ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೀರ್ತಿಗಿಂತಲೂ ಮೇಲಾದದ್ದು

ಕೀರ್ತಿಗಿಂತಲೂ ಮೇಲಾದದ್ದು

ಕೀರ್ತಿಗಿಂತಲೂ ಮೇಲಾದದ್ದು

ಚಾರ್ಲ್ಸ್‌ ಸಿನಟ್ಕೋ ಅವರು ಹೇಳಿದಂತೆ

ಇಸವಿ 1957ರಲ್ಲಿ ನನಗೆ ಯು.ಎಸ್‌.ಎ., ನೆವಡದ ಲಾಸ್‌ ವೇಗಸ್‌ನಲ್ಲಿ, ಒಂದು ವಾರಕ್ಕೆ ಸಾವಿರ ಡಾಲರುಗಳಂತೆ 13 ವಾರಗಳ ವರೆಗೆ ಹಾಡುವ ಕಾಂಟ್ರ್ಯಾಕ್ಟ್‌ ಅನ್ನು ನನ್ನ ಮುಂದೆ ಇಡಲಾಯಿತು. ಒಂದುವೇಳೆ ಪ್ರದರ್ಶನಗಳು ಸುಗಮವಾಗಿ ನಡೆಯುವಲ್ಲಿ ಇನ್ನೂ 50 ವಾರಗಳ ವರಗೆ ಪ್ರದರ್ಶನವನ್ನು ನಡೆಸುವ ಸಾಧ್ಯತೆಯೂ ಇತ್ತು. ಇದರಿಂದ ಇನ್ನೂ 50,000 ಡಾಲರುಗಳ ಸಂಪಾದನೆಯಾಗುತ್ತಿತ್ತು​—⁠ಆ ಕಾಲದಲ್ಲಿ ಇದು ನಿಜವಾಗಿಯೂ ಒಂದು ದೊಡ್ಡ ಮೊತ್ತವಾಗಿತ್ತು. ನನಗೆ ಈ ಲಾಭದಾಯಕ ಅವಕಾಶವು ಹೇಗೆ ಕೊಡಲ್ಪಟ್ಟಿತು ಮತ್ತು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವುದೋ ಬೇಡವೋ ಎಂಬ ನಿರ್ಧಾರವನ್ನು ಮಾಡುವುದು ಯಾಕೆ ಕಷ್ಟಕರವಾಗಿತ್ತು ಎಂಬುದನ್ನು ನಿಮಗೆ ತಿಳಿಸುವೆ.

ಯೂಕ್ರೇನ್‌ನವರಾಗಿದ್ದ ನನ್ನ ತಂದೆಯವರು 1910ರಲ್ಲಿ ಪೂರ್ವ ಯೂರೋಪಿನಲ್ಲಿ ಜನಿಸಿದರು. ಇಸವಿ 1913ರಲ್ಲಿ ಅವರ ತಾಯಿಯವರು ತಮ್ಮ ಪತಿಯೊಂದಿಗೆ ಇರಲಿಕ್ಕಾಗಿ ಯುನೈಟೆಡ್‌ ಸ್ಟೇಟ್ಸ್‌ಗೆ ಬಂದಾಗ, ತಂದೆಯವರನ್ನೂ ಕರೆದುಕೊಂಡುಬಂದರು. ಇಸವಿ 1935ರಲ್ಲಿ ನನ್ನ ತಂದೆಯವರು ವಿವಾಹವಾದರು, ಮತ್ತು ಒಂದು ವರ್ಷದ ಬಳಿಕ ಪೆನ್ಸಿಲ್‌ವೇನಿಯದ ಆ್ಯಂಬ್ರಿಜ್‌ ಪಟ್ಟಣದಲ್ಲಿ ನಾನು ಜನಿಸಿದೆ. ಆ ಸಮಯದಷ್ಟಕ್ಕೆ ತಂದೆಯವರ ಅಣ್ಣಂದಿರಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳಾದರು.

ನಾನೂ ನನ್ನ ಮೂವರು ತಮ್ಮಂದಿರೂ ಚಿಕ್ಕವರಾಗಿದ್ದಾಗ ಮತ್ತು ನಮ್ಮ ಕುಟುಂಬವು ಪೆನ್ಸಿಲ್‌ವೇನಿಯದ ನ್ಯೂ ಕ್ಯಾಸಲ್‌ ನಗರದಲ್ಲಿ ವಾಸಿಸುತ್ತಿದ್ದಾಗ, ನನ್ನ ತಾಯಿಯವರು ಸಾಕ್ಷಿಗಳೊಂದಿಗೆ ಸ್ವಲ್ಪ ಸಮಯ ಬೈಬಲ್‌ ಅಧ್ಯಯನಮಾಡಿದರು. ಆ ಸಮಯದಲ್ಲಿ ನನ್ನ ಹೆತ್ತವರಿಬ್ಬರೂ ಸಾಕ್ಷಿಗಳಾಗಲಿಲ್ಲ, ಆದರೆ ತನ್ನ ಅಣ್ಣಂದಿರಿಗೆ ತಮಗಿಷ್ಟವಾದದ್ದನ್ನು ನಂಬುವ ಹಕ್ಕು ಇದೆ ಎಂಬುದು ತಂದೆಯವರ ಅಭಿಪ್ರಾಯವಾಗಿತ್ತು. ನಮ್ಮ ಅಪ್ಪ ನಮ್ಮನ್ನು ದೇಶಪ್ರೇಮಿಗಳನ್ನಾಗಿ ಬೆಳೆಸಿದ್ದರಾದರೂ, ತಮಗೆ ಇಷ್ಟಕರವಾದ ರೀತಿಯಲ್ಲಿ ಆರಾಧಿಸುವ ಇತರರ ಹಕ್ಕನ್ನು ಯಾವಾಗಲೂ ಸಮರ್ಥಿಸುತ್ತಿದ್ದರು.

ಹಾಡುಗಾರಿಕೆಯ ಜೀವನವೃತ್ತಿ

ಹಾಡುವ ಸಹಜ ಪ್ರತಿಭೆ ನನ್ನಲ್ಲಿದೆಯೆಂಬುದು ನನ್ನ ಹೆತ್ತವರ ಎಣಿಕೆಯಾಗಿತ್ತು, ಆದುದರಿಂದ ನನ್ನನ್ನು ಉತ್ತೇಜಿಸಲಿಕ್ಕಾಗಿ ಅವರು ತಮ್ಮಿಂದಾದುದೆಲ್ಲವನ್ನೂ ಮಾಡಿದರು. ನಾನು ಆರು ಅಥವಾ ಏಳು ವರ್ಷದವನಾಗಿದ್ದಾಗ, ಅಪ್ಪ ನನ್ನನ್ನು ನೈಟ್‌ ಕ್ಲಬ್ಬಿನಲ್ಲಿ ಬಾರ್‌ನ ಕೌಂಟರ್‌ನ ಮೇಲೆ ನಿಲ್ಲಿಸಿ, ಹಾಡು ಹೇಳುತ್ತಾ ಗಿಟಾರ್‌ ಬಾರಿಸುವಂತೆ ಮಾಡುತ್ತಿದ್ದರು. ನಾನು “ಮದರ್‌” (ಅಮ್ಮ) ಎಂಬ ಹಾಡನ್ನು ಹಾಡುತ್ತಿದ್ದೆ. ಆ ಹಾಡು, ಒಬ್ಬ ಮಮತಾಮಯಿ ತಾಯಿಯ ಗುಣಗಳನ್ನು ವರ್ಣಿಸುತ್ತದೆ ಮತ್ತು ಒಂದು ಹೃದಯಸ್ಪರ್ಶಿ ಆರೋಹದೊಂದಿಗೆ ಕೊನೆಗೊಳ್ಳುತ್ತದೆ. ಅನೇಕವೇಳೆ ಕಂಠಪೂರ್ತಿ ಕುಡಿದಿರುತ್ತಿದ್ದ ಬಾರ್‌ನಲ್ಲಿನ ಪುರುಷರು, ಹಾಡನ್ನು ಕೇಳಿಸಿಕೊಂಡು ಅಳುತ್ತಿದ್ದರು ಮತ್ತು ಅಪ್ಪ ಎಲ್ಲರ ಬಳಿ ದಾಟಿಸುತ್ತಿದ್ದ ಟೋಪಿಯಲ್ಲಿ ಹಣವನ್ನು ಹಾಕುತ್ತಿದ್ದರು.

ಇಸವಿ 1945ರಲ್ಲಿ, ನ್ಯೂ ಕ್ಯಾಸಲ್‌ ನಗರದಲ್ಲಿ ಡಬ್ಲ್ಯೂ.ಕೆ.ಎಸ್‌.ಟಿ ರೇಡಿಯೋ ಕಾರ್ಯಕ್ರಮದಲ್ಲಿ, ಹಳ್ಳಿಗರ ಹಾಡನ್ನು ಹಾಡುವ ಮೂಲಕ ನನ್ನ ಪ್ರಥಮ ಪ್ರದರ್ಶನವನ್ನು ನೀಡಿದೆ. ಸಮಯಾನಂತರ, ವಾರದ ಅತ್ಯಂತ ಜನಪ್ರಿಯ ಹಾಡುಗಳನ್ನು ಪ್ರಸಾರಮಾಡುತ್ತಿದ್ದ ಹಿಟ್‌ ಪರೇಡ್‌ ಎಂಬ ಸಾಪ್ತಾಹಿಕ ನೆಟ್‌ವರ್ಕ್‌ ರೇಡಿಯೋ ಕಾರ್ಯಕ್ರಮದಿಂದ ಜನಪ್ರಿಯ ಹಾಡುಗಳನ್ನು ಒಳಗೂಡಿಸಿಕೊಳ್ಳುವ ಮೂಲಕ ನಾನು ನನ್ನ ಸಂಗೀತಸಂಚಯವನ್ನು ವಿಸ್ತರಿಸಿದೆ. ಟೆಲಿವಿಷನ್‌ನಲ್ಲಿ ನಾನು ಪ್ರಥಮವಾಗಿ ಕಾಣಿಸಿಕೊಂಡದ್ದು, 1950ರಲ್ಲಿ ಪೌಲ್‌ ವೈಟ್‌ಮನ್‌ರ ಪ್ರದರ್ಶನದಲ್ಲಿ. ಪೌಲ್‌ ವೈಟ್‌ಮನ್‌ರು ಜಾರ್ಜ್‌ ಗೆರ್ಷ್‌ವಿನ್‌ರಿಗೆ “ರ್ಯಾಪ್‌ಸೊಡಿ ಇನ್‌ ಬ್ಲೂ” ಗೀತರಚನೆಯನ್ನು ಮಾಡುವಂತೆ ಕೇಳಿಕೊಂಡು, ಅದಕ್ಕೆ ಸಂಗೀತವನ್ನು ನುಡಿಸಿದರು, ಮತ್ತು ಆ ಸಂಗೀತವು ಈಗಲೂ ಪ್ರಖ್ಯಾತವಾಗಿದೆ. ತದನಂತರ ಸ್ವಲ್ಪದರಲ್ಲೇ ಅಪ್ಪ ಪೆನ್ಸಿಲ್‌ವೇನಿಯದಲ್ಲಿದ್ದ ನಮ್ಮ ಮನೆಯನ್ನು ಮಾರಿಬಿಟ್ಟರು, ಮತ್ತು ನನ್ನ ಜೀವನವೃತ್ತಿಯನ್ನು ವಿಸ್ತರಿಸುವ ನಿರೀಕ್ಷೆಯಿಂದ ನಾವು ಕ್ಯಾಲಿಫೋರ್ನಿಯದ ಲಾಸ್‌ ಏಂಜಲಿಸ್‌ ಕ್ಷೇತ್ರಕ್ಕೆ ಸ್ಥಳಾಂತರಿಸಿದೆವು.

