ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಿಳಿಚಿಕೆ ಪೀಡಿತ ಬದುಕು

ಬಿಳಿಚಿಕೆ ಪೀಡಿತ ಬದುಕು

ಬಿಳಿಚಿಕೆ ಪೀಡಿತ ಬದುಕು

ಬೆನಿನ್‌ನ ಎಚ್ಚರ! ಲೇಖಕರಿಂದ

“ನನ್ನ ಕುಲದ ಕುರಿತ ಮಾಹಿತಿಗಾಗಿ ವಿನಂತಿಸುವ ಅರ್ಜಿಯನ್ನು ಭರ್ತಿಮಾಡುವಾಗ ನಾನು ಯಾವಾಗಲೂ ‘ಕಪ್ಪು ವರ್ಣ’ದವನೆಂದು ಗುರುತಿಸುತ್ತೇನೆ. ಆದರೆ ಹೆಚ್ಚಿನ ‘ಬಿಳಿ ವರ್ಣ’ದವರಿಗಿಂತ ನಾನು ಹೆಚ್ಚು ಬಿಳಿಯನೆಂದು ಹೇಳಬೇಕು” ಎನ್ನುತ್ತಾನೆ ಜಾನ್‌. ಏಕೆಂದರೆ, ಬೆನಿನ್‌ ಮತ್ತು ನೈಜಿರೀಯ ದೇಶಗಳ ಗಡಿಯಲ್ಲಿ ಜೀವಿಸುವ ಪಶ್ಚಿಮ ಆಫ್ರಿಕದವನಾದ ಈ ಜಾನ್‌ ಬಿಳಿಚಿಕೆ ಅಂದರೆ ಆಲ್ಬಿನಿಸಂ ಎಂಬ ರೋಗ ಬಾಧಿತನು. ಇದು ಒಂದು ಅನುವಂಶಿಕ ಕಾಯಿಲೆ. ಇದರಲ್ಲಿ ಒಬ್ಬನ ಕಣ್ಣು, ಚರ್ಮ ಅಥವಾ ಕೂದಲುಗಳಲ್ಲಿ (ಕೆಲವೊಮ್ಮೆ ಕಣ್ಣಿನಲ್ಲಿ ಮಾತ್ರ) ವರ್ಣಕತೆ (Pigmentation) ಸ್ವಲ್ಪ ಇರುತ್ತದೆ ಅಥವಾ ಇರುವುದೇ ಇಲ್ಲ. ಈ ಬಿಳಿಚಿಕೆಯಿಂದ (Albinism) ಎಷ್ಟು ವ್ಯಾಪಕವಾಗಿ ಜನರು ಪೀಡಿತರಾಗಿದ್ದಾರೆ? ಅದು ಒಬ್ಬನ ಬದುಕನ್ನು ಹೇಗೆ ಬಾಧಿಸುತ್ತದೆ? ಈ ಬಿಳಿಚಿಕೆಯ ಕಾಯಿಲೆಯೊಂದಿಗೆ ಜೀವಿಸಲು ಒಬ್ಬನಿಗೆ ಯಾವುದು ಸಹಾಯಕಾರಿ? *

ಈ ಬಿಳಿಚಿಕೆ ಕಪ್ಪು ವರ್ಣೀಯರಲ್ಲಿ ಹೆಚ್ಚಾಗಿ ಕಂಡುಬರುತ್ತದಾದರೂ ಅದು ಎಲ್ಲ ಜನಾಂಗ, ಕುಲ, ಜನರನ್ನು ಬಾಧಿಸುತ್ತದೆ. ಸುಮಾರು 20,000 ಮಂದಿಯಲ್ಲಿ ಒಬ್ಬರು ಈ ಬಿಳಿಚು ರೋಗದಿಂದ ಬಾಧಿತರಾಗುತ್ತಾರೆಂದು ಅಂದಾಜುಮಾಡಲಾಗಿದೆ.

ಬಿಳಿಚು ರೋಗದ ವಂಶವಾಹಿಯು (Genes) ಯಾವುದೇ ಸುಳಿವಿಲ್ಲದೆ ಮುಂದಿನ ಸಂತತಿಗಳಿಗೆ ದಾಟಬಲ್ಲದು. ಜಾನ್‌ನ ವಿಷಯದಲ್ಲಿ ಇದು ಸತ್ಯವಾಗಿತ್ತು. ಅವನ ಸಂಬಂಧಿಗಳಲ್ಲಿ ಯಾರಿಗೂ ತಮ್ಮ ಪೂರ್ವಜರಲ್ಲಿ ಈ ಬಿಳಿಚಿಕೆ ರೋಗ ಇದ್ದದ್ದು ನೆನಪಿಲ್ಲ.

