6 ವಿಧಗಳಲ್ಲಿ ನಿಮ್ಮ ಆರೋಗ್ಯದ ಸಂರಕ್ಷಣೆ
6 ವಿಧಗಳಲ್ಲಿ ನಿಮ್ಮ ಆರೋಗ್ಯದ ಸಂರಕ್ಷಣೆ
ಪ್ರಗತಿಪರ ದೇಶಗಳಲ್ಲಿ ಒಂದು ಪಂಥಾಹ್ವಾನ
ಇಂದು ಅನೇಕ ಜನರು ಸ್ವಚ್ಛತೆಯನ್ನು ಕಾಪಾಡಲು ಬಹಳಷ್ಟು ಪ್ರಯತ್ನವನ್ನು ಮಾಡಲೇಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ, ಸುರಕ್ಷಿತ ನೀರು ಮತ್ತು ನೈರ್ಮಲ್ಯದ ವ್ಯವಸ್ಥೆಗಳ ಕೊರತೆಯಿರುವ ದೇಶಗಳಲ್ಲಿ ಇದು ಇನ್ನಷ್ಟೂ ಸತ್ಯವಾಗಿದೆ. ಹಾಗಿದ್ದರೂ, ಸ್ವಚ್ಛತೆಯನ್ನು ಕಾಪಾಡಲು ಮಾಡುವ ಯಾವುದೇ ಪ್ರಯತ್ನಗಳು ಸಾರ್ಥಕವಾಗಿರುತ್ತವೆ. ಎಳೆಯ ಮಕ್ಕಳನ್ನು ಬಾಧಿಸುವ ಎಲ್ಲಾ ರೋಗಗಳಲ್ಲಿ ಮತ್ತು ಮರಣಗಳಲ್ಲಿ ಅರ್ಧಾಂಶಕ್ಕಿಂತಲೂ ಹೆಚ್ಚಿನವು, ಕೊಳಕು ಕೈಗಳಿಂದ ಅಥವಾ ಮಲಿನಗೊಂಡ ಆಹಾರ ಅಥವಾ ನೀರಿನಿಂದ ಅವರ ಬಾಯಿಗೆ ಸಾಗಿಸಲ್ಪಡುವ ಕ್ರಿಮಿಗಳೇ ಕಾರಣವಾಗಿರುತ್ತವೆಂದು ಅಂದಾಜುಮಾಡಲಾಗಿದೆ. ‘ವಿಶ್ವಸಂಸ್ಥೆಯ ಮಕ್ಕಳ ನಿಧಿ’ಯ ಜೀವನಕ್ಕೆ ಬೇಕಾಗಿರುವ ನಿಜಾಂಶಗಳು (ಇಂಗ್ಲಿಷ್) ಎಂಬ ಪ್ರಕಾಶನದಲ್ಲಿ ಕೊಡಲ್ಪಟ್ಟಿರುವ ಕೆಳಗಿನ ಸಲಹೆಗಳನ್ನು ಅನುಸರಿಸುವ ಮೂಲಕ ಅನೇಕ ರೋಗಗಳನ್ನು, ಅದರಲ್ಲಿಯೂ ಮುಖ್ಯವಾಗಿ ಅತಿಭೇದಿಯಂಥ ರೋಗಗಳನ್ನು ತಡೆಗಟ್ಟಸಾಧ್ಯವಿದೆ.
