ಅಪಘಾತದ ಅವಾಂತರ ತಪ್ಪಿಸುವುದು ಹೇಗೆ?
ಅಪಘಾತದ ಅವಾಂತರ ತಪ್ಪಿಸುವುದು ಹೇಗೆ?
ಕ್ರೀಚ್‌ಚ್‌ಚ್. . . ಢಂ. . . ಚಿಟಿಲ್ ಚಿಟಿಲ್. . . ಅಯ್ಯೋ!!! ಈ ಸದ್ದುಗಳು ಕಾರ್ ಅಪಘಾತದಲ್ಲಿ ಸಿಲುಕಿದವರ ಮನಸ್ಸಿನಲ್ಲಿ ಮಾಸದೆ ಉಳಿಯುತ್ತವೆ. ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 12 ಲಕ್ಷದಷ್ಟು ಜನರು ಜೀವ ಕಳೆದುಕೊಳ್ಳುತ್ತಿದ್ದರೆ, ಸುಮಾರು 5 ಕೋಟಿ ಜನರು ಗಾಯಗೊಳ್ಳುತ್ತಿದ್ದಾರೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ.
ಹಾಗಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಸ್ವಲ್ಪ ವಿವೇಚನೆ ಉಪಯೋಗಿಸಿದರೆ ಇಂಥ ಎಷ್ಟೋ ಅಪಘಾತಗಳನ್ನು ತಪ್ಪಿಸಬಹುದು. ಹೇಗೆಂದು ನೋಡೋಣ.
ವೇಗದ ಮಿತಿ, ಸೀಟ್ ಬೆಲ್ಟ್, ಮೊಬೈಲ್
ಕೆಲವು ರಸ್ತೆಗಳಲ್ಲಿ ವೇಗದ ಮಿತಿ ತುಂಬ ಕಡಿಮೆ ಇದೆ ಎಂದು ನಿಮಗನಿಸಬಹುದು. ಆದರೆ ಆ ಮಿತಿಯನ್ನು ಮೀರಿ ವಾಹನ ಚಲಾಯಿಸಿದರೆ ಎಷ್ಟು ಸಮಯ ಉಳಿಸಬಹುದೆಂದು ನೆನಸುತ್ತೀರಿ? ಇಲ್ಲೊಂದು ಉದಾಹರಣೆ ಗಮನಿಸಿ. 50 ಕಿ.ಮೀ. ದೂರ ಕ್ರಮಿಸಲು 80 ಕಿ.ಮೀ. ವೇಗದಲ್ಲಿ ಹೋಗುವ ಬದಲು 100 ಕಿ.ಮೀ. ವೇಗದಲ್ಲಿ ಹೋದರೆ ಉಳಿಸುವುದು ಬರೀ ಏಳೂವರೆ ನಿಮಿಷ. ಕೆಲ ನಿಮಿಷಗಳನ್ನು ಉಳಿಸಲಿಕ್ಕಾಗಿ ನಿಮ್ಮ ಜೀವವನ್ನೇ ಪಣಕ್ಕೊಡ್ಡುವುದು ಸರಿಯೇ?
ಸೀಟ್ ಬೆಲ್ಟ್‌ಗಳಿರುವುದು ನಮ್ಮ ಸುರಕ್ಷೆಗಾಗಿ. ಅಮೆರಿಕದ ಒಂದು ಸರಕಾರೀ ಏಜೆನ್ಸಿ ತಮ್ಮ ದೇಶದ ಬಗ್ಗೆ ಕೊಡುವ ವರದಿಗನುಸಾರ ಸೀಟ್ ಬೆಲ್ಟ್ ಧರಿಸಿದ್ದರಿಂದ 2005-2009ರ ಅವಧಿಯಲ್ಲಿ 72,000 ಜನರ ಜೀವ ಉಳಿಯಿತು. ಏರ್ ಬ್ಯಾಗ್ ಇದ್ದರೆ ಸೀಟ್ ಬೆಲ್ಟ್ ಹಾಕುವ ಅಗತ್ಯವಿಲ್ಲವೇ? ಹಾಗೇನಿಲ್ಲ. ಸೀಟ್ ಬೆಲ್ಟ್ ಹಾಕಿದರೆ ಮಾತ್ರ ಏರ್ ಬ್ಯಾಗ್‌ನಿಂದ ಹೆಚ್ಚಿನ ಸುರಕ್ಷೆ ಸಿಗುತ್ತದೆ. ಅದನ್ನು ಹಾಕದಿದ್ದರೆ ಏರ್ ಬ್ಯಾಗ್‌ನಿಂದ ಪ್ರಯೋಜನವಿಲ್ಲ, ಅಪಾಯವೂ ಆಗಬಹುದು. ಆದ್ದರಿಂದ ಖಂಡಿತ ಸೀಟ್ ಬೆಲ್ಟ್ ಧರಿಸಿ. ನಿಮ್ಮ ಪ್ರಯಾಣಿಕರೂ ಧರಿಸುವಂತೆ ಹೇಳಿ. ಮತ್ತೊಂದು ಎಚ್ಚರಿಕೆ: ವಾಹನ ಚಲಾಯಿಸುವಾಗ ಮೊಬೈಲಲ್ಲಿ ಮಾತಾಡುವುದಾಗಲಿ ಮೆಸೇಜ್ ಓದುವುದಾಗಲಿ/ಕಳುಹಿಸುವುದಾಗಲಿ ಬೇಡ.
ರಸ್ತೆಯ ಸ್ಥಿತಿಗತಿ ಮತ್ತು ವಾಹನದ ದುರಸ್ತಿ
ನೀರು ಬಿದ್ದಿರುವ ಅಥವಾ ಧೂಳು ಮರಳು ಜಲ್ಲಿ ತುಂಬಿದ ರಸ್ತೆಗಳಲ್ಲಿ ಚಲಿಸುವಾಗ ಟೈರ್‌ನ ಹಿಡಿತ ಕಡಿಮೆಯಿರುತ್ತದೆ. ಇಂಥ ಸನ್ನಿವೇಶದಲ್ಲಿ ವಾಹನವನ್ನು ನಿಧಾನವಾಗಿ ಚಲಾಯಿಸಿದರೆ ಬ್ರೇಕ್ ಹಾಕುವಾಗ ವಾಹನ ಜಾರುವುದಿಲ್ಲ. ಆಗಾಗ್ಗೆ ಟೈರ್‌ಗಳನ್ನು ಪರೀಕ್ಷಿಸಿ. ಅವು ಸವೆದುಹೋಗಿರುವಲ್ಲಿ ಬದಲಾಯಿಸಿ. ಆಗ ರಸ್ತೆಯ ಮೇಲೆ ಒಳ್ಳೇ ಹಿಡಿತ ಸಿಗುತ್ತದೆ.
ಟ್ರಾಫಿಕ್ ಜಂಕ್ಷನ್‌ಗಳು ತುಂಬ ಅಪಾಯಕಾರಿ. ಒಬ್ಬ ಪರಿಣತನ ಸಲಹೆ: ಟ್ರಾಫಿಕ್ ಸಿಗ್ನಲ್ ಹಸಿರು ಬಣ್ಣ ತೋರಿಸುವಾಗ ಸ್ವಲ್ಪ ತಾಳಿ. ಸಿಗ್ನಲ್ ಜಂಪ್ ಮಾಡಿ ಬರುತ್ತಿರುವ ವಾಹನ ನಿಮ್ಮ ಗಾಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಬಹುದು.
