ಜೀವರಸಾಯನ ವಿಜ್ಞಾನಿಯೊಂದಿಗೆ ಸಂದರ್ಶನ
ಜೀವರಸಾಯನ ವಿಜ್ಞಾನಿಯೊಂದಿಗೆ ಸಂದರ್ಶನ
ಇಸವಿ 1996ರಲ್ಲಿ, ಈಗ ಅಮೆರಿಕದ ಪೆನ್ಸಿಲ್ವೇನಿಯದ ಲೀಹೈ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಮೈಕಲ್ ಜೆ. ಬೀಹೀ, ಡಾರ್ವಿನ್ಸ್ ಬ್ಲ್ಯಾಕ್ಬಾಕ್ಸ್—ದ ಬಯಲಾಜಿಕಲ್ ಚ್ಯಾಲೆಂಜ್ ಟು ಎವಲ್ಯೂಷನ್ (ಡಾರ್ವಿನನ ಕಪ್ಪುಪೆಟ್ಟಿಗೆ—ಜೀವವಿಕಾಸಕ್ಕೆ ಜೀವರಸಾಯನದ ಸವಾಲು) ಎಂಬ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಿದರು. ಮೇ 8, 1997ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿ, “ನಾವು ಇಲ್ಲಿಗೆ ಬಂದಿರುವುದು ಹೇಗೆ? ಆಕಸ್ಮಿಕವಾಗಿಯೊ ಉದ್ದೇಶಪೂರ್ವಕವಾಗಿಯೊ?” ಎಂಬ ಮುಖ್ಯಶೀರ್ಷಿಕೆಯ ಮೇಲಾಧರಿತವಾಗಿ ಪ್ರಕಟಿಸಲ್ಪಟ್ಟ ಲೇಖನಮಾಲೆಯಲ್ಲಿ ಬೀಹೀಯವರ ಪುಸ್ತಕಕ್ಕೆ ಸೂಚಿಸಲಾಗಿತ್ತು. ಆ ಪುಸ್ತಕ ಪ್ರಕಟವಾದಂದಿನಿಂದ, ವಿಕಾಸವಾದಿ ವಿಜ್ಞಾನಿಗಳು ಬೀಹೀ ಎತ್ತಿರುವ ವಾದಗಳನ್ನು ತಪ್ಪೆಂದು ಸ್ಥಾಪಿಸಲು ಹೆಣಗಾಡಿದ್ದಾರೆ. ಬೀಹೀಯವರು ರೋಮನ್ ಕ್ಯಾಥೊಲಿಕರಾಗಿರುವುದರಿಂದ, ಅವರ ಧಾರ್ಮಿಕ ನಂಬಿಕೆಗಳು ಅವರ ವೈಜ್ಞಾನಿಕ ತೀರ್ಮಾನಗಳನ್ನು ಮಬ್ಬುಗೊಳಿಸುವಂತೆ ಬಿಟ್ಟಿದ್ದಾರೆಂದು ವಿಮರ್ಶಕರು ಅಪವಾದ ಹೊರಿಸಿದ್ದಾರೆ. ಇತರರು, ಅವರ ತರ್ಕ ಅವೈಜ್ಞಾನಿಕವೆಂದು ವಾದಿಸುತ್ತಾರೆ. ಅವರ ವಿಚಾರಗಳು ಇಷ್ಟೊಂದು ವಾಗ್ವಾದವನ್ನು ಏಕೆ ಹುಟ್ಟಿಸಿವೆಯೆಂದು ತಿಳಿಯಲು ಎಚ್ಚರ! ಪತ್ರಿಕೆ ಅವರೊಂದಿಗೆ ಸಂದರ್ಶನ ನಡೆಸಿತು.
ಎಚ್ಚರ!: ಜೀವರಾಶಿಯು ಬುದ್ಧಿವಂತಿಕೆಯಿಂದ ವಿನ್ಯಾಸಿಸಲ್ಪಟ್ಟಿರುವುದಕ್ಕೆ ರುಜುವಾತನ್ನು ಒದಗಿಸುತ್ತದೆಂದು ನೀವು ನಂಬುವುದೇಕೆ?