1 ಮಲವನ್ನು ಯೋಗ್ಯವಾಗಿ ತೊಲಗಿಸಿರಿ
ಮಲದಲ್ಲಿ ಅನೇಕ ಕ್ರಿಮಿಗಳು ಇರುತ್ತವೆ. ಈ ಕ್ರಿಮಿಗಳು, ಕುಡಿಯುವ ನೀರು ಮತ್ತು ಆಹಾರದಲ್ಲಿ ಸೇರಿಕೊಂಡರೆ ಅಥವಾ ಕೈಗಳಿಗೆ, ಇಲ್ಲವೆ ಆಹಾರವನ್ನು ತಯಾರಿಸುವ ಹಾಗೂ ಬಡಿಸಲು ಬಳಸುವ ಪಾತ್ರೆಗಳಿಗೆ ಅಥವಾ ಸ್ಥಳಗಳಿಗೆ ಹತ್ತಿಕೊಂಡರೆ, ಅಲ್ಲಿಂದ ನಮ್ಮ ಬಾಯಿಗೆ ಸಾಗಿಸಲ್ಪಟ್ಟು, ದೇಹವನ್ನು ಸೇರಿಕೊಳ್ಳಬಹುದು. ಈ ರೀತಿಯಲ್ಲಿ ಅಸ್ವಸ್ಥತೆಯು ಉಂಟಾಗುತ್ತದೆ. ಇಂಥ ಕ್ರಿಮಿಗಳು ಹರಡದಂತೆ ತಡೆಗಟ್ಟಲು ಅತ್ಯುತ್ತಮ ವಿಧಾನವು ಎಲ್ಲಾ ಮಲವನ್ನು ತೊಲಗಿಸುವುದೇ ಆಗಿದೆ. ಮನುಷ್ಯರ ಮಲವನ್ನು ಪಾಯಿಖಾನೆಯಲ್ಲಿ ವಿಸರ್ಜಿಸಬೇಕು ಇಲ್ಲವೆ ಹೂತುಬಿಡಬೇಕು. ಮನೆಗಳ ಬಳಿ, ದಾರಿಯಲ್ಲಿ, ಅಥವಾ ಮಕ್ಕಳು ಆಟವಾಡುವ ಸ್ಥಳಗಳಲ್ಲಿ ಯಾವುದೇ ಪ್ರಾಣಿಗಳ ಮಲವು ಇಲ್ಲದಂತೆ ಖಚಿತಪಡಿಸಿಕೊಳ್ಳಿರಿ.
ಎಲ್ಲಿ ಪಾಯಿಖಾನೆಗಳ ಸೌಕರ್ಯವಿಲ್ಲವೋ ಅಲ್ಲಿ ಮಲವನ್ನು ಕೂಡಲೆ ಹೂತುಬಿಡಿರಿ. ನೆನಪಿನಲ್ಲಿಡಿ, ಎಲ್ಲಾ ಮಲವು—ಶಿಶುಗಳ ಮಲವು ಸಹ—ರೋಗವನ್ನು ಉಂಟುಮಾಡಬಲ್ಲ ಕ್ರಿಮಿಗಳನ್ನು ಹೊಂದಿರುತ್ತದೆ. ಮಕ್ಕಳ ಮಲವನ್ನು ಸಹ ಪಾಯಿಖಾನೆಯಲ್ಲಿ ಹಾಕಬೇಕು ಇಲ್ಲವೆ ಹೂತುಬಿಡಬೇಕು.
ಪಾಯಿಖಾನೆಗಳನ್ನು ಆಗಾಗ ಶುಚಿಗೊಳಿಸಿರಿ. ಪಾಯಿಖಾನೆಗಳನ್ನು ಮುಚ್ಚಿಡಬೇಕು ಮತ್ತು ನೀರು ಹರಿಸಿ ಚೊಕ್ಕಟ್ಟವಾಗಿಡಬೇಕು.
2 ನಿಮ್ಮ ಕೈಗಳನ್ನು ತೊಳೆಯಿರಿ
ನೀವು ನಿಮ್ಮ ಕೈಗಳನ್ನು ಕ್ರಮವಾಗಿ ತೊಳೆಯಬೇಕು. ಸೋಪು ಮತ್ತು ನೀರಿನಿಂದ ಇಲ್ಲವೆ ಬೂದಿ ಮತ್ತು ನೀರಿನಿಂದ ತೊಳೆಯುವ ಮೂಲಕ ಕ್ರಿಮಿಗಳು ತೊಲಗಿಸಲ್ಪಡುತ್ತವೆ. ಕೈಗಳನ್ನು ಕೇವಲ ನೀರಿನಿಂದ ತೊಳೆಯುವುದು ಸಾಕಾಗದು, ಅದರ ಬದಲು ಎರಡೂ ಕೈಗಳನ್ನು ಸೋಪು ಅಥವಾ ಬೂದಿಯಿಂದ ಉಜ್ಜಬೇಕು.
