ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧರ ಸುರಕ್ಷೆಗೆ ಕಿವಿಮಾತು

ವೃದ್ಧರ ಸುರಕ್ಷೆಗೆ ಕಿವಿಮಾತು

ವೃದ್ಧರ ಸುರಕ್ಷೆಗೆ ಕಿವಿಮಾತು

ಅಂ ಗಳದಲ್ಲಿ ಓಡಾಡುತ್ತಿದ್ದ ಬಾಲಕಿಯೊಬ್ಬಳು ಮುಗ್ಗರಿಸಿ ಬೀಳುತ್ತಾಳೆ. ಕೆಲವೇ ಕ್ಷಣದಲ್ಲಿ ಎದ್ದು ನಿಂತ ಆ ಹುಡುಗಿಗೆ ಸ್ವಲ್ಪ ಮುಜುಗರದ ಹೊರತು ಬೇರೇನೂ ಹಾನಿಯಾಗುವುದಿಲ್ಲ. ಇನ್ನೊಂದೆಡೆ ವೃದ್ಧೆಯೊಬ್ಬರು ಮನೆಯೊಳಗೇ ಎಡವಿ ಬಿದ್ದು ಸೊಂಟದ ಮೂಳೆ ಮುರಿಯುತ್ತದೆ. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಮಾಡಿ ಚೇತರಿಸಿಕೊಳ್ಳಲು ಕೆಲವು ತಿಂಗಳು ಹಿಡಿಯುತ್ತದೆ. ಈಗ ಅವರಿಗೆ ಎಲ್ಲಿ ಬಿದ್ದುಬಿಡುವೆನೋ ಎಂಬ ಭಯ ಹೆಚ್ಚಾಗಿದೆ. ಹಾಗಾಗಿ ದೈಹಿಕ ಚಟುವಟಿಕೆಯೇ ಇಲ್ಲ, ದುರ್ಬಲರಾಗುತ್ತಿದ್ದಾರೆ.

ಪಾಶ್ಚಿಮಾತ್ಯ ದೇಶವೊಂದರಲ್ಲಿ 65 ವರ್ಷಕ್ಕೂ ಮೇಲ್ಪಟ್ಟ ವೃದ್ಧರಲ್ಲಿ 1/3ನೇ ಭಾಗಕ್ಕಿಂತ ಹೆಚ್ಚು ವೃದ್ಧರು ಪ್ರತಿ ವರ್ಷ ಆಯತಪ್ಪಿ ಬೀಳುತ್ತಿದ್ದಾರೆ. ಅಷ್ಟಲ್ಲದೆ ಈ ವಯೋಮಿತಿಯ ಜನರಲ್ಲಿ ಸಾವಿಗೆ ಮುಖ್ಯ ಕಾರಣ ಬೀಳುವಿಕೆಗಳೇ. ವೃದ್ಧರ ಬಗ್ಗೆ ಬೈಬಲ್‌ ಹೀಗನ್ನುತ್ತದೆ: “ಆ ದಿನಗಳಲ್ಲಿ ದಿನ್ನೆ ಕಂಡರೆ ಭಯ, ದಾರಿಯಲ್ಲಿ ಅಪಾಯ.”—ಪ್ರಸಂಗಿ 12:5.

ವೃದ್ಧಾಪ್ಯದಲ್ಲಿ ಹೆಚ್ಚಾಗಿ ದೈಹಿಕ ದುರ್ಬಲತೆಗಳು ಬಂದರೂ ನಿಮ್ಮ ಸುರಕ್ಷೆಯನ್ನೂ ಜೀವನದ ಗುಣಮಟ್ಟವನ್ನೂ ಹೆಚ್ಚಿಸಲು ಪ್ರಾಯೋಗಿಕ ಹೆಜ್ಜೆಗಳನ್ನು ನೀವು ತೆಗೆದುಕೊಳ್ಳಬಹುದು. ಒಂದು, ತಕ್ಕಮಟ್ಟಿಗಿನ ಆರೋಗ್ಯ ಮತ್ತು ದೈಹಿಕ ಬಲವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಎರಡು, ನಿಮ್ಮ ಮನೆಯನ್ನು ಸುರಕ್ಷಿತಗೊಳಿಸಿ.