ತಂದೆಯವರ ಸತತ ಪ್ರಯತ್ನದಿಂದಾಗಿ, ಅತಿ ಬೇಗನೆ ನನ್ನ ಸ್ವಂತ ಸಾಪ್ತಾಹಿಕ ರೇಡಿಯೋ ಕಾರ್ಯಕ್ರಮವನ್ನು ಮತ್ತು ಸಾಪ್ತಾಹಿಕವಾಗಿ ಹಾಲಿವುಡ್‌ನಲ್ಲಿ ಅರ್ಧ ತಾಸಿನ ಟಿವಿ ಪ್ರದರ್ಶನವನ್ನು ಪ್ರಸ್ತುತಪಡಿಸುವ ಅವಕಾಶ ಸಿಕ್ಕಿತು. ನೂರು ಮಂದಿ ಸದಸ್ಯರಿರುವ ಟೆಡ್‌ ಡೇಲ್‌ ಆರ್ಕೆಸ್ಟ್ರದೊಂದಿಗೆ ಕ್ಯಾಪಿಟೊಲ್‌ ರೆಕಾರ್ಡ್ಸ್‌ ಕಂಪೆನಿಯಲ್ಲಿ ನಾನು ರೆಕಾರ್ಡಿಂಗ್‌ಗಳನ್ನು ಮಾಡುತ್ತಿದ್ದೆ ಮತ್ತು ಸಿ.ಬಿ.ಎಸ್‌ ರೇಡಿಯೋ ನೆಟ್‌ವರ್ಕ್‌ನಲ್ಲಿ ಒಬ್ಬ ಗಾಯಕನೂ ಆದೆ. ಇಸವಿ 1955ರಲ್ಲಿ ನಾನು ಉತ್ತರ ಕ್ಯಾಲಿಫೋರ್ನಿಯದಲ್ಲಿರುವ ಲೇಕ್‌ ಟೇಹೋದಲ್ಲಿ ಒಂದು ಸಂಗೀತ ವಿಡಂಬನೆಯನ್ನು ನಡೆಸಿದೆ. ಅಲ್ಲಿದ್ದಾಗ, ನನ್ನ ಬದುಕಿನ ಆದ್ಯತೆಗಳು ನಾಟಕೀಯವಾಗಿ ಬದಲಾದವು.

ಹೊಸ ಆದ್ಯತೆಗಳನ್ನು ಬೆಳೆಸಿಕೊಳ್ಳುವುದು

ಆ ಸಮಯದಷ್ಟಕ್ಕೆ, ಪೆನ್ಸಿಲ್‌ವೇನಿಯದಿಂದ ಕ್ಯಾಲಿಫೋರ್ನಿಯಕ್ಕೆ ಸ್ಥಳಾಂತರಿಸಿದ್ದ ನನ್ನ ದೊಡ್ಡಪ್ಪ ಜಾನ್‌ರವರು ನನಗೆ “ದೇವರು ಸತ್ಯವಂತನೇ ಸರಿ” * ಎಂಬ ಪುಸ್ತಕವನ್ನು ಕೊಟ್ಟರು. * ಲೇಕ್‌ ಟೇಹೋಗೆ ಹೋಗುವಾಗ ನಾನು ಅದನ್ನು ಜೊತೆಯಲ್ಲಿ ಕೊಂಡೊಯ್ದೆ. ಮಧ್ಯರಾತ್ರಿಯಷ್ಟಕ್ಕೆ ಮುಗಿದ ನಮ್ಮ ಕೊನೆಯ ಪ್ರದರ್ಶನದ ಬಳಿಕ, ಮಲಗುವುದಕ್ಕೆ ಮೊದಲು ಸ್ವಲ್ಪ ಮನಸ್ಸನ್ನು ಪ್ರಫುಲ್ಲಗೊಳಿಸಲಿಕ್ಕಾಗಿ ನಾನು ಈ ಪುಸ್ತಕವನ್ನು ಓದಲಾರಂಭಿಸಿದೆ. ದೀರ್ಘ ಸಮಯದಿಂದಲೂ ನಾನು ಕುತೂಹಲಪಡುತ್ತಿದ್ದ ಪ್ರಶ್ನೆಗಳಿಗೆ ಬೈಬಲ್‌ ಉತ್ತರಗಳನ್ನು ಕಂಡುಕೊಂಡದ್ದಕ್ಕಾಗಿ ನಾನು ಪುಳಕಗೊಂಡಿದ್ದೆ.

ಇದಾದ ಬಳಿಕ ನಾನು ಕೆಲಸ ಮುಗಿಸಿ ನೈಟ್‌ ಕ್ಲಬ್‌ನಲ್ಲಿ ಕುಳಿತುಕೊಂಡು ಜೊತೆ ಮನೋರಂಜನೆಗಾರರೊಂದಿಗೆ ಇದರ ಕುರಿತು ಮಾತಾಡುತ್ತಿದ್ದೆ, ಮತ್ತು ಅನೇಕವೇಳೆ ಮುಂಜಾವಿನ ತನಕವೂ ನಮ್ಮ ಸಂಭಾಷಣೆಯು ಮುಂದುವರಿಯುತ್ತಿತ್ತು. ಮರಣಾನಂತರದ ಜೀವನ, ದೇವರು ದುಷ್ಟತನವನ್ನು ಅನುಮತಿಸಿರುವುದರ ಕಾರಣ, ಮತ್ತು ಕಾಲಕ್ರಮೇಣ ಮನುಷ್ಯನು ತನ್ನನ್ನೂ ಭೂಮಿಯನ್ನೂ ನಾಶಪಡಿಸುವ ಸಾಧ್ಯತೆ ಇದೆಯೋ ಎಂಬಂಥ ವಿಷಯಗಳನ್ನು ನಾವು ಚರ್ಚಿಸುತ್ತಿದ್ದೆವು. ಕೆಲವು ತಿಂಗಳುಗಳ ಬಳಿಕ, 1955ರ ಜುಲೈ 9ರಂದು, ಲಾಸ್‌ ಏಂಜಲಿಸ್‌ನ ರಿಗ್ಲೇ ಫೀಲ್ಡ್‌ನಲ್ಲಿ ನಡೆಸಲ್ಪಟ್ಟ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನವೊಂದರಲ್ಲಿ, ಯೆಹೋವ ದೇವರನ್ನು ಸೇವಿಸುವ ನನ್ನ ಸಮರ್ಪಣೆಯ ಸಂಕೇತವಾಗಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ.

ಇದಾಗಿ ಆರು ತಿಂಗಳು ಕಳೆಯುವುದಕ್ಕೆ ಮುಂಚೆ, 1955ರ ಕ್ರಿಸ್ಮಸ್‌ ಹಬ್ಬದ ಬೆಳಗ್ಗೆ, ಮನೋರಂಜನೆಯ ವ್ಯಾಪಾರೋದ್ಯಮಿಯಾಗಿದ್ದ ಜ್ಯಾಕ್‌ ಮಕೊಯ್‌ ಅನ್ನು ಭೇಟಿಮಾಡಲು ತನ್ನೊಂದಿಗೆ ಬರುವಂತೆ ಹೆನ್ರಿ ರಸಲ್‌ ಎಂಬ ಜೊತೆ ವಿಶ್ವಾಸಿಯು ನನ್ನನ್ನು ಆಮಂತ್ರಿಸಿದನು. ಹೆನ್ರಿಯು ತಾನೇ ಎನ್‌.ಬಿ.ಸಿ ಕಂಪೆನಿಯ ಸಂಗೀತ ನಿರ್ದೇಶಕನಾಗಿದ್ದನು. ನಾವು ಆಗಮಿಸಿದಾಗ, ಜ್ಯಾಕ್‌ನ ಮೂವರು ಮಕ್ಕಳು ಹಾಗೂ ಪತ್ನಿಯು ಆಗಷ್ಟೇ ತಮ್ಮ ಕ್ರಿಸ್ಮಸ್‌ ಉಡುಗೊರೆಗಳನ್ನು ಬಿಚ್ಚಿನೋಡುತ್ತಿದ್ದರು; ಆದರೂ ಅವರೆಲ್ಲರೂ ಕುಳಿತುಕೊಂಡು ನಾವು ಹೇಳುವುದನ್ನು ಕಿವಿಗೊಡುವಂತೆ ಜ್ಯಾಕ್‌ ಏರ್ಪಡಿಸಿದರು. ಸಮಯಾನಂತರ ಅವರೂ ಅವರ ಕುಟುಂಬದವರೂ ಸಾಕ್ಷಿಗಳಾದರು.

