ಹಿಂಸಕನು ಒಂದು ದೊಡ್ಡ ಬೆಳಕನ್ನು ನೋಡುತ್ತಾನೆ
ಹಿಂಸಕನು ಒಂದು ದೊಡ್ಡ ಬೆಳಕನ್ನು ನೋಡುತ್ತಾನೆ
ಯೇಸುವಿನ ಹಿಂಬಾಲಕರ ಮೇಲೆ ಸೌಲನು ಕಿಡಿಕಾರುತ್ತಿದ್ದನು. ಈಗಾಗಲೇ ಅವನು ಅವರನ್ನು ಯೆರೂಸಲೇಮಿನಲ್ಲಿ ಹಿಂಸಿಸಿದ್ದನು, ಮತ್ತು ಸ್ತೆಫನನನ್ನು ಕಲ್ಲೆಸೆದು ಕೊಲ್ಲಿಸಿದನು ಕೂಡ. ಇದೆಲ್ಲವನ್ನು ಮಾಡಿದರೂ ಸಂತೃಪ್ತನಾಗದೆ ಈಗ ಅವನು ಆ ದಬ್ಬಾಳಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಿದನು. “ಸೌಲನು ಇನ್ನು ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ ಮಹಾಯಾಜಕನ ಬಳಿಗೆ ಹೋಗಿ—ಆ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರದವರಿಗೆ ನೀನು ಕಾಗದವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.”—ಅ. ಕೃತ್ಯಗಳು 9:1, 2.
ಸೌಲನು ದಮಸ್ಕದ ಕಡೆಗೆ ನಡೆಯುತ್ತಾ ಹೋಗುತ್ತಿದ್ದಾಗ, ತನ್ನ ನಿಯೋಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಗೆ ಜಾರಿಗೆ ತರುವುದು ಎಂಬುದರ ಕುರಿತಾಗಿ ಯೋಚಿಸುತ್ತಾ ಇದ್ದಿರಬಹುದು. ಮಹಾಯಾಜಕನಿಂದ ಅವನಿಗೆ ಅಧಿಕಾರವು ಸಿಕ್ಕಿದ್ದರಿಂದ, ದಮಸ್ಕ ನಗರದಲ್ಲಿದ್ದ ದೊಡ್ಡ ಯೆಹೂದಿ ಸಮುದಾಯದ ನಾಯಕರು ನಿಸ್ಸಂದೇಹವಾಗಿಯೂ ಅವನೊಂದಿಗೆ ಸಹಕರಿಸಲಿದ್ದರು. ಸೌಲನು ಅವರ ಸಹಾಯವನ್ನು ತೆಗೆದುಕೊಳ್ಳಲಿದ್ದನು.
ಸೌಲನು ತನ್ನ ಗಮ್ಯಸ್ಥಾನವನ್ನು ಸಮೀಪಿಸಿದಂತೆ, ಅವನ ಉದ್ವೇಗವು ತೀವ್ರವಾಗುತ್ತಾ ಇದ್ದಿರಬಹುದು. ಯೆರೂಸಲೇಮಿನಿಂದ ಸುಮಾರು 220 ಕಿಲೊಮೀಟರ್‌ಗಳಷ್ಟು ದೂರದಲ್ಲಿದ್ದ ದಮಸ್ಕಕ್ಕೆ ಕಾಲ್ನಡಿಗೆಯ ಪ್ರಯಾಣವು ಏಳೆಂಟು ದಿನಗಳದ್ದಾಗಿದ್ದು, ತುಂಬ ದಣಿಸುವಂಥದ್ದಾಗಿತ್ತು. ಮಧ್ಯಾಹ್ನದ ಸಮಯದಲ್ಲಿ, ಇದ್ದಕ್ಕಿದ್ದಂತೆ ಸೂರ್ಯನಿಗಿಂತಲೂ ಉಜ್ವಲವಾದ ಒಂದು ಬೆಳಕು ಸೌಲನ ಸುತ್ತಲೂ ಮಿಂಚಿದಾಗ ಅವನು ನೆಲಕ್ಕೆ ಬಿದ್ದನು. “ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವದು ನಿನಗೆ ಕಷ್ಟ” ಎಂದು ಹೀಬ್ರು ಭಾಷೆಯಲ್ಲಿ ಹೇಳುತ್ತಿರುವ ಧ್ವನಿಯೊಂದನ್ನು ಅವನು ಕೇಳಿಸಿಕೊಂಡನು. “ಕರ್ತನೇ, ನೀನಾರು?” ಎಂದು