ಮನಸ್ತಾಪ ಬಗೆಹರಿಸಿ ಒಳ್ಳೇ ಸಂಬಂಧ ಸ್ಥಾಪಿಸುವುದು ಹೇಗೆ?
ಬೈಬಲಿನ ದೃಷ್ಟಿಕೋನ
ಮನಸ್ತಾಪ ಬಗೆಹರಿಸಿ ಒಳ್ಳೇ ಸಂಬಂಧ ಸ್ಥಾಪಿಸುವುದು ಹೇಗೆ?
“ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ” ಎನ್ನುತ್ತದೆ ಬೈಬಲ್. (ರೋಮನ್ನರಿಗೆ 3:23) ಭೂಮಿ ಮೇಲೆ ಜೀವಿಸುತ್ತಿರುವ 700 ಕೋಟಿಗೂ ಮೇಲ್ಪಟ್ಟ ಜನರು ಅಪರಿಪೂರ್ಣರು, ತಪ್ಪು ಮಾಡುವವರು. ಹಾಗಾಗಿ ವ್ಯಕ್ತಿಗಳ ನಡುವೆ ಘರ್ಷಣೆ, ತಿಕ್ಕಾಟ ಆಗಿಯೇ ಆಗುತ್ತದೆ. ಹೀಗಾದಾಗ ಮನಸ್ತಾಪ ಬಗೆಹರಿಸಿ ಪುನಃ ಒಳ್ಳೇ ಸಂಬಂಧ ಸ್ಥಾಪಿಸುವುದು ಹೇಗೆ?
ಬೈಬಲ್ ಉತ್ತಮ ಸಲಹೆಸೂಚನೆಗಳನ್ನು ಕೊಡುತ್ತದೆ. ಸೃಷ್ಟಿಕರ್ತನಾದ ಯೆಹೋವನು ಶಾಂತಿದಾಯಕ ದೇವರೆಂದು ಅದು ವರ್ಣಿಸುತ್ತದೆ. (ಇಬ್ರಿಯ 13:20; ಕೀರ್ತನೆ 83:18) ಭೂಮಿ ಮೇಲಿರುವ ತನ್ನ ಮಕ್ಕಳು ಪರಸ್ಪರ ಶಾಂತಿ, ಸಮಾಧಾನದ ಸಂಬಂಧ ಇಟ್ಟುಕೊಳ್ಳಬೇಕೆಂದು ದೇವರು ಅಪೇಕ್ಷಿಸುತ್ತಾನೆ. ಈ ವಿಷಯದಲ್ಲಿ ಆತನೇ ಉತ್ತಮ ಮಾದರಿ. ಪ್ರಪ್ರಥಮ ಮಾನವ ದಂಪತಿ ಆತನ ವಿರುದ್ಧ ಪಾಪಮಾಡಿ ಶಾಂತಿಯುತ ಸಂಬಂಧ ಕಡಿದುಕೊಂಡಾಗ ತನ್ನ ಮಾನವ ಸೃಷ್ಟಿಯೊಂದಿಗೆ ಪುನಃ ಸಂಬಂಧ ಬೆಸೆಯಲು ಆತನು ಕೂಡಲೇ ಹೆಜ್ಜೆ ತಕ್ಕೊಂಡನು. (2 ಕೊರಿಂಥ 5:19) ಮನಸ್ತಾಪ ಬಗೆಹರಿಸಿ ಇತರರೊಂದಿಗೆ ಒಳ್ಳೇ ಸಂಬಂಧ ಸ್ಥಾಪಿಸುವ ನಿಟ್ಟಿನಲ್ಲಿ ನೀವು ಈ ಮೂರು ಸಂಗತಿಗಳನ್ನು ಮಾಡಬಹುದು.
ಮನಸಾರೆ ಕ್ಷಮಿಸಿ
ಬೈಬಲ್ ಏನನ್ನುತ್ತದೆ? “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”—ಕೊಲೊಸ್ಸೆ 3:13.
