ನಮ್ಮ ವಾಚಕರಿಂದ
ನಮ್ಮ ವಾಚಕರಿಂದ
ಹೊಡೆತಕ್ಕೊಳಗಾಗಿರುವ ಸ್ತ್ರೀಯರು “ಹೊಡೆತಕ್ಕೊಳಗಾಗಿರುವ ಸ್ತ್ರೀಯರಿಗೆ ಸಹಾಯ” ಎಂಬ ಲೇಖನಮಾಲೆಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ತಕ್ಕ ಮಾತು ದೊರೆಯದು. (ಜನವರಿ - ಮಾರ್ಚ್, 2002) ನಾನು ಗೃಹ ಹಿಂಸಾಚಾರಕ್ಕೆ ಬಲಿಯಾದವಳಾಗಿದ್ದೇನೆ, ಮತ್ತು ನನಗೆ ಏನಾಗುತ್ತಿದೆ ಎಂಬುದನ್ನು ಪೊಲೀಸರಿಗೆ ವರದಿಸಲು ಹೇಗೊ ಶಕ್ತಳಾದೆನಾದರೂ, ನಾನು ಸಮಾಧಾನಪಡಿಸಲು ಸಾಧ್ಯವಿಲ್ಲದಿದ್ದ ವೇದನೆ, ನೋವು ಹಾಗೂ ತೀವ್ರವಾದ ದುಃಖವನ್ನು ಯಾರೊಬ್ಬರೂ ಅರ್ಥಮಾಡಿಕೊಳ್ಳಲಾರರು ಎಂಬುದು ನನಗೆ ಚೆನ್ನಾಗಿ ಮನದಟ್ಟಾಗಿತ್ತು. ಈ ಲೇಖನಗಳು ನನಗಿರುವ ಭಾವನೆಗಳನ್ನೇ ವರ್ಣಿಸುತ್ತವೆ.
ಎನ್. ಎಲ್., ಇಟಲಿ (g02 6/22)
ಈ ಪತ್ರಿಕೆಯ ಹೊರಹೊದಿಕೆಯನ್ನು ತೆರೆದು, ಮುಖಪುಟವನ್ನು ನೋಡಿದ ಕೂಡಲೆ ನನ್ನ ಕಣ್ಣುಗಳಲ್ಲಿ ನೀರು ತುಂಬಿತು. ನನ್ನ ಜೀವನದಲ್ಲಿ ಎಂದೂ ಸಂಭವಿಸಿಯೇ ಇಲ್ಲವೆಂದು ನಾನು ತೋರ್ಪಡಿಸಿಕೊಳ್ಳಲು ಬಯಸುತ್ತಿದ್ದ ನನ್ನ ಗತ ಜೀವನದ ಒಂದು ಭಾಗವನ್ನು ಈ ಲೇಖನಗಳು ಚರ್ಚಿಸುತ್ತಿವೆ ಎಂಬ ಅನಿಸಿಕೆಯಿಂದಾಗಿ, ತತ್ಕ್ಷಣವೇ ನಾನು ಪತ್ರಿಕೆಯನ್ನು, ಅದರ ಕೊನೆಯ ಪುಟವು ಮೇಲೆ ಕಾಣಿಸುವಂಥ ರೀತಿಯಲ್ಲಿ ಮಡಚಿಟ್ಟೆ. ಆ ಪತ್ರಿಕೆಯನ್ನು ಓದಲು ಆರಂಭಿಸುವಂತೆ ನಾನು ಬಲಕ್ಕಾಗಿ ಪ್ರಾರ್ಥಿಸಿದೆ. ಅದನ್ನು ಓದಿದ್ದಕ್ಕಾಗಿ ನಾನೆಷ್ಟು ಕೃತಜ್ಞಳಾಗಿದ್ದೇನೆ! ನಾನೊಬ್ಬಳೇ ಈ ಕಷ್ಟವನ್ನು ಅನುಭವಿಸುತ್ತಿಲ್ಲ ಎಂಬುದನ್ನು ಗ್ರಹಿಸಲು ಈ ಲೇಖನಮಾಲೆಯು ನನಗೆ ಸಹಾಯಮಾಡಿತು. “ಒಬ್ಬನ ಸಂಗಾತಿಗೆ ಹೊಡೆಯುವುದು ದೇವರ ದೃಷ್ಟಿಯಲ್ಲಿ ಘೋರ ಪಾಪವಾಗಿದೆ” ಎಂಬ ಮಾತುಗಳನ್ನು ಓದುವುದು ತಾನೇ ಗಾಯದ ಮೇಲೆ ಸಾಂತ್ವನದಾಯಕ ಎಣ್ಣೆಯನ್ನು ಹೊಯ್ಯುವಂತಿತ್ತು. ನಿಜ ಜೀವನದ ಸನ್ನಿವೇಶಗಳನ್ನು ಚರ್ಚಿಸುವ ಇಂಥ ಸಾಂತ್ವನದಾಯಕ ಲೇಖನಗಳಿಗಾಗಿ ಉಪಕಾರ.
