ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಸಮರ್ಥನಾಗಿದ್ದೇನೋ?

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಸಮರ್ಥನಾಗಿದ್ದೇನೋ?

ಯುವಜನರ ಪ್ರಶ್ನೆ

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಸಮರ್ಥನಾಗಿದ್ದೇನೋ?

“ನನಗೀಗ ಹತ್ತಿರ ಹತ್ತಿರ 20 ವರ್ಷವಾಗುತ್ತಿದ್ದರೂ ನನಗೆ ಬೇಕಾದದ್ದನ್ನು ಮಾಡುವಂತಿಲ್ಲ. ಇದನ್ನು ಹೇಳಲಿಕ್ಕೇ ತುಂಬ ಬೇಜಾರಾಗುತ್ತಿದೆ. ಹೆತ್ತವರು ನನ್ನ ಇಷ್ಟಗಳನ್ನು ಲೆಕ್ಕಕ್ಕೇ ತಕ್ಕೊಳ್ಳುವುದಿಲ್ಲ. ‘ನಿನಗಿಂತ ನಮಗೆ ಚೆನ್ನಾಗಿ ಗೊತ್ತು’ ಅನ್ನೋ ಮಾತನ್ನು ಕೇಳಿ ಕೇಳಿ ತಲೆಚಿಟ್ಟು ಹಿಡಿದಿದೆ. ಅದಕ್ಕೆ ಮನೆಬಿಟ್ಟು ಹೋಗಬೇಕೆಂದಿದ್ದೇನೆ.”—ಫಿಯೋನಾ. *

ಸ್ವತಂತ್ರವಾಗಿರಬೇಕೆಂಬ ಬಯಕೆಯು ನೀವು ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಸಮರ್ಥರಾಗುವ ಎಷ್ಟೋ ಮುಂಚೆಯೇ ಚಿಗುರಿರಬಹುದು. ಅದು ಸಹಜವೇ. ದೇವರ ಮೂಲ ಉದ್ದೇಶಕ್ಕನುಸಾರವೂ ಎಳೆಯರು ಬೆಳೆದು ದೊಡ್ಡವರಾಗಿ ತಮ್ಮ ತಂದೆತಾಯಿಯನ್ನು ಬಿಟ್ಟು ತಮ್ಮದೇ ಆದ ಕುಟುಂಬ ಕಟ್ಟಬೇಕು ಎಂದಾಗಿದೆ. (ಆದಿಕಾಂಡ 2:23, 24; ಮಾರ್ಕ 10:7, 8) ಆದರೆ ನಿಮಗೆ ಹೆಚ್ಚಿನ ಸ್ವಾತಂತ್ರ್ಯಬೇಕೆಂಬ ಬಯಕೆಯಿದೆ ಎಂದಮಾತ್ರಕ್ಕೆ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಇದೇ ಸರಿಯಾದ ಸಮಯವೆಂದರ್ಥವೋ? ಇರಲೂಬಹುದು. ಹಾಗಿದ್ದರೂ ಅದಕ್ಕಾಗಿ ನೀವು ನಿಜವಾಗಿಯೂ ಸಮರ್ಥರಾಗಿದ್ದೀರೋ ಎಂದು ತಿಳಿದುಕೊಳ್ಳಬೇಕು. ಹೇಗೆ? ಮೂರು ಮುಖ್ಯ ಪ್ರಶ್ನೆಗಳಿಗೆ ನೀವು ಉತ್ತರಿಸುವ ಮೂಲಕ. ಮೊದಲನೇ ಪ್ರಶ್ನೆ ಇಂತಿದೆ.

ನನ್ನ ನಿರ್ಧಾರದ ಹಿಂದಿನ ಕಾರಣಗಳೇನು?

ಆ ಕಾರಣಗಳನ್ನು ಗುರುತಿಸಲು ಮುಂದಿನ ಪಟ್ಟಿ ನಿಮಗೆ ಸಹಾಯಮಾಡುತ್ತದೆ. ನೀವು ಪ್ರತ್ಯೇಕವಾಗಿ ವಾಸಿಸಲು ಬಯಸುವ ಕಾರಣಗಳನ್ನು 1ನೇ ಕಾರಣ, 2ನೇ ಕಾರಣ, 3ನೇ ಕಾರಣ ಎಂದು ಗುರುತಿಸುತ್ತಾ ಹೋಗಿ.

________ ಮನೆಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು

________ ಹೆಚ್ಚು ಸ್ವಚ್ಛಂದವಾಗಿರಲು

________ ಸ್ನೇಹಿತರಿಂದ ಶಹಬಾಸ್‌ ಎಂದು ಹೇಳಿಸಿಕೊಳ್ಳಲು

________ ರೂಮ್‌ಮೇಟ್‌ನ ಅಗತ್ಯವಿರುವ ನನ್ನ ಫ್ರೆಂಡ್‌ಗೆ ಸಹಾಯಮಾಡಲು

________ ಇನ್ನೊಂದು ಸ್ಥಳದಲ್ಲಿ ಸ್ವಯಂಸೇವೆ ಮಾಡಲು

________ ನನ್ನ ಸ್ವಂತ ಕಾಲ ಮೇಲೆ ನಿಂತುಕೊಳ್ಳುವ ಅನುಭವ ಪಡೆದುಕೊಳ್ಳಲು

________ ಹೆತ್ತವರಿಗೆ ಭಾರವಾಗದಿರಲು

________ ಇತರೆ

ಈ ಕಾರಣಗಳು ತಪ್ಪು ಎಂದು ಹೇಳಲಾಗದು. ಆದರೆ ಯಾವ ಕಾರಣಕ್ಕಾಗಿ ನೀವು ಹೆತ್ತವರಿಂದ ಪ್ರತ್ಯೇಕ ವಾಸಮಾಡಲಿದ್ದೀರೋ ಅದು ನೀವು ಎಷ್ಟು ಸಂತೋಷವಾಗಿರಬಲ್ಲಿರಿ ಎಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಮನೆಯ ಸಮಸ್ಯೆಗಳಿಂದ ದೂರವಿರುವುದು ಅಥವಾ ಹೆಚ್ಚು ಸ್ವಚ್ಛಂದವಾಗಿರುವುದು ಮಾತ್ರ ಕಾರಣವಾಗಿರುವಲ್ಲಿ ಅದರಿಂದ ನಿಮಗೇ ಹಾನಿ!