ಈ “ಬಿಳಿಚಿಕೆ” ಎಂಬ ಪದ 17ನೆಯ ಶತಮಾನದ ಪೋರ್ಚುಗಿಸ್‌ ಪರಿಶೋಧಕರಿಂದ ಬಂದಿದೆಯೆಂದು ಅನೇಕರ ಅಭಿಪ್ರಾಯ. ಅವರು ಹಡಗಿನಲ್ಲಿ ಪಶ್ಚಿಮ ಆಫ್ರಿಕದ ಕರಾವಳಿಯಲ್ಲಿ ಪಯಣಿಸುತ್ತಿದ್ದಾಗ ಅವರಿಗೆ ಕಪ್ಪುವರ್ಣೀಯರು ಮತ್ತು ಬಿಳಿವರ್ಣೀಯರು ಕಾಣಸಿಕ್ಕಿದರು. ಇವರು ಎರಡು ವಿಭಿನ್ನ ಕುಲದವರೆಂದು ಊಹಿಸಿದ ಅವರು ತಮ್ಮ ಭಾಷಾರ್ಥಕ್ಕನುಸಾರ “ಕಪ್ಪು” ಬಣ್ಣದವರನ್ನು ನೀಗ್ರೋಗಳೆಂದೂ “ಬಿಳಿ” ಬಣ್ಣದವರನ್ನು ಬಿಳಿಚರೆಂದೂ ಕರೆದರು.

ಚರ್ಮ ಮತ್ತು ಕಣ್ಣುಗಳ ಮೇಲೆ ಪರಿಣಾಮ

ಬಿಳಿಯರಲ್ಲಿ ಹೆಚ್ಚಿನವರು ತಮ್ಮ ಮೈಯನ್ನು ಸೂರ್ಯತಾಪಕ್ಕೆ ಒಡ್ಡುವಲ್ಲಿ, ಅವರ ಚರ್ಮವು ಕಡುಗಂದು ಬಣ್ಣಕ್ಕೆ ತಿರುಗುತ್ತದೆ. ಏಕೆಂದರೆ ಆಗ ಚರ್ಮವನ್ನು ಬಿಸಿಲಿನಿಂದ ಸಂರಕ್ಷಿಸಲು ಮೆಲನಿನ್‌ (Melanin) ಎಂಬ ವರ್ಣದ್ರವ್ಯ ದೇಹದಲ್ಲಿ ಉತ್ಪನ್ನವಾಗುತ್ತದೆ. ಆದರೆ ಜಾನ್‌ ಪೀಡಿತನಾಗಿರುವುದು ಅತಿ ಸಾಮಾನ್ಯ ರೀತಿಯ ಆಕ್ಯುಲೋಕ್ಯುಟೇನಿಯಸ್‌ ಬಿಳಿಚಿಕೆಯಿಂದ. * ಅವನ ಚರ್ಮ, ಕೂದಲು ಮತ್ತು ಕಣ್ಣುಗಳಲ್ಲಿ ಕಡುಗಂದು ವರ್ಣದ್ರವ್ಯವಾದ ಮೆಲನಿನ್‌ ಇಲ್ಲ. ಅದು ಅವನ ಚರ್ಮವನ್ನು ಹೇಗೆ ಬಾಧಿಸುತ್ತದೆ? ಹೇಗೆಂದರೆ ವರ್ಣದ್ರವ್ಯವಿಲ್ಲದಿರುವಲ್ಲಿ, ಈ ಬಿಳಿಚಿಕೆ ವ್ಯಕ್ತಿಯ ಚರ್ಮ ಸುಲಭವಾಗಿ ಬಿಸಿಲುಗಂದು (Sunburn) ಆಗುತ್ತದೆ. ಬಿಸಿಲುಗಂದುವಿಕೆಯ ಈ ಸ್ಥಿತಿ ಅಹಿತಕರವೂ ನೋವುಭರಿತವೂ ಆಗಿದೆ. ಚರ್ಮವನ್ನು ಸರಿಯಾಗಿ ಸಂರಕ್ಷಿಸದಿದ್ದರೆ ಈ ಬಿಳಿಚಿಕೆ ಪೀಡಿತರು ಚರ್ಮದ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವೂ ಇದೆ. ವಿಶೇಷವಾಗಿ ಉಷ್ಣವಲಯಗಳಲ್ಲಿ ಇದರ ಸಂಭವನೀಯತೆ ಹೆಚ್ಚು.

