ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಕ್ತಪೂರಣಗಳು ವಾದ ವಿವಾದಗಳ ಉದ್ದ ಚರಿತ್ರೆ

ರಕ್ತಪೂರಣಗಳು ವಾದ ವಿವಾದಗಳ ಉದ್ದ ಚರಿತ್ರೆ

ರಕ್ತಪೂರಣಗಳು ವಾದ ವಿವಾದಗಳ ಉದ್ದ ಚರಿತ್ರೆ

“ಇಂದು ರೆಡ್‌ ಬ್ಲಡ್‌ ಸೆಲ್ಸ್‌ ಅನ್ನು ಒಂದು ಹೊಸ ಔಷಧಿಯಾಗಿ ಉಪಯೋಗಿಸುತ್ತಿರುವುದಾದರೂ ಕೂಡ, ಅದರ ಲೈಸೆನ್ಸ್‌ ಸಿಗುವುದು ಬಹಳ ಕಷ್ಟವೆಂದೇ ಹೇಳಬಹುದು.”—ಡಾಕ್ಟರ್‌ ಜೆಫ್ರಿ ಮ್ಯಾಕ್‌ಲೊ.

ಫ್ರಾನ್ಸ್‌ ದೇಶದ ಅರಸನಾಗಿದ್ದ ಹದಿನಾಲ್ಕನೇ ಲೂಯಿಸನ ಬಳಿ ಸಾನ್‌ ಬಾಟೆಸ್ಟ್‌ ಡೇನಿ ಎಂಬ ಒಬ್ಬ ಪ್ರಖ್ಯಾತ ವೈದ್ಯನಿದ್ದನು. 1667ರ ಒಂದು ಚಳಿಗಾಲದ ಸಮಯದಲ್ಲಿ, ಯಾರಿಂದಲೂ ಹತೋಟಿಗೆ ತರಲಾಗದ ಆ್ಯನ್ಟ್‌ವಾನ್‌ ಮೊರ್ವಾ ಎಂಬ ಒಬ್ಬ ಹುಚ್ಚನನ್ನು ಡೇನಿಯ ಬಳಿ ಕರೆತರಲಾಯಿತು. ಮೊರ್ವಾನನ ಬುದ್ಧಿವಿಕಲ್ಪಕ್ಕೆ ಡೇನಿಯ ಬಳಿ ಒಂದು ಸರಿಯಾದ “ಚಿಕಿತ್ಸೆ” ಇತ್ತು. ಅದೇನೆಂದರೆ, ಕರುವಿನ ರಕ್ತವನ್ನು ಮೊರ್ವಾನಿಗೆ ಕೊಡುವುದೇ ಆಗಿತ್ತು. ಅದನ್ನು ಕೊಟ್ಟರೆ, ತನ್ನ ರೋಗಿಯು ಶಾಂತನಾಗುವನೆಂದು ಅವನು ನೆನಸಿದನು. ಆದರೆ ಡೇನಿಯ ಔಷಧಿಯು ನಿರೀಕ್ಷಿಸಿದಂತೆ ಸರಿಯಾಗಿ ಕೆಲಸಮಾಡಲಿಲ್ಲ. ಎರಡನೇ ಬಾರಿ ಅವನಿಗೆ ರಕ್ತವನ್ನು ನೀಡಿದಾಗ ಅವನ ಸ್ಥಿತಿಯು ಸ್ವಲ್ಪ ಸುಧಾರಿಸಿತೇನೋ ನಿಜ. ಆದರೆ ಸ್ವಲ್ಪ ಸಮಯದೊಳಗೆ ಆ ಫ್ರೆಂಚಿನವನಿಗೆ ಮತ್ತೆ ಹುಚ್ಚು ಹಿಡಿಯಿತು ಮತ್ತು ನೋಡುತ್ತಿದ್ದಂತೆ ಅವನು ಸತ್ತೇ ಹೋದನು.

