ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಆನಂದದಿಂದ ಹೇಗೆ ಆರಾಧಿಸಬಲ್ಲೆ?

ದೇವರನ್ನು ಆನಂದದಿಂದ ಹೇಗೆ ಆರಾಧಿಸಬಲ್ಲೆ?

ಯುವ ಜನರು ಪ್ರಶ್ನಿಸುವುದು

ದೇವರನ್ನು ಆನಂದದಿಂದ ಹೇಗೆ ಆರಾಧಿಸಬಲ್ಲೆ?

ಹದಿನಾರು ವರ್ಷ ಪ್ರಾಯದ ಜೋಶ್ವ ತನ್ನ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದಾನೆ. ಅವನ ಅಮ್ಮ ಬಾಗಿಲ ಬಳಿ ನಿಂತಿದ್ದಾಳೆ. “ಜೋಶ್ವ, ಎದ್ದೇಳು! ಇವತ್ತು ಮೀಟಿಂಗ್‌ ಇದೆ ಗೊತ್ತಲ್ಲಾ?” ಎಂದು ಗುಡುಗುತ್ತಾಳೆ. ಜೋಶ್ವ ಯೆಹೋವನ ಸಾಕ್ಷಿಯಾಗಿ ಬೆಳೆದವನು. ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು ಅವರ ಕುಟುಂಬದ ಆರಾಧನಾ ರೂಢಿ. ಆದರೆ ಇತ್ತೀಚೆಗಾದರೊ ಜೋಶ್ವಗೆ ಮೀಟಿಂಗ್‌ಗೆ ಹೋಗಲು ಮನಸ್ಸೇ ಇಲ್ಲ.

“ಅಯ್ಯೋ . . . ಅಮ್ಮ ನಾನು ಕೂಟಕ್ಕೆ ಬರಲೇ ಬೇಕಾ?” ಎಂದು ಕುಂಯ್ಯಿಗುಟ್ಟುತ್ತಾನೆ.

“ನಿನ್ನ ಹರಟೆ ಬೇಡ, ಬೇಗ ರೆಡಿ ಆಗು. ಪುನಃ ಇವತ್ತು ಲೇಟ್‌ ಆಗಬಾರದು!” ಎಂದು ಹೇಳುತ್ತಾ ಅಮ್ಮ ಅಲ್ಲಿಂದ ಹೊರಡುತ್ತಾಳೆ.

“ಅಮ್ಮಾ, ನೋಡು. ಇದು ನಿನ್ನ ನಂಬಿಕೆಯಾಗಿರಬಹುದು. ಆದರೆ ನನ್ನ ನಂಬಿಕೆಯಲ್ಲ” ಎಂದು ಜೋಶ್ವ ಥಟ್ಟನೆ ಹೇಳಿಬಿಡುತ್ತಾನೆ. ತನ್ನ ತಾಯಿಗೆ ಅದು ಕೇಳಿಸಿತೆಂದು ಅವನಿಗೆ ಗೊತ್ತು ಯಾಕೆಂದರೆ ಅವಳಿನ್ನೂ ಅಲ್ಲೇ ಇದ್ದಳು. ಅನಂತರ ಅವಳೇನೂ ಹೇಳದೆ ಸುಮ್ಮನೆ ಹೋಗಿಬಿಡುತ್ತಾಳೆ. ತಾನು ಹಾಗೆ ಮಾತಾಡಿದ್ದಕ್ಕಾಗಿ ಜೋಶ್ವಗೆ ಮನನೋಯುತ್ತದೆ. ತಾಯಿಯನ್ನು ಬೇಸರಗೊಳಿಸಲು ಅವನಿಗೆ ನಿಜವಾಗಿಯೂ ಇಷ್ಟವಿಲ್ಲ. ತಪ್ಪಾಯಿತೆಂದು ಹೇಳಲೂ ಮನಸ್ಸಿಲ್ಲ. ಆದರೂ ಅವನು ಒಂದು ವಿಷಯ ಮಾಡುತ್ತಾನೆ. ಏನೆಂದರೆ, . . . ನಿಟ್ಟುಸಿರುಬಿಡುತ್ತಾ ಜೋಶ್ವ ಹಾಸಿಗೆಯಿಂದ ತಡವರಿಸಿ ಎದ್ದು ಡ್ರೆಸ್‌ ಮಾಡುತ್ತಾನೆ. ತನ್ನಲ್ಲಿ ತಾನೇ ಗೊಣಗುತ್ತಾ, “ಇಂದಲ್ಲ ನಾಳೆ ನನ್ನ ಸ್ವಂತ ನಿರ್ಣಯವನ್ನು ನಾನು ಮಾಡಲೇಬೇಕು. ಸಭೆಯಲ್ಲಿರುವ ಬೇರೆಯವರಂತೆ ನಾನಿಲ್ಲ. ಕ್ರೈಸ್ತನಾಗಿರಲಿಕ್ಕೂ ನನಗೆ ಮನಸ್ಸುಂಟೊ ಗೊತ್ತಿಲ್ಲ!” ಎಂದನು.

