ನಿಮ್ಮ ಕಣ್ಣಿಗೆ ಕಾಣಿಸದವುಗಳನ್ನು ನೋಡಬಲ್ಲಿರೋ?
ನಿಮ್ಮ ಕಣ್ಣಿಗೆ ಕಾಣಿಸದವುಗಳನ್ನು ನೋಡಬಲ್ಲಿರೋ?
ಸಾಮಾನ್ಯವಾಗಿ ತಿರುವುಗಳಿರುವ ರಸ್ತೆಗಳಲ್ಲಿ ವಾಹನವನ್ನು ಓಡಿಸುತ್ತಿರುವಾಗ, ಎದುರುಗಡೆಯಿಂದ ಬರುವ ವಾಹನಗಳನ್ನು ನೋಡುವುದು ತುಂಬ ಕಷ್ಟವಾಗಿರುತ್ತದೆ. ಆದರೆ, ತಿರುವಿನಲ್ಲಿ ಒಂದು ಕನ್ನಡಿಯನ್ನು ಇಡುವುದಾದರೆ ಎದುರುಗಡೆಯಿಂದ ಬರುವ ವಾಹನಗಳನ್ನು ನೋಡಬಹುದು ಮತ್ತು ಅಪಘಾತಗಳನ್ನು ತಪ್ಪಿಸಬಹುದು. ಅದೇ ರೀತಿಯಲ್ಲಿ, ಎಲ್ಲವನ್ನೂ ಸೃಷ್ಟಿಮಾಡಿದ ದೇವರನ್ನು ಮಾನವರು ನೋಡಲು ಸಾಧ್ಯವಿಲ್ಲ. ಹಾಗಾದರೆ, ಅಂಥ ಒಬ್ಬ ವ್ಯಕ್ತಿಯು ಇದ್ದಾನೆಂದು ತಿಳಿದುಕೊಳ್ಳಲು ಯಾವುದಾದರೂ ಮಾರ್ಗವಿದೆಯೇ?
ನಮ್ಮ ಕಣ್ಣಿಗೆ ಕಾಣಿಸದವುಗಳನ್ನು ಮನಸ್ಸಿನ ಕಣ್ಣುಗಳಿಂದ ಹೇಗೆ ನೋಡಬಹುದು ಎಂಬುದನ್ನು ಮೊದಲನೇ ಶತಮಾನದಲ್ಲಿದ್ದ ಒಬ್ಬ ಬರಹಗಾರನು ತಿಳಿಸಿದ್ದಾನೆ. ಅವನು ಬರೆದದ್ದು: “ಕಣ್ಣಿಗೆ ಕಾಣದಿರುವ ಆತನ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”—ರೋಮಾಪುರ 1:20.
ಇದರ ಕುರಿತು ಸ್ವಲ್ಪ ಯೋಚಿಸಿನೋಡಿ. ಮಾನವ ಸಾಮರ್ಥ್ಯಕ್ಕೂ ಮೀರಿದಂಥ ಅನೇಕ ವಸ್ತುಗಳು ನಮ್ಮ ಸುತ್ತಮುತ್ತಲು ಇವೆ. ಆ ವಸ್ತುಗಳಲ್ಲಿ ಕಾಣಬರುವ ಆತನ ಬುದ್ಧಿಶಕ್ತಿಯನ್ನು ನಿಮ್ಮಿಂದ ನೋಡಲು ಸಾಧ್ಯವಾಗುತ್ತದೆಯೇ? ಅಂಥ ವಸ್ತುಗಳು, ಮನುಷ್ಯನಿಗಿಂತಲೂ ಮಿಗಿಲಾದ ವ್ಯಕ್ತಿಯೊಬ್ಬನಿದ್ದಾನೆ ಎಂಬುದನ್ನು “ನಿಮ್ಮ ತಿಳುವಳಿಕೆಯ ಕಣ್ಣುಗಳು” ನೋಡುವಂತೆ ಸಹಾಯಮಾಡುತ್ತವೋ? ಹಾಗಾದರೆ, ಅಂಥ ಕೆಲವೊಂದು ಉದಾಹರಣೆಗಳನ್ನು ನಾವು ನೋಡೋಣ.—ಎಫೆಸ 1:18, ಕಿಂಗ್ಸ್ ಜೇಮ್ಸ್ ವರ್ಷನ್.