ಆರೋಗ್ಯ ಮತ್ತು ದೈಹಿಕ ಬಲ ಕಾಪಾಡಿಕೊಳ್ಳಿ

ವಯಸ್ಸಾಗುತ್ತಾ ಹೋದಂತೆ ನಮ್ಮ ದೇಹದ ಅವಯವಗಳು ಹೊಂದಾಣಿಕೆಯಿಂದ ಕೆಲಸಮಾಡಲಿಕ್ಕಿಲ್ಲ. ಕಣ್ಣು ಮಂಜಾಗಬಹುದು, ದೈಹಿಕ ಸಮತೋಲನ ಕಡಿಮೆಯಾಗಬಹುದು. ಮಾಂಸಖಂಡಗಳು, ಮೂಳೆಗಳು ಬಲಹೀನಗೊಂಡು ನಾವು ನಿಶ್ಶಕ್ತರಾಗಬಹುದು. ಆದರೆ ನಿಯಮಿತವಾಗಿ ಮಾಡುವ ದೈಹಿಕ ಚಟುವಟಿಕೆ ಮತ್ತು ಉತ್ತಮ ಆಹಾರಾಭ್ಯಾಸಗಳ ಮೂಲಕ ಈ ಎಲ್ಲ ಸಮಸ್ಯೆಗಳನ್ನು ಮುಂದೂಡಬಹುದು. “ದೈಹಿಕ ಸಮತೋಲನ ಹೆಚ್ಚಿಸಲು, ನೇರವಾಗಿ ನಡೆಯಲು, ಬಲಹೆಚ್ಚಿಸಲು, ಸಲೀಸಾಗಿ ಕೆಲಸ ಮಾಡಲು ವ್ಯಾಯಾಮ ಸಹಾಯಕಾರಿ” ಎನ್ನುತ್ತಾರೆ ಫಿಸಿಯೋ ತೆರಪಿಸ್ಟ್‌ ನೀಟಾ.

ಆರೋಗ್ಯ ಮತ್ತು ಮಾನವ ಸೇವೆಯ ಯು.ಎಸ್‌. ಇಲಾಖೆಯೊಂದರ ಪ್ರಕಾಶನವೊಂದು ಹೇಳುವುದು: “ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯಗಳು ಹೇಗೆಯೇ ಇರಲಿ ವೃದ್ಧರು ದೈಹಿಕವಾಗಿ ಚಟುವಟಿಕೆಯಿಂದ ಇರುವ ಮೂಲಕ ಬಹಳ ಪ್ರಯೋಜನ ಪಡೆಯಬಲ್ಲರು. ನಿಮಗೆ ನಿಲ್ಲಲು ಇಲ್ಲವೆ ನಡೆಯಲು ಕಷ್ಟವಾದರು ಕೂಡ ವ್ಯಾಯಾಮ ಮಾಡಿ ಪ್ರಯೋಜನ ಪಡೆಯಬಲ್ಲಿರಿ. ನಿಜವೇನೆಂದರೆ ನೀವು ಯಾವ ಚಟುವಟಿಕೆಯನ್ನೂ ಮಾಡದಿದ್ದರೆ ನಿಮಗೆ ನಷ್ಟವೇ ಹೆಚ್ಚು.” ಹೃದ್ರೋಗ, ಸಂಧಿ ನೋವು, ಅಸ್ಥಿರಂಧ್ರತೆ, ಖಿನ್ನತೆ ಇತ್ಯಾದಿಗಳನ್ನು ನಿಭಾಯಿಸಲೂ ದೈಹಿಕ ಚಟುವಟಿಕೆ ಸಹಾಯಕಾರಿ. ಅಲ್ಲದೆ ನಿಮ್ಮ ರಕ್ತಪರಿಚಲನೆ, ಜೀರ್ಣಕ್ರಿಯೆ, ನಿದ್ದೆಯನ್ನು ಮಾತ್ರವಲ್ಲದೆ ಆತ್ಮವಿಶ್ವಾಸ, ಚುರುಕುತನವನ್ನೂ ಅದು ಹೆಚ್ಚಿಸಬಲ್ಲದು.

