ಮುಖಪುಟ ಲೇಖನ | ಧುತ್ತೆಂದು ದುರಂತಗಳು ಸಂಭವಿಸಿದಾಗ . . .
ಗಂಭೀರ ಕಾಯಿಲೆಗೆ ತುತ್ತಾದಾಗ. . .
ಅರ್ಜೆಂಟೀನದಲ್ಲಿ ವಾಸಿಸುವ ಮೇಬಲ್, ತುಂಬ ಲವಲವಿಕೆಯಿಂದ ಇದ್ದ ಸ್ತ್ರೀ. ಅವರು ಫಿಸಿಯೋಥೆರಪಿ ತಜ್ಞೆಯಾಗಿದ್ದರು. ಆದರೆ 2007ರಲ್ಲಿ ಇದ್ದಕ್ಕಿದ್ದಂತೆ ಅವರಿಗೆ ವಿಪರೀತ ಸುಸ್ತು, ತಲೆನೋವು ಕಾಣಿಸಿಕೊಳ್ಳಲು ಶುರುವಾಯಿತು. ಅವರು ಹೇಳುವುದು, “ಆಗ ನಾನು ಹೋಗದೇ ಇದ್ದ ವೈದ್ಯರಿಲ್ಲ, ತಗೊಳ್ಳದೇ ಇದ್ದ ಔಷಧಿ ಇಲ್ಲ. ಆದರೆ ಅವುಗಳಿಂದೇನೂ ಪ್ರಯೋಜನವಾಗಲಿಲ್ಲ.” ಕೊನೆಗೆ, ಅವರು ಮೆದುಳಿನ ಸ್ಕಾ್ಯನಿಂಗ್ ಮಾಡಿಸಿ ನೋಡಿದಾಗ ಮೆದುಳಿನಲ್ಲಿ ಗಡ್ಡೆ ಇದೆ ಎಂದು ತಿಳಿದುಬಂತು. “ಈ ವಿಷಯ ಕೇಳಿದಾಗ ಒಂದು ಕ್ಷಣ ಉಸಿರೇ ನಿಂತುಹೋದ ಹಾಗಾಯ್ತು” ಎಂದವರು ಹೇಳುತ್ತಾರೆ. ಅಂತಹ ಕಾಯಿಲೆ ಇದೆ ಅನ್ನೋದನ್ನು ಒಪ್ಪಿಕೊಳ್ಳಲು ಅವರಿಗೆ ತುಂಬ ಕಷ್ಟವಾಯಿತು.
“ನನಗಿದ್ದ ಕಾಯಿಲೆ ಎಷ್ಟು ಗಂಭೀರವಾಗಿತ್ತು ಅನ್ನೋದು ಆಪರೇಷನ್ ಆಗುವವರೆಗೂ ಗೊತ್ತಿರಲಿಲ್ಲ. ಆಪರೇಷನ್ ಆಗಿ ಪ್ರಜ್ಞೆ ಬಂದಾಗ ನಾನು ತುರ್ತು ನಿಗಾ ಘಟಕದಲ್ಲಿದ್ದೆ (ಐ.ಸಿ.ಯು). ನನಗೆ ಒಂಚೂರು ಅಲ್ಲಾಡಲು ಆಗುತ್ತಿರಲಿಲ್ಲ. ಕಣ್ಣು ತೆರೆಯಲು ಮಾತ್ರ ಆಗುತ್ತಿತ್ತು, ಮೇಲ್ಛಾವಣಿ ನೋಡುತ್ತಾ ಇರುತ್ತಿದ್ದೆ. ಈ ಹಿಂದೆ ತುಂಬ ಚುರುಕಾಗಿದ್ದವಳು, ಎಲ್ಲ ಕೆಲಸವನ್ನು ಮಾಡುತ್ತಿದ್ದವಳು ಆಪರೇಷನ್ ಆದ ನಂತರ ಏನೂ ಮಾಡಲಿಕ್ಕಾಗದೇ ಇರುವಷ್ಟು ಅಸಹಾಯಕಳಾಗಿ ಬಿಟ್ಟಿದ್ದೆ. ನನ್ನ ಸುತ್ತಮುತ್ತಲು ಏನಾಗುತ್ತಿದೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಆ ಮೆಷಿನ್‌ಗಳಿಂದ ಬರುತ್ತಿದ್ದ ಸದ್ದು, ತುರ್ತು ಪರಿಸ್ಥಿತಿಯಲ್ಲಿ ಬಾರಿಸುತ್ತಿದ್ದ ಘಂಟೆ, ರೋಗಿಗಳ ರೋಧನೆ ಇವೆಲ್ಲ ನನ್ನ ನೋವನ್ನು ಇನ್ನಷ್ಟು ಹೆಚ್ಚಿಸಿದವು.”
