ಪ್ರಾಪಗ್ಯಾಂಡ ವಿನಾಶಕಾರಿಯಾಗಿರಲು ಸಾಧ್ಯವೇ?
ಪ್ರಾಪಗ್ಯಾಂಡ ವಿನಾಶಕಾರಿಯಾಗಿರಲು ಸಾಧ್ಯವೇ?
“ಸತ್ಯವು ಹೊರಡುವುದಕ್ಕಾಗಿ ತನ್ನ ಚಪ್ಪಲಿಯನ್ನು ಹಾಕಿಕೊಳ್ಳುತ್ತಿರುವಾಗಲೇ, ಸುಳ್ಳು ತನ್ನ ಲೋಕಸಂಚಾರವನ್ನು ಅರ್ಧ ಮುಗಿಸಿರುತ್ತದೆ.”—ಮಾರ್ಕ್ ಟ್ವೆನ್ ಹೇಳುತ್ತಾರೆ.
ಒಬ್ಬ ಶಾಲಾ ಶಿಕ್ಷಕಿಯು ತನ್ನ ತರಗತಿಯ ಏಳು ವರ್ಷದ ವಿದ್ಯಾರ್ಥಿಗೆ, “ಏ, ದರಿದ್ರ ಯೆಹೂದ್ಯನೇ!” ಎಂದು ಬೈಯುತ್ತಾ ಅವನ ಕೆನ್ನೆಗೆ ಜೋರಾಗಿ ಬಾರಿಸಿದಳು. ನಂತರ ತನ್ನ ಇಡೀ ತರಗತಿಯವರನ್ನು ಸಾಲಾಗಿ ಹೋಗಿ ಅವನ ಮುಖಕ್ಕೆ ಉಗಿಯುವಂತೆ ಹೇಳಿದಳು.
ಶಿಕ್ಷಕಿಯು ಆ ಹುಡುಗನ ಅಜ್ಜಿಯ ತಂಗಿಯ ಮಗಳಾಗಿದ್ದಳು. ಆ ಹುಡುಗನೋ ಅಥವಾ ಅವನ ಹೆತ್ತವರೋ ಯೆಹೂದಿಗಳಾಗಿರಲಿಲ್ಲ ಅಥವಾ ಯೆಹೂದ್ಯರ ನಂಬಿಕೆಯನ್ನು ಪಾಲಿಸುತ್ತಿದ್ದವರೂ ಆಗಿರಲಿಲ್ಲ. ಬದಲಿಗೆ, ಅವರು ಯೆಹೋವನ ಸಾಕ್ಷಿಗಳಾಗಿದ್ದರು ಎಂಬುದು ಅವರಿಬ್ಬರಿಗೂ ಚೆನ್ನಾಗಿ ಗೊತ್ತಿತ್ತು. ಯೆಹೂದ್ಯರ ಕುರಿತು ಎಲ್ಲೆಲ್ಲೂ ಇದ್ದ ಪೂರ್ವಕಲ್ಪಿತ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಆ ಶಿಕ್ಷಕಿಯು ತನ್ನ ವಿದ್ಯಾರ್ಥಿಯ ಮೇಲೆ ದ್ವೇಷವನ್ನು ಕಾರುತ್ತಿದ್ದಳು. ಏಕೆಂದರೆ, ಅನೇಕ ವರ್ಷಗಳಿಂದ ಆ ಶಿಕ್ಷಕಿಗೆ ಹಾಗೂ ಅವಳ ತರಗತಿಯ ಮಕ್ಕಳಿಗೆ, ಯೆಹೋವನ ಸಾಕ್ಷಿಗಳು ತುಚ್ಛವಾದ ಜನರೆಂದು ಪಾದ್ರಿಯು ಹೇಳಿದ್ದನು. ಆ ಹುಡುಗನ ತಂದೆತಾಯಿಯರನ್ನು ಕೂಡ ಕಮ್ಯುನಿಸ್ಟರು ಹಾಗು ಸಿಐಎ (ಕೇಂದ್ರಿಯ ಗುಪ್ತಾಚರಣೆಯ ಇಲಾಖೆ) ಏಜಂಟರು ಎಂದೆಲ್ಲಾ ಕರೆದಿದ್ದರು. ಹಾಗಾಗಿ, ಆ ಹುಡುಗನ ಸಹಪಾಠಿಗಳು ಆ “ದರಿದ್ರ ಯೆಹೂದ್ಯನ” ಮುಖಕ್ಕೆ ಉಗಿಯುವುದಕ್ಕಾಗಿ ಕಾಯುತ್ತಿದ್ದರು.