ಮೊರ್ವಾನನ ಸಾವಿಗೆ ಆರ್ಸನಿಕ್‌ ವಿಷವೇ ಕಾರಣವಾಗಿತ್ತೆಂದು ನಂತರ ತೀರ್ಮಾನಿಸಲಾಯಿತು. ಆದರೂ ಪ್ರಾಣಿಯ ರಕ್ತದೊಂದಿಗೆ ಡೇನಿಯು ಮಾಡಿದ ಪ್ರಯೋಗವು ಫ್ರಾನ್ಸ್‌ನಲ್ಲಿ ತೀಕ್ಷ್ಣವಾದ ವಾಗ್ವಾದವನ್ನು ಎಬ್ಬಿಸಿತು. ಕೊನೆಗೆ 1670ರಲ್ಲಿ ಈ ವಿಧಾನವನ್ನು ನಿಷೇಧಿಸಲಾಯಿತು. ಅಷ್ಟರೊಳಗಾಗಿ ಇಂಗ್ಲೆಂಡಿನ ಪಾರ್ಲಿಮೆಂಟ್‌ ಕೂಡ ಈ ನಿರ್ಣಯಕ್ಕೆ ಬೆಂಬಲವನ್ನು ನೀಡಿತು ಮತ್ತು ಪೋಪ್‌ ಕೂಡ ಸಮ್ಮತಿಯನ್ನು ಸೂಚಿಸಿದರು. ಮುಂದಿನ 150 ವರ್ಷಗಳವರೆಗೆ ರಕ್ತಪೂರಣದ ಕುರಿತು ಹೆಚ್ಚುಕಡಿಮೆ ಯಾರಿಗೂ ತಿಳಿದಿರಲಿಲ್ಲ.

ಆರಂಭಕಾಲದ ಅಪಾಯಗಳು

ಹತ್ತೊಂಬತ್ತನೆಯ ಶತಮಾನದಲ್ಲಿ ಮತ್ತೊಮ್ಮೆ ರಕ್ತಪೂರಣಕ್ಕೆ ಪುನರ್‌ಜನ್ಮವನ್ನು ಕೊಡಲಾಯಿತು. ಇದಕ್ಕೆ ಒಬ್ಬ ಆಂಗ್ಲ ಪ್ರಸೂತಿ ವಿಜ್ಞಾನಿಯಾಗಿದ್ದ ಜೇಮ್ಸ್‌ ಬ್ಲಾನ್‌ಡೆಲ್‌ ಎಂಬುವನೇ ಮುಖ್ಯ ಕಾರಣನಾಗಿದ್ದನು. ಮಾನವ ರಕ್ತವನ್ನು ಮಾತ್ರ ಉಪಯೋಗಿಸಬೇಕೆಂಬ ತನ್ನ ಸ್ವಂತ ಒತ್ತಾಯ ಹಾಗೂ ಸುಧಾರಿತ ವಿಧಾನಗಳು, ಸಲಕರಣೆಗಳನ್ನು ಉಪಯೋಗಿಸುವ ಮೂಲಕ ಬ್ಲಾನ್‌ಡೆಲ್‌ ಮತ್ತೆ ರಕ್ತಪೂರಣವನ್ನು ಪ್ರಸಿದ್ಧಿಗೆ ತಂದನು.

ಆದರೆ 1873ರಲ್ಲಿ, ಎಫ್‌ ಗ್ಯಾಸೆಲಿಯಸ್‌ ಎಂಬ ಒಬ್ಬ ಪೋಲಿಷ್‌ ಡಾಕ್ಟರನು ಒಂದು ಆವಿಷ್ಕಾರವನ್ನು ಮಾಡಿದನು. ಅದೆಷ್ಟು ದಿಗಿಲುಗೊಳಿಸುವಂಥದ್ದಾಗಿತ್ತೆಂದರೆ, ಅವನು ರಕ್ತಪೂರಣವನ್ನು ಕೊಟ್ಟ ವ್ಯಕ್ತಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಸತ್ತುಹೋದರು. ಈ ಸಂಗತಿಯು ತಿಳಿದೊಡನೆ ಪ್ರಖ್ಯಾತ ಡಾಕ್ಟರುಗಳು ಈ ವಿಧಾನವನ್ನು ದೂಷಿಸಲಾರಂಭಿಸಿದರು. ಹಾಗಾಗಿ ಅವನು ರಕ್ತಪೂರಣಕ್ಕೆ ಪುನರ್‌ಜನ್ಮವನ್ನು ಕೊಡಲು ಮಾಡಿದ ಪ್ರಯತ್ನವು ನಿಧಾನಗೊಂಡಿತು. ಹೀಗೆ, ರಕ್ತಪೂರಣವು ಮತ್ತೊಮ್ಮೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು.

