ದಂತವೈದ್ಯರನ್ನು ಏಕೆ ಕಾಣಬೇಕು?
ದಂತವೈದ್ಯರನ್ನು ಏಕೆ ಕಾಣಬೇಕು?
ಆಧುನಿಕ ದಿನದ ದಂತಚಿಕಿತ್ಸಾಶಾಸ್ತ್ರದ ಆಗಮನಕ್ಕಿಂತ ಮುಂಚೆ ಹೆಚ್ಚಿನ ಜನರು ಯುವ ಪ್ರಾಯದಿಂದಲೇ ಹಲ್ಲುನೋವು ಮತ್ತು ಹಲ್ಲು ಬಿದ್ದು ಹೋಗುವಂತಹ ಸಮಸ್ಯೆಯಿಂದ ಬಾಧಿತರಾಗುತ್ತಿದ್ದರು. ಕಪ್ಪಾದ, ಸೊಟ್ಟಗಾಗಿ ಬೆಳೆದಿರುವ ಅಥವಾ ಬಿದ್ದು ಹೋಗಿರುವ ಹಲ್ಲಿನ ಕಾರಣ ಅನೇಕರ ಮುಖದ ಸೌಂದರ್ಯ ಭಂಗವಾಗುತ್ತಿತ್ತು. ಹಲ್ಲುಗಳು ಬಿದ್ದುಹೋಗಿರುವ ಹಿರಿಯ ವ್ಯಕ್ತಿಗಳಿಗೆ ಸರಿಯಾಗಿ ಆಹಾರವನ್ನು ಅಗಿಯಲು ಆಗದ ಕಾರಣ ಅಗತ್ಯವಾದಂತಹ ಪೋಷಣೆಯ ಕೊರತೆಯುಂಟಾಗಿ ಬೇಗ ಸಾವನ್ನಪ್ಪುತ್ತಿದ್ದರು. ಇಂದು, ಹೆಚ್ಚಿನ ಸಂಖ್ಯೆಯ ದಂತರೋಗಿಗಳು ಹಲ್ಲು ನೋವಿನಿಂದ ಮುಕ್ತಿಪಡೆಯಬಲ್ಲರು ಮಾತ್ರವಲ್ಲ ಜೀವನದುದ್ದಕ್ಕೂ ತಮ್ಮ ಹಲ್ಲುಗಳನ್ನು ಕಾಪಾಡಶಕ್ತರು ಮತ್ತು ಈ ಕಾರಣದಿಂದ ಅವರು ಸುಂದರವಾದ ನಗುವನ್ನು ಉಳಿಸಿಕೊಳ್ಳಶಕ್ತರಾಗಿದ್ದಾರೆ. ಗಮನಾರ್ಹವಾದ ಈ ಮೂರು ಸಂಗತಿಗಳನ್ನು ಆಧುನಿಕ ದಿನದ ದಂತಚಿಕಿತ್ಸಾಶಾಸ್ತ್ರವು ಹೇಗೆ ಸಾಧಿಸಿತು?
ನಿರೋಧಕ ದಂತಚಿಕಿತ್ಸಾಶಾಸ್ತ್ರವು ಹಲ್ಲು ನೋವು ಮತ್ತು ಹಲ್ಲುಗಳು ಬಿದ್ದು ಹೋಗುವುದನ್ನು ತಡೆಯುವುದರಲ್ಲಿ ಮಹತ್ವಪೂರ್ಣ ಅಂಶವಾಗಿದೆ. ಈ ದಂತಚಿಕಿತ್ಸಾಶಾಸ್ತ್ರದಲ್ಲಿ ಹಲ್ಲಿನ ಆರೈಕೆಯ ಕುರಿತಾದ ಶಿಕ್ಷಣ ಮತ್ತು ಕ್ರಮವಾದ ತಪಾಸಣೆಗೆ ಒತ್ತನ್ನು ಕೊಡಲಾಗುತ್ತದೆ. ಯೇಸು ಹೇಳಿದ್ದು: “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು.” (ಲೂಕ 5:31) ಹೀಗೆ ಬಾಯಿಯ ಆರೋಗ್ಯದ ಕುರಿತ ಶಿಕ್ಷಣದಿಂದ ಅನೇಕರು ಎಷ್ಟೊಂದು ಪ್ರಯೋಜನ ಹೊಂದಿದ್ದಾರೆಂದರೆ ಅವರಿಗೆ ಬಹಳ ಅಪರೂಪವಾಗಿ ಯಾವುದೇ ದಂತ ಚಿಕಿತ್ಸೆಯ ಅಗತ್ಯವಿರುತ್ತದೆ. * ಆದರೂ, ಅನೇಕರು ದಂತವೈದ್ಯರ ಬಳಿ ಹೋಗುವುದನ್ನು ತಪ್ಪಿಸುತ್ತಾರೆ. ತಮ್ಮ ಹಲ್ಲುಗಳ ಆರೈಕೆಯ ಕುರಿತು ಯಾವುದೇ ಆಸಕ್ತಿಯಿಲ್ಲದ ಕಾರಣ ಅನೇಕರು ದಂತ ಚಿಕಿತ್ಸೆಯನ್ನು ಕಡೆಗಣಿಸುತ್ತಾರೆ. ಇತರರು, ಅದಕ್ಕೆ ತಗಲುವ ವೆಚ್ಚದ ಕಾರಣ ಹಿಂಜರಿಯುತ್ತಾರೆ. ಇನ್ನಿತರರಿಗೆ, ದಂತವೈದ್ಯರ ಚಿಕಿತ್ಸೆಯನ್ನು ನೆನಸಿದರೇ ಹೆದರಿಕೆಯುಂಟಾಗುತ್ತದೆ. ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ನೀವು ಈ ಪ್ರಶ್ನೆಯನ್ನು ಕೇಳಿಕೊಳ್ಳುವುದು ಯೋಗ್ಯವಾಗಿದೆ: ದಂತವೈದ್ಯರಿಂದ ನಾನು ಹೇಗೆ ಪ್ರಯೋಜನ ಪಡೆಯಬಲ್ಲೆ? ಅವರನ್ನು ಕಾಣುವುದು ನಿಜವಾಗಲೂ ಸಾರ್ಥಕವಾಗಿದೆಯೋ? ನಿರೋಧಕ ದಂತಚಿಕಿತ್ಸಾಶಾಸ್ತ್ರದ ಮಹತ್ವವನ್ನು ಮನಗಾಣಲು, ಮೊದಲಾಗಿ ದಂತವೈದ್ಯರು ಏನನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಹಲ್ಲುಗಳಿಗೆ ಹಾನಿಯಾಗುವ ವಿಧ