ಪ್ರೊಫೆಸರ್ ಬೀಹೀ: ಯಾವುದೇ ಉಪಕರಣದಲ್ಲಿನ ವಿಭಿನ್ನ ಭಾಗಗಳು ಜಟಿಲ ಕೆಲಸಗಳನ್ನು ಮಾಡುವಂತೆ ಜೋಡಿಸಲ್ಪಟ್ಟಿರುವುದನ್ನು ನಾವು ನೋಡುವಾಗೆಲ್ಲ ಅದು ಯಾರೊ ರಚಿಸಿದ್ದಾರೆಂಬ ತೀರ್ಮಾನಕ್ಕೆ ಬರುತ್ತೇವೆ. ದೃಷ್ಟಾಂತಕ್ಕೆ, ನಾವು ದಿನಾಲೂ ಉಪಯೋಗಿಸುವ ಹುಲ್ಲುಗತ್ತರಿ ಯಂತ್ರ, ಕಾರು, ಇಲ್ಲವೆ ಇನ್ನೂ ಸರಳ ಯಂತ್ರಗಳನ್ನು ತೆಗೆದುಕೊಳ್ಳಿ. ನನಗಿಷ್ಟವಾದ ಉದಾಹರಣೆ, ಇಲಿ-ಹಿಡಿಯುವ ಬೋನಿನದ್ದಾಗಿದೆ. ಅದರ ವಿವಿಧ ಭಾಗಗಳು ಇಲಿಯನ್ನು ಪಕ್ಕನೆ ಹಿಡಿಯುವಂಥ ರೀತಿಯಲ್ಲಿ ಜೋಡಿಸಲ್ಪಟ್ಟಿರುವುದರಿಂದ ನೀವು ಅದನ್ನು ಯಾರೊ ತಯಾರುಮಾಡಿದ್ದಾರೆಂಬ ತೀರ್ಮಾನಕ್ಕೆ ಬರುವಿರಿ.
ವಿಜ್ಞಾನವು ಈಗ ಜೀವದ ಪ್ರಾಥಮಿಕ ಮಟ್ಟವನ್ನು ಕಂಡುಹಿಡಿಯುವಷ್ಟರ ಮಟ್ಟಿಗೆ ಪ್ರಗತಿಮಾಡಿದೆ. ಮತ್ತು ನಮ್ಮನ್ನು ಬೆರಗುಗೊಳಿಸುವ ವಿಷಯವೇನೆಂದರೆ, ವಿಜ್ಞಾನಿಗಳು ಜೀವದ ಈ ಆಣ್ವಿಕ ಮಟ್ಟದಲ್ಲಿ ಜಟಿಲ ಕೆಲಸಗಳನ್ನು ಮಾಡುವ “ಯಂತ್ರಭಾಗಗಳು” ಇರುವುದನ್ನು ಕಂಡುಹಿಡಿದಿದ್ದಾರೆ. ಉದಾಹರಣೆಗೆ ಜೀವಕೋಶಗಳೊಳಗೆ, ಕೋಶದ ಒಂದು ಬದಿಯಿಂದ ಇನ್ನೊಂದು ಬದಿಗೆ ಸರಕನ್ನು ಸಾಗಿಸುವ ಸೂಕ್ಷ್ಮ ಆಣ್ವಿಕ “ಟ್ರಕ್ಕುಗಳು” ಇವೆ. ಈ “ಟ್ರಕ್ಕುಗಳು” ಎಡಕ್ಕೆ ತಿರುಗಬೇಕೊ ಬಲಕ್ಕೆ ತಿರುಗಬೇಕೊ ಎಂದು ಹೇಳುವ ಸೂಕ್ಷ್ಮ ಆಣ್ವಿಕ “ಸೂಚಕಫಲಕಗಳೂ” ಇವೆ. ಕೆಲವು ಜೀವಕೋಶಗಳಿಗೆ ದ್ರವದಲ್ಲಿ ಚಲಿಸಲು “ಮೋಟಾರುಗಳು” ಜೋಡಿಸಲ್ಪಟ್ಟಿವೆ. ಜನರು ಈ ರೀತಿಯ ಜಟಿಲ ಕೆಲಸಗಳನ್ನು ಮಾಡುವ ಯಂತ್ರಭಾಗಗಳನ್ನು ಬೇರಾವುದಲ್ಲಾದರೂ ನೋಡಿದರೆ ಅದನ್ನು ಯಾರೊ ವಿನ್ಯಾಸಿಸಿದ್ದಾರೆ ಎಂಬ ತೀರ್ಮಾನಕ್ಕೆ ಬರುವರು. ಹಾಗೆಯೇ, ಜೀವಕೋಶಗಳ ಜಟಿಲತೆಗೆ ಕಾರಣವೇನೆಂಬುದಕ್ಕೆ ನಾವು ಇದನ್ನು ಬಿಟ್ಟು ಬೇರಾವುದೇ ವಿವರಣೆಯನ್ನು