ಸೌಲನು ಕೇಳಿದನು. “ನೀನು ಹಿಂಸೆಪಡಿಸುವ ಯೇಸುವೇ ನಾನು” ಎಂಬ ಉತ್ತರವು ಬಂತು. “ನೀನು ಎದ್ದು ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ ಸಾಕ್ಷಿಯಾಗಿಯೂ ನೇಮಿಸುವದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ನಾನು ಈಗಲೂ ಮುಂದೆ ನಿನಗೆ ಕೊಡಲಿಕ್ಕಿರುವ ದರ್ಶನಗಳಲ್ಲಿಯೂ ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ಸಾಕ್ಷಿಯಾಗಿರಬೇಕು. ನಾನು ನಿನ್ನನ್ನು ಇಸ್ರಾಯೇಲ್ ಜನರ ಕೈಯೊಳಗಿಂದಲೂ ಅನ್ಯಜನರ ಕೈಯೊಳಗಿಂದಲೂ ಬಿಡಿಸುವೆನು.” “ಕರ್ತನೇ, ನಾನೇನು ಮಾಡಬೇಕು?” ಎಂದು ಸೌಲನು ಕೇಳಿದನು. “ನೀನೆದ್ದು ದಮಸ್ಕದೊಳಕ್ಕೆ ಹೋಗು, ಮಾಡುವದಕ್ಕೆ ನಿನಗೆ ನೇಮಿಸಿರುವದೆಲ್ಲಾ ಅ. ಕೃತ್ಯಗಳು 9:3-6; 22:6-10; 26:13-17.
ಅಲ್ಲಿ ತಿಳಿಸಲ್ಪಡುವದು.”—ಸೌಲನೊಂದಿಗೆ ಪ್ರಯಾಣಿಸುತ್ತಿದ್ದವರು ಒಂದು ಧ್ವನಿಯನ್ನು ಕೇಳಿಸಿಕೊಂಡರಾದರೂ, ಮಾತಾಡುತ್ತಿದ್ದವನನ್ನು ಅವರು ನೋಡಲಿಲ್ಲ ಅಥವಾ ಅವನು ಹೇಳಿದ ವಿಷಯವೂ ಅವರಿಗೆ ಅರ್ಥವಾಗಲಿಲ್ಲ. ಆ ಬೆಳಕು ಎಷ್ಟು ಪ್ರಕಾಶಮಾನವಾಗಿತ್ತೆಂದರೆ, ಸೌಲನು ಎದ್ದು ನಿಂತಾಗ ಅವನು ಏನನ್ನೂ ನೋಡಶಕ್ತನಾಗಿರಲಿಲ್ಲ ಮತ್ತು ಇತರರು ಅವನ ಕೈಹಿಡಿದು ನಡೆಸಬೇಕಾಯಿತು. “ಅವನು ಮೂರು ದಿವಸ ಕಣ್ಣುಕಾಣದೆ ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ.”—ಅ. ಕೃತ್ಯಗಳು 9:7-9; 22:11.
ಮೂರು ದಿನಗಳ ವರೆಗೆ ಮನನ
ಸೌಲನು ಯೂದನೆಂಬ ವ್ಯಕ್ತಿಯಿಂದ ಅತಿಥಿಸತ್ಕಾರವನ್ನು ಸ್ವೀಕರಿಸಿದನು. ಅವನು ನೆಟ್ಟನೇಬೀದಿ ಎಂಬ ಹೆಸರಿನ ಬೀದಿಯಲ್ಲಿ ವಾಸಿಸುತ್ತಿದ್ದನು. * (ಅ. ಕೃತ್ಯಗಳು 9:11) ಆ್ಯರಬಿಕ್ ಭಾಷೆಯಲ್ಲಿ ಡಾರ್ಬ್ ಆಲ್ ಮುಸ್ಟಕಿಮ್ ಎಂಬ ಹೆಸರಿನ ಈ ಬೀದಿಯು, ಈಗಲೂ ದಮಸ್ಕದಲ್ಲಿ ಒಂದು ಮುಖ್ಯರಸ್ತೆಯಾಗಿದೆ. ಸೌಲನು ಯೂದನ ಮನೆಯಲ್ಲಿದ್ದಾಗ ಅವನು ಏನು ಯೋಚಿಸುತ್ತಿದ್ದಿರಬಹುದೆಂಬುದನ್ನು ಊಹಿಸಿಕೊಳ್ಳಿರಿ. ಆ ಅನುಭವವು ಸೌಲನನ್ನು ಕುರುಡುಗೊಳಿಸಿ, ಸ್ತಬ್ಧನನ್ನಾಗಿ ಮಾಡಿತ್ತು. ಈಗ ಆ ಅನುಭವದ ಅರ್ಥದ ಕುರಿತಾಗಿ ಯೋಚಿಸಲು ಅವನಿಗೆ ಸಮಯವಿತ್ತು.