ಸೃಷ್ಟಿಯ ಮೂಲಕ ಕಲಿತುಕೊಳ್ಳುವುದು
ಚಂದ್ರನಿಲ್ಲದ ರಾತ್ರಿಯಂದು ತೇಜೋಮಯವಾದ ಬಾನಿನಲ್ಲಿ ಕಾಂತಿಯುತವಾಗಿ ಮಿನುಗುತ್ತಿರುವ ತಾರೆಗಳನ್ನು ನೀವು ನೋಡಿರಬಹುದು. ಅವುಗಳಲ್ಲಿ ಒಬ್ಬ ಮಹಾ ಸೃಷ್ಟಿಕರ್ತನ ಪುರಾವೆಯನ್ನು ನೋಡಿ ಬೆರಗಾಗಿದ್ದೀರೋ? ಇದನ್ನು ಗಮನಿಸಿದ್ದ ಪುರಾತನ ಕಾಲದ ವ್ಯಕ್ತಿಯೊಬ್ಬನು ಹೇಳಿದ್ದು: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?”—ಕೀರ್ತನೆ 8:3, 4; 19:1.
ಮನುಷ್ಯನು ಎಷ್ಟೇ ಪ್ರಯತ್ನಮಾಡಿದರೂ ನಕಲುಮಾಡಲು ಆಗದಿರುವ ಸೃಷ್ಟಿಯ ಅದ್ಭುತಕರವಾದ ವಸ್ತುಗಳನ್ನು ನೋಡುವಾಗ, ನಾವು ಬೆರಗಾಗುವುದು ತೀರ ಸ್ವಾಭಾವಿಕ. ಹೀಗೆ ಬೆರಗಾದ ಕವಿಯೊಬ್ಬನು, “ದೇವರು ಮಾತ್ರ ವೃಕ್ಷವೊಂದನ್ನು ಸೃಷ್ಟಿಸಬಲ್ಲನು” ಎಂದು ವರ್ಣಿಸಿದ್ದಾನೆ. ಆದರೆ, ಮರಕ್ಕಿಂತಲೂ ಹೆಚ್ಚು ಬೆರಗುಗೊಳಿಸುವ ಸೃಷ್ಟಿಯೆಂದರೆ ಮಾನವನ ಮಗುವಾಗಿದೆ. ಹೆತ್ತವರು ಕಿಂಚಿತ್ತೂ ಬುದ್ಧಿಶಕ್ತಿಯನ್ನು
ಉಪಯೋಗಿಸಿದೆ ಉಂಟಾಗುವ ಅದ್ಭುತವು ಮಗುವಿನ ಜನನವಲ್ಲವೇ! ತಂದೆಯ ವೀರ್ಯಾಣು ತಾಯಿಯ ಅಂಡಾಣುವಿನೊಂದಿಗೆ ಮಿಲನಗೊಂಡಾಗ, ಒಂದು ಮಗುವನ್ನು ಉತ್ಪತ್ತಿಮಾಡುವುದಕ್ಕಾಗಿ ಒಂದು ಹೊಸ ಕೋಶದ ರಚನೆಯಾಗುತ್ತದೆ. ಕೂಡಲೇ ಆ ಕೋಶದಲ್ಲಿರುವ ಡಿಎನ್ಏಯಲ್ಲಿ ಒಂದು ಮಗುವನ್ನು ಉಂಟುಮಾಡುವುದಕ್ಕಾಗಿ ಬೇಕಾಗಿರುವ ಪ್ಲ್ಯಾನುಗಳು ಬರೆಯಲ್ಪಡುತ್ತವೆ. ಡಿಎನ್ಏಯಲ್ಲಿರುವ ಮಾಹಿತಿಯನ್ನು “ಪುಟಗಳಲ್ಲಿ ಬರೆಯುತ್ತಾ ಹೋದರೆ, 600 ಪುಟಗಳ ಸಾವಿರ ಪುಸ್ತಕಗಳು ಬೇಕಾಗಿರುವುವು” ಎಂದು ಹೇಳಲಾಗುತ್ತದೆ.