ಹಲ್ಲು ನೋವು ಮತ್ತು ಹಲ್ಲು ಬಿದ್ದುಹೋಗುವುದರಿಂದ ಉಂಟಾಗುವ ಯಾತನೆಯನ್ನು ತಡೆಯಲು ದಂತವೈದ್ಯರು ಸಹಾಯಮಾಡಬಲ್ಲರು. ನಿಮ್ಮ ಹಲ್ಲಿಗೆ ಅಂಟಿಕೊಳ್ಳುವ ಪ್ಲಾಕ್ ಅನ್ನು, ಅಂದರೆ ರೋಗಾಣುಗಳಿಂದ ಕೂಡಿದ ಒಂದು ಮೆದು ಪದರದಿಂದಾಗುವ ದುಷ್ಪರಿಣಾಮಗಳನ್ನು ದಂತವೈದ್ಯರು ತಡೆಗಟ್ಟಲು ಪ್ರಯತ್ನಮಾಡುತ್ತಾರೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯ. ಆ ರೋಗಾಣುಗಳು ನಿಮ್ಮ ಹಲ್ಲುಗಳಲ್ಲಿ ಸಿಕ್ಕಿಕೊಂಡಿರುವ ಆಹಾರ ಪದಾರ್ಥಗಳ ಮೇಲೆ ಹಸನಾಗಿ ಬೆಳೆಯುತ್ತವೆ. ಅವು ಶರ್ಕರ ಪಿಷ್ಟವನ್ನು ಆಮ್ಲಗಳನ್ನಾಗಿ ಪರಿವರ್ತಿಸುತ್ತವೆ. ಈ ಆಮ್ಲಗಳು ಹಲ್ಲಿನ ವಜ್ರಗಾರೆಯ (ಎನಾಮಲ್—ಬಿಳಿಯಾದ ಮೇಲ್ಪದರ) ಮೇಲೆ ದಾಳಿ ನಡೆಸಿ ಅದರಲ್ಲಿ ರಂಧ್ರಗಳನ್ನು ಮಾಡುತ್ತವೆ. ರಂಧ್ರವು ಹುಟ್ಟಿರುವ ಭಾಗವು ಬಿದ್ದು ಹೋಗಿ ಆ ಭಾಗದಲ್ಲಿ ಒಂದು ಕುಳಿಯುಂಟಾಗುತ್ತಾ ಹುಳುಕುಹಲ್ಲು ಇಲ್ಲವೇ ದಂತಕ್ಷಯ ಪರಿಣಮಿಸುತ್ತದೆ. ಈ ಸಮಯದಲ್ಲಿ ನಿಮಗೆ ಯಾವುದೇ ನೋವು ಯಾ ಅಹಿತಕರ ಅನುಭವವಾಗುವುದಿಲ್ಲ. ಆದರೆ ಕೊಳೆಯುವಿಕೆಯು ನಿಧಾನವಾಗಿ ನಿಮ್ಮ ಹಲ್ಲುಗಳ ತಿರುಳಿನ ಕೇಂದ್ರ ಭಾಗವನ್ನು ತಲಪಿದಾಗ ನೀವು ವಿಪರೀತ ನೋವನ್ನು ಅನುಭವಿಸಬಹುದು.
ಪ್ಲಾಕನ್ನು ನಿರ್ಮಿಸುವ ರೋಗಾಣುಗಳು ಇನ್ನೊಂದು ವಿಧದಲ್ಲಿಯೂ ನಿಮ್ಮನ್ನು ಯಾತನೆಗೊಳಪಡಿಸಬಹುದು. ಹಲ್ಲುಜ್ಜುವಾಗ ಪ್ಲಾಕನ್ನು ಜಾಗರೂಕತೆಯಿಂದ ತೆಗೆಯದಿದ್ದಲ್ಲಿ, ಅದು ಗಟ್ಟಿಯಾಗುತ್ತಾ ಕ್ಯಾಲ್‌ಕುಲಸ್ ಅಥವಾ ಟಾರ್ಟಾರ್ (ಪಾಚಿ) ಎಂಬ ಕ್ಯಾಲ್ಸಿಯಂನ ಶೇಖರಣವನ್ನು ಉಂಟುಮಾಡುತ್ತದೆ. ಇದರಿಂದಾಗಿ ವಸಡುಗಳ ಉರಿತ ಉಂಟಾಗಬಹುದು ಮತ್ತು ವಸಡುಗಳು ಹಲ್ಲುಗಳಿಂದ ದೂರಸರಿಯುತ್ತವೆ. ಇದರ ಪರಿಣಾಮವಾಗಿ ಹಲ್ಲುಗಳು ಮತ್ತು ವಸಡಿನ ಮಧ್ಯೆ ಸಂದುಗಳು ಉಂಟಾಗಿ, ಆ ಸಂದುಗಳಲ್ಲಿ ಆಹಾರವು ಸಿಕ್ಕಿಹಾಕಿಕೊಳ್ಳುತ್ತದೆ. ಈ ಸಿಕ್ಕಿಹಾಕಿಕೊಂಡಿರುವ ಆಹಾರವು ರೋಗಾಣುಗಳಿಗೆ ಮೃಷ್ಟಾನ್ನ ಭೋಜನದಂತಿದೆ. ಇಲ್ಲಿ ಹಸನಾಗಿ ಬೆಳೆದ ರೋಗಾಣುಗಳು ಕೊನೆಗೆ ನಿಮ್ಮ ವಸಡುಗಳಿಗೆ ಸೋಂಕನ್ನುಂಟು ಮಾಡುತ್ತವೆ. ಈ ಸ್ಥಿತಿಯನ್ನು ನಿಯಂತ್ರಿಸಲು ನಿಮ್ಮ ವೈದ್ಯರು ನಿಮಗೆ ಸಹಾಯಮಾಡಬಲ್ಲರು. ಆದರೆ ನೀವು ಅಲಕ್ಷ್ಯವನ್ನು ತೋರಿಸುವಲ್ಲಿ, ನಿಮ್ಮ ಹಲ್ಲುಗಳ ಸುತ್ತಲಿರುವ ಅಂಗಾಂಶಗಳಿಗೆ ಬಹಳಷ್ಟು ಹಾನಿಯಾಗಿ, ಕೊನೆಗೆ ನಿಮ್ಮ ಹಲ್ಲುಗಳು ಬಿದ್ದೇ ಹೋಗಬಹುದು. ದಂತಕ್ಷಯದಿಂದಾಗಿ ಹಲ್ಲುಗಳು ಬೀಳುವುದಕ್ಕಿಂತ ಈ ರೀತಿಯಾಗಿ ಜನರು ತಮ್ಮ ಹಲ್ಲುಗಳನ್ನು ಕಳೆದುಕೊಳ್ಳುವುದೇ ಹೆಚ್ಚು.
