ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರೀಕ್ಷೆಗೆ ಕಾರಣ ಇದೆಯೋ?

ನಿರೀಕ್ಷೆಗೆ ಕಾರಣ ಇದೆಯೋ?

ನಿರೀಕ್ಷೆಗೆ ಕಾರಣ ಇದೆಯೋ?

“ತೊಂದರೆಗೆ ಒಳಗಾಗಿರುವ ದಾಂಪತ್ಯಗಳಲ್ಲಿರುವ ಒಂದು ಸಮಸ್ಯೆಯು ಯಾವುದೆಂದರೆ, ಸನ್ನಿವೇಶವು ಖಂಡಿತವಾಗಿಯೂ ಉತ್ತಮಗೊಳ್ಳುವುದಿಲ್ಲ ಎಂಬ ಬಲವಾದ ಅನಿಸಿಕೆಯೇ. ಇಂತಹ ಅನಿಸಿಕೆಯು ಯಾವುದೇ ರೀತಿಯ ಬದಲಾವಣೆ ಆಗದಂತೆ ತಡೆಯುತ್ತದೆ. ಏಕೆಂದರೆ ಇದು ನಿಮಗೆ ಸಕಾರಾತ್ಮಕ ಪ್ರಯತ್ನಗಳನ್ನು ಮಾಡುವಂತಹ ಪ್ರಚೋದನೆಯನ್ನು ನೀಡುವುದಿಲ್ಲ.” ​—⁠ಡಾ. ಆರನ್‌ ಟಿ. ಬೆಕ್‌.

ನಿಮಗೆ ತುಂಬ ನೋವಿದೆ ಮತ್ತು ತಪಾಸಣೆಗಾಗಿ ನೀವು ವೈದ್ಯರ ಬಳಿಗೆ ಹೋಗುತ್ತೀರಿ ಎಂದಿಟ್ಟುಕೊಳ್ಳಿ. ನಿಮಗೆ ತುಂಬ ಚಿಂತೆಯಾಗಿದೆ ಮತ್ತು ಹಾಗಾಗುವುದು ಸಹಜವೇ. ಎಷ್ಟೆಂದರೂ, ನಿಮ್ಮ ಆರೋಗ್ಯ ಅಥವಾ ನಿಮ್ಮ ಜೀವವು ಅಪಾಯದಲ್ಲಿದೆಯಲ್ಲವೇ. ತಪಾಸಣೆಮಾಡಿದ ಬಳಿಕ, ನಿಮಗಿರುವ ಆರೋಗ್ಯ ಸಮಸ್ಯೆಯು ಖಂಡಿತವಾಗಿಯೂ ಗಂಭೀರವಾಗಿದೆ, ಆದರೆ ಇದಕ್ಕೆ ಚಿಕಿತ್ಸೆ ನೀಡಸಾಧ್ಯವಿದೆ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೆ, ಕೊಡಲ್ಪಡುವ ಸಲಹೆಯ ಮೇರೆಗೆ ಆಹಾರಪಥ್ಯವನ್ನು ತೆಗೆದುಕೊಂಡು, ಸರಿಯಾಗಿ ವ್ಯಾಯಾಮಮಾಡುವಲ್ಲಿ, ನೀವು ಸಂಪೂರ್ಣವಾಗಿ ಗುಣಮುಖರಾಗಸಾಧ್ಯವಿದೆ ಎಂದು ವೈದ್ಯರು ನಿಮಗೆ ತಿಳಿಸುತ್ತಾರೆ. ಆಗ ನಿಮ್ಮ ಮನಸ್ಸಿಗೆ ನಿರಾಳವೆನಿಸುತ್ತದೆ ಮತ್ತು ನೀವು ಸಂತೋಷದಿಂದ ವೈದ್ಯರ ಸಲಹೆಯನ್ನು ಪಾಲಿಸುತ್ತೀರಿ ಎಂಬುದರಲ್ಲಿ ಸಂಶಯವೇ ಇಲ್ಲ!

