ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ವಗ್ರಹ ಮತ್ತು ಪಕ್ಷಪಾತ ಕಾರಣಗಳೇನು?

ಪೂರ್ವಗ್ರಹ ಮತ್ತು ಪಕ್ಷಪಾತ ಕಾರಣಗಳೇನು?

ಪೂರ್ವಗ್ರಹ ಮತ್ತು ಪಕ್ಷಪಾತ ಕಾರಣಗಳೇನು?

“ಹುಟ್ಟುವಾಗಲೇ ಎಲ್ಲ ಮಾನವರಿಗೆ ಸ್ವಾತಂತ್ರ್ಯ, ಸಮಾನವಾದ ಗೌರವ ಮತ್ತು ಹಕ್ಕುಗಳಿರುತ್ತವೆ. ತರ್ಕಶಕ್ತಿ, ಮನಸ್ಸಾಕ್ಷಿಯೂ ಇರುತ್ತವೆ. ಆದುದರಿಂದ ಅವರೆಲ್ಲರೂ ಸೋದರಭಾವದಿಂದ ಬಾಳಬೇಕು.”—ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ವಿಭಾಗ 1.

ಆ ಉನ್ನತ ಆದರ್ಶದ ಹೊರತಾಗಿಯೂ ಪೂರ್ವಗ್ರಹ ಮತ್ತು ಪಕ್ಷಪಾತದ ದಳ್ಳುರಿ ಈಗಲೂ ಮಾನವಕುಲವನ್ನು ಸುಡುತ್ತಿದೆ. ಈ ಕಹಿಸತ್ಯ ನಾವು ಜೀವಿಸುತ್ತಿರುವ ಕಾಲ ಕೆಟ್ಟಿದೆ ಎಂಬುದಕ್ಕೆ ಮಾತ್ರವಲ್ಲ ಮಾನವನ ಪಾಪಪೂರ್ಣ ಪ್ರವೃತ್ತಿಗೂ ಹಿಡಿದ ಕನ್ನಡಿ. (ಕೀರ್ತನೆ 51:5) ಹಾಗಿದ್ದರೂ ಪರಿಸ್ಥಿತಿ ನಿರೀಕ್ಷಾಹೀನವಲ್ಲ. ನಮ್ಮ ಸುತ್ತಲೂ ಕಾಣುತ್ತಿರುವ ತಾರತಮ್ಯವನ್ನು ಅಳಿಸಿಹಾಕಲು ನಮ್ಮಿಂದ ಅಸಾಧ್ಯ ನಿಜ. ಆದರೆ ನಮ್ಮೊಳಗೇ ಅವಿತುಕೊಂಡಿರುವ ಪೂರ್ವಗ್ರಹಪೀಡಿತ ಮನೋಭಾವಗಳನ್ನು ಬೇರುಸಮೇತ ಕಿತ್ತೆಸೆಯಲು ನಾವು ಖಂಡಿತ ಶ್ರಮಿಸಸಾಧ್ಯ.

ಈ ನಿಟ್ಟಿನಲ್ಲಿ ಮೊದಲು, ಪೂರ್ವಗ್ರಹದ ಭಾವನೆಗಳು ಯಾರಲ್ಲೂ ಹುಟ್ಟಸಾಧ್ಯವೆಂದು ಒಪ್ಪಿಕೊಳ್ಳುವುದು ಉತ್ತಮ. ಪೂರ್ವಗ್ರಹ ಮತ್ತು ಪಕ್ಷಪಾತವನ್ನು ಅರ್ಥಮಾಡಿಕೊಳ್ಳುವುದು (ಇಂಗ್ಲಿಷ್‌) ಎಂಬ ಪುಸ್ತಕ ಹೀಗನ್ನುತ್ತದೆ: “ಪೂರ್ವಗ್ರಹದ ಕುರಿತ ಸಂಶೋಧನೆಯಿಂದ ತಿಳಿದುಬಂದ ಅತ್ಯಂತ ಮಹತ್ತ್ವದ ಅಂಶಗಳೆಂದರೆ (1) ಯೋಚಿಸಲು, ಮಾತಾಡಲು ಶಕ್ತನಾಗಿರುವ ಯಾವ ಮಾನವನೂ ಪೂರ್ವಗ್ರಹ-ಮುಕ್ತನಲ್ಲ, (2) ಪೂರ್ವಗ್ರಹ ಕಡಿಮೆಗೊಳಿಸಲು ಉದ್ದೇಶಪೂರ್ವಕ ಪ್ರಯತ್ನ ಹಾಗೂ ಪರಿಜ್ಞಾನ ಅಗತ್ಯ, ಮತ್ತು (3) ಬಲವಾದ ಪ್ರಚೋದನೆಯೂ ಇರಬೇಕು.”