ಈದೃಶ್ಯದಲ್ಲಿ ಜೋಶ್ವಗೆ ಅನಿಸಿದಂತೆ ನಿಮಗೂ ಅನಿಸಿದೆಯೋ? ಕೆಲವೊಮ್ಮೆ ಇತರರು ಕ್ರೈಸ್ತ ಚಟುವಟಿಕೆಯಲ್ಲಿ ಆನಂದಿಸುತ್ತಿರುವಾಗ ನೀವಾದರೋ ಒತ್ತಾಯದಿಂದ ಅದನ್ನು ಮಾಡುತ್ತಿದ್ದೀರೆಂದು ನಿಮಗನಿಸುತ್ತದೋ? ಉದಾಹರಣೆಗೆ:

ಬೈಬಲಿನ ಅಧ್ಯಯನವು ನಿಮಗೆ ಶಾಲೆಯ ಹೋಮ್‌ವರ್ಕ್‌ನಂತೆ ಅನಿಸುತ್ತದೋ?

ಮನೆ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವುದೆಂದರೆ ನಿಮಗೆ ಬಹಳ ಅಂಜಿಕೆಯೋ?

ಕ್ರೈಸ್ತ ಕೂಟಗಳಲ್ಲಿ ನಿಮಗೆ ತುಂಬ ‘ಬೋರ್‌’ ಅನಿಸುತ್ತದೋ?

ಇಂಥ ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಾಗಿದ್ದರೆ ನಿರಾಶೆಪಡಬೇಡಿ! ಕೆಲವೇ ಬದಲಾವಣೆಗಳನ್ನು ಮಾಡುವ ಮೂಲಕ ನೀವು ದೇವರ ಸೇವೆಯಲ್ಲಿ ಆನಂದಿಸಲು ಕಲಿಯಬಲ್ಲಿರಿ. ಅದು ಹೇಗೆಂದು ನಾವು ನೋಡೋಣ.

ಸಮಸ್ಯೆ # 1: ಬೈಬಲಿನ ಅಧ್ಯಯನ

ಏಕೆ ಸುಲಭವಲ್ಲ? “ಓದುವುದು ಅಂದರೆ ನನಗೆ ತಲೆನೋವು” ಎಂದು ನಿಮಗನಿಸಬಹುದು. ನಿಮ್ಮ ಮನಸ್ಸು ಒಂದೇ ಕಡೆ ನಿಲ್ಲುವುದಿಲ್ಲ ಆದ್ದರಿಂದ ಒಂದೆಡೆ ಕೂತು ಅಧ್ಯಯನಮಾಡುವುದು ನಿಮಗೆ ಕಷ್ಟಕರವಾಗಿ ಕಂಡೀತು! ಅದೂ ಅಲ್ಲದೆ, ಶಾಲಾಭ್ಯಾಸಕ್ಕಾಗಿಯೂ ನಿಮಗೆ ತುಂಬ ಓದಲಿಕ್ಕಿದೆಯಲ್ಲಾ?