ಈ ಸಮಯದಷ್ಟಕ್ಕೆ ನಾನು ತಾಯಿಯೊಂದಿಗೆ ಅಧ್ಯಯನಮಾಡಿದೆ, ಮತ್ತು ಅವರು ಬೈಬಲ್‌ ಸತ್ಯವನ್ನು ಗ್ರಹಿಸಿ ಸ್ವೀಕರಿಸಿದರು. ಕೊನೆಗೆ ಅವರು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದರು ಮತ್ತು ಒಬ್ಬ ಪಯನೀಯರರಾದರು ಅಂದರೆ ಪೂರ್ಣ ಸಮಯದ ಸೌವಾರ್ತಿಕರಾದರು. ಸಕಾಲದಲ್ಲಿ, ನನ್ನ ಮೂವರು ತಮ್ಮಂದಿರೂ ದೀಕ್ಷಾಸ್ನಾನವನ್ನು ಪಡೆದುಕೊಂಡರು ಮತ್ತು ಸ್ವಲ್ಪ ಸಮಯದ ವರಗೆ ಪಯನೀಯರ್‌ ಶುಶ್ರೂಷೆಯಲ್ಲಿಯೂ ಪಾಲ್ಗೊಂಡರು. ಇಸವಿ 1956ರ ಸೆಪ್ಟೆಂಬರ್‌ನಲ್ಲಿ, 20ರ ಪ್ರಾಯದಲ್ಲಿ ನಾನೂ ಪಯನೀಯರನಾದೆ.

ಉದ್ಯೋಗದ ಕುರಿತಾದ ನಿರ್ಧಾರಗಳು

ಈ ಸಮಯದಲ್ಲೇ ನನ್ನ ಏಜೆಂಟರ ವೈಯಕ್ತಿಕ ಸ್ನೇಹಿತನಾಗಿದ್ದ ಜಾರ್ಜ್‌ ಮರ್ಫಿ, ನನ್ನನ್ನು ಮೇಲೆ ತರುವುದರಲ್ಲಿ ಆಸಕ್ತಿಯನ್ನು ವಹಿಸಿದನು. ಜಾರ್ಜ್‌ 1930ಗಳು ಮತ್ತು 1940ಗಳಲ್ಲಿ ಅನೇಕ ಫಿಲ್ಮ್‌ಗಳಲ್ಲಿ ಕಾಣಿಸಿಕೊಂಡಿದ್ದನು. ಇಸವಿ 1956ರ ಡಿಸೆಂಬರ್‌ನಲ್ಲಿ, ಮರ್ಫಿಯ ವೃತ್ತಿಪರ ಸಂಪರ್ಕಗಳಿಂದಾಗಿ, ನಾನು ನ್ಯೂ ಯಾರ್ಕ್‌ ಸಿಟಿಯ ಸಿ.ಬಿ.ಎಸ್‌.-ಟಿ.ವಿ.ಯಲ್ಲಿ ಜಾಕೀ ಗ್ಲೇಸನ್‌ ಪ್ರದರ್ಶನದಲ್ಲಿ ಕಾಣಿಸಿಕೊಂಡೆ. ಇದು ನನ್ನ ಜೀವನವೃತ್ತಿಗೆ ಬಹು ದೊಡ್ಡ ಪ್ರಚೋದನೆಯಾಗಿತ್ತು, ಏಕೆಂದರೆ ಈ ಪ್ರದರ್ಶನವನ್ನು 2,00,00,000 ಮಂದಿ ಪ್ರೇಕ್ಷಕರು ವೀಕ್ಷಿಸುತ್ತಾರೆಂದು ಅಂದಾಜುಮಾಡಲಾಗಿತ್ತು. ನ್ಯೂ ಯಾರ್ಕ್‌ನಲ್ಲಿದ್ದಾಗ, ಪ್ರಥಮ ಬಾರಿಗೆ ನಾನು ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯವನ್ನು ಸಂದರ್ಶಿಸಿದೆ.

ಗ್ಲೇಸನ್‌ ಪ್ರದರ್ಶನದಲ್ಲಿ ಕಾಣಿಸಿಕೊಂಡ ಬಳಿಕ ನಾನು ಎಮ್‌.ಜಿ.ಎಮ್‌. ಸ್ಟುಡಿಯೋದೊಂದಿಗೆ ಏಳು ವರ್ಷಗಳ ಚಲನಚಿತ್ರ ಸಂಪರ್ಕದ ಕಾಂಟ್ರ್ಯಾಕ್ಟ್‌ಗೆ ಸಹಿಹಾಕಿದೆ. ‘ಟಿ.ವಿ. ವೆಸ್ಟರ್ನ್‌’ನಲ್ಲಿ ನನಗೆ ಕ್ರಮವಾಗಿ ಒಂದು ಪಾತ್ರವು ನೀಡಲ್ಪಟ್ಟಿತು. ಆದರೂ, ಸ್ವಲ್ಪ ಸಮಯಾನಂತರ ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸತೊಡಗಿತು, ಏಕೆಂದರೆ ನಾನು ಜೂಜುಗಾರನ ಮತ್ತು ಬಂದೂಕುಧಾರಿಯ ಪಾತ್ರವನ್ನು ಮಾಡಬೇಕಾಗುತ್ತಿತ್ತು; ಅಷ್ಟುಮಾತ್ರವಲ್ಲ ಈ ಪಾತ್ರಗಳು ಅನೈತಿಕತೆಯನ್ನು ಹಾಗೂ ಇನ್ನಿತರ ಅಕ್ರೈಸ್ತ ನಡವಳಿಕೆಯನ್ನು ರೋಮಾಂಚಕಾರಿಯಾಗಿ ಪ್ರದರ್ಶಿಸುತ್ತಿದ್ದವು. ಆದುದರಿಂದಲೇ ನಾನು ಅದನ್ನು ಬಿಟ್ಟುಬಿಟ್ಟೆ. ಮನೋರಂಜನಾ ವ್ಯಾಪಾರದಲ್ಲಿದ್ದವರು ನನಗೆ ತಲೆಕೆಟ್ಟುಹೋಗಿದೆ ಎಂದು ನೆನಸಿದರು.

ಈ ಮಧ್ಯೆ, ಆರಂಭದಲ್ಲಿ ಯಾವುದರ ಕುರಿತು ತಿಳಿಸಲಾಗಿದೆಯೋ ಆ ಲಾಭದಾಯಕ ಅವಕಾಶವು ಅಂದರೆ ಲಾಸ್‌ ವೇಗಸ್‌ನಲ್ಲಿ ಪ್ರದರ್ಶನ ನೀಡುವ ಸಂದರ್ಭವು ನನಗೆ ಒದಗಿಬಂದಿತ್ತು. ನಮ್ಮ ಸಂಚರಣ ಮೇಲ್ವಿಚಾರಕರ ಸಂದರ್ಶನದ ವಾರದಲ್ಲೇ ನಾನು ಕೆಲಸವನ್ನು ಆರಂಭಿಸಬೇಕಾಗಿತ್ತು. ಒಂದುವೇಳೆ ಆ ಸಮಯಕ್ಕೆ ನಾನು ಆ ಉದ್ಯೋಗವನ್ನು ಸ್ವೀಕರಿಸದಿರುವಲ್ಲಿ, ಆ ಸದವಕಾಶವು ನನ್ನ ಕೈತಪ್ಪಿಹೋಗಲಿತ್ತು. ನನ್ನಲ್ಲಿ ಸಂಘರ್ಷಕರ ಅನಿಸಿಕೆಗಳಿದ್ದವು, ಏಕೆಂದರೆ ನಾನು ಬಹಳಷ್ಟು ಹಣವನ್ನು ಸಂಪಾದಿಸುವ ಕಾಲಕ್ಕಾಗಿ ಅಪ್ಪ ಎದುರುನೋಡುತ್ತಿದ್ದರು! ನನ್ನ ಜೀವನವೃತ್ತಿಯನ್ನು ಉತ್ತೇಜಿಸಲಿಕ್ಕಾಗಿ ಅವರು ಏನೆಲ್ಲಾ ಮಾಡಿದ್ದಾರೋ ಅದರ ಮರುಪಾವತಿಗೆ ಅವರು ಅರ್ಹರಾಗಿದ್ದಾರೆಂದು ನನಗನಿಸಿತು.

ಆದುದರಿಂದ, ಸ್ವತಃ ಒಬ್ಬ ಸಂಗೀತಗಾರರೂ ನ್ಯೂ ಯಾರ್ಕ್‌ನ ಡಬ್ಲ್ಯೂ.ಬಿ.ಬಿ.ಆರ್‌ ರೇಡಿಯೋ ಸ್ಟೇಷನ್‌ನಲ್ಲಿ 1920ಗಳಲ್ಲಿ ಒಬ್ಬ ಪಿಟೀಲುವಾದಕರೂ ಆಗಿದ್ದ ಕಾರ್ಲ್‌ ಪಾರ್ಕ್‌ ಎಂಬ ನಮ್ಮ ಅಧ್ಯಕ್ಷ ಮೇಲ್ವಿಚಾರಕರ ಬಳಿಗೆ ನಾನು ಹೋದೆ. ಒಂದುವೇಳೆ ನಾನು ಈ ಕಾಂಟ್ರ್ಯಾಕ್ಟನ್ನು ತೆಗೆದುಕೊಳ್ಳುವಲ್ಲಿ, ಹಣಕಾಸಿನ ಬಗ್ಗೆ ಯಾವುದೇ ಚಿಂತೆಯಿಲ್ಲದೆ ನನ್ನ ಜೀವಮಾನವೆಲ್ಲಾ ಪಯನೀಯರ್‌ ಸೇವೆಯನ್ನು ಮಾಡಸಾಧ್ಯವಿದೆ ಎಂದು ನಾನು ಅವರಿಗೆ ವಿವರಿಸಿದೆ. “ನೀನು ಏನು ಮಾಡಬೇಕು ಎಂಬುದನ್ನು ನಾನು ಹೇಳಲಾರೆ, ಆದರೆ ಒಂದು ತೀರ್ಮಾನಕ್ಕೆ ತಲಪುವಂತೆ ನಾನು ನಿನಗೆ ಸಹಾಯಮಾಡಬಲ್ಲೆ” ಎಂದು ಅವರು ಹೇಳಿದರು. ಅವರು ಕೇಳಿದ್ದು: “ಒಂದುವೇಳೆ ಅಪೊಸ್ತಲ ಪೌಲನು ಈ ವಾರ ನಮ್ಮ ಸಭೆಯನ್ನು ಸಂದರ್ಶಿಸುತ್ತಿದ್ದಲ್ಲಿ ನೀನು ಹೀಗೆ ಹೋಗುತ್ತಿದ್ದೆಯೋ?” ಅವರು ಇನ್ನೂ ಪ್ರಶ್ನಿಸಿದ್ದು: “ನೀನು ಏನು ಮಾಡುವಂತೆ ಯೇಸು ಬಯಸುತ್ತಾನೆಂದು ನೆನಸುತ್ತೀ?”