ಮಲವಿಸರ್ಜಿಸಿದ ನಂತರ ಮತ್ತು ಮಲವಿಸರ್ಜನೆಮಾಡಿರುವ ಒಂದು
ಶಿಶು ಇಲ್ಲವೆ ಮಗುವಿನ ಕುಂಡಿಯನ್ನು ತೊಳೆದ ಅನಂತರ, ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು ಅತಿ ಪ್ರಾಮುಖ್ಯವಾಗಿದೆ. ಪ್ರಾಣಿಗಳನ್ನು ಮುಟ್ಟಿದ ನಂತರ, ಆಹಾರವನ್ನು ಸ್ಪರ್ಶಿಸುವ ಮುಂಚೆ, ಮತ್ತು ಮಕ್ಕಳಿಗೆ ಉಣಿಸುವ ಮೊದಲು ನಿಮ್ಮ ಕೈಗಳನ್ನು ತೊಳೆದುಕೊಳ್ಳಿರಿ.ಕೈಗಳನ್ನು ತೊಳೆಯುವುದು, ರೋಗಗಳನ್ನು ಉಂಟುಮಾಡುವ ಕ್ರಿಮಿಗಳಿಂದ ಜನರನ್ನು ಸಂರಕ್ಷಿಸಲು ಸಹಾಯಮಾಡುತ್ತದೆ. ಈ ಕ್ರಿಮಿಗಳು ಎಷ್ಟು ಚಿಕ್ಕದ್ದಾಗಿವೆ ಎಂದರೆ ಅವುಗಳನ್ನು ಸೂಕ್ಷ್ಮದರ್ಶಕಗಳಿಲ್ಲದೆ ನೋಡಲು ಅಸಾಧ್ಯ. ಅವುಗಳು ಮಲಮೂತ್ರಗಳಲ್ಲಿ, ಮೇಲ್ಮೈಯಲ್ಲಿರುವ ನೀರು ಮತ್ತು ಮಣ್ಣಿನಲ್ಲಿ, ಹಸಿಮಾಂಸದಲ್ಲಿ ಅಥವಾ ಅರ್ಧಬೆಂದ ಮಾಂಸದಲ್ಲಿ ಜೀವಿಸುತ್ತವೆ. ಕ್ರಿಮಿಗಳು ದೇಹವನ್ನು ಪ್ರವೇಶಿಸದಂತೆ ತಡೆಗಟ್ಟಬಹುದಾದ ಪ್ರಾಮುಖ್ಯ ವಿಧವು, ನಿಮ್ಮ ಕೈಗಳನ್ನು ತೊಳೆಯುವ ಮೂಲಕವೇ. ಪಾಯಿಖಾನೆಗಳಿಗೆ ಹೋಗುವಾಗ ಪಾದರಕ್ಷೆಗಳನ್ನು ಧರಿಸಿಕೊಳ್ಳುವ ಮೂಲಕ ಅಲ್ಲಿರಬಹುದಾದ ಕ್ರಿಮಿಗಳು ನಿಮ್ಮ ಕಾಲಿನ ಚರ್ಮದ ಮೂಲಕ ದೇಹವನ್ನು ಪ್ರವೇಶಿಸದಂತೆ ತಡೆಗಟ್ಟಸಾಧ್ಯವಿದೆ.
ಮಕ್ಕಳು ಅನೇಕಾವರ್ತಿ ತಮ್ಮ ಬೆರಳುಗಳನ್ನು ಬಾಯಿಯೊಳಗೆ ಹಾಕಿಕೊಳ್ಳುವುದರಿಂದ ಅವರ ಕೈಗಳನ್ನು ಪದೇ ಪದೇ ತೊಳೆಯಿರಿ, ವಿಶೇಷವಾಗಿ ಅವರು ಮಲವಿಸರ್ಜಿಸಿದ ನಂತರ ಮತ್ತು ಅವರು ಏನಾದರೂ ತಿನ್ನುವ ಮುನ್ನ. ತಮ್ಮ ಕೈಗಳನ್ನು ಸ್ವತಃ ತೊಳೆದುಕೊಳ್ಳುವಂತೆ ಮತ್ತು ಪಾಯಿಖಾನೆಗಳ ಅಥವಾ ಮಲವಿಸರ್ಜನೆಮಾಡುವಂಥ ಸ್ಥಳಗಳ ಬಳಿಯಲ್ಲಿ ಆಟವಾಡದಂತೆ ಮಕ್ಕಳಿಗೆ ಕಲಿಸಿರಿ.
