ರೋಗದ ವಿರುದ್ಧವಾದ ಹೋರಾಟದಲ್ಲಿ ಜಯಾಪಜಯಗಳು
ರೋಗದ ವಿರುದ್ಧವಾದ ಹೋರಾಟದಲ್ಲಿ ಜಯಾಪಜಯಗಳು
ಇಸವಿ 1942ರ ಆಗಸ್ಟ್ 5ರಂದು ಡಾ. ಅಲೆಕ್ಸಾಂಡರ್ ಫ್ಲೆಮಿಂಗ್‌ರವರಿಗೆ, ತಮ್ಮ ರೋಗಿಗಳಲ್ಲಿ ಒಬ್ಬನಾಗಿದ್ದ ಸ್ನೇಹಿತನೊಬ್ಬನು ಸಾವಿನ ಅಂಚಿನಲ್ಲಿದ್ದಾನೆ ಎಂಬುದು ಮನವರಿಕೆಯಾಯಿತು. ಈ 52 ವರ್ಷ ಪ್ರಾಯದ ಪುರುಷನು ಮಿದುಳುಬಳ್ಳಿಯ ಉರಿಯೂತ (ಮೆನಿಂಜೈಟಿಸ್)ದಿಂದ ಅಸ್ವಸ್ಥನಾಗಿದ್ದನು, ಮತ್ತು ಫ್ಲೆಮಿಂಗ್‌ರವರು ಸಕಲ ಪ್ರಯತ್ನಗಳನ್ನು ಮಾಡಿದರೂ ಆ ಸ್ನೇಹಿತನು ಗಾಢ ವಿಸ್ಮೃತಿಯ (ಕೋಮ) ಸ್ಥಿತಿಯನ್ನು ತಲಪಿದ್ದನು.
ಹದಿನೈದು ವರ್ಷಗಳಿಗೆ ಮೊದಲು, ಫ್ಲೆಮಿಂಗ್‌ರವರು ನೀಲಹಸುರು ಬಣ್ಣದ ಬೂಷ್ಟಿನಿಂದ ಉತ್ಪಾದಿಸಲ್ಪಟ್ಟ ಒಂದು ಅಸಾಧಾರಣ ಪದಾರ್ಥವನ್ನು ಆಕಸ್ಮಿಕವಾಗಿ ಕಂಡುಹಿಡಿದರು. ಅದಕ್ಕೆ ಅವರು ಪೆನ್ಸಿಲಿನ್ ಎಂದು ಹೆಸರಿಟ್ಟರು. ಅದಕ್ಕೆ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಶಕ್ತಿಯಿತ್ತು ಎಂಬುದನ್ನು ಅವರು ಗಮನಿಸಿದರು; ಆದರೆ ಅವರು ಶುದ್ಧ ಪೆನ್ಸಿಲಿನನ್ನು ಮಾತ್ರವೇ ಪ್ರತ್ಯೇಕಿಸಲು ಅಸಮರ್ಥರಾದ ಕಾರಣ, ಅವರದನ್ನು ಕೇವಲ ಒಂದು ಆ್ಯಂಟಿಸೆಪ್ಟಿಕ್ ಆಗಿ ಮಾತ್ರವೇ ಬಳಸಿ, ಪರೀಕ್ಷಿಸಿದರು. ಆದರೂ, 1938ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿದ್ದ ಹೋವರ್ಡ್ ಫ್ಲೋರೀ ಮತ್ತು ಅವನ ಸಂಶೋಧನಾ ತಂಡವು, ಮಾನವರ ಮೇಲೆ ಪ್ರಯೋಗಿಸಿ ನೋಡಲಿಕ್ಕಾಗಿ ಸಾಕಷ್ಟು ಪ್ರಮಾಣದ ಪೆನ್ಸಿಲಿನನ್ನು ಉತ್ಪಾದಿಸಲು ಪ್ರಯತ್ನಿಸುವ ಸವಾಲನ್ನು ಸ್ವೀಕರಿಸಿತು. ಫ್ಲೆಮಿಂಗ್‌ರವರು ಫ್ಲೋರೀಗೆ ಫೋನ್‌ಮಾಡಿದಾಗ, ಅವನ ಬಳಿ ಲಭ್ಯವಿದ್ದ ಎಲ್ಲಾ ಪೆನ್ಸಿಲಿನನ್ನು ಕಳುಹಿಸಿಕೊಡಲು ಅವನು ಸಿದ್ಧನಾದನು. ಇದು ಫ್ಲೆಮಿಂಗ್‌ರವರು ತಮ್ಮ ಸ್ನೇಹಿತನನ್ನು ಉಳಿಸಿಕೊಳ್ಳುವ ಕೊನೆಯ ಅವಕಾಶವಾಗಿತ್ತು.
ಪೆನ್ಸಿಲಿನನ್ನು ಚುಚ್ಚುಮದ್ದಿನ ಮೂಲಕ ಸ್ನಾಯುವಿನೊಳಗೆ ಸೇರಿಸಿದಾಗ ಅದು ಸಾಕಾಗದಂತೆ ಕಂಡುಬಂದದ್ದರಿಂದ, ಫ್ಲೆಮಿಂಗ್‌ರವರು ಅದನ್ನು ತಮ್ಮ ಸ್ನೇಹಿತರ ಮಿದುಳುಬಳ್ಳಿಗೇ ನೇರವಾಗಿ ಚುಚ್ಚಿದರು. ಆ ಪೆನ್ಸಿಲಿನ್ ಸೂಕ್ಷ್ಮಜೀವಿಗಳನ್ನು ನಾಶಮಾಡಿಬಿಟ್ಟಿತು; ಮತ್ತು ಒಂದು ವಾರಕ್ಕಿಂತ ಸ್ವಲ್ಪ ಹೆಚ್ಚು ಸಮಯದೊಳಗೆ ಫ್ಲೆಮಿಂಗ್‌ರ ರೋಗಿಯು ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಹಿಂದಿರುಗಿದನು. ಆ್ಯಂಟಿಬೈಆಟಿಕ್‌ಗಳ ಯುಗವು ಆರಂಭವಾಗಿತ್ತು ಮತ್ತು ರೋಗದ ವಿರುದ್ಧವಾದ ಮಾನವಕುಲದ ಹೋರಾಟದಲ್ಲಿ ಒಂದು ಹೊಸ ಮೈಲುಗಲ್ಲನ್ನು ತಲಪಲಾಗಿತ್ತು.
