ಮಧುಮೇಹ—“ಮೌನ ಹಂತಕ”
ಮಧುಮೇಹ—“ಮೌನ ಹಂತಕ”
ಕೆನ್ ಎಂಬವನು 21 ವರುಷ ಪ್ರಾಯದವನಾಗಿದ್ದಾಗ, ಕಸಿವಿಸಿಗೊಳಿಸುವಂಥ ತಣಿಸಲಾಗದ ಬಾಯಾರಿಕೆಯನ್ನು ಅನುಭವಿಸತೊಡಗಿದನು. ಅಷ್ಟುಮಾತ್ರವಲ್ಲದೆ, ಅವನಿಗೆ ಪದೇ ಪದೇ ಮೂತ್ರವಿಸರ್ಜನೆಯಾಗುತ್ತಿತ್ತು—ಕ್ರಮೇಣ ಪ್ರತಿ 20 ನಿಮಿಷಕ್ಕೆ ಒಮ್ಮೆ ಮೂತ್ರವಿಸರ್ಜಿಸಬೇಕಾಯಿತು. ಬೇಗನೆ, ಕೆನ್ಗೆ ಅವನ ಕಾಲುಗಳು ಭಾರವೆನಿಸತೊಡಗಿದವು. ಅವನಿಗೆ ಯಾವಾಗಲೂ ಆಯಾಸವಾಗುತ್ತಿತ್ತು, ಮತ್ತು ಅವನ ದೃಷ್ಟಿಯೂ ಮಬ್ಬಾಯಿತು.
ಆದರೆ ಕೆನ್ ಒಮ್ಮೆ ವೈರಸ್ನಿಂದ ಸೋಂಕಿತನಾದಾಗ ಅವನ ಜೀವನದಲ್ಲಿ ಒಂದು ತಿರುವು ಉಂಟಾಯಿತು. ವೈದ್ಯರನ್ನು ಭೇಟಿನೀಡಿದಾಗ, ಕೆನ್ಗೆ ಕೇವಲ ಫ್ಲೂಗಿಂತ ಹೆಚ್ಚಿನ ಸಮಸ್ಯೆಯಿದೆ ಎಂದು ತಿಳಿದುಬಂತು. ಅವನು, ಟೈಪ್ 1 ಡಯಾಬಿಟೀಸ್ ಮೆಲಿಟಸ್ನಿಂದ, ಸಂಕ್ಷಿಪ್ತವಾಗಿ ಹೇಳುವುದಾದರೆ ಮಧುಮೇಹ ಪೀಡಿತನಾಗಿದ್ದನು. ಈ ರಾಸಾಯನಿಕ ಅಸಮತೋಲನವು, ನಿರ್ದಿಷ್ಟ ಪೌಷ್ಟಿಕಾಂಶಗಳನ್ನು ಅದರಲ್ಲಿಯೂ ಪ್ರಾಮುಖ್ಯವಾಗಿ ಗ್ಲೂಕೋಸ್ ಎಂದು ಕರೆಯಲ್ಪಡುವ ರಕ್ತದಲ್ಲಿನ ಸಕ್ಕರೆ ಅಂಶವನ್ನು ವಿನಿಯೋಗಿಸುವ ದೇಹದ ಸಾಮರ್ಥ್ಯಕ್ಕೆ ಬೆದರಿಕೆಯೊಡ್ಡುತ್ತದೆ. ಕೆನ್ ತನ್ನ ರಕ್ತದಲ್ಲಿನ ಸಕ್ಕರೆ ಅಂಶವು ಹತೋಟಿಗೆ ಬರುವ ತನಕ ಆರು ವಾರಗಳನ್ನು ಆಸ್ಪತ್ರೆಯಲ್ಲಿ ಕಳೆದನು.
