ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಕಿತ್ಸೆಯ ಜಟಿಲತೆ

ಚಿಕಿತ್ಸೆಯ ಜಟಿಲತೆ

ಚಿಕಿತ್ಸೆಯ ಜಟಿಲತೆ

“ಅಪಾಯರಹಿತವಾದ ಮಧುಮೇಹವಿಲ್ಲ. ಎಲ್ಲಾ ರೀತಿಯ ಮಧುಮೇಹವೂ ಅಪಾಯಕಾರಿಯಾಗಿದೆ.”​—⁠ಅಮೆರಿಕದ ಮಧುಮೇಹ ಸಂಘದ ಆ್ಯನ್‌ ಡೇಲಿ.

“ನಿಮ್ಮ ರಕ್ತಪರೀಕ್ಷೆಯ ವರದಿಯು ಗಮನಾರ್ಹವಾದ ಅಸಾಮಾನ್ಯತೆಗಳನ್ನು ತೋರಿಸುತ್ತವೆ. ನಿಮಗೆ ಕೂಡಲೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.” ವೈದ್ಯರ ಈ ಮಾತುಗಳು ಡೆಬ್ರಳಿಗೆ ಸಿಡಿಲು ಬಡಿದಂತಾಯಿತು. “ಅಂದು ಇಡೀ ರಾತ್ರಿ, ತಪಾಸಣೆಯಲ್ಲಿ ಎಲ್ಲೋ ತಪ್ಪಾಗಿರಬೇಕೆಂದು ನಾನು ಆಲೋಚಿಸುತ್ತಾ ಇದ್ದೆ. ಖಂಡಿತವಾಗಿಯೂ ನಾನು ಅಸ್ವಸ್ಥಳಾಗಿರಸಾಧ್ಯವಿಲ್ಲ ಎಂದು ಸ್ವತಃ ಹೇಳಿಕೊಳ್ಳುತ್ತಿದ್ದೆ,” ಎಂಬುದಾಗಿ ಅವಳು ತಿಳಿಸುತ್ತಾಳೆ.

ಅನೇಕ ಜನರಂತೆ ಡೆಬ್ರಳು ಸಹ ತಾನು ಸಾಕಷ್ಟುಮಟ್ಟಿಗೆ ಆರೋಗ್ಯವಂತಳಾಗಿದ್ದೇನೆಂದು ನೆನಸಿದ್ದರಿಂದ ಪೀಡಿಸುತಿದ್ದ ರೋಗಲಕ್ಷಣಗಳನ್ನು ಅವಳು ಅಲಕ್ಷಿಸಿದ್ದಳು. ಅಲರ್ಜಿಯ ನಿವಾರಣೆಗಾಗಿ ತಾನು ತೆಗೆದುಕೊಳ್ಳುತ್ತಿದ್ದ ಆ್ಯನ್ಟಿಹಿಸ್ಟಮಿನ್‌ ಔಷಧವೇ ತನಗೆ ವಿಪರೀತ ಬಾಯಾರಿಕೆಯಾಗಲು ಕಾರಣವೆಂದು ಅವಳು ನೆನೆಸಿದ್ದಳು. ತಾನು ಅತಿಯಾಗಿ ನೀರು ಕುಡಿಯುತ್ತಿದ್ದದರಿಂದ ಪದೇ ಪದೇ ಮೂತ್ರವಿಸರ್ಜನೆಯಾಗುತ್ತದೆ ಎಂದು ಭಾವಿಸಿದ್ದಳು. ಮತ್ತು ಆಯಾಸಗೊಳ್ಳುವುದರ ಬಗ್ಗೆಯಾದರೋ, ಐಹಿಕ ಕೆಲಸವನ್ನು ಮಾಡುತ್ತಿರುವ ಯಾವ ತಾಯಿ ತಾನೇ ಆಯಾಸಗೊಳ್ಳುವುದಿಲ್ಲ?

ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಮಧುಮೇಹವೇ ಕಾರಣವೆಂಬುದನ್ನು ಅವಳ ರಕ್ತಪರೀಕ್ಷೆಯು ತೋರಿಸಿಕೊಟ್ಟಿತು. ರೋಗನಿರ್ಣಯಿಸಲ್ಪಟ್ಟಾಗ ಅದನ್ನು ಅಂಗೀಕರಿಸಲು ಡೆಬ್ರಳಿಗೆ ಬಹಳ ಕಷ್ಟವಾಯಿತು. “ನನ್ನ ಅಸ್ವಸ್ಥತೆಯ ಕುರಿತು ನಾನು ಯಾರಿಗೂ ತಿಳಿಸಲಿಲ್ಲ. ರಾತ್ರಿಯಲ್ಲಿ, ಕುಟುಂಬದ ಇತರ ಸದಸ್ಯರು ನಿದ್ರಿಸಿದ ನಂತರ, ಹೊರಗಿನ ಕತ್ತಲೆಯನ್ನು ದಿಟ್ಟಿಸುತ್ತಾ ಅಳುತ್ತಾ ಕುಳಿತುಕೊಳ್ಳುತ್ತಿದ್ದೆ” ಎಂದು ಅವಳು

ಹೇಳುತ್ತಾಳೆ. ತಮಗೆ ಮಧುಮೇಹವಿದೆ ಎಂದು ತಿಳಿದೊಡನೆ ಕೆಲವರು ಡೆಬ್ರಳಂತೆ ಖಿನ್ನತೆ ಮತ್ತು ಕೋಪದೊಂದಿಗೆ, ಭಾವನೆಗಳ ಉಕ್ಕಿಹರಿಯುವ ಸರೋವರದಲ್ಲಿ ಮುಳುಗಿಹೋಗುತ್ತಾರೆ. ಕ್ಯಾರೆನ್‌ ಎಂಬವಳು ಹೇಳುವುದು: “ಹಾಗಿರಲು ಸಾಧ್ಯವೇ ಇಲ್ಲ, ಖಂಡಿತಸಾಧ್ಯವಿಲ್ಲ ಎಂಬ ಭಾವನೆಯಿಂದ ತುಂಬಿದ ಕಣ್ಣೀರುಭರಿತ ಸಮಯಾವಧಿಯನ್ನು ನಾನು ಅನುಭವಿಸಿದೆ.”

ಅನ್ಯಾಯವಾದ ಹೊಡೆತವಾಗಿದೆಯೆಂದು ತೋರುವ ವಿಷಯಗಳಿಗೆ ಇವುಗಳು ಸಹಜವಾದ ಪ್ರತಿಕ್ರಿಯೆಗಳಾಗಿವೆ. ಹಾಗಿದ್ದರೂ, ಮಧುಮೇಹ ಪೀಡಿತರು ಇತರರ ನೆರವಿನಿಂದ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲರು. ಕ್ಯಾರೆನ್‌ ಹೇಳುವುದು: “ನನ್ನ ಪರಿಸ್ಥಿತಿಯನ್ನು ಅಂಗೀಕರಿಸಲು ನನಗೆ ನನ್ನ ನರ್ಸ್‌ ಸಹಾಯಮಾಡಿದಳು. ಇಂಥ ಸಂದರ್ಭದಲ್ಲಿ ಅಳುವುದು ಸಹಜವೆಂದು ಅವಳು ನನಗೆ ಸಾಂತ್ವನ ನೀಡಿದಳು. ಈ ರೀತಿಯಲ್ಲಿ ನನ್ನ ಭಾವನೆಗಳನ್ನು ಹೊರಹಾಕುವುದು, ಪರಿಸ್ಥಿತಿಗೆ ಹೊಂದಿಕೊಳ್ಳಲು ನನಗೆ ಸಹಾಯಮಾಡಿತು.”

ಇದೇಕೆ ಗಂಭೀರವಾಗಿದೆ?

ಮಧುಮೇಹವು, “ಜೀವವೆಂಬ ಗಾಡಿಯ ಇಂಜಿನ್‌ನ ಹಾಳಾಗುವಿಕೆ” ಎಂದು ಕರೆಯಲ್ಪಟ್ಟಿದೆ ಮತ್ತು ಇದು ಸೂಕ್ತವಾಗಿದೆ. ಏಕೆಂದರೆ ದೇಹಕ್ಕೆ ಗ್ಲೂಕೋಸ್‌ ಅನ್ನು ದಹಿಸಲು ಅಸಾಧ್ಯವಾದಾಗ, ಅನೇಕ ಪ್ರಾಮುಖ್ಯವಾದ ಕಾರ್ಯವಿಧಾನಗಳು ಶಿಥಿಲಗೊಳ್ಳುತ್ತವೆ ಮತ್ತು ಇದು ಕೆಲವೊಮ್ಮೆ ಜೀವಕ್ಕೆ ಬೆದರಿಕೆಯನ್ನೊಡ್ಡುವ ಪರಿಣಾಮಗಳನ್ನೂ ಉಂಟುಮಾಡಸಾಧ್ಯವಿದೆ. ಡಾ. ಹಾರ್ವಿ ಕ್ಯಾಟ್‌ಸೆಫ್‌ ಹೇಳುವುದು: “ಜನರು ನೇರವಾಗಿ ಮಧುಮೇಹದಿಂದ ಸಾಯುವುದಿಲ್ಲ, ಅವರು ಅದರಿಂದುಂಟಾಗುವ ಜಟಿಲತೆಗಳ ಕಾರಣ ಸಾಯುತ್ತಾರೆ. ಜಟಿಲತೆಗಳನ್ನು ತಡೆಗಟ್ಟುವುದರಲ್ಲಿ ನಾವು ನಿಷ್ಣಾತರಾಗಿರುವುದಾದರೂ, ಅದು ಸಂಭವಿಸಿದ ನಂತರ ಅದನ್ನು ಗುಣಪಡಿಸುವುದರಲ್ಲಿ ನಾವು ನಿಷ್ಣಾತರಲ್ಲ.” *

ಮಧುಮೇಹದಿಂದ ಬಾಧಿತರಾದವರಿಗೆ ಗುಣವಾಗುವ ನಿರೀಕ್ಷೆಯಿದೆಯೋ? ಇದೆ. ಆದರೆ, ಅವರು ತಮ್ಮ ಸಮಸ್ಯೆಯ ಗಂಭೀರತೆಯನ್ನು ಅರಿತು, ಅದರ ಚಿಕಿತ್ಸೆಯ ಕಾರ್ಯಕ್ರಮಕ್ಕೆ ಅಂಟಿಕೊಂಡರೆ ಮಾತ್ರ. *