ಬಿಳಿಚಿಕೆ ರೋಗದಿಂದ ನಮ್ಮನ್ನು ಕಾಪಾಡಿಕೊಳ್ಳುವ ಪ್ರಥಮ ರಕ್ಷೆಯು ಯಾವುದೆಂದರೆ ಯೋಗ್ಯ ರೀತಿಯ ಬಟ್ಟೆಯನ್ನು ಧರಿಸುವುದಾಗಿದೆ. ದೃಷ್ಟಾಂತಕ್ಕೆ ಈ ಜಾನ್‌ ಒಬ್ಬ ಬೇಸಾಯಗಾರ. ಆದುದರಿಂದ ಗದ್ದೆಯಲ್ಲಿ ಕೆಲಸ ಮಾಡುವಾಗ ಅವನು ಸುತ್ತುಪಟ್ಟಿಯಿರುವ ಟೋಪಿ ಮತ್ತು ಉದ್ದ ತೋಳಿನ ಶರ್ಟನ್ನು ಧರಿಸುತ್ತಾನೆ. ಅವನಿಗೆ ಈ ರಕ್ಷೆ ಇದ್ದರೂ ಅವನನ್ನುವುದು: “ಕೆಲವು ಬಾರಿ ನನ್ನ ಇಡೀ ದೇಹ ಒಳಗಿಂದ ಸುಡುತ್ತಿದೆಯೋ ಎಂಬಂತೆ ನನಗನಿ​ಸುತ್ತದೆ. ಮನೆಗೆ ಹಿಂದಿರುಗಿ ಕೈ ತುರಿಸುವಾಗ ಕೆಲವು ಸಲ ಚರ್ಮವೇ ಸುಲಿದು ಬರುತ್ತದೆ.”

ಲಭ್ಯವಿರುವಲ್ಲಿ ಸನ್‌ ಸ್ಕ್ರೀನ್‌ ಲೋಷನನ್ನು ಬಳಸುವುದು ಇನ್ನೊಂದು ರಕ್ಷೆ. ಈ ಲೋಷನ್‌ನಲ್ಲಿ ಸೂರ್ಯತಾಪದಿಂದ ರಕ್ಷಿಸುವ ಕಡಮೆ ಪಕ್ಷ 15 ಫ್ಯಾಕ್ಟರ್‌ ಸಂರಕ್ಷಣೆ ಇರುವುದಾದರೆ ಅದು ಅತ್ಯುತ್ತಮ. ಇದನ್ನು ಬಿಸಿಲಿಗೆ ಹೋಗುವುದಕ್ಕೆ 30 ನಿಮಿಷ ಮುಂಚೆ ಧಾರಾಳವಾಗಿ ಲೇಪಿಸಬೇಕು ಮತ್ತು ಪ್ರತಿ ಎರಡು ತಾಸುಗಳಿಗೊಮ್ಮೆ ಸಹ.

ಈ ಬಿಳಿಚಿಕೆ ಕಣ್ಣನ್ನೂ ವಿವಿಧ ವಿಧಗಳಲ್ಲಿ ಬಾಧಿಸಬಲ್ಲದು. ಕಣ್ಪೊರೆಯಲ್ಲಿರುವ ವರ್ಣದ್ರವ್ಯವು ಪಾಪೆಯ ಮೂಲಕ ಮಾತ್ರವೇ ಸೂರ್ಯನಬೆಳಕು ಕಣ್ಣಿನೊಳಗೆ ಪ್ರವೇಶಿಸುವಂತೆ ಮಾಡುತ್ತದೆ. ಆದರೆ ಒಬ್ಬ ಬಿಳಿಚಿಕೆ ರೋಗಿಯ ಕಣ್ಪೊರೆ ಹೆಚ್ಚುಕಡಮೆ ಪೂರ್ತಿ ಪಾರದರ್ಶಕವಾಗಿರುತ್ತದೆ. ಆದ್ದರಿಂದ ಬೆಳಕು ಕಣ್ಪೊರೆಯನ್ನು ತೂರಿಹೋಗಿ ತುರಿಕೆಯನ್ನು ಉಂಟುಮಾಡುತ್ತದೆ. ಇದನ್ನು ತಡೆಯಲು ಚಾಚುಮರೆಯ ಟೋಪಿಗಳನ್ನೊ ಇಲ್ಲವೆ ನೇರಳಾತೀತ ಕನ್ನಡಕಗಳನ್ನೊ ಹಾಕುತ್ತಾರೆ. ಇತರರು ಬಣ್ಣದ ಕಾಂಟ್ಯಾಕ್ಟ್‌-ಲೆನ್ಸ್‌ ಧರಿಸುತ್ತಾರೆ. ಅನೇಕ ದಿನಗಳ ತನಕ ರಕ್ಷಕ ಕನ್ನಡಕವಿಲ್ಲದೆ ಕೆಲಸ ಮಾಡಬಲ್ಲೆನೆಂದು ಜಾನ್‌ ಹೇಳುತ್ತಾನೆ. ಆದರೆ ರಾತ್ರಿಯಲ್ಲಿ ವಾಹನಗಳ ಹೆಡ್‌ಲೈಟ್‌ನಿಂದ ಅವನಿಗೆ ಕೆಲವೊಮ್ಮೆ ತೊಂದರೆಯಾಗುತ್ತದೆ.

