಮೆಯು ಮೊಲಕ್ಕಿಂತ ನಿಧಾನವಾಗಿ ಚಲಿಸುತ್ತಿದ್ದರೂ, ಕೊನೆಯಲ್ಲಿ ಆಮೆಯೇ ಸ್ಪರ್ಧೆಯಲ್ಲಿ ಗೆದ್ದಿತು. ಏಕೆ? ಏಕೆಂದರೆ ಆಮೆಯು ಸ್ಥಿರವಾಗಿಯೂ ಶಿಸ್ತಿನಿಂದಲೂ ಹೆಜ್ಜೆಹಾಕುತ್ತಿತ್ತು. ಅದು ತಾನು ಗೆಲ್ಲಲಾರೆ ಎಂದು ಬಿಟ್ಟುಕೊಡಲಿಲ್ಲ, ಬದಲಿಗೆ ತನ್ನಿಂದ ಎಷ್ಟು ಸಾಧ್ಯವೋ ಅಷ್ಟೇ ವೇಗವಾಗಿ ಚಲಿಸುತ್ತಾ, ಅಂತಿಮ ಗೆರೆಯನ್ನು ದಾಟುವ ವರೆಗೂ ಹಾಗೆಯೇ ಮುಂದುವರಿಯಿತು. ಸುಸಂಘಟಿತ, ಶಿಸ್ತಿನ ವ್ಯಕ್ತಿಯು ಏಕರೀತಿಯಲ್ಲಿ ಪ್ರಗತಿಯನ್ನು ಮಾಡುವುದರಿಂದ, ಅವನು ಯಾವಾಗಲೂ ಸ್ಫೂರ್ತಿಯಿಂದಿರುತ್ತಾನೆ. ಹೀಗಿರುವುದರಿಂದ ಅವನು ಬಿಟ್ಟುಕೊಡುವ ಇಲ್ಲವೇ ಸ್ಪರ್ಧೆಯಿಂದ ಹೊರಹಾಕಲ್ಪಡುವ ಸಂಭವಗಳು ಬಹಳ ಕಡಿಮೆ. ಹೌದು, ನಿಮ್ಮ ಗುರಿಯನ್ನು ಸಾಧಿಸಬೇಕೆಂದೇ “ಓಡಿರಿ.”
ಸಾರ್ಥಕವಾದ ಗುರಿಗಳನ್ನು ಆಯ್ಕೆಮಾಡುವುದು
ಪಟ್ಟುಹಿಡಿಯುವಿಕೆಗೆ ಯಾವುದೇ ಬೆಲೆಯಿರಬೇಕಾದರೆ, ನಾವು ಸಾರ್ಥಕವಾದ ಗುರಿಗಳನ್ನು ಹೊಂದಿರಬೇಕು. ಸಂತೋಷವನ್ನು ತರದಂಥ ವಿಷಯಗಳಿಗಾಗಿ ಅನೇಕರು ಹೆಣಗಾಡುತ್ತಾರೆ. ಆದರೆ ಬೈಬಲ್ ಸೂಚಿಸುವುದು: “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು . . . ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.” (ಯಾಕೋಬ 1:25) ಹೌದು, ಬೈಬಲಿನಲ್ಲಿ ಕೊಡಲ್ಪಟ್ಟಿರುವ ದೇವರ ನಿಯಮವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಅದನ್ನು ಅಭ್ಯಾಸಿಸುವುದು ಸಾರ್ಥಕವಾದ ಗುರಿಯಾಗಿದೆ. ಏಕೆ? ಮುಖ್ಯ ಕಾರಣವೇನೆಂದರೆ, ದೇವರ ನಿಯಮವು ಆತನ ಪರಿಪೂರ್ಣ ಮತ್ತು ನೀತಿಯ ಮಟ್ಟಗಳ ಮೇಲೆ ಆಧಾರಿತವಾಗಿದೆ. ಸೃಷ್ಟಿಕರ್ತನೋಪಾದಿ ತನ್ನ ಸೃಷ್ಟಿಜೀವಿಗಳಿಗೆ ಯಾವುದು ಉತ್ತಮವಾದುದೆಂದು ಆತನು ಬಲ್ಲವನಾಗಿದ್ದಾನೆ. ಆದುದರಿಂದ, ದೇವರ ಆಜ್ಞೆಗಳನ್ನು ಕಲಿಯುವುದರಲ್ಲಿ ಮತ್ತು ನಮ್ಮ ಜೀವಿತದಲ್ಲಿ ಅವುಗಳನ್ನು ಅನ್ವಯಿಸುವುದರಲ್ಲಿ ನಾವು ಪಟ್ಟುಹಿಡಿಯುವುದಾದರೆ, ಅಂಥ ಪಟ್ಟುಹಿಡಿಯುವಿಕೆಯು ಖಂಡಿತವಾಗಿಯೂ ನಮಗೆ ಸಂತೋಷವನ್ನು ತರುವದು. “ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎಂದು ಜ್ಞಾನೋಕ್ತಿ 3:5, 6 ಮಾತುಕೊಡುತ್ತದೆ.
