ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರವಾದನ ವಾಕ್ಯವು ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ನೀಡುತ್ತದೆ

ದೇವರ ಪ್ರವಾದನ ವಾಕ್ಯವು ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ನೀಡುತ್ತದೆ

ದೇವರ ಪ್ರವಾದನ ವಾಕ್ಯವು ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ನೀಡುತ್ತದೆ

ದೇವರ ವಾಕ್ಯವಾದ ಪವಿತ್ರ ಬೈಬಲಿನಿಂದಾಗಿ, ನಿಜ ಕ್ರೈಸ್ತರು ಭವಿಷ್ಯತ್ತನ್ನು ನಂಬಿಕೆ, ನಿರೀಕ್ಷೆ ಮತ್ತು ಆಶಾವಾದದಿಂದ ಮುನ್ನೋಡುತ್ತಾರೆ. ಯೆಹೋವ ದೇವರೊಂದಿಗಿನ ಸಂಬಂಧದಲ್ಲಿ ಸುರಕ್ಷತೆಯನ್ನು ಅನುಭವಿಸುತ್ತಾ, ಅವರು ನಾಳಿನ ದಿನವನ್ನು ಕಾತುರದಿಂದ ಎದುರುನೋಡುತ್ತಾರೆ. “ದೇವರ ಪ್ರವಾದನ ವಾಕ್ಯ” ಜಿಲ್ಲಾ ಅಧಿವೇಶನಗಳಲ್ಲಿನ ಆರಂಭದ ಭಾಷಣವು ವಿವರಿಸಿದಂತೆ, ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ ಬೈಬಲ್‌ ಪ್ರವಾದನೆಯ ತೀವ್ರಾಸಕ್ತಿಯ ವಿದ್ಯಾರ್ಥಿಗಳಾಗಿದ್ದಾರೆ. ಹಾಗಾದರೆ, ಈ ಅಧಿವೇಶನಗಳಲ್ಲಿ ತನ್ನ ಜನರಿಗಾಗಿ ಯೆಹೋವನು ಏನನ್ನು ಕಾದಿರಿಸಿದ್ದನು? ಹಾಜರಿದ್ದವರೆಲ್ಲರೂ ಬೈಬಲನ್ನು ಕೈಯಲ್ಲಿ ಹಿಡಿದುಕೊಂಡು, ಆ ವಿಷಯವನ್ನು ಕಂಡುಕೊಳ್ಳಲು ಬಹಳ ಉತ್ಸುಕರಾಗಿದ್ದರು. ಅಧಿವೇಶನದ ಪ್ರತಿ ದಿನದ ಮುಖ್ಯವಿಷಯವನ್ನು ಪ್ರತ್ಯೇಕವಾಗಿ ಒಂದೊಂದು ಉಪಶೀರ್ಷಿಕೆಯ ರೂಪದಲ್ಲಿ ನೀಡಲಾಗಿದೆ.

ಮೊದಲನೆಯ ದಿನ: ದೇವರ ವಾಕ್ಯದ ಬೆಳಕಿನಲ್ಲಿ ನಡೆಯುತ್ತಿರುವುದು

ಯೆಹೋವನ ಸಾಕ್ಷಿಗಳು ರಾತ್ರಿಯ ಅಂಧಕಾರದಲ್ಲಿ ಪ್ರಯಾಣವನ್ನು ಆರಂಭಿಸುವಂತಹ ಒಬ್ಬ ವ್ಯಕ್ತಿಯಂತಿದ್ದಾರೆ ಎಂದು “ದೇವರ ವಾಕ್ಯವು ನಮ್ಮನ್ನು ನಡೆಸಿದೆ” ಎಂಬ ಭಾಷಣವು ವಿವರಿಸಿತು. ಸೂರ್ಯೋದಯವಾದಂತೆ ಸುತ್ತಮುತ್ತಲಿನ ದೃಶ್ಯವನ್ನು ಆ ವ್ಯಕ್ತಿಯು ಮಬ್ಬುಮಬ್ಬಾಗಿ ನೋಡಿದರೂ, ಸೂರ್ಯನು ಅವನ ಮೇಲೆ ನೇರವಾಗಿ ಪ್ರಕಾಶಿಸುವಾಗ ಅವನು ಎಲ್ಲವನ್ನೂ ಸುಸ್ಪಷ್ಟವಾಗಿ ನೋಡುತ್ತಾನೆ. ಜ್ಞಾನೋಕ್ತಿ 4:18​ರಲ್ಲಿ ಮುಂತಿಳಿಸಲ್ಪಟ್ಟಂತೆ, ಯೆಹೋವನ ಜನರು ದೇವರ ಪ್ರವಾದನ ವಾಕ್ಯದಿಂದ ಪ್ರಜ್ವಲಿಸುವ ಸತ್ಯದ ಬೆಳಕಿನ ಮೂಲಕ ತಮ್ಮ ಮಾರ್ಗವನ್ನು ಸ್ಪಷ್ಟವಾಗಿ ನೋಡಲು ಶಕ್ತರಾಗಿದ್ದಾರೆ. ಅವರು ಆತ್ಮಿಕ ಅಂಧಕಾರದಲ್ಲಿ ಎಡವುವಂತೆ ಬಿಡಲ್ಪಟ್ಟಿಲ್ಲ.