ಏಕೆ ಮಾಡಬೇಕು? ಬೈಬಲು ದೇವರ ಪ್ರೇರಿತ ವಾಕ್ಯ ಮಾತ್ರವೇ ಅಲ್ಲ ಅದು “ಕಲಿಸಲಿಕ್ಕಾಗಿ, ಜನರಿಗೆ ನೆರವು ನೀಡಲಿಕ್ಕಾಗಿ, ಅವರನ್ನು ತಿದ್ದಲಿಕ್ಕಾಗಿ ಹಾಗೂ ಜೀವಿಸುವ ರೀತಿಯನ್ನು ತೋರಿಸಲಿಕ್ಕಾಗಿ ಉಪಯುಕ್ತವಾಗಿದೆ.” (2 ತಿಮೊಥೆಯ 3:​16, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ಬೈಬಲನ್ನು ಅಧ್ಯಯನ ಮಾಡುವ ಮೂಲಕ ಮತ್ತು ನೀವು ಓದಿದ್ದನ್ನು ಮನನ ಮಾಡುವ ಮೂಲಕ ಜ್ಞಾನದ ಹೊಸ ಪ್ರಪಂಚವೇ ನಿಮ್ಮ ಮುಂದೆ ತೆರೆಯುವುದು. ಇದನ್ನು ನೀವು ಮನಗಾಣಬೇಕು: ಕಷ್ಟಪಡದೆ ಫಲಸಿಗದು. ಉತ್ತಮ ಆಟಗಾರ​ರಾಗಬೇಕಾದರೆ, ಆಟದ ನಿಯಮಗಳನ್ನು ಕಲಿಯಲೇಬೇಕು ಮತ್ತು ಸಾಕಷ್ಟು ಪ್ರ್ಯಾಕ್ಟಿಸ್‌ ಮಾಡಬೇಕು. ಆರೋಗ್ಯವಂತರಾಗಿ ಇರಬೇಕಾದರೆ ವ್ಯಾಯಾಮ ಅಗತ್ಯ. ಅದೇರೀತಿ ನಿಮ್ಮ ಸೃಷ್ಟಿಕರ್ತನ ಕುರಿತು ಕಲಿಯಬೇಕಾದರೆ ದೇವರ ವಾಕ್ಯವನ್ನು ಅಧ್ಯಯನ ಮಾಡುವುದು ಅವಶ್ಯ.

ನಿಮ್ಮ ಸಮಪ್ರಾಯದವರು ಹೇಳುವುದು: “ನಾನು ಹೈಸ್ಕೂಲಿಗೆ ಕಾಲಿಟ್ಟಾಗ ಪ್ರಮುಖ ನಿರ್ಣಯಗಳನ್ನು ಮಾಡಬೇಕಾಗಿ ಬಂತು. ನನ್ನ ಸಹಪಾಠಿಗಳು ಎಲ್ಲಾ ತರದ ಕೆಟ್ಟತನ ಮಾಡುತ್ತಿದ್ದರು. ನಾನು ನನ್ನನ್ನು ಹೀಗೆ ಕೇಳಿಕೊಂಡೆ: ‘ನಾನದನ್ನು ಮಾಡುವುದು ಸರಿಯೋ? ನನ್ನ ಹೆತ್ತವರು ನಿಜವಾಗಿ ಸತ್ಯವನ್ನೇ ಕಲಿಸುತ್ತಿದ್ದಾರೋ?’ ನಾನು ಅದನ್ನು ತಿಳಿಯಬೇಕು.”​—⁠ಶೀಡ್ಸಾ.