ವ್ಯಾಯಾಮ ಮಾಡಿ ನಿಮಗೆ ಅಭ್ಯಾಸವಿಲ್ಲದಿದ್ದರೆ ಮೊದಲು ವೈದ್ಯರ ಸಲಹೆ ಕೇಳುವುದು ಉತ್ತಮ. ವ್ಯಾಯಾಮ ಮಾಡುವಾಗ ತುಂಬ ಆಯಾಸವಾಗುವಲ್ಲಿ ಅಥವಾ ಎದೆನೋವು ಕಾಣಿಸಿಕೊಂಡಲ್ಲಿ ಸಹ ವೈದ್ಯರನ್ನು ಸಂಪರ್ಕಿಸಿ. ಇಂಥ ಸಮಯದಲ್ಲಿ ನೀವು ತುರ್ತು ಟೆಲಿಫೋನ್‌ ನಂಬರಿಗೆ ಕರೆಮಾಡುವುದು ಒಳ್ಳೇದು. ಇವು ಮುಂದೆ ಸಂಭವಿಸಬಹುದಾದ ಅಪಾಯಗಳ ಲಕ್ಷಣಗಳಾದ್ದರಿಂದ ಅಲಕ್ಷ್ಯಮಾಡಬೇಡಿ! ವರ್ಷಕ್ಕೊಮ್ಮೆ ನೇತ್ರ ವೈದ್ಯರಿಂದ ನಿಮ್ಮ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ.

ಆಹಾರ ಪಥ್ಯದ ವಿಷಯದಲ್ಲಾದರೋ ತಯಾರಿಸಲು ಸುಲಭಸಾಧ್ಯವಾದರೂ ಜೀವಸತ್ತ್ವ, ಖನಿಜಾಂಶಗಳ ಕೊರತೆಯಿರುವ ಊಟಗಳನ್ನು ಸೇವಿಸಬೇಡಿ. ವೃದ್ಧರಿಗೆ ವಿಶೇಷವಾಗಿ ಜೀವಸತ್ತ್ವ ಡಿ ಮತ್ತು ಕ್ಯಾಲ್ಸಿಯಂ ಹೆಚ್ಚಿರುವ ಆಹಾರದ ಅಗತ್ಯವಿದೆ. ಇವು ಮೂಳೆಯ ಸಾಂದ್ರತೆಯನ್ನು ಕಾಪಾಡಲು ಸಹಾಯಮಾಡುವುದು ಅಥವಾ ಕಡಿಮೆಪಕ್ಷ ಮೂಳೆಯ ಸಾಂದ್ರತೆ ನಷ್ಟವಾಗುವುದನ್ನು ನಿಧಾನಿಸುತ್ತದೆ. ಆದ್ದರಿಂದ ಸಂಸ್ಕರಿಸಿರದ ಆಹಾರಧಾನ್ಯಗಳನ್ನು, ಕಡಿಮೆ ಕೊಬ್ಬಿನಾಂಶವಿರುವ ಹಾಲಿನ ಉತ್ಪನ್ನಗಳನ್ನು ಮತ್ತು ತಾಜಾ ಹಣ್ಣು ತರಕಾರಿಗಳನ್ನು ಸೇವಿಸಿ. ನಿಮ್ಮ ಆಹಾರ ಪಥ್ಯದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಾಗಿರುವಲ್ಲಿ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಅವರು ನಿಮ್ಮ ಆರೋಗ್ಯವನ್ನು ಮನಸ್ಸಿನಲ್ಲಿಟ್ಟು ಯಾವ ಆಹಾರ ಸೇವಿಸಬೇಕು ಯಾವುದನ್ನು ಸೇವಿಸಬಾರದೆಂದು ನಿಮಗೆ ಉಪಯುಕ್ತಕರ ಸಲಹೆಗಳನ್ನು ಕೊಡುವರು.