ತರುವಾಯ 1878ರಲ್ಲಿ, ಫ್ರೆಂಚ್‌ ಡಾಕ್ಟರನಾದ ಸಾರ್ಸ್‌ ಎಯಮ್‌ ಅಂತಿಮವಾಗಿ ಒಂದು ಸಲೈನ್‌ ದ್ರಾವಣವನ್ನು ಕಂಡುಹಿಡಿಯುವುದರಲ್ಲಿ ಯಶಸ್ವಿಯಾದನು ಮತ್ತು ಅದನ್ನು ರಕ್ತಕ್ಕೆ ಬದಲಾಗಿ ಉಪಯೋಗಿಸಬಹುದೆಂದು ಹೇಳಿದನು. ರಕ್ತಕ್ಕಿರುವಂತೆ, ಸಲೈನ್‌ ದ್ರಾವಣಕ್ಕೆ ಯಾವುದೇ ಅಡ್ಡ ಪರಿಣಾಮಗಳಿರಲಿಲ್ಲ ಮತ್ತು ಅದು ಹೆಪ್ಪುಗಟ್ಟುತ್ತಿರಲಿಲ್ಲ, ಅದನ್ನು ಸಾಗಿಸುವುದು ಕೂಡ ಸುಲಭವಾಗಿತ್ತು. ಸಹಜವಾಗಿಯೇ, ಎಯಮ್‌ನ ಸಲೈನ್‌ ದ್ರಾವಣದ ಉಪಯೋಗವು ಎಲ್ಲೆಡೆಯೂ ಹಬ್ಬಿತು. ಹಾಗಿದ್ದರೂ, ಒಂದು ವಿಚಿತ್ರವಾದ ಸಂಗತಿಯೆಂದರೆ, ಸ್ವಲ್ಪ ಸಮಯದರೊಳಗಾಗಿ ರಕ್ತಕ್ಕೆ ಮತ್ತೊಮ್ಮೆ ಪ್ರಾಧಾನ್ಯತೆ ನೀಡಲಾಯಿತು. ಏಕೆ?

ಕಾರ್ಲ್‌ ಲ್ಯಾಂಡ್‌ಸ್ಟೀನರ್‌ ಎಂಬ ಆಸ್ಟ್ರೇಲಿಯಾದ ರೋಗಶಾಸ್ತ್ರಜ್ಞನು 1900ರಲ್ಲಿ ರಕ್ತದ ವಿವಿಧ ಗುಂಪುಗಳನ್ನು ಕಂಡುಹಿಡಿದನು. ಒಂದು ಗುಂಪಿನ ರಕ್ತವು ಇನ್ನೊಂದು ಗುಂಪಿನ ರಕ್ತದೊಂದಿಗೆ ಯಾವಾಗಲೂ ಅನುರೂಪವಾಗಿರುವುದಿಲ್ಲ ಎಂಬುದನ್ನು ಅವನು ತಿಳಿಸಿದನು. ಆದ್ದರಿಂದಲೇ, ಈ ಹಿಂದೆ ರಕ್ತಪೂರಣವನ್ನು ತೆಗೆದುಕೊಂಡಿದ್ದವರಲ್ಲಿ ಅಷ್ಟೊಂದು ಮಂದಿ ಸಾವನ್ನಪ್ಪಿರುವುದರಲ್ಲಿ ಆಶ್ಚರ್ಯವೇ ಇಲ್ಲ! ಆದರೆ, ಈಗ ಅದನ್ನು ತಪ್ಪಿಸಬಹುದಾಗಿತ್ತು. ಹೇಗೆಂದರೆ, ದಾನಿಯ ರಕ್ತದ ಗುಂಪು ಮತ್ತು ಸ್ವೀಕರಿಸುವ ವ್ಯಕ್ತಿಯ ರಕ್ತದ ಗುಂಪು ಒಂದೇ ಆಗಿರುವಂತೆ ಖಚಿತಪಡಿಸಿಕೊಳ್ಳುವ ಮೂಲಕವೇ. ಈ ರೀತಿಯ ಅರಿವು, ರಕ್ತಪೂರಣವನ್ನು ಕೊಡಬಹುದೆಂಬ ಡಾಕ್ಟರರ ಭರವಸೆಗೆ ಹೊಸ ಚೈತನ್ಯವನ್ನು ತುಂಬಿತು. ಈ ಸಮಯದಲ್ಲೇ, ಮೊದಲನೇ ವಿಶ್ವ ಯುದ್ಧವು ಆರಂಭವಾಗಲಿತ್ತು.