“ನಾನು ಕಲಿತದ್ದು ಸತ್ಯ ಎಂದು ಯಾವಾಗಲೂ ನಾನು ನೆನಸಿದ್ದೆ. ಆದರೆ ಅದು ಸತ್ಯವೆಂದು ನಾನೇ ಪರೀಕ್ಷಿಸಿ ನೋಡುವ ಅಗತ್ಯವಿತ್ತು. ನನ್ನ ಕುಟುಂಬವು ಆ ಧರ್ಮವನ್ನು ಪಾಲಿಸುತ್ತಿರುವ ಕಾರಣದಿಂದ ನಾನದನ್ನು ಪಾಲಿಸುತ್ತಿಲ್ಲ, ನಾನು ನಂಬಿರುವ ನನ್ನ ಸ್ವಂತ ಧರ್ಮ ಅದಾಗಿರಬೇಕಿತ್ತು.”​—⁠ನಲೀಸಾ.

ನೀವೇನು ಮಾಡಬೇಕು? ನಿಮ್ಮ ಸ್ವಂತ ಅನುಕೂಲ ಮತ್ತು ಅಗತ್ಯಕ್ಕೆ ತಕ್ಕಂತೆ ವೈಯಕ್ತಿಕ ಅಧ್ಯಯನದ ಯೋಜನೆಮಾಡಿರಿ. ಯಾವ ವಿಷಯವನ್ನು ಅಧ್ಯಯನಕ್ಕಾಗಿ ಆರಿಸಿಕೊಳ್ಳಬೇಕೆಂಬುದು ಕ್ರಮೇಣ ನಿಮಗೆ ತಿಳಿಯುವುದು. ಅಧ್ಯಯನದ ವಿಷಯಗಳನ್ನು ಎಲ್ಲಿಂದ ಆರಿಸಬಹುದು? ಮೊದಲಾಗಿ, ಬೈಬಲನ್ನು ಆಳವಾಗಿ ಅಧ್ಯಯನ ಮಾಡಿ ನಿಮ್ಮ ನಂಬಿಕೆಗಳನ್ನು ವಿಶ್ಲೇಶಿಸಿನೋಡಿ. ಬೈಬಲ್‌ನಿಜವಾಗಿ ಏನನ್ನು ಬೋಧಿಸುತ್ತದೆ? * ಮುಂತಾದ ಪುಸ್ತಕಗಳನ್ನೂ ಉಪಯೋಗಿಸಬಹುದು.

ಕ್ರಿಯೆಯಲ್ಲಿ. . . ಅಧ್ಯಯನವನ್ನು ಆರಂಭಿಸಲಿಕ್ಕಾಗಿ, ನೀವು ಹೆಚ್ಚು ಮಾಹಿತಿ ಪಡೆಯಲು ಬಯಸುವ ಎರಡುಮೂರು ಬೈಬಲ್‌ ವಿಷಯಗಳನ್ನು ಕೆಳಗೆ ಗುರುತುಮಾಡಿ ಇಲ್ಲವೆ ನೀವು ಆರಿಸಿಕೊಳ್ಳುವ ವಿಷಯಗಳನ್ನು ಬರೆಯಿರಿ.

ಒಬ್ಬ ದೇವರಿದ್ದಾನೋ?

ಬೈಬಲಿನ ಲೇಖಕರು ದೇವರಿಂದ ಪ್ರೇರಿತರಾಗಿಯೇ ಬರೆದರೆಂದು ನಾನು ಹೇಗೆ ನಂಬಬಲ್ಲೆ?

ವಿಕಾಸದ ಬದಲಿಗೆ ನಾನು ಸೃಷ್ಟಿಕ್ರಿಯೆಯನ್ನು ಏಕೆ ನಂಬಬೇಕು?

ದೇವರ ರಾಜ್ಯ ಎಂದರೇನು? ಅದು ಅಸ್ತಿತ್ವದಲ್ಲಿದೆ ಎಂದು ನಾನು ಹೇಗೆ ರುಜುಪಡಿಸಬಲ್ಲೆ?

