ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಟ್ಟೆಗೆ ಬಣ್ಣ ಕೊಡುವುದು ಅಂದು ಮತ್ತು ಇಂದು

ಬಟ್ಟೆಗೆ ಬಣ್ಣ ಕೊಡುವುದು ಅಂದು ಮತ್ತು ಇಂದು

ಬಟ್ಟೆಗೆ ಬಣ್ಣ ಕೊಡುವುದು ಅಂದು ಮತ್ತು ಇಂದು

ಬ್ರಿಟನಿನ ಎಚ್ಚರ! ಲೇಖಕರಿಂದ

ನಮ್ಮ ಭಾವನೆಗಳಿಗೂ ಬಣ್ಣಕ್ಕೂ ಸಂಬಂಧವಿರುವುದನ್ನು ನೀವು ಎಂದಾದರೂ ಗಮನಿಸಿದ್ದೀರೋ? ಇತಿಹಾಸದುದ್ದಕ್ಕೂ ಮಾನವರು ವಸ್ತ್ರಗಳಿಗೆ ಬಣ್ಣ ಕೊಟ್ಟು ತೊಟ್ಟುಕೊಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕಾಗಿಯೇ ಬಣ್ಣ ಕೊಡುವ ಪ್ರಕ್ರಿಯೆಯನ್ನು ಬಳಸುತ್ತಾರೆ.

ವಸ್ತ್ರಗಳನ್ನಾಗಲಿ, ಮನೆಯನ್ನು ಅಲಂಕರಿಸುವ ಪರದೆ, ಜಮಖಾನೆ ಅಥವಾ ಅವುಗಳನ್ನು ಸಿದ್ಧಪಡಿಸಲು ಬೇಕಾದ ಬಟ್ಟೆಗಳನ್ನಾಗಲಿ ಖರೀದಿಸುವಾಗ ಬಣ್ಣಹೋಗುವ ಇಲ್ಲವೆ ಬಿಳುಚಿಕೊಳ್ಳುವ ಬಟ್ಟೆಗಳನ್ನು ನಾವ್ಯಾರೂ ಇಷ್ಟಪಡುವುದಿಲ್ಲ. ಬಟ್ಟೆಗಳ ಬಣ್ಣಹೋಗದಂತೆ ಮಾಡುವ ಪ್ರಕ್ರಿಯೆಗಳ ಕುರಿತು ಮತ್ತು ಬಣ್ಣ ಕೊಡುವ ಸಾಂಪ್ರದಾಯಿಕ ವಿಧಾನಗಳು ಹೇಗೆ ಬೆಳೆದುಬಂದವು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ನಾವು ಎಸ್‌ಡಿಸಿ (ಸೊಸೈಟಿ ಆಫ್‌ ಡೈಯರ್ಸ್‌ ಅಂಡ್‌ ಕಲರಿಸ್ಟ್‌) ಎಂಬ ‘ಕಲರ್‌ ಮ್ಯೂಸಿಯಮ್‌’ಗೆ ಭೇಟಿ ಇತ್ತೆವು. ಇದು ಇಂಗ್ಲೆಂಡಿನ ಉತ್ತರದಲ್ಲಿರುವ ಬ್ರಾಡ್‌ಫೋರ್ಡ್‌ನಲ್ಲಿದೆ. * ಶತಮಾನಗಳಿಂದಲೂ ವರ್ಣದ್ರವ್ಯವಾಗಿ ಬಳಸಲಾಗುತ್ತಿದ್ದ ಕೆಲವು ವಿಶೇಷ ಪದಾರ್ಥಗಳ ಮಾದರಿಗಳನ್ನು ನಾವು ಅಲ್ಲಿ ನೋಡಿದೆವು.