ನಿಮ್ಮ ಕಾರನ್ನು ಸುಸ್ಥಿತಿಯಲ್ಲಿಡುವುದು ಸಹ ಅಪಘಾತ ತಪ್ಪಿಸಲು ಆವಶ್ಯಕ. ಇಲ್ಲವಾದಲ್ಲಿ ನೀವು ವಾಹನ ಓಡಿಸುತ್ತಿರುವಾಗ ಬ್ರೇಕ್ ಫೇಲಾದರೆ ಏನು ಗತಿ. . . ಇಂಥ ಸಮಸ್ಯೆಗಳನ್ನು ತಪ್ಪಿಸಲಿಕ್ಕಾಗಿ ಕೆಲವು ಕಾರ್ ಮಾಲೀಕರು ಒಳ್ಳೇ ಮೆಕ್ಯಾನಿಕ್‌ನಿಂದ ಕಾಲಕಾಲಕ್ಕೆ ತಮ್ಮ ಗಾಡಿಯನ್ನು ಸರ್ವಿಸಿಂಗ್ ಮಾಡಿಸಿಕೊಳ್ಳುತ್ತಾರೆ. ಕೆಲಸ ತಿಳಿದಿರುವ ಬೇರೆ ಕೆಲವರು ತಮ್ಮ ಗಾಡಿಯ ಕೆಲವು ರಿಪೇರಿಗಳನ್ನು ತಾವೇ ಮಾಡುತ್ತಾರೆ. ಏನೇ ಇದ್ದರೂ ನಿಮ್ಮ ಕಾರನ್ನು ಕಾಲಕಾಲಕ್ಕೆ ಪರೀಕ್ಷಿಸಿ ಬೇಕಾದ ರಿಪೇರಿಗಳನ್ನು ಮಾಡಲು ಮರೆಯಬೇಡಿ.
ಕುಡಿದು ವಾಹನ ಚಲಾಯಿಸಬೇಡಿ
ಜೋಪಾನವಾಗಿ ಗಾಡಿ ಓಡಿಸುವ ಜವಾಬ್ದಾರಿಯುತ ಚಾಲಕರು ಸಹ ಮದ್ಯ ಸೇವಿಸಿ ಗಾಡಿ ಓಡಿಸಿದರೆ ಜೀವಕ್ಕೆ ಕಂಟಕವಾಗುತ್ತಾರೆ. 2008ರಲ್ಲೇ ಅಮೆರಿಕದಲ್ಲಿ 37,000ಕ್ಕಿಂತ ಹೆಚ್ಚು ಜನರು ವಾಹನ ಅಪಘಾತಗಳಲ್ಲಿ ತಮ್ಮ ಜೀವ ಕಳೆದುಕೊಂಡರು. ಇದರಲ್ಲಿ 12,000ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದು ಮದ್ಯದ ಪ್ರಭಾವದಲ್ಲಿದ್ದ ಚಾಲಕರಿಂದಾಗಿ! ಅತ್ಯಲ್ಪ ಪ್ರಮಾಣದ ಮದ್ಯ ಸೇವನೆಯೂ ನಿಮ್ಮ ವಿವೇಚನೆ ಮತ್ತು ವಾಹನ ನಿಯಂತ್ರಣದ ಮೇಲೆ ಪ್ರಭಾವ ಬೀರಬಲ್ಲದು. ಗಾಡಿ ಓಡಿಸಲಿಕ್ಕಿರುವುದಾದರೆ ಕುಡಿಯುವುದೇ ಬೇಡ ಎಂದು ಕೆಲವರು ತೀರ್ಮಾನಿಸುತ್ತಾರೆ.
