ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಕಂಪಗಳು, ಬೈಬಲ್‌ ಪ್ರವಾದನೆ ಮತ್ತು ನೀವು

ಭೂಕಂಪಗಳು, ಬೈಬಲ್‌ ಪ್ರವಾದನೆ ಮತ್ತು ನೀವು

ಭೂಕಂಪಗಳು, ಬೈಬಲ್‌ ಪ್ರವಾದನೆ ಮತ್ತು ನೀವು

ಈಲೋಕವು “ಯುಗದ ಸಮಾಪ್ತಿ”ಯನ್ನು ಪ್ರವೇಶಿಸಿದೆಯೆಂಬ ಪುರಾವೆಯನ್ನು ಕೊಡುವಂಥ ಘಟನೆಗಳನ್ನು ಮತ್ತು ಸ್ಥಿತಿಗಳನ್ನು ಯೇಸು ಮುಂತಿಳಿಸಿದನು. ಆ ಅವಧಿಯಲ್ಲಿ, ಉಪದ್ರವಗಳು, ಬರಗಳು ಮತ್ತು ಬಹುವ್ಯಾಪಕವಾದ ಯುದ್ಧಗಳಿರುವವೆಂದು ಅವನು ಹೇಳಿದನು. “ಅಲ್ಲಲ್ಲಿ . . . ಮಹಾ ಭೂಕಂಪಗಳಾಗುವವು” ಎಂದೂ ಅವನು ಹೇಳಿದನು. (ಮತ್ತಾಯ 24:​3, 7; ಲೂಕ 21:​10, 11) ಯೇಸು ನಮ್ಮ ದಿನಕ್ಕೆ ಸೂಚಿಸುತ್ತಿದ್ದನೊ?

ಇಲ್ಲ ಎಂದು ಅನೇಕರು ಹೇಳುತ್ತಾರೆ. ಇತ್ತೀಚಿನ ದಶಕಗಳಲ್ಲಿ ಭೂಕಂಪಗಳ ಸಂಖ್ಯೆಯು ನಿಜವಾಗಿ ಹೆಚ್ಚಿಲ್ಲವೆಂದು ಅವರು ಹೇಳುತ್ತಾರೆ. ವಾಸ್ತವದಲ್ಲಿ ಅಮೆರಿಕದ ರಾಷ್ಟ್ರೀಯ ಭೂಕಂಪ ಮಾಹಿತಿ ಕೇಂದ್ರವು ವರದಿಸುವುದೇನೆಂದರೆ, 20ನೆಯ ಶತಮಾನದಾದ್ಯಂತ 7.0 ಮತ್ತು ಅದಕ್ಕಿಂತಲೂ ಹೆಚ್ಚಿನ ಪರಿಮಾಣದ ಭೂಕಂಪಗಳು “ಬಹಳಷ್ಟು ಮಟ್ಟಿಗೆ ಸ್ಥಿರವಾಗಿ” ಉಳಿದಿವೆ. *

ಆದರೆ ಯೇಸುವಿನ ಪ್ರವಾದನೆಯ ನೆರವೇರಿಕೆಯು, ಭೂಕಂಪಗಳ ಸಂಖ್ಯೆ ಇಲ್ಲವೆ ಶಕ್ತಿಯಲ್ಲಿನ ವೃದ್ಧಿಯನ್ನು ಅಗತ್ಯಪಡಿಸುವುದಿಲ್ಲವೆಂಬುದನ್ನು ಗಮನಿಸಿರಿ. ಅಲ್ಲಲ್ಲಿ ಮಹಾ ಭೂಕಂಪಗಳಾಗುವವು ಎಂದಷ್ಟೇ ಯೇಸು ಹೇಳಿದನು. ಇನ್ನೂ ಹೆಚ್ಚಾಗಿ ಈ ಘಟನೆಗಳು “ಪ್ರಸವವೇದನೆಯ ಪ್ರಾರಂಭ”ವಾಗಿವೆ ಎಂದು ಅವನು ತಿಳಿಸಿದನು. (ಮತ್ತಾಯ 24:⁠8) ವೇದನೆಯನ್ನು, ಭೂಕಂಪಗಳ ಸಂಖ್ಯೆಯಿಂದಾಗಲಿ ರಿಕ್ಟರ್‌ ಮಾಪಕದಲ್ಲಿ ಸೂಚಿಸಲ್ಪಟ್ಟಿರುವ ಸಂಖ್ಯೆಗಳಿಂದಾಗಲಿ ಅಳೆಯಲಾಗುವುದಿಲ್ಲ. ಅದರ ಬದಲು ಅವು ಜನರ ಮೇಲೆ ಬೀರುವ ಪರಿಣಾಮದ ಆಧಾರದ ಮೇಲೆ ಅಳೆಯಲಾಗುತ್ತದೆ.