ಸುಳ್ಳು ಮೆಸ್ಸೀಯರು ಮತ್ತು ಸುಳ್ಳು ಪ್ರವಾದಿಗಳನ್ನು ಹಿಂಬಾಲಿಸುವುದರಿಂದ ಜನರು ಅನುಭವಿಸಿರುವ ನಿರಾಶೆ ಮತ್ತು ಭ್ರಮನಿರಸನದಿಂದ, “ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ” ಎಂಬ ಮುಖ್ಯಭಾಷಣವು, ಯೆಹೋವನಿಗೆ ಮೊರೆಹೋಗುವವರು ಹೇಗೆ ತಪ್ಪಿಸಿಕೊಂಡಿದ್ದಾರೆ ಎಂಬುದನ್ನು ಕೇಳುಗರಿಗೆ ಮರುಜ್ಞಾಪಿಸಿತು. ತೀರ ವ್ಯತಿರಿಕ್ತವಾಗಿ, ನಿಜ ಮೆಸ್ಸೀಯನಾದ ಯೇಸು ಕ್ರಿಸ್ತನ ರುಜುವಾತುಗಳು ನಿಜವಾಗಿಯೂ ಭಾವಪರವಶಗೊಳಿಸುವಂತಹವು! ಉದಾಹರಣೆಗೆ, ಯೇಸುವಿನ ಅದ್ಭುತಕರವಾದ ರೂಪಾಂತರವು ಅವನು ದೇವರ ರಾಜ್ಯದ ಸಿಂಹಾಸನಾರೂಢನಾದ ರಾಜನಾಗಿರುವುದರ ಮುನ್‌ಛಾಯೆಯನ್ನು ನೀಡಿತು. 1914ರಲ್ಲಿ ರಾಜ್ಯದ ಆಳ್ವಿಕೆಯನ್ನು ಪ್ರಾರಂಭಿಸಿದಂದಿನಿಂದ, ಯೇಸು 2 ಪೇತ್ರ 1:19​ರಲ್ಲಿ ತಿಳಿಸಿರುವಂತಹ “ಬೆಳ್ಳಿ” ಆಗಿದ್ದಾನೆ. “ಮೆಸ್ಸೀಯ ಸಂಬಂಧಿತ ಬೆಳ್ಳಿಯೋಪಾದಿ, ವಿಧೇಯ ಮಾನವಕುಲಕ್ಕಾಗಿ ಅವನು ಒಂದು ಹೊಸ ದಿನವನ್ನು ಅಥವಾ ಯುಗವನ್ನು ಉದಯಿಸುತ್ತಾನೆ” ಎಂದು ಭಾಷಣಕರ್ತನು ಹೇಳಿದನು.

ಮಧ್ಯಾಹ್ನದ ಕಾರ್ಯಕ್ರಮದಲ್ಲಿ “ಜ್ಯೋತಿರ್ಮಂಡಲಗಳಂತೆ ಪ್ರಕಾಶಿಸುವುದು” ಎಂಬ ಮೊದಲ ಭಾಷಣವು, ಎಫೆಸ 5:8​ರ ಕುರಿತಾಗಿ ಸವಿವರವನ್ನು ನೀಡಿತು. ಅದರಲ್ಲಿ ಅಪೊಸ್ತಲ ಪೌಲನು ನಮಗೆ ‘ಬೆಳಕಿನವರಂತೆ ನಡೆಯುತ್ತಾ ಇರಿ’ ಎಂಬ ಸಲಹೆಯನ್ನು ನೀಡುತ್ತಾನೆ. ದೇವರ ವಾಕ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಮಾತ್ರವಲ್ಲ, ಯೇಸುವನ್ನು ಅನುಕರಿಸುತ್ತಾ ತಮ್ಮ ಜೀವಿತಗಳಲ್ಲಿ ಬೈಬಲನ್ನು ಅನ್ವಯಿಸಿಕೊಳ್ಳುವ ಮೂಲಕವೂ ಕ್ರೈಸ್ತರು ಜ್ಯೋತಿರ್ಮಂಡಲಗಳಂತಿದ್ದಾರೆ.

ಈ ರೀತಿಯ ಜ್ಯೋತಿರ್ಮಂಡಲಗಳಾಗಿರಬೇಕಾದರೆ, ನಾವು ‘ದೇವರ ವಾಕ್ಯದ ವಾಚನದಲ್ಲಿ ಆನಂದಿಸಬೇಕು.’ ಈ ವಿಷಯವನ್ನು ಮೂರು-ಭಾಗದ ಭಾಷಣಮಾಲೆಯಲ್ಲಿ ಹಂತಹಂತವಾಗಿ ತಿಳಿಸಲಾಯಿತು. ಬೈಬಲನ್ನು ‘ದೇವರು ಮನುಷ್ಯನಿಗೆ ಕೊಟ್ಟಿರುವ ಕೊಡುಗೆಗಳಲ್ಲೇ . . . ಅತ್ಯುತ್ತಮವಾದ ಕೊಡುಗೆ’ ಎಂದು ಹೇಳಿದ ಅಬ್ರಹಾಮ್‌ ಲಿಂಕನ್‌ ಅವರ ಮಾತುಗಳನ್ನು ಉದ್ಧರಿಸಿದ ಅನಂತರ, ಯೆಹೋವನ ವಾಕ್ಯಕ್ಕಾಗಿ ತಮಗಿರುವ ಆಳವಾದ ಗಣ್ಯತೆಯ ಬಗ್ಗೆ ಸಭಿಕರ ವಾಚನ ಹವ್ಯಾಸಗಳು ಏನನ್ನು ಪ್ರಕಟಪಡಿಸುತ್ತವೆ ಎಂಬುದಾಗಿ ಮೊದಲನೆಯ ಭಾಷಣಕರ್ತನು ಸಭಿಕರನ್ನು ಪ್ರಶ್ನಿಸಿದನು. ಶಾಸ್ತ್ರೀಯ ವೃತ್ತಾಂತಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುತ್ತಾ ಮತ್ತು ಈಗಾಗಲೇ ಕಲಿತಿರುವಂತಹ ವಿಷಯಗಳೊಂದಿಗೆ ಹೊಸ ಅಂಶಗಳನ್ನು ಜೋಡಿಸುವುದಕ್ಕೆ ಸಮಯವನ್ನು ತೆಗೆದುಕೊಳ್ಳುತ್ತಾ, ಬೈಬಲನ್ನು ಜಾಗರೂಕವಾಗಿ ಓದುವಂತೆ ಸಭಿಕರು ಪ್ರೋತ್ಸಾಹಿಸಲ್ಪಟ್ಟರು.