ಅಷ್ಟೇ ಅಲ್ಲದೆ ಹೆಚ್ಚು ನೀರು ಕುಡಿಯಿರಿ. ಇಳಿವಯಸ್ಸಿನವರಲ್ಲಿ ಅದರಲ್ಲೂ ಒಂಟಿಯಾಗಿ ವಾಸಿಸುವ ಇಲ್ಲವೆ ವೃದ್ಧರಿಗಾಗಿರುವ ನರ್ಸಿಂಗ್‌ ಹೋಮ್‌ಗಳಲ್ಲಿರುವವರಲ್ಲಿ ದೇಹದ ಜಲಾಂಶ ನಷ್ಟವಾಗುವುದು ಸಾಮಾನ್ಯ. ಇದರಿಂದಾಗಿ ಆಯತಪ್ಪಿ ಬೀಳುವ, ಗಲಿಬಿಲಿ, ಮಲಬದ್ಧತೆ, ಚರ್ಮ ಜೋತು ಬೀಳುವ, ಸೋಂಕು ತಗಲುವ ಸಾಧ್ಯತೆ ಇದೆ. ಸಾವು ಕೂಡ ಸಂಭವಿಸಬಹುದು.

ಮನೆಯನ್ನು ಸುರಕ್ಷಿತಗೊಳಿಸಿ

ವೃದ್ಧರು ಆಯತಪ್ಪಿ ಬೀಳುತ್ತಿರುವುದು ಹೆಚ್ಚಾಗಿ ಮನೆಯಲ್ಲೇ. ಆದರೂ ಪ್ರಾಯೋಗಿಕವಾದ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಇದನ್ನು ಕಡಿಮೆಮಾಡಬಹುದು. ಈ ಕೆಳಗಿನವುಗಳನ್ನು ಓದುವಾಗ ನಿಮ್ಮ ಮನೆಯಲ್ಲಿ ಏನಾದರೂ ಬದಲಾವಣೆ ಮಾಡಬೇಕೋ ಎಂದು ನೋಡಿ.

ಬಚ್ಚಲು ಮನೆ:

● ಬಚ್ಚಲಿನ ನೆಲ ಒದ್ದೆಯಾದಾಗ ಜಾರುವಂಥದ್ದಾಗಿರಬಾರದು.

● ಸ್ನಾನಕ್ಕೆ ಬೇಕಾದದ್ದೆಲ್ಲವನ್ನೂ ಕೈಗೆಟುಕುವಂತೆ ಇಟ್ಟುಕೊಳ್ಳಿ. ಕುರ್ಚಿ ಮೇಲೆ ಕುಳಿತು ಸ್ನಾನ ಮಾಡಿದರೆ ಒಳ್ಳೇದು. ಕೈಯಲ್ಲಿ ಹಿಡಿಯುವಂಥ ಶವರ್‌ ಬಳಸುವುದು ಸಹಾಯಕಾರಿ.

● ಸ್ನಾನಗೃಹದಲ್ಲಿ ಅಥವಾ ಶೌಚಾಲಯದಲ್ಲಿ ಹಿಡಿಯಲು ಕಂಬಿಗಳನ್ನು ಜೋಡಿಸಿದರೆ ಒಳ್ಳೇದು. ಈ ಆಧಾರ ಕಂಬಿಗಳು ಗಟ್ಟಿಮುಟ್ಟಾಗಿರಬೇಕು ಮತ್ತು ಭದ್ರವಾಗಿ ಕೂರಿಸಿರಬೇಕು. ಇಂಗ್ಲಿಷ್‌ ಟಾಯ್ಲೆಟ್‌ಗಳಿದ್ದರೆ ಕೂತುಕೊಳ್ಳಲೂ ಏಳಲೂ ಕಷ್ಟವಾಗದಿರುವಷ್ಟು ಎತ್ತರದಲ್ಲಿರಬೇಕು.

● ರಾತ್ರಿ ಚಿಕ್ಕ ಲೈಟ್‌ ಉರಿಯುತ್ತಿರಲಿ ಅಥವಾ ಟಾರ್ಚನ್ನು ಬಳಸಿ.

