ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಂತಿಷ್ಟೇ ವೇಳೆಗೆ ಮನೆಯಲ್ಲಿರಬೇಕೆಂಬ ಹೆತ್ತವರ ಆಜ್ಞೆಯನ್ನು ಹೇಗೆ ಪಾಲಿಸಲಿ?

ಇಂತಿಷ್ಟೇ ವೇಳೆಗೆ ಮನೆಯಲ್ಲಿರಬೇಕೆಂಬ ಹೆತ್ತವರ ಆಜ್ಞೆಯನ್ನು ಹೇಗೆ ಪಾಲಿಸಲಿ?

ಯುವ ಜನರು ಪ್ರಶ್ನಿಸುವುದು

ಇಂತಿಷ್ಟೇ ವೇಳೆಗೆ ಮನೆಯಲ್ಲಿರಬೇಕೆಂಬ ಹೆತ್ತವರ ಆಜ್ಞೆಯನ್ನು ಹೇಗೆ ಪಾಲಿಸಲಿ?

ಸಂಜೆ ಸ್ನೇಹಿತರ ಪಾರ್ಟಿಗೆ ಹೋದ ನೀವು ಲೇಟ್‌ ಆಗಿ ಮನೆಗೆ ಬಂದಿದ್ದೀರಿ. ಹೆತ್ತವರು ನಿಮಗೆ ಗೊತ್ತುಪಡಿಸಿದ ಸಮಯ ಮೀರಿದೆ. ನೀವೀಗ ಕಾರಣ ಕೊಡಬೇಕು. ಮನೆಯೊಳಗೆ ಕಾಲಿಡಲು ಒಂಥರಾ ಅಳುಕು. ‘ಅಪ್ಪ ಅಮ್ಮ ಮಲಗಿರಬೇಕು’ ಎಂದುಕೊಂಡು ಮೆಲ್ಲ ಮೆಲ್ಲನೆ ನೀವು ಬಾಗಿಲು ತೆರೆಯುವಾಗ ಅಲ್ಲಿ ನಿಂತಿದ್ದಾರೆ ಅಪ್ಪಅಮ್ಮ, ಗಡಿಯಾರ ನೋಡುತ್ತಾ, ‘ಇಷ್ಟು ತಡವೇಕೆ’ ಎಂದು ಗುಡುಗುತ್ತಾರೆ.

ಈರೀತಿಯ ಸನ್ನಿವೇಶವನ್ನು ನೀವು ಆಗಾಗ್ಗೆ ಎದುರಿಸುತ್ತೀರೋ? ಸೂಕ್ತವಾದ ವೇಳೆಗೆ ಮನೆಗೆ ಬರುವ ವಿಷಯದಲ್ಲಿ ನಿಮಗೂ ಹೆತ್ತವರಿಗೂ ವಾಗ್ವಾದ ನಡೆಯುತ್ತದೋ? 17 ವರ್ಷದ ಡೆಬ್ರ ಹೇಳುವುದು: “ನಾವಿರುವ ವಠಾರ ಸಾಧಾರಣ ಸುರಕ್ಷಿತ. ಆದರೆ ರಾತ್ರಿ ಸ್ವಲ್ಪ ಲೇಟ್‌ ಆದರೂ ಅಪ್ಪಅಮ್ಮಗೆ ತುಂಬಾ ಗಾಬರಿ.”  *

ಗೊತ್ತಾದ ವೇಳೆಗೆ ಬರಬೇಕೆಂಬ ಹೆತ್ತವರ ಆಜ್ಞೆಯನ್ನು ಪಾಲಿಸಲು ಅಷ್ಟು ಕಷ್ಟಕರವೇಕೆ? ಹೆಚ್ಚಿನ ಬಿಡುವನ್ನು ನೀವು ಅಪೇಕ್ಷಿಸುವುದು ತಪ್ಪೊ? ಹೆತ್ತವರ ಕಟ್ಟುನಿಟ್ಟಿನ ನಿಯಮವನ್ನು ಹೇಗೆ ನಿಭಾಯಿಸಬಲ್ಲಿರಿ?

ತಿಕ್ಕಾಟಗಳು

ಇಂತಿಷ್ಟೇ ಸಮಯಕ್ಕೆ ಮನೆಯಲ್ಲಿರಬೇಕೆಂಬ ಆಜ್ಞೆಯು ನೀವು ಮಿತ್ರರೊಂದಿಗೆ ಕಳೆಯುವ ಸಮಯಕ್ಕೆ ಕತ್ತರಿಹಾಕಿದರಂತೂ ಅತಿ ನಿರಾಶಕರ. ಹದಿನೇಳು ವರ್ಷದ ನಟಾಶ ಹೇಳುವುದು: “ಈ ಆಜ್ಞೆಯಿಂದಾಗಿ ನನ್ನ ತಲೆಯೇ ಕೆಟ್ಟುಹೋಗುತ್ತದೆ. ಒಮ್ಮೆ ನನ್ನ ಸ್ನೇಹಿತರೊಂದಿಗೆ ಪಕ್ಕದ ಮನೆಯಲ್ಲೇ ಫಿಲ್ಮ್‌ ನೋಡುತ್ತಿದ್ದೆ. ಆದರೂ ಒಂದೆರಡು ನಿಮಿಷ ತಡವಾದದ್ದಕ್ಕೆ ಯಾಕೆ ಬರಲಿಲ್ಲ ಅಂತ ಅಪ್ಪ-ಅಮ್ಮ ಫೋನ್‌ ಮಾಡಿಬಿಟ್ರು!”