ಆದರೆ, ಇದು ಕೇವಲ ಆರಂಭವಷ್ಟೇ. ಮೂಲ ಕೋಶವು ಎರಡಾಗಿ, ನಂತರ ನಾಲ್ಕಾಗಿ, ಮುಂದೆ ಎಂಟಾಗಿ ವಿಭಜನೆಯಾಗುತ್ತಾ ಹೋಗುತ್ತದೆ. ಸುಮಾರು 270 ದಿನಗಳ ನಂತರ, 200ಕ್ಕಿಂತಲೂ ಹೆಚ್ಚಿನ ಬೇರೆ ಬೇರೆ ರೀತಿಯ ಸಾವಿರಾರು ಲಕ್ಷಗಳುಳ್ಳ ಜೀವಂತ ಕೋಶಗಳು ಒಟ್ಟುಗೂಡಿ ಒಂದು ಮಗುವು ಉಂಟಾಗುತ್ತದೆ. 200ಕ್ಕಿಂತಲೂ ಹೆಚ್ಚಿನ ಬೇರೆ ಬೇರೆ ರೀತಿಯ ಕೋಶಗಳನ್ನು ತಕ್ಕ ಸಮಯದಲ್ಲಿ ಉಂಟುಮಾಡುವುದಕ್ಕಾಗಿ ಬೇಕಾದ ಮಾಹಿತಿಯನ್ನು ಮೂಲ ಕೋಶವು ತನ್ನೊಳಗೆ ಇಟ್ಟುಕೊಂಡಿರುತ್ತದೆ ಎಂಬುದನ್ನು ಸ್ವಲ್ಪ ಯೋಚಿಸಿನೋಡಿ. ಇದು ನಮ್ಮ ಅರಿವಿಗೆ ಬರುವಾಗ, ಸೃಷ್ಟಿಕರ್ತನನ್ನು ಕೊಂಡಾಡುವಂತೆ ನಾವು ಪ್ರಚೋದಿಸಲ್ಪಡುವುದಿಲ್ಲವೇ? ಕೀರ್ತನೆಗಾರು ದೇವರನ್ನು ಕೊಂಡಾಡಿ ಬರೆದಿರುವುದನ್ನು ಗಮನಿಸಿ: “ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.”—ಕೀರ್ತನೆ 139:13-16.
ಒಂದು ಕೋಶದಲ್ಲಿ ಆರಂಭವಾಗಿ, ನಂತರ ಅದು ಬೆಳೆದು ಒಂದು ಮಗುವಾಗಿ ಜನಿಸುವ ಈ “ಅದ್ಭುತಗಳನ್ನು” ಅಭ್ಯಸಿಸಿರುವವರು ಆಶ್ಚರ್ಯಚಕಿತರಾಗುವುದು ತೀರ ಸಹಜ. ಷಿಕಾಗೋ ಮತ್ತು ಈಲಿನಾಯ್ಸ್ ಸ್ಟೇಟ್ ಮೆಡಿಕಲ್ ಸೊಸೈಟೀಸ್ನ ಮಾಜಿ ಅಧ್ಯಕ್ಷರಾಗಿದ್ದ ಡಾಕ್ಟರ್ ಜೇಮ್ಸ್ ಎಚ್. ಹಟನ್ ಇದರ ಕುರಿತು ಹೇಳಿದ್ದೇನೆಂದರೆ, “ಯಾವ ರೀತಿಯ ಜೀನ್ಗಳು ಹಾಗೂ ಕ್ರೋಮೋಸೋಮ್ಗಳನ್ನು ತಯಾರಿಸಬೇಕು ಮತ್ತು ಅವುಗಳನ್ನು ಹೇಗೆ ತಯಾರಿಸಬೇಕು ಎಂಬ ಆಜ್ಞೆಗಳನ್ನು ಒಂದು ಕೋಶದಿಂದ ಇನ್ನೊಂದು ಕೋಶಕ್ಕೆ ಸಾಗಿಸುವುದು ತಾನೇ ಒಂದು ಮ್ಯಾಜಿಕ್ ಆಗಿದೆ. ಕೋಶದ ಈ ಸಾಮರ್ಥ್ಯವನ್ನು ನೋಡಿ ತಾನು ವಿಸ್ಮಿತನಾದೆನೆಂದು ಅವರು ಹೇಳುತ್ತಾರೆ. ನಮ್ಮ ಸಂಶೋಧಕ ವಿಜ್ಞಾನಿಗಳು ಇಂಥ ವಿಷಯಗಳನ್ನು ಕಲಿಯಲು ಸಾಧ್ಯವಾಗಿರುವುದು ನಿಜವಾಗಿಯೂ ಅದ್ಭುತಕರ ವಿಷಯವೇ ಸರಿ. ಆದರೆ, ಮಾನವನ ಕೋಶವು ಈ ರೀತಿಯಲ್ಲೇ ಕೆಲಸಮಾಡಬೇಕು ಎಂಬ ಪ್ಯಾನ್ ಅನ್ನು ಅತ್ಯಂತ ಬುದ್ಧಿಚಾತುರ್ಯವುಳ್ಳ ದೈವಿಕ ಶಕ್ತಿಯೊಂದೇ ಖಂಡಿತವಾಗಿಯೂ ಮಾಡಿರಬೇಕು.”
ಇದರ ಕುರಿತು ಡಾಕ್ಟರ್ ಹಟನ್ ಮುಂದುವರಿಸುತ್ತಾ ಹೇಳುವುದು: “ಅಂತಃಸ್ರಾವಶಾಸ್ತ್ರದ ನನ್ನ ಇನ್ನೊಂದು ವಿಭಾಗದಲ್ಲಿ, ಗ್ರಂಥಿಗಳ ಕ್ರಿಯೆಗಳು ಹಾಗೂ ಅವುಗಳ ಅವ್ಯವಸ್ಥೆಯ ಕುರಿತು ಅಧ್ಯಯನಮಾಡುವಾಗ, ಆ ಗ್ರಂಥಿಗಳಲ್ಲಿರುವ ಬಹುಮುಖ್ಯ ಅಣುಗಳ ರಚನಾಕ್ರಮಗಳು ಕೆಲಸಮಾಡುವ ವೈಖರಿ ಮತ್ತು ಅವುಗಳ ಬೆರಗುಗೊಳಿಸುವ ಜಟಿಲತೆಗೆ ಖಂಡಿತವಾಗಿಯೂ ದೈವಿಕ ಶಕ್ತಿಯೇ ಕಾರಣವಾಗಿರಬೇಕೆಂಬ ದೃಢವಿಶ್ವಾಸವನ್ನು ನೀಡುತ್ತದೆ.” ಅವರು ಮುಕ್ತಾಯಗೊಳಿಸುತ್ತಾ ಹೇಳುವುದು: “ಈ ಅದ್ಭುತಕರವಾದ ರಚನೆಗಳನ್ನು ಅವಲೋಕಿಸುವಾಗ ಸರ್ವಶಕ್ತನಾದ ದೇವರೊಬ್ಬನು ಈ ವಿಶ್ವವನ್ನು ಯೋಜಿಸಿ, ಕಾರ್ಯನಡೆಸುವಂತೆ ಮಾಡಿ, ಅವುಗಳ ಮೇಲ್ವಿಚಾರಣೆಯನ್ನು ಮಾಡುತ್ತಿದ್ದಾನೆ ಎಂದು ನಂಬುವುದಕ್ಕೆ ಖಂಡಿತವಾಗಿಯೂ ಕಾರಣವಿರುವಂತೆ ನನಗನಿಸುತ್ತದೆ.”