ಪೂರ್ವಗ್ರಹ ವಿರುದ್ಧದ ಸಮರದಲ್ಲಿ “ಅತೀ ಪ್ರಬಲ ಅಸ್ತ್ರ” ಶಿಕ್ಷಣ ಎಂದು ಹೇಳಲಾಗುತ್ತದೆ. ಸರಿಯಾದ ಶಿಕ್ಷಣವಾದರೋ ಪೂರ್ವಗ್ರಹದ ಮೂಲಗಳೇನೆಂದು ತಿಳಿದುಕೊಳ್ಳಲು, ನಮ್ಮ ಸ್ವಂತ ಮನೋಭಾವಗಳನ್ನು ವಿಶಾಲಮನಸ್ಸಿನಿಂದ ಪರೀಕ್ಷಿಸಿ ತಿದ್ದಲು ಮತ್ತು ನಾವೇ ಪೂರ್ವಗ್ರಹಕ್ಕೆ ಗುರಿಯಾಗುವಾಗ ಅದನ್ನು ವಿವೇಕದಿಂದ ನಿರ್ವಹಿಸಲು ಸಹಾಯಮಾಡುತ್ತದೆ.

ಕಾರಣಗಳು

ಪೂರ್ವಗ್ರಹವಿರುವಾಗ ಜನರು ಒಂದು ವಿಷಯವು ಸತ್ಯವಾಗಿದ್ದರೂ ಅದು ತಮ್ಮ ಮನಸ್ಸಿನಲ್ಲಿ ಮೊದಲೇ ಇರುವ ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂಬ ಮಾತ್ರಕ್ಕೆ ಅದನ್ನು ತಿರುಚುತ್ತಾರೆ, ತಪ್ಪಾಗಿ ಅರ್ಥಮಾಡುತ್ತಾರೆ ಇಲ್ಲವೆ ಅಲಕ್ಷಿಸಿಬಿಡುತ್ತಾರೆ. ಈ ಪೂರ್ವಗ್ರಹ ಎಂಬುದು ಕುಟುಂಬದಲ್ಲಿ ಕಲಿಸಲಾಗುವ ಮೌಲ್ಯಗಳಿಂದ ಶುರುವಾಗಬಹುದು. ಅವು ದುರುದ್ದೇಶರಹಿತವೆಂದು ತೋರಿದರೂ ದಾರಿತಪ್ಪಿಸುವಂಥವುಗಳು ಆಗಿರಬಹುದು. ಅಥವಾ ಬೇರೆ ಜಾತಿ, ಸಂಸ್ಕೃತಿಗಳ ಬಗ್ಗೆ ಉದ್ದೇಶಪೂರ್ವಕವಾಗಿ ವಕ್ರ ಅಭಿಪ್ರಾಯಗಳನ್ನು ಹರಡಿಸುವವರಿಂದಲೂ ಪೂರ್ವಗ್ರಹ ಮನಸ್ಸಿನಲ್ಲಿ ಬಿತ್ತಲ್ಪಡಬಹುದು. ಇದಕ್ಕೆ ರಾಷ್ಟ್ರಾಭಿಮಾನ, ಸುಳ್ಳು ಧಾರ್ಮಿಕ ಬೋಧನೆಗಳ ಕುಮ್ಮಕ್ಕೂ ಇರಬಹುದು. ಅನುಚಿತ ಹೆಮ್ಮೆಯಿಂದಾಗಿಯೂ ಪೂರ್ವಗ್ರಹ ಹುಟ್ಟಬಹುದು. ಬೈಬಲಿನಲ್ಲಿ ಕೊಡಲಾಗಿರುವ ಈ ಮುಂದಿನ ಅಂಶಗಳನ್ನೂ ಮೂಲತತ್ತ್ವಗಳನ್ನೂ ನೀವು ಓದುವಾಗ ನಿಮ್ಮ ಸ್ವಂತ ಮನೋಭಾವಗಳನ್ನು ಪರೀಕ್ಷಿಸಿ, ಬದಲಾವಣೆ ಮಾಡುವ ಅಗತ್ಯವಿದೆಯೋ ಎಂದು ಯಾಕೆ ನೋಡಬಾರದು?