ಆಹಾರಪಥ್ಯ ಮತ್ತು ವ್ಯಾಯಾಮ

ಟೈಪ್‌ 1 ಮಧುಮೇಹವನ್ನು (ಇನ್ಸುಲಿನ್‌ ಅವಲಂಬಿತ ಮಧುಮೇಹ) ತಡೆಗಟ್ಟಸಾಧ್ಯವಿಲ್ಲದಿದ್ದರೂ, ವಿಜ್ಞಾನಿಗಳು ಆನುವಂಶಿಕ ಅಪಾಯ ಅಂಶಗಳನ್ನು ಅಧ್ಯಯನಮಾಡುತ್ತಿದ್ದಾರೆ ಮತ್ತು ಸೋಂಕುರಕ್ಷಣಾ ಆಕ್ರಮಣವನ್ನು ತಡೆಗಟ್ಟಲು ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. (ಪುಟ 10ರಲ್ಲಿರುವ “ಗ್ಲೂಕೋಸ್‌ನ ಪಾತ್ರ” ಎಂಬ ಚೌಕವನ್ನು ನೋಡಿರಿ.) ಮಧುಮೇಹ​—⁠ನಿಮ್ಮ ಭಾವನೆಗಳ ಮತ್ತು ನಿಮ್ಮ ಆರೋಗ್ಯದ ಚಿಂತೆವಹಿಸುವುದು (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುವುದು: “ಇನ್ಸುಲಿನ್‌ ಅವಲಂಬಿತವಲ್ಲದ ಮಧುಮೇಹವನ್ನು ತಡೆಗಟ್ಟಲು ಸಾಧ್ಯವಿದೆ. ಇದು ತಮಗೆ ಆನುವಂಶಿಕವಾಗಿ ಬರಬಹುದೆಂದು ಸಂಶಯಿಸುತ್ತಿರುವ ಅನೇಕರು, ಕೇವಲ ಸಂತುಲಿತವಾದ ಆಹಾರಪಥ್ಯವನ್ನು ಸೇವಿಸುವ ಮತ್ತು ಕ್ರಮವಾಗಿ ವ್ಯಾಯಾಮಮಾಡುವ ಮೂಲಕ ಶಾರೀರಿಕವಾಗಿ ಆರೋಗ್ಯಕರವಾಗಿಯೂ ಸೂಕ್ತವಾದ ದೇಹತೂಕವನ್ನು ಹೊಂದಿದವರಾಗಿಯೂ ಇದ್ದು, ಮಧುಮೇಹದ ಯಾವುದೇ ಲಕ್ಷಣವನ್ನು ಅನುಭವಿಸುವುದನ್ನು ತಡೆಗಟ್ಟಿದ್ದಾರೆ.” *

ವ್ಯಾಯಾಮದ ಮೌಲ್ಯವನ್ನು ಒತ್ತಿಹೇಳುತ್ತಾ, ಸ್ತ್ರೀಯರನ್ನು ಒಳಗೊಂಡ ಒಂದು ವಿಸ್ತೃತ ಅಧ್ಯಯನದ ಕುರಿತಾಗಿ ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಶನ್‌ ವರದಿಮಾಡಿತು. ಆ ಅಧ್ಯಯನವು ತೋರಿಸಿದ್ದೇನೆಂದರೆ, “ಕೊಂಚ ಅವಧಿಯ ಶಾರೀರಿಕ ಚಟುವಟಿಕೆಯು, 24 ತಾಸುಗಳಿಗಿಂತ ಹೆಚ್ಚು ಸಮಯದ ವರೆಗೆ ಜೀವಕೋಶವು ಇನ್ಸುಲಿನ್‌ ನಿಯಂತ್ರಿತ ಗ್ಲೂಕೋಸ್‌ ಅನ್ನು ಹೀರಿಕೊಳ್ಳುವುದನ್ನು ಹೆಚ್ಚಿಸುತ್ತದೆ.” ಆದುದರಿಂದ, ಆ ವರದಿಯು ಈ ತೀರ್ಮಾನಕ್ಕೆ ಬರುತ್ತದೆ: “ನಡಿಗೆ ಮತ್ತು ಹುರುಪಿನ ಚಟುವಟಿಕೆ, ಇವೆರಡೂ ಹೆಂಗಸರಲ್ಲಿ ಟೈಪ್‌ 2 ಮಧುಮೇಹದ ಅಪಾಯವನ್ನು ಬಹಳವಾಗಿ ಕಡಿಮೆಗೊಳಿಸುವುದರಲ್ಲಿ ಸಹಾಯಕಾರಿಯಾಗಿವೆ.” ಒಂದುವೇಳೆ ವಾರದ ಎಲ್ಲಾ ದಿನಗಳಲ್ಲಿ ಸಾಧ್ಯವಾಗದಿದ್ದರೆ ಹೆಚ್ಚಿನ ದಿನಗಳಲ್ಲಿ, ಕನಿಷ್ಠಪಕ್ಷ 30 ನಿಮಿಷಗಳ ಒಳ್ಳೆಯ ಶಾರೀರಿಕ ಚಟುವಟಿಕೆಯನ್ನು ಸಂಶೋಧಕರು ಶಿಫಾರಸ್ಸುಮಾಡುತ್ತಾರೆ. ಈ ವ್ಯಾಯಾಮದಲ್ಲಿ, ನಡಿಗೆಯಂತಹ ಅತಿ ಸರಳ ವ್ಯಾಯಾಮವು ಸೇರಿರಸಾಧ್ಯವಿದೆ. ಈ ವ್ಯಾಯಾಮದ ಕುರಿತು ಅಮೆರಿಕನ್‌ ಡಯಾಬಿಟಿಸ್‌ ಅಸೋಸಿಯೇಶನ್‌ ಕಮ್‌ಪ್ಲೀಟ್‌ ಗೈಡ್‌ ಟು ಡಯಾಬಿಟಿಸ್‌ ತಿಳಿಸುವುದು: “ಇದು ಒಂದು ಉತ್ತಮವಾದ, ಹಿತಕರವಾದ, ಮತ್ತು ಅತಿ ಕಡಿಮೆ ಖರ್ಚಿನ ವ್ಯಾಯಾಮವಾಗಿದೆ.”

ಹಾಗಿದ್ದರೂ, ಈಗಾಗಲೇ ಮಧುಮೇಹದಿಂದ ಪೀಡಿತರಾಗಿರುವವರು ವೈದ್ಯರಿಂದ ತಿಳಿಸಲ್ಪಟ್ಟಿರುವ ವ್ಯಾಯಾಮವನ್ನು ಮಾತ್ರ ಮಾಡಬೇಕು. ಇದಕ್ಕೆ ಒಂದು ಕಾರಣ, ಮಧುಮೇಹವು ನಾಳವ್ಯೂಹ ವ್ಯವಸ್ಥೆಗೂ ನರಗಳಿಗೂ ಹಾನಿಯನ್ನುಂಟುಮಾಡುತ್ತದೆ. ಹೀಗೆ, ರಕ್ತಪರಿಚಲನೆ ಮತ್ತು ಸ್ಪರ್ಶೇಂದ್ರೀಯವು ಬಾಧಿಸಲ್ಪಡುತ್ತದೆ. ಆದುದರಿಂದ, ಪಾದಗಳಲ್ಲಿ ಸಣ್ಣ ಗಾಯವಾದರೂ ತಿಳಿಯದೇ ಇರಬಹುದು, ಮತ್ತು ನಂತರ ಅಲ್ಲಿ ಸೋಂಕುತಗಲಿ, ಹುಣ್ಣಾಗಬಹುದು. ಇದಕ್ಕೆ ಕೂಡಲೆ ಚಿಕಿತ್ಸೆಯು ನೀಡಲ್ಪಡದಿದ್ದರೆ, ಅಂಗಚ್ಛೇದನಕ್ಕೆ ನಡಿಸುವ ಒಂದು ಗಂಭೀರ ಸನ್ನಿವೇಶವಾಗಿ ಪರಿಣಮಿಸಬಹುದು. *

ಆದರೂ, ಒಬ್ಬ ವ್ಯಕ್ತಿಯು ಮಧುಮೇಹವನ್ನು ಹತೋಟಿಯಲ್ಲಿಡಲು ವ್ಯಾಯಾಮ ಕಾರ್ಯಕ್ರಮವು ಸಹಾಯನೀಡಬಲ್ಲದು. “ಕ್ರಮವಾಗಿ ವ್ಯಾಯಾಮ ಮಾಡುವುದರಿಂದ ಸಿಗುವ ಪ್ರಯೋಜನಗಳ ಕುರಿತು ಸಂಶೋಧಕರು ಹೆಚ್ಚು ಅಧ್ಯಯನ ಮಾಡಿದಷ್ಟು ಹೆಚ್ಚು ಉತ್ತಮ ಮಾಹಿತಿಯನ್ನು ಪಡೆಯುತ್ತಿದ್ದಾರೆ” ಎಂದು ಎಡಿಎ ಕಮ್‌ಪ್ಲೀಟ್‌ ಗೈಡ್‌ ಟು ಡಯಾಬಿಟಿಸ್‌ ಹೇಳುತ್ತದೆ.

ಇನ್ಸುಲಿನ್‌ ಚಿಕಿತ್ಸೆ

ತಮ್ಮ ಆಹಾರಪಥ್ಯ ಮತ್ತು ವ್ಯಾಯಾಮ ಕಾರ್ಯಕ್ರಮದೊಂದಿಗೆ, ಅನೇಕ ಮಧುಮೇಹ ಪೀಡಿತರು ಪ್ರತಿದಿನ ಗ್ಲೂಕೋಸ್‌ ಪ್ರಮಾಣವನ್ನು ಪರೀಕ್ಷಿಸಬೇಕು ಮತ್ತು ದಿನದಲ್ಲಿ ಅನೇಕಬಾರಿ ಇನ್ಸುಲಿನ್‌ ಚುಚ್ಚಿಕೊಳ್ಳಬೇಕು. ಆಹಾರಪಥ್ಯದಿಂದ ಮತ್ತು ವ್ಯಾಯಾಮದ ಒಳ್ಳೆಯ ರೂಢಿಯಿಂದಾಗಿ ದೊರೆತ ಉತ್ತಮ ಆರೋಗ್ಯದ ಫಲಿತಾಂಶವಾಗಿ, ಟೈಪ್‌ 2 ಮಧುಮೇಹ ಪೀಡಿತರು ಕಡಿಮೆಪಕ್ಷ ಸ್ವಲ್ಪ ಸಮಯಕ್ಕಾಗಿಯಾದರೂ ಇನ್ಸುಲಿನ್‌ ಚಿಕಿತ್ಸೆಯನ್ನು ನಿಲ್ಲಿಸಶಕ್ತರಾಗುವರು. * ಟೈಪ್‌ 1 ಮಧುಮೇಹವಿದ್ದ ಕ್ಯಾರೆನ್‌, ತಾನು ಚುಚ್ಚಿಕೊಳ್ಳುವ ಇನ್ಸುಲಿನ್‌ನ ಕಾರ್ಯ ಸಮರ್ಥತೆಯನ್ನು ವ್ಯಾಯಾಮವು ಹೆಚ್ಚಿಸಿದೆ ಎಂಬುದನ್ನು ಕಂಡುಕೊಂಡಳು. ಇದರ ಪರಿಣಾಮವಾಗಿ, ಅವಳು ಪ್ರತಿದಿನದ ತನ್ನ ಇನ್ಸುಲಿನ್‌ ಆವಶ್ಯಕತೆಯನ್ನು 20 ಪ್ರತಿಶತದಷ್ಟು ಕಡಿಮೆಗೊಳಿಸಶಕ್ತಳಾದಳು.