ಈ ಹಿಂಸಕನು ಯಾವ ವಿಷಯವನ್ನು ಹುಚ್ಚುತನವೆಂದು ನೆನಸಿದ್ದನೊ ಅದೇ ವಿಷಯವು ಈಗ ಅವನ ಎದುರು ನಿಂತಿತ್ತು. ಸರ್ವೋಚ್ಚ ಯೆಹೂದಿ ಅಧಿಕಾರಿಯಿಂದ ಖಂಡಿಸಲ್ಪಟ್ಟು, ‘ಮನುಷ್ಯರಿಂದ ತ್ಯಜಿಸಲ್ಪಟ್ಟವನು ಹಾಗೂ ಧಿಕ್ಕರಿಸಲ್ಪಟ್ಟವನಾಗಿ’ ಕಂಬಕ್ಕೇರಿಸಲ್ಪಟ್ಟಿದ್ದ ಪ್ರಭು ಯೇಸು ಕ್ರಿಸ್ತನು ಜೀವಂತನಾಗಿದ್ದನು. ಅಷ್ಟುಮಾತ್ರವಲ್ಲದೆ, ಅವನು ದೇವರ ಬಲಗಡೆಯಲ್ಲಿ, ಮೆಚ್ಚಲ್ಪಟ್ಟವನಾಗಿ “ಅಗಮ್ಯವಾದ ಬೆಳಕಿನಲ್ಲಿ” ನಿಂತುಕೊಂಡಿದ್ದನು! ಯೇಸು ಖಂಡಿತವಾಗಿಯೂ ಮೆಸ್ಸೀಯನಾಗಿದ್ದನು. ಸ್ತೆಫನನು ಮತ್ತು ಇತರ ಶಿಷ್ಯರು ಹೇಳುತ್ತಿದ್ದ ಸಂಗತಿಯು ತಪ್ಪಾಗಿರಲಿಲ್ಲ. (ಯೆಶಾಯ 53:3, NW; ಅ. ಕೃತ್ಯಗಳು 7:56; 1 ತಿಮೊಥೆಯ 6:16) ಸೌಲನೇ ದೊಡ್ಡ ತಪ್ಪನ್ನು ಮಾಡಿದ್ದನು, ಯಾಕೆಂದರೆ ಸೌಲನು ಯಾರನ್ನು ಹಿಂಸಿಸುತ್ತಿದ್ದನೊ ಅವರೇ ತನ್ನವರೆಂದು ಯೇಸು ಹೇಳಿದ್ದನು! ಅಷ್ಟು ಬಲವಾದ ಸಾಕ್ಷ್ಯದ ಮುಂದೆ ಸೌಲನು ಹೇಗೆ ‘ಮುಳ್ಳುಗೋಲನ್ನು ಒದೆಯುತ್ತಾ’ ಇರಬಹುದಿತ್ತು? ಒಂದು ಹಠಮಾರಿ ಗೂಳಿಯು ಸಹ ತಿವಿಯಲ್ಪಟ್ಟಾಗ ಅದರ ಧಣಿಯು ಬಯಸುವಂತಹ ದಿಕ್ಕಿನಲ್ಲಿ ಹೋಗುತ್ತದೆ. ಆದುದರಿಂದ ಯೇಸುವಿನ ವಿನಂತಿಗಳಿಗೆ ಮಣಿಯಲು ಸೌಲನು ನಿರಾಕರಿಸಿದರೆ, ಅವನೇ ಹಾನಿಯನ್ನು ಅನುಭವಿಸಲಿದ್ದನು.
