ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ
ರಾಜಿ ಮಾಡಿಕೊಳ್ಳುವುದು ಹೇಗೆ?
ಸಮಸ್ಯೆ
ಒಂದು ವಿಷಯದ ಬಗ್ಗೆ ನಿಮಗೂ ನಿಮ್ಮ ಸಂಗಾತಿಗೂ ಬೇರೆಬೇರೆ ಅಭಿಪ್ರಾಯಗಳಿವೆ. ಯಾವುದನ್ನು ಆಯ್ಕೆಮಾಡಬೇಕು ಎನ್ನುವುದರ ಬಗ್ಗೆ ಈಗ ನಿಮ್ಮ ಮುಂದೆ ಕಡಿಮೆಪಕ್ಷ ಮೂರು ದಾರಿಗಳಿವೆ:
-
ನೀವು ಹೇಳಿದ ಹಾಗೆಯೇ ಮಾಡಬೇಕೆಂದು ಹಠಹಿಡಿಯುವುದು.
-
ನಿಮ್ಮ ಸಂಗಾತಿಗೆ ಇಷ್ಟವಾದದ್ದನ್ನು ಸುಮ್ಮನೆ ಮಾಡಿಬಿಡುವುದು.
-
ಇಬ್ಬರೂ ರಾಜಿ ಮಾಡಿಕೊಳ್ಳುವುದು.
‘ರಾಜಿ ಮಾಡಿಕೊಳ್ಳುವುದು ಎಂದರೆ ನನಗೆ ಆಗುವುದಿಲ್ಲಪ್ಪಾ! ಹಾಗೇನಾದರೂ ಮಾಡಿದರೆ ನನ್ನ ಇಷ್ಟನೂ ಆಗುವುದಿಲ್ಲ, ನನ್ನ ಸಂಗಾತಿಯ ಇಷ್ಟನೂ ನಡಿಯಲ್ಲ!’ ಎಂದು ನೀವು ಹೇಳಬಹುದು.
ರಾಜಿ ಮಾಡಿಕೊಳ್ಳುವುದರಿಂದ ನಿಮಗಿಬ್ಬರಿಗೆ ಸ್ವಲ್ಪವೂ ಸಂತೋಷ ಇರುವುದಿಲ್ಲ ಎಂದಲ್ಲ. ಅದನ್ನು ಸರಿಯಾಗಿ ಮಾಡಿದರೆ ಖಂಡಿತ ಸಂತೋಷ ಸಿಗುತ್ತದೆ. ಹಾಗಾಗಿ, ರಾಜಿ ಮಾಡಿಕೊಳ್ಳುವುದರ ಬಗ್ಗೆ ನೀವು ತಿಳಿದಿರಬೇಕಾದ ಕೆಲವೊಂದು ವಿಷಯಗಳನ್ನು ಮೊದಲು ನೋಡೋಣ. ಆಮೇಲೆ ಅದನ್ನು ಮಾಡುವುದು ಹೇಗೆ ಎಂದು ಚರ್ಚಿಸೋಣ.
ಇದನ್ನು ನೆನಪಿನಲ್ಲಿಡಿ
ರಾಜಿ ಮಾಡಿಕೊಳ್ಳಲು ಇಬ್ಬರ ಸಹಕಾರವೂ ಬೇಕು. ಮದುವೆ ಮುಂಚೆ ನಿಮ್ಮ ನಿರ್ಣಯಗಳನ್ನು ನೀವೇ ಮಾಡುತ್ತಿದ್ದೀರಿ. ಆದರೆ ಮದುವೆ ನಂತರ ಸನ್ನಿವೇಶ ಬದಲಾಗಿದೆ. ಈಗ ನೀವಿಬ್ಬರೂ ನಿಮ್ಮನಿಮ್ಮ ಇಷ್ಟಗಳಿಗಿಂತ ಹೆಚ್ಚಾಗಿ ನಿಮ್ಮ ವಿವಾಹಬಂಧಕ್ಕೆ ಮಹತ್ವ ಕೊಡಬೇಕು. ಹೀಗೆ ಮಾಡುವುದು ದೊಡ್ಡ ತಲೆನೋವು ಎಂದೆಣಿಸಬೇಡಿ. ನಿಜ ಹೇಳಬೇಕೆಂದರೆ ಅದರಲ್ಲೇ ಇರುವುದು ಲಾಭ. ಹೇಗೆ? “ಬರೀ ಒಬ್ಬರು ಮಾತ್ರ ಯೋಚಿಸುವ ಪರಿಹಾರಕ್ಕಿಂತ ಇಬ್ಬರು ಸೇರಿ ಯೋಚಿಸುವ ಪರಿಹಾರ ಹೆಚ್ಚು ಉತ್ತಮ ಆಗಿರುತ್ತದೆ” ಎನ್ನುತ್ತಾರೆ ಹೆಂಡತಿಯಾದ ಅನಿತಾ.