ನಾವು “ಗಟ್ಟಿಯಾದ ಆಹಾರ”ವನ್ನು ಜೀರ್ಣಿಸಿಕೊಳ್ಳಬೇಕಾದರೆ, ಸುಮ್ಮನೆ ಕಣ್ಣೋಡಿಸುವುದಲ್ಲ, ಅಧ್ಯಯನಮಾಡುವ ಅಗತ್ಯವನ್ನು ಭಾಷಣಮಾಲೆಯ ಮುಂದಿನ ಭಾಗವು ಒತ್ತಿಹೇಳಿತು. (ಇಬ್ರಿಯ 5:13, 14) ಇಸ್ರಾಯೇಲಿನ ಯಾಜಕನಾದ ಎಜ್ರನಂತೆ ನಾವು ಮುಂಚಿತವಾಗಿಯೇ ‘ನಮ್ಮ ಹೃದಯಗಳನ್ನು ಸಿದ್ಧಮಾಡಿ’ಕೊಳ್ಳುವುದಾದರೆ, ಅಧ್ಯಯನವು ವಿಶೇಷವಾಗಿ ಆತ್ಮೋನ್ನತಿಮಾಡುವಂತಹದ್ದು ಆಗಿರುವುದೆಂದು ಭಾಷಣಕರ್ತನು ಹೇಳಿದನು. (ಎಜ್ರ 7:10) ಆದರೆ ಅಧ್ಯಯನವು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ? ಏಕೆಂದರೆ ಅದು ಯೆಹೋವನೊಂದಿಗೆ ನಮಗಿರುವ ಸಂಬಂಧದ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ. ಆದಕಾರಣ, ಬೈಬಲ್‌ ಅಧ್ಯಯನವು ಮಾನಸಿಕ ಕ್ರಮಪಡಿಸುವಿಕೆ ಮತ್ತು ಪ್ರಯತ್ನವನ್ನು ಒಳಗೊಳ್ಳುವುದಾದರೂ, ಇದು ಅಮೂಲ್ಯವೂ ಉಲ್ಲಾಸಭರಿತವೂ ಚೇತೋಹಾರಿಯೂ ಆಗಿರತಕ್ಕದ್ದು. ಅರ್ಥಭರಿತ ಅಧ್ಯಯನಕ್ಕಾಗಿ ನಾವು ಸಮಯವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ? ಅಷ್ಟೇನೂ ಪ್ರಾಮುಖ್ಯವಲ್ಲದ ಚಟುವಟಿಕೆಗಳಿಂದ ‘ತಕ್ಕ ಸಮಯವನ್ನು ಖರೀದಿಸುವ’ ಮೂಲಕ ಇದನ್ನು ಮಾಡಸಾಧ್ಯವಿದೆ ಎಂದು ಭಾಷಣಮಾಲೆಯ ಕೊನೆಯ ಭಾಷಣಕರ್ತನು ಹೇಳಿದನು. (ಎಫೆಸ 5:16) ಹೌದು, ಸಮಯವನ್ನು ಕಂಡುಕೊಳ್ಳುವ ಕೀಲಿ ಕೈ, ನಮ್ಮ ಸಮಯವನ್ನು ಅತ್ಯುತ್ತಮವಾಗಿ ಉಪಯೋಗಿಸುವುದರಲ್ಲೇ ಅಡಗಿದೆ.

ಇಂದು ಅನೇಕ ಜನರು ಬಳಲಿಹೋಗಿದ್ದಾರೆ ಎಂಬುದನ್ನು “ದೇವರು ಬಳಲಿಹೋದವನಿಗೆ ಬಲವನ್ನು ಕೊಡುತ್ತಾನೆ” ಎಂಬ ಭಾಷಣವು ಸಮ್ಮತಿಸಿತು. ಕ್ರೈಸ್ತ ಶುಶ್ರೂಷೆಯನ್ನು ಪೂರೈಸಲು “ಸಾಧಾರಣವಾಗಿರುವುದಕ್ಕಿಂತಲೂ ಹೆಚ್ಚಿನ ಬಲವು” ನಮಗೆ ಬೇಕಾಗಿರುವುದರಿಂದ, ‘ಸೋತವನಿಗೆ ತ್ರಾಣವನ್ನು ಅನುಗ್ರಹಿಸುವ’ ಯೆಹೋವನ ಮೇಲೆ ಆತುಕೊಳ್ಳುವ ಅಗತ್ಯವಿದೆ. (2 ಕೊರಿಂಥ 4:7; ಯೆಶಾಯ 40:29) ದೇವರ ವಾಕ್ಯ, ಪ್ರಾರ್ಥನೆ, ಕ್ರೈಸ್ತ ಸಭೆ, ಶುಶ್ರೂಷೆಯಲ್ಲಿ ಕ್ರಮವಾದ ಪಾಲ್ಗೊಳ್ಳುವಿಕೆ, ಅಷ್ಟುಮಾತ್ರವಲ್ಲದೆ ಕ್ರೈಸ್ತ ಮೇಲ್ವಿಚಾರಕರು ಹಾಗೂ ಇತರರ ನಂಬಿಗಸ್ತ ಮಾದರಿಗಳು ನಮಗೆ ಸಹಾಯಕಗಳಾಗಿವೆ. “ಕಾಲದ ದೃಷ್ಟಿಯಲ್ಲಿ ಬೋಧಕರಾಗಿರಿ” ಎಂಬ ಮುಖ್ಯವಿಷಯವು, ಕ್ರೈಸ್ತರು ಶಿಕ್ಷಕರು ಹಾಗೂ ಪ್ರಚಾರಕರು ಆಗಿರುವ ಹಾಗೂ “ಬೋಧನಾ ಕಲೆ”ಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಶ್ರಮಿಸುವ ಅಗತ್ಯವನ್ನು ಎತ್ತಿತೋರಿಸಿತು.—2 ತಿಮೊಥೆಯ 4:2, NW.