ಅದರೊಂದಿಗೆ, ದೇವರ ಮತ್ತು ಆತನ ಮಗನ ಕುರಿತು ಜ್ಞಾನವನ್ನು ತೆಗೆದುಕೊಳ್ಳುವುದು “ನಿತ್ಯಜೀವ”ವಾಗಿದೆ ಎಂದು ಯೇಸು ಹೇಳಿದನು. (ಯೋಹಾನ 17:3) ನಾವು ಈ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದು ಬೈಬಲ್ ಪ್ರವಾದನೆಗಳು ಸೂಚಿಸುತ್ತವೆ. (2 ತಿಮೊಥೆಯ 3:1-5; ಮತ್ತಾಯ 24:3-13) ಬಲುಬೇಗನೆ ದೇವರ ರಾಜ್ಯವು, ಅಂದರೆ ಆತನ ನೀತಿಯುತ ಸರ್ಕಾರವು, ಭೂಮಿಯ ನಿವಾಸಿಗಳ ಮೇಲೆ ತನ್ನ ಆಳ್ವಿಕೆಯನ್ನು ಪ್ರತಿಷ್ಠಾಪಿಸುವುದು. (ದಾನಿಯೇಲ 2:44; ಮತ್ತಾಯ 6:10) ಈ ಸರ್ಕಾರವು, ನಾವು ಹಿಂದೆಂದೂ ಕಂಡಿರದಂಥ ಶಾಂತಿ, ಸಮೃದ್ಧಿ ಮತ್ತು ಎಲ್ಲಾ ವಿಧೇಯ ಮಾನವರಿಗೆ ಒಳಿತನ್ನು ಉಂಟುಮಾಡಲಿರುವ ಒಂದು ಯುಗವನ್ನು ಕರೆತರುವುದು. (ಕೀರ್ತನೆ 37:10, 11; ಪ್ರಕಟನೆ 21:4) “ದೇವರು ಪಕ್ಷಪಾತಿಯಲ್ಲ” ಎಂದು ಅ. ಕೃತ್ಯಗಳು 10:34 ಹೇಳುತ್ತದೆ. ಹೌದು, ಈ ಪ್ರಯೋಜನಗಳನ್ನು ಅನುಭವಿಸಲು ಎಲ್ಲರಿಗೂ ಆಹ್ವಾನವಿದೆ!
ಬೈಬಲ್ ಅರ್ಥಭರಿತವಾಗಿದ್ದು, ವಿವೇಕದಿಂದ ತುಂಬಿರುವ ಒಂದು ಪುರಾತನ ಗ್ರಂಥವಾಗಿದೆ. ಅದನ್ನು ಅರ್ಥಮಾಡಿಕೊಳ್ಳಲು ಸಮಯ ಮತ್ತು ಪ್ರಯತ್ನದ ಅಗತ್ಯವಿದೆ. ಆದರೆ ದೇವರ ಸಹಾಯದೊಂದಿಗೆ, ಪಟ್ಟುಹಿಡಿಯುತ್ತ ಅದರ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯಾಸಪಡುವುದಾದರೆ, ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಸರಳ ಪುಸ್ತಕದಂತಿರುವುದು. (ಜ್ಞಾನೋಕ್ತಿ 2:4, 5; ಯಾಕೋಬ 1:5) ನಿಜ, ನಾವು ಏನನ್ನು ಕಲಿಯುತ್ತೇವೋ ಅದನ್ನು ಅನ್ವಯಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನಮ್ಮ ಆಲೋಚನೆ ಇಲ್ಲವೇ ಅಭ್ಯಾಸಗಳಲ್ಲಿ ಹೊಂದಾಣಿಕೆಗಳನ್ನು ಮಾಡಬೇಕಾದ ಅಗತ್ಯವಿರಬಹುದು. ನಮ್ಮ ಆಪ್ತ ಸ್ನೇಹಿತರು ಇಲ್ಲವೇ ಕುಟುಂಬ ಸದಸ್ಯರು ನಾವು ಬೈಬಲನ್ನು ಅಭ್ಯಾಸಿಸುವುದರ ಕುರಿತು ವಿರೋಧವನ್ನೂ ವ್ಯಕ್ತಪಡಿಸಬಹುದು. ಆದುದರಿಂದ ಪಟ್ಟುಹಿಡಿಯುವುದು ಬಹಳ ಮುಖ್ಯವಾಗಿದೆ. ಯಾರು “ಒಳ್ಳೇದನ್ನು ಬೇಸರಗೊಳ್ಳದೆ ಮಾಡುತ್ತಾರೋ” ಅವರಿಗೆ ದೇವರು ನಿತ್ಯಜೀವವನ್ನು ಕೊಡುವನು ಎಂದು ಅಪೊಸ್ತಲ ಪೌಲನು ಜ್ಞಾಪಿಸುತ್ತಾನೆ. (ರೋಮಾಪುರ 2:7) ಈ ಗುರಿಯನ್ನು ಸಾಧಿಸುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.
ದೇವರ ಮತ್ತು ಆತನ ಚಿತ್ತದ ಕುರಿತು ಕಲಿಯುವುದರಲ್ಲಿ ಮತ್ತು ನೀವು ಏನನ್ನು ಕಲಿಯುತ್ತಿರೋ ಅದನ್ನು ಅನ್ವಯಿಸಿಕೊಳ್ಳುವುದರಲ್ಲಿ ಪಟ್ಟುಹಿಡಿಯುವುದಾದರೆ, ನೀವು ಖಂಡಿತವಾಗಿ ಯಶಸ್ಸನ್ನು ಕಾಣುವಿರಿ ಎಂಬ ವಿಷಯದಲ್ಲಿ ಖಚಿತರಾಗಿರಿ.—ಕೀರ್ತನೆ 1:1-3.
[ಪುಟ 6ರಲ್ಲಿರುವ ಚಿತ್ರ]
ದೇವರ ಮತ್ತು ಆತನ ಚಿತ್ತದ ಕುರಿತು ಕಲಿಯುವುದರಲ್ಲಿ ನೀವು ಪಟ್ಟುಹಿಡಿಯುವುದಾದರೆ, ಖಂಡಿತವಾಗಿಯೂ ನೀವು ಯಶಸ್ಸನ್ನು ಕಾಣುವಿರಿ
[ಪುಟ 4ರಲ್ಲಿರುವ ಚಿತ್ರ ಕೃಪೆ]
Culver Pictures