ಆ್ಯಂಟಿಬೈಆಟಿಕ್‌ಗಳ ಯುಗ
ಆ್ಯಂಟಿಬೈಆಟಿಕ್‌ಗಳು ಮೊದಲ ಬಾರಿಗೆ ಉಪಯೋಗಕ್ಕೆ ಬರತೊಡಗಿದಾಗ, ಅವು ಚಮತ್ಕಾರದ ಔಷಧದೋಪಾದಿ ಕಂಡುಬಂದವು. ಈ ಮುಂಚೆ ಗುಣಪಡಿಸಲು ಅಸಾಧ್ಯವಾಗಿ ತೋರಿದ, ಬ್ಯಾಕ್ಟೀರಿಯ, ಶಿಲೀಂಧ್ರ, ಅಥವಾ ಇತರ ಸೂಕ್ಷ್ಮಜೀವಾಣುಗಳಿಂದ ಉಂಟುಮಾಡಲ್ಪಟ್ಟ ಸೋಂಕು ರೋಗಗಳನ್ನು ಈಗ ಯಶಸ್ವಿಕರವಾಗಿ ಗುಣಪಡಿಸಸಾಧ್ಯವಾಯಿತು. ಹೊಸ ಔಷಧಗಳ ಪರಿಣಾಮವಾಗಿ, ಮೆನಿಂಜೈಟಿಸ್, ನ್ಯುಮೋನಿಯ, ಮತ್ತು ಕೆಂಜ್ವರಗಳಿಂದ ಉಂಟಾಗುವ ಮರಣಗಳು ಬಹಳಷ್ಟು ಕಡಿಮೆಯಾದವು. ಒಬ್ಬ ವ್ಯಕ್ತಿಯು ಆಸ್ಪತ್ರೆಯಲ್ಲಿರುವಾಗ ಅಂಟಿಸಿಕೊಳ್ಳುತ್ತಿದ್ದು, ಈ ಮುಂಚೆ ತುಂಬ ಮಾರಕವಾಗಿರುತ್ತಿದ್ದ ಸೋಂಕು ರೋಗಗಳು ಈಗ ಕೆಲವೇ ದಿನಗಳಲ್ಲಿ ಗುಣವಾಗುತ್ತಿದ್ದವು.
ಫ್ಲೆಮಿಂಗ್‌ರ ಕಾಲದಿಂದಲೂ ಸಂಶೋಧಕರು ಇನ್ನೂ ಅನೇಕಾನೇಕ ಆ್ಯಂಟಿಬೈಆಟಿಕ್‌ಗಳನ್ನು ಉತ್ಪಾದಿಸಿದ್ದಾರೆ, ಮತ್ತು ಹೊಸ ಹೊಸ ರೀತಿಯ ಆ್ಯಂಟಿಬೈಆಟಿಕ್‌ಗಳಿಗಾಗಿ ಇನ್ನೂ ಅನ್ವೇಷಣೆಯು ಮುಂದುವರಿಯುತ್ತಾ ಇದೆ. ಕಳೆದ 60 ವರ್ಷಗಳಲ್ಲಿ, ರೋಗದ ವಿರುದ್ಧವಾದ ಹೋರಾಟದಲ್ಲಿ ಆ್ಯಂಟಿಬೈಆಟಿಕ್‌ಗಳು ಅತ್ಯಗತ್ಯವಾದ ಆಯುಧವಾಗಿ ಪರಿಣಮಿಸಿವೆ. ಜಾರ್ಜ್ ವಾಷಿಂಗ್ಟನ್ ಇಂದು ಬದುಕಿರುತ್ತಿದ್ದಲ್ಲಿ, ಖಂಡಿತವಾಗಿಯೂ ವೈದ್ಯರು ಅವನ ಗಂಟಲು ನೋವಿಗಾಗಿ ಆ್ಯಂಟಿಬೈಆಟಿಕ್ಸ್ ಚಿಕಿತ್ಸೆ ನೀಡುತ್ತಿದ್ದರು ಮತ್ತು ಅವನು ಬಹುಶಃ ಒಂದು ವಾರದಲ್ಲೇ ಚೇತರಿಸಿಕೊಳ್ಳುತ್ತಿದ್ದನು. ಒಂದಲ್ಲ ಒಂದು ಸೋಂಕು ರೋಗವನ್ನು ತಡೆಗಟ್ಟುವುದರಲ್ಲಿ ಆ್ಯಂಟಿಬೈಆಟಿಕ್‌ಗಳು ಕಾರ್ಯತಃ ನಮ್ಮೆಲ್ಲರಿಗೂ ಸಹಾಯಮಾಡಿವೆ. ಆದರೂ, ಆ್ಯಂಟಿಬೈಆಟಿಕ್‌ಗಳು ಕೆಲವು ನ್ಯೂನತೆಗಳನ್ನೂ ಹೊಂದಿವೆ ಎಂಬುದು ಸುವ್ಯಕ್ತವಾಗಿದೆ.
ಏಡ್ಸ್ ಮತ್ತು ಇನ್‌ಫ್ಲೂಯೆನ್ಸದಂಥ, ವೈರಸ್‌ಗಳಿಂದ ಉಂಟುಮಾಡಲ್ಪಡುವ ರೋಗಗಳ ಮೇಲೆ ಆ್ಯಂಟಿಬೈಆಟಿಕ್‌ಗಳ ಚಿಕಿತ್ಸೆಯು ಯಾವುದೇ ಪರಿಣಾಮವನ್ನು
ಬೀರುವುದಿಲ್ಲ. ಅಷ್ಟುಮಾತ್ರವಲ್ಲ, ಕೆಲವು ಜನರಿಗೆ ಕೆಲವೊಂದು ಆ್ಯಂಟಿಬೈಆಟಿಕ್‌ಗಳು ಅಲರ್ಜಿಯನ್ನು ಉಂಟುಮಾಡಿವೆ. ಮತ್ತು ಅನೇಕ ಹಾನಿಕರ ಜೀವಾಣುಗಳನ್ನು ನಾಶಪಡಿಸುವಂಥ ಆ್ಯಂಟಿಬೈಆಟಿಕ್‌ಗಳು, ನಮ್ಮ ದೇಹದಲ್ಲಿರುವ ಸಹಾಯಕರ ಸೂಕ್ಷ್ಮಜೀವಾಣುಗಳನ್ನು ಸಹ ಕೊಂದುಬಿಡಬಹುದು. ಆದರೆ ಆ್ಯಂಟಿಬೈಆಟಿಕ್‌ಗಳಿಂದ ಬರುವ ಅತಿ ದೊಡ್ಡ ಸಮಸ್ಯೆಯು ಅವುಗಳ ಅತಿಯಾದ ಬಳಕೆ ಅಥವಾ ಕಡಿಮೆ ಬಳಕೆಯೇ ಆಗಿದೆ.ರೋಗಿಗಳಿಗೆ ಸ್ವಲ್ಪ ಗುಣವಾದಂತೆ ಅನಿಸುವಾಗಲೊ ಅಥವಾ ಚಿಕಿತ್ಸೆಯು ತೀರ ದೀರ್ಘಕಾಲ ಮುಂದುವರಿಯುತ್ತಿರುವಂತೆ ಅವರಿಗೆ ತೋರುವುದರಿಂದಲೊ, ಅವರು ವೈದ್ಯರಿಂದ ಸೂಚಿಸಲ್ಪಟ್ಟ ಆ್ಯಂಟಿಬೈಆಟಿಕ್ ಚಿಕಿತ್ಸೆಯನ್ನು ಪೂರ್ಣವಾಗಿ ತೆಗೆದುಕೊಳ್ಳದಿರುವಾಗ ಅವುಗಳ ಕಡಿಮೆ ಬಳಕೆಯುಂಟಾಗುತ್ತದೆ. ಇದರ ಫಲಿತಾಂಶವಾಗಿ, ಆ್ಯಂಟಿಬೈಆಟಿಕ್‌ಗಳಿಂದ ಆಕ್ರಮಣ ಮಾಡುತ್ತಿರುವ ಎಲ್ಲಾ ಬ್ಯಾಕ್ಟೀರಿಯಗಳು ನಾಶವಾಗದಿರಬಹುದು; ಇದು, ಇನ್ನೂ ಪ್ರತಿರೋಧಕ ಶಕ್ತಿಯುಳ್ಳ ಬ್ಯಾಕ್ಟೀರಿಯಗಳು ಬದುಕಿ ಉಳಿದು, ಇನ್ನಷ್ಟು ಅಧಿಕಗೊಳ್ಳುವಂತೆ ಮಾಡಬಹುದು. ಕ್ಷಯರೋಗದ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಇದು ಅನೇಕಬಾರಿ ಸಂಭವಿಸಿದೆ.