“ಈಗ ನಾನು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದೇನೆ. ಯಾರ ಸಹಾಯ ಇಲ್ಲದೆ ನಡೆಯುತ್ತೇನೆ, ಕೆಲವೊಮ್ಮೆ ಒಬ್ಬಳೇ ಹೊರಗೆ ಹೋಗಿ ಸುತ್ತಾಡಿಕೊಂಡು ಬರುತ್ತೇನೆ. ಆದರೆ ಕಣ್ಣು ಸರಿಯಾಗಿ ಕಾಣುವುದಿಲ್ಲ, ಎಲ್ಲ ಎರಡೆರಡಾಗಿ ಕಾಣಿಸುತ್ತವೆ. ಮೆದುಳಿಗೆ ಹಾನಿಯಾಗಿದ್ದರಿಂದ ಸ್ನಾಯುಗಳು ಸರಿಯಾಗಿ ಕೆಲಸ ಮಾಡುವುದಿಲ್ಲ, ಚಿಕ್ಕ-ಪುಟ್ಟ ಕೆಲಸಗಳನ್ನು ಸಹ ತುಂಬ ನಿಧಾನವಾಗಿ ಮಾಡುತ್ತೇನೆ.”
ಏನು ಮಾಡಬಹುದು?
ಖಂಡಿತ ಹುಷಾರಾಗುತ್ತೆ ಎನ್ನುವ ನಂಬಿಕೆಯಿಡಿ. “ಹರ್ಷಹೃದಯವು ಒಳ್ಳೇ ಔಷಧ, ಕುಗ್ಗಿದ ಮನದಿಂದ ಒಣಮೈ” ಎಂದು ಬೈಬಲಿನ ಜ್ಞಾನೋಕ್ತಿ 17:22 ಹೇಳುತ್ತದೆ. ಮೇಬಲ್ ಹೇಳುವುದು, “ನನ್ನ ಪರಿಸ್ಥಿತಿ, ಹಿಂದೆ ನನ್ನ ಹತ್ತಿರ ಚಿಕಿತ್ಸೆಗೆಂದು ಬರುತ್ತಿದ್ದ ರೋಗಿಗಳ ಥರಾನೇ ಇತ್ತು. ಫಿಸಿಯೋಥೆರಪಿ ವ್ಯಾಯಾಮಗಳು ನನ್ನನ್ನು ಹಿಂಡಿ ಹಾಕುತ್ತಿದ್ದವು. ಕೆಲವೊಮ್ಮೆಯಂತೂ ವ್ಯಾಯಾಮನೂ ಬೇಡ, ಏನೂ ಬೇಡ ಎಂದೆನಿಸುತ್ತಿತ್ತು. ಆದರೆ ಅಂಥ ಯೋಚನೆಗಳು ಬಂದಾಗ, ‘ಇವೆಲ್ಲವನ್ನು ಮಾಡಿದ್ರೆ ತಾನೇ ಹುಷಾರಾಗೋದು’ ಅಂತ ಅಂದುಕೊಳ್ಳುತ್ತಾ ಬೇಗನೇ ಹುಷಾರಾಗಲಿಕ್ಕೆ ಏನೆಲ್ಲ ಮಾಡಬೇಕಿತ್ತೋ ಅದನ್ನೆಲ್ಲ ಮಾಡುತ್ತಿದ್ದೆ.”