ಇತ್ತೀಚೆಗೆ, ಯೆಹೋವನ ಸಾಕ್ಷಿಗಳ ಮೇಲೆ ಅಪಾಯಕರ ಕುಪಂಥವೆಂಬ ಆರೋಪವನ್ನು ಹೊರಿಸಲು ಕೆಲವು ದೇಶಗಳಲ್ಲಿ ತಪ್ಪಾಗಿ ನಿರ್ದೇಶಿಸಲ್ಪಟ್ಟಿರುವ ಪ್ರಯತ್ನಗಳ ಬಗ್ಗೆ “ದೇವರ ವಿರುದ್ಧ ಹೋರಾಡುವವರು ಜಯಗಳಿಸಲಾರರು” ಎಂಬ ಆ ದಿನದ ಕೊನೆಯ ಭಾಷಣವು ತಿಳಿಸಿತು. ಆದರೆ ನಾವು ಭಯಪಡುವ ಅಗತ್ಯವಿಲ್ಲ, ಏಕೆಂದರೆ, ಯೆಶಾಯ 54:17 ಹೇಳುವುದು: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ.”

ಎರಡನೆಯ ದಿನ: ಪ್ರವಾದನ ಶಾಸ್ತ್ರವಚನಗಳ ಮುಖಾಂತರ ಪ್ರಕಟಗೊಳಿಸಲ್ಪಟ್ಟ ವಿಷಯಗಳು

ದೈನಿಕ ಬೈಬಲ್‌ ವಚನದ ಚರ್ಚೆಯ ಅನಂತರ, ಕೂಡಿಬಂದವರೆಲ್ಲರು “ಬೆಳಕಿನ ವಾಹಕರೋಪಾದಿ ಯೆಹೋವನನ್ನು ಮಹಿಮೆಪಡಿಸುವುದು” ಎಂಬ ಶೀರ್ಷಿಕೆಯುಳ್ಳ ಅಧಿವೇಶನದ ಎರಡನೆಯ ಭಾಷಣಮಾಲೆಯಲ್ಲಿ ಆನಂದಿಸಿದರು. ಎಲ್ಲ ಕಡೆಗಳಲ್ಲೂ ಸಾರುವ ಮೂಲಕ ಯೆಹೋವನನ್ನು ಮಹಿಮೆಪಡಿಸುವುದು ಕ್ರೈಸ್ತನೊಬ್ಬನ ಗುರಿಯಾಗಿದೆ ಎಂದು ಮೊದಲನೆಯ ಭಾಷಣವು ತೋರಿಸಿತು. ಆಸಕ್ತಿ ತೋರಿಸುವವರನ್ನು ದೇವರ ಸಂಸ್ಥೆಯ ಕಡೆಗೆ ನಿರ್ದೇಶಿಸುವುದರ ಅಗತ್ಯವನ್ನು ಮುಂದಿನ ಭಾಗವು ಉಲ್ಲೇಖಿಸಿತು. ಅದು ಹೇಗೆ? ದೇವರ ಸಂಸ್ಥೆಯು ಹೇಗೆ ಕಾರ್ಯನಡೆಸುತ್ತದೆ ಎಂಬುದನ್ನು ತೋರಿಸಲು ಗೃಹ ಬೈಬಲ್‌ ಅಭ್ಯಾಸಕ್ಕೆ ಮುಂಚೆ ಅಥವಾ ಅನಂತರ ಕೇವಲ ಐದು ಇಲ್ಲವೇ ಹತ್ತು ನಿಮಿಷಗಳನ್ನು ತೆಗೆದುಕೊಳ್ಳುವ ಮೂಲಕವೇ. ಈ ಭಾಷಣಮಾಲೆಯ ಮೂರನೇ ಭಾಷಣವು, ಸತ್ಕ್ರಿಯೆಗಳ ಮೂಲಕ ದೇವರನ್ನು ಮಹಿಮೆಪಡಿಸುವ ಅಗತ್ಯವನ್ನು ಒತ್ತಿಹೇಳಿತು.

“ಯೆಹೋವನ ಮರುಜ್ಞಾಪನಗಳನ್ನು ಅತಿಯಾಗಿ ಪ್ರೀತಿಸಿರಿ” ಎಂಬ ಭಾಷಣವು ಕೀರ್ತನೆ 119ರಲ್ಲಿನ ಆಯ್ದ ವಚನಗಳನ್ನು ಆವರಿಸಿತು. ನಾವು ಮರೆತುಹೋಗುವುದು ಸಹಜವಾಗಿರುವುದರಿಂದ ನಮಗೆ ಮರುಜ್ಞಾಪನಗಳ ಅಗತ್ಯವಿದೆ. ಹಾಗಾದರೆ, ಕೀರ್ತನೆಗಾರನು ಮಾಡಿದಂತೆ ನಾವು ಸಹ ಯೆಹೋವನ ಮರುಜ್ಞಾಪನಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆ!