ವೈದ್ಯರು ಮತ್ತು ರೈತರು ಈ ಹೊಸ ಔಷಧಗಳ ಅತಿಯಾದ ಬಳಕೆಗೆ ದೋಷಿಗಳಾಗಿರುತ್ತಾರೆ. “ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅನೇಕವೇಳೆ ಆ್ಯಂಟಿಬೈಆಟಿಕ್‌ಗಳು ವೈದ್ಯರಿಂದ ಅನಗತ್ಯವಾಗಿ ಶಿಫಾರಸ್ಸು ಮಾಡಲ್ಪಟ್ಟಿವೆ, ಮತ್ತು ಅನೇಕ ಇತರ ದೇಶಗಳಲ್ಲಿ ಅವು ಇನ್ನೂ ಹೆಚ್ಚು ಪ್ರಮಾಣದಲ್ಲಿ ಸಿಕ್ಕಾಬಟ್ಟೆ ಉಪಯೋಗಿಸಲ್ಪಡುತ್ತವೆ” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುತ್ತದೆ. “ಇವುಗಳನ್ನು ದೊಡ್ಡ ಪ್ರಮಾಣಗಳಲ್ಲಿ ಜಾನುವಾರುಗಳಿಗೆ ತಿನ್ನಿಸಲಾಗುತ್ತಿದೆ, ರೋಗವನ್ನು ಗುಣಪಡಿಸಲಿಕ್ಕಾಗಿ ಅಲ್ಲ, ಬದಲಾಗಿ ಜಾನುವಾರಗಳ ತೀವ್ರಗತಿಯ ಬೆಳವಣಿಗೆಗಾಗಿಯೇ; ಸೂಕ್ಷ್ಮಜೀವಿಗಳ ಅತಿಯಾದ ಪ್ರತಿರೋಧಕ್ಕೆ
ಇದು ಮುಖ್ಯ ಕಾರಣವಾಗಿದೆ.” ಇದರ ಫಲಿತಾಂಶವಾಗಿ, “ಹೊಸ ಆ್ಯಂಟಿಬೈಆಟಿಕ್‌ಗಳ ಸರಬರಾಯಿಯು ಅತಿ ಬೇಗನೆ ಕೊನೆಗೊಳ್ಳಬಹುದು” ಎಂದು ಆ ಪುಸ್ತಕವು ಎಚ್ಚರಿಕೆ ನೀಡುತ್ತದೆ.ಆದರೆ ಆ್ಯಂಟಿಬೈಆಟಿಕ್‌ಗಳ ಪ್ರತಿರೋಧದ ಕುರಿತಾದ ಈ ಚಿಂತೆಗಳಲ್ಲದೆ, 20ನೆಯ ಶತಮಾನದ ಎರಡನೆಯ ಅರ್ಧಭಾಗವು ವೈದ್ಯಕೀಯ ವಿಜಯಗಳ ಕಾಲಾವಧಿಯಾಗಿತ್ತು. ವೈದ್ಯಕೀಯ ಸಂಶೋಧಕರು ಬಹುಮಟ್ಟಿಗೆ ಯಾವುದೇ ವ್ಯಾಧಿಯನ್ನು ಹೊಡೆದೋಡಿಸಲಿಕ್ಕಾಗಿರುವ ಔಷಧಗಳನ್ನು ಕಂಡುಹಿಡಿಯಲು ಶಕ್ತರಾಗಿರುವಂತೆ ತೋರಿತು. ಮತ್ತು ಲಸಿಕೆಗಳು ರೋಗವನ್ನು ತಡೆಗಟ್ಟುವ ಪ್ರತೀಕ್ಷೆಯನ್ನು ಸಹ ಒದಗಿಸಿದವು.
ವೈದ್ಯಕೀಯ ವಿಜ್ಞಾನವು ಸಾಧಿಸಿರುವ ವಿಜಯಗಳು
“ಸೋಂಕು ಪ್ರತಿರಕ್ಷೆಯನ್ನು ಒದಗಿಸುವುದು, ಇತಿಹಾಸದಲ್ಲೇ ಸಾಧಿಸಲ್ಪಟ್ಟಿರುವ ಸಾರ್ವಜನಿಕ ಆರೋಗ್ಯದ ಅತಿ ದೊಡ್ಡ ಯಶೋಗಾಥೆಯಾಗಿದೆ” ಎಂದು ದ ವರ್ಲ್ಡ್ ಹೆಲ್ತ್ ರಿಪೋರ್ಟ್ 1999 ಎಂಬ ಪತ್ರಿಕೆಯು ತಿಳಿಸಿತು. ಲೋಕವ್ಯಾಪಕವಾಗಿ ಲಸಿಕೆಹಾಕುವ ಬೃಹತ್ ಕಾರ್ಯಾಚರಣೆಗಳ ಫಲವಾಗಿ ಈಗಾಗಲೇ ಕೋಟಿಗಟ್ಟಲೆ ಜೀವಗಳು ಸಂರಕ್ಷಿಸಲ್ಪಟ್ಟಿವೆ. ಭೂವ್ಯಾಪಕವಾದ ಸೋಂಕುರಕ್ಷಾ ಕಾರ್ಯಕ್ರಮವು, 20ನೆಯ ಶತಮಾನದ ಎಲ್ಲಾ ಯುದ್ಧಗಳಿಗಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿರುವ ಮಾರಕ ಸಿಡುಬು ರೋಗವನ್ನು ನಿರ್ಮೂಲನಮಾಡಿದೆ, ಮತ್ತು ತದ್ರೀತಿಯ ಕಾರ್ಯಾಚರಣೆಯು ಪೋಲಿಯೊ ರೋಗವನ್ನು ಬಹುಮಟ್ಟಿಗೆ ಇಲ್ಲವಾಗಿಸಿದೆ. (“ಸಿಡುಬು ಮತ್ತು ಪೋಲಿಯೊ ರೋಗಗಳ ಮೇಲಿನ ವಿಜಯಗಳು” ಎಂಬ ಚೌಕವನ್ನು ನೋಡಿ.) ಜೀವಕ್ಕೆ ಅಪಾಯವನ್ನೊಡ್ಡುವಂಥ ಸಾಮಾನ್ಯ ರೋಗಗಳಿಂದ ಸಂರಕ್ಷಿಸಲಿಕ್ಕಾಗಿ ಅನೇಕ ಮಕ್ಕಳಿಗೆ ಈಗ ಲಸಿಕೆಯು ನೀಡಲ್ಪಡುತ್ತಿದೆ.