ಅವರ ಮಾತುಗಳು ಎಷ್ಟು ಸ್ಪಷ್ಟವಾಗಿವೆ ಎಂದು ನನಗನಿಸಿತು. ಲಾಸ್‌ ವೇಗಸ್‌ನ ಉದ್ಯೋಗಕ್ಕೆ ಸೇರುವುದಿಲ್ಲವೆಂದು ನಿರ್ಧರಿಸಿದ್ದೇನೆ ಎಂದು ಅಪ್ಪನಿಗೆ ತಿಳಿಸಿದಾಗ, ನಾನು ಅವರ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದೇನೆಂದು ಅವರು ಹೇಳಿದರು. ಆ ರಾತ್ರಿ ಅವರು ತಮ್ಮ .38-ಕ್ಯಾಲಿಬರ್‌ ಕೈಬಂದೂಕಿನೊಂದಿಗೆ ನನಗಾಗಿ ಕಾದಿದ್ದರು. ನನ್ನನ್ನು ಕೊಲ್ಲುವುದು ಅವರ ಉದ್ದೇಶವಾಗಿತ್ತು, ಆದರೆ ಅವರು ವಿಪರೀತವಾಗಿ ಕುಡಿದಿದ್ದುದರಿಂದ ನಿದ್ರೆಹೋಗಿದ್ದರು. ತದನಂತರ ಅವರು ಗ್ಯಾರೇಜ್‌ನಲ್ಲಿ ವಾಹನದ ಎಗ್‌ಸಾಸ್ಟ್‌ನಿಂದ ಸ್ವತಃ ತಮ್ಮನ್ನು ಕೊಂದುಕೊಳ್ಳಲು ಪ್ರಯತ್ನಿಸಿದರು. ನಾನು ರಕ್ಷಣಾ ಸಿಬ್ಬಂದಿಯನ್ನು ಕರೆಸಿಕೊಂಡೆ, ಮತ್ತು ಅವರು ಅಪ್ಪನನ್ನು ಉಳಿಸಲು ಶಕ್ತರಾದರು.

ನಮ್ಮ ಸಭೆಯಲ್ಲಿದ್ದ ಅನೇಕರಿಗೆ ಅಪ್ಪನವರ ಕೋಪೋದ್ರೇಕ ಸ್ವಭಾವದ ಕುರಿತು ಗೊತ್ತಿತ್ತು, ಮತ್ತು ಎಲ್ಲರೂ ಅವರಿಗೆ ತುಂಬ ಹೆದರುತ್ತಿದ್ದರು. ಆದರೆ ನಮ್ಮ ಸರ್ಕಿಟ್‌ ಮೇಲ್ವಿಚಾರಕರಾಗಿದ್ದ ರೊಯ್‌ ಡೌಎಲ್‌ರವರು ಅವರಿಗೆ ಹೆದರಲಿಲ್ಲ. ರೊಯ್‌ ಅವರು ಅಪ್ಪನನ್ನು ಭೇಟಿಯಾಗಲು ಹೋದಾಗ, ಮಾತಿನ ಮಧ್ಯೆ ಅಪ್ಪನವರು ಅವರಿಗೆ, ನನ್ನ ಜನನವಾದಾಗ ನಾನು ಬದುಕಿ ಉಳಿಯುವ ಸಾಧ್ಯತೆಯೇ ಇರಲಿಲ್ಲವೆಂದು ಹೇಳಿದರಂತೆ. ನಾನು ಬದುಕಿ ಉಳಿಯುವಲ್ಲಿ, ನನ್ನನ್ನು ದೇವರ ಸೇವೆಗೆ ಮುಡಿಪಾಗಿಡುವೆನೆಂದು ಅಪ್ಪ ಆತನಿಗೆ ಮಾತುಕೊಟ್ಟಿದ್ದರಂತೆ. ಕೊಟ್ಟ ಮಾತನ್ನು ಪೂರೈಸುವಂತೆ ದೇವರು ಅವರಿಂದ ನಿರೀಕ್ಷಿಸುತ್ತಿರಬಹುದಲ್ಲವೋ ಎಂದು ರೊಯ್‌ ನನ್ನ ತಂದೆಯವರನ್ನು ಕೇಳಿದರು. ಇದು ಅಪ್ಪನನ್ನು ಚಕಿತಗೊಳಿಸಿತು. ಆ ಬಳಿಕ ರೊಯ್‌ ಕೇಳಿದ್ದು: “ದೇವರ ಮಗನಿಗೇ ಪೂರ್ಣ ಸಮಯದ ಸೇವೆಯು ಒಳ್ಳೇದಾಗಿದ್ದರೆ, ನಿಮ್ಮ ಮಗನಿಗೆ ಅದು ಯಾಕೆ ಒಳ್ಳೇದಾಗಿರಲು ಸಾಧ್ಯವಿಲ್ಲ?” ಇದರ ಬಳಿಕ ಅಪ್ಪ ನನ್ನ ಆಯ್ಕೆಯನ್ನು ಒಪ್ಪಿಕೊಂಡಂತೆ ತೋರಿತು.

ಈ ಮಧ್ಯೆ, 1957ರ ಜನವರಿ ತಿಂಗಳಿನಲ್ಲಿ, ಶರ್ಲಿ ಲಾರ್ಜ್‌ ಎಂಬವಳು ಕೆಲವು ಮಿತ್ರರನ್ನು ಸಂದರ್ಶಿಸಲಿಕ್ಕಾಗಿ ತನ್ನ ಪಯನೀಯರ್‌ ಸಂಗಾತಿಯೊಂದಿಗೆ ಕೆನಡಕ್ಕೆ ಬಂದಳು. ನಾನು, ಶರ್ಲಿ ಹಾಗೂ ಅವಳ ಸಂಗಾತಿಯೊಂದಿಗೆ ಮನೆಯಿಂದ ಮನೆಯ ಶುಶ್ರೂಷೆಗಾಗಿ ಹೋದಾಗ ನನಗೂ ಅವಳಿಗೂ ಪರಿಚಯ ಬೆಳೆಯಿತು. ಸ್ವಲ್ಪ ಕಾಲಾವಧಿಯ ಬಳಿಕ ಶರ್ಲಿ ನನ್ನೊಂದಿಗೆ ‘ಹಾಲಿವುಡ್‌ ಬೌಲ್‌’ಗೆ ಬಂದಳು, ಅಲ್ಲಿ ನಾನು ಪರ್ಲ್‌ ಬೈಲಿಯೊಂದಿಗೆ ಹಾಡಿದೆ.

ಒಂದು ನಿರ್ಧಾರಕ್ಕೆ ಬಂದದ್ದು

ಇಸವಿ 1957ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಲೋವ ರಾಜ್ಯದಲ್ಲಿ ಸ್ಪೆಷಲ್‌ ಪಯನೀಯರನಾಗಿ ಸೇವೆಮಾಡುವ ನೇಮಕವನ್ನು ನಾನು ಪಡೆದೆ. ನಾನು ಈ ನೇಮಕವನ್ನು ಸ್ವೀಕರಿಸಲು ನಿರ್ಧರಿಸಿದ್ದೇನೆ ಎಂದು ಅಪ್ಪನಿಗೆ ತಿಳಿಸಿದಾಗ, ಅವರು ಬಿಕ್ಕಿ ಬಿಕ್ಕಿ ಅತ್ತರು. ನಿಜವಾಗಿಯೂ ಯಾವುದು ಮೌಲ್ಯವುಳ್ಳದ್ದಾಗಿದೆ ಎಂಬುದರ ಕುರಿತಾದ ನನ್ನ ದೃಷ್ಟಿಕೋನವನ್ನು ಅವರು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿದ್ದರು. ನಾನು ಹಾಲಿವುಡ್‌ಗೆ ಹೋಗಿ, ನನ್ನ ಎಲ್ಲಾ ಕಾಂಟ್ರ್ಯಾಕ್ಟ್‌ಗಳನ್ನು ವಾಪಸ್‌ ತೆಗೆದುಕೊಂಡೆ. ನಾನು ಯಾರೊಂದಿಗೆ ಕಾಂಟ್ರ್ಯಾಕ್ಟ್‌ಗೆ ಸಹಿಹಾಕಿದ್ದೆನೋ ಅವರಲ್ಲಿ ಪ್ರಖ್ಯಾತ ಆರ್ಕೆಸ್ಟ್ರ ಮತ್ತು ಗಾಯಕವೃಂದದ ನಾಯಕರಾಗಿದ್ದ ಫ್ರೆಡ್‌ ವಾರಿಂಗ್‌ ಸಹ ಇದ್ದರು. ನಾನು ಮಾಡಿದ್ದಂಥ ಒಪ್ಪಂದವನ್ನು ನಾನು ಪೂರೈಸದಿರುವಲ್ಲಿ, ಒಬ್ಬ ಹಾಡುಗಾರನೋಪಾದಿ ನಾನು ಪುನಃ ಎಂದಿಗೂ ಕೆಲಸಮಾಡಲಾರೆನೆಂದು ಅವರು ಹೇಳಿದರು. ಆದುದರಿಂದ, ಯೆಹೋವ ದೇವರ ಸೇವೆಯಲ್ಲಿ ನನ್ನ ಶುಶ್ರೂಷೆಯನ್ನು ವಿಸ್ತರಿಸಲಿಕ್ಕಾಗಿ ನನ್ನ ಹಾಡಿನ ಜೀವನವೃತ್ತಿಯನ್ನು ಬಿಟ್ಟುಬಿಡುತ್ತಿದ್ದೇನೆ ಎಂದು ನಾನು ವಿವರಿಸಿದೆ.