ದೀಪಾ ತನ್ನ 20ನೇ ವಯಸ್ಸಿನಲ್ಲಿ ಸ್ವಲ್ಪ ಸಮಯಕ್ಕೆಂದು ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಿದಳು. ಅದು ಅವಳಿಗೆ ಅನೇಕ ಪಾಠಗಳನ್ನು ಕಲಿಸಿತ್ತು. “ನಮ್ಮೆಲ್ಲರಿಗೆ ಒಂದಲ್ಲ ಒಂದು ರೀತಿಯ ನಿರ್ಬಂಧಗಳಿರುತ್ತವೆ. ಒಬ್ಬರೇ ಇರುವಾಗ ಕೆಲಸ, ಹಣಕಾಸಿನ ತೊಂದರೆ ನಿಮ್ಮನ್ನು ಕಟ್ಟಿಹಾಕಬಲ್ಲದು” ಎನ್ನುತ್ತಾಳಾಕೆ. ಕೇವಲ 6 ತಿಂಗಳಿಗಾಗಿ ಹೊರದೇಶಕ್ಕೆ ಹೋದ ಕೀರ್ತನಾ ಹೀಗನ್ನುತ್ತಾಳೆ: “ಅದು ನನಗೆ ಖುಷಿತಂದಿತ್ತೇನೋ ನಿಜ. ಆದರೆ ನನಗೆ ಸ್ವಲ್ಪನೂ ಬಿಡುವಿರುತ್ತಿರಲಿಲ್ಲ. ಮನೆ ಕ್ಲೀನ್‌ ಮಾಡುವುದು, ರಿಪೇರಿ ಕೆಲಸ, ಕಳೆ ಕೀಳುವುದು, ಬಟ್ಟೆ ಒಗೆಯುವುದು, ನೆಲ ಒರೆಸುವುದು ಹೀಗೆ ಎಲ್ಲ ನಾನೇ ಮಾಡಬೇಕಿತ್ತು.”

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಿದರೆ ನಿಮಗೆ ಹೆಚ್ಚು ಸ್ವಾತಂತ್ರ್ಯ ಸಿಗಬಹುದು ಇಲ್ಲವೇ ಸ್ನೇಹಿತರ ದೃಷ್ಟಿಯಲ್ಲಿ ನಿಮ್ಮ ‘ಗ್ರೇಡ್‌’ ಹೆಚ್ಚಾಗಬಹುದು. ಆದರೆ ಬಿಲ್‌ ಪಾವತಿಸುವುದು, ಅಡುಗೆ ಮಾಡುವುದು, ಮನೆ ಶುಚಿಮಾಡುವುದು ಇದನ್ನೆಲ್ಲ ಮಾಡಬೇಕಾದವರು ನೀವು. ಬಿಡುವು ಸಿಕ್ಕಿದರೂ ಅದನ್ನು ಸಂತೋಷವಾಗಿ ಕಳೆಯಲು ಫ್ರೆಂಡ್ಸ್‌ ಆಗಲಿ ಹೆತ್ತವರಾಗಲಿ ನಿಮ್ಮೊಟ್ಟಿಗೆ ಇರುವುದಿಲ್ಲ, ಒಂಟಿಯಾಗಿ ಕಾಲತಳ್ಳಬೇಕು. ಆದ್ದರಿಂದ ಬೇರೆಯವರ ಒತ್ತಡಕ್ಕೆ ತಲೆಬಾಗಿ ದುಡುಕಿ ನಿರ್ಧಾರ ಮಾಡಬೇಡಿ. (ಜ್ಞಾನೋಕ್ತಿ 29:20) ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ನಿಮಗೆ ಒಳ್ಳೇ ಕಾರಣಗಳಿದ್ದರೆ ಸಾಲದು. ಬದುಕುವ ಕಲೆ ಗೊತ್ತಿರಬೇಕು. ಅದಕ್ಕೋಸ್ಕರ ನಾವೀಗ 2ನೇ ಪ್ರಶ್ನೆಯನ್ನು ಪರಿಗಣಿಸೋಣ.

ಅಂಥ ಜೀವನಕ್ಕೆ ತಯಾರಾಗಿದ್ದೇನೋ?

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸುವುದು ದಟ್ಟ ಕಾಡಿನಲ್ಲಿ ಚಾರಣ ಹೋದಂತೆ. ಟೆಂಟ್‌ ಹಾಕುವುದು, ಬೆಂಕಿ ಮಾಡುವುದು, ಅಡುಗೆ ಮಾಡುವುದು, ನಕ್ಷೆ ನೋಡಿ ದಾರಿ ಕಂಡುಹಿಡಿಯುವುದು ಇದೆಲ್ಲಾ ಗೊತ್ತಿಲ್ಲದೆ ದಟ್ಟಾರಣ್ಯಕ್ಕೆ ಪ್ರವಾಸ ಹೋಗುವಿರಾ? ಖಂಡಿತ ಇಲ್ಲ. ಆದರೆ ಅನೇಕ ಯುವಜನರು ಒಂದರ್ಥದಲ್ಲಿ ಅದನ್ನೇ ಮಾಡಿದ್ದಾರೆ. ಮನೆನಡೆಸುವುದು ಹೇಗೆಂದು ತಿಳಿಯದೆ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದ್ದಾರೆ.