ಹಿಂದೆ ಬಳಸಲಾದ ವರ್ಣದ್ರವ್ಯಗಳು

19ನೇ ಶತಮಾನದ ಉತ್ತರಾರ್ಧದ ವರೆಗೆ ಬಟ್ಟೆಗಳಿಗೆ ಕೊಡುವ ವರ್ಣದ್ರವ್ಯವನ್ನು ಸಂಪೂರ್ಣವಾಗಿ ಸಸ್ಯಗಳು, ಕೀಟಗಳು ಮತ್ತು ಚಿಪ್ಪು ಮೀನು ಮುಂತಾದ ನೈಸರ್ಗಿಕ ಮೂಲಗಳಿಂದ ಉತ್ಪಾದಿಸಲಾಗುತ್ತಿತ್ತು. ಉದಾಹರಣೆಗೆ, ವೋಡ್‌ ಎಂಬ ಸಸ್ಯವು ನೀಲಿಬಣ್ಣದ ವರ್ಣದ್ರವ್ಯ (1), ವೆಲ್ಡ್‌ ಎಂಬ ಸಸ್ಯವು ಹಳದಿ ರಂಗಿನ ವರ್ಣದ್ರವ್ಯ (2), ಮತ್ತು ಮ್ಯಾಡರ್‌ ಎಂಬ ಸಸ್ಯವು ಕೆಂಪು ವರ್ಣದ್ರವ್ಯವನ್ನು ಉತ್ಪಾದಿಸಿತು. ಲಾಗ್‌ಮರವು ಕಪ್ಪು ವರ್ಣದ್ರವ್ಯ ಮತ್ತು ಆರ್ಚಿಲು ಎಂಬ ಪಾಚಿಯು ನೇರಳೆ ವರ್ಣದ್ರವ್ಯವನ್ನು ಕೊಟ್ಟಿತು. ಮ್ಯೂರೆಕ್ಸ್‌ ಎಂಬ ಚಿಪ್ಪುಜೀವಿಯು ದುಬಾರಿಯಾದ ಟೆರಿಯನ್‌ ಅಥವಾ ಇಂಪೀರಿಯಲ್‌ ಪರ್ಪಲ್‌ ಎಂದು ಪ್ರಸಿದ್ಧಿಯಾಗಿರುವ ಕೆನ್ನೀಲಿ ವರ್ಣದ್ರವ್ಯವನ್ನು ಉತ್ಪಾದಿಸಿತು (3). ಈ ಎಲ್ಲ ವರ್ಣದ್ರವ್ಯವು ರೋಮನ್‌ ಚಕ್ರವರ್ತಿಗಳ ಉಡುಪುಗಳನ್ನು ರಂಗುರಂಗಾಗಿಸಿತು.

ರೋಮನ್‌ ಚಕ್ರವರ್ತಿಗಳು ಜೀವಿಸಿದ್ದ ಕಾಲಕ್ಕಿಂತಲೂ ಎಷ್ಟೋ ಮೊದಲೇ, ನೈಸರ್ಗಿಕ ಪದಾರ್ಥಗಳಿಂದ ಬಣ್ಣ ಹಾಕಿದ ವಸ್ತ್ರಗಳನ್ನು ಪ್ರಸಿದ್ಧ ಹಾಗೂ ಶ್ರೀಮಂತ ವ್ಯಕ್ತಿಗಳು ಧರಿಸುತ್ತಿದ್ದರು. (ಎಸ್ತೇರಳು 8:15) ಉದಾಹರಣೆಗೆ, ಕರ್ಮಿಸ್‌ ಎಂಬ ಹೆಣ್ಣು ಕಿರುಮಂಜಿ ಕೀಟಗಳಿಂದ ಕೆಂಪು ವರ್ಣದ್ರವ್ಯವನ್ನು ತಯಾರಿಸಲಾಗುತ್ತಿತ್ತು (4). ಪುರಾತನ ಇಸ್ರಾಯೇಲಿನ ದೇವದರ್ಶನದ ಗುಡಾರ, ಹಾಗೆಯೇ ಇಸ್ರಾಯೇಲಿನ ಮಹಾಯಾಜಕನ ವಸ್ತ್ರಗಳನ್ನು ಅಲಂಕರಿಸಲು ಉಪಯೋಗಿಸಿದ ಧೂಮ್ರ ರಕ್ತವರ್ಣಗಳುಳ್ಳ ದಾರದಲ್ಲಿ ಉಪಯೋಗಿಸಲಾದ ಮೂಲ ವರ್ಣದ್ರವ್ಯವು ಇದೇ ಆಗಿರಬಹುದು.​—⁠ವಿಮೋಚನಕಾಂಡ 28:5; 36:⁠8.

ಬಣ್ಣ ಕೊಡುವ ಪ್ರಕ್ರಿಯೆಗಳು

ಬಣ್ಣ ಕೊಡುವಂಥ ಹೆಚ್ಚಿನ ಪ್ರಕ್ರಿಯೆಗಳು ಕೇವಲ ನೂಲನ್ನೋ ಬಟ್ಟೆಯನ್ನೋ ವರ್ಣದ್ರವ್ಯ ತುಂಬಿರುವ ತೊಟ್ಟಿಗಳಲ್ಲಿ ಮುಳುಗಿಸಿ ತೆಗೆಯುವುದಕ್ಕಿಂತಲೂ ಎಷ್ಟೋ ಹೆಚ್ಚು ಜಟಿಲವಾದುದು ಎಂಬುದನ್ನು ಕಲರ್‌ ಮ್ಯೂಸಿಯಮ್‌ನಲ್ಲಿನ ಪ್ರದರ್ಶನವು ತೋರಿಸಿಕೊಡುತ್ತದೆ. ಅನೇಕ ವಿದ್ಯಮಾನಗಳಲ್ಲಿ ಬಣ್ಣ ಕೊಡುವ ಪ್ರಕ್ರಿಯೆಯ ಒಂದು ಹಂತದಲ್ಲಿ ಮಾರ್ಡಂಟ್‌ ಅಂದರೆ ವರ್ಣದ್ರವ್ಯಗಳನ್ನು ಬಟ್ಟೆಗಳಿಗೆ ಭದ್ರವಾಗಿ ಊರಿಸುವ ಬಂಧಕದ್ರವ್ಯವನ್ನು ಬಳಸಲಾಗುತ್ತದೆ. ಇದು ವರ್ಣದ್ರವ್ಯವನ್ನು ನೂಲುಪದಾರ್ಥಗಳು ಹೀರಿಕೊಳ್ಳುವಂತೆ ಮಾಡುತ್ತದೆ. ಹೀಗೆ ಇದನ್ನು ಬಳಸಿದಾಗ ಬಟ್ಟೆಗಳ ಬಣ್ಣಗಳು ನೀರಿನಲ್ಲಿ ಕರಗುವುದಿಲ್ಲ. ಅನೇಕ ಆಮ್ಲಗಳನ್ನು ಮಾರ್ಡಂಟ್‌ ಆಗಿ ಬಳಸಲಾಗುತ್ತದೆ. ಇದರಲ್ಲಿ ಕೆಲವೊಂದು ಬಹಳ ಹಾನಿಕಾರಕ.

ಕೆಲವು ಬಣ್ಣ ಕೊಡುವ ಪ್ರಕ್ರಿಯೆಗಳು ಅಹಿತಕರ ವಾಸನೆಯನ್ನು ಉಂಟುಮಾಡುತ್ತವೆ. ಟರ್ಕಿ ಕೆಂಪುಬಣ್ಣವನ್ನು ಉತ್ಪಾದಿಸಲು ಬಳಸಲ್ಪಟ್ಟ ದೀರ್ಘ ಮತ್ತು ಜಟಿಲವಾದ ಕಾರ್ಯವಿಧಾನವು ಇದರಲ್ಲಿ ಒಂದಾಗಿದೆ. ಹತ್ತಿಬಟ್ಟೆಗೆ ಕಣ್ಣುಕೋರೈಸುವ ಕಡುಕೆಂಪು ಬಣ್ಣವನ್ನು ಕೊಡಲು ಈ ಕಾರ್ಯವಿಧಾನವನ್ನು ಉಪಯೋಗಿಸಲಾಯಿತು. ಈ ಬಣ್ಣವು ಬಿಸಿಲು, ಒಗೆತ ಅಥವಾ ಬ್ಲೀಚಿಂಗ್‌ಗಳಿಂದ ಮಾಸಿಹೋಗಲಿಲ್ಲ. ಒಮ್ಮೆ, ಈ ಪ್ರಕ್ರಿಯೆಯು 38 ವಿವಿಧ ಹಂತಗಳನ್ನು ಒಳಗೂಡಿತ್ತಲ್ಲದೆ ಪೂರ್ಣಗೊಳ್ಳಲು ನಾಲ್ಕು ತಿಂಗಳಿನಷ್ಟು ದೀರ್ಘಕಾಲವನ್ನು ತೆಗೆದುಕೊಂಡಿತ್ತು! ಆ ಮ್ಯೂಸಿಯಮ್‌ನಲ್ಲಿ ಪ್ರದರ್ಶನಕ್ಕಿಟ್ಟಿದ್ದ ಅತಿ ಸುಂದರವಾದ ವಸ್ತ್ರಗಳಲ್ಲಿ ಕೆಲವು ಟರ್ಕಿ ಕೆಂಪು ಬಣ್ಣದ್ದಾಗಿತ್ತು (5).