ನಾನು ವಿವರವಾಗಿ ಮಾತಾಡಿದಾಗ ಶ್ರೀ. ವಾರಿಂಗ್‌ರವರು ಗೌರವಭಾವದಿಂದ ನನಗೆ ಕಿವಿಗೊಟ್ಟರು, ಮತ್ತು “ಮಗು, ನೀನು ಇಷ್ಟು ಒಳ್ಳೇ ಜೀವನವೃತ್ತಿಯನ್ನು ಬಿಟ್ಟುಬಿಡುತ್ತಿರುವುದರ ಕುರಿತು ನನಗೆ ವಿಷಾದವಿದೆ. ಆದರೆ ನನ್ನ ಜೀವಮಾನವೆಲ್ಲಾ ನಾನು ಸಂಗೀತದಲ್ಲೇ ಕಳೆದಿದ್ದೇನೆ ಮತ್ತು ಜೀವನದಲ್ಲಿ ಸಂಗೀತಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಇನ್ನೂ ಅನೇಕ ಸಂಗತಿಗಳಿವೆ ಎಂಬುದು ನನಗೆ ಮನವರಿಕೆಯಾಗಿದೆ. ನಿನ್ನ ಕೆಲಸವನ್ನು ದೇವರು ಆಶೀರ್ವದಿಸಲಿ” ಎಂಬ ಸೌಮ್ಯ ಉತ್ತರವನ್ನು ಕೊಡುವ ಮೂಲಕ ಅವರು ನನ್ನನ್ನು ವಿಸ್ಮಯಗೊಳಿಸಿದರು. ಯೆಹೋವನ ಸೇವೆಯಲ್ಲಿ ನನ್ನ ಜೀವಮಾನವನ್ನು ವ್ಯಯಿಸಲು ನಾನೀಗ ಸ್ವತಂತ್ರನಾಗಿದ್ದೇನೆ ಎಂಬ ಗ್ರಹಿಕೆಯಿಂದ ನಾನು ಆನಂದಾಶ್ರುಭರಿತನಾಗಿ ಮನೆಗೆ ಹಿಂದಿರುಗಿದ್ದು ನನಗೆ ಈಗಲೂ ನೆನಪಿದೆ.

“ನಿನ್ನ ನಂಬಿಕೆ ಎಲ್ಲಿ ಹೋಯಿತು?”

ನನ್ನ ಪಯನೀಯರ್‌ ಸಂಗಡಿಗನಾಗಿದ್ದ ಜೋ ಟ್ರಿಫ್‌ನೊಂದಿಗೆ ನಾನು ಲೋವದ ಸ್ಟ್ರೋಬರೀ ಪಾಯಿಂಟ್‌ನಲ್ಲಿ ಸೇವೆಮಾಡಲಾರಂಭಿಸಿದೆ. ಈ ಪಟ್ಟಣವು ಸುಮಾರು 1,200 ನಿವಾಸಿಗಳಿಂದ ತುಂಬಿತ್ತು. ಶರ್ಲಿ ನನ್ನನ್ನು ಭೇಟಿಯಾಗಲಿಕ್ಕಾಗಿ ಇಲ್ಲಿಗೆ ಬಂದಳು, ಮತ್ತು ನಾವು ಮದುವೆಯ ಕುರಿತು ಚರ್ಚಿಸಿದೆವು. ನನ್ನ ಬಳಿ ಯಾವುದೇ ಉಳಿತಾಯದ ಹಣವಿರಲಿಲ್ಲ, ಅವಳ ಹತ್ತಿರವೂ ಇರಲಿಲ್ಲ. ನಾನು ಸಂಪಾದಿಸಿದ್ದ ಹಣವೆಲ್ಲಾ ತಂದೆಯವರ ಕೈಯಲ್ಲಿತ್ತು. ಆದುದರಿಂದ ನಾನು ವಿವರಿಸಿದೆ: “ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆ, ಆದರೆ ನಾವು ಬದುಕನ್ನು ನಡೆಸುವುದು ಹೇಗೆ? ನನ್ನ ಬಳಿ ಇರುವುದು ಸ್ಪೆಷಲ್‌ ಪಯನೀಯರ್‌ ಭತ್ಯವಷ್ಟೆ, ಅಂದರೆ 40 ಡಾಲರುಗಳು ಮಾತ್ರ.” ಎಂದಿನಂಥ ಪ್ರಶಾಂತ, ಮುಚ್ಚುಮರೆಯಿಲ್ಲದ, ನೇರವಾದ ರೀತಿಯಲ್ಲಿ ಅವಳು ಹೇಳಿದ್ದು: “ಆದರೆ ಚಾರ್ಲ್ಸ್‌, ನಿನ್ನ ನಂಬಿಕೆ ಎಲ್ಲಿ ಹೋಯಿತು? ನಾವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುವಲ್ಲಿ, ಅವೆಲ್ಲವನ್ನೂ ನಮಗೆ ತಾನು ದೊರಕಿಸಿಕೊಡುವೆನು ಎಂದು ಯೇಸು ಹೇಳಿದನಲ್ಲಾ.” (ಮತ್ತಾಯ 6:33) ಇದು ನನ್ನ ಅನುಮಾನವನ್ನು ಬಗೆಹರಿಸಿತು. ಇಸವಿ 1957ರ ನವೆಂಬರ್‌ 16ರಂದು ನಾವು ಮದುವೆಯಾದೆವು.

ಸ್ಟ್ರೋಬರೀ ಪಾಯಿಂಟ್‌ನ ಹೊರಗೆ ಒಬ್ಬ ರೈತನೊಂದಿಗೆ ನಾನು ಒಂದು ಬೈಬಲ್‌ ಅಧ್ಯಯನ ನಡೆಸುತ್ತಿದ್ದೆ. ಕಾಡಿನಲ್ಲಿದ್ದ ಅವನ ಜಮೀನಿನಲ್ಲಿ ಮರದ ತೊಲೆಗಳಿಂದ ರಚಿಸಲ್ಪಟ್ಟ ಹನ್ನೆರಡು ಅಡಿ ಉದ್ದ ಮತ್ತು ಹನ್ನೆರಡು ಅಡಿ ಅಗಲದ ಒಂದು ಮನೆಯಿತ್ತು. ಅದರಲ್ಲಿ ವಿದ್ಯುಚ್ಛಕ್ತಿಯೂ ಇರಲಿಲ್ಲ, ನಲ್ಲಿನೀರಿನ ವ್ಯವಸ್ಥೆಯೂ ಇರಲಿಲ್ಲ ಮತ್ತು ಶೌಚಾಲಯವೂ ಇರಲಿಲ್ಲ. ಆದರೆ ನಮಗೆ ಇಷ್ಟವಿರುವಲ್ಲಿ ನಾವು ಅಲ್ಲಿ ಉಚಿತವಾಗಿ ಉಳಿದುಕೊಳ್ಳಸಾಧ್ಯವಿತ್ತು. ಅದು ತುಂಬ ಹಳೆಯ ಶೈಲಿಯದ್ದಾಗಿತ್ತು, ಆದರೆ ದಿನವೆಲ್ಲಾ ನಾವು ಶುಶ್ರೂಷೆಯಲ್ಲಿರುತ್ತೇವೆ ಮತ್ತು ಮಲಗಲು ಮಾತ್ರ ನಮಗೆ ಸ್ವಲ್ಪ ಜಾಗದ ಆವಶ್ಯಕತೆಯಿದೆ ಅಷ್ಟೆ ಎಂದು ನಾವು ನಿರ್ಧರಿಸಿದೆವು.

ನಾನು ಹತ್ತಿರದ ಚಿಲುಮೆಯಿಂದ ನೀರನ್ನು ತರುತ್ತಿದ್ದೆ. ಆ ಮರದ ಮನೆಯನ್ನು ಕಟ್ಟಿಗೆಯ ಒಲೆಯಿಂದ ಬೆಚ್ಚಗಿರಿಸುತ್ತಿದ್ದೆವು ಮತ್ತು ಸೀಮೆಎಣ್ಣೆ ದೀಪದಲ್ಲಿ ಓದುತ್ತಿದ್ದೆವು; ಶರ್ಲಿ ಸೀಮೆಎಣ್ಣೆ ಸ್ಟೌವ್‌ನಲ್ಲಿ ಅಡಿಗೆಮಾಡುತ್ತಿದ್ದಳು. ಸ್ನಾನಕ್ಕಾಗಿ ಬಟ್ಟೆ ಒಗೆಯುವ ಒಂದು ಹಳೆಯ ತೊಟ್ಟಿಯನ್ನು ನಾವು ಉಪಯೋಗಿಸುತ್ತಿದ್ದೆವು. ರಾತ್ರಿ ವೇಳೆಯಲ್ಲಿ ತೋಳಗಳ ಊಳಾಟವು ನಮ್ಮ ಕಿವಿಗೆ ಬೀಳುತ್ತಿತ್ತು. ಮತ್ತು ಪರಸ್ಪರ ಒಟ್ಟಿಗೆ ಇರುವುದಕ್ಕಾಗಿ ಮತ್ತು ಕ್ರೈಸ್ತ ಶುಶ್ರೂಷಕರ ಆವಶ್ಯಕತೆಯು ಹೆಚ್ಚಾಗಿರುವಂಥ ಸ್ಥಳದಲ್ಲಿ ಒಟ್ಟಿಗೆ ಯೆಹೋವನ ಸೇವೆಮಾಡಲು ಶಕ್ತರಾದುದಕ್ಕಾಗಿ ನಾವು ತುಂಬ ಸುಯೋಗಿತರು ಎಂಬ ಅನಿಸಿಕೆ ನಮಗಾಗುತ್ತಿತ್ತು. ಬ್ರೂಕ್ಲಿನ್‌ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಈಗ ಸೇವೆಮಾಡುತ್ತಿರುವ ಬಿಲ್‌ ಮ್ಯಾಲನ್‌ಫಾಂಟ್‌ ಮತ್ತು ಅವರ ಪತ್ನಿಯಾಗಿದ್ದ ಸ್ಯಾಂಡ್ರರು, 100 ಕಿಲೊಮೀಟರುಗಳಷ್ಟು ದೂರದಲ್ಲಿ, ಅಂದರೆ ಲೋವದ ಡೈಕೋರದಲ್ಲಿ ಆಗ ಸ್ಪೆಷಲ್‌ ಪಯನೀಯರರಾಗಿದ್ದರು. ಕೆಲವೊಮ್ಮೆ ಅವರು ನಮ್ಮಲ್ಲಿಗೆ ಬಂದು, ಕ್ಷೇತ್ರ ಸೇವೆಯಲ್ಲಿ ನಮ್ಮೊಂದಿಗೆ ಒಂದು ದಿನವನ್ನು ಕಳೆಯುತ್ತಿದ್ದರು. ಸಕಾಲದಲ್ಲಿ, ಸ್ಟ್ರೋಬರೀ ಪಾಯಿಂಟ್‌ನಲ್ಲಿ ಸುಮಾರು 25 ಮಂದಿಯಿಂದ ಕೂಡಿದ್ದ ಒಂದು ಚಿಕ್ಕ ಸಭೆಯು ರಚಿಸಲ್ಪಟ್ಟಿತು.