ಒಡನಾಡಿಗಳು. ಮಾನವ ಸ್ವಭಾವತಃ ಸಂಘಜೀವಿ. ಇದು ಒಳ್ಳೇದು. ಏಕೆಂದರೆ ಬೈಬಲ್‌ ಹೇಳುವಂತೆ ‘ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನವನ್ನೂ’ ಉಪೇಕ್ಷಿಸುವನು. (ಜ್ಞಾನೋಕ್ತಿ 18:1) ಆದರೆ ನಾವು ಒಡನಾಟ ಮಾಡುವ ಜನರನ್ನು ವಿವೇಕದಿಂದ ಆರಿಸಬೇಕು. ಏಕೆಂದರೆ ಒಡನಾಡಿಗಳು ನಮ್ಮ ಮೇಲೆ ಬೀರುವ ಪ್ರಭಾವ ಅಪಾರ. ಹೀಗಿರುವುದರಿಂದಲೇ ವಿವೇಕಿಗಳಾದ ಹೆತ್ತವರು ತಮ್ಮ ಮಕ್ಕಳು ಯಾರೊಂದಿಗೆ ಒಡನಾಟ ಮಾಡುತ್ತಾರೆಂಬ ವಿಷಯದಲ್ಲಿ ಕಣ್ಣಿಡುತ್ತಾರೆ. ಅಧ್ಯಯನಗಳ ಪ್ರಕಾರ ಮೂರು ವರ್ಷದಷ್ಟು ಎಳೆಯ ಮಕ್ಕಳು ಸಹ ಜನಾಂಗೀಯ ತಾರತಮ್ಯ ತೋರಿಸುತ್ತಾರೆ. ಇದನ್ನು ಅವರು ಇತರರ ಮನೋಭಾವ, ಮಾತು, ಹಾವಭಾವಗಳನ್ನು ನೋಡಿ ಕಲಿಯುತ್ತಾರೆ. ಆದರೆ ಹೆಚ್ಚಾಗಿ ಹೆತ್ತವರು ಬೀರುವ ಪ್ರಭಾವವೇ ಮಗುವಿನ ಮೌಲ್ಯಗಳನ್ನು ರೂಪಿಸುತ್ತದೆ. ಇದನ್ನು ಮನಸ್ಸಿನಲ್ಲಿಟ್ಟು ಹೆತ್ತವರು ತಮ್ಮ ಪುಟಾಣಿಗಳ ಮೇಲೆ ಸತ್ಪ್ರಭಾವ ಬೀರಲು ತಮ್ಮಿಂದಾದದ್ದೆಲ್ಲವನ್ನು ಮಾಡತಕ್ಕದ್ದು.

ಬೈಬಲ್‌ ಏನನ್ನುತ್ತದೆ? “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು [ಅಥವಾ ಹುಡುಗಿಯನ್ನು] ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ನೀವು ಹೆತ್ತವರಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ನನ್ನ ಮಕ್ಕಳನ್ನು ದೇವರ ದೃಷ್ಟಿಯಲ್ಲಿ ಸತ್ಯವೂ ನ್ಯಾಯವೂ ಆದ ಮಾರ್ಗದಲ್ಲಿ ನಡೆಸುತ್ತಿದ್ದೇನೋ? ನನ್ನ ಒಡನಾಡಿಗಳು ನನ್ನ ಮೇಲೆ ಸತ್ಪ್ರಭಾವ ಬೀರುವಂಥವರೋ? ನಾನು ಬೇರೆಯವರ ಮೇಲೆ ಒಳ್ಳೇ ಪ್ರಭಾವ ಬೀರುತ್ತೇನೋ?’—ಜ್ಞಾನೋಕ್ತಿ 2:1-9.