ಸಂಚಾರ ನಿಯಮಗಳನ್ನು ಪಾಲಿಸಿ ಸೀಟ್ ಬೆಲ್ಟ್ ಧರಿಸಿ ಕಾರನ್ನು ಸುಸ್ಥಿತಿಯಲ್ಲಿಟ್ಟು ಮದ್ಯ ಸೇವನೆ ಮಾಡದೆ ಗಾಡಿ ಓಡಿಸಿದರೆ ನಿಮ್ಮ ಜೀವ ಮತ್ತು ಇತರರ ಜೀವ ಉಳಿಯುತ್ತದೆ. ಈ ಎಲ್ಲ ಸಲಹೆಗಳು ಅಪಘಾತಗಳನ್ನು ತಪ್ಪಿಸಲು ಸಹಾಯಕಾರಿ—ಅನ್ವಯಿಸಿದಾಗ ಮಾತ್ರ! (g11-E 07)
[ಪುಟ 11ರಲ್ಲಿರುವ ಚೌಕ/ಚಿತ್ರ]
ನಿದ್ದೆ ಓಡಿಸಿ ಗಾಡಿ ಓಡಿಸಿ
“ಕುಡಿದು ವಾಹನ ಚಲಾಯಿಸುವುದು ಮತ್ತು ನಿದ್ದೆಗಣ್ಣಲ್ಲಿ ವಾಹನ ಚಲಾಯಿಸುವುದರಲ್ಲಿ ವ್ಯತ್ಯಾಸವಿಲ್ಲ—ಎರಡೂ ಅಪಾಯಕಾರಿ” ಎನ್ನುತ್ತಾರೆ ಅಮೆರಿಕದ ನ್ಯಾಷನಲ್ ಸ್ಲೀಪ್ ಫೌಂಡೇಷನ್‌ನ ಒಬ್ಬ ಅಧಿಕಾರಿ. ಇಲ್ಲಿ ಕೊಡಲಾಗಿರುವ ಯಾವುದೇ ಲಕ್ಷಣ ಕಂಡುಬಂದರೆ ದಯವಿಟ್ಟು ಗಾಡಿ ಓಡಿಸಬೇಡಿ: *
● ರೆಪ್ಪೆ ಭಾರವಾಗಿದೆ, ಕಣ್ಣು ತೆರೆದಿಡಲು ಕಷ್ಟವಾಗುತ್ತಿದೆ
● ತೂಕಡಿಕೆ
● ಪದೇ ಪದೇ ಆಕಳಿಕೆ
● ದಾಟಿಬಂದ ಕೆಲವು ಕಿಲೊಮೀಟರುಗಳ ನೆನಪೇ ಇಲ್ಲ
● ಹೋಗಬೇಕಾಗಿದ್ದ ತಿರುವನ್ನು ಬಿಟ್ಟು ಮುಂದೆ ಹೋಗಿದ್ದೀರಿ, ಟ್ರಾಫಿಕ್ ಸೂಚನೆಗಳನ್ನು ನೋಡಿಲ್ಲ
● ನಿಮ್ಮ ಪಥದಿಂದ (ಲೇನ್‌ನಿಂದ) ಪಕ್ಕದ ಪಥಕ್ಕೆ ಹೋಗಿದ್ದೀರಿ, ಮುಂದೆ ಇರುವ ವಾಹನಕ್ಕೆ ಡಿಕ್ಕಿಹೊಡೆಯುವಷ್ಟು ಹತ್ತಿರದಲ್ಲಿ ಕಾರನ್ನು ಓಡಿಸುತ್ತಿದ್ದೀರಿ, ರಸ್ತೆ ಬಿಟ್ಟು ಕೆಳಗೆ ಹೋಗಿದ್ದೀರಿ
ಇಂಥ ಯಾವುದೇ ಲಕ್ಷಣ ಕಂಡುಬಂದರೆ ಬೇರೆ ಯಾರನ್ನಾದರೂ ಗಾಡಿ ಓಡಿಸುವಂತೆ ಹೇಳಿ ಅಥವಾ ಸುರಕ್ಷಿತ ಕಡೆಯಲ್ಲಿ ಗಾಡಿ ನಿಲ್ಲಿಸಿ ಸ್ವಲ್ಪ ಹೊತ್ತು ನಿದ್ದೆಮಾಡಿ. ತಡವಾದರೂ ಚಿಂತೆಯಿಲ್ಲ, ನಿಮ್ಮ ಮತ್ತು ಇತರರ ಸುರಕ್ಷೆ ಮುಖ್ಯ!
[ಪಾದಟಿಪ್ಪಣಿ]
^ ನ್ಯಾಷನಲ್ ಸ್ಲೀಪ್ ಫೌಂಡೇಷನ್‌ನ ಪಟ್ಟಿ ಆಧರಿತ