ನಾವು ಪರಿಗಣಿಸುತ್ತಿರುವ ವಿಷಯದೊಂದಿಗೆ ಈ ಸನ್ನಿವೇಶವನ್ನು ಹೋಲಿಸಿ ನೋಡಿರಿ. ನಿಮ್ಮ ದಾಂಪತ್ಯ ಜೀವನದಲ್ಲಿ ನೋವನ್ನು ಅನುಭವಿಸುತ್ತಿದ್ದೀರೋ? ಪ್ರತಿಯೊಂದು ದಾಂಪತ್ಯದಲ್ಲಿ ಅದರದ್ದೇ ಆದ ಸಮಸ್ಯೆಗಳು ಹಾಗೂ ಭಿನ್ನಾಭಿಪ್ರಾಯಗಳು ಇರುತ್ತವೆ ಎಂಬುದು ಒಪ್ಪತಕ್ಕ ವಿಷಯವೇ. ಆದುದರಿಂದ, ನಿಮ್ಮ ವೈವಾಹಿಕ ಸಂಬಂಧದಲ್ಲಿ ಕಷ್ಟಕರ ಸನ್ನಿವೇಶಗಳು ಎದುರಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ನಿಮ್ಮದು ಪ್ರೀತಿರಹಿತ ದಾಂಪತ್ಯ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ. ಆದರೂ, ಈ ನೋವಿನ ಸನ್ನಿವೇಶವು ಅನೇಕ ವಾರಗಳು, ತಿಂಗಳುಗಳು ಅಥವಾ ವರ್ಷಗಳ ವರೆಗೆ ಮುಂದುವರಿಯುವಲ್ಲಿ ಆಗೇನು? ಒಂದುವೇಳೆ ಪರಿಸ್ಥಿತಿಯು ಹೀಗಿರುವಲ್ಲಿ, ನೀವು ಚಿಂತಿತರಾಗುವುದು ಯೋಗ್ಯವಾದದ್ದಾಗಿದೆ. ಏಕೆಂದರೆ ಇದು ಅಲಕ್ಷಿಸಸಾಧ್ಯವಿರುವಂತಹ ಕ್ಷುಲ್ಲಕ ವಿಷಯವಾಗಿರುವುದಿಲ್ಲ. ವಾಸ್ತವದಲ್ಲಿ, ನಿಮ್ಮ ವಿವಾಹದ ಗುಣಮಟ್ಟವು ಕಾರ್ಯತಃ ನಿಮ್ಮ ಜೀವಿತದ ಪ್ರತಿಯೊಂದು ಅಂಶದ ಮೇಲೆ ಹಾಗೂ ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಸಾಧ್ಯವಿದೆ. ದೃಷ್ಟಾಂತಕ್ಕಾಗಿ, ವೈವಾಹಿಕ ಬೇಗುದಿಯು ಖಿನ್ನತೆ, ಕಡಿಮೆ ಕಾರ್ಯದಕ್ಷತೆ, ಹಾಗೂ ಶಾಲೆಯಲ್ಲಿ ಮಕ್ಕಳು ಸರಿಯಾಗಿ ಅಭ್ಯಾಸಮಾಡದಿರುವಂತಹ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿರಸಾಧ್ಯವಿದೆ ಎಂದು ನಂಬಲಾಗುತ್ತದೆ. ಸಮಸ್ಯೆಯು ಇಷ್ಟಕ್ಕೇ ಕೊನೆಗೊಳ್ಳುವುದಿಲ್ಲ. ಏಕೆಂದರೆ, ತಮ್ಮ ಸಂಗಾತಿಯೊಂದಿಗೆ ತಮಗಿರುವ ಸಂಬಂಧವು ದೇವರೊಂದಿಗಿನ ತಮ್ಮ ಸಂಬಂಧದ ಮೇಲೆ ನೇರವಾಗಿ ಪರಿಣಾಮ ಬೀರಸಾಧ್ಯವಿದೆ ಎಂಬುದನ್ನು ಕ್ರೈಸ್ತರು ಗ್ರಹಿಸುತ್ತಾರೆ.​—⁠1 ಪೇತ್ರ 3:⁠7.

ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಸಮಸ್ಯೆಗಳು ಇವೆಯೆಂದ ಮಾತ್ರಕ್ಕೆ, ಸನ್ನಿವೇಶವು ಆಶಾರಹಿತವಾದದ್ದಾಗಿದೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ. ವಿವಾಹದ ವಾಸ್ತವಿಕತೆಯನ್ನು, ಅಂದರೆ ವಿವಾಹದಲ್ಲಿ ಪಂಥಾಹ್ವಾನಗಳು ಎದುರಾಗುವುದು ಸಹಜ ಎಂಬುದನ್ನು ದಂಪತಿಗಳು ಅರಿತುಕೊಳ್ಳಬೇಕು. ಇದು ದಂಪತಿಗಳು ತಮ್ಮ ಸಮಸ್ಯೆಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡಿ, ಅವುಗಳನ್ನು ಬಗೆಹರಿಸಲು ಕಾರ್ಯನಡಿಸುವಂತೆ ಸಹಾಯಮಾಡಸಾಧ್ಯವಿದೆ. ಐಸಿಕ್‌ ಎಂಬ ಹೆಸರಿನ ಒಬ್ಬ ಪತಿಯು ಹೇಳುವುದು: “ದಾಂಪತ್ಯ ಜೀವನದಲ್ಲಿ ಸಿಗುವ ಆನಂದದಲ್ಲಿ ಸಾಮಾನ್ಯವಾಗಿ ಏರಿಳಿತಗಳು ಇರುತ್ತವೆ ಎಂಬುದು ನನಗೆ ಗೊತ್ತೇ ಇರಲಿಲ್ಲ. ಆದುದರಿಂದ, ನಮ್ಮಲ್ಲಿ ಏನೋ ಕೊರತೆಯಿದೆ ಎಂದು ನನಗನಿಸುತ್ತಿತ್ತು!”

ಒಂದುವೇಳೆ ನಿಮ್ಮ ದಾಂಪತ್ಯವು ತುಂಬ ತೊಂದರೆಗೀಡಾಗಿರುವುದಾದರೂ, ಅದನ್ನು ರಕ್ಷಿಸಸಾಧ್ಯವಿದೆ. ಸಮಸ್ಯೆಯು ಅನೇಕ ವರ್ಷಗಳಿಂದ ಇರುವುದಾದರೆ, ಪತಿಪತ್ನಿಯರ ನಡುವೆ ಒಳ್ಳೆಯ ಸಂಬಂಧವಿರದ ಕಾರಣ ಉಂಟಾಗಿರುವ ಮಾನಸಿಕ ಗಾಯಗಳು ತುಂಬ ಗಂಭೀರವಾಗಿರಬಹುದು ಎಂಬುದು ಒಪ್ಪತಕ್ಕ ವಿಷಯವೇ. ಆದರೂ, ನಿರೀಕ್ಷೆಯನ್ನು ಹೊಂದಿರಲು ಬಲವಾದ ಕಾರಣವಿದೆ. ಪ್ರಚೋದನೆಯು ಅತ್ಯಾವಶ್ಯಕ ಅಂಶವಾಗಿದೆ. ಒಂದುವೇಳೆ ಗಂಭೀರವಾದ ವೈವಾಹಿಕ ಸಮಸ್ಯೆಗಳಿರುವ ಇಬ್ಬರೂ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸುಧಾರಣೆಗಳನ್ನು ಮಾಡಲು ನಿರ್ಧರಿಸುವಲ್ಲಿ, ಖಂಡಿತವಾಗಿಯೂ ಸಮಸ್ಯೆಯು ಬಗೆಹರಿಯುವ ಸಾಧ್ಯತೆಯಿದೆ. *