ಸ್ಟೇಸೀ ಎಂಬ ಹುಡುಗಿ ಇನ್ನೊಂದು ಸಮಸ್ಯೆಯನ್ನು ತಿಳಿಸುತ್ತಾಳೆ. “‘ನಾವು ಮಲಗುವ ಮುಂಚೆ ಮನೆಗೆಯಲ್ಲಿರಬೇಕು’ ಎಂದು ಅಪ್ಪ-ಅಮ್ಮ ಹೇಳಿದ್ದರು. ಆದರೆ ನನ್ನನ್ನು ಕಾಯುತ್ತ ನಿದ್ದೆಗೆಡುವುದಾದರೆ ನಾನು ಬಂದಾಗ ಅವರು ತುಂಬ ಸಿಡುಕಿನಲ್ಲಿರುವರು ನಿಶ್ಚಯ.” ಆಗ ಏನಾಗುತ್ತದೆ? ಅವಳು ಮತ್ತೂ ಹೇಳಿದ್ದು: “ತಪ್ಪೆಲ್ಲ ನನ್ನದೋ ಎಂಬಂತೆ ಅವರು ದುರುಗುಟ್ಟಿ ನೋಡ್ತಾರೆ. ಇದು ತುಂಬ ಕಿರಿಕಿರಿ. ಅವರು ಸುಮ್ಮನೆ ಯಾಕೆ ಮಲಗಬಾರದಿತ್ತು!” ಇಂಥ ತಿಕ್ಕಾಟದಿಂದ 18 ವರ್ಷದ ಕೇಟೀಗೆ ಆದಂತೆ ನಿಮಗೂ ಅನಿಸಬಹುದು: “ನಾನು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ತಿಕ್ಕಾಟ ನಡೆಸುವ ಮೊದಲೇ ನನ್ನ ಅಪ್ಪ-ಅಮ್ಮ ನನಗೆ ಹೆಚ್ಚು ಸ್ವಾತಂತ್ರ್ಯ ಕೊಡಲು ಕಲಿಯಬೇಕು.”

ಮೇಲೆ ತಿಳಿಸಲಾದ ಯುವಜನರು ಭಾವಿಸುವಂತೆ ನಿಮಗೂ ಅನಿಸಬಹುದು. ಹಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ:

ಹೊರಗೆ ಹೆಚ್ಚು ಸಮಯ ಕಳೆಯಲು ನನಗೇಕೆ ಇಷ್ಟ? (ಒಂದನ್ನು ಗುರುತಿಸಿ.)

❑ ಆಗ ನನಗೆ ಸ್ವರಾಜ್ಯ ಸಿಕ್ಕಿದಂತೆ ಆಗುತ್ತದೆ.

❑ ಹೊರಗೆ ನನಗೆ ಹಾಯೆನಿಸುತ್ತದೆ.

❑ ನನ್ನ ಸ್ನೇಹಿತರೊಂದಿಗಿನ ಸಹವಾಸಕ್ಕೆ ಅವಕಾಶ ಕೊಡುತ್ತದೆ.

ಇವೆಲ್ಲವು ಸಹಜವಾದ ಕಾರಣಗಳೇ. ನೀವು ಬೆಳೆದು ದೊಡ್ಡವರಾದಂತೆ ಹೆಚ್ಚು ಸ್ವಾತಂತ್ರ್ಯವನ್ನು ಬಯಸುವುದು ತೀರ ಸ್ವಾಭಾವಿಕ. ಹಿತಕರವಾದ ಕಾಲಕ್ಷೇಪವು ಮನಸ್ಸಿಗೆ ಮುದ. ಅದಲ್ಲದೆ ಸತ್‌ಪ್ರಭಾವ ಬೀರುವ ಸ್ನೇಹಬಂಧವನ್ನು ಬೆಳೆಸುವಂತೆ ಬೈಬಲ್‌ ಉತ್ತೇಜಿಸುತ್ತದೆ. (ಕೀರ್ತನೆ 119:63; 2 ತಿಮೊಥೆಯ 2:22) ನೀವು ದಿನವಿಡೀ ಮನೆಯಲ್ಲೇ ಇದ್ದುಬಿಟ್ಟಲ್ಲಿ ಇದು ಕಷ್ಟಕರ!