ಹಾಗಿದ್ದರೂ, ಇನ್ಸುಲಿನ್‌ನ ಅಗತ್ಯವಿದ್ದಲ್ಲಿ ಮಧುಮೇಹ ಪೀಡಿತನು/ಳು ನಿರುತ್ಸಾಹಗೊಳ್ಳಲು ಯಾವ ಕಾರಣವೂ ಇಲ್ಲ. “ಇನ್ಸುಲಿನ್‌ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯು ಬಂದಲ್ಲಿ, ಅದರರ್ಥ ನೀವು ಅಷ್ಟರ ತನಕ ಅಜಾಗ್ರತೆಯನ್ನು ತೋರಿಸಿದ್ದೀರೆಂದಲ್ಲ,” ಎಂದು ಅನೇಕ ಮಧುಮೇಹ ಪೀಡಿತರಿಗೆ ಚಿಕಿತ್ಸೆನೀಡಿದ ರೆಜಿಸ್ಟರ್ಡ್‌ ನರ್ಸ್‌ ಮೇರಿ ಆ್ಯನ್‌ ಹೇಳುತ್ತಾಳೆ. “ನಿಮಗೆ ಯಾವುದೇ ರೀತಿಯ ಮಧುಮೇಹವಿದ್ದರೂ, ನೀವು ಜಾಗರೂಕತೆಯಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುವುದಾದರೆ ನಂತರ ಬರಬಹುದಾದ ಇತರ ಆರೋಗ್ಯ ಸಮಸ್ಯೆಗಳನ್ನು ನೀವು ಕಡಿಮೆಗೊಳಿಸಸಾಧ್ಯವಿದೆ.” ವಾಸ್ತವದಲ್ಲಿ, ತಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಟ್ಟಿರುವ ಟೈಪ್‌ 1 ಮಧುಮೇಹ ಪೀಡಿತರಿಗೆ, “ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆ, ಮೂತ್ರಜನಕಾಂಗದ ಸಮಸ್ಯೆ, ಮತ್ತು ನರರೋಗ ಮುಂತಾದವುಗಳು ಬಹಳವಾಗಿ ಕಡಿಮೆಯಾಗಿರುತ್ತವೆ” ಎಂದು ಇತ್ತೀಚಿನ ಒಂದು ಅಧ್ಯಯನವು ಪ್ರಕಟಪಡಿಸಿತು. ಉದಾಹರಣೆಗೆ, ಕಣ್ಣಿನ ಸಮಸ್ಯೆಯು 76 ಪ್ರತಿಶತದಷ್ಟು ಕಡಿಮೆಯಾಗಿದೆ! ಟೈಪ್‌ 2 ಮಧುಮೇಹ ಪೀಡಿತರು ಸಹ ತಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುವ ಮೂಲಕ ಅದೇ ರೀತಿಯ ಪ್ರಯೋಜನಗಳನ್ನು ಅನುಭವಿಸುತ್ತಾರೆ.

ಇನ್ಸುಲಿನ್‌ ಚಿಕಿತ್ಸೆಯನ್ನು ಸುಲಭಕರವಾದದ್ದಾಗಿ ಮತ್ತು ಕಡಿಮೆ ಅಹಿತಕರವಾದದ್ದಾಗಿ ಮಾಡುವ ಸಲುವಾಗಿ, ನೋವನ್ನು ಕಡಿಮೆಗೊಳಿಸುವ ಮೈಕ್ರೋಫೈನ್‌ ಸೂಜಿಗಳನ್ನು ಹೊಂದಿದ ಸಿರಿಂಜ್‌ಗಳು ಮತ್ತು ಇನ್ಸುಲಿನ್‌ ಪೆನ್‌ಗಳನ್ನು ಬಹಳವಾಗಿ ಉಪಯೋಗಿಸಲಾಗುತ್ತಿದೆ. “ಮೊದಲನೆಯ ಬಾರಿ ಚುಚ್ಚುವಾಗ ಬಹಳ ನೋವಾಗುತ್ತದೆ. ಆದರೆ ನಂತರ ನೋವಾಗುವುದಿಲ್ಲವೆಂದು ಹೆಚ್ಚಿನ ರೋಗಿಗಳು ಹೇಳುತ್ತಾರೆ,” ಎಂದು ಮೇರಿ ಆ್ಯನ್‌ ತಿಳಿಸುತ್ತಾಳೆ. ಮದ್ದನ್ನು ಚುಚ್ಚಿಕೊಳ್ಳುವುದರಲ್ಲಿ, ಗುಂಡಿಕ್ಕುವ ರೀತಿಯಲ್ಲಿ ಸೂಜಿಯನ್ನು ಚರ್ಮಕ್ಕೆ ನೋವಿಲ್ಲದೆ ಹೊಗ್ಗಿಸುವ ಉಪಕರಣ, ಇನ್ಸುಲಿನ್‌ ಅನ್ನು ಚರ್ಮದೊಳಕ್ಕೆ ಜೆಟ್‌ ಇಂಜೆಕ್ಟರ್‌ ಮೂಲಕ ಹೊಗ್ಗಿಸುವ ವಿಧ, ಮತ್ತು ಚುಚ್ಚಿಟ್ಟ ಸ್ಥಳದಲ್ಲಿಯೇ ಎರಡು ಅಥವಾ ಮೂರು ದಿನಗಳ ವರೆಗೆ ಇರುವ ತೂರುನಳಿಕೆಯನ್ನು ಉಪಯೋಗಿಸುತ್ತಾ ದ್ರವವನ್ನು ದೇಹಕ್ಕೆ ಸೇರಿಸುವುದು ಮುಂತಾದ ವಿಧಾನಗಳು ಸೇರಿವೆ. ಜೇಬಿನಲ್ಲಿಟ್ಟುಕೊಳ್ಳಬಲ್ಲ ಪೇಜರ್‌ ಗಾತ್ರದ ಇನ್ಸುಲಿನ್‌ ಪಂಪ್‌ ಇತ್ತೀಚಿನ ವರುಷಗಳಲ್ಲಿ ಬಹಳ ಜನಪ್ರಿಯವಾಗಿದೆ. ಪ್ರೋಗ್ರ್ಯಾಮ್‌ ಮಾಡಬಹುದಾದ ಈ ಉಪಕರಣವು, ದೇಹದ ಪ್ರತಿನಿತ್ಯ ಅಗತ್ಯಕ್ಕೆ ಅನುಸಾರವಾಗಿ ನಿರ್ದಿಷ್ಟ ಪ್ರಮಾಣದ ಇನ್ಸುಲಿನ್‌ ಅನ್ನು ತೂರುನಳಿಕೆಯ ಮೂಲಕ ಕಳುಹಿಸುತ್ತಾ ಇರುತ್ತದೆ. ಈ ರೀತಿ ದೇಹಕ್ಕೆ ಇನ್ಸುಲಿನ್‌ ರವಾನಿಸುವ ಕೆಲಸವು ಹೆಚ್ಚು ನಿಷ್ಕೃಷ್ಟವೂ ನಿರಾಯಾಸಕರವೂ ಆಗಿರುತ್ತದೆ.

ಕಲಿಯುತ್ತಾ ಇರಿ

ಇಷ್ಟೆಲ್ಲಾ ಹೇಳಿದ ನಂತರವೂ, ಮಧುಮೇಹಕ್ಕೆ ಯಾವುದೇ ಸಮಂಜಸವಾದ ಚಿಕಿತ್ಸೆಯಿಲ್ಲ. ಚಿಕಿತ್ಸೆಯ ಕುರಿತಾಗಿ ಪರಿಗಣಿಸುವಾಗ, ಪ್ರತಿಯೊಬ್ಬ ವ್ಯಕ್ತಿಯು ವೈಯಕ್ತಿಕ ನಿರ್ಣಯವನ್ನು ಮಾಡುವ ಮುನ್ನ ಅನೇಕ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು. “ನೀವು ವೈದ್ಯಕೀಯ ತಂಡದ ಪರಾಮರಿಕೆಯ ಕೆಳಗಿದ್ದರೂ, ನಿಮಗೆ ಯಾವ ರೀತಿಯಲ್ಲಿ ಚಿಕಿತ್ಸೆಯು ನೀಡಲ್ಪಡಬೇಕೆಂಬುದನ್ನು ನೀವೇ ನಿರ್ಣಯಿಸತಕ್ಕದ್ದು,” ಎಂದು ಮೇರಿ ಆ್ಯನ್‌ ಹೇಳುತ್ತಾಳೆ. ವಾಸ್ತವದಲ್ಲಿ, ಮಧುಮೇಹ ಪರಾಮರಿಕೆ ಎಂಬ ನಿಯತಕಾಲಿಕ ಪತ್ರಿಕೆಯು ತಿಳಿಸುವುದು: “ಕ್ರಮಬದ್ಧವಾದ ಸ್ವನಿರ್ವಾಹಣೆಯ ಶಿಕ್ಷಣವಿಲ್ಲದೆ ನೀಡಲಾಗುವ ಮಧುಮೇಹದ ವೈದ್ಯಕೀಯ ಚಿಕಿತ್ಸೆಯನ್ನು ಕೀಳ್ಮಟ್ಟದ ಮತ್ತು ಅನುಚಿತ ಪರಾಮರಿಕೆ ಎಂಬುದಾಗಿ ಹೇಳಸಾಧ್ಯವಿದೆ.”