ನಿಮಗಿರುವ ನೋವನ್ನು ಸಹಿಸಿಕೊಳ್ಳಲು ನಿರೀಕ್ಷೆ ಕೊಡುವ ಒಳ್ಳೆಯ ವಿಷಯಗಳ ಬಗ್ಗೆ ಯೋಚನೆ ಮಾಡಿ. ಮೇಬಲ್ ಸಹ ಇದನ್ನೇ ಮಾಡಿದರು. ಬೈಬಲಿಂದ ಅವರು ಯಾಕೆ ಇವತ್ತು ಕಷ್ಟಸಂಕಟಗಳಿವೆ ಎನ್ನುವುದನ್ನು ಮಾತ್ರವಲ್ಲದೆ ಅಂಥ ಕಷ್ಟಸಂಕಟಗಳು ಶಾಶ್ವತವಾಗಿ ಇಲ್ಲದಿರುವ ಸಮಯವೂ ಬೇಗನೇ ಬರಲಿಕ್ಕಿದೆ ಎನ್ನುವುದನ್ನೂ ತಿಳಿದುಕೊಂಡರು. * ಮತ್ತು ಯಾವಾಗಲೂ ಆ ಒಳ್ಳೆಯ ವಿಷಯದ ಬಗ್ಗೆನೇ ಯೋಚಿಸುತ್ತಿದ್ದರು.
ದೇವರು ನಿಮ್ಮ ಬಗ್ಗೆ ವೈಯಕ್ತಿಕವಾಗಿ ಎಷ್ಟು ಕಾಳಜಿ ವಹಿಸುತ್ತಾನೆ ಅನ್ನೋದನ್ನು ಅರ್ಥಮಾಡಿಕೊಳ್ಳಿ. (1 ಪೇತ್ರ 5:7) ಈ ವಿಷಯವನ್ನು ತಿಳಿದುಕೊಂಡದ್ದರಿಂದ ತನಗೆ ಹೇಗೆ ಸಹಾಯವಾಯಿತೆಂದು ಮೇಬಲ್ ಹೇಳುತ್ತಾರೆ: “ಬೈಬಲಿನ ಯೆಶಾಯ 41:10ರಲ್ಲಿ ‘ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ’ ಎಂದು ದೇವರು ಹೇಳಿದ್ದಾರೆ. ಆ ಮಾತಿನ ನಿಜತ್ವವನ್ನು ನನ್ನನ್ನು ಆಪರೇಷನ್‌ಗೆಂದು ಕರೆದುಕೊಂಡು ಹೋದಾಗ ಗ್ರಹಿಸಿದೆ. ನನಗೇನಾಗಿದೆಯೋ ಅದರ ಬಗ್ಗೆ ಯೆಹೋವ ದೇವರಿಗೆ ಚಿಂತೆಯಿದೆ ಎಂಬ ಅರಿವು ಆ ಸಮಯದಲ್ಲೂ ನೆಮ್ಮದಿಯಿಂದ ಇರಲು ನನಗೆ ಸಹಾಯಮಾಡಿತು.”
ನಿಮಗಿದು ಗೊತ್ತಿತ್ತಾ? ಮುಂದೊಂದು ದಿನ ಇಡೀ ಮಾನವಕುಲ ಯಾವುದೇ ಕಾಯಿಲೆ ಇಲ್ಲದೆ ಸಂಪೂರ್ಣ ಆರೋಗ್ಯದಿಂದಿರುತ್ತದೆ ಎಂದು ಬೈಬಲ್ ಬೋಧಿಸುತ್ತದೆ.— ಯೆಶಾಯ 33:24; 35:5, 6. (g14-E 07)
^ ಪ್ಯಾರ. 8 ಇದರ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 11ನೇ ಅಧ್ಯಾಯ ನೋಡಿ. ಇದು www.isa4310.com/knನಲ್ಲೂ ಲಭ್ಯ.