ರಕ್ತಪೂರಣಗಳು ಹಾಗೂ ಯುದ್ಧ

ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ ಉದಾರವಾಗಿ ರಕ್ತವನ್ನು ದೇಹದೊಳಗೆ ಸೇರಿಸಲಾಯಿತು. ಈ ಹಿಂದೆ ರಕ್ತವು ಬೇಗನೆ ಹೆಪ್ಪುಗಟ್ಟುತ್ತಿದ್ದರಿಂದ ರಕ್ತವನ್ನು ರಣಭೂಮಿಗೆ ಒಯ್ಯುವುದು ಸಾಧ್ಯವಾಗದ ಕೆಲಸವಾಗಿತ್ತು. ಆದರೆ, 20ನೇ ಶತಮಾನದ ಆರಂಭದಲ್ಲಿ ನ್ಯೂ ಯಾರ್ಕ್‌ ನಗರದ ಮೌಂಟ್‌ ಸೈನಾಯ್‌ ಆಸ್ಪತ್ರೆಯ ಡಾಕ್ಟರ್‌ ರಿಚರ್ಡ್‌ ಲೂಯಿಸನ್‌, ರಕ್ತ ಹೆಪ್ಪುಗಟ್ಟದಂತೆ ಸಹಾಯಮಾಡುವ ಸೋಡಿಯಂ ಸಿಟ್ರೇಟ್‌ ಅನ್ನು ಕಂಡುಹಿಡಿಯುವುದರಲ್ಲಿ ಯಶಸ್ವಿಯಾದನು. ಈ ಉತ್ತೇಜನಕಾರಿಯಾದ ಸಾಧನೆಯನ್ನು ಕೆಲವು ಡಾಕ್ಟರರು ಒಂದು ಪವಾಡವೆಂದು ಎಣಿಸಿದರು. “ಅದು ಹೆಚ್ಚುಕಡಿಮೆ ಸೂರ್ಯನು ಸುತ್ತುವುದನ್ನೇ ನಿಲ್ಲಿಸಿದಂತಿತ್ತು” ಎಂದು ಬರ್‌ಟ್ರಾಮ್‌ ಎಮ್‌ ಬರ್ನ್‌ಹಿಮ್‌ ಎಂಬ ಆಗಿನ ಒಬ್ಬ ಪ್ರಸಿದ್ಧ ಡಾಕ್ಟರನು ಬರೆದನು.