ಮಧುಮೇಹ ಪೀಡಿತರು ತಮ್ಮ ರೋಗದ ಬಗ್ಗೆ ಎಷ್ಟು ಹೆಚ್ಚಾಗಿ ತಿಳಿದುಕೊಳ್ಳುತ್ತಾರೋ ಅಷ್ಟೇ ಹೆಚ್ಚಾಗಿ ಅವರು ತಮ್ಮ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಬಲ್ಲರು ಮತ್ತು ಆರೋಗ್ಯಕರವಾಗಿ ದೀರ್ಘಕಾಲ ಜೀವಿಸುವ ತಮ್ಮ ಪ್ರತೀಕ್ಷೆಯನ್ನು ಹೆಚ್ಚಿಸಬಲ್ಲರು. ಹಾಗಿದ್ದರೂ, ಪರಿಣಾಮಕಾರಿ ಶಿಕ್ಷಣವು ತಾಳ್ಮೆಯನ್ನು ಕೇಳಿಕೊಳ್ಳುತ್ತದೆ. ಮಧುಮೇಹ​—⁠ನಿಮ್ಮ ಭಾವನೆಗಳ ಮತ್ತು ನಿಮ್ಮ ಆರೋಗ್ಯದ ಚಿಂತೆವಹಿಸುವುದು (ಇಂಗ್ಲಿಷ್‌) ಎಂಬ ಪುಸ್ತಕವು ವಿವರಿಸುವುದು: “ಪ್ರತಿಯೊಂದು ವಿಷಯವನ್ನು ಒಮ್ಮಿಂದೊಮ್ಮೆ ಕಲಿಯಲು ಪ್ರಯತ್ನಿಸುವುದಾದರೆ ನೀವು ಗಲಿಬಿಲಿಗೊಳ್ಳುತ್ತೀರಿ ಮತ್ತು ಮಾಹಿತಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದಿಲ್ಲ. ಅಷ್ಟುಮಾತ್ರವಲ್ಲದೆ, ನೀವು ಕಲಿಯಬೇಕಾದ ಹೆಚ್ಚಿನ ಉಪಯುಕ್ತ ಮಾಹಿತಿಯು ಪುಸ್ತಕಗಳಲ್ಲಾಗಲಿ ಕಿರುಪುಸ್ತಕಗಳಲ್ಲಾಗಲಿ ಲಭ್ಯವಿರುವುದಿಲ್ಲ. ಬದಲಾಗಿ, ವಿವಿಧ ಪರಿಸ್ಥಿತಿಗಳಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವು ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದರ ಮೇಲೆ ಇದು ಅವಲಂಬಿಸಿದೆ. ಇದನ್ನು ಪರೀಕ್ಷಾ ಪ್ರಯೋಗವನ್ನು ಮಾಡಿ ಸಮಯದಾಟಿದಂತೆ ಕಲಿಯಸಾಧ್ಯವಿದೆ.”

ಉದಾಹರಣೆಗೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕೂಡಲೆ ಹೆಚ್ಚಿಸುವಂಥ ಒತ್ತಡಕ್ಕೆ ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಜಾಗರೂಕತೆಯಿಂದ ಗಮನಕೊಡುವ ಮೂಲಕ ನೀವು ಕಲಿಯಬಲ್ಲಿರಿ. “ನಾನು 50 ವರುಷಗಳಿಂದ ಈ ನನ್ನ ಮಧುಮೇಹ ದೇಹದೊಂದಿಗೆ ಜೀವಿಸುತ್ತಿದ್ದೇನೆ ಮತ್ತು ಅದು ನನಗೆ ಏನನ್ನು ಹೇಳುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ” ಎಂದು ಕೆನ್‌ ಹೇಳುತ್ತಾರೆ. ಅವರ ದೇಹವು ಏನನ್ನು ಹೇಳುತ್ತದೋ ಅದಕ್ಕೆ “ಕಿವಿಗೊಡುವ” ಮೂಲಕ ಅನೇಕ ಪ್ರಯೋಜನಗಳನ್ನು ಕೆನ್‌ ಗಳಿಸಿದ್ದಾರೆ. ಅವರು 70ಕ್ಕಿಂತಲೂ ಹೆಚ್ಚು ವರುಷ ಪ್ರಾಯದವರಾಗಿದ್ದರೂ ಈಗಲೂ ಪೂರ್ಣಸಮಯ ಕೆಲಸಮಾಡಶಕ್ತನಾಗಿದ್ದಾರೆ!

ಕುಟುಂಬ ಬೆಂಬಲದ ಮಹತ್ವ

ಮಧುಮೇಹ ಚಿಕಿತ್ಸೆಯಲ್ಲಿ ಕಡೆಗಣಿಸಬಾರದಾದ ವಿಷಯವು ಕುಟುಂಬದ ಬೆಂಬಲ. ವಾಸ್ತವದಲ್ಲಿ, “ಮಕ್ಕಳಲ್ಲಿ ಮತ್ತು ಯುವ ವಯಸ್ಕರಲ್ಲಿ ಮಧುಮೇಹವನ್ನು ಹತೋಟಿಯಲ್ಲಿಡಲು ಸಹಾಯಮಾಡಬಹುದಾದ ‘ಒಂದು ಅತಿ ದೊಡ್ಡ ವಾಸ್ತವಾಂಶವು ಕುಟುಂಬ ಜೀವನದ ಐಕ್ಯವೇ ಆಗಿದೆ,’” ಎಂದು ಒಂದು ಪುಸ್ತಕವು ತಿಳಿಸುತ್ತದೆ.

ಕುಟುಂಬದಲ್ಲಿರುವ ಇತರ ಸದಸ್ಯರು ಮಧುಮೇಹದ ಕುರಿತು ತಿಳಿದಿರುವುದು ಮತ್ತು ಮಧುಮೇಹ ಪೀಡಿತರು ವೈದ್ಯರನ್ನು ಭೇಟಿಮಾಡುವಾಗ ಪ್ರತಿಬಾರಿ ಅವರೊಂದಿಗೆ ಕುಟುಂಬದ ಬೇರೆ ಬೇರೆ ಸದಸ್ಯರು ಹೋಗುವುದೂ ಪ್ರಯೋಜನದಾಯಕವಾಗಿದೆ. ಮಧುಮೇಹ ಪೀಡಿತರಿಗೆ ಬೆಂಬಲನೀಡಲು, ಪ್ರಮುಖ ರೋಗಲಕ್ಷಣಗಳನ್ನು ಗುರುತಿಸಲು, ಮತ್ತು ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿದಿರಲು ಜ್ಞಾನವು ಸಹಾಯಮಾಡುತ್ತದೆ. ನಾಲ್ಕು ವರುಷದವಳಾಗಿದ್ದಾಗಿಂದ ಟೈಪ್‌ 1 ಮಧುಮೇಹವಿದ್ದ ಒಬ್ಬ ಮಹಿಳೆಯ ಗಂಡನಾದ ಟೆಡ್‌ ತಿಳಿಸುವುದು: “ಬಾರ್ಬರಳ ದೇಹದ ಸಕ್ಕರೆ ಪ್ರಮಾಣವು ಯಾವಾಗ ತೀರಾ ಕಡಿಮೆಯಾಗುತ್ತದೆ ಎಂದು ನಾನು ಹೇಳಬಲ್ಲೆನು. ಮಾತಾಡುತ್ತಿದ್ದಂತೆ ಮಧ್ಯದಲ್ಲಿ ಅವಳು ಒಮ್ಮೆಲೇ ಮೌನವಾಗುತ್ತಾಳೆ. ಅವಳು ತೀವ್ರವಾಗಿ ಬೆವರಲಾರಂಭಿಸುತ್ತಾಳೆ ಮತ್ತು ಯಾವುದೇ ಕಾರಣವಿಲ್ಲದೆ ಕೋಪಿಸುತ್ತಾಳೆ. ಮತ್ತು ಅವಳ ಪ್ರತಿಕ್ರಿಯೆಯು ನಿಧಾನಗೊಳ್ಳುತ್ತದೆ.”

ತದ್ರೀತಿಯಲ್ಲಿ ಕೆನ್‌ನ ಹೆಂಡತಿಯಾದ ಕ್ಯಾಥ್‌ರಿನಳು, ಅವನು ಬಿಳಿಚಿಕೊಳ್ಳುವುದನ್ನೂ ತಣ್ಣಗಾಗುವುದನ್ನೂ ಗಮನಿಸುತ್ತಾಳೆ ಮತ್ತು ಅವನ ವರ್ತನೆಯಲ್ಲಿ ಬದಲಾವಣೆಯಾಗುವುದನ್ನು ಕಂಡೊಡನೆ ಅವನು ಪರಿಹರಿಸುವಂಥ ಒಂದು ಸರಳವಾದ ಪ್ರಶ್ನೆಯನ್ನು ಅವನಿಗೆ ಕೇಳುತ್ತಾಳೆ. ಕೆನ್‌ ಗಲಿಬಿಲಿಗೊಂಡ ರೀತಿಯಲ್ಲಿ ಪ್ರತಿಕ್ರಿಯಿಸುವುದಾದರೆ, ತಾನು ಕೂಡಲೆ ನಿರ್ಣಯವನ್ನು ಮಾಡಬೇಕು ಮತ್ತು ಆದಷ್ಟು ಬೇಗನೆ ಪರಿಸ್ಥಿತಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಕ್ಯಾಥ್‌ರಿನಳಿಗೆ ತಿಳಿಯುತ್ತದೆ. ವಿಷಯಜ್ಞಾನವಿರುವ ಮತ್ತು ತಾವು ಪ್ರೀತಿಸುವ ಹಾಗೂ ಭರವಸೆಯಿಡುವ ವಿವಾಹ ಸಂಗಾತಿಗಳನ್ನು ಹೊಂದಿರುವುದನ್ನು ಕೆನ್‌ ಮತ್ತು ಬಾರ್ಬರ ಇಬ್ಬರೂ ಬಹಳವಾಗಿ ಗಣ್ಯಮಾಡುತ್ತಾರೆ. *

ಪ್ರೀತಿಪರ ಕುಟುಂಬ ಸದಸ್ಯರು, ಬೆಂಬಲ ನೀಡುವವರೂ ದಯಾಪರರೂ ತಾಳ್ಮೆಯುಳ್ಳವರೂ ಆಗಿರುವಂತೆ ಪ್ರಯತ್ನಿಸಬೇಕು. ಒಬ್ಬ ಅಸ್ವಸ್ಥನು ಜೀವನದ ಪಂಥಾಹ್ವಾನವನ್ನು ಎದುರಿಸುವಂತೆ ಈ ಗುಣಗಳು ಸಹಾಯಮಾಡಬಲ್ಲವು ಮತ್ತು ಅವರ ಅಸ್ವಸ್ಥತೆಯನ್ನು ಸುಧಾರಿಸುವುದರಲ್ಲಿ ಸಹ ಪ್ರಭಾವಬೀರಬಲ್ಲದು. ಕ್ಯಾರೆನ್‌ಳ ಗಂಡನು ತಾನು ಅವಳನ್ನು ಪ್ರೀತಿಸುತ್ತೇನೆಂದು ಪುನರಾಶ್ವಾಸನೆ ನೀಡಿದನು ಮತ್ತು ಇದು ಒಂದು ದೊಡ್ಡ ಸಕಾರಾತ್ಮಕ ಪ್ರಭಾವವನ್ನು ಬೀರಿತು. ಕ್ಯಾರೆನ್‌ ತಿಳಿಸುವುದು: “ನೈಜೆಲ್‌ ನನಗೆ ಹೇಳಿದ್ದು: ‘ಹೇಗೆ ಜನರು ಬದುಕಲಿಕ್ಕಾಗಿ ಆಹಾರ ಮತ್ತು ನೀರನ್ನು ಸೇವಿಸುತ್ತಾರೋ ಹಾಗೆಯೇ ನಿನಗೂ ಬದುಕಲಿಕ್ಕಾಗಿ ಆಹಾರ ಮತ್ತು ನೀರು ಹಾಗೂ ಅದರೊಂದಿಗೆ ಸ್ವಲ್ಪ ಇನ್ಸುಲಿನ್‌ನ ಅಗತ್ಯವಿದೆ ಅಷ್ಟೆ.’ ಈ ಆದರಣೀಯವಾದ, ಅದೇ ಸಮಯದಲ್ಲಿ ಪ್ರಾಯೋಗಿಕವಾದ ಮಾತುಗಳೇ ನನಗೆ ಆ ಸಮಯದಲ್ಲಿ ಬೇಕಾಗಿದ್ದವು.”