ಮನುಷ್ಯರು ಸತ್ತಾಗ ಏನು ಸಂಭವಿಸುತ್ತದೆ ಎಂಬ ನನ್ನ ನಂಬಿಕೆಯನ್ನು ನಾನು ಹೇಗೆ ವಿವರಿಸಬಲ್ಲೆ?

ಪುನರುತ್ಥಾನವಿದೆ ಎಂದು ನಾನು ಏಕೆ ದೃಢ ಭರವಸೆಯಿಂದಿರಬಲ್ಲೆ?

ಸತ್ಯಧರ್ಮ ಯಾವುದೆಂದು ನಾನು ಹೇಗೆ ಖಾತ್ರಿಯಿಂದಿರಬಲ್ಲೆ?

.....

ಸಮಸ್ಯೆ # 2: ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು

ಏಕೆ ಸುಲಭವಲ್ಲ? ಬೈಬಲಿನ ಕುರಿತು ಇತರರೊಂದಿಗೆ ಮಾತಾಡುವುದು ಅಥವಾ ಹಾಗೆ ಮಾಡುವಾಗ ಸಹಪಾಠಿಯೊಬ್ಬನನ್ನು ಎದುರಾಗುವುದು ಭಯ ಹುಟ್ಟಿಸಬಹುದು.

ಏಕೆ ಮಾಡಬೇಕು? ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:​19, 20) ಆದರೆ ಇತರರಿಗೆ ಸಾರಲು ಬೇರೆ ಕಾರಣಗಳೂ ಇವೆ. ಹಲವೆಡೆ ಅಧಿಕಾಂಶ ಹದಿವಯಸ್ಕರು ದೇವರಲ್ಲಿ ಮತ್ತು ಬೈಬಲಿನಲ್ಲಿ ನಂಬಿಕೆಯನ್ನಿಡುತ್ತಾರೆಂದು ಅಧ್ಯಯನಗಳು ತೋರಿಸುತ್ತವೆ. ಹಾಗಿದ್ದರೂ ಆ ಯುವಜನರಿಗೆ ಭವಿಷ್ಯತ್ತಿಗಾಗಿ ಯಾವ ನಿಜ ನಿರೀಕ್ಷೆಯೂ ಇಲ್ಲ. ನಿಮಗೆ ಈಗಾಗಲೇ ಬೈಬಲ್‌ ಅಧ್ಯಯನದ ಮೂಲಕ ಸಿಕ್ಕಿದ ಮಾಹಿತಿಯು ನಿಮ್ಮ ಸಮವಯಸ್ಕರಿಗೆ ಇನ್ನೂ ಸಿಕ್ಕಿರುವುದಿಲ್ಲ. ಅವರಿಗೆ ಅದರ ಅಗತ್ಯವಿದೆ ಮತ್ತು ಅವರು ಅದಕ್ಕಾಗಿ ಹುಡುಕುತ್ತಿದ್ದಾರೆ!

ನಿಮ್ಮ ಸಮಪ್ರಾಯದವರು ಹೇಳುವುದು: “ನಾನೂ ನನ್ನ ಗೆಳತಿಯೂ ಪರಿಣಾಮಕಾರಿಯಾದ ಪೀಠಿಕೆಗಳನ್ನು ತಯಾರಿಸುತ್ತಿದ್ದೆವು. ಅಡ್ಡಿಗಳನ್ನು ನಿಭಾಯಿಸುವ ಮತ್ತು ಪುನರ್ಭೇಟಿಗಳನ್ನು ಮಾಡುವ ವಿಧವನ್ನು ಕಲಿತೆವು. ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ನಾನು ಹೆಚ್ಚು ಪ್ರಯತ್ನಿಸಿದಂತೆ ಅದು ನನಗೆ ಹೆಚ್ಚು ಆನಂದವನ್ನು ಕೊಟ್ಟಿತು.”​—⁠ನಲೀಸಾ.