ಕೊಡಸಾಧ್ಯವಿಲ್ಲ. ಡಾರ್ವಿನನ ಜೀವವಿಕಾಸ ಸಿದ್ಧಾಂತ ಇದರ ಎದುರಿನಲ್ಲಿ ನಿಲ್ಲಲಾರದು. ಈ ರೀತಿಯ ಏರ್ಪಾಡು ಬುದ್ಧಿವಂತಿಕೆಯಿಂದ ವಿನ್ಯಾಸಿಸಲ್ಪಟ್ಟಿದೆ ಎಂದು ನಾವು ನಿರಂತರವೂ ಕಂಡುಕೊಳ್ಳುವುದರಿಂದ, ಈ ಆಣ್ವಿಕ ವ್ಯವಸ್ಥೆಗಳು ಸಹ ಬುದ್ಧಿವಂತಿಕೆಯಿಂದ ವಿನ್ಯಾಸಿಸಲ್ಪಟ್ಟವೆಂದು ನಾವು ಅಭಿಪ್ರಯಿಸುವುದು ಸಮರ್ಥನೀಯ.
ಎಚ್ಚರ!: ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸದ ಬಗ್ಗೆ ನಿಮ್ಮ ತೀರ್ಮಾನಗಳನ್ನು ನಿಮ್ಮ ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ಏಕೆ ಒಪ್ಪುವುದಿಲ್ಲವೆಂದು ನಿಮ್ಮ ಅಭಿಪ್ರಾಯ?
ಪ್ರೊಫೆಸರ್ ಬೀಹೀ: ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ವೈಜ್ಞಾನಿಕಾತೀತ ಸೂಚ್ಯಾರ್ಥಗಳಿವೆ, ಅಂದರೆ ಅದು ಪ್ರಕೃತ್ಯತೀತ ದಿಕ್ಕಿಗೆ ಕೈತೋರಿಸುತ್ತದೆ
ಎಂದು ಅವರಿಗೆ ಗೊತ್ತಾಗುವ ಕಾರಣದಿಂದ ಅವರು ಒಪ್ಪುವುದಿಲ್ಲ. ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸದ ಕುರಿತಾದ ತೀರ್ಮಾನದಿಂದ ಅನೇಕರಿಗೆ ಕಸಿವಿಸಿಯಾಗುತ್ತದೆ. ಆದರೂ, ರುಜುವಾತು ಎಲ್ಲಿಗೆ ಕೈತೋರಿಸುತ್ತದೆಯೊ ಅದನ್ನೇ ವಿಜ್ಞಾನ ಅನುಸರಿಸಬೇಕೆಂದು ನನಗೆ ಸದಾ ಕಲಿಸಲಾಗಿದೆ. ನನ್ನ ಅಭಿಪ್ರಾಯದ ಮೇರೆಗೆ, ಒಂದು ತೀರ್ಮಾನಕ್ಕೆ ಸುಸ್ಪಷ್ಟ ರುಜುವಾತಿದ್ದರೂ, ಅದಕ್ಕೆ ಅಪ್ರಿಯವಾದ ತತ್ತ್ವಜ್ಞಾನ ಸೂಚ್ಯಾರ್ಥಗಳಿವೆ ಎಂಬ ಕಾರಣಮಾತ್ರಕ್ಕೆ ಅದನ್ನು ಒಪ್ಪದಿರುವುದು ಶುದ್ಧ ಹೇಡಿತನವಾಗಿದೆ.ಎಚ್ಚರ!: ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸದ ವಿಚಾರವನ್ನು ಅಂಗೀಕರಿಸುವುದು ಮೌಢ್ಯವೆಂದು ವಾದಿಸುವ ವಿಮರ್ಶಕರಿಗೆ ನಿಮ್ಮ ಉತ್ತರವೇನು?