ಮೆಟ್ಟಿಲುಗಳು:

● ಮೆಟ್ಟಿಲುಗಳಲ್ಲಿ ಅಡಚಣೆಯಾಗುವ ಯಾವುದೇ ಸಾಮಾನುಗಳಿರಬಾರದು. ಅವುಗಳು ಸುಸ್ಥಿತಿಯಲ್ಲಿರಲಿ ಮತ್ತು ಸಾಕಷ್ಟು ಬೆಳಕಿರಲಿ.

● ಮೆಟ್ಟಿಲುಗಳು ಜಾರದಂಥವುಗಳಾಗಿರಲಿ, ಇಕ್ಕೆಲಗಳಲ್ಲಿ ಹಿಡಿಯಲು ಕಂಬಿಗಳಿರಲಿ, ಮೆಟ್ಟಿಲು ಸಾಲುಗಳು ಆರಂಭವಾಗುವ ಮತ್ತು ಕೊನೆಗೊಳ್ಳುವ ಸ್ಥಳಗಳಲ್ಲಿ ಲೈಟ್‌ ಸ್ವಿಚ್‌ಗಳು ಇರಬೇಕು.

● ಮೆಟ್ಟಿಲುಗಳಲ್ಲಿ ಹತ್ತಿ ಇಳಿಯುವುದು ವೃದ್ಧರ ಕಾಲುಗಳ ಬಲ ಹೆಚ್ಚಿಸುತ್ತದೆ. ಆದರೂ ದೈಹಿಕ ಸಮತೋಲನದ ಸಮಸ್ಯೆಯಿರುವಲ್ಲಿ ಒಬ್ಬರೇ ಹತ್ತಿಇಳಿಯಬೇಡಿ.

ಮಲಗುವ ಕೋಣೆ:

● ಮಂಚ ಮತ್ತು ಇನ್ನಿತರ ಪೀಠೋಪಕರಣಗಳ ಸುತ್ತ ಸುರಕ್ಷಿತವಾಗಿ ನಡೆದಾಡಲು ಸಾಕಷ್ಟು ಜಾಗವಿರಲಿ.

● ಉಡುಪು ಧರಿಸುವಾಗ ಇಲ್ಲವೆ ತಲೆಬಾಚುವಾಗ ಕುಳಿತುಕೊಳ್ಳಲು ಒಂದು ಕುರ್ಚಿ ಇಟ್ಟುಕೊಳ್ಳಿ.

● ಮಲಗಿರುವಾಗ ಲ್ಯಾಂಪ್‌ ಅಥವಾ ಟಾರ್ಚನ್ನು ಕೈಗೆಟುಕುವಂತೆ ಇಟ್ಟುಕೊಳ್ಳಿ.

ಅಡುಗೆ ಮನೆ:

● ಅಡುಗೆ ಸಾಮಾನುಗಳನ್ನೂ ಇತರ ವಸ್ತುಗಳನ್ನೂ ಇಡಲು ಸುಲಭವಾಗುವಂತೆ ಅಲ್ಲಿರುವ ಮೇಜನ್ನು ಖಾಲಿಯಾಗಿಡಿ.

● ಅಡುಗೆ ಮನೆಯ ನೆಲ ಜಾರದಂತಿರಲಿ. ಅದು ಕಣ್ಣು ಕೋರೈಸುವಷ್ಟು ಹೊಳೆಯಬಾರದು.

● ಕಪಾಟುಗಳಲ್ಲಿ ವಸ್ತುಗಳನ್ನು ತುಂಬ ಮೇಲೆಯೂ ತುಂಬ ಕೆಳಗೆಯೂ ಇಡಬೇಡಿ. ಅವು ಸುಲಭವಾಗಿ ಕೈಗೆಟುಕುವಂತಿರಲಿ. ಏಣಿಗಳನ್ನು ಮತ್ತು ಮೆಟ್ಟಿಲಿರುವ ಸ್ಟೂಲುಗಳನ್ನು ಬಳಸಬೇಡಿ. ಕುರ್ಚಿಯ ಮೇಲಂತೂ ಹತ್ತಲೇಬೇಡಿ!