“ಜಾಣನು ಪ್ರತಿಯೊಂದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು” ಎಂದನು ವಿವೇಕಿ ರಾಜ ಸೊಲೊಮೋನ. (ಜ್ಞಾನೋಕ್ತಿ 14:15, ಪರಿಶುದ್ಧ ಬೈಬಲ್‌ *) ನಿಮ್ಮ ಮನೆಯ ಹೊಸ್ತಿಲು ದಾಟಿ ಹೊರಬರುವ ಮುಂಚೆ ಅದಕ್ಕಾಗಿ ತಯಾರಾಗಿದ್ದೀರಾ ಎಂದು ತಿಳಿಯಲು ಮುಂದಿನ ವಿಷಯಗಳನ್ನು ಪರಿಗಣಿಸಿರಿ. ಕೆಳಗೆ ಕೊಡಲಾಗಿರುವ ಕೌಶಲಗಳು ನಿಮಗಿರುವಲ್ಲಿ ಅದಕ್ಕೆ ಹಾಕಿ. ಇನ್ನೂ ಕಲಿಯಬೇಕಾದ ಕೌಶಲಗಳಿಗೆ ಹಾಕಿ.

ಹಣ ನಿರ್ವಹಣೆ. “ಯಾವುದಕ್ಕೂ ನನ್ನ ಪರ್ಸ್‌ನಿಂದ ಹಣ ಖರ್ಚುಮಾಡುವ ಪ್ರಮೇಯವೇ ಬಂದಿರಲಿಲ್ಲ. ಆದ್ದರಿಂದ ಹೆತ್ತವರಿಂದ ಪ್ರತ್ಯೇಕವಾಗಿ ವಾಸಮಾಡಿ ನನ್ನ ಹಣವನ್ನು ಬಜೆಟ್‌ ಮಾಡುವುದನ್ನು ಯೋಚಿಸಿದರೆ ಹೆದರಿಕೆಯಾಗುತ್ತದೆ” ಎನ್ನುತ್ತಾಳೆ 19 ವರ್ಷದ ಸಾರಿಕಾ. ಹಣ ನಿರ್ವಹಿಸುವುದನ್ನು ನೀವು ಹೇಗೆ ಕಲಿಯಬಲ್ಲಿರಿ?

“ಜ್ಞಾನಿಯು . . . ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು” ಎನ್ನುತ್ತದೆ ಬೈಬಲಿನ ಒಂದು ನಾಣ್ಣುಡಿ. (ಜ್ಞಾನೋಕ್ತಿ 1:5) ಮನೆ ಬಾಡಿಗೆ ಅಥವಾ ಸಾಲದ ಕಂತು, ಊಟ, ವಾಹನದ ಇಲ್ಲವೆ ಪ್ರಯಾಣದ ಖರ್ಚುವೆಚ್ಚ ಮುಂತಾದವೆಲ್ಲ ಸೇರಿ ತಿಂಗಳೊಂದಕ್ಕೆ ಒಬ್ಬ ವ್ಯಕ್ತಿಗೆ ಎಷ್ಟು ಖರ್ಚಾಗುತ್ತದೆ ಎಂದು ನಿಮ್ಮ ಹೆತ್ತವರನ್ನೇ ಕೇಳಬಾರದೇಕೆ? ಬಜೆಟ್‌ ಮಾಡುವುದು, ಖರ್ಚುಗಳನ್ನು ನೋಡಿಕೊಳ್ಳುವುದು ಹೇಗೆಂದು ಕಲಿಸಿಕೊಡುವಂತೆ ಅವರನ್ನು ಕೇಳಿ. ಬಜೆಟ್‌ಗನುಸಾರ ಖರ್ಚು ಮಾಡುವುದು ಪ್ರಾಮುಖ್ಯವೇಕೆ? “ನೀವು ಪ್ರತ್ಯೇಕವಾಗಿ ಮನೆಮಾಡಿದಾಗ ಖರ್ಚುಗಳು ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಬಜೆಟ್‌ ಮಾಡದೆ ಹೋದರೆ ಸಾಲ ತೀರಿಸುವುದರಲ್ಲೇ ಜೀವನ ಕಳೆದುಹೋಗುತ್ತದೆ” ಎನ್ನುತ್ತಾನೆ 20 ವರ್ಷದ ಕಿಶೋರ್‌.

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ನಿಮ್ಮಿಂದ ಸಾಧ್ಯವೋ ಎಂಬುದನ್ನು ಪರೀಕ್ಷಿಸಿ ನೋಡಲಿಚ್ಛಿಸುತ್ತೀರೋ? ನಿಮಗೊಂದು ಉದ್ಯೋಗವಿರುವಲ್ಲಿ ನಿಮ್ಮ ಊಟ, ವಸತಿ ಇತ್ಯಾದಿ ಖರ್ಚುಗಳಿಗಾಗಿ ತಗಲುವ ಹಣವನ್ನು ಕೆಲವು ತಿಂಗಳ ಮಟ್ಟಿಗೆ ಹೆತ್ತವರಿಗೆ ಕೊಡಿ. ಹೆತ್ತವರೊಂದಿಗಿರುವಾಗಲೇ ನಿಮ್ಮ ಖರ್ಚಿಗೆ ಸಂಬಳ ಸಾಲದಿರುವಲ್ಲಿ ಅಥವಾ ನಿಮಗದನ್ನು ಕೊಡಲು ಮನಸ್ಸಿಲ್ಲದಿದ್ದಲ್ಲಿ ಪ್ರತ್ಯೇಕರಾಗಿ ಜೀವಿಸುವುದು ಇನ್ನೆಷ್ಟು ಕಷ್ಟವಾದೀತು?—2 ಥೆಸಲೊನೀಕ 3:10, 12.