ತೀರ ನಿರ್ಬಂಧಕ ಎಂದು ನೀವೆಣಿಸುವ ಹೆತ್ತವರ ನಿಯಮದ ಮೇರೆಯೊಳಗೆಯೇ ನೀವು ಹೇಗೆ ಸಂತೋಷವನ್ನು ಕಂಡುಕೊಳ್ಳಬಹುದು? ಕೆಳಗಿನವುಗಳನ್ನು ಪರಿಗಣಿಸಿ.

ಸಮಸ್ಯೆ #1: ಹೆತ್ತವರ ಆಜ್ಞೆಯು ನಿಮಗೆ ಹುಡುಗಾಟ ಎನಿಸುತ್ತದೆ. “ಎಲ್ಲರು ಖುಷಿಯಲ್ಲಿ ಮಜಾ ಮಾಡುತ್ತಿರುವಾಗ ನಾನು ಅದನ್ನು ಬಿಟ್ಟು ಬೇಗ ಮನೆಗೆ ಬರಬೇಕಾದದ್ದು ನಾನು ಚಿಕ್ಕ ಹಸುಗೂಸೊ ಎಂಬ ಅನಿಸಿಕೆಯನ್ನು ಕೊಟ್ಟಿತು” ಎಂದು ಜ್ಞಾಪಿಸಿಕೊಂಡಳು ಈಗ 21 ವಯಸ್ಸಿನ ಆ್ಯಂಡ್ರಿಯ.

ನಿಭಾಯಿಸುವ ವಿಧ: ನಿಮಗೆ ಡ್ರೈವರ್‌ ಲೈಸನ್ಸ್‌ ಸಿಕ್ಕಿದ್ದು ಇದೇ ಮೊದಲ ಬಾರಿ ಎಂದು ನೆನಸಿ. ಕೆಲವು ಸ್ಥಳಗಳಲ್ಲಿ ಒಂದು ನಿರ್ದಿಷ್ಟ ವಯಸ್ಸಿನ ತನಕ ನೀವು ಎಲ್ಲಿ, ಯಾವಾಗ ಮತ್ತು ಯಾರೊಂದಿಗೆ ಡ್ರೈವ್‌ ಮಾಡಬಹುದು ಎಂಬ ನಿರ್ಬಂಧಗಳಿರುತ್ತವೆ. ನೀವು ಅಂಥ ಒಂದು ಲೈಸನ್ಸ್‌ ಅನ್ನು ನಿಷೇಧಿಸುತ್ತಾ “ನನಗೆ ಪೂರಾ ಸ್ವಾತಂತ್ರ್ಯವನ್ನು ಕೊಡದ ಹೊರತು ನಾನು ಡ್ರೈವ್‌ ಮಾಡುವುದೇ ಇಲ್ಲ” ಎಂದು ವಾದಿಸುವಿರೋ? ಖಂಡಿತವಾಗಿಯೂ ಇಲ್ಲ! ಆ ಲೈಸನ್ಸ್‌ನ್ನು ಪಡೆಯುವುದನ್ನು ಒಂದು ದೊಡ್ಡ ಸಾಧನೆಯಾಗಿ ಪರಿಗಣಿಸುವಿರಿ ಅಲ್ಲವೇ.

ಅಂತೆಯೇ ನಿಮ್ಮ ಹೆತ್ತವರ ಆಜ್ಞೆಗಳನ್ನು ಯೋಗ್ಯ ಮಾರ್ಗಕ್ಕೆ ನಡೆಸುವ ಹೆಜ್ಜೆಗಳಾಗಿ ನೋಡಲು ಪ್ರಯತ್ನಿಸಿರಿ. ನಿರ್ಬಂಧಗಳ ಮೇಲಲ್ಲ ಅದು ನಿಮಗೆ ಕೊಡುವ ಅವಕಾಶಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ. ನೀವು ಚಿಕ್ಕವರಾಗಿದ್ದಾಗ ಇದ್ದದಕ್ಕಿಂತ ಈಗ ನಿಮಗೆ ಹೆಚ್ಚಿನ ಸ್ವಾತಂತ್ರ್ಯ ಇದೆ ಅಲ್ಲವೇ?

ಕಾರ್ಯಸಾಧಕವೇಕೆ? ನಿಷೇಧಾಜ್ಞೆಯನ್ನು ತಡೆಗಟ್ಟಾಗಿ ಎಣಿಸುವ ಬದಲಿಗೆ ಒಂದು ಸದವಕಾಶವಾಗಿ ಎಣಿಸುವುದಾದರೆ ಅದಕ್ಕೆ ವಿಧೇಯರಾಗಲು ಹೆಚ್ಚು ಸುಲಭ. ಅದನ್ನು ಈಗ ಪಾಲಿಸುವುದಾದರೆ ಮುಂದೆ ನಿಮಗೆ ಹೆಚ್ಚು ಸ್ವಾತಂತ್ರ್ಯ ಸಿಗಬಲ್ಲದು.—ಲೂಕ 16:10.