ಭೂಕಂಪಗಳು ಖಂಡಿತವಾಗಿಯೂ ನಮ್ಮ ದಿನಗಳಲ್ಲಿ ಬಹಳ ವೇದನೆಯನ್ನು ಉಂಟುಮಾಡಿವೆ. ವಾಸ್ತವದಲ್ಲಿ, 20ನೆಯ ಶತಮಾನದಲ್ಲಿ, ಲಕ್ಷಾಂತರ ಜನರು ಈ ವಿಪತ್ತುಗಳಿಂದ ಒಂದೊ ಕೊಲ್ಲಲ್ಪಟ್ಟಿದ್ದಾರೆ ಇಲ್ಲವೇ ಮನೆಮಾರು ಇಲ್ಲದೆ ನಿರ್ಗತಿಕರಾಗಿಬಿಟ್ಟಿದ್ದಾರೆ. ಈ ಮರಣಗಳಲ್ಲಿ ಹೆಚ್ಚಿನವುಗಳನ್ನು ತಡೆಯಸಾಧ್ಯವಿತ್ತೆಂದು ನಿಪುಣರು ಹೇಳುತ್ತಾರೆ. “ಅಭಿವೃದ್ಧಿಶೀಲ ದೇಶಗಳಲ್ಲಿ, ಕಟ್ಟಡ ನಿರ್ಮಾಣದ ಕುರಿತಾದ ಕಟ್ಟುಪಾಡುಗಳನ್ನು ಪಾಲಿಸುವುದು, ತೀವ್ರಗತಿಯ ನಾಗರೀಕರಣದ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಕ್ಷಿಪ್ರವಾಗಿ ಕಟ್ಟಲ್ಪಡುವ ಮತ್ತು ಕಡಿಮೆ ಖರ್ಚಿನ ಮನೆಗಳಿಗಾಗಿರುವ ಬೇಡಿಕೆಗಳಿಗಿಂತ ಕಡಿಮೆ ಮಹತ್ವದ್ದಾಗಿದೆ ಎಂದು ಅನೇಕವೇಳೆ ಎಣಿಸಲಾಗುತ್ತದೆ” ಎಂದು ಬಿ.ಬಿ.ಸಿ ನ್ಯೂಸ್‌ ವರದಿಮಾಡುತ್ತದೆ. ಇತ್ತೀಚೆಗೆ ನಡೆದ ಎರಡು ದುರಂತಗಳ ಕುರಿತಾಗಿ ಮಾತಾಡುತ್ತಾ, ನಗರಗಳಲ್ಲಿ ನಡೆಯುವ ವಿಪತ್ತುಗಳ ವಿಷಯದಲ್ಲಿ ಪರಿಣತನಾಗಿರುವ ಬೆನ್‌ ವಿಸ್‌ನರ್‌ ಎಂಬವನು ಹೇಳುವುದು: “ಈ ಜನರನ್ನು ಕೊಂದುಹಾಕಿದಂಥದ್ದು ಈ ಭೂಕಂಪಗಳಲ್ಲ, ಬದಲಾಗಿ ಮಾನವ ದೋಷ, ಉದಾಸೀನತೆ, ಭ್ರಷ್ಟಾಚಾರ ಮತ್ತು ದುರಾಸೆಯ ಮಿಶ್ರಣವೇ.”

