ಕಡೇ ದಿವಸಗಳು ಯಾವುದಕ್ಕೆ?
ಕಡೇ ದಿವಸಗಳು ಯಾವುದಕ್ಕೆ?
“ವಿದ್ಯುತ್ ಬಿಲ್ ಪಾವತಿ ಮಾಡಲು ಕಡೇ ದಿನಾಂಕ,” “ತೆರಿಗೆ ಕಟ್ಟಲು ಕಡೇ ದಿನ,” “ಸರ್ಕಸ್ನ ಕಡೇ ಪ್ರದರ್ಶನ.” ಇಂಥ ಹೇಳಿಕೆಗಳಲ್ಲಿ ಕಡೇ ಎಂಬ ಪದದ ಅರ್ಥ ಸುಸ್ಪಷ್ಟ. ಆದರೆ “ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ” ಎಂದು ಯಾರಾದರೂ ಹೇಳಿದರೆ ಅದರ ಅರ್ಥವೇನು?
‘ಕಡೇ ದಿವಸಗಳು’ ಮತ್ತು “ಅಂತ್ಯ ಕಾಲ” ಎಂಬ ಪದಗಳು ಬಹಳಷ್ಟು ಹಿಂದಿನಿಂದಲೂ ಬಳಕೆಯಲ್ಲಿವೆ. (2 ತಿಮೊಥೆಯ 3:1; ದಾನಿಯೇಲ 12:4) ಸುಮಾರು 2,500 ವರ್ಷಗಳ ಹಿಂದೆ ದೇವರ ಪ್ರವಾದಿಯಾದ ದಾನಿಯೇಲನಿಗೆ ದರ್ಶನಗಳನ್ನು ಕೊಡಲಾಯಿತು. ಇವುಗಳಲ್ಲಿ, ಲೋಕ ಶಕ್ತಿಗಳ ಕುರಿತು ಮತ್ತು “ಅಂತ್ಯಕಾಲದ” ವರೆಗೆ ಅವುಗಳ ನಡುವಿನ ಘರ್ಷಣೆಗಳ ಕುರಿತು ತಿಳಿಸಲಾಯಿತು. ಆ ದರ್ಶನಗಳ ಅರ್ಥವನ್ನು ಅಂತ್ಯ ಕಾಲದಲ್ಲಿ ಸ್ಪಷ್ಟಮಾಡಲಾಗುವುದೆಂದು ಅವನಿಗೆ ಹೇಳಲಾಯಿತು. (ದಾನಿಯೇಲ 8:17, 19; 11:35, 40; 12:9) ದಾನಿಯೇಲನು ಇದನ್ನೂ ದಾಖಲಿಸಿದನು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಯೇಸು ಕ್ರಿಸ್ತನು ಸಹ, ಆತನ ‘ಪ್ರತ್ಯಕ್ಷತೆಗೂ ಯುಗದ’ ಅಥವಾ ಈ ಲೋಕ ವ್ಯವಸ್ಥೆಯ “ಸಮಾಪ್ತಿಗೂ ಸೂಚನೆಯೇನು?” ಎಂದು ಕೇಳಲಾದ ಪ್ರಶ್ನೆಗೆ ಕೊಟ್ಟ ಉತ್ತರದಲ್ಲಿ ‘ಅಂತ್ಯಕ್ಕೆ’ ಸೂಚಿಸಿದನು. (ಮತ್ತಾಯ 24:3-42) ಹೀಗೆ ದಾನಿಯೇಲನು ಮತ್ತು ಯೇಸು, ಭೂಮಿಯಲ್ಲಿ ಈಗ ಜೀವಿಸುತ್ತಿರುವ ಮತ್ತು ಈ ಹಿಂದೆ ಜೀವಿಸಿದವರೆಲ್ಲರನ್ನು ಬಾಧಿಸುವ ಒಂದು ತಟ್ಟನೆಯ ಬದಲಾವಣೆಗೆ ಸೂಚಿಸುತ್ತಿದ್ದರೆಂದು ತೋರುತ್ತದೆ. ದಾನಿಯೇಲನು ಭೂಮಿಯ ಎಲ್ಲ ಸರಕಾರಗಳ ಅಂತ್ಯದ ಬಗ್ಗೆ ಬರೆದನು. ಯೇಸು ಲೋಕ ವ್ಯವಸ್ಥೆಯ ಸಮಾಪ್ತಿಯ ಕುರಿತು ಮಾತಾಡಿದನು.
ಕಡೇ ದಿವಸಗಳು ಅಂದರೇನು ಎಂಬುದನ್ನು ತಿಳಿದುಕೊಳ್ಳಲು ನೀವು ಆಸಕ್ತಿವಹಿಸಬೇಕೋ? ಖಂಡಿತ! ಪ್ರತಿಯೊಬ್ಬ ವ್ಯಕ್ತಿಯನ್ನು ಇದು ಬಾಧಿಸುವುದರಿಂದ ಎಲ್ಲರೂ ಇದರಲ್ಲಿ ಆಸಕ್ತಿವಹಿಸಲೇಬೇಕು. ಹಾಗಿದ್ದರೂ ಅನೇಕರು ಈ ಸಂಗತಿಯನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಬೈಬಲ್ ಮುಂತಿಳಿಸಿದ್ದು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು.” (2 ಪೇತ್ರ 3:3, 4) ಇತಿಹಾಸವು ಮರುಕಳಿಸುತ್ತಿದೆ ಅಷ್ಟೇ, ಮತ್ತು ಬದುಕು ಎಂದಿನಂತೆ ಕೊನೆಯಿಲ್ಲದೆ ಸಾಗುವುದು ಎಂಬುದೇ ಅನೇಕರ ಎಣಿಕೆ.
ಬೈಬಲ್ ತಿಳಿಸುವಂತೆ ನಾವು ನಿಜವಾಗಿಯೂ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬದಕ್ಕೆ ಯಾವುದಾದರೂ ಪುರಾವೆ ಇದೆಯೇ? ನಾವೀಗ ನೋಡೋಣ. (g 4/08)