ಭೂಕಂಪದ ಪರಿಣಾಮಗಳನ್ನು ನಿಭಾಯಿಸುವುದು
ಭೂಕಂಪದ ಪರಿಣಾಮಗಳನ್ನು ನಿಭಾಯಿಸುವುದು
“ನಾವು ಬೆಳಗ್ಗಿನಿಂದ ನಡೆಯುತ್ತಾ ಇದ್ದೇವೆ. ನಮ್ಮ ಪ್ರಾಣರಕ್ಷಣೆಗಾಗಿ ಓಡುತ್ತಲಿದ್ದೇವೆ. ಕುಡಿಯುವ ನೀರಾಗಲಿ ಆಹಾರವಾಗಲಿ ಇಲ್ಲ. ಎಲ್ಲ ಮನೆಗಳು ನೆಲಸಮವಾಗಿವೆ.”–ಹರ್‌ಜೀವನ್, ಭಾರತದಲ್ಲಿ 7.9 ಪರಿಮಾಣದ ಭೂಕಂಪವೊಂದರಿಂದ ಬದುಕಿ ಉಳಿದವ.
ಭೂಕಂಪವೊಂದರ ಪ್ರಕೋಪವನ್ನು ಅನುಭವಿಸುವುದು ಭೀತಿಕಾರಕವಾಗಿದೆ. “ನನ್ನ ಮಂಚದ ಪಕ್ಕದಲ್ಲಿದ್ದ ಎಂಟು ಅಡಿ ಎತ್ತರದ ಒಂದು ಮರದ ಕಪಾಟಿನಿಂದ ಪುಸ್ತಕಗಳು ನನ್ನ ಸುತ್ತಲೂ ಬೀಳುತ್ತಾ ಇದ್ದವು” ಎಂದು 1999ರಲ್ಲಿ ಟೈವಾನಿನಲ್ಲಿ ನಡೆದ ಒಂದು ಭೂಕಂಪದಿಂದ ಪಾರಾಗಿ ಉಳಿದವಳೊಬ್ಬಳು ಜ್ಞಾಪಿಸಿಕೊಳ್ಳುತ್ತಾಳೆ. ಅವಳು ಕೂಡಿಸಿ ಹೇಳಿದ್ದು, ‘ನನ್ನ ಕಪಾಟಿನ ಮೇಲೆ ಇಡಲ್ಪಟ್ಟಿದ್ದಂಥ, ಹೊಸದಾಗಿ ಖರೀದಿಸಿದ ಒಂದು ಮೋಟಾರ್‌ಸೈಕಲ್ ಹೆಲ್ಮೆಟ್ಟು, ನನ್ನ ಮಂಚದ ಮೇಲೆ ನನ್ನ ತಲೆಯ ಪಕ್ಕದಲ್ಲೇ ಬಂದು ಬಿತ್ತು. ಹಾಸ್ಯವ್ಯಂಗ್ಯದ ಸಂಗತಿಯೇನೆಂದರೆ, ಅದೇ ನನ್ನನ್ನು ಕೊಂದುಹಾಕಸಾಧ್ಯವಿತ್ತು.’
ಪಾರಾಗಿ ಉಳಿದ ನಂತರದ ಬದುಕು
ಒಂದು ಭೂಕಂಪವನ್ನು ಅನುಭವಿಸಿ ಅದರಿಂದ ಪಾರಾಗಿ ಉಳಿಯುವುದು ಹೆದರಿಕೆಯ ಸಂಗತಿಯಾಗಿದೆ. ಆದರೆ ಪಾರಾಗಿ ಉಳಿಯುವುದು ಕೇವಲ ಆರಂಭವಾಗಿದೆ. ಭೂಕಂಪದ ನಂತರದ ತಾಸುಗಳಲ್ಲಿ, ಪರಿಹಾರ ಕಾರ್ಮಿಕರು ಗಾಯಾಳುಗಳನ್ನು ಪತ್ತೆಹಚ್ಚಿ, ಅವರಿಗೆ ಚಿಕಿತ್ಸೆ ನೀಡಲು ಧೈರ್ಯದಿಂದ ಶ್ರಮಿಸುತ್ತಾರೆ. ಇತ್ತೀಚೆಗೆ ಎಲ್ ಸಾಲ್ವಡಾರ್‌ನಲ್ಲಿ ನಡೆದ ಒಂದು ಭೂಕಂಪದ ನಂತರ, ಸುತ್ತುಮುತ್ತಲ ಪರಿಸರವನ್ನು ಹೂತುಹಾಕಿದ್ದ ಕಸದ ಬೆಟ್ಟದಂಥ ರಾಶಿಯನ್ನು ಅಗೆದುತೆಗೆಯಲು ಯೋಜಿಸುತ್ತಿದ್ದ ಒಬ್ಬ ವ್ಯಕ್ತಿ ಹೇಳಿದ್ದು: “ನಾವು ಬಹಳಷ್ಟು ಜಾಗರೂಕರಾಗಿರಬೇಕು. ಭೂಮಿಯು ಪುನಃ ಒಮ್ಮೆ ಅಲುಗಾಡಿದರೆ ಸಾಕು, ಈ ಇಡೀ ಬೆಟ್ಟವೇ ಜರಿದುಬೀಳುವುದು.”