ರಕ್ತದಲ್ಲಿ ಸಕ್ಕರೆ ಪ್ರಮಾಣದ ಏರಿಳಿತವಾದಂತೆ ಮಧುಮೇಹ ಪೀಡಿತನ ಮನೋವೃತ್ತಿಯನ್ನು ಅದು ಬಾಧಿಸಸಾಧ್ಯವಿದೆ ಎಂಬುದನ್ನು ಸಹ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ತಿಳಿದಿರುವ ಅಗತ್ಯವಿದೆ. ಒಬ್ಬ ಸ್ತ್ರೀಯು ಹೇಳಿದ್ದು: “ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದಿಂದುಂಟಾಗುವ ಖಿನ್ನತೆಯ ಭಾವನೆಗಳನ್ನು ನಾನು ಅನುಭವಿಸುವಾಗ, ನಾನು ಬಹಳ ಮೌನಿ, ವ್ಯಾಕುಲಿತಳು, ಸುಲಭವಾಗಿ ಕೆರಳುವವಳು, ಮತ್ತು ದುಃಖಿತಳಾಗುತ್ತೇನೆ. ಆದರೆ ನಂತರ, ನನ್ನ ಭಾವನೆಗಳನ್ನು ಹತೋಟಿಯಲ್ಲಿಡಲು ನಾನು ತಪ್ಪಿದಕ್ಕಾಗಿ ನನಗೆ ಜಿಗುಪ್ಸೆಯಾಗುತ್ತದೆ. ಆದರೆ ನಾನು ಹತೋಟಿಯಲ್ಲಿಡಲು ಬಯಸುವ ನನ್ನ ಈ ಭಾವನೆಗಳಿಗೆ ಕಾರಣವೇನೆಂದು ಇತರರು ಅರ್ಥಮಾಡಿಕೊಳ್ಳುತ್ತಾರೆಂದು ತಿಳಿದುಬರುವಾಗ ಅದು ನನಗೆ ಸಹಾಯಮಾಡುತ್ತದೆ.”

ಮಧುಮೇಹ ಪೀಡಿತನಿಗೆ ತನ್ನ ಸ್ನೇಹಿತರಿಂದಲೂ ಕುಟುಂಬ ಸದಸ್ಯರಿಂದಲೂ ಸಹಕಾರವು ದೊರೆಯುವುದಾದರೆ, ಮಧುಮೇಹವನ್ನು ಯಶಸ್ವಿಕರವಾಗಿ ನಿಭಾಯಿಸಸಾಧ್ಯವಿದೆ. ಬೈಬಲ್‌ ಮೂಲತತ್ತ್ವಗಳು ಸಹ ಸಹಾಯಮಾಡಬಲ್ಲವು. ಹೇಗೆ? (g03 5/08)

[ಪಾದಟಿಪ್ಪಣಿಗಳು]

^ ಈ ಜಟಿಲತೆಗಳಲ್ಲಿ ಹೃದ್ರೋಗ, ಲಕ್ವ, ಮೂತ್ರಜನಕಾಂಗದ ಕ್ರಿಯೆಯಲ್ಲಿ ಕ್ಷೀಣಿಸುವಿಕೆ, ಪರಧಿಯ ಅಪಧಮನಿಯ ರೋಗ, ಮತ್ತು ನರಗಳ ದೌರ್ಬಲ್ಯ ಮುಂತಾದವುಗಳು ಸೇರಿವೆ. ಪಾದಗಳಿಗೆ ಸರಿಯಾಗಿ ರಕ್ತಸಂಚಾರವಾಗದಿರುವ ಕಾರಣ ಹುಣ್ಣುಗಳು ಉಂಟಾಗಸಾಧ್ಯವಿದೆ ಮತ್ತು ಒಂದುವೇಳೆ ಈ ಸಮಸ್ಯೆಯು ತೀವ್ರವಾದಲ್ಲಿ ಅಂಗಚ್ಛೇದನವು ಅಗತ್ಯವಾಗಬಹುದು. ವಯಸ್ಕರಲ್ಲಿ ಕಣ್ಣುಕಾಣದಿರುವುದಕ್ಕೆ ಅತಿ ಹೆಚ್ಚಿನ ಕಾರಣವು ಸಹ ಮಧುಮೇಹವೇ ಆಗಿದೆ.

^ ಎಚ್ಚರ! ಪತ್ರಿಕೆಯು ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸ್ಸುಮಾಡುವುದಿಲ್ಲ. ತಮಗೆ ಮಧುಮೇಹವಿರಬಹುದು ಎಂದು ಯಾರಿಗಾದರೂ ಸಂಶಯವಿದ್ದರೆ, ಅವರು ವೈದ್ಯರನ್ನು ಭೇಟಿಯಾಗಬೇಕು. ಆ ರೋಗವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ವೈದ್ಯರು ಸಹಾಯನೀಡಶಕ್ತರಾಗಿದ್ದಾರೆ.

^ ವಪೆಯಲ್ಲಿ ಹೆಚ್ಚು ಬೊಜ್ಜು ತುಂಬಿರುವ ದೇಹವು (ಸೇಬಿನಾಕಾರದ ದೇಹ), ಸೊಂಟದಲ್ಲಿ ಬೊಜ್ಜು ತುಂಬಿರುವ ದೇಹಕ್ಕಿಂತ (ಪೇರು ಹಣ್ಣಿನಾಕಾರದ ದೇಹ) ಹೆಚ್ಚು ಅಪಾಯಕ್ಕೆ ಒಳಗಾಗಿದೆ.

^ ಧೂಮಪಾನ ಮಾಡುವವರು ತಮ್ಮನ್ನು ಇನ್ನೂ ಹೆಚ್ಚಿನ ಅಪಾಯಕ್ಕೆ ಒಡ್ಡುತ್ತಾರೆ. ಏಕೆಂದರೆ ಅವರ ಹವ್ಯಾಸವು, ಹೃದಯವನ್ನು ಮತ್ತು ದೇಹದ ರಕ್ತಪರಿಚಲನ ವ್ಯವಸ್ಥೆಯನ್ನು ಕೆಡಿಸುತ್ತದೆ ಹಾಗೂ ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ಮಧುಮೇಹ ಸಂಬಂಧಿತ ಅಂಗಚ್ಛೇದನಗಳಲ್ಲಿ 95 ಪ್ರತಿಶತದಷ್ಟು ಧೂಮಪಾನಿಗಳನ್ನು ಒಳಗೊಂಡದ್ದಾಗಿವೆ ಎಂದು ಒಂದು ಪುಸ್ತಕವು ತಿಳಿಸುತ್ತದೆ.

^ ಇವರಲ್ಲಿ ಕೆಲವರಿಗೆ ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧಗಳಿಂದ ಸಹಾಯ ದೊರಕಿತು. ಈ ಔಷಧಗಳಲ್ಲಿ, ಹೆಚ್ಚು ಇನ್ಸುಲಿನ್‌ ಅನ್ನು ಬಿಡುಗಡೆ ಮಾಡುವಂತೆ ಮೇದೋಜೀರಕ ರಸಗ್ರಂಥಿಯನ್ನು ಪ್ರಚೋದಿಸುವ ಔಷಧಗಳು, ರಕ್ತದಲ್ಲಿನ ಸಕ್ಕರೆ ಅಂಶದ ಹೆಚ್ಚಳವನ್ನು ನಿಧಾನಗೊಳಿಸುವ ಔಷಧಗಳು, ಮತ್ತು ಇನ್ಸುಲಿನ್‌ ಪ್ರತಿರೋಧಕ ಸ್ಥಿತಿಯನ್ನು ಕಡಿಮೆಗೊಳಿಸುವ ಇನ್ನಿತರ ಔಷಧಗಳು ಸೇರಿವೆ. (ಟೈಪ್‌ 1 ಮಧುಮೇಹಕ್ಕೆ ಸಾಮಾನ್ಯವಾಗಿ ಔಷಧಗಳನ್ನು ಶಿಫಾರಸ್ಸುಮಾಡಲಾಗುವುದಿಲ್ಲ.) ಸದ್ಯದಲ್ಲಿ, ಇನ್ಸುಲಿನ್‌ ಅನ್ನು ಬಾಯಿಯ ಮೂಲಕ ಸೇವಿಸಸಾಧ್ಯವಿಲ್ಲ ಏಕೆಂದರೆ ಹಾಗೆ ಸೇವಿಸಿದರೆ ಅದು ರಕ್ತಪ್ರವಾಹದಲ್ಲಿ ಪ್ರವೇಶಿಸುವ ಮುನ್ನ ಜೀರ್ಣಕ್ರಿಯೆಯು ಈ ಸಸಾರಜನಕವನ್ನು ಜೀರ್ಣಿಸುತ್ತದೆ. ಆದರೆ ಇನ್ಸುಲಿನ್‌ ಚಿಕಿತ್ಸೆಯಾಗಲಿ ಔಷಧಗಳಾಗಲಿ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರಪಥ್ಯದ ಅಗತ್ಯವನ್ನು ತಳ್ಳಿಬಿಡುವುದಿಲ್ಲ.