ನಿಮ್ಮ ಬಾಯಿಯಲ್ಲಿರುವ ಲಾಲಾ ರಸ ಅಥವಾ ಜೊಲ್ಲು, ರೋಗಾಣುಗಳ ಈ ಇಮ್ಮಡಿ ಅಕ್ರಮಣದಿಂದ ಕೊಂಚ ಮಟ್ಟಿಗೆ ರಕ್ಷಣೆಯನ್ನು ಒದಗಿಸುತ್ತದೆ. ನೀವು ಹೊಟ್ಟೆ ತುಂಬಾ ಊಟ ಮಾಡಿರಲಿ ಅಥವಾ ಒಂದೇ ಒಂದು ಮಿಠಾಯಿಯನ್ನೇ ತಿಂದಿರಲಿ, ಬಾಯಲ್ಲಿ ಉಳಿದಿರುವ ಆಹಾರದ ಕಣಗಳನ್ನು ಹಲ್ಲುಗಳಿಂದ ತೊಡಗಿಸಲು ಮತ್ತು ನಿಮ್ಮ ಹಲ್ಲುಗಳ ಮೇಲೆ ಶೇಖರಣೆಯಾಗಿರುವ ಪ್ಲಾಕ್‌ನಲ್ಲಿನ ಆಮ್ಲವನ್ನು ನಿಷ್ಪರಿಣಾಮಗೊಳಿಸಲು ಲಾಲಾ ರಸಕ್ಕೆ 15ರಿಂದ 45 ನಿಮಿಷಗಳು ಬೇಕಾಗುತ್ತವೆ. ಈ ಕೆಲಸಕ್ಕೆ ತಗಲುವ ಸಮಯವು, ನಿಮ್ಮ ಹಲ್ಲಿಗೆ ಎಷ್ಟು ಪ್ರಮಾಣದ ಶರ್ಕರ ಪಿಷ್ಟ ಅಥವಾ ಆಹಾರದ ಚೂರುಗಳು ಅಂಟಿಕೊಂಡಿವೆ ಎಂಬುದರ ಮೇಲೆ ಹೊಂದಿಕೊಂಡಿದೆ. ಸ್ಪಷ್ಟವಾಗಿಯೇ, ನಿಮ್ಮ ಹಲ್ಲುಗಳಿಗೆ ಹಾನಿಯಾಗುವುದು ಈ ಸಮಯದಲ್ಲಿಯೇ. ಈ ಕಾರಣದಿಂದ, ನಿಮ್ಮ ಹಲ್ಲುಗಳಿಗಾಗುವ ಹಾನಿಯ ಮಟ್ಟವು ನೀವು ತಿನ್ನುವ ಸಕ್ಕರೆಯ ಅಂಶವಿರುವ ಆಹಾರದ ಪ್ರಮಾಣದ ಮೇಲೆ ಹೊಂದಿಕೊಂಡಿರುವುದಿಲ್ಲ. ಬದಲಿಗೆ, ನೀವು ಎಷ್ಟು ಸಲ ಆಹಾರ ಮತ್ತು ಶರ್ಕರ ಅಂಶವಿರುವ ತಿಂಡಿ ತಿನಿಸುಗಳನ್ನು ಸೇವಿಸುತ್ತೀರಿ ಎಂಬುದರ ಮೇಲೆ ಹೊಂದಿಕೊಂಡಿದೆ. ನೀವು ನಿದ್ರಿಸುತ್ತಿರುವಾಗ ಲಾಲಾ ರಸದ ಹರಿವು ಕಡಿಮೆಯಿರುವುದರಿಂದ, ಮಲಗುವ ಸ್ವಲ್ಪ ಹೊತ್ತಿನ ಮುಂಚೆ ಯಾವುದೇ ಆಹಾರ ಪದಾರ್ಥವನ್ನು ಅಥವಾ ಸಿಹಿ ಅಂಶವಿರುವ ಪಾನಕಗಳನ್ನು ಸೇವಿಸಿ, ನಂತರ ಹಲ್ಲುಜ್ಜದೇ ಮಲಗುವುದರಿಂದ ನಿಮ್ಮ ಹಲ್ಲುಗಳಿಗೆ ಬಹಳಷ್ಟು ಹಾನಿಯನ್ನು ಮಾಡಬಲ್ಲಿರಿ. ಇನ್ನೊಂದು ಪಕ್ಷದಲ್ಲಿ, ಊಟದ ನಂತರ ಸಕ್ಕರೆರಹಿತ ಚೂಯಿಂಗ್‌ಗಮ್ಮು ತಿನ್ನುವದು ಲಾಲಾ ರಸದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಇದು ನಿಮ್ಮ ಹಲ್ಲುಗಳನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ನಿರೋಧಕ ದಂತಚಿಕಿತ್ಸಾಶಾಸ್ತ್ರ
ನಿಮ್ಮ ಹಲ್ಲುಗಳ ಸ್ಥಿತಿಯನ್ನು ಆಧರಿಸಿ, ಕ್ರಮವಾಗಿ ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ನಿಮ್ಮ ಹಲ್ಲುಗಳ ತಪಾಸಣೆಯನ್ನು ಮಾಡಿಸಿಕೊಳ್ಳುವಂತೆ ದಂತವೈದ್ಯರು ಶಿಫಾರಸ್ಸು ಮಾಡುತ್ತಾರೆ. ತಪಾಸಣೆಯ ಸಮಯದಲ್ಲಿ, ದಂತವೈದ್ಯರು ನಿಮ್ಮ ಹಲ್ಲುಗಳ ಕ್ಷ-ಕಿರಣ ಚಿತ್ರವನ್ನು ತೆಗೆದು, ನಿಮ್ಮ ಹಲ್ಲುಗಳಲ್ಲಿ ಯಾವುದೇ ಹುಳುಕಿದೆಯೋ ಎಂದು ಜಾಗರೂಕತೆಯಿಂದ ಪರೀಕ್ಷಿಸುತ್ತಾರೆ. ಅರಿವಳಿಕೆ ಮತ್ತು ಅತಿ ಹೆಚ್ಚು ವೇಗದಲ್ಲಿ ಕೊರೆಯುವ ಯಂತ್ರವನ್ನು (ಡ್ರಿಲ್) ಬಳಸಿ, ಅವರು ನಿಮ್ಮ ಹಲ್ಲುಗಳಲ್ಲಿ ಕಂಡು ಬಂದ ಹುಳುಕನ್ನು ನಿಮಗೆ ಯಾವುದೇ ನೋವಾಗದಂತೆ ಕೆಲವು ಪದಾರ್ಥಗಳಿಂದ ತುಂಬಿಸುತ್ತಾರೆ. ಯಾರು ಡ್ರಿಲ್‌ಗೆ ಹೆದರುತ್ತಾರೋ ಅಂತಹವರ ಚಿಕಿತ್ಸೆಯಲ್ಲಿ ಕೆಲವು ವೈದ್ಯರು ಲೇಸರ್ ಅಥವಾ ಹಲ್ಲಿನಲ್ಲಿ ಹುಳುಕುಭಾಗವನ್ನು ಕರಗಿಸಿಬಿಡುವಂತಹ ಜೆಲ್ ಉಪಯೋಗಿಸುತ್ತಾರೆ. ಈ ಮೂಲಕ ಡ್ರಿಲ್ ಅಥವಾ ಅರಿವಳಿಕೆಯ ಉಪಯೋಗವನ್ನು ಕಡಿಮೆಮಾಡಬಹುದು ಅಥವಾ ಸಂಪೂರ್ಣವಾಗಿ ತಡೆಗಟ್ಟಬಹುದು. ಮಕ್ಕಳಲ್ಲಿ ಹೊಸದಾಗಿ ಹುಟ್ಟಿರುವ ದವಡೆಯ ಹಲ್ಲುಗಳಿಗೆ ದಂತವೈದ್ಯರು ವಿಶೇಷ ಗಮನ ಕೊಡುತ್ತಾರೆ. ಆ ದವಡೆ ಹಲ್ಲುಗಳ ಮೇಲ್ಭಾಗದಲ್ಲಿ, ಅಂದರೆ ಎಲ್ಲಿ ಆಹಾರವನ್ನು ಕಚ್ಚಲಾಗುತ್ತದೋ ಅಲ್ಲಿ ಯಾವುದಾದರೂ ಸೀಳು ಅಥವಾ ಬಿರುಕು ಉಂಟಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಹಲ್ಲುಜ್ಜುವಾಗ ಆ ಭಾಗಗಳನ್ನು ಬ್ರಶ್‌ನಿಂದ ಶುಚಿಗೊಳಿಸಲು ಕಷ್ಟವಾಗುತ್ತದೆ. ಆದಕಾರಣ, ಆ ಹಲ್ಲಿನ ಮೇಲ್ಭಾಗವನ್ನು ನುಣುಪಾಗಿ ಮಾಡಲು ಹಾಗೂ ಅದನ್ನು ಶುಚಿಗೊಳಿಸುವುದನ್ನು ಸುಲಭವನ್ನಾಗಿ ಮಾಡಲು ಮತ್ತು ಈ ಮೂಲಕ ದಂತಕ್ಷಯವಾಗುವುದನ್ನು ತಡೆಯಲು ಅಂತಹ ಸೀಳುಗಳನ್ನು ಸೀಲೆಂಟ್‌ನಿಂದ ಮುಚ್ಚುವ ಸಲಹೆಯನ್ನು ದಂತವೈದ್ಯರು ನೀಡಬಹುದು.
ಆದರೆ ವಯಸ್ಕ ರೋಗಿಗಳ ಉಪಚಾರ ಮಾಡುವಾಗ ಅವರನ್ನು ವಸಡು ರೋಗದಿಂದ ಕಾಪಾಡಲು ದಂತವೈದ್ಯರು ವಿಶೇಷ ಕಾಳಜಿವಹಿಸುತ್ತಾರೆ. ಆದಕಾರಣ, ಅವರು ಹಲ್ಲಿನ ಮೇಲೆ ಗಟ್ಟಿಯಾಗಿರುವ ಕ್ಯಾಲ್‌ಕುಲಸ್‌ನ ಯಾವುದೇ ಶೇಖರಣೆಯನ್ನು ಕಂಡುಕೊಂಡಲ್ಲಿ ಅದನ್ನು ಕೆರೆದು ತೆಗೆದುಬಿಡುತ್ತಾರೆ. ಹೆಚ್ಚಿನ ಜನರು ಹಲ್ಲುಗಳನ್ನು ಉಜ್ಜುವಾಗ ಪ್ರತಿ ಬಾರಿ ಹಲ್ಲುಗಳ ಕೆಲವೊಂದು ನಿರ್ದಿಷ್ಟ ಭಾಗಗಳನ್ನು ಉಜ್ಜಲು ತಪ್ಪುತ್ತಾರೆ. ಈ ನಿಟ್ಟಿನಲ್ಲಿ, ನಿಮ್ಮ ದಂತವೈದ್ಯರು, ನೀವು ಹಲ್ಲುಗಳನ್ನು ಉಜ್ಜುವ ರೀತಿಯನ್ನು ಹೇಗೆ ಉತ್ತಮಗೊಳಿಸಬಲ್ಲಿರಿ ಎಂಬುದನ್ನು ತೋರಿಸಿಕೊಡಬಲ್ಲರು. ಕೆಲವು ದಂತವೈದ್ಯರು ತಮ್ಮ ರೋಗಿಗಳನ್ನು, ಕ್ಯಾಲ್‌ಕುಲಸನ್ನು ತೆಗೆದುಹಾಕುವುದರಲ್ಲಿ ಮತ್ತು ಹಲ್ಲುಜ್ಜುವ ವಿಧಾನಗಳಲ್ಲಿ ವಿಶೇಷ ತರಬೇತಿಯನ್ನು ಪಡೆದಿರುವ ದಂತ ತಜ್ಞರ ಬಳಿ ಕಳುಹಿಸುತ್ತಾರೆ.