ಈ ಘಟನೆಯು ಸಂಭವಿಸಿ 50ಕ್ಕಿಂತಲೂ ಹೆಚ್ಚು ವರುಷಗಳು ಕಳೆದಿವೆ, ಮತ್ತು ಈ ಅವಧಿಯಲ್ಲಿ ಔಷಧೋಪಚಾರದಲ್ಲಿ ಗಣನೀಯವಾದ ಪ್ರಗತಿಯಾಗಿದೆ. ಹಾಗಿದ್ದರೂ, ಕೆನ್ ಈಗಲೂ ಮಧುಮೇಹದಿಂದ ಕಷ್ಟಾನುಭವಿಸುತ್ತಿದ್ದಾನೆ, ಮತ್ತು ಈ ರೀತಿಯ ಕಷ್ಟವನ್ನು ಅವನೊಬ್ಬನು ಮಾತ್ರ ಅನುಭವಿಸುತ್ತಿಲ್ಲ. ಲೋಕವ್ಯಾಪಕವಾಗಿ 14 ಕೋಟಿಗಿಂತಲೂ ಹೆಚ್ಚಿನ ಜನರು ಈ ಅಸ್ವಸ್ಥತೆಯಿಂದ ಬಾಧಿತರಾಗಿದ್ದಾರೆ ಎಂದು ಅಂದಾಜುಮಾಡಲಾಗಿದೆ ಮತ್ತು ಲೋಕಾರೋಗ್ಯ ಸಂಸ್ಥೆಗನುಸಾರ 2025ರೊಳಗಾಗಿ ಈ ಸಂಖ್ಯೆಯು ಇಮ್ಮಡಿಯಾಗಸಾಧ್ಯವಿದೆ. ಸಹಜವಾಗಿಯೇ, ಮಧುಮೇಹದ ಹಬ್ಬುವಿಕೆಯಿಂದ ಪರಿಣತರು ಬಹಳ ಚಿಂತಿತರಾಗಿದ್ದಾರೆ. ಅಮೆರಿಕದಲ್ಲಿನ ಮಧುಮೇಹ ಚಿಕಿತ್ಸಾ ಕೇಂದ್ರದ ಸಹನಿರ್ದೇಶಕಿಯಾಗಿರುವ ಡಾ. ರಾಬಿನ್ ಎಸ್. ಗೋಲ್ಯಂಡ್ ತಿಳಿಸುವುದು: “ನಾವು ನೋಡಲಾರಂಭಿಸಿರುವ ಮಧುಮೇಹ ಪೀಡಿತರ ಸಂಖ್ಯೆಯಿಂದ ತೋರಿಬರುವುದೇನೆಂದರೆ ಇದೊಂದು ಸಾಂಕ್ರಮಿಕ ರೋಗದ ಆರಂಭವಾಗಿರಸಾಧ್ಯವಿದೆ.”
ಲೋಕದಾದ್ಯಂತದಿಂದ ಬಂದಿರುವ ಮಾಹಿತಿಯ ಈ ಸಂಕ್ಷಿಪ್ತ ವರದಿಗಳನ್ನು ಪರಿಗಣಿಸಿರಿ:
ಆಸ್ಟ್ರೇಲಿಯ: ಆಸ್ಟ್ರೇಲಿಯದ ಅಂತಾರಾಷ್ಟ್ರೀಯ ಮಧುಮೇಹ ಸಂಸ್ಥೆಗನುಸಾರ, “21ನೆಯ ಶತಮಾನದಲ್ಲಿ, ಪಂಥಾಹ್ವಾನದಾಯಕವಾದ ಅತಿ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವು ಒಂದಾಗಿದೆ.”
ಭಾರತ: ಕಡಿಮೆಪಕ್ಷ ಮೂರು ಕೋಟಿ ಜನರಿಗೆ ಮಧುಮೇಹವಿದೆ. ವೈದ್ಯರೊಬ್ಬರು ತಿಳಿಸುವುದು: “ಸುಮಾರು 15 ವರುಷಗಳ ಹಿಂದೆ, 40 ವರುಷಕ್ಕಿಂತ ಕಡಿಮೆ ಪ್ರಾಯದ ಮಧುಮೇಹ ಪೀಡಿತರನ್ನು ನಮ್ಮಲ್ಲಿ ಕಾಣುವುದು ಬಹಳ ಕಷ್ಟಕರವಾಗಿತ್ತು. ಆದರೆ ಇಂದು ಇಬ್ಬರು ಮಧುಮೇಹ ಪೀಡಿತರಲ್ಲಿ ಒಬ್ಬ ವ್ಯಕ್ತಿಯು 40 ವರುಷಕ್ಕಿಂತ ಕಡಿಮೆ ಪ್ರಾಯದವನಾಗಿದ್ದಾನೆ.”
ಸಿಂಗಾಪುರ್: 30 ಮತ್ತು 69ರ ಮಧ್ಯದ ವಯೋಮಾನದವರಲ್ಲಿ ಸುಮಾರು ಮೂರರಲ್ಲೊಂದು ಭಾಗದಷ್ಟು ಜನರಿಗೆ ಮಧುಮೇಹವಿದೆ. ಅನೇಕ ಮಕ್ಕಳಿಗೆ—ಕೆಲವರು ಹತ್ತು ವರ್ಷ ಪ್ರಾಯದಷ್ಟು ಎಳೆಯರು—ಮಧುಮೇಹವಿದೆಯೆಂದು ಪತ್ತೆಹಚ್ಚಲಾಗಿದೆ.
ಅಮೆರಿಕ: ಬಹುಮಟ್ಟಿಗೆ 1.6 ಕೋಟಿ ಜನರು ಮಧುಮೇಹದಿಂದ ಬಾಧಿತರಾಗಿದ್ದಾರೆ, ಮತ್ತು ಪ್ರತಿ ವರುಷ ಸುಮಾರು 8,00,000 ಹೊಸ ರೋಗಿಗಳನ್ನು ಪತ್ತೆಹಚ್ಚಲಾಗುತ್ತದೆ. ಇನ್ನೂ ಲಕ್ಷಾಂತರ ಜನರಿಗೆ ಈ ರೋಗವಿದೆ, ಆದರೆ ಅದು ಅವರಿಗೆ ಇನ್ನೂ ತಿಳಿದಿಲ್ಲ.