3 ಪ್ರತಿದಿನ ನಿಮ್ಮ ಮುಖವನ್ನು ತೊಳೆಯಿರಿ
ಕಣ್ಣಿನ ಸೋಂಕನ್ನು ತಡೆಗಟ್ಟಲು ಸಹಾಯವಾಗುವಂತೆ ನಿಮ್ಮ ಮುಖವನ್ನು ಸೋಪು ಮತ್ತು ನೀರಿನಿಂದ ಪ್ರತಿದಿನ ತೊಳೆಯಿರಿ. ಮಕ್ಕಳ ಮುಖಗಳನ್ನು ಸಹ ತೊಳೆಯಬೇಕು. ಕೊಳಕಾದ ಮುಖವು ಕ್ರಿಮಿಗಳನ್ನು ರವಾನಿಸುವ ನೊಣಗಳನ್ನು ಆಕರ್ಷಿಸುತ್ತದೆ. ಈ ಕ್ರಿಮಿಗಳು ಕಣ್ಣಿನ ಸೋಂಕನ್ನು ಉಂಟುಮಾಡಬಹುದು ಮತ್ತು ಇದು ಒಬ್ಬ ವ್ಯಕ್ತಿಯು ತನ್ನ ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಬಲ್ಲದು.
ನಿಮ್ಮ ಮಕ್ಕಳ ಕಣ್ಣುಗಳನ್ನು ಕ್ರಮವಾಗಿ ತಪಾಸಣೆಮಾಡಿರಿ. ಆರೋಗ್ಯಕರ ಕಣ್ಣುಗಳು ತೇವಭರಿತವೂ ಹೊಳಪುಳ್ಳದ್ದೂ ಆಗಿರುತ್ತವೆ. ಕಣ್ಣುಗಳು ತೇವರಹಿತವೂ ಕೆಂಪಗೆಯೂ ಆಗಿರುವಲ್ಲಿ ಅಥವಾ ಅವುಗಳಿಂದ ದ್ರವ ಹರಿಯುತ್ತಿರುವಲ್ಲಿ, ಮಗುವನ್ನು ಆರೋಗ್ಯಾರೈಕೆ ಮಾಡುವವನ ಅಥವಾ ವೈದ್ಯರ ಬಳಿ ತಪಾಸಣೆಗಾಗಿ ಕರೆದುಕೊಂಡು ಹೋಗಬೇಕಾಗಿದೆ.
4 ಶುದ್ಧವಾದ ನೀರನ್ನು ಮಾತ್ರ ಬಳಸಿರಿ
ಶುದ್ಧವಾದ ನೀರನ್ನು ಬಳಸುವ ಮತ್ತು ಅದನ್ನು ಕ್ರಿಮಿರಹಿತವಾಗಿಡುವ ಕುಟುಂಬಗಳಿಗೆ ಕಾಯಿಲೆಗಳು ಕಡಿಮೆ. ನೀವು ಕುಡಿಯುವ ನೀರು, ಸರಿಯಾಗಿ ನಿರ್ಮಿಸಲ್ಪಟ್ಟು ದುರಸ್ತಾಗಿಡಲ್ಪಟ್ಟಿರುವ ಕೊಳಾಯಿ ವ್ಯವಸ್ಥೆಯಿಂದ ಅಥವಾ ಶುದ್ಧವಾದ ಬಾವಿಗಳಿಂದ ಮತ್ತು ಒರತೆಗಳಿಂದ ಬರುವುದಾದರೆ ಆಗ ಅದು ಶುದ್ಧವಾಗಿರಬಹುದು. ಆದರೆ ಅದು ಕೊಳಗಳಿಂದ, ನದಿಗಳಿಂದ, ಮತ್ತು ತೆರೆದಿಟ್ಟಿರುವ ಟ್ಯಾಂಕ್ಗಳು ಅಥವಾ ಬಾವಿಗಳಿಂದ ಬರುವುದಾದರೆ ಆಗ ಅದು ಶುದ್ಧವಾಗಿರುವ ಸಾಧ್ಯತೆ ತೀರಾ ಕಡಿಮೆ. ಹಾಗಿದ್ದರೂ, ಆ ನೀರನ್ನು ಕುದಿಸುವ ಮೂಲಕ ಕುಡಿಯಲು ಸುರಕ್ಷಿತವನ್ನಾಗಿ ಮಾಡಬಲ್ಲೆವು.