ಬಿಳಿಚರ ಕಣ್ಣು ನಸುಗೆಂಪು ಎಂಬುದು ಸಾಮಾನ್ಯ ಅಭಿಪ್ರಾಯವಾದರೂ ಅದು ತಪ್ಪು ತಿಳಿವಳಿಕೆ. ಬಿಳಿಚರಲ್ಲಿ ಹೆಚ್ಚಿನವರ ಕಣ್ಪೊರೆಗಳು ಮಂದಬೂದು, ಕಂದು ಇಲ್ಲವೆ ನೀಲ ಬಣ್ಣದ್ದಾಗಿವೆ. ಹಾಗಾದರೆ, ಅವರು ಕೆಂಪು ಕಣ್ಣುಳ್ಳವರಾಗಿ ತೋರುವುದೇಕೆ? ಬಿಳಿಚಿಕೆಯ ಕುರಿತ ನಿಜತ್ವಗಳು (ಇಂಗ್ಲಿಷ್‌) ಪುಸ್ತಕ ಹೇಳುವುದು: “ಬೆಳಕಿನ ಕೆಲವು ಪರಿಸ್ಥಿತಿಗಳಲ್ಲಿ, ನಸುಗೆಂಪು ಅಥವಾ ನೇರಳೆ ಬಣ್ಣವು ತೀರ ಕೊಂಚ ವರ್ಣದ್ರವ್ಯವಿರುವ ಕಣ್ಪೊರೆಯ ಮೂಲಕ ಪ್ರತಿಬಿಂಬಿಸುತ್ತದೆ. ಈ ಕೆಂಪು ಪ್ರತಿಫಲಿತ ಬೆಳಕು ಅಕ್ಷಿಪಟಲದಿಂದ ಹೊರಬರುತ್ತದೆ. ಈ ಪ್ರಕ್ರಿಯೆಯನ್ನು ಕೆಂಪು ಕಣ್ಣಿಗೆ, ಅಂದರೆ ಫ್ಲ್ಯಾಷ್‌ ಫೋಟೋಗಳಲ್ಲಿ ಕೆಲವು ಬಾರಿ ಕಂಡುಬರುವ ಕೆಂಪಗಿನ ಪ್ರತಿಫಲನಕ್ಕೆ ಹೋಲಿಸಬಹುದು.

ಬಿಳಿಚರಲ್ಲಿ ಕಣ್ಣಿನ ರೋಗಗಳು ಸಾಮಾನ್ಯವಾಗಿವೆ. ಅದರಲ್ಲಿ ಒಂದು ರೋಗ ಅಕ್ಷಿಪಟಲದಿಂದ ನರಗಳು ಮಿದುಳಿಗೆ ತಪ್ಪಾಗಿ ಜೋಡಣೆಯಾಗಿರುವುದೇ. ಇದರ ಪರಿಣಾಮವಾಗಿ ಕಣ್ಣುಗಳು ಏಕಕಾಲಿಕವಾಗಿ ಸರಿಯಾಗಿ ಕಾರ್ಯನಡಿಸುವುದಿಲ್ಲ. ಒಂದು ವಸ್ತುವು ತನ್ನಿಂದ ಎಷ್ಟು ದೂರದಲ್ಲಿದೆ ಎಂದು ತಿಳಿಯುವುದು ಒಬ್ಬನಿಗೆ ಕಷ್ಟ. ಈ ಸ್ಥಿತಿಯನ್ನು ಮೆಳ್ಳೆಗಣ್ಣು (Strabismus) ಎಂದು ಕರೆಯುತ್ತಾರೆ. ಇದರ ಚಿಕಿತ್ಸೆಯಲ್ಲಿ ಕನ್ನಡಕದ ಉಪಯೋಗ ಅಥವಾ ಶಸ್ತ್ರಕ್ರಿಯೆಯು ಒಳಗೊಳ್ಳಬಹುದು.

ಅನೇಕ ದೇಶಗಳಲ್ಲಿ ಇದರ ಚಿಕಿತ್ಸೆ ಲಭ್ಯವಿರುವುದಿಲ್ಲ ಇಲ್ಲವೆ ತೀರ ದುಬಾರಿ. ಮೆಳ್ಳೆಗಣ್ಣಿನ ಸಮಸ್ಯೆಯಿರುವ ಜಾನ್‌ ಅದನ್ನು ಹೇಗೆ ನಿಭಾಯಿಸುತ್ತಿದ್ದಾನೆ? ಅವನು ಹೇಳುವುದು: “ನಾನು ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ರಸ್ತೆ ದಾಟುವಾಗ ನಾನು ಕಣ್ಣನ್ನು ಮಾತ್ರವಲ್ಲ ಕಿವಿಯನ್ನೂ ಬಳಸುತ್ತೇನೆ. ಒಂದು ಕಾರ್‌ ಬರುವ ಸದ್ದು ಕೇಳಿಸುವಲ್ಲಿ, ರಸ್ತೆ ದಾಟುವುದು ಸುರಕ್ಷಿತವಲ್ಲವೆಂದು ನನಗೆ ಗೊತ್ತು.”