ಇತರೆ:

● ರಾತ್ರಿ ಬಚ್ಚಲು ಮನೆಗೆ ಇಲ್ಲವೆ ಬೇರೆ ಕೋಣೆಗೆ ಹೋಗುವಾಗ ದಾರಿಕಾಣಲು ಲೈಟ್‌ ಇರಲಿ.

● ರಾತ್ರಿ ನಿದ್ದೆಗಣ್ಣಿನಲ್ಲಿರುವಾಗ ಕೋಲನ್ನು ಇಲ್ಲವೆ ವಾಕರ್‌ ಅನ್ನು ಬಳಸಿ ನಡೆಯಿರಿ.

● ಕೈಗಳಿರುವ ಕುರ್ಚಿ ಬಳಸಿ. ಅದಕ್ಕೆ ಚಕ್ರಗಳಿರಬಾರದು. ಕುಳಿತುಕೊಳ್ಳಲು, ಏಳಲು ಸುಲಭವಾಗುವಷ್ಟು ಎತ್ತರವಿರಬೇಕು.

● ಸವೆದಿರುವ, ಅಂಚಿನಲ್ಲಿ ದಾರ ಬಿಟ್ಟಿರುವ ಕಾರ್‌ಪೆಟ್‌, ಏರುತಗ್ಗಿರುವ ಲಿನೋಲಿಯಂ, ಒಡೆದ ಟೈಲ್ಸ್‌ ಅನ್ನು ರಿಪೇರಿ ಮಾಡಿಸಿ, ಬದಲಾಯಿಸಿ ಇಲ್ಲವೆ ತೆಗೆದುಬಿಡಿ. ಎಲೆಕ್ಟ್ರಿಕಲ್‌ ವಯರುಗಳನ್ನು ಗೋಡೆಗೆ ಜೋಡಿಸಬೇಕು, ದಾರಿಗೆ ಅಡ್ಡವಾಗಿ ಹಾಸಬಾರದು. ಇಲ್ಲವಾದರೆ ಎಡವಿಬಿದ್ದೀರಿ.

● ಕಾರ್‌ಪೆಟ್‌ ಹಾಸಿರುವ ಕೋಣೆಗೆ ಚಿಕ್ಕಚಿಕ್ಕ ನೆಲಹಾಸುಗಳನ್ನು ಹಾಕಬೇಡಿ. ಅವುಗಳಿಂದ ಮುಗ್ಗರಿಸಿ ಬೀಳುವ ಅಪಾಯ ಹೆಚ್ಚು. ಅವುಗಳನ್ನು ಟೈಲ್ಸ್‌ ಅಥವಾ ಮರದಂಥ ನುಣುಪು ನೆಲದ ಮೇಲೆ ಹಾಕಿರುವುದಾದರೆ ಅವು ಜಾರಿಹೋಗದಿರಲಿಕ್ಕಾಗಿ ಬಿಗಿಯಾಗಿ ಜೋಡಿಸಿ.

● ಸಡಿಲವಾದ, ಸವೆದಿರುವ, ಹಿಂದೆ ಬೆಲ್ಟ್‌ ಇಲ್ಲದ, ಜಾರುವ ಅಡಿಯಿರುವ ಚಪ್ಪಲನ್ನು ಧರಿಸಬೇಡಿ. ಹೈ ಹೀಲ್ಡ್‌ ಚಪ್ಪಲಿ ಅಥವಾ ಶೂಗಳನ್ನೂ ಧರಿಸಬೇಡಿ.

● ಕೆಲವು ಔಷಧಗಳು ತಲೆಸುತ್ತು ಇಲ್ಲವೆ ನಿಶ್ಶಕ್ತಿ ಉಂಟುಮಾಡುತ್ತವೆ. ನಿಮಗೆ ಹಾಗಾಗುತ್ತಿರುವಲ್ಲಿ ವೈದ್ಯರಿಗೆ ತಿಳಿಸಲು ಮರೆಯಬೇಡಿ. ಅವರು ಮದ್ದಿನ ಪ್ರಮಾಣವನ್ನು ಕಡಿಮೆ ಮಾಡಬಹುದು, ಇಲ್ಲವೆ ಔಷಧವನ್ನೇ ಬದಲಾಯಿಸಬಹುದು.