ಇನ್ನಿತರ ರೋಗಗಳನ್ನು ಕಡಿಮೆ ಗಮನಾರ್ಹವಾದ ವಿಧಗಳಿಂದ ನಿಯಂತ್ರಿಸಲಾಗಿದೆ. ಎಲ್ಲಿ ಸಾಕಷ್ಟು ನೈರ್ಮಲ್ಯವ್ಯವಸ್ಥೆ ಮತ್ತು ಸುರಕ್ಷಿತವಾದ ನೀರಿನ ಸರಬರಾಯಿ ಇದೆಯೋ ಅಲ್ಲಿ, ನೀರಿನ ಮೂಲಕ ಹರಡುವ ಕಾಲರದಂತಹ ಸೋಂಕು ರೋಗಗಳು ಸಮಸ್ಯೆಗಳನ್ನು ಉಂಟುಮಾಡುವುದು ತೀರ ಅಪರೂಪ. ಅನೇಕ ದೇಶಗಳಲ್ಲಿ ಚಿಕಿತ್ಸೆಗಾಗಿ ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ಸಂಪರ್ಕಿಸುವ ಅವಕಾಶಗಳು ಹೆಚ್ಚಿರುವುದರಿಂದ, ಅಧಿಕಾಂಶ ರೋಗಗಳು ಸಾವನ್ನು ಉಂಟುಮಾಡುವುದಕ್ಕೆ ಮೊದಲೇ ಅವುಗಳನ್ನು ಪತ್ತೆಹಚ್ಚಿ, ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಸಾಧ್ಯವಾಗುತ್ತಿದೆ. ಹೆಚ್ಚು ಉತ್ತಮವಾದ ಆಹಾರಪಥ್ಯ ಮತ್ತು ವಾಸಮಾಡುವ ಪರಿಸ್ಥಿತಿಗಳು, ಹಾಗೂ ಆಹಾರವನ್ನು ಸರಿಯಾಗಿ ನಿರ್ವಹಿಸುವ ಮತ್ತು ಶೇಖರಿಸುವ ವಿಷಯದಲ್ಲಿ ನಿಯಮಗಳನ್ನು ಜಾರಿಗೆ ತರುವುದು ಸಹ ಸಾರ್ವಜನಿಕ ಆರೋಗ್ಯವನ್ನು ಉತ್ತಮಗೊಳಿಸಲು ನೆರವನ್ನಿತ್ತಿದೆ.
ಒಂದು ಸಲ ವಿಜ್ಞಾನಿಗಳು ಸೋಂಕು ರೋಗಗಳಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಿದರೆಂದರೆ, ಹಬ್ಬುತ್ತಿರುವ ಸಾಂಕ್ರಾಮಿಕ ರೋಗವನ್ನು ನಿಲ್ಲಿಸಲು ಆರೋಗ್ಯಾಧಿಕಾರಿಗಳು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಸಾಧ್ಯವಿದೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ. ಇಸವಿ 1907ರಲ್ಲಿ ಸಾನ್ ಫ್ರಾನ್ಸಿಸ್ಕೋದಲ್ಲಿ ತಲೆದೋರಿದ ಗೆಡ್ಡೆ ಪ್ಲೇಗು ಕೆಲವೇ ಮಂದಿಯನ್ನು ಬಲಿತೆಗೆದುಕೊಂಡಿತು, ಏಕೆಂದರೆ ಯಾವುದರ ಚಿಗಟಗಳು ರೋಗವನ್ನು ಹಬ್ಬಿಸುತ್ತಿದ್ದವೋ ಆ ಇಲಿಗಳನ್ನು ನಿರ್ಮೂಲನಮಾಡಲಿಕ್ಕಾಗಿ ಆ ನಗರವು ಕೂಡಲೆ ವ್ಯಾಪಕವಾದ ಪ್ರಯತ್ನಗಳನ್ನು ಮಾಡಲಾರಂಭಿಸಿತು. ಇನ್ನೊಂದು ಕಡೆಯಲ್ಲಿ, ಇಸವಿ 1896ರಲ್ಲಿ ಆರಂಭಿಸುತ್ತಾ, 12 ವರ್ಷಗಳೊಳಗೆ ಇದೇ ರೋಗವು ಭಾರತದಲ್ಲಿ ಒಂದು ಕೋಟಿ ಮರಣಗಳಿಗೆ ಕಾರಣವಾಯಿತು, ಏಕೆಂದರೆ ಆ ಸಮಯದಲ್ಲಿನ್ನೂ ಯಾವುದು ಇದನ್ನು ಹಬ್ಬಿಸುತ್ತಿದೆ ಎಂಬುದು ಕಂಡುಹಿಡಿಯಲ್ಪಟ್ಟಿರಲಿಲ್ಲ.
ರೋಗದ ವಿರುದ್ಧವಾದ ಹೋರಾಟದಲ್ಲಿ ಅಪಜಯಗಳು
ಗಮನಾರ್ಹವಾದ ಹೋರಾಟಗಳು ಗೆಲ್ಲಲ್ಪಟ್ಟಿವೆ ಎಂಬುದಂತೂ ಸ್ಪಷ್ಟ. ಆದರೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಜಯಗಳು ಲೋಕದ ಸಂಪದ್ಭರಿತ ದೇಶಗಳಿಗೆ ಮಾತ್ರ ಮೀಸಲಾಗಿವೆ. ಚಿಕಿತ್ಸೆಯಿಂದ ಗುಣಪಡಿಸಸಾಧ್ಯವಿರುವ ರೋಗಗಳು ಈಗಲೂ ಕೋಟಿಗಟ್ಟಲೆ ಜನರನ್ನು ಕೊಲ್ಲುತ್ತಿವೆ. ಹೀಗಾಗುತ್ತಿರುವುದು ಸಾಕಷ್ಟು ಹಣಕಾಸಿನ ಕೊರತೆಯಿಂದಲೇ. ಅಭಿವೃದ್ಧಿಶೀಲ ದೇಶಗಳಲ್ಲಿರುವ ಅನೇಕರಿಗೆ ಈಗಲೂ ಸಾಕಷ್ಟು ನೈರ್ಮಲ್ಯವ್ಯವಸ್ಥೆ, ಆರೋಗ್ಯಾರೈಕೆ, ಮತ್ತು ಸುರಕ್ಷಿತವಾದ ನೀರಿನ ಸರಬರಾಯಿ ಇಲ್ಲ. ಅಪಾರ ಸಂಖ್ಯೆಯಲ್ಲಿ ಜನರು ಗ್ರಾಮೀಣಪ್ರದೇಶಗಳಿಂದ ಅಭಿವೃದ್ಧಿಹೊಂದುತ್ತಿರುವ ದೇಶಗಳ ದೊಡ್ಡ ನಗರಗಳಿಗೆ ವಲಸೆಹೋಗುತ್ತಿರುವ ಕಾರಣದಿಂದ, ಈ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಿದೆ. ಈ ಅಂಶಗಳ ಫಲಿತಾಂಶವಾಗಿ, ಲೋಕಾರೋಗ್ಯ ಸಂಸ್ಥೆಯು ಯಾವುದನ್ನು “ರೋಗವೆಂಬ ಹೊರೆಯ ಅಸಮ ಪಾಲು” ಎಂದು ಕರೆಯುತ್ತದೋ ಅದು, ಲೋಕದಲ್ಲಿರುವ ಬಡವರಿಗೆ ಮಾತ್ರ ಬರುತ್ತದೆ.