ಅರುವತ್ತು ವರ್ಷಗಳ ಹಿಂದೆ ನಡೆದ ತನ್ನ ಕಥೆಯನ್ನು ಹೇಳಲು ಆ ಹುಡುಗನಾದರೋ ಬದುಕಿದ್ದನು. ಆದರೆ, ಜರ್ಮನಿ ಮತ್ತು ಅದರ ಸುತ್ತಮುತ್ತ ಜೀವಿಸುತ್ತಿದ್ದ 60 ಲಕ್ಷ ಯೆಹೂದ್ಯರಿಗೆ ಆ ಅವಕಾಶವು ಸಹ ಸಿಗಲಿಲ್ಲ. ಏಕೆಂದರೆ, ಅವರ ವಿರುದ್ಧ ಮಾಡಲ್ಪಟ್ಟಿದ್ದ ಕೆಟ್ಟ ಅಪಪ್ರಚಾರದ ನಿಮಿತ್ತವಾಗಿ, ವಿಷದ ಅನಿಲವನ್ನು ತುಂಬಿದ್ದ ಕೊಠಡಿಗಳಲ್ಲಿ ಅವರೆಲ್ಲರ ಜೀವಜ್ಯೋತಿಯನ್ನು ನಂದಿಸಲಾಗಿತ್ತು. ಯೆಹೂದ್ಯರ ವಿರುದ್ಧ ಎಲ್ಲೆಡೆಯೂ ತೀವ್ರವಾದ ಅಪಪ್ರಚಾರವು ಮಾಡಲ್ಪಟ್ಟಿತು. ಅಷ್ಟುಮಾತ್ರವಲ್ಲದೆ, ಅದು ನಿಜವೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಅವಕಾಶವನ್ನೇ ಕೊಡದೆ ಮಾಡಲ್ಪಟ್ಟ ಹಾನಿಕಾರಕವಾದ ಕುಲಭೇದದ ಪ್ರಚಾರದಿಂದಾಗಿ, ಅನೇಕರು ಯೆಹೂದ್ಯರನ್ನು ವೈರಿಗಳಂತೆ ನೋಡಿದರು. ಯೆಹೂದ್ಯರನ್ನು ಬುಡಸಮೇತವಾಗಿ ನಾಶಮಾಡುವುದು ಅವಶ್ಯಕವಾಗಿದೆ ಮಾತ್ರವಲ್ಲ, ಅದು ನ್ಯಾಯಬದ್ಧವೂ ಆಗಿದೆ ಎಂದು ನೆನಸಲಾಯಿತು. ಈ ವಿಷಯದಲ್ಲಿ, ಲಕ್ಷಾಂತರ ಯೆಹೂದ್ಯರ ನಿರ್ಮೂಲನಕ್ಕೆ ಪ್ರಾಪಗ್ಯಾಂಡ ಅಥವಾ ಪ್ರಚಾರವು ಒಂದು ಆಯುಧವಾಗಿ ಪರಿಣಮಿಸಿತು.
ಹೌದು, ಕೆಲವೊಮ್ಮೆ ದ್ವೇಷದ ಲಾಂಛನಗಳಾದಂತಹ ಸ್ವಸ್ತಿಕ ಅಥವಾ ಬೇರೆಯವರಿಗೆ ಹಿಡಿಸದಂತಹ ಹಾಸ್ಯಗಳನ್ನು ಕುತಂತ್ರದಿಂದ ಹೇಳುವ ಮೂಲಕ ಪ್ರಾಪಗ್ಯಾಂಡವನ್ನು ಪ್ರದರ್ಶಿಸಸಾಧ್ಯವಿದೆ. ಅಧಿಕಾರಶಾಹಿಗಳು, ರಾಜಕಾರಣಿಗಳು, ಧಾರ್ಮಿಕ ಗುರುಗಳು, ಜಾಹೀರಾತುಗಾರರು, ವ್ಯಾಪಾರಿಗಳು, ಪತ್ರಿಕೋದ್ಯಮಿಗಳು, ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಬರುವ ಪ್ರಸಿದ್ಧ ವ್ಯಕ್ತಿಗಳು, ಪ್ರಕಟನೋದ್ಯೋಗಿಗಳು ಮಾತ್ರವಲ್ಲ, ಜನರ ಆಲೋಚನೆ ಮತ್ತು ನಡವಳಿಕೆಯನ್ನು ಪ್ರಭಾವಿಸಲು ಆಸಕ್ತರಾಗಿರುವ ಇನ್ನಿತರರು ಸಹ ಮನವೊಪ್ಪಿಸುವ ತಂತ್ರಗಳನ್ನು ಸತತವಾಗಿ ಪ್ರಾಪಗ್ಯಾಂಡ ಮಾಡುವುದಕ್ಕಾಗಿ ಉಪಯೋಗಿಸುತ್ತಿರುತ್ತಾರೆ.