ಮನೆ ನೋಡಿಕೊಳ್ಳುವ ಕೌಶಲ. ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಿದರೆ ಬಟ್ಟೆ ಒಗೆಯುವುದು, ಇಸ್ತ್ರಿಹಾಕುವುದು ಎಲ್ಲ ತಾನೇ ಮಾಡಬೇಕು ಎಂಬುದೇ 17 ವರ್ಷದ ಭರತ್‌ಗೆ ದೊಡ್ಡ ತಲೆಬಿಸಿ. ನಿಮ್ಮ ಬಗ್ಗೆ ಏನು? ನಿಮ್ಮೆಲ್ಲ ಕೆಲಸಮಾಡಲು ಸಮರ್ಥರೆಂದು ತಿಳಿಯುವುದು ಹೇಗೆ? 20 ವರ್ಷದ ಏರನ್‌ನ ಸಲಹೆ ಹೀಗಿದೆ: “ನೀವು ಒಂಟಿಯಾಗಿ ಮನೆಯಲ್ಲಿದ್ದೀರಿ ಎಂಬಂತೆ ಒಂದು ವಾರದ ಮಟ್ಟಿಗೆ ಜೀವಿಸಿ. ಅಂದರೆ ನೀವೇ ಹಣ ಕೊಟ್ಟು ತಂದ ಸಾಮಾನುಗಳನ್ನು ಬಳಸಿ ನೀವೇ ಅಡುಗೆ ಮಾಡಿ ತಿನ್ನಿ. ನಿಮ್ಮ ಬಟ್ಟೆ ನೀವೇ ಒಗೆದು ಇಸ್ತ್ರಿ ಮಾಡಿ. ಮನೆಯನ್ನು ನೀವೇ ಕ್ಲೀನ್‌ಮಾಡಿ. ಎಲ್ಲಿಗಾದರೂ ಹೋಗಬೇಕಾದರೆ ನಿಮ್ಮ ಖರ್ಚಿನಲ್ಲೇ ಹೋಗಿ ಬನ್ನಿ.” ಈ ಸಲಹೆ ನಿಮಗೆ ಎರಡು ರೀತಿಯಲ್ಲಿ ಸಹಾಯ ಮಾಡಬಲ್ಲದು: (1) ನಿಮಗೆ ಉಪಯುಕ್ತವಾಗಲಿರುವ ಕೌಶಲಗಳನ್ನು ಕಲಿತುಕೊಳ್ಳುವಿರಿ. (2) ಹೆತ್ತವರು ನಿಮಗೋಸ್ಕರ ಮಾಡುವ ಎಲ್ಲ ಕೆಲಸಗಳಿಗಾಗಿ ನಿಮ್ಮ ಕೃತಜ್ಞತೆ ಹೆಚ್ಚುವುದು.

ಹೊಂದಿಕೊಂಡು ಹೋಗುವುದು. ನಿಮ್ಮ ಹೆತ್ತವರೊಂದಿಗೆ, ಒಡಹುಟ್ಟಿದವರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದೀರೋ? ಅದು ಕಷ್ಟವಾಗುತ್ತಿರುವಲ್ಲಿ, ನಿಮ್ಮ ಫ್ರೆಂಡ್‌ ಜೊತೆ ಬೇರೆ ಕಡೆ ಜೀವಿಸಿದರೆ ಒಳ್ಳೇದು ಎಂದು ನೀವು ಭಾವಿಸುತ್ತಿರಬಹುದು. ಒಳ್ಳೇದಾದರೂ ಆಗಬಹುದು. ಆದರೆ 18 ವರ್ಷದ ಇಳಾ ಹೇಳಿದ ಮಾತಿಗೆ ಗಮನಕೊಡಿ: “ನನ್ನ ಇಬ್ಬರು ಫ್ರೆಂಡ್ಸ್‌ ಹೆತ್ತವರಿಂದ ಪ್ರತ್ಯೇಕವಾಗಿ ಬೇರೆ ಕಡೆ ವಾಸಿಸಲಾರಂಭಿಸಿದರು. ‘ದೇಹ ಎರಡು ಜೀವ ಒಂದು’ ಎಂಬಷ್ಟು ಆಪ್ತರಾಗಿದ್ದ ಅವರಿಗೆ ಒಟ್ಟಿಗೆ ಜೀವಿಸುವುದು ಮಾತ್ರ ತುಂಬ ಕಷ್ಟವಾಯಿತು. ಒಬ್ಬಳು ಎಲ್ಲವನ್ನೂ ಅಚ್ಚುಕಟ್ಟಾಗಿ ಇಡುತ್ತಿದ್ದಳು ಇನ್ನೊಬ್ಬಳು ಅದಕ್ಕೆ ತದ್ವಿರುದ್ಧ. ಒಬ್ಬಳಿಗೆ ಆಧ್ಯಾತ್ಮಿಕ ವಿಷಯಗಳೆಡೆಗೆ ಒಲವು ಜಾಸ್ತಿ ಇದ್ದರೆ ಇನ್ನೊಬ್ಬಳಿಗೆ ಅಷ್ಟಕ್ಕಷ್ಟೆ. ಆದ್ದರಿಂದ ಇಬ್ಬರಿಗೂ ಸರಿಬರಲಿಲ್ಲ.”

18 ವರ್ಷದ ಅರುಣಾಳಿಗೆ ಮನೆಬಿಟ್ಟು ಹೋಗಲು ಮನಸ್ಸಿದ್ದರೂ ಆಕೆಯನ್ನುವುದು: “ಇತರರೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಲು ಮನೆಯಲ್ಲಿ ತುಂಬ ಅವಕಾಶಗಳು ಸಿಗುತ್ತವೆ. ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ, ರಾಜಿಯಾಗುವುದು ಹೇಗೆ ಎಂಬದನ್ನೂ ಕಲಿಯುತ್ತೇವೆ. ನಾನು ನೋಡಿರುವ ಮಟ್ಟಿಗೆ ಮನೆಯಲ್ಲಿ ಹೆತ್ತವರೊಂದಿಗಿನ ಜಟಾಪಟಿಗಳಿಂದ ತಪ್ಪಿಸಿಕೊಳ್ಳಲು ಮನೆಯನ್ನೇ ಬಿಟ್ಟು ಬರುವವರು ಸಮಸ್ಯೆಗಳಿಂದ ಓಡಿಹೋಗಲು ಕಲಿಯುತ್ತಾರೆ ವಿನಃ ಅದನ್ನು ಬಗೆಹರಿಸಲಿಕ್ಕಲ್ಲ.”