ಸಮಸ್ಯೆ #2: ಅಷ್ಟು ಬೇಗ ಮನೆಗೆ ಬರಬೇಕೆಂಬ ಆಜ್ಞೆ ಏಕೆಂದು ನಿಮಗೆ ತಿಳಿಯದಿರುವುದು. ಈ ಹಿಂದೆ ಹೆತ್ತವರ ಆಜ್ಞೆ ಪಾಲಿಸಲು ಹೆಣಗಾಡಿದ ನಿಕೀ ಅಂದದ್ದು: “ರೂಲ್ಸ್‌ ಮಾಡಿ ನಮ್ಮನ್ನು ಬಂದೋಬಸ್ತ್‌ ಮಾಡುವುದೆಂದರೆ ನನ್ನಮ್ಮಗೆ ಬಲು ಇಷ್ಟ!”

ನಿಭಾಯಿಸುವ ವಿಧ: ಜ್ಞಾನೋಕ್ತಿ 15:22ರ ಮೂಲತತ್ತ್ವವನ್ನು ಪಾಲಿಸಿರಿ. ಅದು ಹೇಳುವುದು: “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.” ವಿಷಯವನ್ನು ನಿಮ್ಮ ಹೆತ್ತವರೊಂದಿಗೆ ಶಾಂತವಾಗಿ ಚರ್ಚಿಸಿ. ಇಷ್ಟೇ ಸಮಯಕ್ಕೆ ಮನೆಗೆ ಬರಬೇಕೆಂದು ಅವರು ಹೇಳಿದ್ದೇಕೆಂದು ತಿಳುಕೊಳ್ಳಲು ಪ್ರಯತ್ನಿಸಿ. *

ಕಾರ್ಯಸಾಧಕವೇಕೆ: ನಿಮ್ಮ ಹೆತ್ತವರ ಸುಜ್ಞಾನದ ಮಾತುಗಳನ್ನು ಕೇಳುವುದು ವಿವೇಕಯುತ. ಸ್ಟೀವನ್‌ ಹೇಳುವುದು: “ನಾನು ಸುರಕ್ಷಿತವಾಗಿ ಮನೆಗೆ ಬಂದ ಹೊರತು ಅಮ್ಮ ನಿದ್ದೆಮಾಡುವುದಿಲ್ಲ ಎಂದು ಅಪ್ಪ ಹೇಳಿದರು. ಆ ಮುಂಚೆ ನಾನದರ ಕುರಿತು ಯೋಚಿಸಿಯೇ ಇರಲಿಲ್ಲ.”

ನೆನಪಿಡಿರಿ: ಫಕ್ಕನೆ ರೊಚ್ಚಿಗೆದ್ದು ವಾದಿಸುವುದರಿಂದ ಕೆಟ್ಟ ಫಲಿತಾಂಶಗಳಿವೆ ಖಂಡಿತ. ಆದ್ದರಿಂದ ಸಮಸ್ಯೆಯನ್ನು ಶಾಂತವಾಗಿ ಚರ್ಚಿಸಿರಿ. ಈ ಮೊದಲೆ ತಿಳಿಸಿದ ನಾಟಾಶ ಹೇಳುವುದು: “ಹೆತ್ತವರಿಗೆ ಎದುರುಮಾತಾಡಿದಲ್ಲಿ ನಾನು ಸಾಮಾನ್ಯವಾಗಿ ಮಾಡಬಲ್ಲ ಬೇರೆ ವಿಷಯಗಳನ್ನೂ ಅವರು ನಿರ್ಬಂಧಿಸುತ್ತಾರೆ.”

ಸಮಸ್ಯೆ #3: ಹೆತ್ತವರು ನಿಮ್ಮನ್ನು ಅಂಕೆಯಲ್ಲಿಟ್ಟಿದ್ದಾರೋ ಎಂಬ ಅನಿಸಿಕೆ. ಗೊತ್ತಾದ ಸಮಯಕ್ಕೆ ಮನೆಗೆ ಬರುವ ಆಜ್ಞೆಯಲ್ಲದೆ ಮನೆಯ ಬೇರೆ ನಿಯಮಗಳೂ ಮಕ್ಕಳ ಹಿತಕ್ಕಾಗಿಯೇ ಎಂದು ಹೆತ್ತವರು ಹೇಳುತ್ತಾರೆ. ಇಪ್ಪತ್ತು ವಯಸ್ಸಿನ ಬ್ರ್ಯಾಂಡೀ ಹೇಳುವುದು: “ನನ್ನ ಹೆತ್ತವರು ಹಾಗೆ ಹೇಳುವಾಗ, ನಾನು ನನ್ನ ಸ್ವಂತ ಆಯ್ಕೆಯನ್ನು ಮಾಡುವುದು ಅಥವಾ ನನ್ನ ಅಭಿಪ್ರಾಯ ಹೇಳುವುದು ಅವರಿಗೆ ಇಷ್ಟವಿಲ್ಲ ಎಂದು ನನಗನಿಸುತ್ತದೆ.”

