ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ಭಾಷೆಯನ್ನು ಕಲಿಯಲು ನಿಮಗೆ ಸಾಧ್ಯ!

ಹೊಸ ಭಾಷೆಯನ್ನು ಕಲಿಯಲು ನಿಮಗೆ ಸಾಧ್ಯ!

ಹೊಸ ಭಾಷೆಯನ್ನು ಕಲಿಯಲು ನಿಮಗೆ ಸಾಧ್ಯ!

“ನನಗೆ ಇಂಥ ಸವಿ ಅನುಭವ ಎಂದಿಗೂ ಆಗಿರಲಿಲ್ಲ” ಎನ್ನುತ್ತಾನೆ ಮೈಕ್‌. ಇನ್ನು ಫೆಲ್ಪ್ಸ್‌ ಹೇಳುವುದು: “ಇದು ನನ್ನ ಜೀವನದಲ್ಲಿ ಮಾಡಿರುವ ಅತ್ಯುತ್ತಮ ನಿರ್ಣಯಗಳಲ್ಲಿ ಒಂದಾಗಿದೆ.” ಇವರಿಬ್ಬರೂ ಬೇರೊಂದು ಭಾಷೆಯನ್ನು ಕಲಿಯುವ ಸವಾಲನ್ನು ಅಂಗೀಕರಿಸಿದ್ದರ ಕುರಿತು ಮಾತಾಡುತ್ತಿದ್ದಾರೆ.

ಲೋಕದ ಸುತ್ತಲೂ ಅನೇಕ ದೇಶಗಳಲ್ಲಿ ಹೆಚ್ಚೆಚ್ಚು ಜನರು ನಾನಾ ಕಾರಣಗಳಿಗಾಗಿ ಹೊಸ ಭಾಷೆಯನ್ನು ಕಲಿಯುತ್ತಿದ್ದಾರೆ. ಅವರು ಹೀಗೆ ಕಲಿಯುವುದು ವೈಯಕ್ತಿಕ ಕಾರಣಕ್ಕಾಗಿಯೋ ಆರ್ಥಿಕ ಮತ್ತು ಧಾರ್ಮಿಕ ಕಾರಣಕ್ಕಾಗಿಯೋ ಆಗಿರಬಹುದು. ಈ ರೀತಿಯಲ್ಲಿ ವಿದೇಶಿ ಭಾಷೆಗಳನ್ನು ಕಲಿಯುತ್ತಿರುವ ಅನೇಕರನ್ನು ಎಚ್ಚರ! ಪತ್ರಿಕೆಯು ಸಂದರ್ಶಿಸಿತು. ಅವರಿಗೆ ಕೇಳಿದ ಪ್ರಶ್ನೆಗಳಲ್ಲಿ ಕೆಲವೆಂದರೆ: ವಯಸ್ಕರಾದ ಮೇಲೆ ಹೊಸ ಭಾಷೆಯನ್ನು ಕಲಿಯುವುದು ಹೇಗೆನಿಸುತ್ತದೆ? ಹಾಗೆ ಕಲಿಯಲು ಯಾವುದು ಸಹಾಯಮಾಡಬಲ್ಲದು? ಮುಂದೆ ಕೊಡಲಾಗಿರುವ ಮಾಹಿತಿ ಅವರ ಹೇಳಿಕೆಗಳ ಮೇಲೆ ಆಧರಿತವಾಗಿದೆ. ನೀವು ವಿಶೇಷವಾಗಿ ಹೊಸ ಭಾಷೆಯನ್ನು ಕಲಿಯುತ್ತಿರುವುದಾದರೆ ಇಲ್ಲವೆ ಕಲಿಯಲು ಯೋಚಿಸುತ್ತಿರುವುದಾದರೆ ಈ ಮಾಹಿತಿಗಳು ಪ್ರೋತ್ಸಾಹಕರವಾಗಿರಬಲ್ಲವು. ಇವು ಆವಶ್ಯಕ ಗುಣಗಳ ಒಳದೃಷ್ಟಿಯನ್ನೂ ಕೊಡುತ್ತವೆ. ಉದಾಹರಣೆಗೆ, ಹೊಸ ಭಾಷೆಯನ್ನು ಕಲಿಯಲು ಆವಶ್ಯಕವೆಂದು ಸಂದರ್ಶನಾರ್ಥಿಗಳು ನೆನಸಿದ ಕೆಲವು ಪ್ರಮುಖ ಗುಣಗಳನ್ನು ಪರಿಗಣಿಸಿರಿ.

ಭಾಷಾ ಕಲಿಕೆಗೆ ಬೇಕು ತಾಳ್ಮೆ, ದೈನ್ಯ, ಹೊಂದಾಣಿಕೆ

ಚಿಕ್ಕ ಮಕ್ಕಳಿಗೆ ಭಾಷೆ ಕಲಿಯುವುದು ಬಲು ಸುಲಭ. ಅವರು ಬರೀ ಮಾತಾಡುವುದನ್ನು ಕೇಳಿಸಿಕೊಂಡೇ ಒಂದೇ ಸಮಯದಲ್ಲಿ ಎರಡು ಮೂರು ಭಾಷೆಗಳನ್ನು ಕಲಿತುಬಿಡುತ್ತಾರೆ. ಆದರೆ, ವಯಸ್ಕರು ಸಾಮಾನ್ಯವಾಗಿ ಹೊಸ ಭಾಷೆಯನ್ನು ಕಲಿಯುವುದು ಹೆಚ್ಚು ಕಷ್ಟಕರವೆಂದು ಕಂಡುಕೊಳ್ಳುತ್ತಾರೆ. ಆದುದರಿಂದ ಅವರಿಗೆ ಮೊದಲಾಗಿ ತಾಳ್ಮೆ ಅಗತ್ಯ. ಏಕೆಂದರೆ ಹೊಸ ಭಾಷೆಯ ಕಲಿಕೆ ದೀರ್ಘ ಸಮಯವನ್ನು ತೆಗೆದುಕೊಳ್ಳಸಾಧ್ಯವಿದೆ. ಅವರು ಹಲವಾರು ಕೆಲಸಗಳಲ್ಲಿ ಕಾರ್ಯಮಗ್ನರಾಗಿರುವ ಕಾರಣ ಹೊಸ ಭಾಷೆ ಕಲಿಯಬೇಕಾದರೆ ಅನೇಕ ಸಲ ಇತರ ಬೆನ್ನಟ್ಟುವಿಕೆಗಳನ್ನು ಮುಂದೂಡಬೇಕಾಗುತ್ತದೆ.

ಜಾರ್ಜ್‌ ಹೇಳುವುದು: “ದೀನಭಾವ ಆವಶ್ಯಕ. ನಿಮಗೆ ಒಂದು ಭಾಷೆ ಗೊತ್ತಿಲ್ಲದಿರುವಾಗ ಅನೇಕ ಬಾರಿ ಮಕ್ಕಳಂತೆ ಮಾತಾಡಬೇಕಾಗುತ್ತದೆ. ಕೆಲವು ಬಾರಿ ನಿಮ್ಮನ್ನು ಮಗುವಾಗಿ ಭಾವಿಸಿಕೊಳ್ಳಬೇಕಾಗುತ್ತದೆ.” ವಿದೇಶಿ ಭಾಷೆಯೊಂದನ್ನು ಕಲಿಯುವ ವಿಧ (ಇಂಗ್ಲಿಷ್‌) ಪುಸ್ತಕ ಹೇಳುವುದು: “ನೀವು ನಿಜವಾಗಿಯೂ ಪ್ರಗತಿಹೊಂದಬಯಸುವುದಾದರೆ ನಿಮಗಿರುವ ಸ್ವಪ್ರತಿಷ್ಠೆ ಮತ್ತು ನಿಮ್ಮ ಘನತೆಯ ಬಗ್ಗೆ ಚಿಂತಿಸುವುದನ್ನು ಸ್ವಲ್ಪ ಬಿಡಬೇಕಾಗುತ್ತೆ.” ಆದುದರಿಂದ, ಮಿತಿಮೀರಿ ಸ್ವಪ್ರಜ್ಞೆಯುಳ್ಳವರಾಗಿರಬೇಡಿ. ಬೆನ್‌ ಎಂಬವನು ಹೇಳುವುದು: “ನೀವು ತಪ್ಪನ್ನೇ ಮಾಡದವರಾದರೆ ಹೊಸ ಭಾಷೆಯನ್ನು ಸಾಕಷ್ಟು ಉಪಯೋಗಿಸದವರಾಗಿದ್ದೀರಿ.”

ನಿಮ್ಮ ತಪ್ಪುಗಳನ್ನು ಕೇಳಿ ಇತರರು ನಗುವಲ್ಲಿ ಚಿಂತೆ ಮಾಡಬೇಡಿ. ಅವರೊಂದಿಗೆ ಸೇರಿ ನೀವೂ ನಗಾಡಿರಿ! ನೀವು ಮಾಡಿರುವ ತಪ್ಪುಗಳ ಕುರಿತು ಮನರಂಜಿಸುವ ಕಥೆಗಳನ್ನು ಹೇಳುವ ಕಾಲ ಬರಬಹುದು. ಪ್ರಶ್ನೆ ಕೇಳಲು ಹೆದರಬೇಡಿ. ಒಂದು ಮಾತನ್ನು ನಿರ್ದಿಷ್ಟ ದಾಟಿಯಲ್ಲಿ ಏಕೆ ಹೇಳಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಮಗೆ ನೆನಪಿನಲ್ಲಿಡಲು ಸಹಾಯಮಾಡುತ್ತದೆ.

ಹೊಸ ಭಾಷೆಯನ್ನು ಕಲಿಯುವುದು ಅನೇಕವೇಳೆ ಹೊಸ ಸಂಸ್ಕೃತಿಯನ್ನು ಕಲಿಯುವಂತಿರುತ್ತದೆ. ಆದುದರಿಂದ ಹೊಂದಾಣಿಕೆ ಮಾಡುವುದು, ಅವಿಚಾರಾಭಿಪ್ರಾಯಗಳಿಂದ ಮುಕ್ತರಾಗಿರುವುದು ಸಹಾಯಕರ. ಜೂಲಿ ಹೇಳುವುದು: “ಒಂದು ವಿಷಯವನ್ನು ವಿಭಿನ್ನ ರೀತಿಯಲ್ಲಿ ನೋಡಿ-ಮಾಡಬಹುದು ಎಂದು ಹೊಸ ಭಾಷೆ ಕಲಿಕೆಯಿಂದ ನನಗೆ ತಿಳಿದುಬಂತು. ಒಂದು ಇನ್ನೊಂದಕ್ಕಿಂತ ಉತ್ತಮವಾಗಿರಬೇಕೆಂದಿಲ್ಲ, ಅದು ಕೇವಲ ಭಿನ್ನವಾಗಿದೆಯಷ್ಟೇ.” ಜೇ ಎಂಬವನು ಶಿಫಾರಸು ಮಾಡುವುದು: “ಆ ಭಾಷೆ ಮಾತಾಡುವವರೊಂದಿಗೆ ಮಿತ್ರರಾಗಲು ಪ್ರಯತ್ನಿಸಿರಿ. ಅವರೊಂದಿಗಿದ್ದು ಸಂತೋಷಪಡಿರಿ.” ಆದರೆ ಅಂಥ ಸ್ನೇಹಿತರು ಸಭ್ಯ ಭಾಷೆಯನ್ನಾಡುವ ಉತ್ತಮ ಒಡನಾಡಿಗಳೆಂಬುದನ್ನು ಕ್ರೈಸ್ತರು ಖಚಿತಮಾಡಿಕೊಳ್ಳುವರು. (1 ಕೊರಿಂಥ 15:33; ಎಫೆಸ 5:​3, 4) ಜೇ ಮುಂದುವರಿಸುವುದು: “ಅವರ ಬಗ್ಗೆ ನಿಮಗೆ ಕಾಳಜಿ ಇದೆಯೆಂದೂ ಅವರ ಆಹಾರ, ಸಂಗೀತ, ಇತ್ಯಾದಿಗಳಲ್ಲಿ ನಿಮಗೆ ಆಸಕ್ತಿ ಇದೆಯೆಂದೂ ಅವರು ತಿಳಿಯುವಾಗ ಸ್ವಾಭಾವಿಕವಾಗಿಯೇ ನಿಮ್ಮ ಕಡೆಗೆ ಆಕರ್ಷಿಸಲ್ಪಡುವರು.”

ಒಂದು ಭಾಷೆ ಕಲಿಯಲು ಮತ್ತು ಆ ಭಾಷೆಯಲ್ಲಿ ಮಾತಾಡಲು ನೀವು ಎಷ್ಟು ಹೆಚ್ಚು ಸಮಯ ಕಳೆಯುತ್ತೀರೊ ಅಷ್ಟೇ ಹೆಚ್ಚು ವೇಗವಾಗಿ ಪ್ರಗತಿಮಾಡುವಿರಿ. ಜಾರ್ಜ್‌ ಹೇಳುವುದು: “ನಾವು ಭಾಷಾ ಕೌಶಲವನ್ನು ಸಂಪಾದಿಸುವುದು ಕೋಳಿ ಒಂದೊಂದೇ ಕಾಳನ್ನು ಹೆಕ್ಕಿ ತಿನ್ನುವಂತಿದೆ. ಆ ಚಿಕ್ಕ ಕಾಳು ಹೆಚ್ಚೇನೂ ಅಲ್ಲದಿದ್ದರೂ ಕೂಡಿಸಲ್ಪಡುವಾಗ ಅದರ ಪ್ರಮಾಣ ಹೆಚ್ಚಾಗುತ್ತದೆ.” ಬಿಲ್‌ ಎಂಬವರು ಮಿಷನೆರಿಯಾಗಿ ಅನೇಕ ಭಾಷೆಗಳನ್ನು ಕಲಿತರು. ಅವರು ಹೇಳುವುದು: “ನಾನು ಬರೆದ ಪದಗಳ ಲಿಸ್ಟನ್ನು ಹೋದಲ್ಲೆಲ್ಲಾ ಕೊಂಡೊಯ್ಯುತ್ತಿದ್ದೆ. ನನಗೆ ಸ್ವಲ್ಪ ಸಮಯ ಸಿಕ್ಕಿದರೆ ಸಾಕು ಆ ಲಿಸ್ಟ್‌ನಲ್ಲಿದ್ದ ಪದಗಳನ್ನು ಓದುತ್ತಿದ್ದೆ.” ಭಾಷೆಯನ್ನು ಕಲಿಯುವುದಕ್ಕಾಗಿ ಯಾವಾಗಲೋ ಒಮ್ಮೆ ಗಂಟೆಗಟ್ಟಲೆ ಕೂತುಕೊಳ್ಳುವುದಕ್ಕಿಂತಲೂ ಕ್ರಮವಾಗಿ ಪ್ರತಿದಿನ ಸ್ವಲ್ಪ ಸ್ವಲ್ಪ ಸಮಯವನ್ನು ಬದಿಗಿಡುವುದು ತುಂಬಾ ಪ್ರಯೋಜನಕಾರಿಯಾಗಿದೆ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.

ಇಂದು ಭಾಷೆಯನ್ನು ಕಲಿಯಲು ಸಹಾಯಮಾಡಲಿಕ್ಕಾಗಿ ವಿವಿಧ ಸಾಧನಗಳು ಲಭ್ಯವಿವೆ. ಉದಾಹರಣೆಗೆ ಪುಸ್ತಕಗಳು, ರೆಕಾರ್ಡಿಂಗ್‌ಗಳು, ಫ್ಲಾಷ್‌ಕಾರ್ಡುಗಳು ಮುಂತಾದ ಅನೇಕ ಸಾಧನಗಳು ದೊರೆಯುತ್ತವೆ. ಇವೆಲ್ಲ ಇದ್ದರೂ, ಸಂಘಟಿತ ಕ್ಲಾಸ್‌ರೂಮ್‌ ಪರಿಸರದಲ್ಲಿ ಕಲಿಯುವುದೇ ಅತ್ಯುತ್ತಮವೆಂದು ಅನೇಕರು ಕಂಡುಕೊಂಡಿದ್ದಾರೆ. ಆದಕಾರಣ, ನಿಮಗೆ ಯಾವ ವಿಧಾನ ಉಪಯುಕ್ತವಾಗಿರುತ್ತದೋ ಅದನ್ನೇ ಆರಿಸಿಕೊಳ್ಳಿರಿ. ಒಂದು ಹೊಸ ಭಾಷೆಯನ್ನು ಕಲಿಯಲು ಸ್ವಪ್ರಯತ್ನ ಮತ್ತು ಪಟ್ಟುಹಿಡಿಯುವಿಕೆಗಳನ್ನು ಬಿಟ್ಟರೆ ಇನ್ನಾವ ‘ಶಾರ್ಟ್‌ಕಟ್‌’ ಇಲ್ಲವೆಂಬುದನ್ನು ಮನಸ್ಸಿನಲ್ಲಿಡಿರಿ. ಆದರೆ ಭಾಷೆ ಕಲಿಯುವುದನ್ನು ಹೆಚ್ಚು ಸುಲಭವಾಗಿಯೂ ಅದೇ ಸಮಯದಲ್ಲಿ ಹೆಚ್ಚು ಮೋಜಿನದ್ದಾಗಿಯೂ ಮಾಡುವ ಬೇರೆ ಬೇರೆ ವಿಧಗಳಿವೆ. ಒಂದು ವಿಧ ಯಾವುದೆಂದರೆ, ಆ ಭಾಷೆ ಮತ್ತು ಸಂಸ್ಕೃತಿಯ ಜನರೊಂದಿಗೆ ಹೆಚ್ಚು ಬೆರೆಯುವುದಾಗಿದೆ.

ಜಾರ್ಜ್‌ ಹೇಳುವುದು: “ಹೊಸ ಭಾಷೆಯ ಕೆಲವು ಮೂಲಭೂತ ವಿಷಯಗಳಲ್ಲಿ ನೀವು ಹಿಡಿತ ಸಾಧಿಸಿದ ಮೇಲೆ ಮತ್ತು ಕಡಿಮೆಪಕ್ಷ ಆರಂಭಿಕ ಶಬ್ದಗಳನ್ನು ಕಲಿತ ಮೇಲೆ ಆ ಭಾಷೆಯನ್ನಾಡುವ ದೇಶದಲ್ಲಿ ಸ್ವಲ್ಪಕಾಲವಿರುವುದು ಸೂಕ್ತ.” ಬಾರ್ಬ್‌ ಎಂಬವಳು ಅದನ್ನು ಒಪ್ಪಿಕೊಳ್ಳುತ್ತಾ ಹೇಳುವುದು: “ಆ ದೇಶಕ್ಕೆ ನೀವು ನೀಡುವ ಭೇಟಿಯು ಆ ಭಾಷೆಯ ವಿಶೇಷ ಗುಣಲಕ್ಷಣಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ.” ಹೆಚ್ಚು ಪ್ರಾಮುಖ್ಯವಾದ ವಿಷಯವೇನೆಂದರೆ, ಆ ಪರಿಸರದಲ್ಲೇ ಮುಳುಗಿರುವುದು ನೀವು ಆ ಭಾಷೆಯಲ್ಲಿ ಯೋಚಿಸುವಂತೆ ಸಹಾಯಮಾಡುತ್ತದೆ. ಇನ್ನೊಂದು ದೇಶಕ್ಕೆ ಹೋಗಲು ಹೆಚ್ಚಿನವರಿಗೆ ಸಾಧ್ಯವಾಗಲಿಕ್ಕಿಲ್ಲ ಎಂಬುದು ನಿಜ. ಆದರೆ ಆ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆರೆಯಲು ಸ್ಥಳಿಕವಾಗಿಯೇ ಸಂದರ್ಭಗಳು ಸಿಗಬಹುದು. ಉದಾಹರಣೆಗೆ, ನೀವು ಕಲಿಯುತ್ತಿರುವ ಭಾಷೆಯಲ್ಲಿ ನೈತಿಕವಾಗಿ ಸ್ವೀಕಾರಾರ್ಹವಾದ ಮತ್ತು ಉತ್ತಮ ಗುಣಮಟ್ಟದ ಪುಸ್ತಕಗಳೊ, ರೇಡಿಯೊ ಅಥವಾ ಟಿವಿ ಪ್ರೋಗ್ರಾಮ್‌ಗಳೊ ಇರಬಹುದು. ನಿಮ್ಮ ಕ್ಷೇತ್ರದಲ್ಲಿ ಆ ಭಾಷೆಯನ್ನು ಉತ್ತಮವಾಗಿ ಮಾತಾಡುವವರನ್ನು ಹುಡುಕಿ ಅವರೊಡನೆ ಸಂಭಾಷಿಸಿರಿ. ವಿದೇಶಿ ಭಾಷೆಯೊಂದನ್ನು ಕಲಿಯುವ ವಿಧ (ಇಂಗ್ಲಿಷ್‌) ಪುಸ್ತಕವು ಹೇಳುವುದು: “ಕೊನೆಗೆ ಹೇಳುವುದಾದರೆ, ಪ್ರಗತಿ ಮಾಡಲು ಅತಿ ಪ್ರಾಮುಖ್ಯವಾದ ಒಂದೇ ಒಂದು ಮಾರ್ಗವೆಂದರೆ ಪ್ರ್ಯಾಕ್ಟೀಸ್‌ ಮಾಡುವುದೇ ಆಗಿದೆ.” *

ಪ್ರಗತಿಯಿಲ್ಲವೋ?

ಭಾಷೆಯನ್ನು ಕಲಿಯುತ್ತಿರುವಾಗ ಕೆಲವು ಬಾರಿ ನೀವು ಪ್ರಗತಿಯಾಗದ ಒಂದು ಹಂತದಲ್ಲೇ ನಿಂತುಬಿಟ್ಟಿದ್ದೀರಿ ಎಂದು ನಿಮಗನಿಸಬಹುದು. ಆಗ ನೀವೇನು ಮಾಡಬಲ್ಲಿರಿ? ಮೊದಲನೆಯದಾಗಿ, ಭಾಷೆಯನ್ನು ಕಲಿಯಲು ನಿಮಗಿದ್ದ ಮೂಲ ಕಾರಣದ ಕುರಿತು ಯೋಚಿಸಿರಿ. ಅನೇಕ ಮಂದಿ ಯೆಹೋವನ ಸಾಕ್ಷಿಗಳು ಬೈಬಲನ್ನು ಕಲಿಯುವಂತೆ ಇತರರಿಗೆ ಸಹಾಯಮಾಡುವ ಉದ್ದೇಶದಿಂದ ಹೊಸ ಭಾಷೆಯನ್ನು ಕಲಿಯುತ್ತಾರೆ. ನಿಮ್ಮ ಮೂಲ ಗುರಿ ಅಥವಾ ಉದ್ದೇಶದ ಕುರಿತು ಯೋಚಿಸುವುದು ನಿಮ್ಮ ನಿರ್ಣಯವನ್ನು ಬಲಗೊಳಿಸಬಲ್ಲದು.

ಎರಡನೆಯದಾಗಿ, ನಿಮ್ಮ ನಿರೀಕ್ಷಣೆಗಳು ನ್ಯಾಯಸಮ್ಮತವಾಗಿರಲಿ. ವಿದೇಶಿ ಭಾಷೆಯೊಂದನ್ನು ಕಲಿಯುವ ವಿಧ (ಇಂಗ್ಲಿಷ್‌) ಪುಸ್ತಕವು ಹೇಳುವುದು: “ಒಬ್ಬ ನಾಡಿಗನಂತೆ ಆ ಭಾಷೆಯನ್ನಾಡಲು ನಿಮಗೆ ಆಗದಿರಬಹುದು. ಆದರೆ ಉದ್ದೇಶವು ಅದಲ್ಲ. ನೀವು ಮಾತಾಡುವುದು ಜನರಿಗೆ ಅರ್ಥವಾಗಬೇಕು ಅಷ್ಟೆ.” ಆದಕಾರಣ, ನಿಮ್ಮ ಮಾತೃಭಾಷೆಯಷ್ಟೇ ಸ್ಪಷ್ಟವಾಗಿ ನಿಮಗೆ ಮಾತಾಡಲು ಬರುವುದಿಲ್ಲ ಎಂದು ಗೊಣಗದಿರಿ. ಅದರ ಬದಲಿಗೆ ನೀವು ಈಗಾಗಲೇ ಕಲಿತಿರುವುದನ್ನು ಬಳಸುತ್ತ ಸ್ಪಷ್ಟವಾಗಿ ಮಾತಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ.

ಮೂರನೆಯದಾಗಿ, ನಿಮ್ಮ ಪ್ರಗತಿಯನ್ನು ಗುರುತಿಸುವ ಮಹತ್ವದ ಘಟ್ಟಗಳನ್ನು ಗಮನಿಸಿರಿ. ಭಾಷಾ ಕಲಿಕೆಯು ಹುಲ್ಲು ಬೆಳೆಯುವುದನ್ನು ನೋಡುತ್ತ ನಿಲ್ಲುವಂತಿದೆ. ಅದರ ಬೆಳವಣಿಗೆ ನಿಮ್ಮ ಗಮನಕ್ಕೆ ಬಾರದಿದ್ದರೂ ಅದು ದಿನೇದಿನೇ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತದೆ. ಅದೇ ರೀತಿ ನೀವು ಭಾಷೆಯನ್ನು ಕಲಿಯಲು ಆರಂಭಿಸಿದ ದಿನದೆಡೆಗೆ ಹಿನ್ನೋಟ ಬೀರುವಾಗ ನೀವು ಪ್ರಗತಿ ಮಾಡಿದ್ದೀರೆಂಬುದನ್ನು ನೋಡುವುದು ಖಂಡಿತ. ನಿಮ್ಮ ಪ್ರಗತಿಯನ್ನು ಇತರರು ಮಾಡುತ್ತಿರುವ ಪ್ರಗತಿಯಿಂದ ಅಳೆಯಬೇಡಿರಿ. ಈ ಸಂಬಂಧದಲ್ಲಿ ನಾವು ಅನುಸರಿಸಬೇಕಾದ ಒಂದು ಉತ್ತಮ ಮೂಲತತ್ತ್ವ ಬೈಬಲಿನ ಗಲಾತ್ಯ 6:4ರಲ್ಲಿ ಇದೆ. ಅದು ಹೇಳುವುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.”

ನಾಲ್ಕನೆಯದಾಗಿ, ಈ ಕಾರ್ಯವಿಧಾನವನ್ನು ಒಂದು ದೀರ್ಘಾವಧಿಯ ವಿನಿಯೋಜನೆಯಾಗಿ ವೀಕ್ಷಿಸಿರಿ. ಮೂರೋ ನಾಲ್ಕೋ ವಯಸ್ಸಿನ ಒಬ್ಬ ಹುಡುಗನ ಕುರಿತು ಸ್ವಲ್ಪ ಯೋಚಿಸಿ. ಅವನಿಗೆ ಒಬ್ಬ ಭಾಷಣಕಾರನಾಗುವ ಸಾಮರ್ಥ್ಯ ಎಷ್ಟಿದೆ? ಅವನು ಕ್ಲಿಷ್ಟ ಪದಗಳನ್ನು ಮತ್ತು ಜಟಿಲ ವ್ಯಾಕರಣವನ್ನು ಉಪಯೋಗಿಸುತ್ತಾನೆಯೆ? ನಿಶ್ಚಯವಾಗಿ ಇಲ್ಲ! ಆದರೆ, ಸರಳ ಸಂಭಾಷಣೆಯನ್ನು ಅವನು ಮಾಡಬಲ್ಲನು. ಹೌದು, ಒಬ್ಬ ಚಿಕ್ಕ ಹುಡುಗನಿಗೂ ಭಾಷೆಯನ್ನು ಕಲಿಯಲು ವರ್ಷಗಳು ಹಿಡಿಯುತ್ತವೆ.

ಐದನೆಯದಾಗಿ, ಸಾಧ್ಯವಾದಷ್ಟು ಹೊಸ ಭಾಷೆಯಲ್ಲಿಯೇ ಮಾತಾಡಿರಿ. ಬೆನ್‌ ಎಂಬವನು ಹೇಳುವುದು: “ನಾನು ಕ್ರಮವಾಗಿ ಆ ಭಾಷೆಯನ್ನು ಆಡದಿದ್ದಾಗ ಪ್ರಗತಿಯಾಗದ ಅದೇ ಹಂತದಲ್ಲಿ ಇದ್ದುಬಿಟ್ಟಂತೆ ನನಗನಿಸಿತು.” ಆದುದರಿಂದ ಆ ಭಾಷೆಯಲ್ಲಿಯೇ ಸದಾ ಮಾತಾಡುತ್ತಾ ಇರಿ! ಪುಟಾಣಿ ಮಗುವಿನಂತೆ ನಿಮ್ಮ ಶಬ್ದಭಂಡಾರವು ಸೀಮಿತವಾಗಿರುವಾಗ ಇತರರೊಡನೆ ಸಂಭಾಷಿಸಲು ನಿಮಗೆ ಕಸಿವಿಸಿಯಾಗುವುದು ಸ್ವಾಭಾವಿಕ. ಮೀಲೇವೀ ಎಂಬಾಕೆ ಹಲುಬುವುದು: “ನಾನು ಏನನ್ನು ಹೇಳಬಯಸುತ್ತೇನೋ ಅದನ್ನು, ಯಾವಾಗ ಹೇಳಬಯಸುತ್ತೇನೋ ಆಗ, ಹೇಳಲಿಕ್ಕೆ ಆಗದಿದ್ದಾಗ ನನಗೆ ತುಂಬಾ ಕಷ್ಟವಾಗುತ್ತದೆ.” ಆದರೆ ಆ ನಿರಾಶೆಯೇ ನೀವು ಪಟ್ಟುಹಿಡಿಯುವಂತೆ ಪ್ರಚೋದಿಸಬಲ್ಲದು. ಮೈಕ್‌ ಎಂಬವನು ಹೇಳುವುದು: “ಕಥೆಗಳನ್ನು ಮತ್ತು ತಮಾಷೆಗಳನ್ನು ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದದ್ದು ನನಗೆ ಇಷ್ಟವಿರಲಿಲ್ಲ. ಇಂಥ ಅನಿಸಿಕೆಗಳು ನಾನು ಆ ಹಂತವನ್ನು ದಾಟುವಂತೆ ಹೆಚ್ಚು ಪ್ರಯಾಸಪಡಲು ನನ್ನ ಮೇಲೆ ಒತ್ತಡವನ್ನು ಹಾಕಿತೆಂದು ನನ್ನ ಭಾವನೆ.”

ಇತರರು ಸಹಾಯಮಾಡಬಲ್ಲ ವಿಧ

ಭಾಷೆಯನ್ನು ಬಲ್ಲವರು ಆ ಭಾಷೆ ಕಲಿಯುತ್ತಿರುವವರಿಗೆ ಸಹಾಯ ಮಾಡಲು ಏನು ಮಾಡಬಹುದು? ಈ ಮೊದಲು ತಿಳಿಸಲಾದ ಬಿಲ್‌ ನೀಡುವ ಸಲಹೆ ಹೀಗಿದೆ: “ಮಾತಾಡುವಾಗ ನಿಧಾನವಾಗಿ, ಆದರೆ ಸ್ಪಷ್ಟವಾಗಿ ಮಾತಾಡಿರಿ. ತೊದಲಬೇಡಿರಿ.” ಜೂಲಿ ಹೇಳುವುದು: “ಕಲಿಯುವವರು ಮಾತನಾಡಲು ಕಷ್ಟಪಡುತ್ತಿರುವಾಗ ನೀವೇ ಮಧ್ಯೆ ಬಾಯಿ ಹಾಕಿ ಆ ವಾಕ್ಯವನ್ನು ಪೂರ್ತಿಮಾಡಬೇಡಿ. ಅವರು ಹೇಳಿ ಮುಗಿಸುವವರೆಗೂ ತಾಳ್ಮೆಯಿಂದಿರಿ.” ಟೋನಿ ಎಂಬವನು ಜ್ಞಾಪಿಸಿಕೊಳ್ಳುವುದು: “ನನ್ನ ಭಾಷೆಯನ್ನೂ ತಿಳಿದವರು ನನ್ನೊಂದಿಗೆ ನನ್ನ ಭಾಷೆಯಲ್ಲಿ ಮಾತಾಡಪ್ರಯತ್ನಿಸುತ್ತಿದ್ದರು. ಆದರೆ ಅದು ನನ್ನ ಪ್ರಗತಿಯನ್ನು ಕುಂಠಿತಗೊಳಿಸಿತು.” ಆದಕಾರಣ, ಭಾಷೆಯನ್ನು ಕಲಿಯುತ್ತಿರುವ ಕೆಲವರು ತಾವು ಕಲಿಯುತ್ತಿರುವ ಭಾಷೆಯಲ್ಲಿಯೇ ತಮ್ಮೊಂದಿಗೆ ಮಾತಾಡುವಂತೆ ತಮ್ಮ ಮಿತ್ರರಿಗೆ ಕೆಲವೊಮ್ಮೆ ವಿನಂತಿಸಿಕೊಂಡಿದ್ದಾರೆ. ಎಲ್ಲಿ ಪ್ರಗತಿ ಮಾಡಲಿಕ್ಕಿದೆ ಎಂಬುದನ್ನು ತಿಳಿಸುವಂತೆಯೂ ಕೇಳಿಕೊಂಡಿದ್ದಾರೆ. ಹೊಸ ಭಾಷೆಯನ್ನು ಕಲಿಯುವವರು ಮಾಡುವ ಪ್ರಯತ್ನಗಳಿಗಾಗಿ ಮನಸ್ಸಾರೆ ಪ್ರಶಂಸಿಸುವುದನ್ನು ಸಹ ಅವರು ಗಣ್ಯಮಾಡುತ್ತಾರೆ. ಜಾರ್ಜ್‌ ಹೇಳುವುದು: “ನನ್ನ ಸ್ನೇಹಿತರ ಪ್ರೀತಿ ಮತ್ತು ಪ್ರೋತ್ಸಾಹನೆ ಇಲ್ಲದಿರುತ್ತಿದ್ದರೆ ನನಗೆ ಇದನ್ನು ಮಾಡಸಾಧ್ಯವಾಗುತ್ತಿರಲಿಲ್ಲ.”

ಹಾಗಾದರೆ ಇನ್ನೊಂದು ಭಾಷೆಯನ್ನು ಕಲಿಯಲು ಮಾಡುವ ಪ್ರಯತ್ನವು ಸಾರ್ಥಕವೊ? “ಖಂಡಿತವಾಗಿಯೂ ಸಾರ್ಥಕ!” ಎಂದು ಅನೇಕ ಭಾಷೆಗಳನ್ನಾಡುವ ಬಿಲ್‌ ಹೇಳುತ್ತಾನೆ. ಅವನು ಮುಂದುವರಿಸುವುದು: “ಇನ್ನೊಂದು ಭಾಷೆಯನ್ನು ಕಲಿಯುವುದು ಜೀವನದ ಕುರಿತು ನನಗಿರುವ ಹೊರನೋಟವನ್ನು ವಿಶಾಲಗೊಳಿಸಿದೆ. ಇತರರ ದೃಷ್ಟಿಯಿಂದ ವಿಷಯಗಳನ್ನು ವೀಕ್ಷಿಸುವಂತೆಯೂ ನನಗೆ ಇದು ಸಹಾಯಮಾಡಿದೆ. ವಿಶೇಷವಾಗಿ, ಈ ಭಾಷೆಗಳನ್ನಾಡುವ ಜನರೊಂದಿಗೆ ಬೈಬಲ್‌ ಅಧ್ಯಯನ ಮಾಡುವುದು ಮತ್ತು ಅವರು ಸತ್ಯವನ್ನು ಅಂಗೀಕರಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವುದು ನಾವು ಪಟ್ಟ ಪ್ರಯತ್ನಕ್ಕಿಂತ ಎಷ್ಟೋ ಹೆಚ್ಚಿನದ್ದಾಗಿದೆ. ನಿಜ ಹೇಳಬೇಕಾದರೆ, 12 ಭಾಷೆ ಬಲ್ಲವನೊಬ್ಬನು ಒಮ್ಮೆ ನನಗೆ ಹೇಳಿದ್ದು: ‘ನಿಮ್ಮ ಧ್ಯೇಯ ಕಂಡು ನನಗೆ ಅಸೂಯೆ. ಯಾಕಂದರೆ ನಾನು ನನ್ನ ಸಂತೋಷಕ್ಕಾಗಿ ಭಾಷೆ ಕಲಿಯುತ್ತೇನೆ. ಆದರೆ ನೀವು ಕಲಿಯುವುದು ನಿಜವಾಗಿಯೂ ಜನರಿಗೆ ಸಹಾಯಮಾಡಲಿಕ್ಕಾಗಿ.’” (g 3/07)

[ಪಾದಟಿಪ್ಪಣಿ]

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇತರರಿಗೆ ಸಹಾಯಮಾಡುವ ಇಚ್ಛೆಯು ಭಾಷೆಯೊಂದನ್ನು ಕಲಿಯಲು ಶಕ್ತಿಯುತವಾದ ಪ್ರಚೋದನೆಯಾಗಿದೆ