ಸಂಚರಣ ಕೆಲಸಕ್ಕೆ

ಇಸವಿ 1960ರ ಮೇ ತಿಂಗಳಿನಲ್ಲಿ, ಸರ್ಕಿಟ್‌ ಕೆಲಸವನ್ನು ಅಂದರೆ ಸಂಚರಣ ಶುಶ್ರೂಷೆಯನ್ನು ಆರಂಭಿಸುವಂತೆ ನಮ್ಮನ್ನು ಆಮಂತ್ರಿಸಲಾಯಿತು. ನಮ್ಮ ಪ್ರಥಮ ಸರ್ಕಿಟ್‌ ನಾರ್ತ್‌ ಕ್ಯಾರೊಲಿನದಲ್ಲಾಗಿತ್ತು, ಮತ್ತು ಅದರಲ್ಲಿ ರಾಲೇ, ಗ್ರೀನ್ಸ್‌ಬೊರೊ, ಮತ್ತು ಡ್ಯೂರ್‌ಹ್ಯಾಮ್‌ ಹಾಗೂ ಇನ್ನೂ ಅನೇಕ ಚಿಕ್ಕ ಗ್ರಾಮೀಣ ಪಟ್ಟಣಗಳು ಒಳಗೂಡಿದ್ದವು. ವಿದ್ಯುಚ್ಛಕ್ತಿ ಮತ್ತು ಕೆಲವು ಕಡೆ ಮನೆಯ ಒಳಗೇ ಶೌಚಾಲಯವು ಇದ್ದಂಥ ಅನೇಕ ಕುಟುಂಬಗಳೊಂದಿಗೆ ನಾವು ಉಳಿದುಕೊಳ್ಳುತ್ತಿದ್ದುದರಿಂದ, ನಮ್ಮ ಜೀವನ ಪರಿಸ್ಥಿತಿಗಳು ಉತ್ತಮಗೊಂಡವು. ಆದರೆ, ಮನೆಯ ಹೊರಗೆ ಶೌಚಾಲಯಗಳು ಇರುತ್ತಿದ್ದ ಕುಟುಂಬಗಳ ಸದಸ್ಯರಿಂದ ಕೊಡಲ್ಪಡುತ್ತಿದ್ದ ಎಚ್ಚರಿಕೆಗಳು ನೆಮ್ಮದಿಗೆಡಿಸುವಂಥವುಗಳಾಗಿದ್ದವು. ಹೊರಗಿನ ಶೌಚಾಲಯಗಳಿಗೆ ಹೋಗುವ ದಾರಿಯಲ್ಲಿರಬಹುದಾದ ಕಾಪರ್‌ಹೆಡ್‌ ಹಾವುಗಳು ಮತ್ತು ರ್ಯಾಟಲ್‌ಸ್ನೇಕ್‌ (ಗಿಲಿಕೆ ಹಾವು)ಗಳ ವಿಷಯದಲ್ಲಿ ಅವರು ನಮಗೆ ಎಚ್ಚರಿಕೆ ನೀಡಿದರು!

ಇಸವಿ 1963ರ ಆರಂಭದಲ್ಲಿ ನಾವು ಫ್ಲಾರಿಡದಲ್ಲಿರುವ ಸರ್ಕಿಟ್‌ವೊಂದಕ್ಕೆ ವರ್ಗಾಯಿಸಲ್ಪಟ್ಟೆವು. ಅಲ್ಲಿ ನನಗೆ ಗುರುತರವಾದ ಹೃದಯಾವರಣದ ಉರಿಯೂತವು ಉಂಟಾಯಿತು ಮತ್ತು ಇನ್ನೇನು ಸಾಯಲಿದ್ದೆ. ಟಾಂಪದ ಬಾಬ್‌ ಮತ್ತು ಜೆನೀ ಮಕೇಯವರಿಂದ ನಮಗೆ ಸಹಾಯವು ದೊರಕದಿರುತ್ತಿದ್ದಲ್ಲಿ, ನಾನು ಸಾಯುತ್ತಿದ್ದೆನೋ ಏನೊ. * ಅವರು ನನ್ನನ್ನು ತಮ್ಮ ವೈದ್ಯರ ಬಳಿಗೆ ಕರೆದೊಯ್ದರು ಮತ್ತು ಎಲ್ಲಾ ಖರ್ಚುವೆಚ್ಚಗಳನ್ನು ಸಹ ಅವರೇ ನೋಡಿಕೊಂಡರು.

ನನ್ನ ಆರಂಭದ ತರಬೇತಿಯು ಉಪಯೋಗಿಸಲ್ಪಟ್ಟದ್ದು

ಇಸವಿ 1963ರ ಬೇಸಗೆ ಕಾಲದಲ್ಲಿ, ನ್ಯೂ ಯಾರ್ಕ್‌ನಲ್ಲಿ ನಡೆಯಲಿದ್ದ ಯೆಹೋವನ ಸಾಕ್ಷಿಗಳ ಒಂದು ದೊಡ್ಡ ಅಧಿವೇಶನಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಲಿಕ್ಕಾಗಿ ನನಗೆ ಕರೆಬಂತು. ಲ್ಯಾರೀ ಕಿಂಗ್‌ರಿಂದ ನಡೆಸಲ್ಪಟ್ಟ ರೇಡಿಯೋ ಚರ್ಚಾಗೋಷ್ಠಿಯೊಂದಕ್ಕೆ ಯೆಹೋವನ ಸಾಕ್ಷಿಗಳ ಪ್ರತಿನಿಧಿಯಾಗಿ ಹೋಗಿದ್ದ ಮಿಲ್ಟನ್‌ ಹೆನ್ಶೆಲ್‌ರವರ ಜೊತೆ ನಾನೂ ಹೋದೆ. ಶ್ರೀ. ಕಿಂಗ್‌ ಅವರು ಈಗಲೂ ಟೆಲಿವಿಷನ್‌ ಚರ್ಚಾಗೋಷ್ಠಿ ಪ್ರದರ್ಶನದಲ್ಲಿ ತುಂಬ ಅಗ್ರಗಣ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಅವರು ತುಂಬ ಗೌರವಭಾವದಿಂದ ನಡೆದುಕೊಂಡರು ಮತ್ತು ಟಿವಿ ಪ್ರದರ್ಶನದ ಬಳಿಕ ಸುಮಾರು ಒಂದು ತಾಸಿನ ವರೆಗೆ ನಮ್ಮ ಕೆಲಸದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದರು.

ಅದೇ ಬೇಸಗೆಯಲ್ಲಿ, ಕಮ್ಯೂನಿಸ್ಟ್‌ ಚೈನಾದಲ್ಲಿನ ಸೆರೆಮನೆಯಿಂದ ಆಗಷ್ಟೇ ಬಿಡುಗಡೆಪಡೆದ ಮಿಷನೆರಿಯಾಗಿದ್ದ ಹೆರಲ್ಡ್‌ ಕಿಂಗ್‌ ಅವರು ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದರು. ಒಂದು ದಿನ ಸಾಯಂಕಾಲ ಅವರು ಸುಮಾರು 700 ಮಂದಿ ಸಭಿಕರನ್ನು ಸಂಬೋಧಿಸಿ ಮಾತಾಡಿದರು. ತಮ್ಮ ಅನುಭವಗಳಲ್ಲಿ ಕೆಲವನ್ನು ತಿಳಿಸಿದರು ಮತ್ತು ನಾಲ್ಕು ವರ್ಷಗಳಿಗಿಂತಲೂ ಹೆಚ್ಚಿನ ಕಾಲಾವಧಿಯ ವರೆಗೆ ಏಕಾಂತ ಸೆರೆವಾಸದಲ್ಲಿ ಅವರು ಹೇಗೆ ತಮ್ಮ ನಂಬಿಕೆಯನ್ನು ಬಲಪಡಿಸಿಕೊಂಡಿದ್ದರು ಎಂಬುದನ್ನು ವಿವರಿಸಿದರು. ಸೆರೆಮನೆಯಲ್ಲಿದ್ದಾಗ ಅವರು ಬೈಬಲಿಗೆ ಮತ್ತು ಕ್ರೈಸ್ತ ಶುಶ್ರೂಷೆಗೆ ಸಂಬಂಧಿಸಿದ ಮುಖ್ಯವಿಷಯಗಳಿದ್ದ ಗೀತೆಗಳನ್ನು ಬರೆದಿದ್ದರು.