ಕೆಲವೊಮ್ಮೆ, ಒಬ್ಬೊಬ್ಬ ವ್ಯಕ್ತಿಗಳು ಭೂಕಂಪ ಸಂತ್ರಸ್ತರಿಗೆ ಸಹಾಯಮಾಡಲಿಕ್ಕಾಗಿ ಅಸಾಧಾರಣವಾದ ಸ್ವತ್ಯಾಗವನ್ನು ಮಾಡುತ್ತಾರೆ. ಉದಾಹರಣೆಗೆ, 2001ರ ಆರಂಭದಲ್ಲಿ ಭಾರತದಲ್ಲಿ ಒಂದು ದೊಡ್ಡ ಭೂಕಂಪವಾದಾಗ, ಈಗ ಅಮೆರಿಕದಲ್ಲಿ ಜೀವಿಸುತ್ತಿರುವ ಮನು ಎಂಬ ವೃದ್ಧ ವ್ಯಕ್ತಿಯೊಬ್ಬರು ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. “ನಾನು ಹೋಗಲೇಬೇಕು, ಕೇವಲ ನನ್ನ ಕುಟುಂಬಕ್ಕೆ ಮಾತ್ರವಲ್ಲ ಬದಲಾಗಿ ಅಲ್ಲಿ ನರಳುತ್ತಿರುವವರೆಲ್ಲರಿಗೆ ಸಹಾಯಮಾಡಲು ಹೋಗಲೇಬೇಕು” ಎಂದು ಅವರು ತರ್ಕಿಸಿದರು. ಅವರು ಭೇಟಿ ನೀಡಿದ ಪ್ರದೇಶಗಳಲ್ಲಿ ಪರಿಸ್ಥಿತಿಗಳು ತುಂಬ ಶೋಚನೀಯವಾಗಿರುವುದನ್ನು ಕಂಡರು. ಹಾಗಿದ್ದರೂ, ಅವರು ಹೇಳಿದ್ದು: “ಜನರು ತೋರಿಸುವ ಧೈರ್ಯವು ದಂಗುಬಡಿಸುತ್ತದೆ.” ಒಬ್ಬ ಪತ್ರಕರ್ತನು ಬರೆದುದು: “ನನ್ನ ಸುತ್ತಮುತ್ತಲಿದ್ದ ಜನರಲ್ಲಿ ಪ್ರತಿಯೊಬ್ಬರೂ ಒಂದು ದಿನದ ಇಲ್ಲವೆ ಒಂದು ವಾರದ ಅಥವಾ ಒಂದು ತಿಂಗಳ ಸಂಬಳವನ್ನು, ತಮ್ಮ ಉಳಿತಾಯದ ಒಂದು ಭಾಗವನ್ನು ಅಥವಾ ಸಹಾಯಮಾಡಲು ಏನನ್ನಾದರೂ ಕೊಟ್ಟರು.”
ಭಗ್ನಾವಶೇಷಗಳನ್ನು ತೆಗೆದುಹಾಕಿ, ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಸುಲಭ, ಆದರೆ ಯಾರ ಬದುಕುಗಳು ಕೆಲವೊಂದೇ ಕ್ಷಣಗಳ ಭೀಕರತೆಯಿಂದ ಬುಡಮೇಲುಮಾಡಲ್ಪಟ್ಟಿವೆಯೊ ಅಂಥವರಲ್ಲಿ ಸಹಜಸ್ಥಿತಿಯ ಪ್ರಜ್ಞೆಯನ್ನು ಪುನಃಸ್ಥಾಪಿಸುವುದು ತುಂಬ ಕಷ್ಟ. ಎಲ್ ಸಾಲ್ವಡಾರ್‌ನಲ್ಲಿ ನಡೆದ ಭೂಕಂಪದಲ್ಲಿ ತನ್ನ ಮನೆಯನ್ನು ಕಳೆದುಕೊಂಡ ಡೆಲೊರಿಸ್ ಎಂಬ ಮಹಿಳೆಯನ್ನು ತೆಗೆದುಕೊಳ್ಳಿ. “ಇದು ಯುದ್ಧಕ್ಕಿಂತಲೂ ಅತಿ ಕೆಟ್ಟದ್ದಾಗಿದೆ” ಎಂದವಳು ಹೇಳುತ್ತಾಳೆ. “ಯುದ್ಧದ ಸಮಯದಲ್ಲಿ ನಮ್ಮ ತಲೆಯ ಮೇಲೆ ಒಂದು ಛಾವಣಿಯಾದರೂ ಇತ್ತು.”