“ಕ್ರೈಸ್ತ ಸಹೋದರಿಯೊಬ್ಬರು ನನಗೆ ತುಂಬಾ ಸಹಾಯಮಾಡಿದರು! ಅವರು ನನಗಿಂತ ಆರು ವರ್ಷ ದೊಡ್ಡವರು. ಅವರು ನನ್ನನ್ನು ಕ್ಷೇತ್ರ ಸೇವೆಗೆ ಕರೆದುಕೊಂಡು ಹೋಗುತ್ತಿದ್ದರು, ಕೆಲವೊಮ್ಮೆ ಉಪಾಹಾರಕ್ಕಾಗಿಯೂ ಕೂಡ. ನನ್ನ ಯೋಚನೆಗಳನ್ನು ಸರಿಪಡಿಸಲು ನೆರವಾಗುವಂಥ ಬೈಬಲ್‌ ವಚನಗಳನ್ನು ಅವರು ತೋರಿಸುತ್ತಿದ್ದರು. ಅವರ ಉತ್ತಮ ಮಾದರಿಯಿಂದಾಗಿ ನಾನು ಜನರಲ್ಲಿ ಹೆಚ್ಚು ಆಸಕ್ತಿಯನ್ನು ತಕ್ಕೊಳ್ಳಲು ಕಲಿತೆ. ನಾನು ಸದಾ ಅವರಿಗೆ ಋಣಿಯಾಗಿರುವೆ.”​—⁠ಷಾಂಟೇ.

ನೀವೇನು ಮಾಡಬೇಕು? ನಿಮಗಿಂತ ಪ್ರಾಯದಲ್ಲಿ ದೊಡ್ಡವರಾದ ಹಾಗೂ ನಿಮ್ಮ ಸಂಗಡ ಸೇವೆಮಾಡಶಕ್ತರಾದ ಯಾರಾದರೂ ಸಭೆಯಲ್ಲಿ ಇದ್ದರೆ ನಿಮ್ಮ ಹೆತ್ತವರನ್ನು ಕೇಳಿ ಅವರೊಂದಿಗೆ ಸೇವೆಮಾಡಿರಿ. (ಅ. ಕೃತ್ಯಗಳು 16:​1-3) ಬೈಬಲ್‌ ಹೇಳುವುದು: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.” (ಜ್ಞಾನೋಕ್ತಿ 27:17) ಅನುಭವಸಂಪನ್ನರಾದ ವಯಸ್ಕರೊಂದಿಗೆ ಸಹವಾಸ ಮಾಡುವುದರಲ್ಲಿ ಅನೇಕ ಪ್ರಯೋಜನಗಳಿವೆ. “ನಮಗಿಂತ ದೊಡ್ಡವರೊಂದಿಗೆ ಸೇವೆಮಾಡುವುದು ಹೆಚ್ಚು ಸುಲಭಕರ” ಎಂದು 19 ವಯಸ್ಸಿನ ಅಲೆಕ್ಸಸ್‌ ಹೇಳುತ್ತಾಳೆ.

ಕ್ರಿಯೆಯಲ್ಲಿ. . . ನಿಮ್ಮ ಹೆತ್ತವರಲ್ಲದೆ ಸೇವೆಯಲ್ಲಿ ನಿಮಗೆ ಸಹಾಯಮಾಡಬಲ್ಲ ಸಭೆಯಲ್ಲಿರುವ ಬೇರೆ ಯಾರಾದರೊಬ್ಬರ ಹೆಸರನ್ನು ಈ ಕೆಳಗೆ ಬರೆಯಿರಿ.

.....

ಸಮಸ್ಯೆ # 3: ಕ್ರೈಸ್ತ ಕೂಟಗಳಿಗೆ ಹಾಜರಾಗುವುದು

ಏಕೆ ಸುಲಭವಲ್ಲ? ದಿನವಿಡೀ ಕ್ಲಾಸ್‌ನಲ್ಲಿ ಕೂತು ಕಲಿತನಂತರ ಪುನಃ ಕೂಟದಲ್ಲಿ ಒಂದೆರಡು ತಾಸು ಬೈಬಲ್‌ ಭಾಷಣಗಳನ್ನು ಕೇಳಲು ನಿಮಗೆ ಮನಸ್ಸಾಗದೆ ಇರಬಹುದು.