ಆ ಸ್ಮರಣೀಯ ಸಂಜೆಯಂದು, ಓಡ್ರೀ ನಾರ್‌, ಕಾರ್ಲ್‌ ಕ್ಲೈನ್‌, ಮತ್ತು ಫ್ರೆಡ್‌ ಫ್ರಾನ್ಸ್‌ರೊಂದಿಗೆ​—⁠ಇವರು ದೀರ್ಘಕಾಲದ ಒಬ್ಬ ಸಾಕ್ಷಿಯಾಗಿದ್ದು, ತಾರಸ್ವರ (ಟೆನರ್‌)ದಲ್ಲಿ ಹಾಡುವ ತರಬೇತಿಯನ್ನು ಪಡೆದವರಾಗಿದ್ದರು​—⁠“ಮನೆಮನೆಯಲ್ಲಿ” ಎಂಬ ಗೀತೆಯನ್ನು ಹಾಡುವುದರಲ್ಲಿ ನಾನು ದನಿಗೂಡಿಸಿದೆ. ಸಮಯಾನಂತರ ಈ ಗೀತೆಯು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಗೀತೆಪುಸ್ತಕದಲ್ಲಿ ಸೇರಿಸಲ್ಪಟ್ಟಿತು. ಆ ಸಮಯದಲ್ಲಿ ಸಾಕ್ಷಿಗಳ ಕೆಲಸದಲ್ಲಿ ಮುಂದಾಳುತ್ವವನ್ನು ವಹಿಸುತ್ತಿದ್ದ ನೇಥನ್‌ ನಾರ್‌ ಅವರು, ಮರುವಾರ ಯಾಂಕೀ ಸ್ಟೇಡಿಯಮ್‌ನಲ್ಲಿ ನಡೆದ “ನಿತ್ಯ ಶುಭವರ್ತಮಾನ” ಸಮ್ಮೇಳನದಲ್ಲಿ ಈ ಗೀತೆಯನ್ನು ಹಾಡುವಂತೆ ನನ್ನನ್ನು ಕೇಳಿಕೊಂಡರು, ಮತ್ತು ನಾನು ಹಾಡಿದೆ.

ಸಂಚರಣ ಕೆಲಸದಲ್ಲಾದ ಅನುಭವಗಳು

ನಾವು ಇಲಿನೊಯಿಯ ಶಿಕಾಗೋದಲ್ಲಿ ಸೇವೆಮಾಡುತ್ತಿದ್ದಾಗ, ಎರಡು ಸ್ಮರಣಾರ್ಹ ವಿಷಯಗಳು ಸಂಭವಿಸಿದವು. ಮೊದಲನೆಯದಾಗಿ, ಸರ್ಕಿಟ್‌ ಸಮ್ಮೇಳನವೊಂದರಲ್ಲಿ, ಶರ್ಲಿಯು ವಿರ ಸ್ಟಿವರ್ಟ್‌ರನ್ನು ಕಂಡಳು; ಕೆನಡದಲ್ಲಿ 1940ಗಳ ಮಧ್ಯಭಾಗದಲ್ಲಿ ಇವರು ಶರ್ಲಿಗೆ ಮತ್ತು ಅವಳ ತಾಯಿಗೆ ಸಾಕ್ಷಿನೀಡಿದ್ದರು. ಆ ಸಮಯದಲ್ಲಿ 11 ವರ್ಷದವಳಾಗಿದ್ದ ಶರ್ಲಿ, ಬೈಬಲಿನಲ್ಲಿರುವ ದೇವರ ವಾಗ್ದಾನಗಳ ಕುರಿತು ಕೇಳಿಸಿಕೊಂಡು ತುಂಬ ಪುಳಕಗೊಂಡಿದ್ದಳು. ಆಗ ಅವಳು ವಿರ ಅವರಿಗೆ, “ಆ ಹೊಸ ಲೋಕದಲ್ಲಿ ನಾನು ಜೀವಿಸಬಲ್ಲೆ ಎಂದು ನೆನಸುತ್ತೀರಾ?” ಎಂದು ಕೇಳಿದಳು. “ಏಕಿಲ್ಲ, ಖಂಡಿತವಾಗಿಯೂ ಜೀವಿಸಬಲ್ಲೆ ಶರ್ಲಿ” ಎಂದು ವಿರ ಉತ್ತರಿಸಿದರು. ಇವರಿಬ್ಬರೂ ಆ ನಿರ್ದಿಷ್ಟ ಮಾತುಗಳನ್ನು ಮರೆತಿರಲಿಲ್ಲ. ವಿರ ಅವರೊಂದಿಗೆ ಆದ ಆ ಪ್ರಥಮ ಭೇಟಿಯಿಂದಲೇ, ತನ್ನ ಗುರಿ ಯೆಹೋವನ ಸೇವೆಯೇ ಎಂದು ಶರ್ಲಿ ನಿಶ್ಚಯಿಸಿದ್ದಳು.

ಎರಡನೆಯದಾಗಿ, 1958ರ ಚಳಿಗಾಲದಲ್ಲಿ ನಮ್ಮ ಮನೆಯ ದ್ವಾರಮಂಟಪದಲ್ಲಿ 25 ಕೆಜಿ ತೂಕದ ಆಲೂಗೆಡ್ಡೆಯ ಮೂಟೆಯನ್ನು ಕಂಡುಕೊಂಡದ್ದು ನೆನಪಿದೆಯೋ ಎಂದು ಸಾಕ್ಷಿಯೊಬ್ಬನು ನನ್ನನ್ನು ಕೇಳಿದನು. ನನಗೆ ನೆನಪಿತ್ತು. ಒಂದು ದಿನ ಸಂಜೆ ಮಂಜುಬಿರುಗಾಳಿಯಲ್ಲಿ ಕಷ್ಟಪಟ್ಟು ಮನೆ ತಲಪಿದಾಗ ಇದು ನಮ್ಮ ಕಣ್ಣಿಗೆ ಬಿತ್ತು! ಇದು ಎಲ್ಲಿಂದ ಬಂತು ಎಂಬುದು ನಮಗೆ ಗೊತ್ತಿರಲಿಲ್ಲವಾದರೂ, ಈ ಒದಗಿಸುವಿಕೆಗಾಗಿ ನಾವು ಯೆಹೋವನಿಗೆ ಉಪಕಾರ ಸಲ್ಲಿಸಿದೆವು. ಭಾರಿ ಹಿಮವು ಬೀಳುತ್ತಿದ್ದ ಕಾರಣ ಐದು ದಿನಗಳ ವರೆಗೆ ನಾವು ಮನೆಯಲ್ಲೇ ಬಂಧಿತರಾಗಿದ್ದೆವು, ಆದರೆ ಆಲೂಗೆಡ್ಡೆಯ ಪ್ಯಾನ್‌ಕೇಕ್‌ಗಳು, ಬೇಕ್‌ಮಾಡಿದ ಆಲೂಗೆಡ್ಡೆ, ಹುರಿದ ಆಲೂಗೆಡ್ಡೆ, ಬಜ್ಜಿಮಾಡಲ್ಪಟ್ಟ ಆಲೂಗೆಡ್ಡೆ, ಮತ್ತು ಆಲೂಗೆಡ್ಡೆಯ ಸೂಪನ್ನು ಸವಿದೆವು! ನಮಗೆ ಬೇರೆ ಯಾವ ಆಹಾರವೂ ಇರಲಿಲ್ಲ. ನಾವು ಯಾರು ಅಥವಾ ಎಲ್ಲಿ ವಾಸಿಸುತ್ತಿದ್ದೇವೆ ಎಂಬುದು ಆ ಸಾಕ್ಷಿಗೆ ಗೊತ್ತಿರಲಿಲ್ಲವಾದರೂ, ಸಮೀಪದಲ್ಲೇ ವಾಸಿಸುತ್ತಿರುವ ಪಯನೀಯರರು ಕಷ್ಟದಲ್ಲಿ ಜೀವಿಸುತ್ತಿದ್ದಾರೆ ಎಂಬುದನ್ನು ಅವನು ಕೇಳಿಸಿಕೊಂಡಿದ್ದನಂತೆ. ಯಾವುದೋ ಕಾರಣವು ಅವನನ್ನು ಈ ಯುವ ದಂಪತಿ ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ವಿಚಾರಿಸಿ ತಿಳಿದುಕೊಳ್ಳುವಂತೆ ಪ್ರಚೋದಿಸಿತು ಎಂದು ಅವನು ಹೇಳಿದನು. ಸಾಮಾನ್ಯವಾಗಿ ರೈತರಿಗೆ ತಮ್ಮ ನೆರೆಹೊರೆಯಲ್ಲಿರುವ ಜನರ ಕುರಿತು ಎಲ್ಲಾ ವಿಷಯವು ತಿಳಿದಿರುತ್ತದೆ, ಆದುದರಿಂದಲೇ ಅವರು ಅವನಿಗೆ ನಮ್ಮ ಮನೆಯ ದಾರಿ ತೋರಿಸಿದರು ಮತ್ತು ಅವನು ಮಂಜಿನ ಮಧ್ಯೆಯೇ ಆಲೂಗೆಡ್ಡೆಯನ್ನು ಹೊತ್ತುತಂದಿದ್ದನು.

ನಾನು ಮಾಡಿರುವ ಆಯ್ಕೆಗಳಿಗಾಗಿ ಆಭಾರಿ

ಇಸವಿ 1993ರಲ್ಲಿ, ಸಂಚರಣ ಕೆಲಸದಲ್ಲಿ 33 ವರ್ಷಗಳನ್ನು ಕಳೆದ ಬಳಿಕ, ನನ್ನ ಆರೋಗ್ಯವು ಎಷ್ಟರ ಮಟ್ಟಿಗೆ ಹದಗೆಟ್ಟಿತ್ತೆಂದರೆ, ನಾನು ಆ ಸೇವಾ ಸುಯೋಗವನ್ನು ಬಿಟ್ಟುಬಿಡಬೇಕಾಯಿತು. ತದನಂತರ ಶರ್ಲಿ ಮತ್ತು ನಾನು ಅಶಕ್ತ ಸ್ಪೆಷಲ್‌ ಪಯನೀಯರರಾದೆವು. ಇವತ್ತಿನ ತನಕ ನಾವು ಹೀಗೆಯೇ ಮುಂದುವರಿಯುತ್ತಿದ್ದೇವೆ. ಈಗ ನನಗೆ ಸಂಚರಣ ಕೆಲಸವನ್ನು ಮಾಡುವ ಶಕ್ತಿ ಇಲ್ಲವಲ್ಲಾ ಎಂದು ವಿಷಾದಿಸುತ್ತೇನಾದರೂ, ಪೂರ್ಣ ಸಮಯದಲ್ಲಿ ಇಷ್ಟರ ತನಕ ನನ್ನ ಶಕ್ತಿಯನ್ನು ವ್ಯಯಿಸಿರುವುದಕ್ಕಾಗಿ ತುಂಬ ಸಂತೋಷಿತನಾಗಿದ್ದೇನೆ.