ನಮ್ಮ ಆರಂಭದ ಲೇಖನದಲ್ಲಿ ತಿಳಿಸಲ್ಪಟ್ಟಂತೆ, ಕೆಲವೊಮ್ಮೆ ಕೇವಲ ಭೌತಿಕ ನೆರವಿನ ಅಗತ್ಯ ಮಾತ್ರವಲ್ಲ ಭಾವನಾತ್ಮಕ ಬೆಂಬಲದ ದೊಡ್ಡ ಅಗತ್ಯವೂ ಇರುತ್ತದೆ. ಉದಾಹರಣೆಗಾಗಿ, 1999ರ ಆರಂಭದಲ್ಲಿ ನಡೆದ ಭೂಕಂಪವು ಪಾಶ್ಚಾತ್ಯ ಕೊಲಂಬಿಯದ ಅರ್ಮೆನಿಯ ನಗರದ ಜೀವನವನ್ನು ಸ್ಥಗಿತಗೊಳಿಸಿದಾಗ, ಒಂದು ಸಾವಿರಕ್ಕಿಂತಲೂ ಹೆಚ್ಚು ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡರು ಮತ್ತು ಅದಕ್ಕಿಂತಲೂ ಹೆಚ್ಚು ಜನರು ಆಘಾತ ಮತ್ತು ಹತಾಶೆಯ ಸ್ಥಿತಿಗೆ ತಳ್ಳಲ್ಪಟ್ಟರು. ಆ ವಿಪತ್ತಿನಲ್ಲಿ ಯಾರ ಸ್ವಂತ ಬಹುಮಹಡಿ ಕಟ್ಟಡವು ನೆಲಕಚ್ಚಿತೋ ಆ ಮನಶ್ಶಾಸ್ತ್ರಜ್ಞ ರಾಬರ್ಟೊ ಇಸ್ಟೇಫಾನ್ ಹೇಳಿದ್ದು: “ಎಲ್ಲಿ ಹೋದರೂ ಜನರು ಸಹಾಯವನ್ನು ಯಾಚಿಸುತ್ತಾ ಇದ್ದಾರೆ. ನಾನೊಂದು ಹಾಮ್‌ಬರ್ಗರ್ ಕೊಳ್ಳಲು ಹೊರಗೆ ಹೋಗುವಾಗ, ನನ್ನನ್ನು ವಂದಿಸುವ ಹೆಚ್ಚಿನ ಜನರು, ತಮ್ಮ ನಿದ್ರಾಹೀನತೆ ಮತ್ತು ದುಃಖದ ಕುರಿತಾಗಿ ಹೇಳಲು ಆ ಅವಕಾಶವನ್ನು ಬಳಸಿಕೊಳ್ಳುತ್ತಾರೆ.”
ಒಂದು ಭೂಕಂಪದ ಬಳಿಕ ಆಗುವ ಭಾವನಾತ್ಮಕ ಅದುರುವಿಕೆಗಳು ಧ್ವಂಸಕಾರಿಯಾಗಿರಬಲ್ಲವೆಂಬುದು ಡಾಕ್ಟರ್ ಇಸ್ಟೇಫಾನ್‌ರವರಿಗೆ ಚೆನ್ನಾಗಿ ತಿಳಿದಿದೆ. ಒಂದು ಪರಿಹಾರ ಶಿಬಿರವನ್ನು ಕಟ್ಟಲಿಕ್ಕಾಗಿ ಸಹಾಯಮಾಡಲು ಮುಂದೆ ಬಂದ ಒಬ್ಬ ಸ್ತ್ರೀಯು ಹೇಳಿದ್ದೇನೆಂದರೆ, ಉದ್ಯೋಗಗಳಿರುವ ಕೆಲವು ಜನರು ಕೆಲಸಕ್ಕೆ ಹೋಗುವ ಗೊಡವೆಗೆ ಹೋಗುವುದಿಲ್ಲ, ಏಕೆಂದರೆ ತಾವು ಬೇಗನೆ ಸಾಯಲಿದ್ದೇವೆಂದು ಅವರಿಗನಿಸುತ್ತದೆ.