ತಾನು ಅಭ್ಯಾಸಮಾಡಿದ ವಿಷಯಗಳ ಕುರಿತು ಇಷ್ಟೆಲ್ಲಾ ಹೇಳಿದ ಮೇಲೆ, ಡಾಕ್ಟರ್ ಹಟನ್ ಹೀಗೆ ಪ್ರಶ್ನಿಸುತ್ತಾರೆ. ನಿಜವಾಗಿಯೂ “ಪ್ರತಿಯೊಂದು ಗುಬ್ಬಚ್ಚಿಯು ನೆಲದ ಮೇಲೆ ಬೀಳುವುದನ್ನು ಗಮನಿಸುವ ದೇವರು ಆತನಾಗಿದ್ದಾನೋ? ನನಗಂತೂ ಅದರ ಕುರಿತು ಸಂದೇಹವೇ. ಕಿಂಚಿತ್ತೂ ಪ್ರಾಮುಖ್ಯವಲ್ಲದ ನನ್ನ ಪ್ರತಿದಿನದ ಆಗುಹೋಗುಗಳಿಗೆ ಆತನು ಯಾವುದೇ ರೀತಿಯ ಗಮನವನ್ನು ಕೊಡುತ್ತಾನೆಂದರೆ ಅದನ್ನು ನಾನು ನಂಬಲಾರೆ” ಎಂದು ಅವರೇ ಉತ್ತರಿಸುತ್ತಾರೆ.
ಸೃಷ್ಟಿಯಲ್ಲಿ ಕಾಣುವ “ಅದ್ಭುತಗಳಲ್ಲಿ” ಬುದ್ಧಿಶಕ್ತಿಯು ಇದೆ ಎಂಬುದನ್ನು ಅನೇಕರು ಒಪ್ಪಿಕೊಳ್ಳುತ್ತಾರಾದರೂ, ಮಾನವರ ಕುರಿತು ಕಾಳಜಿವಹಿಸುವ ವ್ಯಕ್ತಿಗತ ದೇವರೊಬ್ಬನು ಇದ್ದಾನೆ ಎಂದು ಹೇಳಿದಾಗ ಮಾತ್ರ, ಅವರು ಏಕೆ ಸಂದೇಹವನ್ನು ವ್ಯಕ್ತಪಡಿಸುತ್ತಾರೆ?
ದೇವರು ನಮ್ಮ ಕುರಿತು ನಿಜವಾಗಿಯೂ ಅಕ್ಕರೆಯುಳ್ಳವನಾಗಿದ್ದಾನೋ?
ಹೀಗೆ ಕೇಳುವುದಕ್ಕೆ ಅನೇಕ ಕಾರಣಗಳಿವೆ. ಒಂದು ವೇಳೆ ದೇವರೊಬ್ಬನಿರುವುದಾದರೆ, ಮಾನವರು ಇಷ್ಟೊಂದು ಸಂಕಷ್ಟವನ್ನು ಅನುಭವಿಸುವಂತೆ ಖಂಡಿತ ಅನುಮತಿಸಲಾರ ಎಂದು ಅನೇಕರು ತರ್ಕಿಸುತ್ತಾರೆ. ಇನ್ನೂ ಕೆಲವರು, “ನಮಗೆ ಸಹಾಯದ ಅಗತ್ಯವಿದ್ದಾಗ ಆ ದೇವರು ಎಲ್ಲಿಗೆ ಹೋಗಿದ್ದ?” ಎಂದು ಕೇಳುವುದು ಸಾಮಾನ್ಯ ಪ್ರಶ್ನೆಯಾಗಿದೆ. ಇದರ ಕುರಿತಾಗಿ, ಎರಡನೇ ಮಹಾಯುದ್ಧದ ಸಮಯದಲ್ಲಿ ಕೊಲೆಯಾದ ಲಕ್ಷಾಂತರ ನಾಸಿಗಳಲ್ಲಿ ಬದುಕಿ ಉಳಿದ ಒಬ್ಬ ವ್ಯಕ್ತಿಯು, ತಾನು ಕಣ್ಣಾರೆ ಕಂಡ ಕರುಳುಹಿಂಡುವಂಥ ಸಂಕಷ್ಟದಿಂದ ಎಷ್ಟು ದುಃಖಿತನಾಗಿದ್ದನೆಂದರೆ ಅವನು ಹೇಳುವುದು: “ನನ್ನ ಹೃದಯವು ವೇದನೆಯಿಂದ ಎಷ್ಟು ಕಹಿಯಾಗಿದೆಯೆಂದರೆ, ಅದು ನಿಮ್ಮನ್ನು ವಿಷಭರಿತರನ್ನಾಗಿ ಮಾಡಿಬಿಡುವುದು.”