ರಾಜಿ ಮಾಡಿಕೊಳ್ಳಲು ಮುಕ್ತ ಮನಸ್ಸಿರಬೇಕು. “ನಿಮ್ಮ ಸಂಗಾತಿಯ ಪ್ರತಿಯೊಂದು ಮಾತನ್ನೂ ಅಭಿಪ್ರಾಯವನ್ನೂ ನೀವು ಒಪ್ಪಿಕೊಳ್ಳಬೇಕೆಂದೇನಿಲ್ಲ. ಆದರೆ ಅವನ/ಅವಳ ಅಭಿಪ್ರಾಯದ ಬಗ್ಗೆ ಯೋಚಿಸಲಿಕ್ಕಾದರೂ ತಯಾರಿರಬೇಕು. . . . ಸಂಗಾತಿ ಒಂದು ಸಮಸ್ಯೆಯ ಪರಿಹಾರದ ಬಗ್ಗೆ ಹೇಳುತ್ತಿರುವಾಗ ನೀವು ಕೈಕಟ್ಟಿಕೊಂಡು ಎಲ್ಲದಕ್ಕೂ ‘ಇಲ್ಲ’ ಎಂದು ತಲೆಯಾಡಿಸುತ್ತಾ (ಅಥವಾ ಮನಸ್ಸಲ್ಲೇ ಹಾಗೆ ಯೋಚಿಸುತ್ತಾ) ಇದ್ದರೆ ನಿಮ್ಮ ಚರ್ಚೆಯಿಂದ ಏನೂ ಪ್ರಯೋಜನ ಆಗುವುದಿಲ್ಲ” ಎನ್ನುತ್ತಾರೆ ಒಬ್ಬ ವಿವಾಹ ಸಲಹೆಗಾರರು. *
ರಾಜಿ ಮಾಡಿಕೊಳ್ಳಲು ತ್ಯಾಗ ಮಾಡಬೇಕು. ‘ನಾನು ಹೇಳಿದ್ದೇ ಸರಿ, ನಾನು ಹೇಳಿದ ಹಾಗೆ ಮಾಡು’ ಎನ್ನುವ ಸಂಗಾತಿ ಜೊತೆ ಜೀವನಮಾಡಲು ಯಾರಿಗೂ ಇಷ್ಟವಾಗುವುದಿಲ್ಲ. ಅದರ ಬದಲು ಗಂಡ ಹೆಂಡತಿ ಇಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ರಾಜಿ ಮಾಡಿಕೊಳ್ಳುವ ಸ್ವಭಾವವಿದ್ದರೆ ಚೆನ್ನಾಗಿರುತ್ತದೆ. “ನನ್ನ ಗಂಡನನ್ನು ಸಂತೋಷಪಡಿಸಲು ಕೆಲವೊಮ್ಮೆ ನಾನು ರಾಜಿ ಮಾಡಿಕೊಳ್ಳುತ್ತೇನೆ, ಕೆಲವೊಮ್ಮೆ ಅವರು ರಾಜಿ ಮಾಡಿಕೊಳ್ಳುತ್ತಾರೆ. ವಿವಾಹ ಜೀವನ ಅಂದಮೇಲೆ ಇದೆಲ್ಲ ಇರಬೇಕು ತಾನೇ? ಸಂಗಾತಿಯಿಂದ ಬರೀ ತೆಗೆದುಕೊಳ್ಳುವುದು ಅಲ್ಲ, ಕೊಡುವುದೂ ಸೇರಿದೆ.” ಇದು ಹೆಂಡತಿಯಾದ ಜ್ಯೋತಿಯ ಮಾತು.
ಇದಕ್ಕೇನು ಪರಿಹಾರ?