ಹತಾಶೆಯ ಮಧ್ಯದಲ್ಲೂ ನಿರೀಕ್ಷೆಯನ್ನು ನೀಡುವುದು
ಇಂಥ ಬಿಕ್ಕಟ್ಟುಗಳ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳು, ಪಾರಾಗಿ ಉಳಿದಿರುವವರಿಗೆ ಶಾರೀರಿಕವಾಗಿ ಮಾತ್ರವಲ್ಲ ಬದಲಾಗಿ
ಆತ್ಮಿಕವಾಗಿಯೂ, ಭಾವನಾತ್ಮಕವಾಗಿಯೂ ಸಹಾಯಮಾಡಲು ಪ್ರಯತ್ನಗಳನ್ನು ಮಾಡುತ್ತಾರೆ. ಉದಾಹರಣೆಗೆ, ಈ ಹಿಂದೆ ತಿಳಿಸಲಾದ ಕೊಲಂಬಿಯದಲ್ಲಿನ ಭೂಕಂಪವಾದ ನಂತರ, ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸು ಕೂಡಲೆ ಒಂದು ಸ್ಥಳಿಕ ತುರ್ತುಪರಿಸ್ಥಿತಿ ಕಮಿಟಿಯನ್ನು ರಚಿಸಿತು. ದೇಶದಾದ್ಯಂತ ಎಲ್ಲ ಭಾಗಗಳಿಂದ ಸಾವಿರಾರು ಮಂದಿ ಸಾಕ್ಷಿ ಸ್ವಯಂಸೇವಕರು, ಆಹಾರ ಮತ್ತು ಹಣವನ್ನು ದಾನಕೊಟ್ಟರು. ಸ್ವಲ್ಪ ಸಮಯದೊಳಗೆ, ಭೂಕಂಪಗ್ರಸ್ತ ಕ್ಷೇತ್ರಕ್ಕೆ ಸುಮಾರು 70 ಟನ್ನುಗಳಷ್ಟು ಆಹಾರವನ್ನು ಕಳುಹಿಸಲಾಯಿತು.ಅನೇಕವೇಳೆ, ಆತ್ಮಿಕ ಬೆಂಬಲವೂ ಹೆಚ್ಚು ಆವಶ್ಯಕವಾಗಿರುತ್ತದೆ. ಕೊಲಂಬಿಯದಲ್ಲಿ ನಡೆದ ಭೂಕಂಪದ ನಂತರ ಒಂದು ಬೆಳಗ್ಗೆ, ಯೆಹೋವನ ಸಾಕ್ಷಿಗಳಲ್ಲೊಬ್ಬಳು ಧ್ವಂಸಗೊಂಡಿದ್ದ ಅರ್ಮೆನಿಯ ನಗರದಲ್ಲಿನ ಒಂದು ಬೀದಿಯಲ್ಲಿ ವಿಶೇಷವಾಗಿ ತೀರ ವಿಷಣ್ಣಳಾಗಿ ತೋರುತ್ತಿದ್ದ ಒಬ್ಬ ಸ್ತ್ರೀಯು ನಡೆದು ಹೋಗುತ್ತಿರುವುದನ್ನು ನೋಡಿದಳು. ಅವಳು ಆ ಸ್ತ್ರೀಯ ಬಳಿ ಹೋಗಿ, ಸತ್ತ ಪ್ರಿಯ ಜನರಿಗಾಗಿ ಯಾವ ನಿರೀಕ್ಷೆ? ಎಂಬ ಶೀರ್ಷಿಕೆಯುಳ್ಳ ಕಿರುಹೊತ್ತಗೆಯನ್ನು ಕೊಟ್ಟಳು. *
ಆ ಸ್ತ್ರೀಯು ಕಿರುಹೊತ್ತಗೆಯನ್ನು ಮನೆಗೆ ಕೊಂಡೊಯ್ದು, ಅದನ್ನು ಜಾಗರೂಕತೆಯಿಂದ ಓದಿದಳು. ಮುಂದಿನ ಸಲ ಯೆಹೋವನ ಸಾಕ್ಷಿಗಳಲ್ಲೊಬ್ಬರು ಅವಳ ಮನೆಗೆ ಬಂದಾಗ, ಅವಳಿಗೆ ತನ್ನ ಗೋಳಿನ ಕಥೆಯನ್ನು ಹೇಳುವ ಮನಸ್ಸಾಯಿತು. ಅವಳಿಗೆ ಆ ನಗರದಲ್ಲಿ ಅನೇಕ ಮನೆಗಳಿದ್ದು, ಅದರಿಂದ ಒಳ್ಳೆಯ ಆದಾಯ ಸಿಗುತ್ತಿತ್ತು. ಆದರೆ ಆ ಭೂಕಂಪವು