ಆದರೆ, ಪ್ರಚಾರರೂಪದ ಸಂದೇಶಗಳನ್ನು ಸಮಾಜದ ಒಳಿತಿಗಾಗಿಯೂ ಕೂಡ ಉಪಯೋಗಿಸಬಹುದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಉದಾಹರಣೆಗೆ, ವಾಹನಗಳನ್ನು ಓಡಿಸುವಾಗ ಮದ್ಯಪಾನ ಮಾಡಬಾರದೆಂಬ ಪ್ರಾಪಗ್ಯಾಂಡವು ಸಮಾಜದ ಒಳಿತಿಗಾಗಿದೆ. ಆದರೆ ಅದೇ ಸಮಯದಲ್ಲಿ, ಒಂದು ಜನಾಂಗ ಅಥವಾ ಅಲ್ಪಸಂಖ್ಯಾತ ಧಾರ್ಮಿಕ ಜನರ ಮೇಲೆ ದ್ವೇಷವು ಬೆಳೆಯುವಂತೆ ಮಾಡಲು ಅಥವಾ ಸಿಗರೇಟನ್ನು ಖರೀದಿಸುವಂತೆ ಮಾಡಲು ಜನರನ್ನು ಆಕರ್ಷಿಸುವುದಕ್ಕೂ ಪ್ರಾಪಗ್ಯಾಂಡವನ್ನು ಉಪಯೋಗಿಸಬಹುದಾಗಿದೆ. “ಪ್ರತಿದಿನವು ಒಂದಲ್ಲ ಒಂದು ರೀತಿಯ ಮನವೊಪ್ಪಿಸುವ ಸಂದೇಶಗಳಿಂದ ನಾವು ಆಕ್ರಮಿಸಲ್ಪಡುತ್ತೇವೆ” ಎಂದು ಸಂಶೋಧಕರಾದ ಆ್ಯಂಥನಿ ಪ್ರಾಟ್ಕನ್ಸ್ ಮತ್ತು ಎಲೇಟ್ ಆ್ಯರನ್ಸನ್ ಹೇಳುತ್ತಾರೆ. “ಈ ರೀತಿಯ ಮನವೊಪ್ಪಿಸುವ ಸಂವಾದಗಳು, ಮಾತುಕತೆ ಹಾಗೂ ಚರ್ಚೆಯ ಮೂಲಕ ಮಾಡುವಂಥದ್ದಾಗಿರುವುದಿಲ್ಲ. ಅದರ ಬದಲಿಗೆ, ಬಹಳ ಕುಟಿಲವಾಗಿ ಮಾಡಲ್ಪಟ್ಟ ಲಾಂಛನಗಳು ಹಾಗೂ ಮಾನವನ ಮುಖ್ಯ ಭಾವನೆಗಳನ್ನು ಕೆರಳಿಸುವ ಮೂಲಕವೇ ಮನವೊಪ್ಪಿಸಲ್ಪಡುತ್ತವೆ. ಪ್ರಚಾರ ಮಾಡುವ ಸಂದೇಶಗಳು ಜನರ ಒಳ್ಳೆಯದಕ್ಕಾಗಿರಲಿ ಅಥವಾ ಕೆಟ್ಟದಕ್ಕಾಗಿರಲಿ ನಮ್ಮದು ಪ್ರಾಪಗ್ಯಾಂಡ ಅಥವಾ ಪ್ರಚಾರದ ಒಂದು ಯುಗವಾಗಿದೆ.”
ಮಾನವನ ಆಲೋಚನೆ ಮತ್ತು ನಡವಳಿಕೆಯನ್ನು ಪ್ರಭಾವಿಸುವುದಕ್ಕಾಗಿ ಶತಮಾನಗಳಿಂದ ಪ್ರಾಪಗ್ಯಾಂಡವನ್ನು ಹೇಗೆ ಉಪಯೋಗಿಸಲಾಗಿದೆ? ಅಪಾಯಕಾರಿಯಾದ ಪ್ರಾಪಗ್ಯಾಂಡದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಏನು ಮಾಡಬಹುದು? ಭರವಸಾರ್ಹ ಮಾಹಿತಿಯನ್ನು ಒದಗಿಸುವ ಯಾವುದಾದರೂ ಮೂಲವಿದೆಯೇ? ಈ ಪ್ರಶ್ನೆಗಳು ಮತ್ತು ಇನ್ನಿತರ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.
[ಪುಟ 3ರಲ್ಲಿರುವ ಚಿತ್ರ]
ಸಾಮೂಹಿಕ ಹತ್ಯಾಕಾಂಡದ ಸಮಯದಲ್ಲಿ ಯೆಹೂದಿಗಳನ್ನು ಬಲಿ ತೆಗೆದುಕೊಳ್ಳುವುದಕ್ಕಾಗಿ ನಾಸಿಗಳು ಪ್ರಾಪಗ್ಯಾಂಡವನ್ನು ಉಪಯೋಗಿಸಿದರು