^ ಮಧುಮೇಹ ಪೀಡಿತರು ಯಾವಾಗಲೂ ತಮ್ಮೊಂದಿಗೆ ಒಂದು ಗುರುತು ಚೀಟಿಯನ್ನು (ಐಡೆಂಟಿಫಿಕೇಷನ್‌ ಕಾರ್ಡ್‌) ಕೊಂಡೊಯ್ಯುವಂತೆ ಮತ್ತು ತಮಗೆ ಮಧುಮೇಹವಿದೆ ಎಂದು ಬರೆದಿರುವ ಗುರುತು ಚೀಟಿಯನ್ನು ತಮ್ಮ ಬಳೆ ಅಥವಾ ಚೈನಿಗೆ ಕಟ್ಟಿಕೊಳ್ಳುವಂತೆ ವೈದ್ಯಕೀಯ ಅಧಿಕಾರಿಗಳು ಶಿಫಾರಸ್ಸು ಮಾಡುತ್ತಾರೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದು ಜೀವವನ್ನು ರಕ್ಷಿಸಸಾಧ್ಯವಿದೆ. ಉದಾಹರಣೆಗೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವು ಕಡಿಮೆಯಾದ ಕಾರಣ ಸಂಭವಿಸುವ ಪ್ರತಿಕ್ರಿಯೆಯನ್ನು ಯಾವುದೋ ಬೇರೆ ಅಸ್ವಸ್ಥತೆಯೆಂದು ಜನರು ತಪ್ಪಾಗಿ ತಿಳಿಯುವುದರಿಂದ ಅಥವಾ ಮತ್ತೇರುವ ಮಟ್ಟಿಗೆ ಮದ್ಯವನ್ನು ಸೇವಿಸಿದ್ದರ ಪರಿಣಾಮವೆಂದು ಸಹ ತಪ್ಪಾಗಿ ತಿಳಿಯುವುದರಿಂದ ದೂರವಿರಿಸುತ್ತದೆ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಯುವ ಜನರನ್ನು ಸಹ ಬಾಧಿಸುತ್ತದೋ?

ಮಧುಮೇಹ ಎಂಬುದು “ಯುವ ಜನರನ್ನು ಬಾಧಿಸುವ ರೋಗವಾಗಿ ಪರಿಣಮಿಸುತ್ತಿದೆ.” ಎಂದು ಖ್ಯಾತ ಅಂತಃಸ್ರಾವಶಾಸ್ತ್ರಜ್ಞರೂ ನ್ಯೂಯಾರ್ಕ್‌ನ ಮೌಂಟ್‌ ಸೈನೈ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ಮುಖ್ಯಸ್ಥರೂ ಆಗಿರುವ ಡಾ. ಆರ್ಥರ್‌ ರೂಬನ್‌ಸ್ಟೈನ್‌ ತಿಳಿಸುತ್ತಾರೆ. ಮಧುಮೇಹವು ಆರಂಭಗೊಳ್ಳುವ ಸರಾಸರಿ ಪ್ರಾಯವು ಈಗ ಇಳಿಮುಖವಾಗುತ್ತಾ ಇದೆ. “40 ವರುಷಕ್ಕಿಂತ ಕಡಿಮೆ ಪ್ರಾಯದ ಜನರಲ್ಲಿ ನೀವು ಮಧುಮೇಹವನ್ನು ಕಾಣಸಾಧ್ಯವಿಲ್ಲ ಎಂದು ನಾವು ನಮ್ಮ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹತ್ತು ವರುಷಗಳ ಹಿಂದೆ ಕಲಿಸುತ್ತಿದ್ದೆವು” ಎಂಬುದಾಗಿ ಟೈಪ್‌ 2 ಮಧುಮೇಹದ ಕುರಿತು ಮಾತನಾಡುವಾಗ ಡಾ. ರಾಬಿನ್‌ ಎಸ್‌. ಗೋಲಂಡ್‌ ಹೇಳಿದರು. “ಆದರೆ ನಾವೀಗ ಇದನ್ನು 10 ವರುಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲೂ ಕಾಣಸಾಧ್ಯವಿದೆ.”

ಯುವ ಜನರಲ್ಲಿ ಮಧುಮೇಹವು ಏಕೆ ಹೆಚ್ಚಾಗುತ್ತಾ ಇದೆ? ಕೆಲವೊಮ್ಮೆ ಆನುವಂಶಿಕ ನಿಯಮಗಳು ಕಾರಣವಾಗಿರುತ್ತವೆ. ಆದರೆ ಇದರಲ್ಲಿ, ದೇಹದ ತೂಕ ಮತ್ತು ಪರಿಸರವು ಸಹ ಪಾತ್ರವನ್ನು ವಹಿಸಬಹುದು. ಕಳೆದ ಎರಡು ದಶಕಗಳಿಂದ ಸ್ಥೂಲಕಾಯದ ಮಕ್ಕಳ ಸಂಖ್ಯೆಯು ಇಮ್ಮಡಿಯಾಗುತ್ತಾ ಇದೆ. ಇದಕ್ಕೆ ಕಾರಣವು ಏನಾಗಿದೆ? “ಕಳೆದ 20 ವರುಷಗಳಲ್ಲಿ, ಊಟಮಾಡುವ ಮತ್ತು ಇತರ ಚಟುವಟಿಕೆಗಳ ಹವ್ಯಾಸದಲ್ಲಿ ಅನೇಕ ಬದಲಾವಣೆಗಳಾಗಿವೆ” ಎಂಬುದಾಗಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಕೇಂದ್ರದಲ್ಲಿನ ಡಾ. ವಿಲ್ಯಮ್‌ ಡೀಟ್ಸ್‌ ಹೇಳುತ್ತಾರೆ. “ಈ ಬದಲಾವಣೆಗಳಲ್ಲಿ, ಮನೆಯಿಂದ ಹೊರಗೆ ಲಭ್ಯವಿರುವ ಆಹಾರದ ಮೇಲಿನ ಆತುಕೊಳ್ಳುವಿಕೆಯ ಹೆಚ್ಚಳ; ಬೆಳಗ್ಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವ ಪ್ರಮಾಣದಲ್ಲಿ ಹೆಚ್ಚಳ; ಸಾಫ್ಟ್‌ ಡ್ರಿಂಕ್‌ಗಳ ಮತ್ತು ಫಾಸ್ಟ್‌ ಫುಡ್‌ಗಳ ಸೇವನೆಯಲ್ಲಿ ಹೆಚ್ಚಳ; ಶಾಲೆಗಳಲ್ಲಿ ಶಾರೀರಿಕ ಚಟುವಟಿಕೆಗಳ ಕಡಿಮೆಯಾಗುವಿಕೆ; ಮತ್ತು ಶಾಲೆಯಲ್ಲಿ ತರಗತಿಗಳ ಮಧ್ಯೆ ವಿರಾಮದ ರದ್ದುಗೊಳಿಸುವಿಕೆ ಮುಂತಾದವುಗಳು ಸೇರಿವೆ.”

ಒಮ್ಮೆ ಮಧುಮೇಹದಿಂದ ಬಾಧಿತರಾದರೆ ಅದರಿಂದ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿಲ್ಲ. ಆದುದರಿಂದ, ಒಬ್ಬ ಹದಿಹರೆಯದ ಮಧುಮೇಹ ಪೀಡಿತನ ಸಲಹೆಯನ್ನು ಅನ್ವಯಿಸುವುದು ಉತ್ತಮ. ಅವನ ಅತಿ ಸರಳ ಹೇಳಿಕೆಯು: “ಕಚಡ ಆಹಾರದಿಂದ ದೂರವಿದ್ದು, ಆರೋಗ್ಯವಂತರಾಗಿರಿ.”

[ಪುಟ 8, 9ರಲ್ಲಿರುವ ಚೌಕ/ಚಿತ್ರ]

ಗ್ಲೂಕೋಸಿನ ಪಾತ್ರ

ದೇಹದಲ್ಲಿರುವ ಲಕ್ಷಾಂತರ ಕೋಟಿ ಜೀವಕೋಶಗಳಿಗೆ ಅಗತ್ಯವಿರುವ ಶಕ್ತಿಯನ್ನು ಗ್ಲೂಕೋಸ್‌ ಒದಗಿಸುತ್ತದೆ. ಹಾಗಿದ್ದರೂ, ಜೀವಕೋಶದೊಳಗೆ ಪ್ರವೇಶಿಸಲು ಅದಕ್ಕೆ ಒಂದು “ಕೀಲಿ ಕೈ”ಯ ಅಗತ್ಯವಿದೆ. ಮೇದೋಜೀರಕ ಗ್ರಂಥಿಯಿಂದ ಬಿಡುಗಡೆಯಾಗುವ ಇನ್ಸುಲಿನ್‌ ತಾನೇ ಆ ಕೀಲಿ ಕೈಯಾಗಿದೆ. ಟೈಪ್‌ 1 ಮಧುಮೇಹದಲ್ಲಿ, ದೇಹದಲ್ಲಿ ಇನ್ಸುಲಿನ್‌ ಇಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಟೈಪ್‌ 2 ಮಧುಮೇಹದಲ್ಲಿ, ದೇಹವು ಇನ್ಸುಲಿನ್‌ ಅನ್ನು ತಯಾರಿಸುತ್ತದೆ ಆದರೆ ಸಾಕಷ್ಟು ಪ್ರಮಾಣದಲ್ಲಲ್ಲ. * ಅಷ್ಟುಮಾತ್ರವಲ್ಲದೆ, ಇನ್ಸುಲಿನ್‌ ಒಳಪ್ರವೇಶಿಸುವುದನ್ನು ಜೀವಕೋಶಗಳು ತಡೆಯುತ್ತವೆ. ಈ ಸ್ಥಿತಿಯನ್ನು ಇನ್ಸುಲಿನ್‌ ಪ್ರತಿರೋಧಕ ಸ್ಥಿತಿ ಎಂದು ಕರೆಯಲಾಗುತ್ತದೆ. ಈ ಎರಡು ರೀತಿಯ ಮಧುಮೇಹದಲ್ಲಿಯೂ, ಫಲಿತಾಂಶವು ಒಂದೇ ಆಗಿರುತ್ತದೆ: ಹಸಿದಿರುವ ಜೀವಕೋಶಗಳು ಮತ್ತು ರಕ್ತದಲ್ಲಿ ಸಕ್ಕರೆಯ ಅಪಾಯಕಾರಿ ಪ್ರಮಾಣ.