ಮಧುಮೇಹ ರೋಗನಿರ್ಣಯಿಸಲ್ಪಡುವ ಬಹಳಷ್ಟು ಸಮಯದ ಮುಂಚೆಯೇ ವ್ಯಕ್ತಿಯೊಬ್ಬನು ಇದರಿಂದ ಬಾಧಿತನಾಗಿರಬಹುದಾದ ಕಾರಣ, ಇದರ ಚಿಕಿತ್ಸೆಯು ಇನ್ನಷ್ಟು ಕಷ್ಟಕರವಾಗಿರುತ್ತದೆ. “ಪ್ರಾರಂಭದ ಲಕ್ಷಣಗಳು ಗಂಭೀರವಾಗಿರದ ಕಾರಣ, ಮಧುಮೇಹವು ಅನೇಕವೇಳೆ ಗುರುತಿಸಲ್ಪಡದೆ ಹೋಗಬಹುದು” ಎಂದು ಏಷಿಯ ವೀಕ್ ಪತ್ರಿಕೆಯು ತಿಳಿಸುತ್ತದೆ. ಆದುದರಿಂದ, ಮಧುಮೇಹವನ್ನು “ಮೌನ ಹಂತಕ” ಎಂದು ಕರೆಯಲಾಗುತ್ತದೆ.
ಈ ರೋಗದ ಹಬ್ಬುವಿಕೆಯನ್ನು ಮತ್ತು ತೀವ್ರತೆಯನ್ನು ಗಮನದಲ್ಲಿಟ್ಟು, ಮುಂದಿನ ಲೇಖನಗಳು ಈ ಪ್ರಶ್ನೆಗಳನ್ನು ಉತ್ತರಿಸಲಿವೆ:
●ಮಧುಮೇಹವನ್ನು ಯಾವುದು ಉಂಟುಮಾಡುತ್ತದೆ?
●ಈ ರೋಗವಿರುವವರು ಅದನ್ನು ಹೇಗೆ ನಿಭಾಯಿಸಬಲ್ಲರು? (g03 5/08)
[ಪುಟ 4ರಲ್ಲಿರುವ ಚೌಕ/ಚಿತ್ರ]
ಹೆಸರಿನ ಹಿಂದಿರುವ ಅರ್ಥ
“ಡಯಾಬಿಟೀಸ್ ಮೆಲಿಟಸ್” ಎಂಬುದು “ಹಾದುಹೋಗು” ಎಂಬ ಅರ್ಥವುಳ್ಳ ಗ್ರೀಕ್ ಪದದಿಂದ ಮತ್ತು “ಜೇನಿನಂತೆ ಸಿಹಿ” ಎಂಬ ಅರ್ಥವುಳ್ಳ ಲ್ಯಾಟಿನ್ ಪದದಿಂದ ಬಂದಿದೆ. ಈ ಪದಗಳು ಸೂಕ್ತವಾಗಿಯೇ ಈ ರೋಗವನ್ನು ವರ್ಣಿಸುತ್ತವೆ. ಏಕೆಂದರೆ ಮಧುಮೇಹವಿರುವ ವ್ಯಕ್ತಿಯು ನೀರನ್ನು ಕುಡಿದಾಗ, ಅದು ಅವನ ಬಾಯಿಯಿಂದ ಹೀರಲ್ಪಟ್ಟು ಮೂತ್ರಕೋಶದ ಮೂಲಕವಾಗಿ ತತ್ಕ್ಷಣವೇ ದೇಹದಿಂದ ಹೊರಕ್ಕೆ ಹಾದುಹೋಗುತ್ತಿರುವಂತೆ ಇರುತ್ತದೆ. ಅಷ್ಟುಮಾತ್ರವಲ್ಲದೆ, ಮೂತ್ರವು ಸಕ್ಕರೆ ಅಂಶವನ್ನು ಹೊಂದಿರುವ ಕಾರಣ ಸಿಹಿಯಾಗಿರುತ್ತದೆ. ವಾಸ್ತವದಲ್ಲಿ, ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸಾವಿಧಾನಗಳನ್ನು ಕಂಡುಹಿಡಿಯುವ ಮುಂಚೆ, ರೋಗಿಯ ಮೂತ್ರವನ್ನು ಇರುವೆ ಗೂಡಿನ ಹತ್ತಿರ ಹೊಯ್ಯುವ ಮೂಲಕ ಅವನಿಗೆ ಮಧುಮೇಹವಿದೆಯೋ ಎಂದು ಪರೀಕ್ಷಿಸಲಾಗುತ್ತಿತ್ತು. ಇರುವೆಗಳು ಆಕರ್ಷಿಸಲ್ಪಟ್ಟರೆ, ಮೂತ್ರದಲ್ಲಿ ಸಕ್ಕರೆ ಅಂಶವಿದೆ ಎಂಬುದನ್ನು ಇದು ಸೂಚಿಸುತ್ತಿತ್ತು.