ಆದುದರಿಂದ, ‘ಒಂದು ಸಂತೃಪ್ತ ಸಂಬಂಧಕ್ಕಾಗಿರುವ ನನ್ನ ಬಯಕೆಯು ಎಷ್ಟು ಬಲವಾದದ್ದಾಗಿದೆ?’ ಎಂದು ಸ್ವತಃ ಕೇಳಿಕೊಳ್ಳಿರಿ. ನಿಮ್ಮ ದಾಂಪತ್ಯವನ್ನು ಉತ್ತಮಗೊಳಿಸುವ ಪ್ರಯತ್ನಗಳನ್ನು ಮಾಡಲಿಕ್ಕಾಗಿ ನೀವೂ ನಿಮ್ಮ ಸಂಗಾತಿಯೂ ಮನಃಪೂರ್ವಕವಾಗಿ ಸಿದ್ಧರಿದ್ದೀರೋ? ಈ ಮುಂಚೆ ತಿಳಿಸಲ್ಪಟ್ಟಿರುವ ಡಾ. ಬೆಕ್‌ ಹೇಳುವುದು: “ವಿವಾಹ ಸಂಗಾತಿಗಳು ತಮ್ಮ ದಾಂಪತ್ಯದ ನಕಾರಾತ್ಮಕ ಅಂಶಗಳನ್ನು ಸರಿಪಡಿಸಲು ಹಾಗೂ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಲು ಒಟ್ಟಿಗೆ ಕಾರ್ಯನಡಿಸುವಾಗ, ತುಂಬ ತೊಂದರೆಗೊಳಗಾಗಿರುವಂತಹ ಸಂಬಂಧಗಳು ಸಹ ಸರಿಹೋಗುವಂತೆ ಹೇಗೆ ಸಹಾಯನೀಡಸಾಧ್ಯವಿದೆ ಎಂಬುದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ.” ಆದರೆ ದಾಂಪತ್ಯವನ್ನು ಸರಿಪಡಿಸಲು ನಿಮ್ಮ ಪತಿ ಅಥವಾ ಪತ್ನಿಗೆ ಮನಸ್ಸಿಲ್ಲದಿರುವಲ್ಲಿ ಆಗೇನು? ಅಥವಾ ಅವನು ಇಲ್ಲವೆ ಅವಳಿಗೆ ತಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆಯಿದೆ ಎಂಬ ಅರಿವೇ ಇಲ್ಲದಿರುವಲ್ಲಿ ಆಗೇನು? ನೀವು ಒಬ್ಬೊಂಟಿಯಾಗಿ ದಾಂಪತ್ಯದಲ್ಲಿ ಸುಧಾರಣೆಮಾಡಲು ಪ್ರಯತ್ನಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ನೆನಸಬೇಕೋ? ಖಂಡಿತವಾಗಿಯೂ ಇಲ್ಲ! “ಒಂದುವೇಳೆ ನೀವು ಕೆಲವು ಬದಲಾವಣೆಗಳನ್ನು ಮಾಡುವಲ್ಲಿ, ಇದು ನಿಮ್ಮ ಸಂಗಾತಿಯು ಸಹ ಬದಲಾವಣೆಗಳನ್ನು ಮಾಡುವಂತೆ ಪ್ರೇರೇಪಿಸಬಹುದು. ಅನೇಕಬಾರಿ ಹೀಗಾಗುತ್ತದೆ” ಎಂದು ಡಾ. ಬೆಕ್‌ ಹೇಳುತ್ತಾರೆ.