ಹಾಳಾಗಿರುವ ಹಲ್ಲುಗಳನ್ನು ಸರಿಪಡಿಸುವುದು
ನಿಮ್ಮ ಹಲ್ಲುಗಳು ಹಾನಿಗೊಳಗಾಗಿರುವಲ್ಲಿ, ಬಿದ್ದುಹೋಗಿರುವಲ್ಲಿ ಅಥವಾ ಸೊಟ್ಟಗಾಗಿ ಬೆಳೆದಿರುವಲ್ಲಿ ಅವುಗಳನ್ನು ಸರಿಪಡಿಸಲು ದಂತವೈದ್ಯರ ಬಳಿ ಅನೇಕ ಹೊಸ ವಿಧಾನಗಳಿವೆ ಎಂಬುದನ್ನು ತಿಳಿದು ನಿಮಗೆ ಸಂತೋಷವಾಗಬಹುದು. ಆದರೆ, ಹಲ್ಲು ಸರಿಪಡಿಸುವ ಚಿಕಿತ್ಸೆಯು ಬಹಳ ದುಬಾರಿಯಾಗಿರುವ ಕಾರಣ ನಿಮ್ಮ ಶಕ್ತಿಮೀರಿ ಖರ್ಚುಮಾಡುವದರ ಬಗ್ಗೆ ಎಚ್ಚರಿಕೆಯಿಂದಿರಿ. ಹಲ್ಲನ್ನು ಸರಿಪಡಿಸುವ ಚಿಕಿತ್ಸೆಯು ದುಬಾರಿಯಾಗಿರುವುದಾದರೂ ಅದು ಸಾರ್ಥಕವೆಂಬುದು ಅನೇಕರ ಅಭಿಪ್ರಾಯ. ಏಕೆಂದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ದಂತವೈದ್ಯರು ನಿಮಗೆ ಅಗಿಯುವ ಸಾಮರ್ಥ್ಯವನ್ನು ಪುನಃ ನೀಡುತ್ತಿದ್ದಾರೆ ಅಥವಾ ನಿಮ್ಮ ನಗು ಹೆಚ್ಚು ಆಕರ್ಷಕವಾಗಿ ತೋರುವಂತೆ ಸಹಾಯಮಾಡುತ್ತಿದ್ದಾರೆ. ಇದು ಸಣ್ಣ ವಿಷಯವೇನಾಗಿಲ್ಲ, ಏಕೆಂದರೆ ವಿಕಾರವಾಗಿರುವ ಹಲ್ಲುಗಳು ನಿಮ್ಮ ಜೀವನದ ಗುಣಮಟ್ಟವನ್ನೇ ಪ್ರಭಾವಿಸಬಲ್ಲವು.
ಮುಂಭಾಗದಲ್ಲಿರುವ ಹಲ್ಲುಗಳು ಮುರಿದು ಹೋಗಿರುವಲ್ಲಿ ಅಥವಾ
ಅವುಗಳ ಮೇಲೆ ಕಲೆಗಳಿರುವಲ್ಲಿ ಅವುಗಳಿಗೆ ಪಾರದರ್ಶಕ ಪಿಂಗಾಣಿಯಿಂದ ಮಾಡಿರುವ ತೆಳು ಹೊದಿಕೆಯನ್ನು (ವಿನಿಅರ್) ಲೇಪಿಸುವಂತೆ ದಂತವೈದ್ಯರು ಸಲಹೆ ನೀಡಬಹುದು. ಈ ಲೇಪನವು ಸಹಜ ಹಲ್ಲುಗಳ ಎನಾಮಲನ್ನು ನಿಕಟವಾಗಿ ಹೋಲುತ್ತದೆ. ವಿನಿಅರನ್ನು ಹಾನಿಗೊಳಗಾಗಿರುವ ಹಲ್ಲಿನ ಹೊರಮೈಗೆ ಅಂಟಿಸಲಾಗುತ್ತದೆ ಮತ್ತು ಈ ಮೂಲಕ ಆ ಹಲ್ಲಿಗೆ ಹೊಸ ಆಕಾರ ಮತ್ತು ರೂಪವನ್ನು ನೀಡಲಾಗುತ್ತದೆ. ಹೆಚ್ಚು ಹಾನಿಗೊಳಗಾದ ಹಲ್ಲಿಗೆ ಕ್ಯಾಪ್ (ಲೋಹದ ರಕ್ಷಾಕವಚ) ಅಥವಾ ಸಾಮಾನ್ಯವಾಗಿ ಯಾವುದನ್ನು ಕ್ರೌನ್ ಎಂದು ಕರೆಯಲಾಗುತ್ತದೋ ಅದನ್ನು ಹಾಕಿಸಿಕೊಳ್ಳುವಂತೆ ದಂತವೈದ್ಯರು ಶಿಫಾರಸು ಮಾಡಬಹುದು. ಈ ಕ್ರೌನ್, ಹಲ್ಲಿನ ಉಳಿದಿರುವ ಭಾಗವನ್ನು ಮುಚ್ಚುತ್ತದೆ ಮತ್ತು ಚಿನ್ನದ ಅಥವಾ ನಿಜವಾದ ಹಲ್ಲಿನಂತೆ ತೋರುವ ಪದಾರ್ಥದಿಂದ ಮಾಡಿದ ಸಂಪೂರ್ಣ ಹೊಸ ಹೊರಮೈಯನ್ನು ಆ ಹಲ್ಲಿಗೆ ಕೊಡುತ್ತದೆ.