ಸ್ವಾರ್ಥತೆಯ ಕಾರಣದಿಂದ ಮುಂದಾಲೋಚನೆಯ ಕೊರತೆಯು, ಈ ಆರೋಗ್ಯ ಅಸಮತೋಲನಕ್ಕೆ ಪ್ರಮುಖ ಕಾರಣವಾಗಿದೆ. “ಲೋಕದ ಅತ್ಯಂತ ಮಾರಕವಾದ ಸಾಂಕ್ರಾಮಿಕ ರೋಗಗಳಲ್ಲಿ ಕೆಲವು ತೆಗೆದುಹಾಕಲ್ಪಟ್ಟಿರುವಂತೆ ತೋರುತ್ತವೆ” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ. “ಇವುಗಳಲ್ಲಿ ಕೆಲವು ಬಡ ಉಷ್ಣವಲಯ ಹಾಗೂ ಉಪಉಷ್ಣವಲಯದ ಪ್ರಾಂತಗಳಲ್ಲಿ ಮಾತ್ರ ಇಲ್ಲವೆ ಮುಖ್ಯವಾಗಿ ಅಲ್ಲಿ ಕಂಡುಬರುತ್ತವೆ.” ಸಂಪದ್ಭರಿತ ವಿಕಸಿತ ದೇಶಗಳು ಮತ್ತು ಔಷಧವಸ್ತುಗಳ ಕಂಪೆನಿಗಳು ನೇರವಾಗಿ ಲಾಭವನ್ನು ಪಡೆದುಕೊಳ್ಳದಿರಬಹುದಾದ ಕಾರಣ, ಈ ರೋಗಗಳ ಚಿಕಿತ್ಸೆಗಾಗಿ ಹಣಕಾಸನ್ನು ಕೊಡಲು ನಿರಾಕರಿಸುತ್ತವೆ.
ರೋಗವನ್ನು ಹಬ್ಬಿಸುವುದರಲ್ಲಿ ಮಾನವರ ಬೇಜವಾಬ್ದಾರಿ ನಡವಳಿಕೆಯೂ ಇನ್ನೊಂದು ಅಂಶವಾಗಿದೆ. ಈ ಕಟು ವಾಸ್ತವಿಕತೆಯ ಮುಖ್ಯ ಉದಾಹರಣೆಯನ್ನು, ದೇಹದ ದ್ರವಗಳ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಬ್ಬಿಸಲ್ಪಡುವಂಥ ಏಡ್ಸ್ ವೈರಸ್‌ನ ವಿಷಯದಲ್ಲಿ ಅತ್ಯುತ್ತಮವಾಗಿ ಚಿತ್ರಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಈ ಸರ್ವವ್ಯಾಪಿ ರೋಗವು ಲೋಕದಾದ್ಯಂತ ತ್ವರಿತಗತಿಯಲ್ಲಿ ಹಬ್ಬಿದೆ. (“ಏಡ್ಸ್—ನಮ್ಮ ಕಾಲದ ವ್ಯಾಧಿ” ಎಂಬ ಚೌಕವನ್ನು ನೋಡಿ.) “ಏಡ್ಸ್‌ನ ಹಬ್ಬುವಿಕೆಗೆ ಸ್ವತಃ ಮಾನವರೇ ಕಾರಣರಾಗಿದ್ದಾರೆ. ಮತ್ತು ಈ ಹೇಳಿಕೆಯು ಒಂದು ನೀತಿಬೋಧಕವಲ್ಲ, ವಾಸ್ತವದಲ್ಲಿ ಇದೊಂದು ನಿಜತ್ವವಾಗಿದೆ” ಎಂದು ಸೋಂಕುರೋಗ ಶಾಸ್ತ್ರಜ್ಞನಾದ ಜೋ ಮೆಕಾಮೈಕ್ ಹೇಳುತ್ತಾನೆ.
ಯಾವ ರೀತಿಯಲ್ಲಿ ಮಾನವರು ತಮಗರಿವಿಲ್ಲದೇ ಏಡ್ಸ್ ವೈರಸನ್ನು ಹಬ್ಬಿಸಿದರು? ಬರಲಿರುವ ಮಾರಕ ವ್ಯಾಧಿ (ಇಂಗ್ಲಿಷ್) ಎಂಬ ಪುಸ್ತಕವು ಈ ಮುಂದಿನ ಅಂಶಗಳನ್ನು ಪಟ್ಟಿಮಾಡುತ್ತದೆ: ಸಾಮಾಜಿಕ ಬದಲಾವಣೆಗಳು—ವಿಶೇಷವಾಗಿ ಅನೇಕ ಲೈಂಗಿಕ ಸಂಗಾತಿಗಳನ್ನು ಹೊಂದಿರುವುದು—ರತಿರವಾನಿತ ರೋಗಗಳ ಅಲೆಯನ್ನು ಉಂಟುಮಾಡಿ, ಈ ವೈರಸ್ ಭದ್ರವಾಗಿ ತಳವೂರುವಂತೆ ಮತ್ತು ಅದು ಒಬ್ಬ ಸೋಂಕಿತ ವ್ಯಕ್ತಿಯಿಂದ ಇನ್ನೂ ಅನೇಕ ಜನರಿಗೆ ಹಬ್ಬುವುದನ್ನು ಸುಲಭವಾಗಿಸಿದವು. ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ವೈದ್ಯಕೀಯ ಚುಚ್ಚುಮದ್ದುಗಳಿಗಾಗಿ ಅಥವಾ
ಕಾನೂನುಬಾಹಿರ ಅಮಲೌಷಧದ ಉಪಯೋಗಕ್ಕಾಗಿ ಮಲಿನಗೊಂಡಿರುವ, ಅನೇಕಬಾರಿ ಉಪಯೋಗಿಸಲ್ಪಟ್ಟಿರುವ ಸಿರಿಂಜ್‌ಗಳ ವ್ಯಾಪಕವಾದ ಬಳಕೆಯು ಸಹ ತದ್ರೀತಿಯ ಪರಿಣಾಮವನ್ನು ಉಂಟುಮಾಡಿತು. ಶತಕೋಟಿ ಡಾಲರುಗಳ ಭೌಗೋಳಿಕ ರಕ್ತೋದ್ಯಮವು ಸಹ, ಒಬ್ಬ ದಾನಿಯಿಂದ ಅನೇಕ ಮಂದಿ ಗ್ರಾಹಕರಿಗೆ ಏಡ್ಸ್ ವೈರಸನ್ನು ದಾಟಿಸಿತು.ಈ ಮುಂಚೆ ತಿಳಿಸಲ್ಪಟ್ಟಿರುವಂತೆ, ಆ್ಯಂಟಿಬೈಆಟಿಕ್‌ಗಳ ಅತಿಯಾದ ಬಳಕೆ ಅಥವಾ ಕಡಿಮೆ ಬಳಕೆಯು, ಪ್ರತಿರೋಧಕ ಸೂಕ್ಷ್ಮಜೀವಿಗಳ ಉದಯಕ್ಕೆ ಕಾರಣವಾಗಿದೆ. ಈ ಸಮಸ್ಯೆಯು ಗಂಭೀರವಾಗಿದೆ ಮತ್ತು ಇನ್ನಷ್ಟು ಕ್ಲಿಷ್ಟವಾಗುತ್ತಾ ಹೋಗುತ್ತಿದೆ. ಗಾಯದಲ್ಲಿ ಸೋಂಕನ್ನು ಉಂಟುಮಾಡುವಂಥ ಸ್ಟೆಫಿಲೋಕೊಕಸ್ ಬ್ಯಾಕ್ಟೀರಿಯವನ್ನು, ಪೆನ್ಸಿಲಿನ್‌ನ ಉತ್ಪನ್ನಗಳಿಂದ ಈ ಮುಂಚೆ ಸುಲಭವಾಗಿ ನಿರ್ಮೂಲಗೊಳಿಸಲಾಗುತ್ತಿತ್ತು. ಆದರೆ ಈಗ, ಬಹಳ ಸಮಯದಿಂದಲೂ ಉಪಯೋಗಿಸಲ್ಪಡುತ್ತಿರುವ ಈ ಆ್ಯಂಟಿಬೈಆಟಿಕ್‌ಗಳು ಅನೇಕವೇಳೆ ನಿಷ್ಪ್ರಯೋಜಕವಾಗಿ ಕಂಡುಬರುತ್ತಿವೆ. ಆದುದರಿಂದ ವೈದ್ಯರು ಇನ್ನೂ ಹೊಸತಾದ, ಹೆಚ್ಚು ದುಬಾರಿಯಾದ ಆ್ಯಂಟಿಬೈಆಟಿಕ್‌ಗಳನ್ನು ಉಪಯೋಗಿಸಬೇಕಾಗುತ್ತದೆ, ಆದರೆ ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿರುವ ಆಸ್ಪತ್ರೆಗಳು ಇದಕ್ಕೆ ಬೇಕಾದಷ್ಟು ಹಣವನ್ನು ತೆರಲು ಸಮರ್ಥವಾಗಿರುವುದು ತೀರ ವಿರಳ. ಅತಿ ನವನವೀನ ಆ್ಯಂಟಿಬೈಆಟಿಕ್‌ಗಳು ಸಹ ಕೆಲವು ಸೂಕ್ಷ್ಮಜೀವಿಗಳನ್ನು ಹೊಡೆದೋಡಿಸಲು ಅಶಕ್ತವಾಗಿ ಪರಿಣಮಿಸಬಹುದು ಮತ್ತು ಇದು ಆಸ್ಪತ್ರೆಯಲ್ಲಿ ತಗಲುವ ಸೋಂಕುಗಳನ್ನು ಇನ್ನೂ ಹೆಚ್ಚು ಸಾಮಾನ್ಯವಾದದ್ದಾಗಿ ಹಾಗೂ ಮಾರಕವಾದದ್ದಾಗಿ ಮಾಡಿಬಿಡಬಹುದು. ‘ಅಲರ್ಜಿ ಮತ್ತು ಸೋಂಕು ರೋಗಗಳ ಯು.ಎಸ್. ರಾಷ್ಟ್ರೀಯ ಸಂಸ್ಥೆ’ಯ ಮಾಜಿ ನಿರ್ದೇಶಕರಾಗಿರುವ ಡಾ. ರಿಚರ್ಡ್ ಕ್ರೌಸರವರು ಪ್ರಚಲಿತ ಸನ್ನಿವೇಶವನ್ನು, “ಸೂಕ್ಷ್ಮಜೀವಿಗಳ ಪ್ರತಿರೋಧವೆಂಬ ಸಾಂಕ್ರಾಮಿಕ ರೋಗ” ಎಂದು ನಿರ್ದಾಕ್ಷಿಣ್ಯವಾಗಿ ವರ್ಣಿಸುತ್ತಾರೆ.
“ಇಂದು ನಾವು ಹೆಚ್ಚು ಸಾಫಲ್ಯವನ್ನು ಪಡೆದಿದ್ದೇವೋ?”
ಈಗ, ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿಯೂ ರೋಗಗಳ ಬೆದರಿಕೆಯು ಇನ್ನೂ ಕಣ್ಮರೆಯಾಗಿಲ್ಲ ಎಂಬುದು ಸುಸ್ಪಷ್ಟ. ಏಕಪ್ರಕಾರವಾಗಿ ಹಬ್ಬುತ್ತಿರುವ ಏಡ್ಸ್ ರೋಗ, ಔಷಧಗಳಿಗೆ ಪ್ರತಿರೋಧ ತೋರಿಸುವ ರೋಗಾಣುಗಳ ಉದಯ, ಮತ್ತು ಕ್ಷಯ ಹಾಗೂ ಮಲೇರಿಯ ಜ್ವರದಂಥ ಪುರಾತನ ಕೊಲೆಗಡುಕ ವ್ಯಾಧಿಗಳ ಪುನರಾಗಮನವು, ರೋಗದ ವಿರುದ್ಧವಾದ ಹೋರಾಟವು ಇನ್ನೂ ಮುಂದುವರಿಯುತ್ತಿದೆ ಎಂಬುದನ್ನೇ ರುಜುಪಡಿಸುತ್ತಿದೆ.
“ಒಂದು ಶತಮಾನಕ್ಕಿಂತ ಮುಂಚಿನ ಸಮಯಕ್ಕೆ ಹೋಲಿಸುವಾಗ ಇಂದು ನಾವು ಹೆಚ್ಚು ಸಾಫಲ್ಯವನ್ನು ಪಡೆದಿದ್ದೇವೋ?” ಎಂದು ನೊಬೆಲ್ ಪಾರಿತೋಷಕ ವಿಜೇತರಾದ ಜೋಶುವ ಲೆಡರ್‌ಬರ್ಗರು ಕೇಳಿದರು. ಅವರು ಹೇಳಿದ್ದು: “ಹೆಚ್ಚಿನ ವಿಧಗಳಲ್ಲಿ ನಾವು ಇನ್ನೂ ಹದಗೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ಸೂಕ್ಷ್ಮಜೀವಿಗಳ ವಿಷಯದಲ್ಲಿ ನಾವು ಅಲಕ್ಷ್ಯವನ್ನು ತೋರಿಸಿದ್ದೇವೆ, ಮತ್ತು ಆ ಅಲಕ್ಷ್ಯಮನೋಭಾವದ ಪರಿಣಾಮಗಳನ್ನೇ ನಾವೀಗ ಕೊಯ್ಯುತ್ತಿದ್ದೇವೆ.” ವೈದ್ಯಕೀಯ ವಿಜ್ಞಾನ ಮತ್ತು ಲೋಕದ ಎಲ್ಲಾ ರಾಷ್ಟ್ರಗಳ ದೃಢಸಂಕಲ್ಪದ ಪ್ರಯತ್ನದಿಂದ ಸದ್ಯದ ಹಿನ್ನಡೆಗಳನ್ನು ಜಯಿಸಸಾಧ್ಯವಿದೆಯೋ? ಸಿಡುಬು ರೋಗವು ನಿರ್ಮೂಲಗೊಳಿಸಲ್ಪಟ್ಟಂತೆ, ಪ್ರಧಾನ ಸೋಂಕು ರೋಗಗಳು ಕಾಲಕ್ರಮೇಣ ನಿರ್ಮೂಲಗೊಳಿಸಲ್ಪಡುವವೋ? ನಮ್ಮ ಕೊನೆಯ ಲೇಖನವು ಈ ಪ್ರಶ್ನೆಗಳನ್ನು ಪರಿಗಣಿಸುವುದು. (g04 5/22)
[ಪುಟ 8ರಲ್ಲಿರುವ ಚೌಕ/ಚಿತ್ರ]
ಸಿಡುಬು ಮತ್ತು ಪೋಲಿಯೊ ರೋಗಗಳ ಮೇಲಿನ ವಿಜಯಗಳು
ಇಸವಿ 1977ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಲೋಕಾರೋಗ್ಯ ಸಂಸ್ಥೆಯು (ಡಬ್ಲ್ಯೂ.ಏಚ್.ಓ.), ಸಾಮಾನ್ಯ ರೀತಿಯಲ್ಲಿ ಹಬ್ಬುವ ಸಿಡುಬು ರೋಗವಿದ್ದ, ಕೊನೆಯದಾಗಿ ಕಂಡುಬಂದ ರೋಗಿಯನ್ನು ಪತ್ತೆಹಚ್ಚಿತು. ಸೊಮಾಲಿಯದಲ್ಲಿ ವಾಸಿಸುತ್ತಿದ್ದ ಆಲೀ ಮಾವೌ ಮಾಲೇನ್ ಎಂಬ ಆಸ್ಪತ್ರೆಯ ಅಡುಗೆಭಟ್ಟನಿಗೆ ಈ ರೋಗವು ತಗಲಿತಾದರೂ, ಇದರಿಂದ ಅವನು ಗಂಭೀರವಾಗಿ ಬಾಧಿತನಾಗಲಿಲ್ಲ, ಮತ್ತು ಕೆಲವೇ ವಾರಗಳಲ್ಲಿ ಅವನು ಸಂಪೂರ್ಣ ಗುಣಮುಖನಾದನು. ಅವನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರಿಗೂ ಲಸಿಕೆಯನ್ನು ನೀಡಲಾಯಿತು.
ತುಂಬ ನಿಧಾನವಾಗಿ ಸರಿಯುತ್ತಿರುವಂತೆ ಕಂಡುಬಂದ ಎರಡು ವರ್ಷಗಳಾದ್ಯಂತ ವೈದ್ಯರು ತುಂಬ ಚಿಂತಾಭರಿತರಾಗಿ ಕಾದರು. ದೃಢಪಡಿಸಲ್ಪಟ್ಟ ಇನ್ನೊಂದು “ಶೀಘ್ರವ್ಯಾಪಕ ಸಿಡುಬು ರೋಗದ ಕೇಸನ್ನು” ಯಾರಾದರೂ ವರದಿಸುವಲ್ಲಿ ಅವರಿಗೆ 1,000 ಅಮೆರಿಕನ್ ಡಾಲರುಗಳ ಇನಾಮನ್ನು ಘೋಷಿಸಲಾಗಿತ್ತು. ಯಾರೊಬ್ಬರೂ ಈ ಇನಾಮನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಲಿಲ್ಲ, ಮತ್ತು 1980ರ ಮೇ 8ರಂದು, “ಲೋಕವೂ ಅದರ ಎಲ್ಲಾ ಜನರೂ ಸಿಡುಬು ರೋಗದಿಂದ ಬಿಡುಗಡೆಯನ್ನು ಪಡೆದುಕೊಂಡಿದ್ದಾರೆ” ಎಂದು ಡಬ್ಲ್ಯೂ.ಏಚ್.ಓ. ಅಧಿಕೃತವಾಗಿ ಘೋಷಿಸಿತು. ಒಂದು ದಶಕಕ್ಕೆ ಹಿಂದೆಯಷ್ಟೇ ಸಿಡುಬು ರೋಗವು ಒಂದು ವರ್ಷಕ್ಕೆ ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚು ಮರಣಗಳನ್ನು ಉಂಟುಮಾಡುತ್ತಿತ್ತು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದು ಪ್ರಮುಖ ಸೋಂಕು ರೋಗವು ನಿರ್ಮೂಲಗೊಳಿಸಲ್ಪಟ್ಟಿತು. *
ಪೋಲಿಯೊ, ಅಥವಾ ಪೋಲಿಯೊಮೈಇಲೈಟಿಸ್ ರೋಗವು ಬಾಲ್ಯಾವಸ್ಥೆಯಲ್ಲಿ ಬರುವ ದುರ್ಬಲಗೊಳಿಸುವಂಥ ರೋಗವಾಗಿದ್ದು, ಇದನ್ನು ಸಹ ನಿರ್ಮೂಲನಗೊಳಿಸಸಾಧ್ಯವಿದೆ ಎಂಬ ಪ್ರತೀಕ್ಷೆಯು ಕಂಡುಬಂತು. ಇಸವಿ 1955ರಲ್ಲಿ, ಜೋನಾಸ್ ಸಾಲ್ಕ್ ಎಂಬಾತನು ಪೋಲಿಯೋಗಾಗಿ ಪರಿಣಾಮಕಾರಿಯಾದ ಲಸಿಕೆಯನ್ನು ಕಂಡುಹಿಡಿದನು, ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹಾಗೂ ಇತರ ದೇಶಗಳಲ್ಲಿ ಪೋಲಿಯೊ ವಿರುದ್ಧ ಸೋಂಕು ಪ್ರತಿರಕ್ಷೆಯ ಕಾರ್ಯಾಚರಣೆಯು ಆರಂಭಿಸಲ್ಪಟ್ಟಿತು. ಸಮಯಾನಂತರ ಬಾಯಿಯ ಮೂಲಕ ನೀಡಲ್ಪಡುವ ಲಸಿಕೆಯು ಕಂಡುಹಿಡಿಯಲ್ಪಟ್ಟಿತು. ಇಸವಿ 1988ರಲ್ಲಿ, ಪೋಲಿಯೊವನ್ನು ನಿರ್ಮೂಲಮಾಡಲಿಕ್ಕಾಗಿ ಡಬ್ಲ್ಯೂ.ಏಚ್.ಓ. ಒಂದು ಲೋಕವ್ಯಾಪಕ ಕಾರ್ಯಕ್ರಮವನ್ನು ಆರಂಭಿಸಿತು.
“ಇಸವಿ 1988ರಲ್ಲಿ ನಾವು ನಿರ್ಮೂಲನ ಪ್ರಯತ್ನಗಳನ್ನು ಆರಂಭಿಸಿದಾಗ, ಪ್ರತಿ ದಿನ ಪೋಲಿಯೊ ರೋಗವು 1000ಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಪಾರ್ಶ್ವವಾಯುವಿಗೆ ಒಳಪಡಿಸುತ್ತಿತ್ತು” ಎಂದು, ಆಗ ಡಬ್ಲ್ಯೂ.ಏಚ್.ಓ.ದ ಡೈರೆಕ್ಟರ್ ಜನರಲ್‌ರಾಗಿದ್ದ ಡಾ. ಗ್ರೋ ಹಾರ್ಲಮ್ ಬ್ರಂಟ್‌ಲಾನ್ ವರದಿಸುತ್ತಾರೆ. “ಇಸವಿ 2001ರಲ್ಲಿ, ಇಡೀ ವರ್ಷದಾದ್ಯಂತ 1000ಕ್ಕಿಂತಲೂ ಎಷ್ಟೋ ಕಡಿಮೆ ಪೋಲಿಯೊ ರೋಗಿಗಳಿದ್ದರು.” ಪೋಲಿಯೊ ಈಗ ಹತ್ತಕ್ಕಿಂತಲೂ ಕಡಿಮೆ ದೇಶಗಳಲ್ಲಿ ಮಾತ್ರ ಇದೆ; ಈ ದೇಶಗಳಲ್ಲಿ ಅಂತಿಮವಾಗಿ ಈ ರೋಗವನ್ನು ನಿರ್ಮೂಲನಗೊಳಿಸುವಂತೆ ಸಹಾಯಮಾಡಲು ಇನ್ನೂ ಹೆಚ್ಚಿನ ಹಣಕಾಸಿನ ಆವಶ್ಯಕತೆಯಿದೆ.
[ಪಾದಟಿಪ್ಪಣಿ]
^ ಅಂತಾರಾಷ್ಟ್ರೀಯ ಲಸಿಕೆ ಕಾರ್ಯಾಚರಣೆಯಿಂದ ಜಯಿಸಸಾಧ್ಯವಿದ್ದ ರೋಗವು ಸಿಡುಬು ರೋಗವಾಗಿತ್ತು, ಏಕೆಂದರೆ ಇಲಿಗಳು ಅಥವಾ ಕೀಟಗಳಂಥ ತೊಂದರೆದಾಯಕ ರೋಗಾಣುಗಳಿಂದ ಹಬ್ಬಿಸಲ್ಪಡುತ್ತಿದ್ದ ರೋಗಗಳಿಗೆ ಅಸದೃಶವಾಗಿ, ಸಿಡುಬು ರೋಗದ ವೈರಸ್ ತನ್ನ ಬದುಕಿ ಉಳಿಯುವಿಕೆಗಾಗಿ ಮಾನವ ಆಶ್ರಯದ ಮೇಲೆ ಅವಲಂಬಿಸಿರುತ್ತದೆ.
[ಚಿತ್ರ]
ಇಥಿಯೋಪಿಯದ ಹುಡುಗನೊಬ್ಬನು ಪೋಲಿಯೊ ಲಸಿಕೆಯನ್ನು ಬಾಯಿಗೆ ಹಾಕಿಸಿಕೊಳ್ಳುತ್ತಿರುವುದು
[ಕೃಪೆ]
© WHO/P. Virot
[ಪುಟ 10ರಲ್ಲಿರುವ ಚೌಕ/ಚಿತ್ರ]
ಏಡ್ಸ್—ನಮ್ಮ ಕಾಲದ ವ್ಯಾಧಿ
ಏಡ್ಸ್ ರೋಗವು ಒಂದು ಹೊಸ ಭೌಗೋಳಿಕ ಬೆದರಿಕೆಯಾಗಿ ಪರಿಣಮಿಸಿದೆ. ಈ ರೋಗವು ಕಂಡುಹಿಡಿಯಲ್ಪಟ್ಟು ಸುಮಾರು 20 ವರ್ಷಗಳು ಕಳೆದ ಬಳಿಕ, ಈಗಾಗಲೇ ಆರು ಕೋಟಿಗಿಂತಲೂ ಹೆಚ್ಚು ಜನರು ಸೋಂಕಿತರಾಗಿದ್ದಾರೆ. ಏಡ್ಸ್ ಸರ್ವವ್ಯಾಪಿ ರೋಗವು “ಇನ್ನೂ ಆರಂಭದ ಹಂತದಲ್ಲಿದೆ” ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡುತ್ತಾರೆ. ಸೋಂಕಿನ ಪ್ರಮಾಣಗಳು “ಈ ಮುಂಚೆ ನಂಬಲಾಗಿದ್ದಕ್ಕಿಂತಲೂ ಅತ್ಯಧಿಕ ಮಟ್ಟದಲ್ಲಿ ಏರುತ್ತಿವೆ,” ಮತ್ತು ಲೋಕದ ಯಾವ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಸೋಂಕಿದೆಯೋ ಅಲ್ಲಿನ ಪರಿಣಾಮಗಳು ಹೃದಯವಿದ್ರಾವಕವಾಗಿವೆ.
“ಲೋಕವ್ಯಾಪಕವಾಗಿ ಏಚ್‌ಐವಿ/ಏಡ್ಸ್ ರೋಗದಿಂದ ಅಸ್ವಸ್ಥರಾಗಿರುವ ಅಧಿಕಾಂಶ ಮಂದಿ ತಮ್ಮ ಜೀವಿತದ ಅತ್ಯಂತ ಚಟುವಟಿಕೆಭರಿತ ಹಂತದಲ್ಲಿದ್ದಾರೆ” ಎಂದು ವಿಶ್ವ ಸಂಸ್ಥೆಯ ವರದಿಯೊಂದು ವಿವರಿಸುತ್ತದೆ. ಇದರ ಫಲಿತಾಂಶವಾಗಿ, 2005ನೇ ಇಸವಿಯಷ್ಟಕ್ಕೆ ದಕ್ಷಿಣ ಆಫ್ರಿಕದ ಹಲವಾರು ದೇಶಗಳು ತಮ್ಮ ಕೆಲಸಗಾರರಲ್ಲಿ 10 ಪ್ರತಿಶತ ಮತ್ತು 20 ಪ್ರತಿಶತದ ನಡುವಣ ಸಂಖ್ಯೆಯಷ್ಟು ಜನರನ್ನು ಕಳೆದುಕೊಳ್ಳುವವು ಎಂದು ಸಂಶೋಧಕರು ಅಂದಾಜುಮಾಡುತ್ತಾರೆ. ಆ ವರದಿಯು ಇನ್ನೂ ಹೇಳುವುದು: “ಉಪಸಹಾರ ಆಫ್ರಿಕದಲ್ಲಿನ ಸರಾಸರಿ ಜೀವನಾಯುಷ್ಯವು ಸದ್ಯಕ್ಕೆ 47 ವರ್ಷಗಳಾಗಿದೆ. ಏಡ್ಸ್ ಇಲ್ಲದಿರುತ್ತಿದ್ದರೆ ಅಲ್ಲಿನ ಜೀವನಾಯುಷ್ಯವು 62 ವರ್ಷಗಳಾಗಿರುತ್ತಿತ್ತು.”
ಒಂದು ಲಸಿಕೆಯನ್ನು ಕಂಡುಹಿಡಿಯಲಿಕ್ಕಾಗಿರುವ ಪ್ರಯತ್ನಗಳು ಇಷ್ಟರ ತನಕ ನೆಲಕಚ್ಚಿವೆ, ಮತ್ತು ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿನ 60 ಲಕ್ಷ ಏಡ್ಸ್ ರೋಗಿಗಳಲ್ಲಿ ಕೇವಲ 4 ಪ್ರತಿಶತ ಮಂದಿ ಮಾತ್ರ ಔಷಧ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಸದ್ಯಕ್ಕೆ ಏಡ್ಸ್ ರೋಗವನ್ನು ಗುಣಪಡಿಸುವ ಯಾವುದೇ ಔಷಧವಿಲ್ಲ, ಮತ್ತು ಈಗಾಗಲೇ ಸೋಂಕಿತರಾಗಿರುವ ಅಧಿಕಾಂಶ ಜನರಿಗೆ ಕಾಲಕ್ರಮೇಣ ಈ ರೋಗವು ಖಂಡಿತವಾಗಿಯೂ ಕಾಣಿಸಿಕೊಳ್ಳುವುದು ಎಂದು ವೈದ್ಯರು ನಂಬುತ್ತಾರೆ.
[ಚಿತ್ರ]
ಏಚ್‌ಐವಿ ವೈರಸ್‌ನಿಂದ ಸೋಂಕಿತವಾಗಿರುವ ಟಿ ಲಿಂಪೊಸೈಟ್ ಜೀವಕೋಶಗಳು
[ಕೃಪೆ]
Godo-Foto
[ಪುಟ 7ರಲ್ಲಿರುವ ಚಿತ್ರ]
ಪ್ರಯೋಗಾಲಯದ ಕೆಲಸಗಾರನೊಬ್ಬನು ಹೋರಾಡಲು ಕಷ್ಟಕರವಾಗಿರುವ ವೈರಸ್‌ನ ಜಾತಿಯೊಂದನ್ನು ಪರೀಕ್ಷಿಸುತ್ತಿರುವುದು
[ಕೃಪೆ]
CDC/Anthony Sanchez