ರಾಷ್ಟ್ರಾಭಿಮಾನ. ಒಂದು ಶಬ್ದಕೋಶಕ್ಕನುಸಾರ ರಾಷ್ಟ್ರಾಭಿಮಾನ ಅಂದರೆ “ಉಳಿದೆಲ್ಲ ದೇಶಗಳಿಗಿಂತ ತನ್ನ ದೇಶವೇ ಶ್ರೇಷ್ಠ, ಅದರ ಸಂಸ್ಕೃತಿ, ಅಭಿರುಚಿಗಳೇ ಪ್ರಧಾನ ಎಂಬ ಮನೋಭಾವ.” ರಾಜ್ಯಶಾಸ್ತ್ರ ಪ್ರೊಫೆಸರ್‌ ಐವೊ ಡುಕಾಚೆಕ್‌ ಅವರು ರಾಷ್ಟ್ರಗಳ ನಡುವಣ ಸಂಘರ್ಷ ಹಾಗೂ ಸಹಕಾರ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಹೇಳಿದ್ದು: “ರಾಷ್ಟ್ರಾಭಿಮಾನವು ಮಾನವಕುಲವನ್ನು ಒಡೆದು ಗುಂಪುಗಳಾಗಿ ವಿಭಜಿಸಿ ಪರಸ್ಪರರೆಡೆಗಿನ ಅಸಹನೆಗೆ ಕಾರಣವಾಗಿದೆ. ಫಲಿತಾಂಶವಾಗಿ ಜನರು ತಾವು ಮಾನವರು ಎಂಬುದನ್ನು ಮರೆತು ‘ನಾವು ಅಮೆರಿಕನ್ನರು, ರಷ್ಯನ್ನರು, ಚೀನಿಯರು, ಈಜಿಪ್ಟ್‌ನವರು, ಪೆರೂವಿನವರು’ ಎಂದು ಯೋಚಿಸುತ್ತಾರೆ.” ವಿಶ್ವಸಂಸ್ಥೆಯ ಒಬ್ಬ ಮಾಜಿ ಸೆಕ್ರಿಟರಿ-ಜನರಲ್‌ ಬರೆದದ್ದು: “ನಾವಿಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಹೆಚ್ಚಿನದಕ್ಕೆ ಕಾರಣ ನಮಗಿರುವ ತಪ್ಪು ಮನೋಭಾವಗಳೇ. ಅವುಗಳಲ್ಲಿ ಕೆಲವನ್ನು ನಮಗರಿವಿಲ್ಲದೆ ಮೈಗೂಡಿಸಿಕೊಂಡಿದ್ದೇವೆ. ಇದಕ್ಕೊಂದು ಉದಾಹರಣೆ, ‘ನನ್ನ ದೇಶ ಮಾಡಿದ್ದೇ ಸರಿ, ನನ್ನ ಬೆಂಬಲ ಅದಕ್ಕೇ’ ಎಂಬ ಸಂಕುಚಿತಭಾವದ ರಾಷ್ಟ್ರಾಭಿಮಾನ.”

ಬೈಬಲ್‌ ಏನನ್ನುತ್ತದೆ? “ದೇವರು ಲೋಕವನ್ನು [ಇಡೀ ಮಾನವಕುಲವನ್ನು] ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾನ 3:16) “ದೇವರು ಪಕ್ಷಪಾತಿಯಲ್ಲ . . . ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.” (ಅ. ಕಾರ್ಯಗಳು 10:34, 35) ನಿಮ್ಮನ್ನೇ ಕೇಳಿಕೊಳ್ಳಿ: ‘ದೇವರು ಪಕ್ಷಪಾತವಿಲ್ಲದೆ ಎಲ್ಲಾ ಜನಾಂಗದವರನ್ನೂ, ನನ್ನನ್ನು ಕೂಡ ಪ್ರೀತಿಸುವುದಾದರೆ, ದೇವರ ಮೇಲೆ ಭಕ್ತಿಯಿದೆಯೆಂದು ಹೇಳುವ ನಾನೂ ಹಾಗೇ ಮಾಡಬೇಕಲ್ಲವೇ?’