ಕೃತಕ ವರ್ಣದ್ರವ್ಯಗಳ ಆಗಮನ

ನೈಸರ್ಗಿಕವಲ್ಲದ ಮೊದಲ ವರ್ಣದ್ರವ್ಯವನ್ನು 1856ರಲ್ಲಿ ಕಂಡುಹಿಡಿಯಲಾಯಿತು ಮತ್ತು ಅದರ ಹಿರಿಮೆಯು ವಿಲಿಯಮ್‌ ಹೆನ್ರಿ ಪರ್ಕನ್‌ಗೆ ಸೇರುತ್ತದೆ. ಮ್ಯೂಸಿಯಮ್‌ನ ಒಂದು ಪ್ರದರ್ಶನವು ಪರ್ಕನ್‌ನ ಕೆನ್ನೀಲಿ ಅಂದರೆ ಉಜ್ವಲವಾದ ನೇರಿಳೆ ಬಣ್ಣದ ಅವಿಷ್ಕಾರವನ್ನು ವಿವರಿಸುತ್ತದೆ. 19ನೇ ಶತಮಾನದ ಕೊನೆಯದಷ್ಟಕ್ಕೆ ಉಜ್ವಲ ಬಣ್ಣಗಳ ಹಲವಾರು ಕೃತಕ ವರ್ಣದ್ರವ್ಯಗಳನ್ನು ಅಭಿವೃದ್ಧಿಪಡಿಸಲಾಯಿತು. ಇಂದು 8,000ಕ್ಕಿಂತಲೂ ಹೆಚ್ಚಿನ ಕೃತಕ ವರ್ಣದ್ರವ್ಯಗಳನ್ನು ತಯಾರಿಸಲಾಗುತ್ತಿದೆ (6). ಇಂದಿಗೂ ಉಪಯೋಗಿಸಲಾಗುತ್ತಿರುವ ನೈಸರ್ಗಿಕ ವರ್ಣದ್ರವ್ಯಗಳೆಂದರೆ ಲಾಗ್‌ಮರ ಮತ್ತು ಕಾಚಿನೀಲ್‌.

ಇಂದು ರೇಯಾನ್‌ನಂಥ ಕೃತಕ ಪದಾರ್ಥಗಳಿಗೆ ಬಣ್ಣ ಕೊಡಲು ವಿಶೇಷವಾದ ವಿಧಾನಗಳನ್ನು ಬಳಸುತ್ತಾರೆಂದು ಕಲರ್‌ ಮ್ಯೂಸಿಯಮ್‌ನ ಕಲರ್‌ ಅಂಡ್‌ ಟೆಕ್ಸ್‌ಟೈಲ್‌ ಗ್ಯಾಲರಿಯು ವಿವರಿಸುತ್ತದೆ. ವಿಸ್ಕೋಸ್‌ ರೆಯಾನ್‌ ಎಂಬುದು ಇಂದು ಬಹಳ ಜನಪ್ರಿಯವಾಗಿ ಉಪಯೋಗಿಸಲ್ಪಡುತ್ತಿದೆ. ಈ ರೇಯಾನ್‌ ಅನ್ನು ಮೊತ್ತಮೊದಲು 1905ರಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ತಯಾರಿಸಲಾಯಿತು. ಈ ವಿಸ್ಕೋಸ್‌ ರೇಯಾನ್‌ನ ರಸಾಯನಿಕ ರಚನೆಯು ಹತ್ತಿಯ ರಚನೆಯಂತೆಯೇ ಇರುವುದರಿಂದ, ಅಂದು ಲಭ್ಯವಿದ್ದ ಹೆಚ್ಚಿನ ವರ್ಣದ್ರವ್ಯಗಳು ಇದಕ್ಕೆ ಬಣ್ಣ ಕೊಡಲು ಬಳಸಲ್ಪಡುತ್ತಿದ್ದವು. ಹಾಗಿದ್ದರೂ ಆ್ಯಸಿಟೇಟ್‌ ರೇಯಾನ್‌, ಪಾಲಿಸ್ಟರ್‌, ನೈಲಾನ್‌ ಮತ್ತು ಅಕ್ರಿಲಿಕ್‌ ಫೈಬರ್‌ ಮುಂತಾದ ಕೃತಕವಾದ ಆಧುನಿಕ ಪದಾರ್ಥಗಳಿಗಾಗಿ ಹೊಸದಾದ ಅನೇಕ ವರ್ಣದ್ರವ್ಯಗಳನ್ನು ಅಭಿವೃದ್ಧಿ ಪಡಿಸಲೇ ಬೇಕಾಯಿತು.