ಕಣ್ಣಿನ ಅನೈಚ್ಛಿಕ ನಡುಕವಾದ ಅಕ್ಷಿದೋಲನ (Nystagmus) ಸಹ ಬಿಳಿಚಿಕೆಯಿಂದ ಬರಸಾಧ್ಯವಿದೆ. ಇದು ಅತಿ ಸಮೀಪದೃಷ್ಟಿ ಇಲ್ಲವೆ ಅತಿ ದೂರದೃಷ್ಟಿಯಂಥ ದೃಷ್ಟಿದೋಷಕ್ಕೆ ನಡೆಸಬಹುದು. ಕನ್ನಡಕಗಳು ಇಲ್ಲವೆ ಕಾಂಟ್ಯಾಕ್ಟ್‌-ಲೆನ್ಸ್‌ ಕೆಲವೊಮ್ಮೆ ಈ ದೃಷ್ಟಿದೋಷಕ್ಕೆ ನೆರವಾಗಬಹುದಾದರೂ ಸಮಸ್ಯೆಯ ಮೂಲಭೂತ ಕಾರಣವನ್ನು ಇವು ಸರಿಪಡಿಸುವುದಿಲ್ಲ. ಓದುವಾಗ ಕಣ್ಣ ಬಳಿ ಬೆರಳನ್ನಿಡುವ ಮೂಲಕ ಇಲ್ಲವೆ ತಲೆಯನ್ನು ವಾಲಿಸುವ ಮೂಲಕ ಕೆಲವರು ಈ ಅಕ್ಷಿದೋಲನವನ್ನು ಕಡಿಮೆಗೊಳಿಸಲು ಕಲಿತಿದ್ದಾರೆ.

ಆದರೆ ಜಾನ್‌ನ ಅತಿ ಕಷ್ಟಕರವಾದ ಅಡಚಣೆ ಮೆಳ್ಳೆಗಣ್ಣಾಗಲಿ ಅಕ್ಷಿದೋಲನವಾಗಲಿ ಅಲ್ಲ. ಅದು ವಿಪರೀತ ಸಮೀಪದೃಷ್ಟಿ​ದೋಷವೇ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದ ಜಾನ್‌ ಹೇಳುವುದು: “ಓದುವಾಗ ಪುಸ್ತಕವನ್ನು ಕಣ್ಣಿಗೆ ಅತಿಸಮೀಪ ಇಡಬೇಕಾಗುತ್ತದೆ. ಒಮ್ಮೆ ಅಕ್ಷರಗಳು ಸರಿಯಾಗಿ ಕಂಡಿತೆಂದರೆ ನಾನು ವೇಗವಾಗಿ ಓದಬಲ್ಲೆ. ಇದು ನನ್ನ ಪ್ರತಿದಿನದ ಬೈಬಲ್‌ ವಾಚನಕ್ಕೆ ಅತ್ಯಗತ್ಯ.” ಅವನು ಮತ್ತೂ ಹೇಳುವುದು: “ಕ್ರೈಸ್ತ ಕೂಟಗಳಲ್ಲಿ ಭಾಷಣ ಕೊಡುವಾಗ, ನನ್ನ ಟಿಪ್ಪಣಿಯ ಮೇಲೆ ಹೆಚ್ಚು ಹೊಂದಿಕೊಳ್ಳದಿರಲಿಕ್ಕಾಗಿ ನಾನು ಚೆನ್ನಾಗಿ ತಯಾರಿಸುತ್ತೇನೆ. ಕಾವಲಿನಬುರುಜು ದೊಡ್ಡಕ್ಷರಗಳ ಸಂಚಿಕೆ ಸಹ ನನ್ನ ಯೊರಬ ಭಾಷೆಯಲ್ಲಿ ದೊರೆಯುವುದರಿಂದ ನಾನು ತುಂಬ ಸಂತೋಷಿತನು.”