ಯಾವುದಾದರೂ ಕೆಲಸವನ್ನು ನೀವಾಗಿಯೇ ಮಾಡುವುದು ಸುರಕ್ಷಿತವಲ್ಲ ಎಂದನಿಸುವಲ್ಲಿ ನಿಮ್ಮ ಮನೆಮಂದಿಯ, ಸ್ನೇಹಿತರ, ಇಲ್ಲವೆ ಬಿಲ್ಡಿಂಗ್‌ ಉಸ್ತುವಾರಿ ವಹಿಸುವವರ ಸಹಾಯಕೋರಿ. ಕೆಲಸ ಮುಂದೂಡಬೇಡಿ.

ಬೇರೆಯವರೇನು ಮಾಡಬಹುದು?

ನಿಮಗೆ ಇಳಿವಯಸ್ಸಿನ ತಂದೆತಾಯಿ, ಅಜ್ಜಅಜ್ಜಿ ಅಥವಾ ಮಿತ್ರರಿದ್ದರೆ ಅವರು ಬಿದ್ದು ಹಾನಿಯಾಗದಂತೆ ನೋಡಿಕೊಳ್ಳಲು ನೀವೇನು ಮಾಡಬಲ್ಲಿರಿ? ಒಂದು, ಮೇಲೆ ತಿಳಿಸಲಾಗಿರುವ ಸಲಹೆಸೂಚನೆಗಳನ್ನು ಅವರೊಂದಿಗೆ ಜಾಣ್ಮೆಯಿಂದ ಚರ್ಚಿಸಿ ಸಮಸ್ಯೆಗಳನ್ನು ಸರಿಪಡಿಸಲು ಏರ್ಪಾಡು ಮಾಡಿ. ಅವರ ಅಗತ್ಯಗಳಿಗೆ ತಕ್ಕಂತೆ ಪ್ರತಿವಾರ ಒಂದೆರಡು ಸಲ ಪೌಷ್ಟಿಕ ಊಟ ತಯಾರಿಸಿ ಕೊಡಬಹುದು. ವೃದ್ಧರಿಗೆ ನಿಯಮಿತ ವ್ಯಾಯಾಮವೂ ಅಗತ್ಯ. ಆದ್ದರಿಂದ ಅವರನ್ನು ನಿಮ್ಮೊಂದಿಗೆ ವಾಕ್‌ಗೆ ಕರೆದುಕೊಂಡು ಹೋಗಬಹುದೇ? ಬೇರಾವುದೊ ಕೆಲಸಕ್ಕೆಂದು ನೀವು ನಡಕೊಂಡು ಹೋಗಬೇಕಾಗಿರುವಾಗ ಅವರನ್ನು ಜೊತೆಗೆ ಕರಕೊಂಡು ಹೋಗಬಹುದು. ಅನೇಕ ವೃದ್ಧರು ಒಬ್ಬ ಭರವಸಾರ್ಹ ಸಂಗಡಿಗರು ತಮ್ಮೊಂದಿಗಿರುವಲ್ಲಿ ಮನೆಯಿಂದ ಹೊರಗೆ ಹೋಗಲು ಸಂತೋಷಿಸುವರು. ಕೆಲವು ದೇಶಗಳಲ್ಲಿ ಸರ್ಕಾರ ಹೋಮ್‌ ನರ್ಸಿಂಗ್‌, ಫಿಸಿಯೋ ಇಲ್ಲವೆ ಔದ್ಯೋಗಿಕ ತೆರಪಿ (ಮಾನಸಿಕ ಅಥವಾ ದೈಹಿಕ ಕೆಲಸ ವಿಧಿಸಿ ಮಾಡುವ ಚಿಕಿತ್ಸೆ) ಮತ್ತು ಮನೆಯ ಸುರಕ್ಷತೆಯನ್ನು ಒದಗಿಸಿ ಸಹಾಯಮಾಡುತ್ತದೆ. ಸರ್ಕಾರದ ಇಂಥ ಯೋಜನೆಗಳ ಬಗ್ಗೆ ವೈದ್ಯರ ಬಳಿ ಕೇಳಿ.