ಸುಲಭವಲ್ಲ ಏಕೆ? ನಿಮ್ಮ ಮನನೋಯಿಸಿದ ವ್ಯಕ್ತಿಯ ಮೇಲೆ ದೂರುಹೊರಿಸಲಿಕ್ಕಿರುವ ಕಾರಣ ನ್ಯಾಯವಾದದ್ದೇ ಆಗಿರಬಹುದು. ಹಾಗಾಗಿ ಅವನ ಜತೆ ಸಂಬಂಧವನ್ನು ಸಂಪೂರ್ಣ ಕಡಿದುಹಾಕಿದ್ದು ಸರಿಯೆಂದು ನಿಮಗನಿಸೀತು. ‘ತಪ್ಪು ಅವನದ್ದು, ಅವನೇ ಮೊದಲು ಕ್ಷಮೆಯಾಚಿಸಬೇಕು’ ಎಂದೂ ನೀವು ತರ್ಕಿಸಬಹುದು. ಆದರೆ ಅವನಿಗೆ ತಾನು ತಪ್ಪು ಮಾಡಿದ್ದೇನೆಂಬ ಅರಿವೇ ಇಲ್ಲದಿದ್ದಲ್ಲಿ ಅಥವಾ ತಪ್ಪು ನಿಮ್ಮದೆಂದು ಅವನು ಎಣಿಸುತ್ತಿರುವಲ್ಲಿ ಮನಸ್ತಾಪ ಹಾಗೆ ಉಳಿಯುವುದು.
ನೀವೇನು ಮಾಡಬಹುದು? ಬೈಬಲಿನ ಸಲಹೆ ಪಾಲಿಸಿ. ಆ ವ್ಯಕ್ತಿಯನ್ನು ಮನಸಾರೆ ಕ್ಷಮಿಸಿ. ಸಮಸ್ಯೆ ಚಿಕ್ಕದಾಗಿದ್ದರೆ ಅಲ್ಲಿಗೇ ಬಿಟ್ಟುಬಿಡಿ. ನೆನಪಿಡಿ, ನಾವು ಮಾಡಿದ ಒಂದೊಂದು ತಪ್ಪನ್ನೂ ದೇವರು ಲೆಕ್ಕ ಇಡುತ್ತಿದ್ದಲ್ಲಿ ನಾವ್ಯಾರೂ ಆತನ ಮುಂದೆ ನಿಲ್ಲಲಿಕ್ಕೇ ಆಗುತ್ತಿರಲಿಲ್ಲ. (ಕೀರ್ತನೆ 130:3) “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ” ಎನ್ನುತ್ತದೆ ಬೈಬಲ್.—ಕೀರ್ತನೆ 103:8, 14.
ಬೈಬಲಿನ ಈ ನಾಣ್ಣುಡಿ ಕುರಿತೂ ಯೋಚಿಸಿ: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; ಪರರ ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” (ಜ್ಞಾನೋಕ್ತಿ 19:11) ನಮ್ಮಲ್ಲಿ ವಿವೇಕ ಅಥವಾ ಒಳನೋಟ ಇದ್ದರೆ ಒಬ್ಬ ವ್ಯಕ್ತಿ ಹೇಳಿದ್ದನ್ನು ಮಾಡಿದ್ದನ್ನು ಕೂಡಲೇ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಬದಲಿಗೆ ಅವನ ಮಾತು ಇಲ್ಲವೇ ವರ್ತನೆಯ ಹಿಂದಿರುವ ಕಾರಣವೇನೆಂದು ವಿವೇಚಿಸುವೆವು. ‘ಅವನಿಗೆ ಆಗ ಸುಸ್ತಾಗಿತ್ತಾ? ಅಸ್ವಸ್ಥನಾಗಿದ್ದನಾ? ಯಾವುದೊ ಒತ್ತಡದ ಕೆಳಗಿದ್ದನಾ?’ ಎಂದು ಯೋಚಿಸುವೆವು. ಹೀಗೆ ನಾವು ಇತರರ ನಿಜವಾದ ಹೇತು, ಭಾವನೆ, ಪರಿಸ್ಥಿತಿಗಳ ಬಗ್ಗೆ ವಿವೇಚಿಸಿದರೆ ಕೋಪ ತಗ್ಗುವುದು. ಅವರ ತಪ್ಪುಗಳನ್ನು ಅಲಕ್ಷಿಸಲು ನೆರವಾಗುವುದು.
ಸಮಸ್ಯೆ ಬಗ್ಗೆ ಅವರೊಟ್ಟಿಗೆ ಮಾತಾಡಿ
ಬೈಬಲ್ ಏನನ್ನುತ್ತದೆ? “ನಿನ್ನ ಸಹೋದರನು ಪಾಪಮಾಡಿದರೆ, ನೀನು ಮತ್ತು ಅವನು ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.”—ಮತ್ತಾಯ 18:15.