ಈಗಾಗಲೇ ಬಿದ್ದು ಹೋಗಿರುವ ಹಲ್ಲುಗಳ ವಿಷಯದಲ್ಲಿ ನಿಮ್ಮ ದಂತವೈದ್ಯರು ಏನು ಮಾಡಬಲ್ಲರು? ಕಳಚಬಹುದಾದಂತಹ ಕೃತಕ ದಂತಪಂಕ್ತಿಯನ್ನು ಅವರು ಜೋಡಿಸಬಲ್ಲರು ಅಥವಾ ಸ್ಥಿರವಾಗಿ ನಿಲ್ಲುವ ಒಂದು ಬ್ರಿಡ್ಜನ್ನು ಜೋಡಿಸಬಲ್ಲರು. ಈ ಬ್ರಿಡ್ಜ್ ಅನ್ನು ಜೋಡಿಸಲಿಕ್ಕಾಗಿ, ಖಾಲಿ ಬಿದ್ದ ಜಾಗದ ಅಕ್ಕಪಕ್ಕದ ಹಲ್ಲುಗಳನ್ನು ಅಪ್ಪಿಹಿಡಿಯುವ ಕೃತಕ ಹಲ್ಲುಗಳ ಅಚ್ಚನ್ನು ತಯಾರಿಸಿ ಒತ್ತಿ ಕೂಡಿಸಲಾಗುತ್ತದೆ. ಜನಪ್ರಿಯವಾಗುತ್ತಿರುವ ಇನ್ನೊಂದು ಪರ್ಯಾಯವನ್ನು ಇಂಪ್ಲಾಂಟ್ ಎಂದು ಕರೆಯಲಾಗುತ್ತದೆ. ಟೈಟಾನಿಯಂ ಲೋಹದಿಂದ ಮಾಡಿದ ಕೊಳವೆಯನ್ನು ದಂತವೈದ್ಯರು ಈ ಮೊದಲು ಹಲ್ಲಿದ್ದ ಸ್ಥಳದಲ್ಲಿ ದವಡೆಮೂಳೆಯೊಳಗೆ ಹುದುಗಿಸುತ್ತಾರೆ. ವಸಡುಗಳು ಮತ್ತು ಮೂಳೆಯು ಬೆಳೆದು ಆ ಜಾಗವನ್ನು ಭದ್ರವಾಗಿಸಿದಾಗ ಆ ಕೊಳವೆಯ ಮೇಲೆ ಕೃತಕ ಹಲ್ಲನ್ನು ಕೂರಿಸುತ್ತಾರೆ. ಇದು ನಿಜವಾದ ಹಲ್ಲಿನಂತೆಯೇ ತೋರುತ್ತದೆ.
ಸೊಟ್ಟಗಾಗಿ ಬೆಳೆದಿರುವ ಹಲ್ಲುಗಳು ಮುಜುಗರವನ್ನು ಉಂಟುಮಾಡಬಹುದು ಮತ್ತು ಅವುಗಳನ್ನು ಸ್ವಚ್ಛಗೊಳಿಸುವುದು ಕಷ್ಟಕರವಾಗಿರುವುದರಿಂದ ಅವು ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಹಲ್ಲುಗಳು ಸಮನಾದ ಸಾಲಿನಲ್ಲಿಲ್ಲದಿರುವುದು ಬಹಳ ನೋವನ್ನುಂಟುಮಾಡಿ ಅಗಿಯುವುದನ್ನು ಕಷ್ಟಕರವನ್ನಾಗಿ ಮಾಡಬಹುದು. ಸಂತೋಷಕರವಾಗಿಯೇ, ದಂತಬಂಧಗಳನ್ನು ಕಟ್ಟುವ ಮೂಲಕ ದಂತವೈದ್ಯರು ಅಂತಹ ತೊಂದರೆಗಳನ್ನು ಸರಿಪಡಿಸಬಲ್ಲರು. ಇವುಗಳ ವಿನ್ಯಾಸದಲ್ಲಿ ಇತ್ತೀಚೆಗೆ ಆಗಿರುವ ಅಭಿವೃದ್ಧಿಗಳಿಂದಾಗಿ ಆಧುನಿಕ ದಂತಬಂಧಗಳು ಎದ್ದುಕಾಣುವುದಿಲ್ಲ ಮತ್ತು ಅವುಗಳನ್ನು ಆಗಾಗ್ಗೆ ಸರಿ ಹೊಂದಿಸಬೇಕೆಂದಿಲ್ಲ.
ಕೆಲವು ದಂತವೈದ್ಯರು ಉಸಿರಿನ ದುರ್ನಾತದ ಚಿಕಿತ್ಸೆಗೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದಾರೆ. ಹೆಚ್ಚಿನ ಜನರಿಗೆ ಆಗಾಗ್ಗೆ ಈ ಸಮಸ್ಯೆ ಉಂಟಾಗುತ್ತದೆ ಮತ್ತು ಇತರರಿಗೆ ಇದು ಯಾವಾಗಲೂ ಇರುತ್ತದೆ. ಇದಕ್ಕೆ ಕಾರಣಗಳು ಅನೇಕವಿರಬಹುದು. ಕೆಲವು ದಂತವೈದ್ಯರು ಉಸಿರಿನ ದುರ್ನಾತಕ್ಕೆ ನಿರ್ದಿಷ್ಟ ಕಾರಣವೇನೆಂಬುದನ್ನು ಪತ್ತೆಹಚ್ಚಲು ಸಜ್ಜಿತರಾಗಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈ ದುರ್ನಾತಕ್ಕೆ ಕಾರಣವು, ನಾಲಿಗೆಯ ಹಿಂಬದಿಯಲ್ಲಿರುವ ರೋಗಾಣುಗಳಾಗಿವೆ. ನಾಲಿಗೆಯನ್ನು ಉಜ್ಜುವುದು ಅಥವಾ ಕೆರೆಯುವುದು ಮತ್ತು ಸಕ್ಕರೆರಹಿತ ಚೂಯಿಂಗ್‌ಗಮ್ಮು ಅಗಿಯುವುದರಿಂದ ಲಾಲಾ ರಸವನ್ನು ಹೆಚ್ಚಿಸುವುದು ಸಹಾಯಕಾರಿಯಾಗಿರಬಲ್ಲದು. ಹಾಲಿನ ಉತ್ಪನ್ನಗಳು, ಮಾಂಸ ಅಥವಾ ಮೀನನ್ನು ತಿಂದ ನಂತರ ನಿಮ್ಮ ಬಾಯನ್ನು ಶುಚಿಗೊಳಿಸುವುದು ಅತ್ಯಂತ ಪ್ರಾಮುಖ್ಯವಾಗಿದೆ.