ಅವುಗಳನ್ನು ನಾಶಗೊಳಿಸಿತ್ತು. ಈಗ ಅವಳು ಬಡತನಕ್ಕೆ ತಳ್ಳಲ್ಪಟ್ಟಿದ್ದಳು. ಅಷ್ಟುಮಾತ್ರವಲ್ಲ, ಆ ಭೂಕಂಪದ ಸಮಯದಲ್ಲಿ ಅವಳು ತನ್ನ 25 ವರ್ಷ ಪ್ರಾಯದ ಮಗನೊಂದಿಗೆ ವಾಸಮಾಡುತ್ತಿದ್ದ ಮನೆಯು ಕುಸಿದುಬಿದ್ದು, ಅವನನ್ನು ಬಲಿತೆಗೆದುಕೊಂಡಿತು. ಈ ಹಿಂದೆ ತಾನು ಧರ್ಮದಲ್ಲಿ ಎಂದೂ ಆಸಕ್ತಿಯನ್ನು ವಹಿಸಿರಲಿಲ್ಲ, ಆದರೆ ಈಗ ತನ್ನ ಬಳಿ ಅನೇಕ ಪ್ರಶ್ನೆಗಳಿವೆಯೆಂದು ಆ ಮಹಿಳೆಯು ತನ್ನ ಮನೆಬಾಗಲಿಗೆ ಬಂದಿದ್ದ ಸಾಕ್ಷಿಗೆ ಹೇಳಿದಳು. ಆ ಕಿರುಹೊತ್ತಗೆಯು ಅವಳಿಗೆ ನಿಜವಾದ ನಿರೀಕ್ಷೆಯನ್ನು ಕೊಟ್ಟಿತು. ಬೇಗನೆ ಅವಳೊಂದಿಗೆ ಒಂದು ಮನೆ ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು.
ಮಾನವಕುಲವು, ಭೂಕಂಪಗಳನ್ನು ಸೇರಿಸಿ ಯಾವುದೇ ನೈಸರ್ಗಿಕ ವಿಪತ್ತುಗಳಿಂದ ಬೆದರಿಕೆಗೊಳಗಾಗದಿರುವ ಸಮಯವೊಂದು ಬರುವುದೆಂಬ ದೃಢಭರವಸೆ ಯೆಹೋವನ ಸಾಕ್ಷಿಗಳಿಗಿದೆ. ಇದಕ್ಕೆ ಕಾರಣವೇನೆಂದು ಮುಂದಿನ ಲೇಖನವು ವಿವರಿಸುವುದು.(g02 3/22)
[ಪಾದಟಿಪ್ಪಣಿ]
^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 6ರಲ್ಲಿರುವ ಚೌಕ]
ಸಿದ್ಧರಾಗಿರಿ!
◼ ನೀರಿನ ಹೀಟರ್‌ಗಳು ಸರಿಯಾಗಿ ಬಿಗಿಪಡಿಸಲ್ಪಟ್ಟಿವೆ ಮತ್ತು ಭಾರವಾದ ವಸ್ತುಗಳು ಒಂದೊ ನೆಲದ ಮೇಲೆ ಅಥವಾ ಶೆಲ್ಫ್‌ಗಳ ಕೆಳಭಾಗದಲ್ಲಿ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
◼ ವಿದ್ಯುತ್ತಿನ ಸರಬರಾಜನ್ನು ನಿಲ್ಲಿಸುವುದು ಮತ್ತು ಗ್ಯಾಸ್ ಹಾಗೂ ನೀರಿನ ಸರಬರಾಜನ್ನು ಆಫ್ ಮಾಡುವುದು ಹೇಗೆಂಬುದನ್ನು ಕುಟುಂಬದ ಸದಸ್ಯರಿಗೆ ಕಲಿಸಿರಿ.
◼ ಅಗ್ನಿಶಾಮಕ ಮತ್ತು ಪ್ರಥಮ ಚಿಕಿತ್ಸೆಯ ಕಿಟ್‌ನೊಂದಿಗೆ ನಿಮ್ಮ ಮನೆಯನ್ನು ಸಜ್ಜುಗೊಳಿಸಿರಿ.
◼ ಹೊಸ ಬ್ಯಾಟರಿಗಳುಳ್ಳ ಒಂದು ಪೋರ್ಟಬಲ್ ರೇಡಿಯೊವನ್ನು ಯಾವಾಗಲೂ ಹತ್ತಿರವಿಡಿರಿ.