ಬಾವಿಗಳನ್ನು ಮುಚ್ಚಿಡಬೇಕು. ನೀರನ್ನು ತುಂಬಿಡಲು ಮತ್ತು ಶೇಖರಿಸಲು ಬಳಸಲ್ಪಡುವ
ಬಕೆಟ್ಗಳು, ಹಗ್ಗಗಳು, ಮತ್ತು ಹಂಡೆಗಳನ್ನು ಕ್ರಮವಾಗಿ ತೊಳೆಯಬೇಕು ಮತ್ತು ಅವುಗಳನ್ನು ನೆಲದ ಮೇಲೆ ಬಿಡುವ ಬದಲಾಗಿ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಕುಡಿಯುವ ನೀರಿನ ಮೂಲಗಳ ಮತ್ತು ಕುಟುಂಬವು ವಾಸಿಸುವಂಥ ಕ್ಷೇತ್ರಗಳ ಸಮೀಪಕ್ಕೆ ಪ್ರಾಣಿಗಳು ಬರದಂತೆ ನೋಡಿಕೊಳ್ಳಬೇಕು. ಕೀಟನಾಶಕಗಳನ್ನು ಅಥವಾ ರಾಸಾಯನಿಕಗಳನ್ನು ಕುಡಿಯುವ ನೀರಿನ ಬಳಿಯಲ್ಲಿ ಉಪಯೋಗಿಸಬಾರದು.ಮನೆಯಲ್ಲಿ, ಕುಡಿಯುವ ನೀರನ್ನು ಸ್ವಚ್ಛವಾದ ಹಾಗೂ ಮುಚ್ಚಳವಿರುವ ಪಾತ್ರೆಯಲ್ಲಿಡತಕ್ಕದ್ದು. ನೀರು ಶೇಖರಿಸಿಡುವ ಪಾತ್ರೆಗೆ ಕೊಳಾಯಿ ಇರುವುದು ಉತ್ತಮ. ಒಂದುವೇಳೆ ಕೊಳಾಯಿ ಇಲ್ಲದಿದ್ದಲ್ಲಿ, ಪಾತ್ರೆಯಿಂದ ನೀರನ್ನು ಒಂದು ಶುದ್ಧವಾದ ಸೌಟು ಅಥವಾ ಬಟ್ಟಲಿನಿಂದ ತೆಗೆಯತಕ್ಕದ್ದು. ಕುಡಿಯುವ ನೀರನ್ನು ಗಲೀಜಾದ ಕೈಗಳಿಂದ ಮುಟ್ಟಲೇಬಾರದು.
5 ಆಹಾರವನ್ನು ಕ್ರಿಮಿಗಳಿಂದ ಸಂರಕ್ಷಿಸಿರಿ
ಆಹಾರವನ್ನು ಚೆನ್ನಾಗಿ ಬೇಯಿಸುವ ಮೂಲಕ ಕ್ರಿಮಿಗಳನ್ನು ಕೊಲ್ಲಸಾಧ್ಯವಿದೆ. ಆಹಾರವನ್ನು, ವಿಶೇಷವಾಗಿ ಮಾಂಸ ಮತ್ತು ಪಕ್ಷಿಮಾಂಸವು ಚೆನ್ನಾಗಿ ಬೇಯಿಸಲ್ಪಡಬೇಕು. ಬೆಚ್ಚಗಿರುವ ಆಹಾರದಲ್ಲಿ ಕ್ರಿಮಿಗಳು ಬೇಗನೆ ಹೆಚ್ಚಾಗುತ್ತವೆ. ಆದುದರಿಂದಲೇ, ಆಹಾರವನ್ನು ಬೇಯಿಸಿದ ಕೂಡಲೆ ಅದನ್ನು ಸೇವಿಸಬೇಕು. ಒಂದುವೇಳೆ ಬೇಯಿಸಿದ ಆಹಾರವನ್ನು ಎರಡು ತಾಸುಗಳಿಗಿಂತಲೂ ಹೆಚ್ಚಿನ ಸಮಯದ ವರೆಗೆ ಇಡಬೇಕಾದಲ್ಲಿ, ಅದನ್ನು ಬಿಸಿಯಾಗಿರುವ ಅಥವಾ ಶೀತಲವಾಗಿರುವ ಸ್ಥಳದಲ್ಲಿ ಇಡಬೇಕು. ಬೇಯಿಸಿದ ಆಹಾರವನ್ನು ಮುಂದಿನ ಭೋಜನಕ್ಕಾಗಿ ಇಡಬೇಕಾಗಿದ್ದಲ್ಲಿ, ಅದನ್ನು ಮುಚ್ಚಿಡಿರಿ. ಇದು ಆಹಾರವನ್ನು ನೊಣಗಳಿಂದ ಮತ್ತು ಕೀಟಗಳಿಂದ ಸುರಕ್ಷಿತವಾಗಿಡುತ್ತದೆ. ನಂತರ ಅದನ್ನು ಸೇವಿಸುವ ಮುನ್ನ ಮತ್ತೊಮ್ಮೆ ಬಿಸಿಮಾಡಿರಿ.
ಶಿಶುಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಎದೆಹಾಲು ಅತ್ಯುತ್ತಮವಾದದ್ದೂ ಸುರಕ್ಷಿತವಾದದ್ದೂ ಆಗಿದೆ. ಒಂದುವೇಳೆ ಪ್ರಾಣಿಯ ಹಾಲನ್ನು ನೀಡುವಲ್ಲಿ, ಆಗ ತಾನೇ ಕುದಿಸಿದ ಅಥವಾ ಪ್ಯಾಸ್ಟರೈಸ್ಡ್ ಹಾಲು, ಕುದಿಸದ ಹಾಲಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಹಾಲೂಡುವ ಸೀಸೆಯ ಪ್ರತೀ ಉಪಯೋಗದ ಮುನ್ನ, ಅದನ್ನು ಕುದಿಯುವ ನೀರಿನಿಂದ ಶುದ್ಧಗೊಳಿಸಿರಿ. ಹಾಲೂಡುವ ಸೀಸೆಗಳು ಅನೇಕವೇಳೆ ಅತಿಭೇದಿಯನ್ನು ಉಂಟುಮಾಡುವ ಕ್ರಿಮಿಗಳನ್ನು ಹೊಂದಿರುತ್ತವೆ. ಮಕ್ಕಳಿಗೆ ಎದೆಹಾಲುಣಿಸುವುದು ಅಥವಾ ಶುದ್ಧವಾದ ಬಟ್ಟಲಿನಿಂದ ಉಣಿಸುವುದು ಉತ್ತಮ.
ಹಣ್ಣುಹಂಪಲುಗಳನ್ನು ಮತ್ತು ತರಕಾರಿಗಳನ್ನು ಶುದ್ಧವಾದ ನೀರಿನಿಂದ ತೊಳೆಯಿರಿ. ಮಗುವಿಗೆ ಮತ್ತು ಚಿಕ್ಕ ಮಕ್ಕಳಿಗೆ ಅವುಗಳನ್ನು ಹಸಿಯಾಗಿ ತಿನ್ನಲು ಕೊಡುವಾಗ ಹೀಗೆ ಮಾಡುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ.