ವೈಯಕ್ತಿಕ ಆಧ್ಯಾತ್ಮಿಕ ರೂಢಿಗಳು. ತಂದೆತಾಯಿ ಇಟ್ಟಿರುವ ಕೆಲವೊಂದು ಧಾರ್ಮಿಕ ರೂಢಿಗಳಿಂದ ತಪ್ಪಿಸಿಕೊಳ್ಳಲೆಂದೇ ಕೆಲವರು ಹೆತ್ತವರಿಂದ ಪ್ರತ್ಯೇಕ ಹೋಗುತ್ತಾರೆ. ಇನ್ನು ಕೆಲವರಿಗೆ ಕ್ರಮದ ವೈಯಕ್ತಿಕ ಬೈಬಲ್‌ ಅಧ್ಯಯನ ಮತ್ತು ಆರಾಧನಾ ಚಟುವಟಿಕೆಗಳನ್ನು ಮುಂದುವರಿಸುವ ಮನಸ್ಸೇನೊ ಇರುತ್ತದೆ. ಆದರೆ ಆ ರೂಢಿಗಳು ಒಂದೊಂದಾಗಿ ಮಾಯವಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಹಾಗಾದರೆ ನಿಮ್ಮ “ನಂಬಿಕೆಯ ವಿಷಯದಲ್ಲಿ ಹಡಗೊಡೆತವನ್ನು” ಅಂದರೆ ನಂಬಿಕೆಯ ನಷ್ಟವಾಗುವುದನ್ನು ಹೇಗೆ ತಡೆಯಬಲ್ಲಿರಿ?—1 ತಿಮೊಥೆಯ 1:19.

ನಿಮ್ಮ ಹೆತ್ತವರ ಧಾರ್ಮಿಕ ನಂಬಿಕೆಗಳನ್ನು ಕಣ್ಮುಚ್ಚಿ ಸ್ವೀಕರಿಸಬೇಡಿ. ನಾವು ಏನೇ ನಂಬಿದರೂ ಅದನ್ನು ಮೊದಲು ಪರಿಶೋಧಿಸಬೇಕೆಂಬುದು ಯೆಹೋವ ದೇವರ ಇಚ್ಛೆ. (ರೋಮನ್ನರಿಗೆ 12:1, 2) ಆದ್ದರಿಂದ ಒಳ್ಳೇ ವೈಯಕ್ತಿಕ ಬೈಬಲ್‌ ಅಧ್ಯಯನ ಮತ್ತು ಆರಾಧನಾ ಚಟುವಟಿಕೆಗಳ ರೂಢಿ ಮಾಡಿಕೊಂಡು ಅದನ್ನು ಬಿಟ್ಟುಬಿಡಬೇಡಿ. ಆ ರೂಢಿಗಳನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಬರೆದಿಟ್ಟು ಅದನ್ನು ಒಂದು ತಿಂಗಳ ವರೆಗೆ ಹೆತ್ತವರು ಹೇಳದೆ ಮಾಡುತ್ತಾ ಬಂದಿದ್ದೀರೋ ಎಂದು ಪರೀಕ್ಷಿಸಿ ನೋಡಬಾರದೇಕೆ?

ಮೂರನೇ ಪ್ರಶ್ನೆಯನ್ನು ನೋಡೋಣ.

ನಾನೆತ್ತ ಸಾಗುತ್ತಿದ್ದೇನೆ?

ಕೆಲವರು ಸಮಸ್ಯೆಗಳಿಗೆ ಹೆದರಿಯೋ ಹೆತ್ತವರ ಅಧಿಕಾರದಿಂದ ಸ್ವತಂತ್ರವಾಗಲೋ ಮನೆಯಿಂದ ದೂರಹೋಗುತ್ತಾರೆ. ಅವರ ಮನಸ್ಸೆಲ್ಲಾ ಏನನ್ನು ಬಿಟ್ಟು ಹೋಗಬೇಕೆಂದಿದ್ದಾರೋ ಅದರ ಮೇಲಿರುತ್ತದೆ, ಎಲ್ಲಿ ಹೋಗುತ್ತಿದ್ದಾರೆ ಎಂಬದರ ಮೇಲಲ್ಲ. ಇದು, ಮುಂದೆ ನೋಡಿ ವಾಹನ ಓಡಿಸದೆ ‘ರೇರ್‌ವ್ಯೂ’ ಕನ್ನಡಿಯನ್ನೇ ನೋಡಿ ಓಡಿಸಿದಂತಿರುತ್ತದೆ. ಹಾಗೆ ಓಡಿಸುವ ಚಾಲಕನಿಗೆ ರಸ್ತೆಯಲ್ಲಿ ಹಿಂದೆ ಹೋದ ವಿಷಯಗಳು ಮಾತ್ರ ಕಾಣುವುದರಿಂದ ಮುಂದೇನು ಬರುತ್ತಿದೆಯೋ ಅದರ ಮೇಲೆ ಅವನ ಗಮನವಿರುವುದಿಲ್ಲ. ಇದರಿಂದ ಪಾಠ? ನೀವು ಯಶಸ್ವಿಗಳಾಗಬೇಕಾದರೆ ಮನೆ ಬಿಟ್ಟುಹೋಗುವುದರ ಬಗ್ಗೆ ಮಾತ್ರ ಚಿಂತಿಸದೇ ಸಾರ್ಥಕ ಗುರಿಯೊಂದರ ಮೇಲೆ ನಿಮ್ಮ ಕಣ್ಣಿಡಿ.