ಹೆದರಿಕೆಯನ್ನು ನಿಭಾಯಿಸುವುದು
ದಂತವೈದ್ಯರನ್ನು ಕಾಣುವುದು ನಿಮ್ಮನ್ನು ಭಯಭ್ರಾಂತರನ್ನಾಗಿಸುತ್ತದಾದರೆ, ಆ ಭಯವನ್ನು ಜಯಿಸಲು ನಿಮ್ಮ ದಂತವೈದ್ಯರು ನಿಮಗೆ ಸಹಾಯನೀಡಬಲ್ಲರು. ಆದಕಾರಣ, ನಿಮಗೆ ಹೇಗನಿಸುತ್ತದೆ ಎಂಬುದನ್ನು ಅವರಿಗೆ ತಿಳಿಸಿರಿ. ಚಿಕಿತ್ಸೆಯ ಸಮಯದಲ್ಲಿ ನಿಮಗೆ ನೋವಾದಾಗ ಅಥವಾ ಹೆದರಿಕೆಯಾದಾಗ ನೀವು ಯಾವ ರೀತಿಯ ಕೈಸನ್ನೆ ಮಾಡುವಿರೆಂದು ಅವರಿಗೆ ಮೊದಲೇ ಹೇಳಿರಿ. ಈ ಉಪಾಯವು ಅನೇಕ ರೋಗಿಗಳಿಗೆ ಧೈರ್ಯ ಕೊಟ್ಟಿದೆ.
ನಿಮ್ಮ ಹಲ್ಲುಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡಿರದ ಕಾರಣ ದಂತವೈದ್ಯರು ನಿಮ್ಮನ್ನು ಬಯ್ಯಬಹುದು ಎಂಬ ಭಯ ನಿಮಗಿರಬಹುದು. ನಿಮ್ಮ ಹಲ್ಲುಗಳ ಒಳ್ಳೆಯ ಆರೈಕೆ ಮಾಡಿರದ ಕಾರಣ ಅವುಗಳ ಸ್ಥಿತಿಯನ್ನು ನೋಡಿ, ಅವರು ನಿಮ್ಮನ್ನು ಅಣಕಿಸಬಹುದು ಎಂಬ ಚಿಂತೆ ನಿಮಗಿರಬಹುದು. ಆದರೂ, ಆ ರೀತಿಯ ಹೇಳಿಕೆಗಳಿಂದಾಗಿ ಅವರು ಸ್ವತಃ ತಮ್ಮ ವೃತ್ತಿಗೆ ನಷ್ಟ ಮಾಡಿಕೊಳ್ಳುವುದರಿಂದ, ಹೆಚ್ಚಾಗಿ ಯಾರೂ ಹಾಗೆ ಹೇಳಲಿಕ್ಕಿಲ್ಲ. ಹಾಗಿದ್ದ ಮೇಲೆ ನೀವು ಭಯಪಡುವ ಪ್ರಮೇಯವೇ ಇಲ್ಲವೆಂದಾಯಿತು. ಹೆಚ್ಚಿನ ದಂತವೈದ್ಯರು ತಮ್ಮ ರೋಗಿಗಳೊಂದಿಗೆ ಬಹಳ ವಿನಯದಿಂದ ಮಾತಾಡುವುದರಲ್ಲಿ ಆಸಕ್ತಿಯುಳ್ಳವರಾಗಿದ್ದಾರೆ.
ದಂತ ಚಿಕಿತ್ಸೆಗೆ ತಗಲುವ ಖರ್ಚು ಅನೇಕರು ದಂತವೈದ್ಯರ ಬಳಿ ಹೋಗುವುದನ್ನು ತಡೆಯುತ್ತದೆ. ಆದರೆ, ನೀವು ಈಗಲೇ ತಪಾಸಣೆ ಮಾಡಿಸಿಕೊಂಡಲ್ಲಿ ಅದು ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಮತ್ತು ಹೆಚ್ಚು ದುಬಾರಿಯಾದ ಚಿಕಿತ್ಸೆಯನ್ನು ತಡೆಗಟ್ಟಬಹುದು. ಅನೇಕ ಸ್ಥಳಗಳಲ್ಲಿ ಪ್ರತಿಯೊಬ್ಬರ ಕೈಗೂ ನಿಲುಕುವಂತಹ ವಿವಿಧ ಮಟ್ಟಗಳ ದಂತಚಿಕಿತ್ಸಾ ವಿಧಾನಗಳಿವೆ. ಅತಿ ಸಣ್ಣದಾದ ದಂತ ಕ್ಲಿನಿಕ್‌ನಲ್ಲೂ ಕ್ಷ-ಕಿರಣ ಯಂತ್ರ ಮತ್ತು ಅತಿ ವೇಗದ ಡ್ರಿಲ್ ಹೆಚ್ಚಿನಾಂಶ ಇದ್ದೇ ಇರುತ್ತದೆ. ದಂತವೈದ್ಯರು ಹೆಚ್ಚಿನ ಚಿಕಿತ್ಸೆಗಳನ್ನು ರೋಗಿಗಳಿಗೆ ಹೆಚ್ಚು ತೊಂದರೆಯಾಗದ ರೀತಿಯಲ್ಲಿ ನಿರ್ವಹಿಸಬಲ್ಲರು. ಅರಿವಳಿಕೆಯು ಅಗ್ಗವಾಗಿರುವುದರಿಂದ ಅದರ ಬೆಲೆಯು ಎಲ್ಲರ—ಕಡಿಮೆ ಹಣವುಳ್ಳವರ—ಕೈಗೂ ಎಟಕುವಂತಿದೆ.
ದಂತವೈದ್ಯರಿರುವುದು ನೋವನ್ನುಂಟುಮಾಡಲಿಕ್ಕಾಗಿ ಅಲ್ಲ ಬದಲಾಗಿ ಆ ನೋವು ನಿವಾರಣೆ ಮಾಡಲಿಕ್ಕಾಗಿಯೇ. ನಿಮ್ಮ ಅಜ್ಜಅಜ್ಜಿಯಂದಿರ ಕಾಲದಲ್ಲಿ ದಂತವೈದ್ಯರನ್ನು ಕಾಣುವುದು ಅಹಿತಕರ ಅನುಭವವಾಗಿರುತ್ತಿತ್ತು. ಆದರೆ ಇಂದು ವಿಷಯವು ಬದಲಾಗಿದೆ. ಆರೋಗ್ಯಕರವಾದ ಹಲ್ಲುಗಳು ಇಡೀ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯಮಾಡುವುದರಿಂದ ಮತ್ತು ನೀವು ಜೀವನವನ್ನು ಇನ್ನೂ ಹೆಚ್ಚು ಆನಂದಿಸಲು ಸಹಾಯಮಾಡುವುದರಿಂದ, ನೀವ್ಯಾಕೆ ದಂತವೈದ್ಯರನ್ನು ಆದಷ್ಟು ಬೇಗನೇ ಕಾಣಬಾರದು? ಆ ಭೇಟಿಯಿಂದ ನಿಮಗೆ ಆಶ್ಚರ್ಯಕರ ರೀತಿಯಲ್ಲಿ ಒಳಿತಾಗಬಹುದು. (g 5/07)
[ಪಾದಟಿಪ್ಪಣಿ]
^ ಪ್ಯಾರ. 3 ಈ ಲೇಖನವು, ದಂತವೈದ್ಯರು ರೋಗಿಗಳಿಗಾಗಿ ಯಾವ ರೀತಿಯಲ್ಲಿ ಸಹಾಯ ಮಾಡಬಲ್ಲರು ಎಂಬುದರ ಕುರಿತು ಚರ್ಚಿಸುತ್ತದೆ. ಆದರೆ, ನಿಮ್ಮ ಹಲ್ಲುಗಳನ್ನು ಕಾಪಾಡಿಕೊಳ್ಳಲು ನೀವೇ ಏನು ಮಾಡಬಲ್ಲಿರಿ ಎಂಬುದರ ಮಾಹಿತಿಗಾಗಿ, 2005, ನವೆಂಬರ್ 8ರ (ಇಂಗ್ಲಿಷ್) ಎಚ್ಚರ! ಸಂಚಿಕೆಯಲ್ಲಿ, “ನಿಮ್ಮ ನಗುವನ್ನು ಕಾಪಾಡಿಕೊಳ್ಳುವ ವಿಧ” ಎಂಬ ಲೇಖನವನ್ನು ದಯವಿಟ್ಟು ನೋಡಿರಿ.
[ಪುಟ 29ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಆರೋಗ್ಯಕರ ಹಲ್ಲಿನ ರಚನೆ
ಕ್ರೌನ್
ಎನಾಮಲ್
ಡೆಂಟಿನ್
ನರಗಳಿರುವ ಮತ್ತು ರಕ್ತ ನಾಳಗಳಿರುವ ತಿರುಳು
ಬೇರು
ವಸಡು (ಜಿಂಜಿವ)
ಮೂಳೆ
[ಪುಟ 29ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ದಂತಕ್ಷಯ
ಹುಳುಕು ಹಲ್ಲು
ಫಿಲ್ಲಿಂಗ್ ಹುಳುಕುಗಳು ಹೆಚ್ಚಾಗುವುದರಿಂದ ತಡೆಯುತ್ತದೆ
[ಪುಟ 29ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ವಸಡಿನ ರೋಗ
ಪ್ಲಾಕ್ ಅನ್ನು ಹಲ್ಲು ಉಜ್ಜುವುದರ ಮೂಲಕ ಅಥವಾ ದಾರದಿಂದ ಹಲ್ಲಿನ ಸಂದುಗಳನ್ನು ಶುಚಿಗೊಳಿಸುವ ಮೂಲಕ ತೆಗೆಯಬೇಕು
ಕ್ಯಾಲ್‌ಕುಲಸ್, ಅಥವಾ ಟಾರ್ಟಾರ್ ತೆಗೆಯುವುದು ಕಷ್ಟಕರ ಮತ್ತು ಇದು ವಸಡುಗಳು ದೂರಸರಿಯುವಂತೆ ಮಾಡುತ್ತದೆ
ದೂರಸರಿಯುತ್ತಿರುವ ವಸಡುಗಳು
[ಪುಟ 30ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಹಲ್ಲನ್ನು ಸರಿಪಡಿಸುವುದು
ವಿನಿಅರ್ ಹಲ್ಲುಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ
ಕ್ಯಾಪ್
ಒಂದು ಇಂಪ್ಲಾಂಟ್
ಫಿಕ್ಸ್ಡ್ ಬ್ರಿಡ್ಜ್ ಖಾಲಿ ಬಿದ್ದ ಜಾಗದ ಅಕ್ಕಪಕ್ಕದ ಹಲ್ಲುಗಳನ್ನು ಅಪ್ಪಿಹಿಡಿಯುವ ಕ್ಯಾಪ್‌ಗಳಾಗಿದ್ದು, ಮಧ್ಯದಲ್ಲಿನ ಕೃತಕ ಹಲ್ಲನ್ನು ಅದರ ಸ್ಥಾನದಲ್ಲಿ ಭದ್ರವಾಗಿ ಹಿಡಿದಿಡುತ್ತದೆ