ಅನಂತರ ಒಂದು ವಿಶೇಷವಾದ ಮುಖ್ಯಾಂಶವು, “ಪ್ರವಾದನ ವಾಕ್ಯಕ್ಕೆ ಕಿವಿಗೊಡುವುದು ದೀಕ್ಷಾಸ್ನಾನಕ್ಕೆ ನಡೆಸುತ್ತದೆ” ಎಂಬ ಶೀರ್ಷಿಕೆಯುಳ್ಳ ದೀಕ್ಷಾಸ್ನಾನದ ಭಾಷಣವಾಗಿತ್ತು. ದೀಕ್ಷಾಸ್ನಾನದ ಅಭ್ಯರ್ಥಿಗಳು ಕೇವಲ ದೀಕ್ಷಾಸ್ನಾನವಾಗುವುದರ ಮೂಲಕವಲ್ಲ, ಕ್ರಿಸ್ತನ ಹೆಜ್ಜೆಜಾಡುಗಳನ್ನು ನಿಕಟವಾಗಿ ಅನುಸರಿಸುವ ಮೂಲಕವೇ ಅವನನ್ನು ಅನುಕರಿಸುವಂತೆ ಮರುಜ್ಞಾಪಿಸಲ್ಪಟ್ಟರು. (1 ಪೇತ್ರ 2:21) ತನ್ನ ಆತ್ಮಾಭಿಷಿಕ್ತ ಶಿಷ್ಯರ ಜೊತೆಗೆ ಸೇವೆಸಲ್ಲಿಸಲು “ಬೇರೆ ಕುರಿ”ಗಳನ್ನು ಸಹ ಒಟ್ಟುಗೂಡಿಸುವೆನೆಂದು ಯೇಸು ಮುಂತಿಳಿಸಿದ ಯೋಹಾನ 10:16​ರ ನೆರವೇರಿಕೆಯಲ್ಲಿ ಪಾಲ್ಗೊಳ್ಳುವುದು ಈ ಹೊಸಬರಿಗೆ ಎಂತಹ ಒಂದು ಸುಯೋಗ!

ಯೆಹೋವನ ಆತ್ಮವು ನಮ್ಮೊಂದಿಗೆ ಬೈಬಲಿನ ಮೂಲಕ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮತ್ತು ನಮ್ಮ ಬೈಬಲ್‌-ಶಿಕ್ಷಿತ ಮನಸ್ಸಾಕ್ಷಿಯ ಮುಖಾಂತರ ಮಾತಾಡುತ್ತದೆ ಎಂಬುದನ್ನು “ದೇವರಾತ್ಮವು ಹೇಳಲಿಕ್ಕಿರುವ ವಿಷಯಕ್ಕೆ ಕಿವಿಗೊಡಿರಿ” ಎಂಬ ಮಧ್ಯಾಹ್ನದ ಮೊದಲ ಭಾಷಣವು ವಿವರಿಸಿತು. (ಮತ್ತಾಯ 24:45) ಆದಕಾರಣ, ದೇವರನ್ನು ಹೇಗೆ ಮೆಚ್ಚಿಸುವುದು ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಕ್ರೈಸ್ತರು ಸ್ವರ್ಗದಿಂದ ಅಕ್ಷರಾರ್ಥ ಧ್ವನಿಯನ್ನು ಕೇಳಿಸಿಕೊಳ್ಳುವ ಅಗತ್ಯವಿಲ್ಲ. “ದೈವಿಕ ಭಕ್ತಿಗನುಗುಣವಾದ ಬೋಧನೆಯ ವಿಷಯದಲ್ಲಿ ದೃಢರಾಗಿರುವುದು” ಎಂಬ ಮುಂದಿನ ಚರ್ಚೆಯು, ಈ ಲೋಕವು ಪ್ರಚುರಪಡಿಸುವ ನೀತಿಗೆಟ್ಟ ವಿಚಾರಗಳನ್ನು ಪರಿಶೀಲಿಸಿ ನೋಡಬಾರದೆಂದು ಕ್ರೈಸ್ತರಿಗೆ ಬುದ್ಧಿವಾದವನ್ನು ನೀಡಿತು. ಅನಿಯಂತ್ರಿತ ಕುತೂಹಲವು, ಧರ್ಮಭ್ರಷ್ಟರ ಹಾಗೂ ಸೈತಾನನ ಇತರ ಪ್ರತಿನಿಧಿಗಳಿಂದ ಬಿತ್ತಲ್ಪಡುವ ಹಾನಿಕರ ಮಾಹಿತಿಗೆ ನಮ್ಮನ್ನು ಒಡ್ಡಸಾಧ್ಯವಿದೆ. ಆದುದರಿಂದ, ಬೈಬಲನ್ನು ಹಾಗೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಎಲ್ಲ ಲೇಖನಗಳನ್ನು ಓದುವುದು ಎಷ್ಟು ಉತ್ತಮ!

“ಸ್ವಸ್ಥಬೋಧನಾ ವಾಕ್ಯಗಳ ಮಾದರಿಗೆ ಅಂಟಿಕೊಂಡಿರಿ” ಎಂಬ ಶೀರ್ಷಿಕೆಯುಳ್ಳ ಮುಂದಿನ ಭಾಷಣವು, ಸತ್ಯದ ಶಾಸ್ತ್ರೀಯ “ಮಾದರಿ” ಅಥವಾ ‘ಚೌಕಟ್ಟಿನ’ ಆಧಾರದೊಂದಿಗೆ ಸುಪರಿಚಿತರಾಗಿರುವ ಮಹತ್ತ್ವವನ್ನು ಒತ್ತಿಹೇಳಿತು. (2 ತಿಮೊಥೆಯ 1:13) ಈ ಮಾದರಿಯನ್ನು ಬಿಗಿಯಾಗಿ ಹಿಡಿದುಕೊಳ್ಳುವುದು, ದೈವಿಕ ಭಕ್ತಿಯನ್ನು ಹೊಂದಿರುವುದಕ್ಕೆ ಮಾತ್ರವಲ್ಲ, ಸತ್ಯದೊಂದಿಗೆ ಸರಿಹೊಂದದ ವಿಷಯಗಳನ್ನು ಗ್ರಹಿಸುವುದಕ್ಕೂ ಕೀಲಿ ಕೈಯಾಗಿದೆ.