◼ ಕುಟುಂಬದಲ್ಲಿ ಭೂಕಂಪ ಕವಾಯತುಗಳನ್ನು (ಡ್ರಿಲ್ಸ್) ನಡೆಸುತ್ತಾ ಇರಿ, ಮತ್ತು (1) ಶಾಂತಚಿತ್ತರಾಗಿರುವ, (2) ಸ್ಟೋವ್‌ಗಳನ್ನೂ ಹೀಟರ್‌ಗಳನ್ನೂ ಆಫ್ ಮಾಡುವ (3) ದ್ವಾರದಲ್ಲಿ ನಿಂತುಕೊಳ್ಳುವ ಇಲ್ಲವೆ ಒಂದು ಟೇಬಲ್ ಇಲ್ಲವೆ ಮೇಜಿನಡಿ ಹೋಗುವ, ಮತ್ತು (4) ಕಿಟಕಿಗಳಿಂದ, ಕನ್ನಡಿಗಳಿಂದ ಹಾಗೂ ಹೊಗೆಕೊಳವೆಗಳಿಂದ ದೂರವಿರುವ ಅಗತ್ಯವನ್ನು ಒತ್ತಿಹೇಳಿರಿ.
[ಪುಟ 7ರಲ್ಲಿರುವ ಚೌಕ/ಚಿತ್ರ]
ಇಸ್ರಯೇಲಿನಲ್ಲಿ ಭೂಕಂಪಗಳು
“ಭೂಮಿಯ ಮೇಲೆ ಭೂಕಂಪಗಳ ಅತಿ ದೀರ್ಘವಾದ ಮತ್ತು ಅತಿ ಅಖಂಡವಾದ ಐತಿಹಾಸಿಕ ದಾಖಲೆ” ಇಸ್ರಯೇಲಿಗಿದೆ ಎಂದು ಪ್ರೊಫೆಸರ್ ಆಮೋಸ್ ನುರ್ ಬರೆಯುತ್ತಾರೆ. ಕಾರಣವೇನೆಂದರೆ, ಭೂಮಧ್ಯ ಸಾಗರ ಹಾಗೂ ಅರೇಬಿಯನ್ ಶಿಲಾಫಲಕಗಳ ನಡುವಿನ ಬಿರುಕು (ಫಾಲ್ಟ್ ಲೈನ್) ಆಗಿರುವ ಗ್ರೇಟ್ ರಿಫ್ಟ್ ವ್ಯಾಲಿಯ ಒಂದು ಭಾಗವು, ಇಸ್ರಯೇಲಿನ ಮಧ್ಯದಿಂದ ಹಾದುಹೋಗುತ್ತಾ ಉತ್ತರದಿಂದ ದಕ್ಷಿಣದ ವರೆಗೆ ಇದೆ.
ಆಸಕ್ತಿಕರ ಸಂಗತಿಯೇನೆಂದರೆ, ಪ್ರಾಚೀನಕಾಲದ ಇಂಜಿನಿಯರರು ಭೂಕಂಪದ ಹಾನಿಯನ್ನು ಕಡಿಮೆಗೊಳಿಸಲಿಕ್ಕಾಗಿ ಒಂದು ವಿಶೇಷ ತಂತ್ರವನ್ನು ಬಳಸುತ್ತಿದ್ದರೆಂದು ಕೆಲವು ಪ್ರಾಚೀನ ವಸ್ತುಶಾಸ್ತ್ರಜ್ಞರು ನಂಬುತ್ತಾರೆ. ಮತ್ತು ಇದು ಸೊಲೊಮೋನನ ನಿರ್ಮಾಣ ಕಾರ್ಯಕ್ರಮದ ಕುರಿತಾದ ಬೈಬಲ್ ವಿವರಣೆಯೊಂದಿಗೆ ತಾಳೆಬೀಳುತ್ತದೆ: “ಒಳಗಣ ಪ್ರಾಕಾರವೆನಿಸಿಕೊಳ್ಳುವ ಯೆಹೋವನ ಆಲಯದ ಪ್ರಾಕಾರಕ್ಕೂ ಅರಮನೆಯ ಪ್ರಾಕಾರಕ್ಕೂ ಹೇಗೋ ಹಾಗೆಯೇ ಎಲ್ಲಾ ಮಂದಿರಗಳ ಸುತ್ತಲಿರುವ ದೊಡ್ಡ ಪ್ರಾಕಾರಕ್ಕೆ ಮೂರು ಸಾಲು ಕಲ್ಲಿನ ಕಂಬಗಳೂ ಒಂದು ಸಾಲು ದೇವದಾರುವಿನ ಮರದ ಕಂಬಗಳೂ [“ತೊಲೆಗಳೂ,” NW] ಇದ್ದವು.” (ಓರೆ ಅಕ್ಷರಗಳು ನಮ್ಮವು.) (1 ಅರಸುಗಳು 6:36; 7:12) ಕಲ್ಲಿನ ಕಟ್ಟಡದೊಳಗೆ ಮರದ ತೊಲೆಗಳನ್ನು ಸೇರಿಸುವ ಈ ತಂತ್ರದ ಕುರಿತಾದ ಪುರಾವೆಯನ್ನು ವಿವಿಧ ಸ್ಥಳಗಳಲ್ಲಿ ಕಂಡುಕೊಳ್ಳಲಾಗಿದೆ. ಇದರಲ್ಲಿ ಸೊಲೊಮೋನನ ಕಾಲದ್ದು ಅಥವಾ ಅದಕ್ಕಿಂತಲೂ ಹಿಂದಿನ ಸಮಯದ್ದೆಂದು ನೆನಸಲಾಗುವ, ಮೆಗಿದ್ದೋವಿನ ಬಳಿಯಲ್ಲಿರುವ ಒಂದು ಹೆಬ್ಬಾಗಿಲು ಸೇರಿದೆ. ಈ ತೊಲೆಗಳನ್ನು “ಭೂಕಂಪದಿಂದಾಗುವ ಹಾನಿಯಿಂದ ಕಟ್ಟಡವನ್ನು ಸಂರಕ್ಷಿಸುವ ಯತ್ನದಲ್ಲಿ ಒಳಸೇರಿಸ”ಲಾಗಿರಬಹುದೆಂದು ವಿದ್ವಾಂಸರಾದ ಡೇವಿಡ್ ಎಮ್. ರೊಲ್ ನೆನಸುತ್ತಾರೆ.
[ಚಿತ್ರ]
ಇಸ್ರಯೇಲಿನ ಬೆಟ್‌ಶಿಯಾನ್‌ನಲ್ಲಿರುವ ಭೂಕಂಪ ಭಗ್ನಾವಶೇಷಗಳು
[ಪುಟ 8ರಲ್ಲಿರುವ ಚೌಕ/ಚಿತ್ರಗಳು]
ಆ ಎರಡು ಭಯಭೀತ ನಿಮಿಷಗಳು–ಪಾರಾಗಿ ಉಳಿದವನೊಬ್ಬನ ಕಥೆ
ಭಾರತದ ಅಹಮದಾಬಾದ್‌ನಲ್ಲಿ ನಮ್ಮ ಕುಟುಂಬವು ನನ್ನ ಸೋದರಸಂಬಂಧಿಯೊಬ್ಬಳ ಮದುವೆ ತಯಾರಿಯಲ್ಲಿ ತೊಡಗಿತ್ತು. 2001, ಜನವರಿ 26ರಂದು, ಅಲಾರಮ್ ಗಡಿಯಾರದಿಂದಲ್ಲ ಬದಲಾಗಿ ಭಯಂಕರವಾದ ಕುಲುಕಾಟದಿಂದಾಗಿ ನಾನು ನಿದ್ರೆಯಿಂದ ಎಚ್ಚೆತ್ತೆ. ಲೋಹದ ಕಪಾಟುಗಳು ಹಿಂದೆಮುಂದೆ ಓಲಾಡುತ್ತಿರುವುದನ್ನು ನಾನು ಕೇಳಿಸಿಕೊಂಡಾಗ, ಏನೋ ಆಗುತ್ತಾ ಇದೆಯೆಂದು ನನಗನಿಸಿತು. ನನ್ನ ಚಿಕ್ಕಪ್ಪ, “ಮನೆಯಿಂದ ಹೊರಬನ್ನಿರಿ!” ಎಂದು ಕೂಗಾಡುತ್ತಾ ಇದ್ದರು. ನಾವು ಹೊರಗೆ ಬಂದಾಗ ನಮ್ಮ ಮನೆಯು ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಓಲಾಡುತ್ತಾ ಇರುವುದನ್ನು ನೋಡಿದೆವು. ಅದು ಹೀಗೆಯೇ ಮುಂದುವರಿಯುತ್ತಾ ಇರುವುದೋ ಎಂಬಂತೆ ತೋರುತ್ತಿತ್ತು. ವಾಸ್ತವದಲ್ಲಿ ಈ ಕಂಪನಗಳು ಕೇವಲ ಎರಡು ನಿಮಿಷಗಳ ವರೆಗೆ ಮಾತ್ರ ಇದ್ದವು.