ಯೇಸು ಮೆಸ್ಸೀಯನಾಗಿದ್ದರಿಂದ ದೇವರು ಅವನನ್ನು ಖಂಡಿಸಲು ಸಾಧ್ಯವಿರಲಿಲ್ಲ. ಆದರೆ, ಅವನು ಅತಿ ಅವಮಾನಕರವಾದ ಮರಣವನ್ನು ಅನುಭವಿಸಿ, ನಿಯಮಶಾಸ್ತ್ರದ ಈ ಮುಂದಿನ ದಂಡನೆಗೆ ಗುರಿಯಾಗುವಂತೆ ಯೆಹೋವನು ಅನುಮತಿಸಿದ್ದನು: “ಮರಕ್ಕೆ ತೂಗಹಾಕಲ್ಪಟ್ಟವನು ದೇವರ ಶಾಪವನ್ನು ಹೊಂದಿದವನಲ್ಲವೇ.” (ಧರ್ಮೋಪದೇಶಕಾಂಡ 21:23) ಯಾತನಾಕಂಬದ ಮೇಲೆ ತೂಗುಹಾಕಲ್ಪಟ್ಟಾಗ ಯೇಸು ಸತ್ತನು. ಆದರೆ ಅವನಲ್ಲಿ ಯಾವುದೇ ಪಾಪವಿರಲಿಲ್ಲ. ಆದುದರಿಂದ ಅವನು ತನ್ನ ಸ್ವಂತ ಪಾಪಗಳಿಗಾಗಿ ಅಲ್ಲ, ಬದಲಾಗಿ ಮಾನವಕುಲದ ಪಾಪಗಳಿಗಾಗಿ ಶಪಿಸಲ್ಪಟ್ಟನು. ತದನಂತರ ಸೌಲನು ವಿವರಿಸಿದ್ದು: “ನೇಮನಿಷ್ಠೆಗಳನ್ನು ಆಧಾರಮಾಡಿಕೊಳ್ಳುವವರೆಲ್ಲರೂ ಶಾಪಾಧೀನರಾಗಿದ್ದಾರೆ. ಹೇಗಂದರೆ, ಧರ್ಮಗ್ರಂಥದೊಳಗೆ ಬರೆದಿರುವವುಗಳನ್ನೆಲ್ಲಾ ನಿತ್ಯವೂ ಕೈಕೊಳ್ಳದಿರುವ ಪ್ರತಿಯೊಬ್ಬನು ಶಾಪಗ್ರಸ್ತನೆಂದು ಶಾಸ್ತ್ರದಲ್ಲಿ ಬರೆದದೆ. ಇದಲ್ಲದೆ ಕರ್ಮಮಾರ್ಗದಿಂದ ಯಾವನೂ ದೇವರ ಸನ್ನಿಧಿಯಲ್ಲಿ ನೀತಿವಂತನಾಗುವದಿಲ್ಲವೆಂಬದು ಸ್ಪಷ್ಟವಾಗಿದೆ. . . . ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ.”—ಗಲಾತ್ಯ 3:10-13.
ಯೇಸುವಿನ ಯಜ್ಞಕ್ಕೆ ಪಾಪವಿಮೋಚಕ ಮೌಲ್ಯವಿತ್ತು. ಆ ಯಜ್ಞವನ್ನು ಅಂಗೀಕರಿಸುವ ಮೂಲಕ, ಸಾಂಕೇತಿಕವಾಗಿ ಯೆಹೋವನು ನಿಯಮಶಾಸ್ತ್ರವನ್ನು ಮತ್ತು ಅದರ ಶಾಪವನ್ನು ಕಂಬಕ್ಕೆ ಜಡಿದನು. ಆ ವಾಸ್ತವಾಂಶವನ್ನು ಗ್ರಹಿಸಿದ ನಂತರ, ‘ಯೆಹೂದ್ಯರಿಗೆ ವಿಘ್ನ’ವಾಗಿದ್ದ ಯಾತನಾಕಂಬವನ್ನು “ದೇವರ ವಿವೇಕ”ವಾಗಿ ಸೌಲನು ಮಾನ್ಯ ಮಾಡಸಾಧ್ಯವಿತ್ತು. (1 ಕೊರಿಂಥ 1:18-25; ಕೊಲೊಸ್ಸೆ 2:14) ಹಾಗಾದರೆ ನಿಯಮಶಾಸ್ತ್ರದ ಕೆಲಸಗಳಿಂದಲ್ಲ, ಬದಲಾಗಿ ಸ್ವತಃ ಸೌಲನಂತಹ ಪಾಪಿಗಳ ಕಡೆಗೆ ದೇವರ ಅಪಾತ್ರ ದಯೆಯಿಂದಾಗಿ ರಕ್ಷಣೆಯನ್ನು ಪಡೆಯಸಾಧ್ಯವಿರುವುದಾದರೆ, ನಿಯಮಶಾಸ್ತ್ರದ ಕೆಳಗಿಲ್ಲದವರೂ ರಕ್ಷಣೆಯನ್ನು ಹೊಂದುವ ಸಾಧ್ಯತೆ ಇತ್ತು. ಮತ್ತು ಈ ಅನ್ಯಜನಾಂಗದವರ ಬಳಿಗೇ ಯೇಸು ಸೌಲನನ್ನು ಕಳುಹಿಸಲಿದ್ದನು.—ಎಫೆಸ 3:3-7.