ದೇವರ ಸೇವೆಮಾಡುವ ಸಲುವಾಗಿ ಯೆಹೋವನ ಸಾಕ್ಷಿಗಳಲ್ಲಿ ಕೆಲವು ಯುವಜನರು ಹೆತ್ತವರಿಂದ ಪ್ರತ್ಯೇಕವಾಗಿ ಸ್ವದೇಶದಲ್ಲೇ ದೂರ ದೂರದ ಊರುಗಳಿಗೆ ಅಥವಾ ಹೊರದೇಶಗಳಿಗೆ ಹೋಗಿ ವಾಸಿಸುತ್ತಾರೆ. ಇನ್ನಿತರರು ಯೆಹೋವನ ಸಾಕ್ಷಿಗಳ ಆರಾಧನಾ ಸ್ಥಳಗಳನ್ನು ಕಟ್ಟಲಿಕ್ಕಾಗಿ ಮತ್ತು ಅವರ ಬ್ರಾಂಚ್‌ ಆಫೀಸುಗಳಲ್ಲಿ ಕೆಲಸಮಾಡಲು ಹೋಗುತ್ತಾರೆ. ಆದರೆ ಇನ್ನು ಕೆಲವರು ಮದುವೆಯಾಗುವ ಮುಂಚೆ ಸ್ವಲ್ಪ ಸಮಯ ತಮ್ಮಷ್ಟಕ್ಕೆ ಜೀವಿಸಬೇಕೆಂದು ನೆನಸಿ ಹೆತ್ತವರಿಂದ ಪ್ರತ್ಯೇಕವಾಗುತ್ತಾರೆ. *

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಿ ನೀವು ಸಾಧಿಸಬೇಕೆಂದಿರುವ ಗುರಿಯೊಂದನ್ನು ಕೆಳಗೆ ಬರೆಯಿರಿ. .....

ಕೆಲವೊಮ್ಮೆ ಯುವಜನರು ಬಹಳ ಸಮಯದ ತನಕ ಹೆತ್ತವರೊಂದಿಗೆ ವಾಸಿಸಿದರೂ ಪ್ರೌಢತೆಯನ್ನಾಗಲಿ ತಮ್ಮಷ್ಟಕ್ಕೆ ಜೀವಿಸಲು ಬೇಕಾದ ಕೌಶಲಗಳನ್ನಾಗಲಿ ಬೆಳೆಸಿಕೊಳ್ಳಲಿಕ್ಕಿಲ್ಲ. ನಿಮಗೂ ಹಾಗೆ ಆಗಿರುವಲ್ಲಿ ಹಿಂದೆ ಮುಂದೆ ಯೋಚಿಸದೆ ಹೆತ್ತವರಿಂದ ಪ್ರತ್ಯೇಕರಾಗಿ ವಾಸಿಸುವ ನಿರ್ಧಾರ ತೆಗೆದುಕೊಳ್ಳಬೇಡಿ. ಅದರ ಬಗ್ಗೆ ಚೆನ್ನಾಗಿ ಯೋಚಿಸಿ. “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ” ಎನ್ನುತ್ತದೆ ಬೈಬಲಿನ ಒಂದು ನಾಣ್ಣುಡಿ. (ಜ್ಞಾನೋಕ್ತಿ 21:5) ಹೆತ್ತವರು ಆ ಬಗ್ಗೆ ಕೊಡುವ ಸಲಹೆಯನ್ನೂ ಕೇಳಿ. (ಜ್ಞಾನೋಕ್ತಿ 23:22) ಅದರ ಬಗ್ಗೆ ದೇವರ ಬಳಿ ಪ್ರಾರ್ಥಿಸಲು ಮರೆಯದಿರಿ. ಏನು ಮಾಡಬೇಕೆಂದು ನೀವು ಯೋಚಿಸುತ್ತಿರುವಾಗ ಈ ಲೇಖನದಲ್ಲಿ ಚರ್ಚಿಸಲಾದ ಬೈಬಲ್‌ ಸೂತ್ರಗಳನ್ನು ಪರಿಗಣಿಸಿ.

ನೀವೀಗ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಯೋಚಿಸುವುದರ ಬದಲು ಒಂದು ಮನೆಯನ್ನು ನಡೆಸಲು ನಿಮ್ಮಿಂದ ಸಾಧ್ಯವೋ ಎಂಬುದರ ಬಗ್ಗೆ ಯೋಚಿಸಬೇಕು. ಈ ಪ್ರಶ್ನೆಗೆ ಹೌದೆಂದು ಉತ್ತರಿಸುವಲ್ಲಿ ನೀವು ನಿರ್ಧರಿಸಿದಂತೆ ಮಾಡಲು ಇದು ಸೂಕ್ತ ಸಮಯವಾಗಿದ್ದೀತು. (g10-E 07)

“ಯುವ ಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಕೆಲವು ಸಂಸ್ಕೃತಿಗಳಲ್ಲಿ ಮಕ್ಕಳು ಅದರಲ್ಲೂ ಹೆಣ್ಮಕ್ಕಳು ಮದುವೆಯಾಗುವ ವರೆಗೆ ತಮ್ಮ ಹೆತ್ತವರೊಂದಿಗೆ ವಾಸಿಸಬೇಕೆಂಬ ಪದ್ಧತಿಯಿದೆ. ಇದರ ಬಗ್ಗೆ ಬೈಬಲ್‌ ಯಾವುದೇ ನಿರ್ದಿಷ್ಟ ಸಲಹೆಗಳನ್ನು ಕೊಡುವುದಿಲ್ಲ.

ಯೋಚಿಸಿ

● ಹೆತ್ತವರ ಮನೆಯಲ್ಲಿ ಜೀವನ ಕಷ್ಟವೆನಿಸಿದರೂ ಅಲ್ಲೇ ಉಳಿಯುವುದರಿಂದ ನಿಮಗೆ ಯಾವ ಪ್ರಯೋಜನವಿದೆ?