ಪ್ರೊಫೆಸರ್ ಬೀಹೀ: ಪ್ರಕೃತಿಯಲ್ಲಿ, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸವನ್ನು ನೋಡಸಾಧ್ಯವಿದೆ ಎಂಬ ತೀರ್ಮಾನವು ಮೌಢ್ಯವಲ್ಲ. ಏಕೆಂದರೆ, ನಮಗೆ ಗೊತ್ತಿಲ್ಲದ ವಿಷಯದಿಂದಲ್ಲ ಬದಲಾಗಿ ನಮಗೆ ಖಂಡಿತವಾಗಿ ಗೊತ್ತಿರುವ ವಿಷಯದಿಂದ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ. ಆರಿಜಿನ್ ಆಫ್ ಸ್ಪೀಷೀಸ್ (ಜೀವಿ ಪ್ರಭೇದಗಳ ಉಗಮ) ಎಂಬ ಪುಸ್ತಕವನ್ನು ಡಾರ್ವಿನನು 150 ವರ್ಷಗಳ ಹಿಂದೆ ಪ್ರಕಟಿಸಿದಾಗ ಜೀವವು ಜಟಿಲವಲ್ಲವೆಂದು ತೋರುತ್ತಿತ್ತು. ಜೀವಕೋಶ ಎಷ್ಟು ಸರಳವಾಗಿದೆಯೆಂದರೆ ಅದು ಸಮುದ್ರದ ಕೆಸರಿನಿಂದ ಗುಳ್ಳೆಯಾಗಿ ತಟ್ಟನೆ ಮೇಲಕ್ಕೇರಿಬರಬಲ್ಲದೆಂದು ವಿಜ್ಞಾನಿಗಳು ನೆನಸುತ್ತಿದ್ದರು. ಆದರೆ ಜೀವಕೋಶಗಳು ತುಂಬ ಜಟಿಲವಾದವುಗಳು, ನಮ್ಮ 21ನೇ ಶತಮಾನದ ಯಂತ್ರಗಳಿಗಿಂತಲೂ ಬಹಳಷ್ಟು ಜಟಿಲವಾದವುಗಳೆಂದು ಈಗ ವಿಜ್ಞಾನವು ಕಂಡುಕೊಂಡಿದೆ. ಜಟಿಲ ಕೆಲಸಗಳನ್ನು ಮಾಡುವ ಅದರ ಸಾಮರ್ಥ್ಯವು ಅದು ಒಂದು ಉದ್ದೇಶಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ ಎಂಬುದನ್ನು ಸೂಚಿಸುತ್ತದೆ.
ಎಚ್ಚರ!: ನೀವು ಹೇಳುತ್ತಿರುವ ಆ ಜಟಿಲವಾದ ಆಣ್ವಿಕ ಯಂತ್ರಗಳನ್ನು ಜೀವವಿಕಾಸವು ನೈಸರ್ಗಿಕ ಆಯ್ಕೆಯ ಮೂಲಕ ಸೃಷ್ಟಿಸಿರಲು ಸಾಧ್ಯವಿದೆ ಎಂಬುದಕ್ಕೆ ವಿಜ್ಞಾನವು ಯಾವುದೇ ರುಜುವಾತನ್ನು ಒದಗಿಸಿದೆಯೆ?