ತನ್ನ ಮತಾಂತರದ ಸಮಯದಲ್ಲಿ ಸೌಲನಿಗೆ ಇದೆಲ್ಲವೂ ಎಷ್ಟರ ಮಟ್ಟಿಗೆ ಅರ್ಥವಾಯಿತೆಂಬುದು ನಮಗೆ ಗೊತ್ತಿಲ್ಲ. ಆದರೆ ಯೇಸು ಪ್ರಾಯಶಃ—ಒಂದಕ್ಕಿಂತಲೂ ಹೆಚ್ಚು ಸಲ—ಪುನಃ ಒಮ್ಮೆ, ಜನಾಂಗಗಳಿಗೆ ಸಾರುವ ಅವನ ನೇಮಕದ ಕುರಿತಾಗಿ ಅವನೊಂದಿಗೆ ಮಾತಾಡಲಿದ್ದನು. ಅಷ್ಟುಮಾತ್ರವಲ್ಲದೆ, ಸೌಲನು ಈ ಎಲ್ಲ ವಿಷಯಗಳನ್ನು ದೈವಿಕ ಪ್ರೇರಣೆಯಿಂದ ಬರೆಯುವಷ್ಟರೊಳಗೆ ಅನೇಕ ವರ್ಷಗಳು ದಾಟಿದವು. ಅ. ಕೃತ್ಯಗಳು 22:17-21; ಗಲಾತ್ಯ 1:15-18; 2:1, 2) ಆದರೆ, ಕೆಲವೇ ದಿನಗಳಲ್ಲಿ ಸೌಲನು ತನ್ನ ಹೊಸ ಕರ್ತನಿಂದ ಇನ್ನೂ ಹೆಚ್ಚಿನ ನಿರ್ದೇಶನಗಳನ್ನು ಪಡೆದುಕೊಂಡನು.
(ಅನನೀಯನ ಭೇಟಿ
ಸೌಲನಿಗೆ ಕಾಣಿಸಿಕೊಂಡ ಬಳಿಕ, ಯೇಸು ಅನನೀಯನಿಗೂ ಕಾಣಿಸಿಕೊಂಡು ಹೇಳಿದ್ದು: “ನೀನೆದ್ದು ನೆಟ್ಟನೇಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬವನನ್ನು ವಿಚಾರಿಸು; ಅವನು ಪ್ರಾರ್ಥನೆಮಾಡುತ್ತಾನೆ. ಮತ್ತು ಅನನೀಯನೆಂಬ ಒಬ್ಬ ಮನುಷ್ಯನು ಒಳಗೆ ಬಂದು ತನಗೆ ತಿರಿಗಿ ಕಣ್ಣುಕಾಣುವಂತೆ ತನ್ನ ಮೇಲೆ ಕೈಯಿಡುವದನ್ನು ನೋಡಿದ್ದಾನೆ.”—ಅ. ಕೃತ್ಯಗಳು 9:11, 12.
ಅನನೀಯನಿಗೆ ಸೌಲನ ಬಗ್ಗೆ ಗೊತ್ತಿದ್ದರಿಂದ, ಯೇಸುವಿನ ಮಾತುಗಳು ಅವನಲ್ಲಿ ಏಕೆ ಆಶ್ಚರ್ಯವನ್ನು ಉಂಟುಮಾಡಿದವೆಂಬುದನ್ನು ಅರ್ಥಮಾಡಿಕೊಳ್ಳಸಾಧ್ಯವಿದೆ. ಅವನಂದದ್ದು: “ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನನ್ನು ನಂಬಿದ ದೇವಜನರಿಗೆ ಎಷ್ಟೋ ಕೇಡನ್ನುಂಟುಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ಕೇಳಿದ್ದೇನೆ; ಮತ್ತು ಇಲ್ಲಿಯೂ ನಿನ್ನ ಹೆಸರನ್ನು ಸ್ಮರಿಸುವವರೆಲ್ಲರಿಗೆ ಬೇಡಿಹಾಕಿಸುವ ಅಧಿಕಾರವನ್ನು ಮಹಾಯಾಜಕರಿಂದ ಹೊಂದಿದ್ದಾನೆ.” ಆದರೆ ಯೇಸು ಅನನೀಯನಿಗೆ ಹೇಳಿದ್ದು: “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ ಅರಸುಗಳಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.”—ಅ. ಕೃತ್ಯಗಳು 9:13-15.