ಸುಲಭವಲ್ಲ ಏಕೆ? ಹೆದರಿಕೆ, ಕೋಪ, ಮುಜುಗರದಂಥ ನಕಾರಾತ್ಮಕ ಭಾವಗಳು ಅಡ್ಡಬರಬಹುದು. ಸಮಸ್ಯೆ ಬಗ್ಗೆ ಇತರರಿಗೆ ಹೇಳಿ ಅವರ ಬೆಂಬಲ ಗಿಟ್ಟಿಸಲೂ ಮನಸ್ಸಾಗಬಹುದು. ಆದರೆ ಇದು ‘ಬೆಂಕಿಗೆ ತುಪ್ಪ ಸುರಿವ’ ಹಾಗೆ ಸಮಸ್ಯೆಯನ್ನು ಹೆಚ್ಚಿಸುವುದೇ ವಿನಃ ಕಡಿಮೆಮಾಡದು.
ನೀವೇನು ಮಾಡಬಹುದು? ಸಮಸ್ಯೆ ಗಂಭೀರವಾಗಿದ್ದು ನಿಮಗೆ ಅದನ್ನು ಸುಮ್ಮನೆ ಅಲಕ್ಷಿಸಿಬಿಡಲು ಸಾಧ್ಯವಿಲ್ಲ ಎಂದನಿಸಿದರೆ, ಆ ವ್ಯಕ್ತಿ ಬಳಿ ಹೋಗಿ ಮಾತಾಡಿ. ಮುಂದಿನ ಅಂಶಗಳನ್ನು ನೆನಪಿಡಿ:
(1) ತಡಮಾಡಬೇಡಿ: ಅವರೊಟ್ಟಿಗೆ ಮಾತಾಡಿ ಇತ್ಯರ್ಥಮಾಡುವುದನ್ನು ಮುಂದೂಡಬೇಡಿ. ಮುಂದೂಡಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಯೇಸುವಿನ ಈ ಬುದ್ಧಿಮಾತನ್ನು ಪಾಲಿಸಲು ಪ್ರಯತ್ನಿಸಿ: “ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಮತ್ತಾಯ 5:23, 24.
ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು.”—(2) ಖಾಸಗಿಯಾಗಿ ಮಾತಾಡಿ: ಸಮಸ್ಯೆ ಬಗ್ಗೆ ಮೂರನೇ ವ್ಯಕ್ತಿಗೆ ಹೇಳಲು ಮನಸ್ಸಾದರೂ ಹಾಗೆ ಮಾಡಬೇಡಿ. “ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು; ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ.”—ಜ್ಞಾನೋಕ್ತಿ 25:9.
(3) ಸಮಾಧಾನದಿಂದ ಮಾತಾಡಿ: ಯಾರು ಸರಿ, ಯಾರು ತಪ್ಪು ಎಂದು ವಿಮರ್ಶಿಸಲಿಕ್ಕೆ ಹೋಗಬೇಡಿ. ನಿಮ್ಮ ಗುರಿ ಶಾಂತಿ ಸ್ಥಾಪಿಸುವುದೇ ಹೊರತು ವಾದ ಗೆಲ್ಲುವುದಲ್ಲ. ‘ನೀನು, ನಿನ್ನಿಂದ’ ಎಂಬ ಪದಗಳ ಬದಲು ‘ನಾನು, ನನಗೆ’ ಎಂಬ ಪದಗಳನ್ನು ಬಳಸಿ. ಅಲ್ಲದೆ ನಿಮ್ಮ ಧ್ವನಿ ಅವರನ್ನು ಆರೋಪಿಸುವಂಥ ರೀತಿಯದ್ದಾಗಿರಬಾರದು. ಉದಾಹರಣೆಗೆ, ‘ನೀನು ನನ್ನನ್ನು ತುಂಬ ನೋಯಿಸಿದ್ದೀ’ ಎನ್ನುವುದಕ್ಕಿಂತ ‘ನನಗೆ ತುಂಬ ನೋವಾಯಿತು’ ಎಂಬಂಥ ಮಾತುಗಳನ್ನು ಬಳಸುವುದು ಹೆಚ್ಚು ಉತ್ತಮ. ಅದನ್ನೇ ಬೈಬಲ್ ಈ ರೀತಿ ಹೇಳುತ್ತದೆ: “ಯಾವುದು ನಮ್ಮನ್ನು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ನಡೆಸುತ್ತದೋ ಅದನ್ನೇ ಮಾಡೋಣ.”—ರೋಮನ್ನರಿಗೆ 14:19, ಪವಿತ್ರ ಗ್ರಂಥ ಭಾಷಾಂತರ.