ಯೆಹೋವನಿಂದ ಪ್ರಿಯರಾಗಿ ವೀಕ್ಷಿಸಲ್ಪಡುವುದನ್ನು ಊಹಿಸಿಕೊಳ್ಳಿ. ಎಂತಹ ಒಂದು ಸನ್ಮಾನ! ಹಗ್ಗಾಯನ ಪ್ರವಾದನೆಯ ಮೇಲಾಧಾರಿಸಿ “ಯೆಹೋವನ ಆಲಯವನ್ನು ‘ಇಷ್ಟವಸ್ತುಗಳು’ ತುಂಬುತ್ತಿವೆ” ಎಂಬ ಭಾಷಣವು ಬಹಳ ಉತ್ತೇಜನವನ್ನು ನೀಡುವಂತಹದ್ದಾಗಿತ್ತು. ಏಕೆಂದರೆ ‘ಮಹಾ ಸಮೂಹದ’ ಪ್ರತಿಯೊಬ್ಬ ಸದಸ್ಯನು ಯೆಹೋವನಿಗೆ ಪ್ರಿಯನಾಗಿದ್ದಾನೆ ಎಂಬುದಾಗಿ ಕೇಳುಗರಿಗೆ ಆಶ್ವಾಸನೆಯನ್ನು ಇದು ನೀಡಿತು. (ಪ್ರಕಟನೆ 7:9) ಆದುದರಿಂದ, ಮುಂಬರುವ ‘ಮಹಾ ಸಂಕಟದಲ್ಲಿ’ ರಾಷ್ಟ್ರಗಳನ್ನು ಅಂತಿಮವಾಗಿ ‘ನಡುಗಿಸುವಾಗ’ ಯೆಹೋವನು ಅವರನ್ನು ಉಳಿಸುವನು. (ಹಗ್ಗಾಯ 2:7, 21, 22; ಮತ್ತಾಯ 24:21) “ಜಾಗರೂಕರಾಗಿರುವಂತೆ ಪ್ರವಾದನ ವಚನಗಳು ನಮ್ಮನ್ನು ಎಚ್ಚರಿಸುತ್ತವೆ” ಎಂಬ ಭಾಗವು ವಿವರಿಸಿದಂತೆ, ಅಷ್ಟರ ತನಕ ಯೆಹೋವನ ಜನರು ಆತ್ಮಿಕವಾಗಿ ಜಾಗರೂಕರಾಗಿರುವ ಅಗತ್ಯವಿದೆ. ಭಾಷಣಕರ್ತನು ಯೇಸುವಿನ ಈ ನುಡಿಗಳನ್ನು ಉದ್ಧರಿಸಿದನು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.” (ಮತ್ತಾಯ 24:42) ನಾವು ಹೇಗೆ ಆತ್ಮಿಕವಾಗಿ ಜಾಗರೂಕರಾಗಿರಸಾಧ್ಯವಿದೆ? ಯೆಹೋವನ ಸೇವೆಯಲ್ಲಿ ನಿರತರಾಗಿರುವ ಮೂಲಕ, ನಿರಂತರವಾಗಿ ಪ್ರಾರ್ಥಿಸುವ ಮೂಲಕ, ಮತ್ತು ಯೆಹೋವನ ಮಹಾ ದಿನವನ್ನು ಕಾಯುತ್ತಾ ಇರುವ ಮೂಲಕವೇ.

“ಅಂತ್ಯಕಾಲದಲ್ಲಿ ಪ್ರವಾದನ ವಾಕ್ಯ” ಎಂಬುದು ಆ ದಿನದ ಅಂತಿಮ ಭಾಷಣವಾಗಿತ್ತು. ಈ ಭಾಷಣವು ಮುಂದೆ ಅನೇಕ ವರ್ಷಗಳ ವರೆಗೂ ಚಿರಸ್ಮರಣೀಯವಾಗಿರುವುದು. ಹಾಗೇಕೆ? ಏಕೆಂದರೆ, ಭಾಷಣಕರ್ತನು ಹೊಸ ಪುಸ್ತಕದ ಬಿಡುಗಡೆಯನ್ನು ಪ್ರಕಟಿಸಿದನು. ಅದು ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂದಾಗಿತ್ತು. “ಈ ಸೊಗಸಾದ ವರ್ಣರಂಜಿತ, 320 ಪುಟಗಳ ಪ್ರಕಾಶನವು, ದಾನಿಯೇಲ ಪುಸ್ತಕದ ಪ್ರತಿಯೊಂದು ಭಾಗವನ್ನು ಆವರಿಸುತ್ತದೆ” ಎಂದು ಭಾಷಣಕರ್ತನು ಹೇಳಿದನು. ಯೆಹೋವನು ತನ್ನ ಪ್ರವಾದನ ವಾಕ್ಯದ ಮೇಲೆ ಬೆಳಕನ್ನು ಚೆಲ್ಲುತ್ತಿದ್ದಾನೆ ಎಂಬುದಕ್ಕೆ ನಂಬಿಕೆಯನ್ನು ಬಲಪಡಿಸುವಂತಹ ಎಂತಹ ಒಂದು ಪ್ರಮಾಣವು ಇದಾಗಿದೆ!