ಅನೇಕರಿಗೆ ಈ ರೀತಿಯ ಅನುಭವಗಳು ಉಭಯ ಸಂಕಟವನ್ನುಂಟುಮಾಡುತ್ತವೆ. ಈಗಾಗಲೇ ತಿಳಿಸಿರುವ ಪುರಾತನ ವ್ಯಕ್ತಿಯು ಗಮನಿಸಿದ್ದೇನೆಂದರೆ, ಪ್ರಕೃತಿಯಲ್ಲಿರುವ ಅದ್ಭುತಕರ ವಿನ್ಯಾಸ ಹಾಗೂ ಕ್ರಮಬದ್ಧತೆಯನ್ನು ಪರೀಕ್ಷಿಸಿನೋಡುವಾಗ, ಇವು ಸೃಷ್ಟಿಕರ್ತನೊಬ್ಬನು ಇದ್ದಾನೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿರುವುದನ್ನು ತೋರಿಸುತ್ತವೆ. ಆದರೆ ನೀವು ಕೇಳಬಹುದು, ಆತನು ನಮ್ಮ ಕುರಿತು ಅಕ್ಕರೆಯುಳ್ಳ ದೇವರಾಗಿರುವುದಾದರೆ, ಇಂಥ ಘೋರ ಸಂಕಷ್ಟಗಳನ್ನು ಅವನು ಹೇಗೆ ಅನುಮತಿಸಲು ಸಾಧ್ಯ? ದೇವರನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ನಾವು ಆತನನ್ನು ಆರಾಧಿಸಬೇಕಾದರೆ, ಈ ಪ್ರಾಮುಖ್ಯ ಪ್ರಶ್ನೆಗೆ ತೃಪ್ತಿದಾಯಕ ಉತ್ತರವು ನಮ್ಮ ಬಳಿ ಇರಬೇಕು. ಆದರೆ, ಅಂಥ ಉತ್ತರವನ್ನು ಎಲ್ಲಿ ಕಂಡುಕೊಳ್ಳಲು ಸಾಧ್ಯವಿದೆ?
ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರ್ ಅನ್ನು ಪಡೆದುಕೊಳ್ಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಅದನ್ನು ನೀವು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಈ ಎಚ್ಚರ! ಪತ್ರಿಕೆಯ ಪುಟ 32ರಲ್ಲಿ ಕೊಡಲ್ಪಟ್ಟಿದೆ. “ದೇವರು ಕಷ್ಟಾನುಭವವನ್ನು ಅನುಮತಿಸಿರುವುದರ ಕಾರಣ” ಮತ್ತು “ದಂಗೆಯ ಫಲಿತಾಂಶ ಏನಾಗಿದೆ?” ಎಂಬ ವಿಭಾಗಗಳನ್ನು ಗಮನವಿಟ್ಟು ಓದುವ ಮೂಲಕ ನಿಮಗೆ ತೃಪ್ತಿದಾಯಕ ಉತ್ತರಗಳು ದೊರಕುವವು ಎಂದು ನಾವು ನೆನಸುತ್ತೇವೆ.
[ಪುಟ 10ರಲ್ಲಿರುವ ಚಿತ್ರಗಳು]
ಸೃಷ್ಟಿಕರ್ತನಿರುವುದರ ಪುರಾವೆಯನ್ನು ಇವುಗಳಲ್ಲಿ ನೀವು ನೋಡುತ್ತೀರೋ?