ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ಬ್ರಿಟನ್‌

ಇಲ್ಲಿನ 64,303 ಜನರಲ್ಲಿ ಸುಮಾರು 79 ಪ್ರತಿಶತ ಜನರು ಈಗಿರುವ ಹೆಚ್ಚಿನ ಕಷ್ಟ, ಯುದ್ಧ ಅಥವಾ ಜಗಳಗಳಿಗೆ ಧರ್ಮವೇ ಕಾರಣ ಎಂದು ತಿಳಿಸಿದ್ದಾರೆ. 2001ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 72 ಪ್ರತಿಶತ ಜನರು ತಾವು ಕ್ರೈಸ್ತರೆಂದು ಹೇಳಿಕೊಂಡಿದ್ದು, 2011ರಷ್ಟಕ್ಕೆ ಇವರ ಸಂಖ್ಯೆ 59 ಪ್ರತಿಶತಕ್ಕೆ ಇಳಿದಿದೆ. ಆದರೆ ತಾವು ಯಾವುದೇ ಧರ್ಮಕ್ಕೆ ಸಂಬಂಧಪಟ್ಟಿಲ್ಲ ಎಂದು ಹೇಳಿದವರ ಸಂಖ್ಯೆ 15ರಿಂದ 25 ಪ್ರತಿಶತಕ್ಕೆ ಏರಿದೆ.

ಪ್ರಪಂಚ

ಮಹಿಳಾ ದೌರ್ಜನ್ಯ “ವಿಶ್ವವ್ಯಾಪಕವಾಗಿ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಒಂದು ಸಾಮಾಜಿಕ ಸಮಸ್ಯೆ. ಪ್ರಪಂಚದ ಶೇಕಡ 35ರಷ್ಟು ಸ್ತ್ರೀಯರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಅದರಲ್ಲಿ ಶೇಕಡ 30ರಷ್ಟು ಸ್ತ್ರೀಯರು ತಮ್ಮ ಗಂಡನಿಂದಲೇ ಹಲ್ಲೆಗೊಳಗಾಗುತ್ತಿದ್ದಾರೆ” ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಸಿದೆ.

ಚೀನಾ

ಮಾಧ್ಯಮಗಳ ವರದಿಗನುಸಾರ ಮಕ್ಕಳು ತಮ್ಮ ವೃದ್ಧ ಹೆತ್ತವರನ್ನು ಆಗಾಗ ಭೇಟಿ ಮಾಡಿ ಅವರ “ಭಾವನಾತ್ಮಕ ಅವಶ್ಯಕತೆಗಳನ್ನು” ನೋಡಿಕೊಳ್ಳಬೇಕೆಂಬ ಕಾನೂನನ್ನು ಇತ್ತೀಚೆಗೆ ಜಾರಿಗೊಳಿಸಲಾಯಿತು; ಆದರೆ ಇದನ್ನು ಮಾಡಲು ತಪ್ಪುವ ಮಕ್ಕಳಿಗೆ ಕಾನೂನಿನಲ್ಲಿ “ಯಾವುದೇ ಶಿಕ್ಷೆಯ ಕುರಿತು ಉಲ್ಲೇಖಿಸಲಾಗಿಲ್ಲ.” (g14-E 09)

ಯೂರೋಪ್‌

ಇತ್ತೀಚೆಗೆ ದುಷ್ಕರ್ಮಿಗಳ ಗುಂಪುಗಳು ನಕಲಿ ವಸ್ತುಗಳನ್ನು ತಯಾರಿಸುತ್ತಿವೆ. ಇವುಗಳಲ್ಲಿ ಆಹಾರ, ಸೌಂದರ್ಯ ವರ್ಧಕ, ಸೋಪು ಮುಂತಾದ ದಿನಬಳಕೆಯ ವಸ್ತುಗಳು ಸೇರಿವೆ. ಆಹಾರ ಸುರಕ್ಷತೆಯ ಕುರಿತು ಸಲಹೆ ನೀಡುವ ಒಂದು ಸಂಸ್ಥೆಯ ಅಧ್ಯಕ್ಷರು, “ಕಡಿಮೆ ದರದ ಪ್ರತಿಯೊಂದು ವಸ್ತುಗಳಲ್ಲೂ ಈ ರೀತಿಯ ಮೋಸ ನಡೆಯುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ. ಪ್ರಗತಿಪರ ದೇಶಗಳಲ್ಲಿ ಜನರು ಖರೀದಿಸುವ ಆಹಾರ ಪದಾರ್ಥಗಳಲ್ಲಿ 10 ಪ್ರತಿಶತ ಪದಾರ್ಥಗಳು ಕಲಬೆರಕೆ ಅಥವಾ ಕಳಪೆ ಗುಣಮಟ್ಟದ್ದು ಆಗಿರುತ್ತದೆ ಎಂದು ಒಬ್ಬ ತಜ್ಞರು ಅಂದಾಜು ಮಾಡಿದ್ದಾರೆ.