ಕಣ್ಣಿನ ಬಿಳಿಚಿಕೆ ರೋಗವಿರುವ ಮಗುವಿಗೆ ಶಾಲೆ ಹೋಗುವುದು ಕಷ್ಟಕರವಾಗಿರಬಲ್ಲದು. ಹೆತ್ತವರು ಮುಂದಡಿಯಿಟ್ಟು ಅಧ್ಯಾಪಕರಿಗೆ ಇಲ್ಲವೆ ಶಾಲಾಧಿಕಾರಿಗಳಿಗೆ ವಿಷಯವನ್ನು ತಿಳಿಸುವಲ್ಲಿ ಬೇಕಾದ ಪ್ರಾಯೋಗಿಕ ಸಹಾಯವನ್ನು ಪಡೆದುಕೊಳ್ಳಬಲ್ಲರು. ಉದಾಹರಣೆಗೆ, ವಿವಿಧ ಬಣ್ಣದ ಹಿನ್ನೆಲೆಗಳಿದ್ದು ಓದಲು ಸುಲಭವಾದ ಪುಸ್ತಕಗಳು, ದೊಡ್ಡಕ್ಷರಗಳ ಪಠ್ಯಪುಸ್ತಕಗಳು ಮತ್ತು ಆಡಿಯೋ ಟೇಪುಗಳು ಕೆಲವು ಶಾಲೆಗಳಲ್ಲಿ ಲಭ್ಯವಿವೆ. ಹೆತ್ತವರ, ಅಧ್ಯಾಪಕರ ಮತ್ತು ಶಾಲಾಧಿಕಾರಿಗಳ ಮಧ್ಯೆ ಉತ್ತಮ ಸಹಕಾರವಿರುವಲ್ಲಿ, ಕಣ್ಣಿನ ಬಿಳಿಚಿಕೆ ಇರುವ ಮಗು ತನ್ನ ಶಾಲಾ ವರುಷಗಳನ್ನು ಯಶಸ್ವಿಕರವಾಗಿ ಮುಗಿಸಬಲ್ಲದು.

ಸಾಮಾಜಿಕ ಸವಾಲುಗಳು

ಬಿಳಿಚಿಕೆಯ ಸಮಸ್ಯೆಯಿರುವ ಹೆಚ್ಚಿನವರು ತಮ್ಮ ಶಾರೀರಿಕ ಇತಿಮಿತಿಗಳಿಗೆ ಹೊಂದಿಕೊಂಡು ಜೀವಿಸಲು ಕಲಿತುಕೊಳ್ಳುತ್ತಾರೆ. ಆದರೂ ಅನೇಕರಿಗೆ ಈ ರೋಗಸ್ಥಿತಿಯ ಕಾರಣ ಬರುವ ಸಾಮಾಜಿಕ ನಿಂದೆಯನ್ನು ಸಹಿಸಿಕೊಳ್ಳುವುದು ಕಷ್ಟಕರ. ಇದು ಮಕ್ಕಳಿಗೆ ವಿಶೇಷವಾಗಿ ಸಮಸ್ಯೆಯನ್ನು ಒಡ್ಡಬಲ್ಲದು.