“ಮಹಾವೃದ್ಧ” ಎಂದು ಕರೆಯಲಾಗಿರುವ ನಮ್ಮ ನಿರ್ಮಾಣಿಕನು ನಾವು ವೃದ್ಧರಿಗೆ ಅದರಲ್ಲೂ ವೃದ್ಧ ಹೆತ್ತವರಿಗೆ ಗೌರವ ತೋರಿಸಬೇಕೆಂದು ಅಪೇಕ್ಷಿಸುತ್ತಾನೆ. (ದಾನಿಯೇಲ 7:9) “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು” ಎಂದು ಆಜ್ಞಾಪಿಸುತ್ತಾನಾತ. (ವಿಮೋಚನಕಾಂಡ 20:12) ಅಷ್ಟೇ ಅಲ್ಲದೆ ಆತನು ನಿರ್ದೇಶಿಸಿದ್ದು: “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.” (ಯಾಜಕಕಾಂಡ 19:32) ಹೌದು, ವೃದ್ಧರಿಗೆ ಗೌರವ ತೋರಿಸುವ ಮೂಲಕ ನಮಗೆ ನಿಜವಾಗಿ ದೇವಭಯವಿದೆಯೆಂದು ತೋರಿಸುತ್ತೇವೆ! ಹಾಗೆಯೇ ಕೊಡಲಾಗುವ ಸಹಾಯಕ್ಕೆ ವೃದ್ಧರು ಯಥಾರ್ಥ ಕೃತಜ್ಞತೆ ತೋರಿಸುವಾಗ ಅವರಿಗೆ ಸಹಜವಾಗಿಯೇ ಇತರರಿಂದ ಪ್ರೀತಿಯ, ಗೌರವಭರಿತ ಪರಿಗಣನೆ ಸಿಗುವುದು. ಅಂಥ ವೃದ್ಧರಿಗೆ ಸಹಾಯ ನೀಡುವುದು ಬರೇ ಕರ್ತವ್ಯವಲ್ಲ, ಆನಂದವಾಗಿರುತ್ತದೆ! (g11-E 02)

[ಪುಟ 25ರಲ್ಲಿರುವ ಚೌಕ/ಚಿತ್ರಗಳು]

ತುರ್ತು ಪರಿಸ್ಥಿತಿಯಲ್ಲಿ ಎಲೆಕ್ಟ್ರಾನಿಕ್‌ ನೆರವು

ಕೆಲವು ದೇಶಗಳಲ್ಲಿ ಹಿರಿಯ ನಾಗರೀಕರಿಗೆಂದೇ ಚಿಕ್ಕದೊಂದು ಎಲೆಕ್ಟ್ರಾನಿಕ್‌ ಸಾಧನ ಲಭ್ಯವಿದೆ. ತುರ್ತು ಪರಿಸ್ಥಿತಿಯಲ್ಲಿ ಅಂದರೆ ಆಯತಪ್ಪಿ ಬಿದ್ದು ಗಾಯಗೊಂಡಾಗ ಅಥವಾ ಏಳಲು ಆಗದಾಗ ಆ ಸಾಧನದ ಬಟನ್‌ ಒತ್ತಿದಲ್ಲಿ ಸಹಾಯಕ್ಕೆ ಯಾರಾದರೂ ಬರುತ್ತಾರೆ. ಇದನ್ನು ಕತ್ತಿಗೆ ತೂಗಹಾಕಬಹುದು ಅಥವಾ ಕೈಯ ಮಣಿಗಂಟಿನಲ್ಲಿ ಧರಿಸಬಹುದು. ನೀವಿರುವ ಸ್ಥಳದಲ್ಲಿ ಈ ಸೇವೆ ಲಭ್ಯವಿರುವಲ್ಲಿ ವಿಶೇಷವಾಗಿ ನೀವು ಒಂಟಿಯಾಗಿ ಜೀವಿಸುತ್ತಿರುವಲ್ಲಿ ಇದನ್ನು ಉಪಯೋಗಿಸುವುದು ಒಳ್ಳೇದು.