ವರ್ಣಭೇದ. “ಮಾನವ ಸ್ವಭಾವ ಇಲ್ಲವೆ ಸಾಮರ್ಥ್ಯಗಳಲ್ಲಿರುವ ವ್ಯತ್ಯಾಸಗಳಿಗೆ ಒಬ್ಬನ ಜಾತಿಯೇ ಕಾರಣ ಮತ್ತು ತಮ್ಮ ಜಾತಿಯೊಂದೇ ಬೇರೆಲ್ಲದ್ದಕ್ಕಿಂತ ಶ್ರೇಷ್ಠ” ಎಂಬುದು ವರ್ಣಭೇದಮಾಡುವವರ ನಂಬಿಕೆ ಎಂದನ್ನುತ್ತದೆ ಒಂದು ಶಬ್ದಕೋಶ. ಆದರೆ ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡಿಯದಲ್ಲಿ ತಿಳಿಸಲಾಗಿರುವಂತೆ “ಒಂದು [ಜಾತಿ ಇಲ್ಲವೆ ವರ್ಣ] ಶ್ರೇಷ್ಠ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರ [ಸಂಶೋಧಕರಿಗೆ] ಸಿಕ್ಕಿಲ್ಲ.” ವರ್ಣಭೇದ ತೋರಿಸುವವರು ತಮ್ಮ ಜೊತೆ ಮಾನವರಿಗೆ ಸಿಗಬೇಕಾದ ಹಕ್ಕುಗಳು ಸಿಗದಂತೆ ಮಾಡುತ್ತಾರೆ. ಇದು ಮತ್ತು ಇನ್ನಿತರ ಘೋರ ಅನ್ಯಾಯಗಳು ವರ್ಣಬೇಧವು ಅಸತ್ಯ, ತಪ್ಪಾಭಿಪ್ರಾಯಗಳ ಮೇಲೆ ಆಧರಿತ ಎಂಬದಕ್ಕೆ ದುಃಖದಾಯಕ ಪುರಾವೆ.

ಬೈಬಲ್‌ ಏನನ್ನುತ್ತದೆ? “ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು.” (ಯೋಹಾನ 8:32) ‘ದೇವರು ಒಬ್ಬ ಮನುಷ್ಯನಿಂದಲೇ ಪ್ರತಿಯೊಂದು ಮಾನವ ಜನಾಂಗವನ್ನು ನಿರ್ಮಿಸಿದನು.’ (ಅ. ಕಾರ್ಯಗಳು 17:26) “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ನಿಮ್ಮನ್ನೇ ಕೇಳಿಕೊಳ್ಳಿ: ‘ನಾನು ಎಲ್ಲ ಮಾನವರನ್ನೂ ದೇವರ ದೃಷ್ಟಿಕೋನದಿಂದ ನೋಡುತ್ತೇನೋ? ಬೇರೆ ಜಾತಿ ಇಲ್ಲವೆ ಸಂಸ್ಕೃತಿಯ ಜನರಲ್ಲಿ ಕಡಿಮೆಪಕ್ಷ ಕೆಲವರ ವೈಯಕ್ತಿಕ ಪರಿಚಯಮಾಡಿಕೊಂಡು ಅವರು ನಿಜವಾಗಿಯೂ ಎಂಥವರೆಂದು ತಿಳಿಯಲು ಪ್ರಯತ್ನಿಸುತ್ತೇನೋ?’ ನಾವು ಜನರೊಂದಿಗೆ ವೈಯಕ್ತಿಕವಾಗಿ ಪರಿಚಿತರಾಗುವಾಗ, ಅವರ ಜಾತಿಯ ಕುರಿತು ನಮ್ಮ ಮನಸ್ಸಿನಲ್ಲಿರುವ ತಪ್ಪಭಿಪ್ರಾಯಗಳು ಕ್ರಮೇಣ ಕರಗಿಹೋಗುವವು.

ಧರ್ಮ. ಪೂರ್ವಗ್ರಹದ ಸ್ವರೂಪ (ಇಂಗ್ಲಿಷ್‌) ಎಂಬ ಪುಸ್ತಕ ಅನ್ನುವುದು: “ಮನುಷ್ಯರು [ಸ್ವಾರ್ಥಪರ ಬೆನ್ನಟ್ಟುವಿಕೆಗಳನ್ನು] ಮತ್ತು ಜನಾಂಗೀಯ ಅಭಿರುಚಿಗಳನ್ನು ಸಮರ್ಥಿಸಲಿಕ್ಕಾಗಿ ತಮ್ಮ ಧರ್ಮವನ್ನು ಬಳಸುವಾಗ ಜುಗುಪ್ಸೆ ಹುಟ್ಟುತ್ತದೆ. ಏಕೆಂದರೆ ಆಗ ಧರ್ಮ ಮತ್ತು ಪೂರ್ವಗ್ರಹದ ಮಿಶ್ರಣವಾಗುತ್ತದೆ.” ಎದ್ದುಕಾಣುವ ಸಂಗತಿಯೆಂದರೆ ಧಾರ್ಮಿಕ ಶ್ರದ್ಧೆಯುಳ್ಳ ಅನೇಕರು ಸಲೀಸಾಗಿ “ಪೂಜ್ಯಭಾವ ಬಿಟ್ಟು ಪೂರ್ವಗ್ರಹಕ್ಕೆ ಜಾರಿಕೊಳ್ಳುತ್ತಾರೆ” ಎನ್ನುತ್ತದೆ ಅದೇ ಪುಸ್ತಕ. ನಿರ್ದಿಷ್ಟ ಜಾತಿಗೆಂದೇ ಮೀಸಲಾದ ಆರಾಧನಾ ಸ್ಥಳಗಳು, ಪಂಥಗಳ ನಡುವಿನ ದ್ವೇಷ ಹಿಂಸಾಚಾರ ಮತ್ತು ಧರ್ಮ-ಪ್ರೇರಿತ ಭಯೋತ್ಪಾದನಾ ಕೃತ್ಯಗಳು ಆ ಮಾತುಗಳಿಗೆ ಸಾಕ್ಷ್ಯ.