ಪಶ್ಚಿಮ ಆಫ್ರಿಕದ ಕೆಲವು ಭಾಗಗಳಲ್ಲಿ ಬಿಳಿಚಿಕೆ ಇರುವ ಮಕ್ಕಳಿಗೆ ಕುಲಸಂಬಂಧವಾದ ಭಾಷೆಯಲ್ಲಿ ಅಪಹಾಸ್ಯ ಅಥವಾ ಕುಚೋದ್ಯ ಮಾಡುತ್ತಾರೆ. ಯೊರಬ ಭಾಷೆ ಮಾತಾಡುವ ಕೆಲವು ಪ್ರದೇಶಗಳಲ್ಲಿ ಇವರನ್ನು “ಆಫಿನ್‌” ಅಂದರೆ “ವಿಕಾರ ರೂಪ” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ವಯಸ್ಕರು ಮಕ್ಕಳಷ್ಟು ಹೆಚ್ಚು ಕುಚೋದ್ಯಕ್ಕೆ ಒಳಗಾಗುವುದಿಲ್ಲ. ಪಶ್ಚಿಮ ಆಫ್ರಿಕದಲ್ಲಿ ಜನರು ಹೆಚ್ಚಾಗಿ ಮನೆಯ ಹೊರಗೆ ಇರುತ್ತಾರಾದರೂ ಬಿಳಿಚಿಕೆ ಪೀಡಿತರಾದ ಕೆಲವರು ಮನೆಯ ಒಳಗೇ ಇರಲು ಮನಸ್ಸುಮಾಡುತ್ತಾರೆ. ಆದರೆ ಇದು ಕೀಳರಿಮೆಗೆ ಮತ್ತು ಯಾವ ಕೆಲಸಕ್ಕೂ ಬಾರದವರೆಂಬ ಭಾವನೆಗೆ ನಡೆಸಬಲ್ಲದು. ದೇವರ ವಾಕ್ಯದ ಸತ್ಯವನ್ನು ಕಲಿಯುವ ಮುಂಚೆ ಜಾನ್‌ ಕೂಡ ಹೀಗೆಯೇ ಭಾವಿಸಿದ್ದನು. ಆದರೆ 1974ರಲ್ಲಿ ದೀಕ್ಷಾಸ್ನಾನದ ಬಳಿಕ ಜೀವನದ ಕುರಿತ ಅವನ ಪೂರ್ಣ ಮನೋಭಾವವೇ ಬದಲಾವಣೆ ಹೊಂದಿತು. ಜಾನ್‌ ಮನೆಯಲ್ಲಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಈಗಲಾದರೋ ತಾನು ಪಡೆದಿರುವ ಆಶ್ಚರ್ಯಕರ ನಿರೀಕ್ಷೆಯನ್ನು ಹೊರಗೆ ಹೋಗಿ ಇತರರಿಗೆ ಸಾರುವ ತನ್ನ ಜವಾಬ್ದಾರಿಯನ್ನು ಗ್ರಹಿಸಿಕೊಂಡಿದ್ದಾನೆ. ಅವನನ್ನುವುದು: “ಜನರ ಆಧ್ಯಾತ್ಮಿಕ ಪರಿಸ್ಥಿತಿಯು ನನ್ನ ದೈಹಿಕ ಸಮಸ್ಯೆಗಿಂತ ಎಷ್ಟೋ ಗಂಭೀರ.” ಶುಶ್ರೂಷೆಯಲ್ಲಿ ಅವನಿಗೆ ಯಾರಾದರೂ ಅಪಹಾಸ್ಯ ಮಾಡುತ್ತಾರೋ? “ಬೈಬಲ್‌ ಸಂದೇಶವನ್ನು ತುಂಬ ವಿರೋಧಿಸುವವರು ಕೆಲವೊಮ್ಮೆ ನನ್ನ ಬಿಳಿಚಿಕೆಯ ಕಾರಣ ನನಗೆ ಕುಚೋದ್ಯ ಮಾಡುವುದುಂಟು. ಆದರೆ ನಾನು ಇದನ್ನೆಲ್ಲ ತಲೆಗಚ್ಚಿಕೊಳ್ಳುವುದಿಲ್ಲ. ಏಕೆಂದರೆ ನನ್ನನ್ನಲ್ಲ ನಾನು ಸಾರುವ ಸಂದೇಶವನ್ನು ವಿರೋಧಿಸುವ ಕಾರಣವೇ ಅವರು ಹಾಗೆ ಮಾತಾಡುತ್ತಾರೆಂದು ನನಗೆ ಗೊತ್ತಿದೆ” ಎನ್ನುತ್ತಾನೆ ಜಾನ್‌.

ಬಿಳಿಚಿಕೆಯ ಅಂತ್ಯ!

ಇತ್ತೀಚಿನ ವರುಷಗಳಲ್ಲಿ ಬಿಳಿಚಿಕೆಯ ಚಿಕಿತ್ಸೆಯಲ್ಲಿ ತುಂಬ ಬದಲಾವಣೆಯಾಗಿದೆ. ವೈದ್ಯಕೀಯ ವಿಜ್ಞಾನವು ಎಂದಿಗಿಂತಲೂ ಹೆಚ್ಚಿನ ಸಹಾಯವನ್ನು ಒದಗಿಸುತ್ತಿದೆ. ಸ್ವ-ಸಹಾಯ ಗುಂಪುಗಳು ಅನುಭವಗಳ ವಿನಿಮಯಕ್ಕಾಗಿ ಮತ್ತು ಈ ರೋಗಸ್ಥಿತಿಯನ್ನು ಗ್ರಹಿಸಿಕೊಳ್ಳಲಿಕ್ಕಾಗಿ ಒಂದು ಚರ್ಚಾವೇದಿಕೆಯನ್ನು ಏರ್ಪಡಿಸುತ್ತವೆ. ಆದರೂ ಅಂತಿಮ ಪರಿಹಾರ ದೇವರಿಂದಲೇ ಹೊರತು ಮನುಷ್ಯನಿಂದ ಬರಲಾರದು.