● ಮನೆಯಲ್ಲಿರುವಾಗ ನಿಮ್ಮ ಕುಟುಂಬಕ್ಕೆ ಪ್ರಯೋಜನವಾಗುವ ಮತ್ತು ಮುಂದೆ ನಿಮ್ಮ ಸ್ವಂತ ಮನೆಯನ್ನು ನಡೆಸಲು ಸಹಾಯವಾಗುವ ಯಾವ ಕೆಲಸಗಳನ್ನು ಮಾಡಬಲ್ಲಿರಿ?

[ಪುಟ 17ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?

“ನೀವು ಮುಂದೆ ಪ್ರತ್ಯೇಕವಾಗಿ ವಾಸಿಸುವಾಗ ಹೆಗಲೇರುವ ಜವಾಬ್ದಾರಿಗಳನ್ನೇ ನಿಮ್ಮ ಹೆತ್ತವರು ಈಗ ಕೊಡಬಹುದು. ಇದು ಒಂದು ಮನೆಯನ್ನು ನೋಡಿಕೊಳ್ಳುವುದು ಹೇಗೆಂಬದನ್ನು ಕಲಿಯುವ ಅತ್ಯಂತ ಸುರಕ್ಷಿತ ವಿಧಾನ.”

“ಸ್ವಾತಂತ್ರ್ಯ ಬೇಕನಿಸುವುದು ಸಹಜವೇ. ಆದರೆ ಯಾವುದೇ ಕಟ್ಟುಪಾಡುಗಳಿಲ್ಲದೆ ಜೀವಿಸಲಿಕ್ಕೆಂದೇ ನೀವು ಬೇರೆ ಕಡೆ ವಾಸಿಸಲು ಹೋಗುವಲ್ಲಿ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ನೀವಿನ್ನೂ ಸಮರ್ಥರಲ್ಲ ಎಂಬದನ್ನು ತೋರಿಸಿ ಕೊಡುತ್ತೀರಿ.”

[ಚಿತ್ರಗಳು]

ಸೆರಾ

ಏರನ್‌

[ಪುಟ 19ರಲ್ಲಿರುವ ಚೌಕ]

ಹೆತ್ತವರಿಗೊಂದು ಕಿವಿಮಾತು

ಜೊತೆಯಲ್ಲಿರುವ ಲೇಖನದಲ್ಲಿ ತಿಳಿಸಲಾದ ಸಾರಿಕಾ ಎಂಬ ಯುವತಿಗೆ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸುವ ಬಗ್ಗೆ ಒಂದು ರೀತಿಯ ಭಯ. ಇದರ ಒಂದು ಕಾರಣವನ್ನು ಹೀಗೆ ತಿಳಿಸುತ್ತಾಳೆ: “ನನ್ನ ಸ್ವಂತ ಹಣದಲ್ಲಿ ನಾನೇನಾದರೂ ಖರೀದಿಸಲು ಹೋದರೆ ಡ್ಯಾಡಿ ಬಿಡೋದೇ ಇಲ್ಲ. ಅದು ಅವರ ಕೆಲಸ ಎಂದು ಹೇಳುತ್ತಾರೆ. ಆದ್ದರಿಂದ ನನ್ನ ಖರ್ಚುಗಳನ್ನು ನಾನೇ ಭರಿಸುವುದರ ಬಗ್ಗೆ ನನಗೆ ಏನೋ ಭಯ.” ಸಾರಿಕಾಳ ತಂದೆಯ ಉದ್ದೇಶ ಒಳ್ಳೇದಾಗಿದ್ದರೂ ಮುಂದೆ ಆಕೆ ತನ್ನ ಮನೆಯನ್ನು ನಡೆಸಲು ಸಮರ್ಥಳಾಗುವಂತೆ ಸಹಾಯ ಮಾಡುತ್ತಿದ್ದಾರೆಂದು ನೆನಸುತ್ತೀರೋ?—ಜ್ಞಾನೋಕ್ತಿ 31:10, 18, 27.

ಮಕ್ಕಳಿಗೆ ನೀವು ತೋರಿಸುತ್ತಿರುವ ಕಾಳಜಿ ಅತಿಯಾಗಿ ಅವರು ತಮ್ಮ ಸ್ವಂತ ಕಾಲ ಮೇಲೆ ನಿಂತುಕೊಳ್ಳಲು ಬೇಕಾದ ತಯಾರಿ ಕಡಿಮೆಯಾಗಿದೆಯೋ? ಅದನ್ನು ತಿಳಿದುಕೊಳ್ಳುವುದು ಹೇಗೆ? ನಾವು ಹಿಂದೆ ಓದಿದ ಅದೇ ನಾಲ್ಕು ಕೌಶಲಗಳನ್ನು ಬೆಳೆಸಿಕೊಳ್ಳಲು ಹೆತ್ತವರು ಮಕ್ಕಳಿಗೆ ಹೇಗೆ ನೆರವಾಗಬಹುದು ಎಂಬದನ್ನು ನಾವೀಗ ನೋಡೋಣ.