ಬಿಳಿಚಿಕೊಳ್ಳದ ವರ್ಣದ್ರವ್ಯಗಳ ಉತ್ಪಾದನೆಗೆ ಸವಾಲು

ಬಣ್ಣ ಹೋಗದ ಬಟ್ಟೆಬರೆಗಳನ್ನು ಖರೀದಿಸಲು ನಾವು ಇಷ್ಟಪಡುತ್ತೇವೆ. ಆದರೂ ಬಿಸಿಲು ಅಥವಾ ಪದೇ ಪದೇ ಒಗೆಯುವುದರಿಂದ ಅದರಲ್ಲೂ ಡಿಟರ್ಜಂಟ್‌ ಉಪಯೋಗಿಸಿದಾಗ ಬಟ್ಟೆಗಳ ಬಣ್ಣಗಳು ಮಾಸಿಹೋಗುತ್ತವೆ. ಬೆವರಿನಿಂದಾಗಿ ಇಲ್ಲವೆ ಬೇರೆ ಬಟ್ಟೆಗಳೊಂದಿಗೆ ಒಗೆಯುವುದರಿಂದಲೂ ಕೆಲವೊಮ್ಮೆ ಬಟ್ಟೆಗಳು ವಿವರ್ಣವಾಗುತ್ತವೆ. ಒಗೆಯುವ ಸಮಯದಲ್ಲಿ ಬಣ್ಣ ಹೋಗದಿರುವುದು, ವರ್ಣದ್ರವ್ಯದ ಕಣಗಳು ಬಟ್ಟೆಯ ನೂಲಿನ ಎಳೆಗಳಿಗೆ ಎಷ್ಟು ಬಿಗಿಯಾಗಿ ಅಂಟಿಕೊಂಡಿವೆ ಎಂಬುದರ ಮೇಲೆ ಹೊಂದಿಕೊಂಡಿರುತ್ತದೆ. ಮತ್ತೆ ಮತ್ತೆ ಒಗೆಯುವಿಕೆ ಮತ್ತು ಕಲೆಗಳನ್ನು ಹೋಗಲಾಡಿಸುವ ಶುದ್ಧಿಕಾರಕವು ಸಹ ಬಟ್ಟೆಗಳಿಂದ ವರ್ಣದ್ರವ್ಯವನ್ನು ಬೇರ್ಪಡಿಸುತ್ತದೆ. ಹೀಗೆ ಬಟ್ಟೆಯು ಮಾಸುತ್ತದೆ. ಆದುದರಿಂದ, ವರ್ಣದ್ರವ್ಯಗಳ ತಯಾರಕರು ತಮ್ಮ ಉತ್ಪಾದನೆಗಳು ಬಿಸಿಲು, ಒಗೆತ, ಶುದ್ಧಿಕಾರಕಗಳು ಮತ್ತು ಬೆವರು ಬೀರುವ ಪರಿಣಾಮವನ್ನು ಸಾಕಷ್ಟು ಮಟ್ಟಿಗೆ ತಡೆಯುತ್ತವೋ ಎಂಬುದನ್ನು ಪರೀಕ್ಷಿಸಿ ನೋಡುತ್ತಾರೆ.

ನಮ್ಮ ಪ್ರವಾಸವು, ನಮ್ಮ ಬಟ್ಟೆಗಳನ್ನು ಯಾವ ಪದಾರ್ಥಗಳಿಂದ ತಯಾರಿಸಲಾಗುತ್ತದೆ ಎಂಬುದನ್ನು ನಾವು ಹೆಚ್ಚಾಗಿ ತಿಳಿದುಕೊಳ್ಳುವಂತೆ ಮಾಡಿತು. ಇದಕ್ಕಿಂತಲೂ ಹೆಚ್ಚಾಗಿ, ನಮ್ಮ ಬಟ್ಟೆಗಳನ್ನು ಹಲವು ಬಾರಿ ಒಗೆದರೂ ಅದರ ಬಣ್ಣಗಳು ಮಾಸದಂತೆ ಹಿಡಿದಿಡಲು ಉಪಯೋಗಿಸಲಾಗುವ ಚಾತುರ್ಯಕರ ವಿಧಾನಗಳ ಕುರಿತು ನಾವು ಕಲಿತುಕೊಂಡೆವು. (g 4/07)

[ಪಾದಟಿಪ್ಪಣಿಗಳು]

^ ಪ್ಯಾರ. 4 ಎಸ್‌ಡಿಸಿ​—⁠ಸೊಸೈಟಿ ಆಫ್‌ ಡೈಯರ್ಸ್‌ ಅಂಡ್‌ ಕಲರಿಸ್ಟ್‌​—⁠ಬಣ್ಣ ಕ್ಷೇತ್ರವನ್ನು ಪ್ರಗತಿಮಾಡುತ್ತದೆ.

[Picture Credit Lineon page 26]

Photos 1-4: Courtesy of the Colour Museum, Bradford (www.colour-experience.org)

[ಪುಟ 27ರಲ್ಲಿರುವ ಚಿತ್ರ ಕೃಪೆ]

Photo 5: Courtesy of the Colour Museum, Bradford (www.colour-experience.org); Photo 6: Clariant International Ltd., Switzerland