ಹೌದು, ಒಂದು ಭೂಕಂಪದಲ್ಲಿನ ಅತಿ ಅಪಾಯಕಾರಿ ಅಂಶಗಳು, ಮಾನವ ಸ್ವಾರ್ಥ ಮತ್ತು ಅಲಕ್ಷ್ಯಗಳೇ ಆಗಿವೆ. ಆಸಕ್ತಿಕರ ಸಂಗತಿಯೇನೆಂದರೆ, ಈ ವ್ಯವಸ್ಥೆಯ “ಕಡೇ ದಿವಸಗಳ” ಕುರಿತಾದ ಇನ್ನೊಂದು ಬೈಬಲ್‌ ಪ್ರವಾದನೆಯಲ್ಲಿ ಈ ಗುಣಗಳನ್ನೇ ಎತ್ತಿಹೇಳಲಾಗಿದೆ. ಆ ಸಮಯದಲ್ಲಿ ಜನರು “ಸ್ವಾರ್ಥಚಿಂತಕರೂ ಹಣದಾಸೆಯವರೂ” ಆಗಿರುವರೆಂದು ಬೈಬಲ್‌ ಹೇಳುತ್ತದೆ. (2 ತಿಮೊಥೆಯ 3:​1-5) ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತಾದ ಯೇಸುವಿನ ಮಾತುಗಳೊಂದಿಗೆ, ಈ ಪ್ರವಾದನೆಯು ಇನ್ನೊಂದು ವಿಷಯದ ಕುರಿತಾಗಿಯೂ ಸ್ಪಷ್ಟವಾದ ಪುರಾವೆಯನ್ನು ಕೊಡುತ್ತದೆ. ಅದೇನೆಂದರೆ, ಮಹಾ ಭೂಕಂಪಗಳ ಸಮೇತ, ಸದ್ಯದಲ್ಲಿ ಕಷ್ಟನೋವುಗಳನ್ನು ಉಂಟುಮಾಡುವಂಥ ಎಲ್ಲ ಕಾರಣಗಳಿಂದ, ವೇದನೆಯಲ್ಲಿ ಮುಳುಗಿರುವ ಮಾನವಕುಲಕ್ಕೆ ಪರಿಹಾರವನ್ನು ತರುವ ದೇವರ ಸಮಯ ಹತ್ತಿರವಾಗುತ್ತಾ ಇದೆ.​—⁠ಕೀರ್ತನೆ 37:⁠11.

ಈ ಬೈಬಲ್‌ ಆಧಾರಿತ ನಿರೀಕ್ಷೆಯ ಕುರಿತಾಗಿ ನೀವು ಹೆಚ್ಚನ್ನು ಕಲಿಯಲು ಬಯಸುತ್ತೀರೊ? ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ ಇಲ್ಲವೆ ಪುಟ 5ರಲ್ಲಿರುವ ಸೂಕ್ತವಾದ ವಿಳಾಸಕ್ಕೆ ಬರೆಯಿರಿ.(g02 3/22)

[ಪಾದಟಿಪ್ಪಣಿ]

^ ಭೂಕಂಪಗಳ ಸಂಖ್ಯೆಯಲ್ಲಿನ ಯಾವುದೇ ವೃದ್ಧಿಯ ಕುರಿತಾದ ವರದಿಗಳು, ತಂತ್ರಜ್ಞಾನದಲ್ಲಿನ ಪ್ರಗತಿಗಳಿಂದಾಗಿರಬೇಕೆಂದು ಕೆಲವರು ಹೇಳುತ್ತಾರೆ. ಏಕೆಂದರೆ ಇದರಿಂದಾಗಿ ಹೆಚ್ಚೆಚ್ಚು ಸೀಸ್ಮಿಕ್‌ ಘಟನೆಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿದೆ.