ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅತ್ಯಂತ ಕಠಿನ ಪ್ರಶ್ನೆ

ಅತ್ಯಂತ ಕಠಿನ ಪ್ರಶ್ನೆ

ಅತ್ಯಂತ ಕಠಿನ ಪ್ರಶ್ನೆ

“ಯಾಕೆ?”​—⁠ಕೇವಲ ಎರಡೇ ಅಕ್ಷರಗಳ ಈ ಚಿಕ್ಕ ಪದದಲ್ಲಿ ಎಷ್ಟೊಂದು ದುಗುಡ, ನೋವು ತುಂಬಿರಬಹುದೆಂದರೆ ಅದು ಅತೀವ ದುಃಖವನ್ನು ಹುಟ್ಟಿಸುತ್ತದೆ. ಸಾವು, ನಷ್ಟಗಳ ಜಾಡನ್ನು ಬಿಟ್ಟುಹೋಗಿರುವ ಒಂದು ಚಂಡಮಾರುತ, ಇಡೀ ನಗರವನ್ನೇ ನೆಲಸಮಮಾಡಿರುವ ಒಂದು ಭೂಕಂಪ, ಅಥವಾ ಪ್ರಶಾಂತವಾಗಿದ್ದ ದಿನವೊಂದನ್ನು ಭಯ ಹಿಂಸಾಚಾರದ ದಿನವಾಗಿ ಬದಲಾಯಿಸಿರುವ ಭಯೋತ್ಪಾದಕರ ದಾಳಿ, ಅಥವಾ ಪ್ರಿಯ ವ್ಯಕ್ತಿಯೊಬ್ಬನು ಗಾಯಾಳಾಗುವಂತೆ ಯಾ ಜೀವವನ್ನು ಕಳೆದುಕೊಳ್ಳುವಂತೆ ಮಾಡಿರುವ ಒಂದು ಅಪಘಾತ​—⁠ಇವುಗಳಂಥ ವಿಪತ್ತುಗಳು ಇಲ್ಲವೆ ದುರಂತಗಳು ಬಂದೆರಗಿದಾಗ ಜನರು ಸಾಮಾನ್ಯವಾಗಿ, “ಯಾಕೆ ಹೀಗೆ?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ.

ಆದರೆ ಹೆಚ್ಚಾಗಿ ಇಂಥ ವಿಪತ್ತುಗಳಿಗೆ ಇಲ್ಲವೆ ದುರಂತಗಳಿಗೆ, ತುಂಬ ಮುಗ್ಧರೂ, ನಿಸ್ಸಹಾಯಕರೂ ಆಗಿರುವ ಜನರೇ ಬಲಿಯಾಗುತ್ತಾರೆ. ಮತ್ತು ಇತ್ತೀಚಿನ ಸಮಯಗಳಲ್ಲಿ ಇಂಥ ವಿಪತ್ತುಗಳು ಹೆಚ್ಚೆಚ್ಚಾಗುತ್ತಿವೆ. ಇವೆಲ್ಲದ್ದರಿಂದಾಗಿ ಇನ್ನೂ ಹೆಚ್ಚಿನ ಜನರು, “ಯಾಕೆ?” ಎಂದು ದೇವರಿಗೆ ಗೋಗರೆಯುವಂತೆ ಮಾಡಿದೆ. ಈ ಕೆಳಗಿನ ಕೆಲವು ಉದಾಹರಣೆಗಳನ್ನು ಪರಿಗಣಿಸಿ:

◼ “ದೇವರೇ, ನಮಗೆ ಹೀಗೇಕೆ ಮಾಡಿದೆ? ನಿನ್ನ ಕೋಪವನ್ನು ಕೆರಳಿಸಲು ನಾವೇನು ಮಾಡಿದೆವು?” ಎಂದು, ಭಾರತದಲ್ಲಿ ಸುನಾಮಿಯಿಂದ ಧ್ವಂಸಗೊಂಡ ಒಂದು ಹಳ್ಳಿಯವರಾಗಿದ್ದ ಒಬ್ಬ ವೃದ್ಧ ಮಹಿಳೆಯು ಕೇಳಿರುವುದಾಗಿ ರಾಯ್ಟರ್ಸ್‌ ವಾರ್ತಾ ಏಜೆನ್ಸಿಯು ವರದಿಸಿತು.