ಇಷ್ಟೊಂದು ಒತ್ತಡವನ್ನು ಒಂದೇ ಸಾರಿ ಅರಗಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ನಮ್ಮ ಕುಟುಂಬದ ಸದಸ್ಯರೆಲ್ಲರೂ ಸುರಕ್ಷಿತರಾಗಿದ್ದಾರೆಂಬುದನ್ನು ನಾವು ಮೊದಲು ಖಚಿತಪಡಿಸಿಕೊಂಡೆವು. ಫೋನ್ ಮತ್ತು ವಿದ್ಯುತ್ ಸೌಲಭ್ಯಗಳು ಸ್ಥಗಿತಗೊಳಿಸಲ್ಪಟ್ಟಿದ್ದವು, ಆದುದರಿಂದ ನಾವು ನಮ್ಮ ಸುತ್ತಮುತ್ತಲಿನ ಪಟ್ಟಣಗಳಲ್ಲಿರುವ ಸಂಬಂಧಿಕರ ಸ್ಥಿತಿಯೇನೆಂಬುದನ್ನು ಕೂಡಲೇ ಪತ್ತೆಹಚ್ಚಲಾಗಲಿಲ್ಲ. ಒಂದು ತಾಸಿನ ಅನಿಶ್ಚಿತತೆಯ ನಂತರ, ಅವರೆಲ್ಲರೂ ಸುರಕ್ಷಿತರಾಗಿದ್ದಾರೆಂದು ನಮಗೆ ತಿಳಿದುಬಂತು. ಆದರೆ ಎಲ್ಲರ ಸ್ಥಿತಿಯು ಅಷ್ಟು ಶ್ರೇಯಸ್ಕರವಾಗಿರಲಿಲ್ಲ. ಉದಾಹರಣೆಗಾಗಿ ಅಹಮದಾಬಾದ್‌ನಲ್ಲಿ, ನೂರಕ್ಕಿಂತಲೂ ಹೆಚ್ಚು ಕಟ್ಟಡಗಳು ಕುಸಿದುಬಿದ್ದವು, ಮತ್ತು 500ಕ್ಕಿಂತಲೂ ಹೆಚ್ಚು ಜನರು ತಮ್ಮ ಜೀವಗಳನ್ನು ಕಳೆದುಕೊಂಡರು.
ಹಲವಾರು ವಾರಗಳ ವರೆಗೆ ಎಲ್ಲರೂ ಭೀತಿಯಿಂದ ದಿಗ್ಭ್ರಮೆಗೊಂಡಿದ್ದರು. ಪ್ರತಿ ರಾತ್ರಿ ಜನರು, ಮುಂತಿಳಿಸಲ್ಪಟ್ಟಿದ್ದಂತೆ ಇನ್ನೊಂದು ಭೂಕಂಪವಾಗುವುದೊ ಏನೋ ಎಂಬ ಭಯದಿಂದ ಮಲಗಲು ಹೋಗುತ್ತಿದ್ದರು. ಪುನಃಸ್ಥಾಪನೆಯು ತುಂಬ ನಿಧಾನವಾಗಿ ನಡೆಯಿತು ಮತ್ತು ಅನೇಕರು ನಿರ್ಗತಿಕರಾಗಿ ಉಳಿದರು. ಇದೆಲ್ಲವೂ ಕೇವಲ ಎರಡು ನಿಮಿಷಗಳ ವರೆಗೆ ಇದ್ದ, ಆದರೆ ನಮ್ಮ ಸ್ಮೃತಿಪಟಲದಲ್ಲಿ ಸದಾಕಾಲವೂ ಉಳಿಯುವಂಥ ಒಂದು ಭೂಕಂಪದಿಂದಾಯಿತು.—ಸಮಿರ್ ಸರೈಯಾ ಹೇಳಿದಂತೆ.
[ಪುಟ 6, 7ರಲ್ಲಿರುವ ಚಿತ್ರ]
ಭಾರತದಲ್ಲಿ ಜನವರಿ 2001ರಲ್ಲಿ ನಡೆದ ಭೂಕಂಪದಿಂದ ಪಾರಾದ ಈ ವ್ಯಕ್ತಿಯು, ಸತ್ತು ದಹನಗೊಳಿಸಲ್ಪಡುತ್ತಿರುವ ತನ್ನ ತಾಯಿಯ ಫೋಟೋವನ್ನು ಹಿಡಿದಿದ್ದಾನೆ
[ಕೃಪೆ]
© Randolph Langenbach/UNESCO (www.conservationtech.com)