ಪ್ರೊಫೆಸರ್ ಬೀಹೀ: ನೀವು ವೈಜ್ಞಾನಿಕ ಸಾಹಿತ್ಯದಲ್ಲಿ ಹುಡುಕುವಲ್ಲಿ, ಡಾರ್ವಿನನ ಸಿದ್ಧಾಂತಕ್ಕನುಸಾರವಾದ ಪ್ರಕ್ರಿಯೆಗಳಿಂದ ಇಂತಹ ಆಣ್ವಿಕ ಯಂತ್ರಗಳು ಹೇಗೆ ಬಂದವೆಂದು ಪ್ರಯೋಗದಿಂದಾಗಲಿ ಸವಿವರ ವೈಜ್ಞಾನಿಕ ನಮೂನೆಯಿಂದಾಗಲಿ ತೋರಿಸಿಕೊಡಲು ಯಾರೂ ಗಂಭೀರ ಪ್ರಯತ್ನ ಮಾಡಿಲ್ಲವೆಂದು ಕಂಡುಹಿಡಿಯುವಿರಿ. ನನ್ನ ಪುಸ್ತಕ ಪ್ರಕಟಿಸಲ್ಪಟ್ಟು ಕಳೆದಿರುವ ಈ ಹತ್ತು ವರುಷಗಳಲ್ಲಿ, ನ್ಯಾಷನಲ್ ಅಕಾಡಮಿ ಆಫ್ ಸೈಅನ್ಸೆಸ್ ಮತ್ತು ಅಮೆರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈಅನ್ಸೆಸ್ನಂತಹ ಅನೇಕ ವೈಜ್ಞಾನಿಕ ಸಂಘಟನೆಗಳು ತಮ್ಮ ಸದಸ್ಯರಿಗೆ, ಜೀವರಾಶಿಯು ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ರುಜುವಾತನ್ನು ಕೊಡುತ್ತದೆಂಬ ವಿಚಾರವನ್ನು ನಿವಾರಿಸಲು ಸಾಧ್ಯವಾದದ್ದೆಲ್ಲವನ್ನೂ ಮಾಡಬೇಕೆಂದು ತುರ್ತಿನ ಬಿನ್ನಹಗಳನ್ನು ಮಾಡಿದರೂ ಅದು ಸಾಧ್ಯವಾಗಿಲ್ಲ.
ಎಚ್ಚರ!: ಸಸ್ಯಗಳ ಅಥವಾ ಪ್ರಾಣಿಗಳಲ್ಲಿರುವ ಕೆಲವೊಂದು ಅಂಗಗಳು ಅಸಮರ್ಪಕವಾಗಿ ವಿನ್ಯಾಸಿಸಲ್ಪಟ್ಟಿವೆಯೆಂದು ಹೇಳುವವರಿಗೆ ನೀವು ಹೇಗೆ ಉತ್ತರಿಸುತ್ತೀರಿ?