ನಿಭಾಯಿಸುವ ವಿಧ: ಮತ್ತಾಯ 5:41ರಲ್ಲಿರುವ ಯೇಸುವಿನ ಈ ಸಲಹೆಯನ್ನು ನೀವು ಅನ್ವಯಿಸಲು ಆಯ್ದುಕೊಳ್ಳಬಹುದು: “ಒಬ್ಬನು—ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀ ಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು.” ಈ ಮೂಲತತ್ತ್ವವನ್ನು ಅನ್ವಯಿಸಲು ಆ್ಯಶ್ಲೀ ಮತ್ತು ಅವಳ ಅಣ್ಣ ವ್ಯಾವಹಾರಿಕ ವಿಧಾನವನ್ನು ಕಂಡುಕೊಂಡರು. ಆ್ಯಶ್ಲೀ ಹೇಳುವುದು: “ನಾವು ಸಾಮಾನ್ಯವಾಗಿ ಹದಿನೈದು ನಿಮಿಷಕ್ಕೆ ಮುಂಚೆಯೇ ಮನೆಮುಟ್ಟಲು ಪ್ರಯತ್ನಿಸುತ್ತೇವೆ.” ನೀವು ಸಹ ಅದೇ ಗುರಿಯನ್ನಿಡಬಲ್ಲಿರೋ?

ಕಾರ್ಯಸಾಧಕವೇಕೆ: ಯಾವುದೇ ಕೆಲಸವನ್ನು ಒಲ್ಲದ ಮನಸ್ಸಿನಿಂದ ಮಾಡುವುದಕ್ಕಿಂತ ಇಷ್ಟಪೂರ್ವಕವಾಗಿ ಮಾಡುವುದರಲ್ಲೇ ಹೆಚ್ಚು ಸಂತೋಷ! ಯೋಚಿಸಿರಿ: ನೀವು ಮನೆಗೆ ಸ್ವಲ್ಪ ಬೇಗ ಬರಲು ಪ್ರಯತ್ನಿಸಿದಾಗ ನಿಮಗೆ ಸ್ವಲ್ಪ ಹೆಚ್ಚು ಸಮಯ ಸಿಗುವುದು. ಮತ್ತು ಈ ಮೂಲತತ್ತ್ವದ ಮರುಜ್ಞಾಪನವೂ ನಿಮಗಾಗಬಹುದು: ‘ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕು.’—ಫಿಲೆಮೋನ 14.

ಮನೆಗೆ ಬೇಗ ಬರುವುದರಿಂದ ಹೆತ್ತವರಿಗೆ ನಿಮ್ಮ ಮೇಲಿರುವ ಭರವಸವೂ ಹೆಚ್ಚುವುದು. 18 ವರ್ಷದ ವೇಡ್‌ ಹೇಳುವುದು: “ನೀವು ನಿಮ್ಮ ಹೆತ್ತವರ ವಿಶ್ವಾಸ ಗಳಿಸುವುದಾದರೆ ನಿಮ್ಮ ಮೇಲೆ ಅವರು ಹಾಕಿರುವ ನಿರ್ಬಂಧವೂ ಸಡಿಲವಾಗುವುದು.”

ಹೆತ್ತವರ ಆಜ್ಞೆಯು ನಿಮಗೊಡ್ಡುವ ಮತ್ತೊಂದು ಸವಾಲನ್ನು ಬರೆಯಿರಿ.

.....

ಈ ಸವಾಲನ್ನು ಎದುರಿಸಲು ನಿಮಗೆ ಯಾವುದು ಸಹಾಯಮಾಡುವುದು?

.....

ಇದು ಕಾರ್ಯಸಾಧಕವೆಂದು ಏಕೆ ನೆನಸುತ್ತೀರಿ?

.....

ಒಂದಲ್ಲ ಒಂದು ದಿನ ನೀವು ಹೆತ್ತವರಿಂದ ಬೇರೆಹೋಗುತ್ತೀರಿ. ಆಗ ನಿಮಗೆ ಸಾಕಷ್ಟು ಸ್ವಾತಂತ್ರ್ಯವಿರುವುದು. ಆ ತನಕ ತಾಳ್ಮೆಯಿಂದಿರಿ. 20 ವರ್ಷದ ಟಿಫನಿ ಹೇಳುವುದು: “ಈಗ ನೀವು ಬಯಸುವ ಎಲ್ಲಾ ಸ್ವಾತಂತ್ರ್ಯ ನಿಮಗಿಲ್ಲದಿರಬಹುದು. ಆದರೆ ನಿರ್ಬಂಧಗಳಿಗೆ ಹೊಂದಿಕೊಂಡು ಹೋಗುವುದನ್ನು ನೀವು ಕಲಿತುಕೊಳ್ಳುವಲ್ಲಿ ನಿಮ್ಮ ಹದಿಹರೆಯದ ವರ್ಷಗಳ ಕುರಿತು ಮುಂದೆ ವಿಷಾದಪಡಬೇಕೆಂದಿಲ್ಲ.” (g 10/08)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿಗಳು]

^ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಸಲಹೆಗಾಗಿ ಎಚ್ಚರ! ಜನವರಿ 2007ರ ಸಂಚಿಕೆಯಲ್ಲಿರುವ “ನನಗೆ ಇಷ್ಟೊಂದು ರೂಲ್ಸ್‌ ಯಾಕೆ? ಎಂಬ ಲೇಖನವನ್ನು ನೋಡಿ.

ಯೋಚಿಸಿ

◼ ಇಂತಿಷ್ಟೇ ಸಮಯಕ್ಕೆ ಮನೆಯಲ್ಲಿರಬೇಕೆಂಬ ಹೆತ್ತವರ ಆಜ್ಞೆಯು ನಿಮ್ಮ ಮೇಲಿರುವ ಅವರ ಚಿಂತೆಯನ್ನು ಹೇಗೆ ವ್ಯಕ್ತಪಡಿಸುತ್ತದೆ?

◼ ಹೆತ್ತವರ ಈ ಆಜ್ಞೆಯನ್ನು ಈಗಾಗಲೇ ನೀವು ಮೀರಿದ್ದರೆ ಅವರ ವಿಶ್ವಾಸವನ್ನು ಹೇಗೆ ಗಳಿಸಬಲ್ಲಿರಿ?

[ಪುಟ 24ರಲ್ಲಿರುವ ಚೌಕ]

ನಿಮ್ಮ ಸಮಪ್ರಾಯದವರು ಹೇಳುವುದು. . .

“ಇಂತಿಷ್ಟೇ ಸಮಯಕ್ಕೆ ಮನೆಗೆ ಬರಬೇಕು ಎಂಬ ಆಜ್ಞೆಯು ತರ್ಕಬದ್ಧ. ಏಕೆಂದರೆ ಸಾಕಷ್ಟು ನಿದ್ದೆ ಮಾಡದಿದ್ದರೆ ತಲೆ ಕೆಟ್ಟುಹೋಗುತ್ತದೆ!” —ಗೇಬ್‌, 17 ವರ್ಷ.

“ಹೇಳಿದ ಸಮಯಕ್ಕೆ ಮನೆಗೆ ಬರಬೇಕೆಂಬ ನಿಯಮವು ನನ್ನನ್ನು ಎಷ್ಟೋ ಸಲ ಬಚಾವ್‌ ಮಾಡಿದೆ. ಉದಾಹರಣೆಗೆ, ಒಮ್ಮೆ ಚಿಕ್ಕ ವಯಸ್ಸಿನ ಹುಡುಗರು ಪಾರ್ಟಿಗೆ ಡ್ರಿಂಕ್ಸ್‌ ತಕ್ಕೊಂಡು ಬಂದರು. ಅದನ್ನು ನೋಡಿದ ಕೂಡಲೆ ನಾನು ಮತ್ತು ನನ್ನ ಸ್ನೇಹಿತೆ ಹೆತ್ತವರ ಆಜ್ಞೆಯನ್ನು ಒಂದು ನೆವನವಾಗಿ ಉಪಯೋಗಿಸಿ ಅಲ್ಲಿಂದ ಕಾಲು ಕಿತ್ತೆವು.”—ಕೇಟೀ, 18 ವರ್ಷ.

[ಪುಟ 22ರಲ್ಲಿರುವ ಚೌಕ]

ಒಮ್ಮತಕ್ಕೆ ಬನ್ನಿ

ನೀವು ಮನೆಗೆ ಇಂತಿಷ್ಟೇ ಸಮಯಕ್ಕೆ ಬರಬೇಕೆಂಬ ಹೆತ್ತವರ ಆಜ್ಞೆ ಕುರಿತು ಅವರೊಂದಿಗೆ ಮಾತಾಡಿ, ಈ ಕೆಳಗಿನ ವಿಷಯಗಳ ಬಗ್ಗೆ ಇಬ್ಬರೂ ಒಮ್ಮತಕ್ಕೆ ಬರಲು ಪ್ರಯತ್ನಿಸಿ.

◼ ________________________________ದಿನಗಳಂದು ರಾತ್ರಿ ____________ ಗಂಟೆಯೊಳಗೆ ಬರುತ್ತೇನೆ; ಆದರೆ ________________________________ದಿನಗಳಂದು ____________ ಗಂಟೆಯೊಳಗೆ ಬರುತ್ತೇನೆ.

◼ ಸಮಯ ಮೀರುವಲ್ಲಿ ನನಗೆ ಕೊಡಲ್ಪಟ್ಟ ಅವಕಾಶವನ್ನು ಕಡಿಮೆಪಕ್ಷ ____________ ವಾರಗಳ ವರೆಗೆ ____________ ಗಂಟೆಯಿಂದ ____________ ಗಂಟೆಗೆ ಕಡಿಮೆಗೊಳಿಸಲಾಗುವುದು.

◼ ಕಡಿಮೆಪಕ್ಷ ____________ ತಿಂಗಳುಗಳ ವರೆಗೆ ನಾನು ಗೊತ್ತಾದ ಸಮಯದೊಳಗೆ ಮನೆಗೆ ಬರುವಲ್ಲಿ ನಿರ್ಧರಿತ ಸಮಯವನ್ನು ಹೆಚ್ಚಿಸಲಾಗುವುದು.

[ಪುಟ 22ರಲ್ಲಿರುವ ಚೌಕ/ಚಿತ್ರ]

ಸಮಯವನ್ನು ಹೆಚ್ಚಿಸಬೇಕಾದಾಗ . . .

◼ ತಕ್ಕ ಸಮಯದಲ್ಲಿ ಆ ವಿಷಯವನ್ನು ಹೆತ್ತವರಿಗೆ ತಿಳಿಸಿ.—ಪ್ರಸಂಗಿ 3:1, 7.

◼ ಸಮಯಕ್ಕೆ ಸರಿಯಾಗಿ ಬರುವ ಮೂಲಕ ಹೆತ್ತವರ ವಿಶ್ವಾಸ ಗಳಿಸಿ.—ಮತ್ತಾಯ 5:37.

◼ ಪರೀಕ್ಷಿಸಲಿಕ್ಕಾಗಿ, ಸ್ವಲ್ಪ ದಿನಗಳ ತನಕ ಸಮಯವನ್ನು ಹೆಚ್ಚಿಸಲು ಕೇಳಿಕೊಳ್ಳಿ.—ಮತ್ತಾಯ 25:23.

[ಪುಟ 23ರಲ್ಲಿರುವ ಚೌಕ]

ಹೆತ್ತವರಿಗೆ ಕಿವಿಮಾತು

◼ ನಿಮ್ಮ ಮಗನಿಗೆ ಮನೆಗೆ ಬರಲು ಗೊತ್ತುಮಾಡಿದ ಸಮಯಮೀರಿ 30 ನಿಮಿಷ ಹೆಚ್ಚಾಗಿದೆ. ಆಗ ಬಾಗಿಲು ಕಿರ್ರ್‌ ಎನ್ನುತ್ತಾ ಮೆಲ್ಲನೆ ತೆರೆಯುತ್ತದೆ. ‘ನಾನು ಮಲಗಿದ್ದೇನೆಂದು ಅವನು ನೆನಸಿರಬೇಕು’ ಎಂದು ನೀವು ಅಂದುಕೊಳ್ಳುತ್ತೀರಿ. ಆದರೆ ನೀವು ಎಚ್ಚರವಾಗಿದ್ದು, ಬಾಗಿಲ ಬಳಿಯಲ್ಲೇ ಕುಳಿತು ಅವನಿಗಾಗಿ ಕಾಯುತ್ತಿದ್ದೀರಿ. ಅವನು ಬಾಗಿಲು ತೆರೆದು ಒಳಗೆ ಬರುತ್ತಾನೆ. ನಿಮ್ಮನ್ನು ನೋಡುತ್ತಾನೆ. ಈಗ ನೀವೇನು ಮಾಡುವಿರಿ? ಏನು ಹೇಳುವಿರಿ?

ಒಂದೋ ನೀವು ರಂಪಮಾಡದೆ ‘ಹುಡುಗರು ಯಾವಾಗಲೂ ಹೀಗೆ’ ಎಂದು ಹೇಳಿ ಸುಮ್ಮನಾಗಬಹುದು. ಇಲ್ಲವೆ ಕೋಪದಿಂದ, ‘ಇನ್ನು ಮುಂದೆ ನಿನ್ನನ್ನು ಎಲ್ಲಿಗೂ ಕಳುಹಿಸುವುದಿಲ್ಲ’ ಎಂದು ಅರಚಬಹುದು. ಆದರೆ, ದುಡುಕಿ ಕ್ರಿಯೆಗೈಯುವುದಕ್ಕಿಂತ ಮೊದಲು ಅವನು ಹೇಳುವುದನ್ನು ಕೇಳಿ. ಏಕೆಂದರೆ ಅವನು ತಡವಾಗಿ ಬಂದಿರುವುದಕ್ಕೆ ಸಕಾರಣವಿರಬಹುದು. ಆಮೇಲೆ ಆ ಸಂದರ್ಭವನ್ನು ಉಪಯೋಗಿಸಿ ಪ್ರಾಮುಖ್ಯ ಪಾಠ ಕಲಿಸಿರಿ. ನೀವದನ್ನು ಹೇಗೆ ಮಾಡಬಲ್ಲಿರಿ?