ಪುನರಾಶ್ವಾಸನೆಯನ್ನು ಪಡೆದುಕೊಂಡ ಅನನೀಯನು ಯೇಸು ತನಗೆ ಕೊಟ್ಟಿದ್ದಂತಹ ವಿಳಾಸಕ್ಕೆ ಹೋದನು. ಸೌಲನನ್ನು ಹುಡುಕಿ, ವಂದಿಸಿದ ನಂತರ ಅನನೀಯನು ಅವನ ಮೇಲೆ ತನ್ನ ಹಸ್ತಗಳನ್ನಿಟ್ಟನು. ವೃತ್ತಾಂತವು ಹೇಳುವುದು: “ಕೂಡಲೆ [ಸೌಲನ] ಕಣ್ಣುಗಳಿಂದ ಪರೆಗಳಂತೆ ಏನೋ ಬಿದ್ದು ಅವನ ಕಣ್ಣು ಕಾಣಿಸಿದವು.” ಸೌಲನು ಈಗ ಕಿವಿಗೊಡಲು ಸಿದ್ಧನಾಗಿದ್ದನು. ಸೌಲನು ಯೇಸುವಿನ ಮಾತುಗಳಿಂದ ಬಹುಶಃ ಏನನ್ನು ಅರ್ಥಮಾಡಿಕೊಂಡಿದ್ದನೊ ಅದನ್ನೇ ಅನನೀಯನ ಈ ಮಾತುಗಳು ದೃಢೀಕರಿಸಿದವು: “ನಮ್ಮ ಪಿತೃಗಳ ದೇವರು ತನ್ನ ಚಿತ್ತವನ್ನು ನೀನು ತಿಳುಕೊಳ್ಳುವದಕ್ಕೂ ಆ ನೀತಿವಂತನನ್ನು ನೋಡುವದಕ್ಕೂ ಆತನ ಬಾಯಿಂದ ಒಂದು ಮಾತನ್ನು ಕೇಳುವದಕ್ಕೂ ನಿನ್ನನ್ನು ನೇಮಿಸಿದ್ದಾನೆ. ನೀನು ಕಂಡು ಕೇಳಿದ್ದರ ವಿಷಯದಲ್ಲಿ ಎಲ್ಲಾ ಮನುಷ್ಯರ ಮುಂದೆ ಆತನಿಗೆ ಸಾಕ್ಷಿಯಾಗಿರಬೇಕು. ಈಗ ನೀನೇಕೆ ಸಾವಕಾಶಮಾಡುತ್ತೀ? ಎದ್ದು ಆತನ ಹೆಸರನ್ನು ಹೇಳಿಕೊಳ್ಳುವವನಾಗಿ ದೀಕ್ಷಾಸ್ನಾನಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೋ.” ಫಲಿತಾಂಶವೇನಾಗಿತ್ತು? ಸೌಲನು “ಎದ್ದು ದೀಕ್ಷಾಸ್ನಾನಮಾಡಿಸಿಕೊಂಡನು. ತರುವಾಯ ಊಟಮಾಡಿ ಬಲಹೊಂದಿದನು.”—ಅ. ಕೃತ್ಯಗಳು 9:17-19; 22:12-16.
ನಂಬಿಗಸ್ತನಾದ ಅನನೀಯನು ತನ್ನ ನೇಮಕವನ್ನು ಪೂರೈಸಿದ ಬಳಿಕ, ಅವನ ಕುರಿತಾದ ಪ್ರಸ್ತಾಪವು ಆರಂಭವಾದಷ್ಟೇ ತ್ವರಿತವಾಗಿ ಕೊನೆಗೊಳ್ಳುತ್ತದೆ. ಅದರ ನಂತರ ಅವನ ಉಲ್ಲೇಖವೇ ಇಲ್ಲ. ಆದರೆ ಸೌಲನಿಗೆ ಕಿವಿಗೊಟ್ಟವರೆಲ್ಲರೂ ಅವನಿಂದಾಗಿ ಚಕಿತರಾದರು! ಯೇಸುವಿನ ಶಿಷ್ಯರನ್ನು ದಸ್ತಗಿರಿ ಮಾಡಲು ದಮಸ್ಕಕ್ಕೆ ಬಂದಿದ್ದ ಮಾಜಿ ಹಿಂಸಕನು, ಸಭಾಮಂದಿರಗಳಲ್ಲಿ ಸಾರಲಾರಂಭಿಸಿದ್ದನು ಮತ್ತು ಯೇಸುವೇ ಕ್ರಿಸ್ತನಾಗಿದ್ದಾನೆಂಬುದನ್ನು ರುಜುಪಡಿಸಲು ಆರಂಭಿಸಿದ್ದನು.—ಅ. ಕೃತ್ಯಗಳು 9:20-22.