ಎರಡನೇ ಮಹಾಯುದ್ಧದ ಸಮಯದಲ್ಲಿ ರಕ್ತಕ್ಕಾಗಿರುವ ಬೇಡಿಕೆಯು ಹೆಚ್ಚಾಯಿತು. “ಈಗಲೇ ರಕ್ತ ಕೊಡಿ”, “ನಿಮ್ಮ ರಕ್ತವು ಅವನನ್ನು ಉಳಿಸುವುದು”, ಹಾಗೂ “ಅವನು ತನ್ನ ರಕ್ತವನ್ನು ಕೊಟ್ಟಿದ್ದಾನೆ. ನೀವು ನಿಮ್ಮ ರಕ್ತವನ್ನು ಕೊಡುವಿರೋ?” ಎಂಬ ಘೋಷಣೆಗಳಿರುವ ಪೋಸ್ಟರುಗಳು ಸಾರ್ವಜನಿಕರ ಗಮನವನ್ನು ಎಲ್ಲೆಲ್ಲೂ ಸೆಳೆದವು. ರಕ್ತಕ್ಕಾಗಿದ್ದ ಈ ಕರೆಗೆ ಭಾರೀ ಪ್ರತಿಕ್ರಿಯೆಯು ದೊರಕಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕಾದಲ್ಲಿ ಸುಮಾರು 13,000,000 ಯೂನಿಟುಗಳಷ್ಟು ರಕ್ತವು ದಾನಮಾಡಲ್ಪಟ್ಟಿತು. ಲಂಡನ್ನಿನಲ್ಲಿ ಸುಮಾರು 2,60,000 ಲೀಟರ್‌ಗಳಿಗಿಂತಲೂ ಹೆಚ್ಚು ರಕ್ತವು ಸಂಗ್ರಹಿಸಲ್ಪಟ್ಟು ಅದನ್ನು ಹಂಚಲಾಯಿತೆಂದು ಅಂದಾಜುಮಾಡಲಾಗಿದೆ. ಖಂಡಿತವಾಗಿಯೂ ರಕ್ತಪೂರಣಗಳು ಆರೋಗ್ಯಕ್ಕೆ ಅಪಾಯನ್ನುಂಟುಮಾಡುವ ಅನೇಕ ಕಾಯಿಲೆಗಳನ್ನು ಒಯ್ಯುತ್ತವೆ ಎಂಬುದು ಸ್ವಲ್ಪ ಸಮಯದೊಳಗೆ ಸ್ಪಷ್ಟವಾಯಿತು.

ರಕ್ತಪೂರಣದಿಂದ ಬರುವ ಕಾಯಿಲೆಗಳು

ಎರಡನೇ ಮಹಾಯುದ್ಧದ ನಂತರ ಔಷಧಿಶಾಸ್ತ್ರದಲ್ಲಿ ಮಾಡಿರುವ ಪ್ರಗತಿಯು, ಹಿಂದೆ ಕಲ್ಪಿಸಿಯೂ ನೋಡಸಾಧ್ಯವಿರದಿದ್ದ ಕೆಲವೊಂದು ಶಸ್ತ್ರಚಿಕಿತ್ಸೆಗಳನ್ನು ಸಾಧ್ಯಮಾಡಿಕೊಟ್ಟಿದೆ. ಇದರ ಪರಿಣಾಮವಾಗಿ, ಈ ಶಸ್ತ್ರಚಿಕಿತ್ಸೆಗಳಿಗಾಗಿ ರಕ್ತವನ್ನು ಒದಗಿಸುವ ಹಲವಾರು ಕೋಟಿಗಳಷ್ಟು ಮೌಲ್ಯದ ಒಂದು ದೊಡ್ಡ ಉದ್ಯಮವೇ ಹುಟ್ಟಿಕೊಂಡಿತು. ಇದರಿಂದಾಗಿ ಡಾಕ್ಟರುಗಳು, ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತವನ್ನು ಕೊಡುವುದನ್ನು ರೂಢಿಯಾಗಿ ಮಾಡಿಕೊಂಡರು.

ಆದರೆ ಅಷ್ಟರೊಳಗೆ, ರಕ್ತಪೂರಣಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿದ್ದರಿಂದ, ಈಗ ಅದನ್ನು ನಿಭಾಯಿಸುವ ಚಿಂತೆಯು ಕಾಡತೊಡಗಿತು. ಉದಾಹರಣೆಗೆ ಕೊರಿಯನ್‌ ಯುದ್ಧದಲ್ಲಿ, ರಕ್ತದಲ್ಲಿರುವ ಪ್ಲಾಸ್ಮಾವನ್ನು ತೆಗೆದುಕೊಂಡಿದ್ದವರಲ್ಲಿ 22 ಪ್ರತಿಶತದಷ್ಟು ಮಂದಿ ಹೆಪಿಟೈಟಸ್‌ ಎಂಬ ಕಾಯಿಲೆಗೆ ತುತ್ತಾದರು. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ತುತ್ತಾದವರ ಸಂಖ್ಯೆಗಿಂತ ಹೆಚ್ಚುಕಡಿಮೆ ಮೂರು ಪಟ್ಟಾಗಿತ್ತು. 1970ರೊಳಗಾಗಿ, ರಕ್ತಪೂರಣಕ್ಕೆ ಸಂಬಂಧಿಸಿರುವ ಹೆಪಿಟೈಟಸ್‌ ರೋಗದಿಂದ ಪ್ರತಿವರ್ಷ 3,500ರಷ್ಟು ಮಂದಿ ಮರಣವನ್ನಪ್ಪುತ್ತಾರೆ ಎಂದು ಅಮೆರಿಕಾದ ರೋಗ ನಿಯಂತ್ರಣ ಕೇಂದ್ರಗಳು ಅಂದಾಜುಮಾಡಿವೆ. ಇನ್ನೂ ಕೆಲವರು ಈ ಸಂಖ್ಯೆಯು ಹತ್ತುಪಟ್ಟುಗಿಂತಲೂ ಹೆಚ್ಚೆಂದು ಅಭಿಪ್ರಯಿಸುತ್ತಾರೆ.