ಹಣ ನಿರ್ವಹಣೆ. ಫೋನ್‌, ಕರೆಂಟ್‌ ಬಿಲ್‌ಗಳನ್ನು ಪಾವತಿಸುವುದು ಹೇಗೆಂದು ನಿಮ್ಮ ದೊಡ್ಡ ಮಕ್ಕಳಿಗೆ ಗೊತ್ತಿದೆಯಾ? ಯಾವ ರೀತಿಯ ತೆರಿಗೆಗಳಿವೆ, ಪಾವತಿಸುವ ವಿಧಾನ ಹೇಗೆಂದು ಅವರಿಗೆ ಗೊತ್ತಿದೆಯಾ? (ರೋಮನ್ನರಿಗೆ 13:7) ಕ್ರೆಡಿಟ್‌ ಕಾರ್ಡ್‌ ಇರುವಲ್ಲಿ ಅದನ್ನು ಜವಾಬ್ದಾರಿಯಿಂದ ಬಳಸಲು ಕಲಿತಿದ್ದಾರಾ? (ಜ್ಞಾನೋಕ್ತಿ 22:7) ತಮ್ಮ ಸಂಪಾದನೆಯನ್ನು ಬಜೆಟ್‌ ಮಾಡಲು ಮತ್ತು ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಮಾತಿಗನುಸಾರ ಜೀವಿಸಲು ಕಲಿತಿದ್ದಾರಾ? (ಲೂಕ 14:28-30) ಸ್ವತಃ ಸಂಪಾದಿಸಿದ ಹಣದಿಂದ ವಸ್ತುವನ್ನು ಕೊಂಡುಕೊಳ್ಳುವಾಗ ಸಿಗುವ ಸಂತೃಪ್ತಿಯನ್ನು ಅವರೂ ಅನುಭವಿಸಿದ್ದಾರಾ? ತಮ್ಮ ಸಮಯ ಮತ್ತು ಸಂಪತ್ತನ್ನು ಇತರರಿಗಾಗಿ ಬಳಸುವುದರಿಂದ ಸಿಗುವ ಹೆಚ್ಚಿನ ಸಂತೋಷವನ್ನು ಸವಿದು ನೋಡಿದ್ದಾರಾ?—ಅ. ಕಾರ್ಯಗಳು 20:35.

ಮನೆ ನೋಡಿಕೊಳ್ಳುವ ಕೌಶಲ. ನಿಮ್ಮ ಹೆಣ್ಮಕ್ಕಳಿಗೆ ಮಾತ್ರವಲ್ಲ ಗಂಡುಮಕ್ಕಳಿಗೂ ಅಡುಗೆ ಮಾಡಲು ಗೊತ್ತಾ? ಬಟ್ಟೆ ಒಗೆಯಲು, ಇಸ್ತ್ರಿ ಮಾಡಲು ಕಲಿಸಿದ್ದೀರಾ? ಅವರು ವಾಹನ ಚಲಾಯಿಸುತ್ತಾರಾದರೆ ಇಂಜಿನ್‌ ಆಯಿಲ್‌, ಫ್ಯೂಸ್‌, ಟಯರ್‌ ಬದಲಿಸುವಂಥ ಚಿಕ್ಕಪುಟ್ಟ ಕೆಲಸಗಳನ್ನು ಸುರಕ್ಷಿತವಾಗಿ ಮಾಡಬಲ್ಲರಾ?

ಹೊಂದಿಕೊಂಡು ಹೋಗುವುದು. ಮಕ್ಕಳು ಜಗಳವಾಡಿಕೊಂಡಾಗ ಯಾವಾಗಲೂ ನೀವೇ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತೀರಾ? ಅಥವಾ ನಿಮ್ಮ ಮಕ್ಕಳೇ ಅದಕ್ಕೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳುವಂತೆ ಮತ್ತು ಅವರದನ್ನು ಹೇಗೆ ಇತ್ಯರ್ಥಮಾಡಿದರು ಎಂಬುದನ್ನು ಬಂದು ನಿಮಗೆ ತಿಳಿಸುವಂತೆ ಕಲಿಸಿಕೊಟ್ಟಿದ್ದೀರಾ?—ಮತ್ತಾಯ 5:23-25.

ವೈಯಕ್ತಿಕ ಆಧ್ಯಾತ್ಮಿಕ ರೂಢಿಗಳು. ನೀವು ಹೇಳಿದಂತೆ ನಿಮ್ಮ ಮಕ್ಕಳು ನಂಬಬೇಕೆಂದು ನೀವು ಹೇಳಿದ್ದೀರಾ? ಅಥವಾ ಅವರೇನು ನಂಬಬೇಕೆಂಬ ವಿಷಯದಲ್ಲಿ ಅವರನ್ನು ಒಡಂಬಡಿಸಿದ್ದೀರಾ? (2 ತಿಮೊಥೆಯ 3:14, 15) ಧಾರ್ಮಿಕ ಮತ್ತು ನೈತಿಕ ವಿಷಯಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಮಕ್ಕಳು ಕೇಳುವಾಗ ಯಾವಾಗಲೂ ನೀವೇ ಉತ್ತರಿಸುವ ಬದಲು ಅವರು ತಮ್ಮ “ಆಲೋಚನಾ ಸಾಮರ್ಥ್ಯವನ್ನು” ಬೆಳೆಸಿ ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಲು’ ಕಲಿಸುತ್ತಿದ್ದೀರಾ? (ಜ್ಞಾನೋಕ್ತಿ 1:4, NW; ಇಬ್ರಿಯ 5:14) ನಿಮ್ಮ ಮಕ್ಕಳು ನಿಮ್ಮಷ್ಟೇ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡಿದರೆ ಸಾಕೋ ಅಥವಾ ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕೆಂದು ನೀವು ಬಯಸುತ್ತೀರಾ?

ಮೇಲೆ ಹೇಳಿದಂಥ ಕ್ಷೇತ್ರಗಳಲ್ಲಿ ಮಕ್ಕಳನ್ನು ತರಬೇತಿಗೊಳಿಸಲು ಸಮಯ ಮತ್ತು ಶ್ರಮದ ಅಗತ್ಯವಿದೆ ಖಂಡಿತ. ಆದರೆ ಹಾಗೆ ಮಾಡುವುದರಿಂದ ಮಕ್ಕಳು ಮುಂದೆ ನಿಮ್ಮ ಗೂಡಿನಿಂದ ಹಾರಿಹೋದಾಗ ಅವರಿಗೆ ತುಂಬ ಪ್ರಯೋಜನವಾಗುವುದು.

[ಪುಟ 18ರಲ್ಲಿರುವ ಚಿತ್ರ]

ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸುವುದು ದಟ್ಟ ಕಾಡಿನಲ್ಲಿ ಚಾರಣ ಹೋದಂತೆ. ಹಾಗಾಗಿ ಮೊದಲು ನಿಮ್ಮನ್ನು ನೀವೇ ನೋಡಿಕೊಳ್ಳಲು ಕಲಿಯಬೇಕು