ಆರಂಭ ಚೆನ್ನಾಗಿರಲಿ. ಸಂಗಾತಿ ಜೊತೆ ಯಾವ ಸ್ವರದಲ್ಲಿ ಚರ್ಚೆ ಶುರು ಮಾಡುತ್ತೀರೊ ಹೆಚ್ಚಾಗಿ ಅದೇ ಸ್ವರದಲ್ಲಿ ಅದು ಕೊನೆಗೊಳ್ಳುತ್ತದೆ. ಅಂದರೆ ನೀವು ಅವರೊಟ್ಟಿಗೆ ಒರಟೊರಟಾಗಿ ಮಾತಾಡಲು ಆರಂಭಿಸಿದರೆ ಸಮಾಧಾನದಿಂದ ಮಾತುಮುಗಿಸಲು, ರಾಜಿ ಮಾಡಿಕೊಳ್ಳಲು ಆಗುತ್ತದಾ? ಇಲ್ಲ ತಾನೇ? ಆದ್ದರಿಂದ ಬೈಬಲಿನ ಈ ಬುದ್ಧಿಮಾತನ್ನು ಪಾಲಿಸಿ: “ನೀವು ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ.” (ಕೊಲೊಸ್ಸೆ 3:12) ನಿಮ್ಮಿಬ್ಬರಲ್ಲೂ ಈ ಗುಣಗಳಿದ್ದರೆ ಜಗಳ ಮಾಡುತ್ತಾ ಇರುವ ಬದಲು ಸಮಸ್ಯೆಯನ್ನು ಬಗೆಹರಿಸುವುದು ಹೇಗೆಂಬದಕ್ಕೆ ಗಮನಕೊಡುವಿರಿ.—ಬೈಬಲ್ ತತ್ವ: ಕೊಲೊಸ್ಸೆ 4:6.
ಇಬ್ಬರಿಗೂ ಒಪ್ಪಿಗೆಯಾಗುವ ಅಂಶಗಳನ್ನು ಹುಡುಕಿರಿ. ರಾಜಿ ಮಾಡಲು ನೀವು ಪ್ರಯತ್ನಗಳನ್ನು ಮಾಡಿದರೂ ಬರೀ ಜಗಳಗಳೇ ಆಗುತ್ತಿರಬಹುದು. ನೀವಿಬ್ಬರೂ ನಿಮ್ಮ ಅಭಿಪ್ರಾಯಗಳು ಹೇಗೆ ಭಿನ್ನವಾಗಿವೆ ಎಂಬದಕ್ಕೆ ಹೆಚ್ಚು ಗಮನ ಕೊಡುತ್ತಿರುವುದರಿಂದಲೇ ಹೀಗೆ ಆಗುತ್ತಿರಬಹುದು. ಹೀಗೆ ಮಾಡುವ ಬದಲು ಯಾವ್ಯಾವ ಅಂಶಗಳ ಬಗ್ಗೆ ನಿಮ್ಮಿಬ್ಬರಿಗೂ ಒಪ್ಪಿಗೆ ಇದೆಯೆಂದು ನೋಡಿ. ಇದಕ್ಕಾಗಿ ಹೀಗೆ ಮಾಡಿ:
ಇಬ್ಬರೂ ಒಂದೊಂದು ಹಾಳೆ ತೆಗೆದುಕೊಂಡು ಎರಡು ಪಟ್ಟಿ ಮಾಡಿ. ಒಂದು ಪಟ್ಟಿಯಲ್ಲಿ, ಯಾವ ವಿಷಯಗಳಲ್ಲಿ ನಿಮಗೆ ರಾಜಿ ಮಾಡಲಿಕ್ಕೇ ಆಗುವುದಿಲ್ಲವೆಂದು ಬರೆಯಿರಿ. ಇನ್ನೊಂದು ಪಟ್ಟಿಯಲ್ಲಿ ನೀವು ರಾಜಿ ಮಾಡಿಕೊಳ್ಳಬಹುದಾದ ಅಂಶಗಳನ್ನು ಬರೆದಿಡಿ. ನಂತರ ನಿಮ್ಮಿಬ್ಬರ ಪಟ್ಟಿಗಳನ್ನು ಜೊತೆಯಾಗಿ ಚರ್ಚಿಸಿ. ನಿಮ್ಮಿಬ್ಬರಿಗೂ ಯಾವ ಅಂಶಗಳನ್ನು ರಾಜಿ ಮಾಡಲಿಕ್ಕೇ ಆಗುವುದಿಲ್ಲ ಎಂದು ಅನಿಸುತ್ತದೊ ಅವು ನಿಜವಾಗಿ ಹೊಂದಿಸಿಕೊಳ್ಳಲು ಆಗುವಂಥ ವಿಷಯಗಳೆಂದು ನಿಮಗೆ ಗೊತ್ತಾಗುವುದು. ಆಗ ನಿಮಗಿಬ್ಬರಿಗೂ ರಾಜಿ ಮಾಡಿಕೊಳ್ಳುವುದು ಅಷ್ಟು ಕಷ್ಟ ಅನಿಸುವುದಿಲ್ಲ. ಒಂದುವೇಳೆ ಹೊಂದಿಕೆ ಆಗುವುದೇ ಇಲ್ಲವಾದರೂ, ನೀವೀಗ ಎಲ್ಲ ಅಂಶಗಳನ್ನು ಬರೆದಿಟ್ಟಿರುವುದರಿಂದ ನಿಮಗೂ ನಿಮ್ಮ ಸಂಗಾತಿಗೂ ವಿಷಯವನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಆಗುವುದು.
ಮನಸ್ಸಲ್ಲಿ ಹೊಳೆಯುವ ವಿಚಾರಗಳನ್ನು ಹಂಚಿಕೊಳ್ಳಿ. ಕೆಲವೊಂದು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಆದರೆ ಸಮಸ್ಯೆ ದೊಡ್ಡದ್ದಾಗಿದ್ದರೆ ಗಂಡಹೆಂಡತಿ ಇಬ್ಬರೂ ತಮಗೆ ಹೊಳೆಯುವ ವಿಚಾರಗಳನ್ನು ಹಂಚಿಕೊಳ್ಳಬೇಕು. ಆಗ ಬರೀ ಒಬ್ಬರು ಯೋಚಿಸುವ ಪರಿಹಾರಕ್ಕಿಂತ ಅವರಿಬ್ಬರೂ ಸೇರಿ ಹೆಚ್ಚು ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು. ಇದರಿಂದ ಅವರ ವಿವಾಹಬಂಧವೂ ಗಟ್ಟಿಯಾಗುತ್ತದೆ.—ಬೈಬಲ್ ತತ್ವ: ಪ್ರಸಂಗಿ 4:9.
ನಿಮ್ಮ ನೋಟವನ್ನು ಹೊಂದಿಸಿಕೊಳ್ಳಲು ಸಿದ್ಧರಿರಿ. ಬೈಬಲ್ ಹೀಗನ್ನುತ್ತದೆ: “ನಿಮ್ಮಲ್ಲಿ ಪ್ರತಿಯೊಬ್ಬನು ವೈಯಕ್ತಿಕವಾಗಿ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಲಿ; ಅದೇ ಸಮಯದಲ್ಲಿ, ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು.” (ಎಫೆಸ 5:33) ಗಂಡಹೆಂಡತಿ ಮಧ್ಯೆ ಪ್ರೀತಿ ಗೌರವದ ಹೊಳೆಯೇ ಹರಿಯುವಲ್ಲಿ ಅವರು ಒಬ್ಬರಿನ್ನೊಬ್ಬರ ಅಭಿಪ್ರಾಯಕ್ಕೆ ಬೆಲೆಕೊಡಲು ಮತ್ತು ಸಂಗಾತಿಗಾಗಿ ತಮ್ಮ ಅಭಿಪ್ರಾಯ ಬದಲಾಯಿಸಲೂ ಸಿದ್ಧರಿರುತ್ತಾರೆ. ಗಂಡನಾದ ಕ್ಯಾಮರಾನ್ ಹೇಳುವುದು: “ಕೆಲವೊಂದು ಸಲ ಹೇಗಿರುತ್ತದೆಂದರೆ, ಕೆಲವೊಂದು ವಿಷಯಗಳನ್ನು ಮಾಡುವುದರ ಬಗ್ಗೆ ನೀವು ಯೋಚನೆಯೇ ಮಾಡಿರುವುದಿಲ್ಲ. ಆದರೆ ಸಂಗಾತಿ ಮಾತು ಕೇಳಿ ಅದನ್ನು ಮಾಡುತ್ತೀರಿ. ಹಾಗೆ ಮಾಡಿದ್ದಕ್ಕೆ ಆಮೇಲೆ ತುಂಬ ಸಂತೋಷಪಡುತ್ತೀರಿ.”—ಬೈಬಲ್ ತತ್ವ: ಆದಿಕಾಂಡ 2:18. ▪ (g14-E 12)
^ ಪ್ಯಾರ. 12 ಜಾನ್ ಎಮ್. ಗಾಟ್ಮನ್ ಎಂಬವರು ಬರೆದಿರುವ ವಿವಾಹಜೀವನ ಸಫಲಗೊಳಿಸಲು ಏಳು ಸೂತ್ರಗಳು ಎಂಬ ಇಂಗ್ಲಿಷ್ ಪುಸ್ತಕದಿಂದ.