ಪ್ರೊಫೆಸರ್ ಬೀಹೀ: ಒಂದು ಶರೀರದಲ್ಲಿ ಕೆಲವು ಅಂಗಗಳು ಏಕಿವೆ ಎಂಬುದು ನಮಗೆ ತಿಳಿದಿರದ ಕಾರಣ ಆ ಅಂಗ ಪ್ರಮುಖವಲ್ಲವೆಂದು ಅರ್ಥವಲ್ಲ. ಉದಾಹರಣೆಗೆ, ಅನುಪಯುಕ್ತವೆಂದು ಯೋಚಿಸಲಾಗಿದ್ದ ಅಂಗಗಳು ಮಾನವ ದೇಹ ಮತ್ತು ಇತರ ಜೀವಿಗಳು ಅಸಮರ್ಪಕವಾಗಿ ವಿನ್ಯಾಸಿಸಲ್ಪಟ್ಟಿವೆ ಎಂಬುದನ್ನು ತೋರಿಸುತ್ತವೆಂದು ಒಂದೊಮ್ಮೆ ನೆನಸಲಾಗುತ್ತಿತ್ತು. ದೃಷ್ಟಾಂತಕ್ಕೆ, ಕರುಳುಬಾಲ (ಅಪೆಂಡಿಕ್ಸ್) ಮತ್ತು ಗಲಗ್ರಂಥಿಗಳು ಅನುಪಯುಕ್ತ ಅಂಗಗಳೆಂದು ನೆನಸಿ ಒಂದೊಮ್ಮೆ ಅವುಗಳನ್ನು ಶಸ್ತ್ರಕ್ರಿಯೆಮಾಡಿ ತೆಗೆಯಲಾಗುತ್ತಿತ್ತು. ಆದರೆ, ಈ ಅಂಗಗಳು ಸೋಂಕುರಕ್ಷಣಾ ವ್ಯವಸ್ಥೆಯಲ್ಲಿ ಪಾತ್ರವಹಿಸುತ್ತವೆ ಎಂದು ಬಳಿಕ ಕಂಡುಹಿಡಿಯಲಾದ ಕಾರಣ, ಈಗ ಅವುಗಳನ್ನು ಅನುಪಯುಕ್ತವೆಂದು ಪರಿಗಣಿಸಲಾಗುವುದಿಲ್ಲ.
ನೆನಪಿನಲ್ಲಿಡಬೇಕಾದ ಇನ್ನೊಂದು ವಿಷಯವೇನೆಂದರೆ, ಜೀವವಿಜ್ಞಾನದಲ್ಲಿ ಕೆಲವು ಸಂಗತಿಗಳು ಹಠಾತ್ತನೆ ಸಂಭವಿಸುತ್ತವೆ. ಉದಾಹರಣೆಗೆ, ನನ್ನ ಕಾರ್ನಲ್ಲಿ ಒಂದು ಕುಳಿ ಇದೆ ಅಥವಾ ಅದರ ಟಯರ್ನ ಗಾಳಿ ಹೋಗಿಬಿಟ್ಟಿದೆ ಎಂದಿಟ್ಟುಕೊಳ್ಳಿ. ಈ ಕಾರಣಕ್ಕಾಗಿ ನನ್ನ ಕಾರ್ ಅಥವಾ ಟಯರನ್ನು ಯಾರೂ ತಯಾರುಮಾಡಲಿಲ್ಲವೆಂದು ಹೇಳಲಾಗುವುದಿಲ್ಲ. ತದ್ರೀತಿ, ಜೀವವಿಜ್ಞಾನದಲ್ಲಿ ಕೆಲವು ಸಂಗತಿಗಳು ಹಠಾತ್ತನೆ ಸಂಭವಿಸುತ್ತವೆ ಎಂಬ ವಾಸ್ತವಾಂಶದಿಂದಾಗಿ, ಶ್ರೇಷ್ಠಮಟ್ಟದ ಜಟಿಲವಾದ ಆಣ್ವಿಕ ಜೀವಯಂತ್ರವು ಆಕಸ್ಮಿಕವಾಗಿ ಯಾರ ವಿನ್ಯಾಸವಿಲ್ಲದೆ ಬಂತೆಂದು ಹೇಳಲಾಗುವುದಿಲ್ಲ. ಅಂತಹ ವಾದವು ತರ್ಕಸಮ್ಮತವೇ ಅಲ್ಲ. (g 9/06)
[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನನ್ನ ಅಭಿಪ್ರಾಯದ ಮೇರೆಗೆ, ಒಂದು ತೀರ್ಮಾನಕ್ಕೆ ಸುಸ್ಪಷ್ಟ ರುಜುವಾತಿದ್ದರೂ, ಅದಕ್ಕೆ ಅಪ್ರಿಯವಾದ ತತ್ತ್ವಜ್ಞಾನ ಸೂಚ್ಯಾರ್ಥಗಳಿವೆ ಎಂಬ ಕಾರಣಮಾತ್ರಕ್ಕೆ ಅದನ್ನು ಒಪ್ಪದಿರುವುದು ಶುದ್ಧ ಹೇಡಿತನವಾಗಿದೆ”