ಏಕೆ ಮಾಡಬೇಕು? ಬೈಬಲ್‌ ಕ್ರೈಸ್ತರನ್ನು ಉತ್ತೇಜಿಸುವುದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.”​—⁠ಇಬ್ರಿಯ 10:​24, 25.

ನಿಮ್ಮ ಸಮಪ್ರಾಯದವರು ಹೇಳುವುದು: “ಸಭಾ​ಕೂಟ​ಗಳಿಗೆ ತಯಾರಿಸುವುದು ಅತ್ಯಾವಶ್ಯಕ. ಕೆಲವೊಮ್ಮೆ ಅದಕ್ಕಾಗಿ ನಾವು ನಮ್ಮನ್ನೇ ಒತ್ತಾಯ ಪಡಿಸಿಕೊಳ್ಳಬೇಕಾಗುತ್ತದೆ. ಕೂಟಗಳಿಗೆ ನಿಜವಾಗಿ ತಯಾರಿಸಿ ಬರುವಾಗ ನಾವು ಕೂಟಗಳಲ್ಲಿ ಆನಂದಿಸುತ್ತೇವೆ. ಯಾಕೆಂದರೆ ಅಲ್ಲಿ ಚರ್ಚಿಸುವ ವಿಷಯಗಳು ಮುಂಚಿತವಾಗಿಯೇ ನಮಗೆ ತಿಳಿದಿರುತ್ತವೆ ಮತ್ತು ಅದರಲ್ಲಿ ಭಾಗವಹಿಸಲೂ ಶಕ್ತರು.”​—⁠ಎಲ್ಡಾ.

“ನಾನು ಕೂಟಗಳಲ್ಲಿ ಉತ್ತರ ಕೊಟ್ಟಾಗ, ನನಗೆ ಕೂಟಗಳು ಹೆಚ್ಚು ಆಸಕ್ತಿಕರವಾಗಿ ಕಂಡದ್ದನ್ನು ನಾನು ಗಮನಿಸತೊಡಗಿದೆ.”​—⁠ಜೆಸಿಕಾ.

ನೀವೇನು ಮಾಡಬೇಕು? ಮುಂಚಿತವಾಗಿಯೇ ತಯಾರಿಸಲು ಸಮಯ ಬದಿಗಿರಿಸಿ. ಸಾಧ್ಯವಾದಲ್ಲಿ ಉತ್ತರ ಕೊಡಿ. ಕೂಟಗಳಲ್ಲಿ ಹೆಚ್ಚೆಚ್ಚಾಗಿ ಒಳಗೂಡುವಂತೆ ಇದು ನಿಮಗೆ ನೆರವಾಗುವುದು.

ದೃಷ್ಟಾಂತಕ್ಕೆ: ಒಂದು ಆಟವನ್ನು ಟಿ.ವಿ.ಯಲ್ಲಿ ನೋಡುವಾಗ ನಿಮಗೆ ಹೆಚ್ಚು ಖುಷಿ ಆಗುತ್ತದೋ ಇಲ್ಲವೆ ಮೈದಾನದಲ್ಲಿ ಆ ಆಟವನ್ನು ಆಡುವಾಗಲೋ? ಬರೇ ಪ್ರೇಕ್ಷಕರಾಗಿರುವುದಕ್ಕಿಂತ ಪಾಲ್ಗೊಳ್ಳುವುದು ಹೆಚ್ಚು ​ಪ್ರತಿಫಲದಾಯಕ. ಕ್ರೈಸ್ತ ಕೂಟಗಳ ವಿಷಯದಲ್ಲೂ ಇದೇ ನೋಟವನ್ನು ನೀವೇಕೆ ಇಡಬಾರದು?