ಡಿ. ಜಿ. ಎಮ್., ಅಮೆರಿಕ (g02 6/22)
ಈ ಲೇಖನಗಳಲ್ಲಿ ತಿಳಿಸಲ್ಪಟ್ಟಿರುವ ಸ್ತ್ರೀಯರ ಅನುಭವವೇ ನನಗೂ ಆಗಿತ್ತು. ಮದ್ಯಪಾನ ಹಾಗೂ ನನ್ನ ಗಂಡನು ಬೆಳೆದು ಬಂದಿದ್ದ ಪರಿಸರವೇ ಇದಕ್ಕೆ ಕಾರಣವೆಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಆ ಅಂಶಗಳು ವಿಷಯಗಳನ್ನು ವಿವರಿಸುತ್ತವಾದರೂ, ಹಿಂಸಾಚಾರಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಾಗ ನನಗೆ ಸಾಂತ್ವನದ ಅನಿಸಿಕೆಯಾಯಿತು. ನನ್ನ ಗಂಡನು ಸಹ ಬೈಬಲನ್ನು ಓದಬೇಕು ಮತ್ತು ಯೆಹೋವನ ಪ್ರೀತಿಯನ್ನು ಅರಿತುಕೊಳ್ಳಬೇಕು ಎಂಬುದು ನನ್ನ ಹೃದಯದ ಬಯಕೆಯಾಗಿದೆ.
ಎಸ್. ಐ., ಜಪಾನ್ (g02 6/22)
ನಾನು ಹೊಡೆತಕ್ಕೊಳಗಾಗಿರುವ ಒಬ್ಬ ಪತ್ನಿಯಾಗಿರುವುದರಿಂದ, ಈ ಲೇಖನಮಾಲೆಯು ನನ್ನ ಮೇಲೆ ವಿಶೇಷವಾದ ಪ್ರಭಾವವನ್ನು ಬೀರಿತು. ನಾನೇ ರೊಕ್ಸಾನಾಳಾಗಿದ್ದೇನೋ ಎಂಬಂತೆ ನನಗನಿಸಿತು. ಹೊಡೆತಕ್ಕೊಳಗಾಗಿರುವ ಒಬ್ಬ ಪತ್ನಿಗೆ ಹೇಗನಿಸುತ್ತದೆ ಎಂಬುದನ್ನು ತಿಳಿದಿರುವ ಇತರ ಜನರೂ ಇದ್ದಾರೆ ಎಂಬುದನ್ನು ತಿಳಿದುಕೊಂಡದ್ದು ತುಂಬ ಸಹಾಯಕರವಾಗಿತ್ತು. ನನ್ನ ಗಂಡನ ಮನೋಭಾವಕ್ಕೆ ನಾನು ಹೊಣೆಯಲ್ಲ ಎಂಬುದನ್ನು ನಾನು ಈ ಲೇಖನಗಳಿಂದ ತಿಳಿದುಕೊಂಡೆ. ನನ್ನ ಗಂಡನು ನನ್ನನ್ನು ಅಯೋಗ್ಯಳು ಅಥವಾ ಪ್ರಯೋಜನವಿಲ್ಲದವಳು ಎಂದು ಪರಿಗಣಿಸುವುದಾದರೂ, ದೇವರ ದೃಷ್ಟಿಯಲ್ಲಿ ನಾನು ಅಮೂಲ್ಯಳಾಗಿದ್ದೇನೆ ಎಂಬುದನ್ನು ಗ್ರಹಿಸಲು ಸಹ ಅವು ನನಗೆ ಸಹಾಯಮಾಡಿದವು. ಇಂಥ ಸಹಾಯಕರ ವಿಷಯವನ್ನು ಪ್ರಕಟಿಸಿದ್ದಕ್ಕಾಗಿ ನಿಮಗೆ ತುಂಬ ಉಪಕಾರ. ಇದು ಐಶ್ವರ್ಯಕ್ಕಿಂತಲೂ ಎಷ್ಟೋ ಉತ್ತಮವಾಗಿದೆ!