ಮೂರನೆಯ ದಿನ: ದೇವರ ಪ್ರವಾದನ ವಾಕ್ಯವು ಎಂದಿಗೂ ವಿಫಲವಾಗುವುದಿಲ್ಲ

“ಕ್ಲುಪ್ತಕಾಲಕ್ಕಾಗಿ ಪ್ರವಾದನ ವಾಕ್ಯಗಳು” ಎಂಬ ಭಾಷಣಮಾಲೆಯೊಂದಿಗೆ ಅಧಿವೇಶನದ ಅಂತಿಮ ದಿನವು ಪ್ರಾರಂಭವಾಯಿತು. ಯೆಹೋವನ ನ್ಯಾಯತೀರ್ಪುಗಳ ಕುರಿತಾಗಿ ಪ್ರವಾದಿಯಾದ ಹಬಕ್ಕೂಕನ ಮೂರು ಪ್ರಕಟನೆಗಳನ್ನು ಈ ಮೂರು ಭಾಗಗಳು ಪರಿಶೀಲಿಸಿದವು. ಮೊದಲನೆಯ ನ್ಯಾಯತೀರ್ಪು ಹಟಮಾರಿ ಜನಾಂಗವಾದ ಯೆಹೂದದ ಹಾಗೂ ಎರಡನೆಯ ನ್ಯಾಯತೀರ್ಪು ದಬ್ಬಾಳಿಕೆ ನಡೆಸುತ್ತಿದ್ದ ಬಾಬೆಲಿನ ವಿರುದ್ಧವಾಗಿತ್ತು. ಕೊನೆಯದ್ದು ಮುಂದೆ ನೆರವೇರಲಿಕ್ಕಿದೆ. ಇದು ಎಲ್ಲ ದುಷ್ಟ ಮಾನವರಿಗಾಗಿ ಕಾದಿರುವ ನಾಶನಕ್ಕೆ ಅನ್ವಯಿಸುತ್ತದೆ. ಅರ್ಮಗೆದೋನ್‌ನ ಬಗ್ಗೆ ಮಾತಾಡುತ್ತಾ, ಭಾಷಣಮಾಲೆಯ ಕೊನೆಯ ಭಾಷಣವನ್ನು ನೀಡುತ್ತಿದ್ದ ಸಹೋದರನು, “ಯೆಹೋವನು ತನ್ನ ಮಹಾ ಶಕ್ತಿಯನ್ನು ಸಂಪೂರ್ಣವಾಗಿ ಉಪಯೋಗಿಸುವಾಗ, ಅದು ನಿಜವಾಗಿಯೂ ಭಯಪ್ರೇರಕವಾಗಿರುವುದು” ಎಂಬುದನ್ನು ಹೇಳುವ ಮೂಲಕ ಕೇಳುಗರ ಹೃದಯದಲ್ಲಿ ಒಂದಷ್ಟರ ಮಟ್ಟಿಗೆ ದೈವಿಕ ಭಯವನ್ನು ಮೂಡಿಸಿದನು.

“ನಮ್ಮ ಆತ್ಮಿಕ ಪರಂಪರೆಯನ್ನು ಗಣ್ಯಮಾಡುವುದು” ಎಂಬುದು ಅಧಿವೇಶನದ ಹೃದಯಸ್ಪರ್ಶಿ ಬೈಬಲ್‌ ಡ್ರಾಮವಾಗಿತ್ತು. ಈ ಆತ್ಮಪರಿಶೋಧಕ ಡ್ರಾಮವು, ಆತ್ಮಿಕ ವಿಷಯಗಳ ಕಡೆಗೆ ಯಾಕೋಬ ಮತ್ತು ಏಸಾವರಿಗಿದ್ದ ಮನೋಭಾವಗಳ ವ್ಯತ್ಯಾಸವನ್ನು ತಿಳಿಸಿತು. ಏಸಾವನು ಆತ್ಮಿಕ ಪರಂಪರೆಯನ್ನು ಕಡೆಗಣಿಸಿದನು. ಆದರೆ ಅದನ್ನು ಅಮೂಲ್ಯವೆಂದೆಣಿಸಿದ ಯಾಕೋಬನಿಗೆ ಅದು ನೀಡಲ್ಪಟ್ಟಿತು. “ಯೆಹೋವನು ನಮಗೆ ಯಾವ [ಆತ್ಮಿಕ ಪರಂಪರೆಯನ್ನು] ನೀಡಿದ್ದಾನೆ?” ಎಂಬ ಪ್ರಶ್ನೆಯನ್ನು ಅಧಿವೇಶನದಲ್ಲಿ ಹಾಜರಿದ್ದವರಿಗೆ ಕೇಳಲಾಯಿತು. “ತನ್ನ ವಾಕ್ಯವಾದ ಬೈಬಲಿನ ಸತ್ಯವನ್ನು, ನಿತ್ಯ ಜೀವದ ನಿರೀಕ್ಷೆಯನ್ನು, ಮತ್ತು ಸುವಾರ್ತೆಯ ಘೋಷಕರೋಪಾದಿ ಆತನನ್ನು ಪ್ರತಿನಿಧಿಸುವ ಸುಯೋಗವನ್ನು ನೀಡಿದ್ದಾನೆ” ಎಂದು ಭಾಷಣಕರ್ತನು ಅದಕ್ಕೆ ಉತ್ತರವನ್ನು ನೀಡಿದನು.

“ನಮ್ಮ ಅಮೂಲ್ಯವಾದ ಪರಂಪರೆಯು ನಿಮಗೆ ಏನನ್ನು ಅರ್ಥೈಸುತ್ತದೆ?” ಎಂಬುದು ಮುಂದಿನ ಭಾಗವಾಗಿತ್ತು. ನಮ್ಮ ವೈಯಕ್ತಿಕ ಅಥವಾ ಭೌತಿಕ ಹಿತಚಿಂತನೆಗಳಿಗಿಂತಲೂ ಯೆಹೋವನ ಸೇವೆ ಮತ್ತು ಆತ್ಮಿಕ ಸುಯೋಗಗಳಿಗೆ ಪ್ರಥಮ ಸ್ಥಾನವನ್ನು ಕೊಡುವುದರ ಮೂಲಕ ನಾವು ನಮ್ಮ ಆತ್ಮಿಕ ಪರಂಪರೆಯ ಕಡೆಗೆ ಸರಿಯಾದ ಮನೋಭಾವವನ್ನು ತೋರಿಸುತ್ತೇವೆ. ಈ ರೀತಿಯಲ್ಲಿ ನಾವು ಆದಾಮ, ಏಸಾವ ಮತ್ತು ಇತರ ಅಪನಂಬಿಗಸ್ತ ಇಸ್ರಾಯೇಲ್ಯರಿಗೆ ತೀರ ವ್ಯತಿರಿಕ್ತವಾಗಿ ನಮ್ಮ ಜೀವಿತವನ್ನು ಯೆಹೋವನೊಂದಿಗಿನ ನಮ್ಮ ಸಂಬಂಧದ ಸುತ್ತಲೂ ಕಟ್ಟುತ್ತೇವೆ.