ಬೈಬಲ್‌ ಏನನ್ನುತ್ತದೆ? “ಮೇಲಣಿಂದ [ದೇವರಿಂದ] ಬರುವ ವಿವೇಕವು . . . ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, . . . ಪಕ್ಷಭೇದಗಳನ್ನು ಮಾಡುವುದಿಲ್ಲ.” (ಯಾಕೋಬ 3:17) ‘ಸತ್ಯಾರಾಧಕರು ತಂದೆಯನ್ನು ಪವಿತ್ರಾತ್ಮದಿಂದಲೂ [ಧಾರ್ಮಿಕ] ಸತ್ಯದಿಂದಲೂ ಆರಾಧಿಸುವರು.’ (ಯೋಹಾನ 4:23) “ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ.” (ಮತ್ತಾಯ 5:44) ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಧರ್ಮವು ನಾನು ಎಲ್ಲರನ್ನೂ ಯಥಾರ್ಥವಾಗಿ ಪ್ರೀತಿಸುವಂತೆ, ನನಗೆ ಹಾನಿಮಾಡುವವರನ್ನು ಕೂಡ ಪ್ರೀತಿಸುವಂತೆ ಉತ್ತೇಜಿಸುತ್ತದೋ? ನನ್ನ ಧರ್ಮದಲ್ಲಿ ಆರಾಧನಾ ಸ್ಥಳದ ಬಾಗಿಲುಗಳು ಎಲ್ಲ ವಿಧದ ಅಂದರೆ ಯಾವುದೇ ದೇಶ, ವರ್ಣ, ಲಿಂಗ, ಆರ್ಥಿಕ ಇಲ್ಲವೆ ಸಾಮಾಜಿಕ ಅಂತಸ್ತಿನ ಜನರಿಗೆ ತೆರೆದಿವೆಯೆ?’

ಹೆಮ್ಮೆ. ಅನುಚಿತ ಸ್ವಗೌರವ ಇಲ್ಲವೆ ಅಹಂಕಾರದ ರೂಪದಲ್ಲಿ ತೋರಿಬರುವ ಹೆಮ್ಮೆಯು ಒಬ್ಬ ವ್ಯಕ್ತಿಯನ್ನು ಪೂರ್ವಗ್ರಹ ಪೀಡಿತನಾಗಿ ಮಾಡುವ ಸಾಧ್ಯತೆ ಹೆಚ್ಚು. ಉದಾಹರಣೆಗೆ, ಹೆಚ್ಚು ವಿದ್ಯೆಯಿಲ್ಲದವರೂ ಬಡವರೂ ಕೀಳು, ತಾನೇ ಮೇಲು ಎಂಬ ಭಾವನೆಯನ್ನು ಹೆಮ್ಮೆ ಒಬ್ಬನಲ್ಲಿ ಹುಟ್ಟಿಸಬಲ್ಲದು. ಅವನ ರಾಷ್ಟ್ರೀಯತೆ ಇಲ್ಲವೆ ಜಾತೀಯ ಗುಂಪನ್ನು ಮೇಲಕ್ಕೇರಿಸುವ ಪ್ರಚಾರವನ್ನು ನಂಬುವಂತೆಯೂ ಮಾಡಬಹುದು. ನಾಸಿ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ನಂತೆ ಈ ಪ್ರಚಾರ-ಸಾಧನವನ್ನು ಕುತಂತ್ರದಿಂದ ಸ್ವಹಿತ ಸಾಧನೆಗೆ ಬಳಸಿಕೊಳ್ಳುವವರು ಉದ್ದೇಶಪೂರ್ವಕವಾಗಿ ಜನರಲ್ಲಿ ತಮ್ಮ ರಾಷ್ಟ್ರ ಹಾಗೂ ಜಾತಿಯ ಬಗ್ಗೆ ಹೆಮ್ಮೆಯನ್ನು ಪೋಷಿಸಿದ್ದಾರೆ. ಈ ಮೂಲಕ ಜನರ ಬೆಂಬಲ ಗಿಟ್ಟಿಸಿಕೊಂಡಿದ್ದಾರೆ ಮತ್ತು ಭಿನ್ನರಾಗಿದ್ದ ಇಲ್ಲವೆ ತಮಗೆ ಹಿಡಿಸದವರ ಹೆಸರು ಕೆಡಿಸಿದ್ದಾರೆ.