6 ಮನೆಯ ಎಲ್ಲಾ ಕಚಡವನ್ನು ತೊಲಗಿಸಿರಿ
ನೊಣಗಳು, ಜಿರಲೆಗಳು, ಹೆಗ್ಗಣಗಳು, ಮತ್ತು ಇಲಿಗಳು—ಇವೆಲ್ಲ ಕ್ರಿಮಿಗಳನ್ನು ಸಾಗಿಸುತ್ತವೆ. ಇವು ಕಚಡದಲ್ಲಿ ಸಂತಾನಾಭಿವೃದ್ಧಿಯಾಗುತ್ತವೆ. ನೀವು ವಾಸಿಸುವ ಸ್ಥಳದಲ್ಲಿ ಕಚಡವನ್ನು ತೆಗೆದುಕೊಂಡು ಹೋಗುವ ಏರ್ಪಾಡು ಇಲ್ಲದಿರುವಲ್ಲಿ, ಪ್ರತಿದಿನ ಅದನ್ನು ಕಚಡದ ಹೊಂಡದಲ್ಲಿ ಹಾಕಿ ಹೂತುಬಿಡಿರಿ ಅಥವಾ ಸುಟ್ಟುಹಾಕಿರಿ. ನಿಮ್ಮ ಮನೆಯನ್ನು ಕಚಡದಿಂದ ಮತ್ತು ತ್ಯಾಜ್ಯನೀರಿನಿಂದ ದೂರವಿಡಿರಿ.
ಈ ಸಲಹೆಸೂಚನೆಗಳನ್ನು ನೀವು ಕ್ರಮವಾಗಿ ಅನ್ವಯಿಸುವುದಾದರೆ, ಅದು ಬೇಗನೆ ನಿಮ್ಮ ದಿನಚರಿಯ ಭಾಗವಾಗುತ್ತವೆ. ಅವುಗಳನ್ನು ಮಾಡುವುದು ಕಷ್ಟಕರವೇನಲ್ಲ ಮತ್ತು ಅದಕ್ಕೆ ಹೆಚ್ಚಿನ ಹಣದ ಅವಶ್ಯಕತೆಯೂ ಇಲ್ಲ, ಆದರೆ ಅವುಗಳು ನಿಶ್ಚಯವಾಗಿಯೂ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಸಂರಕ್ಷಿಸುವವು.(g03 9/22)
[ಪುಟ 11ರಲ್ಲಿರುವ ಚಿತ್ರ]
ಎಲ್ಲಿ ಪಾಯಿಖಾನೆಗಳ ಸೌಕರ್ಯವಿಲ್ಲವೋ ಅಲ್ಲಿ ಮಲವನ್ನು ಕೂಡಲೆ ಹೂತುಬಿಡಿರಿ
[ಪುಟ 11ರಲ್ಲಿರುವ ಚಿತ್ರ]
ನಿಮ್ಮ ಕೈಗಳನ್ನು ಕ್ರಮವಾಗಿ ತೊಳೆಯಿರಿ
[ಪುಟ 12, 13ರಲ್ಲಿರುವ ಚಿತ್ರ]
ಪ್ರತಿದಿನ ನಿಮ್ಮ ಮುಖವನ್ನು ಸೋಪು ಮತ್ತು ನೀರಿನಿಂದ ತೊಳೆಯಿರಿ
[ಪುಟ 12ರಲ್ಲಿರುವ ಚಿತ್ರಗಳು]
ಶುದ್ಧವಾದ ನೀರನ್ನು ಬಳಸುವ ಮತ್ತು ಅದನ್ನು ಕ್ರಿಮಿರಹಿತವಾಗಿಡುವ ಕುಟುಂಬಗಳಿಗೆ ಕಾಯಿಲೆಗಳು ಕಡಿಮೆ
[ಪುಟ 13ರಲ್ಲಿರುವ ಚಿತ್ರ]
ಬೇಯಿಸಿದ ಆಹಾರವನ್ನು ಮುಂದಿನ ಭೋಜನಕ್ಕಾಗಿ ಇಡಬೇಕಾಗಿದ್ದಲ್ಲಿ, ಅದನ್ನು ಮುಚ್ಚಿಡಿರಿ
[ಪುಟ 13ರಲ್ಲಿರುವ ಚಿತ್ರ]
ಮನೆಯ ಕಚಡವನ್ನು ಪ್ರತಿದಿನ ಹೂತಿಡಬೇಕು ಅಥವಾ ಸುಟ್ಟುಹಾಕಬೇಕು