‘ಅನ್ಯಜನರ ಬಳಿ ಕಳುಹಿಸಲ್ಪಟ್ಟ ಅಪೊಸ್ತಲ’
ದಮಸ್ಕಕ್ಕೆ ಹೋಗುತ್ತಿದ್ದ ಮಾರ್ಗದಲ್ಲಿ ಸೌಲನಿಗಾದ ಅನುಭವವು, ಆ ಹಿಂಸಕನು ತನ್ನ ಹಿಂಸೆಯನ್ನು ತಕ್ಷಣವೇ ನಿಲ್ಲಿಸಿಬಿಡುವಂತೆ ಒತ್ತಾಯಿಸಿತು. ಮೆಸ್ಸೀಯನು ಯಾರೆಂಬುದನ್ನು ಗ್ರಹಿಸಿರಲಾಗಿ, ಸೌಲನು ಹೀಬ್ರು ಶಾಸ್ತ್ರಗಳ ಅನೇಕ ವಿಚಾರಗಳು ಮತ್ತು ಪ್ರವಾದನೆಗಳನ್ನು ಯೇಸುವಿಗೆ ಅನ್ವಯಿಸಸಾಧ್ಯವಿತ್ತು. ಯೇಸುವೇ ತನಗೆ ಕಾಣಿಸಿಕೊಂಡು, ‘ತನ್ನನ್ನು ಹಿಡಿದುಕೊಂಡು,’ ‘ಅನ್ಯಜನರಿಗೆ ಅಪೊಸ್ತಲನನ್ನಾಗಿ’ ನೇಮಿಸಿದ್ದಾನೆಂಬುದರ ಅರಿವು, ಸೌಲನ ಜೀವಿತವನ್ನು ಮಹತ್ತರವಾಗಿ ಬದಲಾಯಿಸಿತು. (ಫಿಲಿಪ್ಪಿ 3:12; ರೋಮಾಪುರ 11:13) ಈಗ ಅಪೊಸ್ತಲ ಪೌಲನೋಪಾದಿ ಭೂಮಿಯ ಮೇಲೆ ತನ್ನ ಉಳಿದ ಜೀವಮಾನವನ್ನು ಮಾತ್ರವಲ್ಲದೆ, ಕ್ರೈಸ್ತ ಇತಿಹಾಸದ ಗತಿಯನ್ನೇ ಪ್ರಭಾವಿಸುವ ಸುಯೋಗ ಮತ್ತು ಅಧಿಕಾರವು ಅವನಿಗಿತ್ತು.
ವರ್ಷಗಳಾನಂತರ, ಪೌಲನು ಅಪೊಸ್ತಲನಾಗಿದ್ದಾನೊ ಇಲ್ಲವೊ ಎಂಬುದರ ಕುರಿತಾದ ವಿವಾದದಲ್ಲಿ, ದಮಸ್ಕಕ್ಕೆ ಹೋಗುವ ರಸ್ತೆಯಲ್ಲಿ ತನಗಾದ ಅನುಭವಕ್ಕೆ ಸೂಚಿಸುತ್ತಾ ತನ್ನ ಅಧಿಕಾರವನ್ನು ಸಮರ್ಥಿಸಿದನು. “ನಾನು . . . ಅಪೊಸ್ತಲನಲ್ಲವೇ. ನಮ್ಮ ಕರ್ತನಾದ ಯೇಸುವನ್ನು ಕಂಡವನಲ್ಲವೇ” ಎಂದು ಅವನು ಕೇಳಿದನು. ಮತ್ತು ಪುನರುತ್ಥಿತ ಯೇಸು ಇತರರಿಗೆ ಕಾಣಿಸಿಕೊಂಡಿರುವುದರ ಕುರಿತಾಗಿ ತಿಳಿಸಿದ ಬಳಿಕ ಸೌಲನು (ಪೌಲ) ಹೇಳಿದ್ದು: “ಕಟ್ಟಕಡೆಗೆ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.” (1 ಕೊರಿಂಥ 9:1; 15:8) ಇದು, ಯೇಸುವಿನ ಸ್ವರ್ಗೀಯ ಮಹಿಮೆಯ ದರ್ಶನದ ಮೂಲಕ ಸೌಲನಿಗೆ ಸಮಯಕ್ಕೆ ಮುಂಚಿತವಾಗಿಯೇ ಆತ್ಮ ಜೀವಿತಕ್ಕೆ ಜನಿಸುವ ಅಥವಾ ಪುನರುತ್ಥಾನವಾಗುವ ಸನ್ಮಾನವು ಕೊಡಲ್ಪಟ್ಟಿದ್ದಂತಿತ್ತು.