ದಾನಿಗಳನ್ನು ಹೆಚ್ಚು ಜಾಗ್ರತೆಯಿಂದ ಆಯ್ಕೆಮಾಡುವ ಮೂಲಕ ಹಾಗೂ ರಕ್ತವನ್ನು ಸೂಕ್ಷ್ಮವಾಗಿ ಪರೀಕ್ಷಿಸುವ ಸುಧಾರಿತ ವಿಧಾನಗಳ ಸಹಾಯದಿಂದ ಹೆಪಿಟೈಟಸ್‌-ಬಿ ರೋಗಕ್ಕೆ ಸೋಂಕಿತಗೊಳ್ಳುವವರ ಸಂಖ್ಯೆಯು ಕಡಿಮೆಯಾಯಿತು. ಆದರೆ, ಕೆಲವೊಮ್ಮೆ ಹೆಪಿಟೈಟಸ್‌-ಸಿ ಎನ್ನುವ ಹೊಸ ಮಾರಕ ವೈರಸ್‌ ಹೆಚ್ಚು ಪ್ರಮಾಣದಲ್ಲಿ ಜನರನ್ನು ನುಂಗಿಬಿಟ್ಟಿತು. 40 ಲಕ್ಷ ಅಮೆರಿಕನ್ನರು ಈ ವೈರಸ್‌ನಿಂದ ಸೋಂಕಿತರಾಗಿದ್ದಾರೆಂದು ಅಂದಾಜುಮಾಡಲಾಗಿದೆ. ಇವರಲ್ಲಿ ಅನೇಕ ನೂರಾರು ಸಾವಿರ ಮಂದಿ ರಕ್ತಪೂರಣಗಳಿಂದ ಸೋಂಕಿತರಾಗಿದ್ದಾರೆ. ಕಟ್ಟುನಿಟ್ಟಾದ ಪರೀಕ್ಷೆಗಳ ಮೂಲಕ ಹೆಪಿಟೈಟಸ್‌-ಸಿ ಹರಡುವುದನ್ನು ಕೊನೆಗೂ ಕಡಿಮೆಮಾಡಲಾಗಿದೆ ಎಂಬುದು ಒಪ್ಪತಕ್ಕ ವಿಷಯವೇ. ಆದರೂ, ಹೊಸ ರೋಗಗಳು ಮುಂದೆ ಕಾಣಿಸಿಕೊಳ್ಳಲಿವೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವುದರೊಳಗಾಗಿ ಅದು ತೀರ ತಡವಾಗಿರುವುದು ಎಂಬ ಅಂಜಿಕೆ ಕೆಲವರಿಗಿದೆ.