ನಮ್ಮ ದಾಂಪತ್ಯದಲ್ಲಿ ಹೀಗಾಗಸಾಧ್ಯವಿಲ್ಲ ಎಂಬ ದುಡುಕಿನ ತೀರ್ಮಾನಕ್ಕೆ ಬರಬೇಡಿ. ಸೋಲೊಪ್ಪಿಕೊಳ್ಳುವ ಇಂತಹ ಆಲೋಚನೆಯೇ ನಿಮ್ಮ ದಾಂಪತ್ಯಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಬಹುದು! ನಿಮ್ಮಲ್ಲಿ ಒಬ್ಬರು ಮುನ್ನೆಜ್ಜೆ ಇಡಬೇಕು. ನೀವೇ ಮೊದಲು ಮುನ್ನೆಜ್ಜೆಯಿಡಬಲ್ಲಿರೋ? ಒಂದುವೇಳೆ ನೀವು ಆರಂಭದ ಪ್ರಯತ್ನವನ್ನು ಮಾಡುವುದಾದರೆ, ಒಂದು ಸಂತೋಷಭರಿತ ದಾಂಪತ್ಯವನ್ನು ರೂಪಿಸುವುದರಲ್ಲಿ ನಿಮ್ಮೊಂದಿಗೆ ಜೊತೆಗೂಡಿ ಕಾರ್ಯನಡಿಸುವುದರ ಪ್ರಯೋಜನವನ್ನು ನಿಮ್ಮ ಸಂಗಾತಿಯು ಮನಗಾಣಬಹುದು.

ಹಾಗಾದರೆ, ನಿಮ್ಮ ದಾಂಪತ್ಯವನ್ನು ರಕ್ಷಿಸಲಿಕ್ಕಾಗಿ ವ್ಯಕ್ತಿಗತವಾಗಿ ಅಥವಾ ಒಟ್ಟಿಗೆ ನೀವು ಏನು ಮಾಡಸಾಧ್ಯವಿದೆ? ಈ ಪ್ರಶ್ನೆಗೆ ಉತ್ತರಿಸುವುದರಲ್ಲಿ ಬೈಬಲು ಪ್ರಬಲ ಸಹಾಯಕವಾಗಿದೆ. ಹೇಗೆ ಎಂಬುದನ್ನು ನಾವೀಗ ನೋಡೋಣ.

(g01 1/8)

[ಪಾದಟಿಪ್ಪಣಿ]

^ ಕೆಲವೊಂದು ಗಂಭೀರ ಸನ್ನಿವೇಶಗಳಲ್ಲಿ, ಪತಿಪತ್ನಿಯರು ಪ್ರತ್ಯೇಕವಾಗಲು ಸಮಂಜಸವಾದ ಕಾರಣಗಳು ಇರಬಹುದು ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. (1 ಕೊರಿಂಥ 7:​10, 11) ಇದಲ್ಲದೆ, ವ್ಯಭಿಚಾರದ ಕಾರಣಕ್ಕಾಗಿ ಪಡೆದುಕೊಳ್ಳುವ ವಿಚ್ಛೇದವನ್ನು ಬೈಬಲು ಅನುಮತಿಸುತ್ತದೆ. (ಮತ್ತಾಯ 19:⁠9) ದಾಂಪತ್ಯದ್ರೋಹ ಮಾಡಿರುವ ಒಬ್ಬ ಸಂಗಾತಿಯಿಂದ ವಿಚ್ಛೇದವನ್ನು ಪಡೆಯಬೇಕೋ ಇಲ್ಲವೋ ಎಂಬುದು ವೈಯಕ್ತಿಕ ನಿರ್ಧಾರವಾಗಿದೆ. ಆದುದರಿಂದ, ಇದರ ಬಗ್ಗೆ ಯಾವ ತೀರ್ಮಾನಕ್ಕೆ ಬರಬೇಕು ಎಂಬ ವಿಷಯದಲ್ಲಿ ಇತರರು ಮುಗ್ಧ ಸಂಗಾತಿಯ ಮೇಲೆ ಒತ್ತಡವನ್ನು ಹೇರಬಾರದು.​—⁠ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ 158-61ನೆಯ ಪುಟಗಳನ್ನು ನೋಡಿರಿ.