◼ “ದೇವರೆಲ್ಲಿದ್ದನು? ಅವನಿಗೆ ಎಲ್ಲದ್ದರ ಮೇಲೆ ಸಂಪೂರ್ಣ ನಿಯಂತ್ರಣವಿರುವಲ್ಲಿ, ಆತನು ಹೀಗಾಗುವಂತೆ ಯಾಕೆ ಬಿಟ್ಟನು?” ಎಂಬ ಪ್ರಶ್ನೆಗಳನ್ನು, ಅಮೆರಿಕದ ಟೆಕ್ಸಾಸ್‌ನಲ್ಲಿ ಒಬ್ಬ ಬಂದೂಕುಧಾರಿಯು ಚರ್ಚ್‌ ಒಳಗೆ ಗುಂಡುಹಾರಿಸಿ ಅಲ್ಲಿದ್ದ ಹಲವರನ್ನು ಗಾಯಗೊಳಿಸಿ, ಕೊಂದುಹಾಕಿದ್ದರ ಬಗ್ಗೆ ವರದಿಸಿದ ಒಂದು ವಾರ್ತಾಪತ್ರಿಕೆ ಕೇಳಿತು.

◼ “ಅವಳು ಸಾಯುವಂತೆ ದೇವರು ಬಿಟ್ಟದ್ದು ಯಾಕೆ?” ಹೀಗೆಂದು, ಮಹಿಳೆಯೊಬ್ಬಳು ಕ್ಯಾನ್ಸರ್‌ ರೋಗಕ್ಕೆ ಬಲಿಯಾಗಿ, ಅವಳ ಗಂಡನು ಐದು ಮಂದಿ ಮಕ್ಕಳನ್ನು ಸಾಕಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಾಗ ಅವಳ ಸ್ನೇಹಿತೆ ಕೇಳಿದಳು.

ತಮ್ಮ ಕಷ್ಟಗಳಿಗೆಲ್ಲ ದೇವರೇ ಕಾರಣನೆಂದು ನೆನಸುವ ಜನರು ಇವರು ಮಾತ್ರವಲ್ಲ. ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಗೆ ಪ್ರತಿಕ್ರಿಯೆ ತೋರಿಸಿದವರಲ್ಲಿ ಸುಮಾರು ಅರ್ಧದಷ್ಟು ಜನರು, ಚಂಡಮಾರುತಗಳಂಥ ನೈಸರ್ಗಿಕ ವಿಪತ್ತುಗಳಿಗೆ ದೇವರು ಕಾರಣನೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಷ್ಟೊಂದು ಜನರಿಗೆ ಈ ಅನಿಸಿಕೆ ಇರುವುದೇಕೆ?

ಧರ್ಮ ಹುಟ್ಟಿಸಿರುವ ಗಲಿಬಿಲಿ

ಧಾರ್ಮಿಕ ಮುಖಂಡರು ತೃಪ್ತಿಕರ ಉತ್ತರಗಳನ್ನು ಕೊಡುವ ಬದಲು ಅನೇಕವೇಳೆ ಗಲಿಬಿಲಿಯನ್ನು ಹೆಚ್ಚಿಸಲು ಭಾಗಶಃ ಕಾರಣರಾಗಿರುತ್ತಾರೆ. ಅವರು ಸಾಮಾನ್ಯವಾಗಿ ಕೊಡುವ ಮೂರು ಉತ್ತರಗಳನ್ನು ನಾವೀಗ ಪರಿಗಣಿಸೋಣ.

ಪ್ರಥಮವಾಗಿ ಅನೇಕ ಧಾರ್ಮಿಕ ಮುಖಂಡರು, ದಾರಿತಪ್ಪಿರುವ ಮಾನವರನ್ನು ಶಿಕ್ಷಿಸಲಿಕ್ಕಾಗಿಯೇ ದೇವರು ವಿಪತ್ತುಗಳನ್ನು ಕಳುಹಿಸುತ್ತಾನೆಂದು ಬೋಧಿಸುತ್ತಾರೆ. ಉದಾಹರಣೆಗಾಗಿ, ಅಮೆರಿಕದಲ್ಲಿನ ಲೂಸಿಯಾನಾ ನ್ಯೂಆರ್ಲಿನ್ಸ್‌ ಎಂಬ ಸ್ಥಳವನ್ನು ಕಾಟ್ರೀನಾ ಚಂಡಮಾರುತವು ಧ್ವಂಸಗೊಳಿಸಿದಾಗ, ದೇವರು ಆ ನಗರವನ್ನು ಶಿಕ್ಷಿಸಿದ್ದಾನೆಂದು ಕೆಲವು ಧಾರ್ಮಿಕ ಮುಖಂಡರು ಹೇಳಿದರು. ಅಲ್ಲಿದ್ದಂಥ ಭ್ರಷ್ಟಾಚಾರ, ಜೂಜಾಟ ಮತ್ತು ಅನೈತಿಕತೆಯೇ ಈ ಶಿಕ್ಷೆಗೆ ಕಾರಣವೆಂದು ಅವರು ಹೇಳಿದರು. ಕೆಲವರು ಇದನ್ನು ಸಾಬೀತುಪಡಿಸಲು ಬೈಬಲಿನಿಂದಲೂ ಉಲ್ಲೇಖಿಸುತ್ತಾ, ದೇವರು ದುಷ್ಟರನ್ನು ನೆರೆಹಾವಳಿ ಇಲ್ಲವೆ ಬೆಂಕಿಯ ಮೂಲಕ ನಾಶಗೊಳಿಸಿದ ಸಂದರ್ಭಗಳನ್ನು ಸೂಚಿಸಿ ಮಾತಾಡಿದರು. ಆದರೆ ವಾಸ್ತವದಲ್ಲಿ ಅವರು ಬೈಬಲಿನ ಅಂಥ ವೃತ್ತಾಂತಗಳ ಕುರಿತಾಗಿ ತಪ್ಪಾದ ವಿವರಣೆಗಳನ್ನು ಕೊಡುತ್ತಿದ್ದಾರೆ.​—⁠“ದೇವರಿಂದಲೊ?” ಎಂಬ ಚೌಕವನ್ನು ನೋಡಿರಿ.

ಎರಡನೆಯದಾಗಿ, ಕೆಲವು ಪಾದ್ರಿಗಳು ಹೇಳುವುದೇನೆಂದರೆ, ದೇವರು ಸೂಕ್ತ ಕಾರಣಗಳಿಗಾಗಿಯೇ ಮಾನವಕುಲದ ಮೇಲೆ ಆಪತ್ತುಗಳನ್ನು ಬರಮಾಡುತ್ತಾನೆ; ಆದರೆ ಆ ಕಾರಣಗಳು ನಮ್ಮ ಗ್ರಹಿಕೆಯನ್ನು ಮೀರಿದವುಗಳಾಗಿವೆ. ಆದರೆ ಈ ಉತ್ತರದಿಂದಲೂ ಅನೇಕ ಜನರಿಗೆ ತೃಪ್ತಿಯಾಗುವುದಿಲ್ಲ. “ದೇವರು ಪ್ರೀತಿಸ್ವರೂಪಿ” ಆಗಿದ್ದಾನೆಂದು ಬೈಬಲು ನಿಶ್ಚಯವಾಗಿ ಹೇಳುತ್ತದೆ. ಹೀಗಿರುವುದರಿಂದ, “ನಮ್ಮನ್ನು ಪ್ರೀತಿಸುವ ದೇವರೇ ಇಂಥ ದುಷ್ಕೃತ್ಯಗಳನ್ನು ನಡೆಸಿ, ಬಳಿಕ ಸಾಂತ್ವನಕ್ಕಾಗಿ ಹಂಬಲಿಸುತ್ತಾ ‘ಯಾಕೆ ಹೀಗೆ?’ ಎಂದು ಆತನಿಗೆ ಅಂಗಲಾಚುತ್ತಿರುವವರಿಗೆ ಉತ್ತರ ಒದಗಿಸದೆ ಇರಲು ಹೇಗೆ ಸಾಧ್ಯ?’ ಎಂದವರು ಸೋಜಿಗಪಡುತ್ತಾರೆ. ​—⁠1 ಯೋಹಾನ 4:⁠8.

ಮೂರನೆಯದಾಗಿ, ಇನ್ನಿತರ ಧಾರ್ಮಿಕ ಮುಖಂಡರಿಗೆ, ದೇವರು ಸರ್ವಶಕ್ತನೂ ಅಲ್ಲ, ಪ್ರೀತಿಪರನೂ ಅಲ್ಲ ಎಂದೆನಿಸುತ್ತದೆ. ಆದರೆ ಈ ವಿವರಣೆ ಸಹ ಗಂಭೀರವಾದ ಪ್ರಶ್ನೆಗಳನ್ನೆಬ್ಬಿಸುತ್ತದೆ. “ಸಮಸ್ತವನ್ನು,” ಅಂದರೆ ಅಳೆಯಲಸಾಧ್ಯವಾದಷ್ಟು ವಿಶಾಲವಾದ ವಿಶ್ವವನ್ನು ‘ಸೃಷ್ಟಿಸಿದಾತನಿಗೆ’ ಈ ಒಂದು ಗ್ರಹದಲ್ಲಿರುವ ಕಷ್ಟಗಳನ್ನು ತಡೆಗಟ್ಟಲು ಶಕ್ತಿಯಿಲ್ಲವೇ? (ಪ್ರಕಟನೆ 4:11) ದೇವರು ತನ್ನ ವಾಕ್ಯದಲ್ಲಿ ತನ್ನನ್ನೇ ಪ್ರೀತಿಯ ಸಾಕಾರರೂಪವೆಂದು ವರ್ಣಿಸಿದ್ದಾನೆ ಮತ್ತು ಪ್ರೀತಿಸುವ ಸಾಮರ್ಥ್ಯವನ್ನು ನಮಗೆ ಕೊಟ್ಟಿರುವವನು ಆತನೇ. ಹೀಗಿರುವಾಗ ಆತನೇ, ಮಾನವ ಕಷ್ಟಗಳನ್ನು ನೋಡಿ ಭಾವಶೂನ್ಯನಾಗಿರುವುದು ಸಾಧ್ಯವೇ?​—⁠ಆದಿಕಾಂಡ 1:27; 1 ಯೋಹಾನ 4:⁠8.

ಈ ಮೂರು ಅಂಶಗಳು, ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆ ಎಂಬ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ ಮನುಷ್ಯರು ಬಳಸಿರುವ ವಿಧಾನಗಳಲ್ಲಿ ಕೇವಲ ಕೆಲವಾಗಿವೆ. ಆ ಪ್ರಶ್ನೆಯು ಅನೇಕಾನೇಕ ಶತಮಾನಗಳಿಂದ ಚಿಂತನಾಶೀಲ ಜನರನ್ನು ಗೊಂದಲಕ್ಕೀಡುಮಾಡಿದೆ. ಆದುದರಿಂದ ಮುಂದಿನ ಲೇಖನದಲ್ಲಿ ನಾವು, ಈ ಪ್ರಾಮುಖ್ಯ ಹಾಗೂ ಸಮಯೋಚಿತ ವಿಷಯದ ಕುರಿತು ಬೈಬಲ್‌ ಏನನ್ನು ಕಲಿಸುತ್ತದೆಂಬುದನ್ನು ಪರಿಗಣಿಸಲಿದ್ದೇವೆ. ಇದರಲ್ಲಿ, ಬೈಬಲು ಕೊಡುವಂಥ ದೃಢವಾದ ತರ್ಕಬದ್ಧ ವಿವರಣೆಯು ಎಲ್ಲ ಗಲಿಬಿಲಿಯನ್ನು ನಿವಾರಿಸುತ್ತದೆ ಎಂಬುದನ್ನು ನೀವು ನೋಡುವಿರಿ. ಅಲ್ಲದೆ, ಬದುಕಿನಲ್ಲಿ ದುರಂತಗಳಿಗೆ ಈಡಾದವರೆಲ್ಲರಿಗೆ ಬೈಬಲ್‌ ಬಹಳಷ್ಟು ಸಾಂತ್ವನವನ್ನೂ ನೀಡುತ್ತದೆ. (g 11/06)

[ಪುಟ 4ರಲ್ಲಿರುವ ಚೌಕ/ಚಿತ್ರ]

ದೇವರಿಂದಲೊ?

ನಾವಿಂದು ನೋಡುತ್ತಿರುವ ನೈಸರ್ಗಿಕ ವಿಪತ್ತುಗಳ ಹಿಂದೆ ದೇವರ ಕೈವಾಡವಿದೆಯೆಂದು ಬೈಬಲ್‌ ಕಲಿಸುತ್ತದೊ? ಖಂಡಿತವಾಗಿಯೂ ಇಲ್ಲ! ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ದೇವರ ನ್ಯಾಯತೀರ್ಪುಗಳಿಗೂ, ನೈಸರ್ಗಿಕ ವಿಪತ್ತುಗಳಿಗೂ ತುಂಬ ವ್ಯತ್ಯಾಸವಿದೆ. ಉದಾಹರಣೆಗೆ, ದೇವರಿಂದ ಬರುವ ನಾಶನವು ಎಲ್ಲರ ಮೇಲೆ ಬರುವುದಿಲ್ಲ; ದೇವರು ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲೇನಿದೆ ಎಂಬುದನ್ನು ನೋಡುತ್ತಾನೆ ಮತ್ತು ಯಾರು ದುಷ್ಟರಾಗಿದ್ದರೊ ಅಂಥವರನ್ನು ಮಾತ್ರ ನಾಶಮಾಡುತ್ತಾನೆ. (ಆದಿಕಾಂಡ 18:​23-32) ಅಲ್ಲದೆ, ದೇವರು ನಾಶನವನ್ನು ತರುವ ಮುಂಚೆ ಎಚ್ಚರಿಕೆಗಳನ್ನು ಕೊಡುತ್ತಾನೆ. ಇದರಿಂದಾಗಿ, ನೀತಿವಂತರಿಗೆ ತಪ್ಪಿಸಲಿಕ್ಕಾಗಿ ಅವಕಾಶ ಸಿಗುತ್ತದೆ.

ಇನ್ನೊಂದು ಬದಿಯಲ್ಲಿ, ನೈಸರ್ಗಿಕ ವಿಪತ್ತುಗಳು ಯಾವುದೇ ಎಚ್ಚರಿಕೆಯಿಲ್ಲದೆ ಬಂದೆರಗುತ್ತವೆ. ಅವುಗಳಿಂದಾಗಿ, ಒಳ್ಳೆಯವರೂ ಕೆಟ್ಟವರೂ ಹೀಗೆ ಎಲ್ಲರೂ ಕೊಲ್ಲಲ್ಪಡುತ್ತಾರೆ ಇಲ್ಲವೆ ಅಂಗಹೀನರಾಗುತ್ತಾರೆ. ಅಂಥ ವಿಪತ್ತುಗಳು ಹೆಚ್ಚು ಭೀಕರವಾಗುತ್ತಿರುವುದಕ್ಕೆ ಸ್ವಲ್ಪ ಮಟ್ಟಿಗೆ ಮನುಷ್ಯನೇ ಕಾರಣನು. ಏಕೆಂದರೆ ಮನುಷ್ಯರು ಪ್ರಕೃತಿಗೆ ಹಾನಿಮಾಡಿದ್ದಾರೆ. ಅಲ್ಲದೆ, ಅವರು ಭೂಕಂಪಗಳು, ನೆರೆಹಾವಳಿಗಳು ಹಾಗೂ ತೀಕ್ಷ್ಣ ಹವಾಮಾನಗಳಿರುವಂಥ ಪ್ರದೇಶಗಳಲ್ಲಿ ಮನೆಗಳನ್ನು ಮತ್ತು ಬೇರೆ ಕಟ್ಟಡಗಳನ್ನು ನಿರ್ಮಿಸಿದ್ದಾರೆ.

[ಕೃಪೆ]

SENA VIDANAGAMA/AFP/Getty Images

[ಪುಟ 4ರಲ್ಲಿರುವ ಚಿತ್ರ]

ಅನೇಕವೇಳೆ ಧಾರ್ಮಿಕ ಮುಖಂಡರು, ಗಲಿಬಿಲಿಗೊಳಿಸುವ ವಿವಿಧ ಉತ್ತರಗಳನ್ನು ಕೊಟ್ಟಿದ್ದಾರೆ