ಸೌಲನು ತನ್ನ ಈ ಸುಯೋಗವನ್ನು ಅಂಗೀಕರಿಸಿದನು ಮತ್ತು ಅದಕ್ಕೆ ತಕ್ಕಂತೆ ಜೀವಿಸಲು ಶ್ರಮಿಸಿದನು. ಅವನು ಬರೆದುದು: “ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ. ಆದರೆ . . . ನನಗುಂಟಾದ [ದೇವರ] ಕೃಪೆಯು ನಿಷ್ಫಲವಾಗಲಿಲ್ಲ; ನಾನು [ಬೇರೆಲ್ಲ ಅಪೊಸ್ತಲರಿಗಿಂತ] ಹೆಚ್ಚಾಗಿ ಪ್ರಯಾಸಪಟ್ಟೆನು.”—1 ಕೊರಿಂಥ 15:9, 10.
ದೇವರ ಅನುಗ್ರಹವನ್ನು ಪಡೆಯಲಿಕ್ಕೋಸ್ಕರ, ದೀರ್ಘಕಾಲದಿಂದಲೂ ನೀವು ನಂಬಿಕೊಂಡು ಬಂದಿರುವ ಧಾರ್ಮಿಕ ದೃಷ್ಟಿಕೋನಗಳನ್ನು ಬದಲಾಯಿಸುವ ಅಗತ್ಯವಿದೆಯೆಂಬುದನ್ನು ನೀವು ಗ್ರಹಿಸಿಕೊಂಡ ಸಮಯವು ಸೌಲನಂತೆ ನಿಮಗೂ ನೆನಪಿರಬಹುದು. ಸತ್ಯವನ್ನು ಗ್ರಹಿಸಲು ಯೆಹೋವನು ನಿಮಗೆ ಸಹಾಯಮಾಡಿದ್ದಕ್ಕಾಗಿ ನೀವು ನಿಸ್ಸಂದೇಹವಾಗಿಯೂ ತುಂಬ ಆಭಾರಿಗಳಾಗಿದ್ದೀರಿ. ಸೌಲನು ಬೆಳಕನ್ನು ನೋಡಿದಾಗ ಮತ್ತು ತನ್ನಿಂದ ಏನನ್ನು ಅಪೇಕ್ಷಿಸಲಾಗುತ್ತಿದೆ ಎಂಬುದನ್ನು ಗ್ರಹಿಸಿಕೊಂಡಾಗ, ಅದನ್ನು ಮಾಡಲು ಹಿಂಜರಿಯಲಿಲ್ಲ. ಅವನು ಈ ಭೂಮಿಯಲ್ಲಿದ್ದಷ್ಟು ಸಮಯ ಅದನ್ನು ಹುರುಪಿನಿಂದ ಮತ್ತು ದೃಢನಿಶ್ಚಯದಿಂದ ಮಾಡುತ್ತಾ ಇದ್ದನು. ಇಂದು ಯೆಹೋವನ ಅನುಗ್ರಹವನ್ನು ಬಯಸುವವರೆಲ್ಲರಿಗೆ ಅವನು ಎಂತಹ ಒಂದು ಅತ್ಯುತ್ಕೃಷ್ಟ ಮಾದರಿಯಾಗಿದ್ದಾನೆ!
[ಪಾದಟಿಪ್ಪಣಿಗಳು]
^ ಪ್ಯಾರ. 7 ಯೂದನು ಸ್ಥಳಿಕ ಯೆಹೂದಿ ಸಮುದಾಯದ ನಾಯಕನಾಗಿದ್ದಿರಬಹುದು ಅಥವಾ ಯೆಹೂದ್ಯರಿಗಾಗಿದ್ದ ಪ್ರವಾಸಿಗೃಹದ ಮಾಲೀಕನಾಗಿದ್ದಿರಬಹುದೆಂದು ಒಬ್ಬ ವಿದ್ವಾಂಸನು ನೆನಸುತ್ತಾನೆ.
[ಪುಟ 27ರಲ್ಲಿರುವ ಚಿತ್ರ]
ಆಧುನಿಕ ದಿನದ ದಮಸ್ಕದಲ್ಲಿ ನೆಟ್ಟನೇಬೀದಿ ಎಂದು ಕರೆಯಲ್ಪಡುವ ಬೀದಿ
[ಕೃಪೆ]
Photo by ROLOC Color Slides