ಟೈಪ್‌ 1 ಮಧುಮೇಹದಲ್ಲಿ, ಮೇದೋಜೀರಕ ಗ್ರಂಥಿಯಲ್ಲಿರುವ ಇನ್ಸುಲಿನ್‌ ತಯಾರಿಸುವ ಬೀಟ ಕಣಗಳಿಗೆ ಒಬ್ಬ ವ್ಯಕ್ತಿಯ ಸೋಂಕು ರಕ್ಷಾವ್ಯವಸ್ಥೆಯು ಹಾನಿಯನ್ನುಂಟುಮಾಡುತ್ತದೆ. ಹೀಗೆ, ಟೈಪ್‌ 1 ಮಧುಮೇಹವು ಸೋಂಕು ರಕ್ಷಾವ್ಯವಸ್ಥೆಯಿಂದಲೇ ಉಂಟಾಗುವ ರೋಗ ಮತ್ತು ಕೆಲವೊಮ್ಮೆ ಇದನ್ನು ಸೋಂಕು ರಕ್ಷಾವ್ಯವಸ್ಥೆಯಿಂದ ಉಂಟುಮಾಡಲ್ಪಟ್ಟ ಮಧುಮೇಹ ಎಂದು ಕರೆಯಲಾಗುತ್ತದೆ. ದೇಹದಲ್ಲಿನ ಸೋಂಕು ರಕ್ಷಾವ್ಯವಸ್ಥೆಯು ಈ ರೀತಿಯಾಗಿ ಕಾರ್ಯವೆಸಗುವಂತೆ ಪ್ರಚೋದಿಸುವಂಥ ಅಂಶಗಳಲ್ಲಿ ವೈರಸ್‌ಗಳು, ವಿಷಕಾರಿ ರಸಾಯನಗಳು, ಮತ್ತು ಕೆಲವು ಔಷಧಗಳು ಸೇರಿವೆ. ತಳಿಶಾಸ್ತ್ರೀಯ ರಚನೆಯು ಸಹ ಕಾರಣವಾಗಿರಬಹುದು. ಟೈಪ್‌ 1 ಮಧುಮೇಹವು ಅನೇಕವೇಳೆ ಕೆಲವು ಕುಟುಂಬಗಳಲ್ಲಿ ಕಂಡುಬರುತ್ತದೆ, ಮತ್ತು ಕಾಕೇಷಿಯನ್‌ ಜನರಲ್ಲಿ ಇದು ಸರ್ವಸಾಧಾರಣವಾಗಿದೆ.

ಟೈಪ್‌ 2 ಮಧುಮೇಹದಲ್ಲಿ, ಆನುವಂಶಿಕ ಅಂಶವು ಇನ್ನೂ ಹೆಚ್ಚಿನ ಪ್ರಭಾವವನ್ನು ಬೀರುತ್ತದೆಯಾದರೂ ಕಾಕೇಷಿಯನ್‌ರಲ್ಲದ ಜನರ ಮಧ್ಯೆ ಇದು ಹೆಚ್ಚು ಸಂಭವಿಸುತ್ತದೆ. ಆಸ್ಟ್ರೇಲಿಯದ ಮತ್ತು ಅಮೆರಿಕದ ಮೂಲನಿವಾಸಿಗಳು ಇದರಿಂದ ಬಹಳವಾಗಿ ಬಾಧಿತರಾಗಿದ್ದಾರೆ. ಲೋಕದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೈಪ್‌ 2 ಮಧುಮೇಹದಿಂದ ಬಾಧಿತರಾದವರು ಅಮೆರಿಕದ ಮೂಲನಿವಾಸಿಗಳಾಗಿದ್ದಾರೆ. ಆನುವಂಶಿಕತೆ ಮತ್ತು ಸ್ಥೂಲಕಾಯದ ಮಧ್ಯೆ ಇರುವ ಸಂಬಂಧವನ್ನು ಸಂಶೋಧಕರು ಅಧ್ಯಯನಮಾಡುತ್ತಿದ್ದಾರೆ. ಅಷ್ಟುಮಾತ್ರವಲ್ಲದೆ, ಆನುವಂಶಿಕವಾಗಿ ಮಧುಮೇಹದಿಂದ ಪೀಡಿತರಾಗುವ ಸಾಧ್ಯತೆಯಿದ್ದವರಲ್ಲಿ, ಅತಿ ಹೆಚ್ಚಾದ ದೇಹಬೊಜ್ಜು ಇನ್ಸುಲಿನ್‌ ಪ್ರತಿರೋಧಕವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಸಹ ಅವರು ಅಧ್ಯಯನಮಾಡುತ್ತಿದ್ದಾರೆ. * ಟೈಪ್‌ 2 ಮಧುಮೇಹವು ಟೈಪ್‌ 1ರಂತಿರದೆ ಸಾಮಾನ್ಯವಾಗಿ 40ಕ್ಕಿಂತ ಹೆಚ್ಚು ಪ್ರಾಯದವರಲ್ಲಿ ಕಂಡುಬರುತ್ತದೆ.

[ಪಾದಟಿಪ್ಪಣಿಗಳು]

^ ಸುಮಾರು 90 ಪ್ರತಿಶತ ಮಧುಮೇಹ ಪೀಡಿತರು ಟೈಪ್‌ 2 ಮಧುಮೇಹದಿಂದ ಬಾಧಿತರಾಗಿರುತ್ತಾರೆ. ಹಿಂದೆ ಇದನ್ನು “ಇನ್ಸುಲಿನ್‌ ಅವಲಂಬಿತವಲ್ಲದ” ಅಥವಾ “ವಯಸ್ಕರ” ಮಧುಮೇಹ ಎಂದು ಸೂಚಿಸಲಾಗುತ್ತಿತ್ತು. ಆದರೆ, ಈ ಹೆಸರುಗಳು ಸೂಕ್ತವಾಗಿಲ್ಲ, ಏಕೆಂದರೆ ಟೈಪ್‌ 2 ಮಧುಮೇಹ ಪೀಡಿತರಲ್ಲಿ 40 ಪ್ರತಿಶತದಷ್ಟು ಜನರು ಇನ್ಸುಲಿನ್‌ ಅವಲಂಬಿತರಾಗಿದ್ದಾರೆ. ಇದಕ್ಕೆ ಕೂಡಿಕೆಯಾಗಿ, ಅಸಂಖ್ಯಾತ ಯುವ ಜನರಲ್ಲಿ​—⁠ಇವರಲ್ಲಿ ಕೆಲವರು ಇನ್ನೂ ಹದಿಪ್ರಾಯವನ್ನು ತಲಪಿಲ್ಲ​—⁠ಟೈಪ್‌ 2 ಮಧುಮೇಹವನ್ನು ಕಂಡುಹಿಡಿಯಲಾಗಿದೆ.

^ ಒಬ್ಬನ ಅಥವಾ ಒಬ್ಬಳ ದೇಹದ ತೂಕವು ಸೂಕ್ತವಾಗಿರುವ ತೂಕಕ್ಕಿಂತ 20 ಪ್ರತಿಶತ ಅಥವಾ ಅದಕ್ಕಿಂತಲೂ ಹೆಚ್ಚಾಗಿರುವಾಗ ಅವರನ್ನು ಸ್ಥೂಲಕಾಯರು ಎಂದು ಪರಿಗಣಿಸಲಾಗುತ್ತದೆ.

[ಚಿತ್ರ]

ಗ್ಲೂಕೋಸ್‌ ಪರಮಾಣು

[ಕೃಪೆ]

ಇವರ ಅನುಮತಿಯ ಮೇರೆಗೆ: Pacific Northwest National Laboratory

[ಪುಟ 9ರಲ್ಲಿರುವ ಚೌಕ]

ಮೇದೋಜೀರಕ ಗ್ರಂಥಿಯ ಪಾತ್ರ

ಒಂದು ಬಾಳೆಹಣ್ಣಿನಷ್ಟು ಗಾತ್ರದ ಮೇದೋಜೀರಕ ಗ್ರಂಥಿಯು ಹೊಟ್ಟೆಯ ಹಿಂಭಾಗದಲ್ಲಿರುತ್ತದೆ. ಮಧುಮೇಹದೊಂದಿಗೆ ಜೀವಿಸಲು ಅನಧಿಕೃತ ಮಾರ್ಗದರ್ಶನ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, “ಆರೋಗ್ಯಕರವಾದ ಮೇದೋಜೀರಕ ಗ್ರಂಥಿಯು, ದಿವಸದಾದ್ಯಂತ ಗ್ಲೂಕೋಸಿನ ಏರಿಳಿತಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್‌ ಅನ್ನು ಬಿಡುಗಡೆಮಾಡುತ್ತಾ ರಕ್ತದ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಲು ಎಡೆಬಿಡದೆ ಮತ್ತು ತೀವ್ರವಾಗಿ ಕೆಲಸಮಾಡುತ್ತದೆ.” ಮೇದೋಜೀರಕ ಗ್ರಂಥಿಯಲ್ಲಿರುವ ಬೀಟ ಕಣಗಳು, ಹಾರ್ಮೋನ್‌ ಇನ್ಸುಲಿನ್‌ನ ಮೂಲವಾಗಿದೆ.

ಬೀಟ ಕಣಗಳು ಸಾಕಷ್ಟುಮಟ್ಟದ ಇನ್ಸುಲಿನ್‌ ಅನ್ನು ಬಿಡುಗಡೆಮಾಡದಿದ್ದಾಗ, ರಕ್ತದಲ್ಲಿ ನಿಗದಿತವಾಗಿ ಇರಬೇಕಾಗಿದ್ದ ಗ್ಲೂಕೋಸಿನ ಮಟ್ಟವು ಹೆಚ್ಚಾಗುತ್ತದೆ. ಇದನ್ನು ಹೈಪರ್‌ಗ್ಲಿಸಮಿಯಾ ಎಂದು ಕರೆಯಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದಾಗ ಅದಕ್ಕೆ ಹೈಪೊಗ್ಲಿಸಮಿಯಾ ಎಂದು ಕರೆಯಲಾಗುತ್ತದೆ. ಮೇದೋಜೀರಕ ಗ್ರಂಥಿಯೊಂದಿಗೆ ಪಿತ್ತಜನಕಾಂಗವು ಸಹ ಹೆಚ್ಚಿನ ಗ್ಲೂಕೋಸನ್ನು ಗ್ಲೈಕೊಜನ್‌ ಎಂದು ಕರೆಯಲಾಗುವ ರೂಪದಲ್ಲಿ ಶೇಖರಿಸಿಡುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ಸಹಾಯಮಾಡುತ್ತದೆ. ಮೇದೋಜೀರಕ ಗ್ರಂಥಿಯಿಂದ ಆಜ್ಞಾಪಿಸಲ್ಪಟ್ಟಾಗ ಪಿತ್ತಜನಕಾಂಗವು, ದೇಹದಿಂದ ಉಪಯೋಗಿಸಲ್ಪಡುವ ಸಲುವಾಗಿ ಗ್ಲೈಕೊಜನ್‌ ಅನ್ನು ಪುನಃ ಗ್ಲೂಕೋಸಾಗಿ ಪರಿವರ್ತಿಸುತ್ತದೆ.