ಎಚ್‌ಐವಿಯಿಂದ ಸೋಂಕಿತವಾಗಿರುವ ರಕ್ತ: ಮತ್ತೊಂದು ಹಗರಣ

1980ರಲ್ಲಿ, ಏಯ್ಡ್ಸ್‌ ರೋಗಕ್ಕೆ ಕಾರಣವಾಗಿರುವ ಎಚ್‌ಐವಿ ಎಂಬ ರೋಗಾಣುವಿನಿಂದಲೂ ಕೂಡ ರಕ್ತ ಸೋಂಕಿತವಾಗಿರಸಾಧ್ಯವಿದೆ ಎಂಬುದನ್ನು ಕಂಡುಹಿಡಿಯಲಾಯಿತು. ಆರಂಭದಲ್ಲಿ ರಕ್ತನಿಧಿಯವರು ತಮ್ಮಲ್ಲಿರುವ ರಕ್ತವು ಸೋಂಕಿತವಾಗಿರಬಹುದು ಎಂಬುದನ್ನು ಪರಿಗಣಿಸಲು ಸಹ ಹೇಸುತ್ತಿದ್ದರು. ಪ್ರಾರಂಭದಲ್ಲಿ, ಅವರಲ್ಲಿ ಅನೇಕರು ಎಚ್‌ಐವಿಯ ಬೆದರಿಕೆಯನ್ನು ಸಂಶಯದಿಂದಲೇ ಆಮಂತ್ರಿಸಿದರು. ಇದನ್ನು ಡಾಕ್ಟರ್‌ ಬ್ರೂಸ್‌ ಇವೆಟ್‌ ಹೀಗೆ ಹೇಳುತ್ತಾರೆ: “ಮರುಭೂಮಿಯಲ್ಲಿ ಅಲೆದಾಡಿ ಬಂದಿರುವ ಯಾರೋ ಒಬ್ಬನು, ‘ನಾನು ಬಾಹ್ಯಾಕಾಶ ಮಾನವನನ್ನು ನೋಡಿದ್ದೇನೆ’ ಎಂದು ಅವರಿಗೆ ಹೇಳಿದರೆ, ಅದನ್ನು ನಂಬಲು ಅವರು ತಯಾರಿರಲಿಲ್ಲ ಎಂಬತಿತ್ತು.”

ಹಾಗಿದ್ದರೂ, ಒಂದಾದ ಮೇಲೆ ಇನ್ನೊಂದರಂತೆ ಅನೇಕ ದೇಶಗಳು, ತಮ್ಮಲ್ಲಿ ಎಚ್‌ಐವಿಯಿಂದ ಸೋಂಕಿತಗೊಂಡ ರಕ್ತವಿರುವುದರ ಕುರಿತು ಬಯಲಾಗಿರುವ ಹಗರಣಗಳನ್ನು ನೋಡಿವೆ. ಉದಾಹರಣೆಗೆ, ಫ್ರಾನ್ಸ್‌ನಲ್ಲಿ 1982ರಿಂದ 1985ರ ಮಧ್ಯೆ ಯಾರಿಗೆಲ್ಲಾ ರಕ್ತಪೂರಣಗಳನ್ನು ನೀಡಲಾಗಿತ್ತೋ ಅವರಲ್ಲಿ ಸುಮಾರು 6,000 ಮತ್ತು 8,000ದಷ್ಟು ಜನರು ಎಚ್‌ಐವಿಯಿಂದ ಸೋಂಕಿತರಾಗಿದ್ದಾರೆಂದು ಅಂದಾಜುಮಾಡಲಾಗಿದೆ. ಆಫ್ರಿಕಾ ದೇಶದಾದ್ಯಂತ 10 ಪ್ರತಿಶತದಷ್ಟು ಎಚ್‌ಐವಿ ಸೋಂಕಿಗೆ ಮತ್ತು ಪಾಕಿಸ್ತಾನದ 40 ಪ್ರತಿಶತದಷ್ಟು ಏಡ್ಸ್‌ ರೋಗಿಗಳಿಗೆ ರಕ್ತಪೂರಣಗಳೇ ಕಾರಣವೆಂದು ದೂಷಿಸಲಾಗಿದೆ. ಸೂಕ್ಷ್ಮವಾಗಿ ರಕ್ತ ಪರೀಕ್ಷಿಸುವ ಸುಧಾರಿತ ವಿಧಾನಗಳಿಂದಾಗಿ ಇಂದು, ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ರಕ್ತಪೂರಣಗಳ ಮೂಲಕ ಎಚ್‌ಐವಿ ಹರಡುವುದು ತುಂಬ ವಿರಳ. ಆದರೆ, ಈ ಸೌಲಭ್ಯವಿಲ್ಲದಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ರೀತಿಯ ರೋಗ ಹರಡುವ ಸಮಸ್ಯೆಯು ಇನ್ನೂ ಹಾಗೆಯೇ ಉಳಿದಿದೆ.