“ಮುಂತಿಳಿಸಲ್ಪಟ್ಟಂತೆ ಎಲ್ಲವನ್ನು ಹೊಸದುಮಾಡುವುದು” ಎಂಬ ಬಹಿರಂಗ ಭಾಷಣವು “ನೂತನಾಕಾಶಮಂಡಲ” ಮತ್ತು “ನೂತನಭೂಮಂಡಲ”ದ ಸಂಬಂಧದಲ್ಲಿ ನಾಲ್ಕು ಮುಖ್ಯ ಪ್ರವಾದನೆಗಳನ್ನು ಒಟ್ಟಿಗೆ ಹೆಣೆಯಿತು. (ಯೆಶಾಯ 65:17-25; 66:22-24; 2 ಪೇತ್ರ 3:13; ಪ್ರಕಟನೆ 21:1, 3-5) ಸಾ.ಶ.ಪೂ 537ರಲ್ಲಿ ತನ್ನ ಪುನಸ್ಸ್ಥಾಪಿತ ಜನರ ವಿಷಯದಲ್ಲಾದ ನೆರವೇರಿಕೆಗಿಂತಲೂ ಹೆಚ್ಚಿನ ನೆರವೇರಿಕೆಯು ಯೆಹೋವನ ಮನಸ್ಸಿನಲ್ಲಿತ್ತು. ಹೌದು, ತನ್ನ ರಾಜ್ಯ ಸರಕಾರವಾದ (“ನೂತನಾಕಾಶಮಂಡಲ”) ಮತ್ತು ವೈಭವಯುತವಾದ ಭೌಗೋಲಿಕ ಪ್ರಮೋದವನದಲ್ಲಿ ವಾಸಿಸಲಿರುವ ಅದರ ಭೌಮಿಕ ಪ್ರಜೆಗಳ (“ನೂತನಭೂಮಂಡಲ”ದ) ವಿಷಯವೇ ಆತನ ಮನಸ್ಸಿನಲ್ಲಿತ್ತು.

ಅಧಿವೇಶನವನ್ನು ರೋಚಕವೂ ಹೃದಯಸ್ಪರ್ಶಿಯೂ ಆಗಿ ಸಮಾಪ್ತಿಗೊಳಿಸಿದ ಭಾಷಣವು “ದೇವರ ವಾಕ್ಯವು ನಮಗೆ ಮಾರ್ಗದರ್ಶನವನ್ನು ನೀಡುವಾಗ ನಮಗಿರುವ ನಿರೀಕ್ಷೆಗಳು” ಎಂಬುದಾಗಿತ್ತು. ಇದು ರಾಜ್ಯ ಸಾರುವಿಕೆಯ ಕೆಲಸವನ್ನು ಪೂರ್ಣಗೊಳಿಸಲು ‘ಸಮಯವು ಸಂಕೋಚವಾದದ್ದಾಗಿದೆ’ ಎಂದು ಎಲ್ಲರಿಗೂ ಮರುಜ್ಞಾಪಿಸಿತು. (1 ಕೊರಿಂಥ 7:29) ಹೌದು, ಸೈತಾನನ ಮತ್ತು ಅವನ ಇಡೀ ದುಷ್ಟ ವ್ಯವಸ್ಥೆಯ ವಿರುದ್ಧ ಯೆಹೋವನ ನ್ಯಾಯದಂಡನೆಯ ನೆರವೇರಿಕೆಯ ಹೊಸ್ತಿಲಲ್ಲೇ ನಾವು ನಿಂತಿದ್ದೇವೆ. “ನಮ್ಮ ಮನಸ್ಸು ಯೆಹೋವನಿಗೋಸ್ಕರ ಕಾದಿದೆ; ನಮ್ಮ ಸಹಾಯವೂ ಗುರಾಣಿಯೂ ಆತನೇ” ಎಂದು ಹಾಡಿದ ಕೀರ್ತನೆಗಾರನಂತೆ ನಮ್ಮ ಭಾವನೆಗಳು ಇರುವಂತಾಗಲಿ. (ಕೀರ್ತನೆ 33:20) ಯಾರ ನಿರೀಕ್ಷೆಗಳು ದೇವರ ಪ್ರವಾದನ ವಾಕ್ಯದ ಮೇಲಾಧರಿಸಿವೆಯೋ ಅವರಿಗಾಗಿ ಎಂತಹ ಒಂದು ಉಜ್ವಲ ಪ್ರತೀಕ್ಷೆಯು ಮುಂದೆ ಕಾದಿದೆ!

[ಪುಟ 7ರಲ್ಲಿರುವ ಚಿತ್ರ]

ಭಾವಪರವಶಗೊಳಿಸುವಂತಹ ಡ್ರಾಮವು, ಯೆಹೋವನ ಸೇವಕರ ಆತ್ಮಿಕ ಪರಂಪರೆಗಾಗಿರುವ ಗಣ್ಯತೆಯನ್ನು ಹೆಚ್ಚಿಸಿತು

[ಪುಟ 7ರಲ್ಲಿರುವ ಚಿತ್ರ]

ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಟ್ಟ ಅನೇಕರು ದೀಕ್ಷಾಸ್ನಾನ ಪಡೆದುಕೊಂಡರು