ತಾಳ್ಮೆ ತೋರಿಸಿ
ಬೈಬಲ್ ಏನನ್ನುತ್ತದೆ? “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ. . . . ‘ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು.’”—ರೋಮನ್ನರಿಗೆ 12:17, 20.
ಸುಲಭವಲ್ಲ ಏಕೆ? ಒಳ್ಳೇ ಸಂಬಂಧ ಸ್ಥಾಪಿಸುವ ನಿಮ್ಮ ಆರಂಭದ ಪ್ರಯತ್ನಗಳಿಗೆ ವ್ಯಕ್ತಿ ತಣ್ಣೀರೆರಚುವಲ್ಲಿ ಪ್ರಯತ್ನ ಕೈಬಿಡಲು ನಿಮಗೆ ಮನಸ್ಸಾದೀತು.
ನೀವೇನು ಮಾಡಬಹುದು? ತಾಳ್ಮೆ ತೋರಿಸಿ. ಜನರ ಸ್ವಭಾವ, ಪ್ರಬುದ್ಧತೆಯ ಮಟ್ಟ ಭಿನ್ನಭಿನ್ನ. ಕೆಲವರ ಕೋಪ ತಣ್ಣಗಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಇನ್ನೂ ಕೆಲವರು ದೈವಿಕ ಗುಣಗಳನ್ನು ತೋರಿಸಲು ಈಗಷ್ಟೇ ಕಲಿಯುತ್ತಿರಬಹುದು. ಹಾಗಾಗಿ ನಿಮ್ಮ ಮನನೋಯಿಸಿದವರಿಗೆ ದಯೆ, ಪ್ರೀತಿ ತೋರಿಸುತ್ತಾ ಇರಿ. “ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು” ಎನ್ನುತ್ತದೆ ಬೈಬಲ್.—ರೋಮನ್ನರಿಗೆ 12:21.
ಇತರರೊಂದಿಗಿನ ಮನಸ್ತಾಪ ಬಗೆಹರಿಸಿ ಒಳ್ಳೇ ಸಂಬಂಧ ಪುನಃ ಸ್ಥಾಪಿಸಲಿಕ್ಕಾಗಿ ದೀನತೆ, ಒಳನೋಟ, ತಾಳ್ಮೆ, ಪ್ರೀತಿಯಂಥ ಗುಣಗಳನ್ನು ತೋರಿಸಲು ನಾವು ಶ್ರಮಿಸಬೇಕು. ಈ ಪ್ರಯತ್ನ ಮಾಡಿದರೆ ಅದು ಸಾರ್ಥಕವೇ ಸರಿ! (g12-E 03)
ಈ ಬಗ್ಗೆ ಯೋಚಿಸಿದ್ದೀರಾ?
● ಮನಸಾರೆ ಕ್ಷಮಿಸಲು ನಮಗೆ ಯಾವುದು ಸಹಾಯ ಮಾಡುವುದು?—ಕೊಲೊಸ್ಸೆ 3:13.
● ಮನನೋಯಿಸಿದ ವ್ಯಕ್ತಿ ಬಳಿ ಹೋಗಿ ಸಮಸ್ಯೆ ಬಗ್ಗೆ ಮಾತಾಡಲು ನಿಮ್ಮನ್ನು ಯಾವುದು ಪ್ರೇರಿಸುವುದು?—ಮತ್ತಾಯ 5:23, 24.
● ಒಳ್ಳೇ ಸಂಬಂಧ ಸ್ಥಾಪಿಸುವ ನಿಮ್ಮ ಪ್ರಯತ್ನಗಳಿಗೆ ವ್ಯಕ್ತಿ ತಣ್ಣೀರೆರಚುವಲ್ಲಿ ನೀವೇನು ಮಾಡಬಹುದು?—ರೋಮನ್ನರಿಗೆ 12:17-21.
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; ಪರರ ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.”—ಜ್ಞಾನೋಕ್ತಿ 19:11.