ತಣ್ಣನೆಯ ಜಗತ್ತಿನೊಳಕ್ಕೆ ಪ್ರವೇಶ!
ತಣ್ಣನೆಯ ಜಗತ್ತಿನೊಳಕ್ಕೆ ಪ್ರವೇಶ!
ಒಂದು ಮಗು ಹುಟ್ಟುವಾಗ, ಅದು ಕಠೋರವಾದ, ತಣ್ಣನೆಯ, ಹೌದು ಮಾನಸಿಕ ಒತ್ತಡದಿಂದ ತುಂಬಿರುವ ಜಗತ್ತಿನೊಳಗೆ ಕಾಲಿರಿಸುತ್ತದೆ. ಆ ಹಸುಗೂಸಿಗೆ ತನ್ನ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲಾಗದಿದ್ದರೂ, ಏನೆಲ್ಲಾ ನಡೆಯುತ್ತಿದೆಯೆಂದು ಜನನದ ಮುಂಚೆಯೇ ಭ್ರೂಣಕ್ಕೆ ತಿಳಿದಿರುತ್ತದೆಂಬುದು ಕೆಲವು ವಿಜ್ಞಾನಿಗಳ ಅಭಿಪ್ರಾಯ.
ಅಜಾತ ಮಗುವಿನ ಗುಪ್ತ ಜೀವನ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಹುಟ್ಟಲಿರುವ ಮಗುವು ಅರಿವುಳ್ಳ, ಸ್ಪಂದಿಸುವ ಮಾನವ ಜೀವಿಯಾಗಿದ್ದು, ಆರನೆಯ ತಿಂಗಳಿಂದ ಆರಂಭಿಸಿ (ಬಹುಶಃ ಇದಕ್ಕಿಂತಲೂ ಮುಂಚೆಯೇ) ಒಂದು ಸಕ್ರಿಯ ಭಾವನಾತ್ಮಕ ಜೀವನವನ್ನು ನಡೆಸುತ್ತದೆಂದು ನಮಗೀಗ ತಿಳಿದಿರುತ್ತದೆ.” ಒತ್ತಡಭರಿತವಾದ ಪ್ರಸವದ ಕಾರ್ಯಗತಿಯ ಬಗ್ಗೆ ಮಗುವಿಗೆ ಏನೂ ಜ್ಞಾಪಕವಿರದಿದ್ದರೂ, ಆ ಅನುಭವವು ಸಹ ಮಗುವಿನ ಮುಂದಿನ ಜೀವಿತದ ಮೇಲೆ ಯಾವುದಾದರೂ ಪ್ರಭಾವ ಬೀರುತ್ತದೊ ಎಂಬುದರ ಬಗ್ಗೆ ಕೆಲವು ವಿಜ್ಞಾನಿಗಳು ಕುತೂಹಲಪಡುತ್ತಾರೆ.
ಜನನದ ನಂತರ, ಮಾನಸಿಕ ಒತ್ತಡವು ಮುಂದುವರಿಯುತ್ತದೆ. ಈಗ ತಾಯಿಯ ಗರ್ಭದಿಂದ ಹೊರಬಂದಿರುವ ಶಿಶು ಇನ್ನು ಮುಂದೆ ತನ್ನಷ್ಟಕ್ಕೆ ತಾನೇ ಪೋಷಣೆ ಪಡೆಯುವುದಿಲ್ಲ. ಅದಕ್ಕೆ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಒದಗಿಸುತ್ತಿದ್ದ ನಳಿಕೆಯು ಇನ್ನಿಲ್ಲ. ಅದು ಬದುಕುಳಿಯಬೇಕಾದರೆ, ಸ್ವತಃ ಉಸಿರಾಡಲು ಮತ್ತು ಪೌಷ್ಟಿಕಾಂಶಗಳನ್ನು ಸೇವಿಸಲು ಆರಂಭಿಸಬೇಕು. ಅದಕ್ಕೆ ಉಣಿಸಲು ಮತ್ತು ಅದರ ಇತರ ಶಾರೀರಿಕ ಅಗತ್ಯಗಳನ್ನು ಪೂರೈಸಲು ಯಾರಾದರೂ ಇರಬೇಕು.
ನವಜಾತ ಶಿಶು ಮಾನಸಿಕವಾಗಿ, ಭಾವನಾತ್ಮಕವಾಗಿ, ಮತ್ತು ಆಧ್ಯಾತ್ಮಿಕವಾಗಿಯೂ ಬೆಳೆಯಬೇಕು. ಆದುದರಿಂದ ಪುಟ್ಟ ಕಂದನನ್ನು ಯಾರಾದರೂ ಪಾಲನೆಮಾಡಬೇಕು. ಇದನ್ನು ಮಾಡಲು ಸೂಕ್ತ ವ್ಯಕ್ತಿಗಳಾರು? ಎಳೆಯ ಮಗುವಿಗೆ ತನ್ನ ಹೆತ್ತವರಿಂದ ಏನು ಅಗತ್ಯ? ಈ ಅಗತ್ಯಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಹೇಗೆ ಪೂರೈಸಸಾಧ್ಯವಿದೆ? ಮುಂದಿನ ಲೇಖನಗಳು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಸಹಾಯಮಾಡುವವು. (g03 12/22)