ಕ್ರಿಯೆಯಲ್ಲಿ. . . ಪ್ರತಿ ವಾರ ಸಭಾಕೂಟದ ತಯಾರಿಗಾಗಿ ಕೇವಲ 30 ನಿಮಿಷಗಳನ್ನಾದರೂ ಬದಿಗಿಡಿರಿ. ಅದು ಯಾವಾಗ ಎಂಬುದನ್ನು ಕೆಳಗಿನ ಖಾಲಿ ಜಾಗದಲ್ಲಿ ಬರೆಯಿರಿ.

.....

ಅನೇಕ ಯುವಜನರು ಕೀರ್ತನೆ 34:8ರ ಸತ್ಯತೆಯನ್ನು ಅನುಭವಿಸುತ್ತಿದ್ದಾರೆ. ಅದು ಹೇಳುವುದು: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ.” ರುಚಿ ರುಚಿಯಾದ ಊಟದ ಕುರಿತು ಕೇಳುವುದು ಮಾತ್ರವೇ ನಿಮಗೆ ತೃಪ್ತಿ ಕೊಡುತ್ತದೋ? ಸ್ವತಃ ನೀವೇ ಸವಿದಾಗಲೇ ಅಲ್ಲವೇ ತೃಪ್ತಿಯಾಗುವುದು? ದೇವರ ಆರಾಧನೆಯ ವಿಷಯದಲ್ಲೂ ಇದು ನಿಜ. ಅಧ್ಯಯನ ಮಾಡುವುದರಲ್ಲಿ, ಶುಶ್ರೂಷೆಯಲ್ಲಿ ಮತ್ತು ಕೂಟಗಳಲ್ಲಿ ಪಾಲ್ಗೊಳ್ಳುವುದು ಎಷ್ಟು ಪ್ರತಿಫಲದಾಯಕ ಎಂಬುದನ್ನು ನೀವೇ ಅನುಭವದಿಂದ ಸವಿದು ನೋಡಿ. ವಾಕ್ಯವನ್ನು ಕೇಳುವವರು ಮಾತ್ರ ಆಗಿರದೆ ಅದರ ಪ್ರಕಾರ ನಡೆಯುವವರೇ ‘ಧನ್ಯರು’ ಎಂದು ಬೈಬಲ್‌ ತಿಳಿಸುತ್ತದೆ.​—⁠ಯಾಕೋಬ 1:25. (g  7/08)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

ಇದರ ಕುರಿತು ಯೋಚಿಸಿರಿ

ಹದಿಹರೆಯದ ವ್ಯಕ್ತಿಗೆ ಆಧ್ಯಾತ್ಮಿಕ ಚಟುವಟಿಕೆಗಳು ಏಕೆ ಬೇಸರ ಹುಟ್ಟಿಸಬಹುದು?

ಈ ಲೇಖನದಲ್ಲಿ ಚರ್ಚಿಸಲಾದ ಮೂರು ಅಂಶಗಳಲ್ಲಿ ನೀವು ಪ್ರಗತಿ ಮಾಡಬೇಕಾಗಿರುವ ವಿಷಯ ಯಾವುದು ಮತ್ತು ನೀವು ಅದನ್ನು ಹೇಗೆ ಮಾಡುವಿರಿ?

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 13, 14ರಲ್ಲಿರುವ ಚಿತ್ರ]

ಶಾರೀರಿಕ ಆರೋಗ್ಯಕ್ಕೆ ನಿಮಗೆ ವ್ಯಾಯಾಮ ಅಗತ್ಯ. ಆಧ್ಯಾತ್ಮಿಕ ಆರೋಗ್ಯಕ್ಕೆ ದೇವರ ವಾಕ್ಯದ ಅಧ್ಯಯನ ನಿಮಗೆ ಅತ್ಯಗತ್ಯ