[ಪುಟ 9ರಲ್ಲಿರುವ ಚೌಕ/ಚಿತ್ರ]

ಸಕ್ಕರೆಯ ಪಾತ್ರ

ಸಕ್ಕರೆಯ ಅಧಿಕ ಸೇವನೆಯೇ ಮಧುಮೇಹಕ್ಕೆ ಕಾರಣವಾಗಿದೆ ಎಂಬುದು ಒಂದು ಸರ್ವಸಾಮಾನ್ಯವಾದ ತಪ್ಪಭಿಪ್ರಾಯವಾಗಿದೆ. ಆದರೆ ಆನುವಂಶಿಕವಾಗಿ ಈ ರೋಗಕ್ಕೆ ಸುಲಭವಾಗಿ ತುತ್ತಾಗಬಲ್ಲ ವ್ಯಕ್ತಿಗಳು ಸಕ್ಕರೆಯನ್ನು ಸೇವಿಸದೇ ಇರುವುದಾದರೂ ಅವರ ದೇಹದಲ್ಲಿ ಕೊಬ್ಬು ಹೆಚ್ಚಾದಂತೆ ಈ ರೋಗ ಬರುವ ಸಾಧ್ಯತೆಯಿದೆ ಎಂದು ವೈದ್ಯಕೀಯ ಪುರಾವೆಯು ತೋರಿಸುತ್ತದೆ. ಹಾಗಿದ್ದರೂ, ಸಕ್ಕರೆಯನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೇದಲ್ಲ, ಏಕೆಂದರೆ ಇದರಲ್ಲಿ ತೀರಾ ಕಡಿಮೆ ಪೌಷ್ಟಿಕಾಂಶವಿದೆ ಮತ್ತು ಅದು ಬೊಜ್ಜು ಬೆಳೆಯುವಂತೆ ನಡೆಸಬಲ್ಲದು.

ಮಧುಮೇಹ ಪೀಡಿತರಲ್ಲಿ ಸಕ್ಕರೆಗಾಗಿ ಅತಿರೇಕ ಹಂಬಲವಿರುತ್ತದೆ ಎಂಬುದೂ ಇನ್ನೊಂದು ತಪ್ಪಭಿಪ್ರಾಯವಾಗಿದೆ. ಆದರೆ ವಾಸ್ತವದಲ್ಲಿ, ಇತರರು ಹೇಗೆ ಸಿಹಿತಿಂಡಿಗಳನ್ನು ಆಶಿಸುತ್ತಾರೋ ತದ್ರೀತಿಯ ಆಸೆಯೇ ಇವರಲ್ಲಿಯೂ ಇರುತ್ತದೆ. ಈ ಆಸೆಯನ್ನು ಹತೋಟಿಯಲ್ಲಿಡದಿದ್ದಾಗ, ಮಧುಮೇಹವು ಹಸಿವೆಗೆ ನಡಿಸಬಲ್ಲದು​—⁠ಆದರೆ ಸಕ್ಕರೆಗಾಗಿನ ಹಸಿವಲ್ಲ. ಮಧುಮೇಹ ಪೀಡಿತರು ಸಕ್ಕರೆಯನ್ನು ಸೇವಿಸಸಾಧ್ಯವಿದೆ, ಆದರೆ ಅವರು ತಮ್ಮ ಸಕ್ಕರೆಯ ಸೇವನೆಯನ್ನು ತಮ್ಮ ಸಂಪೂರ್ಣ ಆಹಾರಪಥ್ಯದೊಂದಿಗೆ ಸರಿದೂಗಿಸಿ ಮಿತ ಪ್ರಮಾಣದಲ್ಲಿ ಸೇವಿಸಬೇಕು.

ಫ್ರಕ್ಟೋಸ್‌​—⁠ಹಣ್ಣುಹಂಪಲು ಮತ್ತು ಕಾಯಿಪಲ್ಯಗಳಿಂದ ದೊರೆಯುವ ಸಕ್ಕರೆ​—⁠ಅಧಿಕವಾಗಿರುವ ಆಹಾರಪಥ್ಯವು, ಇನ್ಸುಲಿನ್‌ ಪ್ರತಿರೋಧಕ ಸ್ಥಿತಿಯನ್ನು ಉಂಟುಮಾಡಸಾಧ್ಯವಿದೆ ಹಾಗೂ ಪ್ರಾಣಿಗಳ ದೇಹ ತೂಕವು ಎಷ್ಟೇ ಆಗಿರಲಿ ಅವುಗಳಿಗೂ ಮಧುಮೇಹವನ್ನು ಬರಮಾಡಸಾಧ್ಯವಿದೆ ಎಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ.

[ಪುಟ 8, 9ರಲ್ಲಿರುವ ರೇಖಾಕೃತಿಗಳು/ಚಿತ್ರಗಳು]

ಮಧುಮೇಹದ ಸರಳ ವಿವರಣೆ

PANCREAS

ಆರೋಗ್ಯವಂತ ವ್ಯಕ್ತಿ ಟೈಪ್‌ 1 ಮಧುಮೇಹ ಟೈಪ್‌ 2 ಮಧುಮೇಹ

ಊಟದ ನಂತರ, ರಕ್ತದಲ್ಲಿನ ಮೇದೋಜೀರಕ ಗ್ರಂಥಿಯಲ್ಲಿರುವ ಹೆಚ್ಚಿನ ಸನ್ನಿವೇಶಗಳಲ್ಲಿ

ಗ್ಲೂಕೋಸ್‌ನ ಮಟ್ಟದ ಹೆಚ್ಚುವಿಕೆ ಇನ್ಸುಲಿನ್‌ ಅನ್ನು ಬಿಡುಗಡೆಮಾಡುವ ಮೇದೋಜೀರಕ ಗ್ರಂಥಿಯು

ಯನ್ನನುಸರಿಸಿ ಮೇದೋಜೀರಕ ಬೀಟ ಕಣಗಳನ್ನು ಸೋಂಕು ಕಡಿಮೆ ಪ್ರಮಾಣದಲ್ಲಿ

ಗ್ರಂಥಿಯು ಸಾಕಷ್ಟು ಮಟ್ಟದ ರಕ್ಷಾವ್ಯವಸ್ಥೆಯು ಆಕ್ರಮಿಸುತ್ತದೆ. ಇನ್ಸುಲಿನ್‌ ಅನ್ನು

ಇನ್ಸುಲಿನ್‌ ಅನ್ನು ಬಿಡುಗಡೆ ಇದರ ಪರಿಣಾಮವಾಗಿ, ಇನ್ಸುಲಿನ್‌ ಬಿಡುಗಡೆಮಾಡುತ್ತದೆ

ಮಾಡುತ್ತದೆ ಉತ್ಪತ್ತಿಯಾಗುವುದಿಲ್ಲ

↓ ↓ ↓

ಇನ್ಸುಲಿನ್‌ ಪರಮಾಣುಗಳು, ಇನ್ಸುಲಿನ್‌ನ ಸಹಾಯವಿಲ್ಲದೆ, ಗ್ರಾಹಕಗಳು ಇನ್ಸುಲಿನ್‌ಗೆ

ಸ್ನಾಯುಕಣಗಳ ಮತ್ತು ಇತರ ಗ್ಲೂಕೋಸ್‌ ಪರಮಾಣುಗಳು ಕಡಿಮೆ ಪ್ರತಿಕ್ರಿಯೆಯನ್ನು

ಕಣಗಳ ಮೇಲಿರುವ ಗ್ರಾಹಕಗಳಿಗೆ ಜೀವಕಣಗಳೊಳಗೆ ತೋರಿಸುವುದಾದರೆ, ರಕ್ತದಿಂದ

ಅಂಟಿಕೊಳ್ಳುತ್ತವೆ. ಇದು ಪ್ರವೇಶಿಸಲು ಸಾಧ್ಯವಿಲ್ಲ ಗ್ಲೂಕೋಸ್‌ ಅನ್ನು

ಸರದಿಯಾಗಿ ವಾಹಕನಾಳಗಳನ್ನು ಹೀರಿಕೊಳ್ಳಲು ಅಗತ್ಯವಿರುವ

ಕ್ರಿಯಾಶೀಲಗೊಳಿಸಿ, ಗ್ಲೂಕೋಸ್‌ ವಾಹಕನಾಳಗಳು

ಪರಮಾಣುಗಳು ಸ್ನಾಯುಕಣಗಳೊಳಗೆ ಕಾರ್ಯವೆಸಗುವುದಿಲ್ಲ

ಪ್ರವೇಶಿಸುವಂತೆ ಮಾಡುತ್ತವೆ

↓ ↓ ↓

ಸ್ನಾಯುಕಣಗಳಿಂದ ▲ ರಕ್ತದಲ್ಲಿ ಗ್ಲೂಕೋಸ್‌

ಗ್ಲೂಕೋಸ್‌ ಹೀರಲ್ಪಟ್ಟು, ಹೆಚ್ಚಾಗಿ, ಹೀಗೆ ಇದು ಅತ್ಯಗತ್ಯ

ದಹಿಸಲ್ಪಡುತ್ತದೆ. ಈ ಕಾರ್ಯಗಳಿಗೆ ತಡೆಮಾಡಿ

ರೀತಿಯಲ್ಲಿ, ರಕ್ತದಲ್ಲಿರುವ ನಾಳಗೋಡೆಗಳಿಗೆ ಹಾನಿಮಾಡುತ್ತದೆ. ▼

ಗ್ಲೂಕೋಸ್‌ ಮಟ್ಟವು

ಸಾಮಾನ್ಯ ಪ್ರಮಾಣಕ್ಕೆ

ಹಿಂದಿರುಗುತ್ತದೆ

[ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಗ್ರಾಹಕ

ವಾಹಕನಾಳ

ಇನ್ಸುಲಿನ್‌

ಗ್ಲೂಕೋಸ್‌

ನ್ಯೂಕ್ಲಿಯಸ್‌

[ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ರಕ್ತನಾಳ

ಕೆಂಪು ರಕ್ತಕಣಗಳು

ಗ್ಲೂಕೋಸ್‌

[ಕೃಪೆ]

ಮನುಷ್ಯ: The Complete Encyclopedia of Illustration/J. G. Heck

[ಪುಟ 7ರಲ್ಲಿರುವ ಚಿತ್ರ]

ಮಧುಮೇಹ ಪೀಡಿತರಿಗೆ ಸರಿಯಾದ ಆಹಾರಪಥ್ಯವು ಅತ್ಯಗತ್ಯ

[ಪುಟ 10ರಲ್ಲಿರುವ ಚಿತ್ರಗಳು]

ಮಧುಮೇಹ ಪೀಡಿತರು ಸಾಮಾನ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಲ್ಲರು