ಬಿ. ಎಲ್., ಫಿಲಿಪ್ಪೀನ್ಸ್ (g02 6/22)
ನಾನು ವ್ಯಕ್ತಪಡಿಸಲು ಅಶಕ್ತಳಾಗಿರುವ ನೋವು ಹಾಗೂ ಆಶಾಭಂಗವನ್ನು ನೀವು ಬರಹ ರೂಪದಲ್ಲಿ ನಮೂದಿಸಲು ಶಕ್ತರಾಗಿದ್ದೀರಿ. ಈ ಸಮಸ್ಯೆಯು ಉಂಟುಮಾಡುವ ಮಾನಸಿಕ ಹಾಗೂ ಭಾವನಾತ್ಮಕ ಬೇಗುದಿಯನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ ಎಂಬುದನ್ನು ಮನಗಾಣಲು ಈ ಲೇಖನಮಾಲೆಯು ನನಗೆ ಸಹಾಯಮಾಡಿತು. ದಯವಿಟ್ಟು ಇಂಥ ಲೇಖನಗಳನ್ನು ಬರೆಯುತ್ತಾ ಇರಿ, ಏಕೆಂದರೆ ಈ ಸಮಸ್ಯೆಯ ಕುರಿತು ಮಾತಾಡುವ ಅಗತ್ಯವಿದೆ ಮತ್ತು ಇತರರೂ ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಈ ಲೇಖನಗಳಿಂದ ನಾನು ಪಡೆದುಕೊಂಡ ಸಾಂತ್ವನವನ್ನೇ ಅನೇಕರು ಪಡೆದುಕೊಳ್ಳುವರು ಎಂಬ ಖಾತ್ರಿ ನನಗಿದೆ.
ಕೆ. ಇ., ಆಸ್ಟ್ರೇಲಿಯ (g02 6/22)
ನಾನು ಮುಂಗೋಪಿಯಾಗಿದ್ದ ಒಬ್ಬ ತಂದೆಯಿಂದ ಬೆಳೆಸಲ್ಪಟ್ಟಿದ್ದೆ, ಮತ್ತು ಅನೇಕವೇಳೆ ನಾನು ನನ್ನ ಪತಿಯ ಮೇಲೆ ಕೋಪಗೊಳ್ಳುತ್ತೇನೆ. ಕೆಲವೊಮ್ಮೆ—ಇಲ್ಲ, ಅನೇಕ ಬಾರಿ—ನಾನೇ ಅವನಿಗೆ ಹೊಡೆಯುತ್ತೇನೆ. ನನ್ನ ಪತಿ ನನಗಿಂತಲೂ ಬಲಿಷ್ಠರಾಗಿದ್ದಾರೆ, ಆದುದರಿಂದ ನಾನು ನಿಜವಾಗಿಯೂ ಅವರಿಗೆ ನೋವುಮಾಡುತ್ತಿಲ್ಲ ಎಂದು ನಾನು ನೆನಸಿದ್ದೆ. ಈ ಲೇಖನವು ಏನನ್ನು ತಿಳಿಸಿತ್ತೋ ಅದನ್ನು, ಅಂದರೆ ಒಬ್ಬನ ಸಂಗಾತಿಗೆ ಹೊಡೆಯುವುದು ದೇವರ ದೃಷ್ಟಿಯಲ್ಲಿ ಘೋರವಾದ ಪಾಪವಾಗಿದೆ ಎಂಬುದನ್ನು ನಾನು ಓದಿದಾಗ, ನನಗೆ ಆಘಾತವಾಯಿತು. ನನ್ನ ಪತಿ ಯೆಹೋವನ ಒಬ್ಬ ದೀನ ಸೇವಕರಾಗಿದ್ದಾರೆ. ನಾನು ಪೂರ್ಣ ಹೃದಯದಿಂದ ಅವರ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ. ಈ ಶಿಸ್ತಿಗಾಗಿ ನಾನು ಯೆಹೋವನಿಗೆ ಕೃತಜ್ಞಳಾಗಿದ್ದೇನೆ.
ಟಿ. ಐ., ಜಪಾನ್ (g02 6/22)
ಈ ಪತ್ರಿಕೆಯು ನನಗೆ ಕಣ್ಣೀರು ಬರಿಸಿತು. ಇದು ನನ್ನ ಸ್ವಂತ ವೈಯಕ್ತಿಕ ಅನುಭವವನ್ನು ನಾನು ಓದುತ್ತಿದ್ದೇನೋ ಎಂಬಂತಿತ್ತು. ಆದರೆ ಇತ್ತೀಚೆಗೆ ನನ್ನ ಪತಿಯವರು ಬೈಬಲಿನ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರು ರಾಜ್ಯ ಸಭಾಗೃಹದಲ್ಲಿ ನಡೆಯುವ ಕೆಲವು ಕೂಟಗಳಿಗೆ ಹೋಗಿದ್ದಾರೆ, ಮತ್ತು ಈಗ ಅವರು ಬೈಬಲ್ ಅಧ್ಯಯನಮಾಡುತ್ತಿದ್ದಾರೆ. ಆ ಪತ್ರಿಕೆಯ 11ನೇ ಪುಟದಲ್ಲಿ ಕಂಡುಬಂದ ಲೂರ್ಡಸ್ಳ ಮಾತುಗಳನ್ನು ನಾನು ಅನುಮೋದಿಸಬಲ್ಲೆ: “ನಾನು ಕನಸು ಕಾಣುತ್ತಿದ್ದೇನೆ ಎಂದು ಕೆಲವೊಮ್ಮೆ ನನಗನಿಸುತ್ತದೆ!”
ಇ. ಆರ್., ಅಮೆರಿಕ (g02 6/22)