ಸೂಚನೆ: ಆ ಬಗ್ಗೆ ನಾಳೆ ಮಾತಾಡುವಿರೆಂದು ನಿಮ್ಮ ಮಗನಿಗೆ/ಳಿಗೆ ಹೇಳಿ. ಸೂಕ್ತ ಸಮಯದಲ್ಲಿ ಅವನೊಂದಿಗೆ ಕೂತು ನೀವೇನು ಮಾಡಲಿರುವಿರಿ ಎಂದು ತಿಳಿಸಿ. ಕೆಲವು ಹೆತ್ತವರು ತಮ್ಮ ಮಗ/ಳು ಸರಿ ಸಮಯಕ್ಕೆ ಬಾರದಿದ್ದಾಗ, ಮರುದಿನದಿಂದ ಇನ್ನೂ 30 ನಿಮಿಷ ಬೇಗ ಬರುವಂತೆ ಹೇಳುತ್ತಾರೆ. ಆದರೆ ನಿಮ್ಮ ಮಗ/ಳು ಕ್ರಮವಾಗಿ ಸಮಯಕ್ಕೆ ಸರಿಯಾಗಿ ಬಂದು ನಿಮ್ಮ ವಿಶ್ವಾಸ ಗಳಿಸಿದರೆ ಸ್ವಲ್ಪ ಹೆಚ್ಚು ಸ್ವಾತಂತ್ರ್ಯ ಕೊಡುವುದರ ಬಗ್ಗೆ ನೀವು ಯೋಚಿಸಬಹುದು. ಪ್ರಾಯಶಃ ನೀವು ಅವರಿಗೆ ಗೊತ್ತಾದ ಸಮಯವನ್ನು ಹೆಚ್ಚಿಸಲೂಬಹುದು. ಯಾವ ಸಮಯಕ್ಕೆ ಮನೆಯಲ್ಲಿರಬೇಕೆಂದೂ ಆ ಸಮಯ ಮೀರುವಲ್ಲಿ ಶಿಕ್ಷೆ ಏನೆಂದೂ ನಿಮ್ಮ ಮಗ/ಳಿಗೆ ಸ್ಪಷ್ಟವಾಗಿ ತಿಳಿದಿರಲಿ. ಮೀರಿದಲ್ಲಿ ಹೇಳಿದಂತೆ ಶಿಕ್ಷೆ ಕೊಡಿ.

ಎಚ್ಚರಿಕೆ: “ನಿಮ್ಮ ನ್ಯಾಯಸಮ್ಮತತೆ ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ” ಎನ್ನುತ್ತದೆ ಬೈಬಲ್‌. (ಫಿಲಿಪ್ಪಿ 4:5, NW) ನೀವು ಆಜ್ಞೆ ವಿಧಿಸುವ ಮೊದಲು ವಿಷಯವನ್ನು ಮಗ ಅಥವಾ ಮಗಳೊಂದಿಗೆ ಚರ್ಚಿಸಿ, ಅವರ ಇಷ್ಟ ಮತ್ತು ಅದಕ್ಕಿರುವ ಕಾರಣ ತಿಳಿಸುವಂತೆ ಕೇಳಿಕೊಳ್ಳಿ. ಅವರ ಕೋರಿಕೆಯನ್ನು ಪರಿಗಣಿಸಿ ನೋಡಿ. ಮಕ್ಕಳು ಹೊಣೆಗಾರಿಕೆಯಿಂದ ವರ್ತಿಸಿದ್ದಲ್ಲಿ ಅವರ ಯೋಗ್ಯ ಕೋರಿಕೆಗಳನ್ನು ಈಡೇರಿಸಿ.

[ಪುಟ 23ರಲ್ಲಿರುವ ಚಿತ್ರವಿವರಣೆ]

ಸಮಯನಿಷ್ಠೆ ನಮ್ಮ ಜೀವಾಳ. ಆದುದರಿಂದ ಮಕ್ಕಳು ಮನೆಗೆ ಬರುವ ನಿಗಧಿತ ಸಮಯವನ್ನು ಗೊತ್ತುಮಾಡುವುದು ಅವರನ್ನು ತೊಂದರೆಗೀಡಾಗುವುದರಿಂದ ತಪ್ಪಿಸುತ್ತದೆ. ಮಾತ್ರವಲ್ಲ ಹೆತ್ತವರಿಂದ ದೂರ ಹೋದಾಗಲೂ ಮಕ್ಕಳಿಗೆ ಪ್ರಯೋಜನಕರವಾಗುವ ಶಿಸ್ತು ಅದಾಗಿದೆ.—ಜ್ಞಾನೋಕ್ತಿ 22:6.