ಬೈಬಲ್‌ ಏನನ್ನುತ್ತದೆ? “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ.” (ಜ್ಞಾನೋಕ್ತಿ 16:5) “ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.” (ಫಿಲಿಪ್ಪಿ 2:3) ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಸ್ವಂತ ವರ್ಣ ಇಲ್ಲವೆ ಜಾತಿಯ ಬಗ್ಗೆ ಯಾರಾದರೂ ಹೊಗಳುವಾಗ ಅಥವಾ ಇನ್ನಿತರರ ವರ್ಣ ಇಲ್ಲವೆ ಜಾತಿಯ ಬಗ್ಗೆ ತುಚ್ಛೀಕರಿಸಿ ಮಾತಾಡುವಾಗ ನಾನು ಒಳಗಿಂದೊಳಗೇ ಖುಷಿಪಡುತ್ತೇನೋ? ನನ್ನಲ್ಲಿ ಇರದಂಥ ಪ್ರತಿಭೆಗಳು ಬೇರೆಯವರಲ್ಲಿ ಇದ್ದರೆ ನನಗೆ ಹೊಟ್ಟೆಕಿಚ್ಚಾಗುತ್ತದೊ? ಅಥವಾ ಅವರ ಸಾಮರ್ಥ್ಯಗಳ ಬಗ್ಗೆ ಯಥಾರ್ಥವಾಗಿ ಖುಷಿಪಡುತ್ತೇನೋ?’

ಸಕಾರಣದಿಂದಲೇ ಬೈಬಲ್‌ ಈ ಎಚ್ಚರಿಕೆಯನ್ನು ಕೊಡುತ್ತದೆ: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ಆದುದರಿಂದ ನಿಮ್ಮ ಹೃದಯವನ್ನು ನಿಜವಾಗಿಯೂ ಅಮೂಲ್ಯವೆಂದೆಣಿಸಿ, ಯಾವುದೂ ಅದನ್ನು ಭ್ರಷ್ಟಗೊಳಿಸುವಂತೆ ಬಿಡಬೇಡಿ! ಅದರಲ್ಲಿ ದೈವಿಕ ವಿವೇಕವನ್ನು ತುಂಬಿಸಿರಿ. ಆಗ, ಹೌದು ಆಗ ಮಾತ್ರ ‘ಬುದ್ಧಿಯು ನಿಮಗೆ ಕಾವಲಾಗಿರುವದು, ವಿವೇಕವು ನಿಮ್ಮನ್ನು ಕಾಪಾಡುವದು; ಇದರಿಂದ ನೀವು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿರಿ.’—ಜ್ಞಾನೋಕ್ತಿ 2:10-12.

ಆದರೆ ಪೂರ್ವಗ್ರಹ ಇಲ್ಲವೆ ಪಕ್ಷಪಾತಕ್ಕೆ ನೀವೇ ಗುರಿಯಾಗುವಲ್ಲಿ ಏನು ಮಾಡುವಿರಿ? ಮುಂದಿನ ಲೇಖನ ಇದನ್ನು ಚರ್ಚಿಸುತ್ತದೆ. (g09-E 08)

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಾವು ಜನರೊಂದಿಗೆ ವೈಯಕ್ತಿಕವಾಗಿ ಪರಿಚಿತರಾಗುವಾಗ, ಅವರ ಜಾತಿಯ ಕುರಿತು ನಮ್ಮ ಮನಸ್ಸಿನಲ್ಲಿರುವ ತಪ್ಪಭಿಪ್ರಾಯಗಳು ಕ್ರಮೇಣ ಕರಗಿಹೋಗುವವು