ನನ್ನ ಮೂವರು ತಮ್ಮಂದಿರು ಬೇರೆ ಬೇರೆ ಆಯ್ಕೆಗಳನ್ನು ಮಾಡಿದರು. ಅವರಲ್ಲಿ ಪ್ರತಿಯೊಬ್ಬರೂ ಕಾಲಕ್ರಮೇಣ ಪ್ರಾಪಂಚಿಕ ಐಶ್ವರ್ಯವನ್ನು ಬೆನ್ನಟ್ಟಲು ನಿರ್ಧರಿಸಿದರು, ಮತ್ತು ಪ್ರಸ್ತುತ ಅವರಲ್ಲಿ ಯಾರೂ ಯೆಹೋವನ ಸೇವೆಮಾಡುತ್ತಿಲ್ಲ. ಇಸವಿ 1958ರಲ್ಲಿ ಅಪ್ಪ ದೀಕ್ಷಾಸ್ನಾನ ಪಡೆದುಕೊಂಡರು. ಅವರು ಮತ್ತು ತಾಯಿಯವರು ಯೆಹೋವನ ಕುರಿತು ತಿಳಿದುಕೊಳ್ಳುವಂತೆ, ತಮ್ಮ ಜೀವಿತಗಳನ್ನು ಆತನಿಗೆ ಸಮರ್ಪಿಸಿಕೊಳ್ಳುವಂತೆ, ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಅನೇಕ ಮಂದಿಗೆ ಸಹಾಯಮಾಡಿದರು. ಇಸವಿ 1999ರಲ್ಲಿ ಇಬ್ಬರೂ ತೀರಿಕೊಂಡರು. ಹೀಗೆ, ಲೌಕಿಕ ಕೀರ್ತಿ ಮತ್ತು ಐಶ್ವರ್ಯವನ್ನು ತ್ಯಜಿಸಲು ನಾನು ಮಾಡಿದ ನಿರ್ಧಾರವು, ನನ್ನ ತಂದೆಯವರಿಗೆ, ಮತ್ತು ನನ್ನ ತಾಯಿಯವರು ಹಾಗೂ ತಂದೆಯವರು ಬೈಬಲ್‌ ಸತ್ಯವನ್ನು ಎಷ್ಟು ಜನರೊಂದಿಗೆ ಹಂಚಿಕೊಂಡರೋ ಅವರೆಲ್ಲರಿಗೆ ನಿತ್ಯಜೀವದ ನಿರೀಕ್ಷೆಯನ್ನು ತಂದುಕೊಟ್ಟಿತು. ‘ಒಂದುವೇಳೆ ನಾನು ಮಾಡಿರುವಂಥ ಆಯ್ಕೆಗಳನ್ನು ಮಾಡದೇ ಇರುತ್ತಿದ್ದಲ್ಲಿ, ಹೀಗೆ ಯೆಹೋವನ ಸೇವೆಮಾಡುತ್ತಾ ಮುಂದುವರಿಯುತ್ತಿದ್ದೆನೊ?’ ಎಂದು ನಾನು ಅನೇಕವೇಳೆ ಆಲೋಚಿಸುತ್ತೇನೆ.

ಸರ್ಕಿಟ್‌ ಕೆಲಸವನ್ನು ಬಿಟ್ಟು ಸುಮಾರು ಐದು ವರ್ಷಗಳು ಕಳೆದ ಬಳಿಕ ನನ್ನ ಆರೋಗ್ಯವು ಸುಧಾರಿಸಿತು, ಮತ್ತು ನನ್ನ ಶುಶ್ರೂಷೆಯನ್ನು ವಿಸ್ತರಿಸಲು ಶಕ್ತನಾದೆ. ಈಗ ನಾನು ಕ್ಯಾಲಿಫೋರ್ನಿಯದ ಡೆಸರ್ಟ್‌ ಹಾಟ್‌ ಸ್ಪ್ರಿಂಗ್ಸ್‌ ಎಂಬಲ್ಲಿರುವ ಸಭೆಯೊಂದರಲ್ಲಿ ಅಧ್ಯಕ್ಷ ಮೇಲ್ವಿಚಾರಕನಾಗಿ ಸೇವೆಮಾಡುತ್ತಿದ್ದೇನೆ. ಸರ್ಕಿಟ್‌ ಕೆಲಸದಲ್ಲಿ ಬದಲಿ ಮೇಲ್ವಿಚಾರಕನಾಗಿ ಸೇವೆಮಾಡುವ, ನ್ಯಾಯನಿರ್ಣಾಯಕ ಕಮಿಟಿಗಳಲ್ಲಿ ಒಳಗೂಡುವ, ಮತ್ತು ಕೆಲವೊಮ್ಮೆ ‘ಪಯನೀಯರ್‌ ಸೇವಾ ಶಾಲೆ’ಯಲ್ಲಿ ಬೋಧಿಸುವ ಸುಯೋಗವೂ ನನಗಿದೆ.

ಇವತ್ತಿನ ತನಕ ಶರ್ಲಿ ನನ್ನ ಆಪ್ತ ಸ್ನೇಹಿತೆಯಾಗಿಯೇ ಉಳಿದಿದ್ದಾಳೆ. ನಾನು ಅವಳ ಸಹವಾಸದಲ್ಲಿ ತುಂಬ ಆನಂದಿಸುತ್ತೇನೆ. ನಾವು ಕ್ರಮವಾಗಿ ಆಧ್ಯಾತ್ಮಿಕವಾಗಿ ಪ್ರಚೋದನದಾಯಕ ಸಂಭಾಷಣೆಗಳನ್ನು ನಡೆಸುತ್ತೇವೆ; ನಾವಿಬ್ಬರೂ ಒಟ್ಟುಗೂಡಿ ಚರ್ಚಿಸುವ ಬೈಬಲ್‌ ಸತ್ಯಗಳ ಬಗ್ಗೆ ತುಂಬ ಸಂಭ್ರಮಪಡುತ್ತೇವೆ. ಸುಮಾರು 47 ವರ್ಷಗಳ ಹಿಂದೆ, “ಆದರೆ ಚಾರ್ಲ್ಸ್‌, ನಿನ್ನ ನಂಬಿಕೆ ಎಲ್ಲಿ ಹೋಯಿತು?” ಎಂದು ಅವಳು ಶಾಂತಭಾವದಿಂದ ಕೇಳಿದ ರೀತಿಗೆ ನಾನು ಈಗಲೂ ಕೃತಜ್ಞನಾಗಿದ್ದೇನೆ. ಯುವ ಕ್ರೈಸ್ತ ದಂಪತಿಗಳು, ಪರಸ್ಪರ ಇಂಥ ಪ್ರಶ್ನೆಯನ್ನು ಕೇಳುವಲ್ಲಿ, ಅವರಲ್ಲಿ ಎಷ್ಟೊ ಮಂದಿ ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಾವು ಪಡೆದುಕೊಂಡಿರುವ ಸಂತೋಷ ಹಾಗೂ ಆಶೀರ್ವಾದಗಳನ್ನೇ ಪಡೆದುಕೊಳ್ಳಬಹುದಲ್ಲಾ ಎಂದು ನಾನು ಆಲೋಚಿಸುತ್ತಿರುತ್ತೇನೆ. (g04 8/22)

[ಪಾದಟಿಪ್ಪಣಿಗಳು]

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶನಮಾಡಲ್ಪಟ್ಟಿದ್ದರೂ ಈಗ ಮುದ್ರಿಸಲ್ಪಡುತ್ತಿಲ್ಲ.

^ ಜಾನ್‌ ಸಿನಟ್ಕೋ ಅವರು 1996ರಲ್ಲಿ ಅಂದರೆ ತಮ್ಮ 92ರ ಪ್ರಾಯದಲ್ಲಿ ಮರಣಪಡುವ ತನಕ ಯೆಹೋವನ ನಂಬಿಗಸ್ತ ಸಾಕ್ಷಿಯಾಗಿ ಉಳಿದಿದ್ದರು.

^ ಫೆಬ್ರವರಿ 22, 1975ರ ಎಚ್ಚರ! (ಇಂಗ್ಲಿಷ್‌) ಸಂಚಿಕೆಯ 12-16ನೇ ಪುಟಗಳಲ್ಲಿ, ಬಾಬ್‌ ಮಕೇಯವರು ಪಾರ್ಶ್ವವಾಯುವಿನೊಂದಿಗಿನ ಅವರ ಹೋರಾಟದ ಕುರಿತಾದ ವೈಯಕ್ತಿಕ ಕಥೆಯು ಕೊಡಲ್ಪಟ್ಟಿದೆ.

[ಪುಟ 20ರಲ್ಲಿರುವ ಚಿತ್ರ]

ದೊಡ್ಡಪ್ಪ ಜಾನ್‌ ದೀಕ್ಷಾಸ್ನಾನ ಪಡೆದುಕೊಂಡ ವರುಷ, 1935ರಲ್ಲಿ

[ಪುಟ 22ರಲ್ಲಿರುವ ಚಿತ್ರ]

ನಮ್ಮ ಮರದ ಮನೆ

[ಪುಟ 23ರಲ್ಲಿರುವ ಚಿತ್ರ]

ತಮ್ಮ ಮರಣಪರ್ಯಂತ ನಂಬಿಗಸ್ತರಾಗಿ ಉಳಿದ ನನ್ನ ಹೆತ್ತವರು 1975ರಲ್ಲಿ ತೆಗೆಸಿಕೊಂಡ ಚಿತ್ರ

[ಪುಟ 23ರಲ್ಲಿರುವ ಚಿತ್ರ]

ಇಂದು ಶರ್ಲಿಯೊಂದಿಗೆ