ಇತರ ಎಲ್ಲ ಅಸ್ವಸ್ಥತೆಗಳಂತೆ ಬಿಳಿಚಿಕೆಯು ಸಹ ಮೊದಲ ಮನುಷ್ಯನಾದ ಆದಾಮನಿಂದ ಮಾನವರೆಲ್ಲರೂ ಪಡೆದ ಅಪರಿಪೂರ್ಣತೆಯ ಫಲ. (ಆದಿಕಾಂಡ 3:​17-19; ರೋಮಾಪುರ 5:12) ಯೆಹೋವನು ನಂಬಿಕೆ ತೋರಿಸುವವರೆಲ್ಲರಿಗೆ ಯೇಸು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದ ಮೂಲಕ ಬೇಗನೇ ಪರಿಪೂರ್ಣ ಆರೋಗ್ಯವನ್ನು ಒದಗಿಸುವನು. ಹೌದು, “ಆತನು ನಿನ್ನ . . . ಸಮಸ್ತ ರೋಗಗಳನ್ನು ವಾಸಿ” ಮಾಡುವವನಾಗಿದ್ದಾನೆ. (ಕೀರ್ತನೆ 103:⁠3) ಆಗ ಬಿಳಿಚಿಕೆ ರೋಗ ಸದಾ ಇಲ್ಲದೆ ಹೋಗುವುದು. ಏಕೆಂದರೆ ಅದರಿಂದ ನರಳುವವರೆಲ್ಲರು ಬೈಬಲಿನ ಪುಸ್ತಕವಾದ ಯೋಬ 33:25ರ ನೆರವೇರಿಕೆಯನ್ನು ಅನುಭವಿಸುವರು: “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.” (g 7/08)

[ಪಾದಟಿಪ್ಪಣಿಗಳು]

^ ಈ ಬಿಳಿಚಿಕೆಯನ್ನು ತೊನ್ನು (Vitiligo) ಎಂದು ತಪ್ಪರ್ಥ ಮಾಡಿಕೊಳ್ಳಬಾರದು. ಸೆಪ್ಟೆಂಬರ್‌ 22, 2004ರ ಎಚ್ಚರ! ಪುಟ 22 ನೋಡಿ.

^ ಹಲವು ಬಿಳಿಚಿಕೆ ರೋಗಲಕ್ಷಣಗಳ ಕುರಿತ ವಿವರಣೆಯನ್ನು ಚೌಕದಲ್ಲಿ ನೋಡಿರಿ.

[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಜನರ ಆಧ್ಯಾತ್ಮಿಕ ಪರಿಸ್ಥಿತಿಯು ನನ್ನ ದೈಹಿಕ ಸಮಸ್ಯೆಗಿಂತ ಎಷ್ಟೋ ಗಂಭೀರ.”​—⁠ಜಾನ್‌

[ಪುಟ 16ರಲ್ಲಿರುವ ಚೌಕ]

ಬಿಳಿಚಿಕೆಯ ವಿವಿಧ ವಿಧಗಳು

ಬಿಳಿಚಿಕೆಯ ಪ್ರಮುಖ ವರ್ಗಗಳಲ್ಲಿ ಇವು ಸೇರಿವೆ:

ಆಕ್ಯುಲೋಕ್ಯುಟೇನ್ಯಸ್‌ ಬಿಳಿಚಿಕೆ. ಈ ರೋಗದಲ್ಲಿ ಚರ್ಮ, ಕೂದಲು ಮತ್ತು ಕಣ್ಣುಗಳಿಂದ ಮೆಲನಿನ್‌ ವರ್ಣದ್ರವ್ಯ ಇಲ್ಲದೆ ಹೋಗುತ್ತದೆ. ಇದರಲ್ಲಿ ಸುಮಾರು 20 ಬೇರೆ ಬೇರೆ ವಿಧಗಳಿವೆ.

ನೇತ್ರ ಬಿಳಿಚಿಕೆ. ಇದು ಬಾಧಿಸುವುದು ಕಣ್ಣುಗಳನ್ನು ಮಾತ್ರ, ಚರ್ಮ ಮತ್ತು ಕೂದಲುಗಳನ್ನಲ್ಲ.

ಬಿಳಿಚಿಕೆಯ ಇತರ ಅನೇಕ ರೂಪಗಳು ಅಷ್ಟು ಜ್ಞಾತವಾಗಿರುವುದಿಲ್ಲ. ಉದಾಹರಣೆಗೆ, ಒಂದು ನಮೂನೆಯು ಹರ್ಮಾನ್ಸ್ಕೀ ಪೂಡಲಾಕ್‌ ಸಹಲಕ್ಷಣಗಳು (HPS) ಎಂಬುದು. ಈ HPS ಪೀಡಿತರಿಗೆ ಸುಲಭವಾಗಿಯೇ ಗಾಯವಾಗಿ ರಕ್ತಸ್ರವಿಸುತ್ತದೆ. ಪೋರ್ಟರೀಕೊ ದೇಶದಲ್ಲಿ ಈ ರೀತಿಯ ಬಿಳಿಚಿಕೆ ರೋಗವಿರುವ ಜನರು ಅನೇಕರಿದ್ದಾರೆ. 1,800 ಮಂದಿಯಲ್ಲಿ ಒಬ್ಬರಿಗೆ ಈ ರೋಗವಿದೆಯೆಂದು ಅಂದಾಜುಮಾಡಲಾಗಿದೆ.