ಸ್ವಾರಸ್ಯಕರ ವಿಷಯವೇನೆಂದರೆ, ಇತ್ತೀಚಿನ ವರ್ಷಗಳಲ್ಲಿ ರಕ್ತರಹಿತ ಚಿಕಿತ್ಸೆಯಲ್ಲಿ ಜನರಿಗೆ ಹೆಚ್ಚು ಆಸಕ್ತಿಯು ಮೂಡಿದೆ. ಆದರೆ ಈ ಬದಲಿ ಚಿಕಿತ್ಸೆಯು ಸುರಕ್ಷಿತವಾಗಿದೆಯೇ?

[ಪುಟ 6ರಲ್ಲಿರುವ ಚೌಕ]

ರಕ್ತಪೂರಣಗಳು—ವೈದ್ಯಕೀಯ ನಿಯಮವಲ್ಲ

ಪ್ರತಿವರ್ಷ ಅಮೆರಿಕಾದಲ್ಲಿ ಮಾತ್ರವೇ 1,10,00,000 ಯೂನಿಟ್‌ಗಳಷ್ಟು ಕೆಂಪು ರಕ್ತಕಣಗಳನ್ನು 30,00,000 ರೋಗಿಗಳ ರಕ್ತನಾಳಗಳೊಳಗೆ ಹರಿಸಲಾಗುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯನ್ನು ನೋಡುವಾಗ, ರಕ್ತವನ್ನು ಕೊಡುವ ವಿಷಯದಲ್ಲಿ ಡಾಕ್ಟರುಗಳ ಮಧ್ಯೆ ಕಟ್ಟುನಿಟ್ಟಾದ ನಿಯಮಗಳು ಇರಬಹುದೆಂದು ಒಬ್ಬನು ಭಾವಿಸಬಹುದು. ಆದರೂ ದ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸನ್‌ ಪತ್ರಿಕೆಯು ಗಮನಿಸುವುದೇನೆಂದರೆ, “ರಕ್ತಪೂರಣಗಳನ್ನು ಕೊಡುವ ವಿಷಯದಲ್ಲಿ ತೀರ್ಮಾನಿಸಲು ಸಹಾಯಮಾಡುವ” ಮಾಹಿತಿಯು ತೀರ ಕಡಿಮೆಯಿರುವುದು ಆಶ್ಚರ್ಯವನ್ನುಂಟುಮಾಡುತ್ತದೆ. ಹೌದು, ರಕ್ತಪೂರಣಗಳನ್ನು ನೀಡುವ ವಿಧಾನಗಳು ಭಿನ್ನಭಿನ್ನವಾಗಿರುವುದು ಮಾತ್ರವಲ್ಲ, ನಿಷ್ಕೃಷ್ಟವಾಗಿ ಏನನ್ನು ಮತ್ತು ಎಷ್ಟು ಪೂರಣ ಮಾಡಬೇಕು ಹಾಗೂ ರಕ್ತ ಕೊಡಲೇಬೇಕೋ ಎಂಬ ವಿಷಯದಲ್ಲೂ ಡಾಕ್ಟರುಗಳ ಮಧ್ಯೆ ವ್ಯತ್ಯಾಸವಿದೆ. “ರಕ್ತವನ್ನು ಕೊಡಬೇಕೋ ಬೇಡವೋ ಎನ್ನುವುದು ಡಾಕ್ಟರನ ಮೇಲೆ ಅವಲಂಬಿಸಿದೆಯೇ ಹೊರತು ರೋಗಿಯ ಮೇಲಲ್ಲ” ಎಂದು ವೈದ್ಯಕೀಯ ಪತ್ರಿಕೆಯಾದ ಆ್ಯಕ್ಟ ಅನಸ್ತಿಸಿಯೊಲಾಜಿಕ ಬೆಲ್ಜಿಕ ಎಂಬ ಪತ್ರಿಕೆಯು ಹೇಳುತ್ತದೆ. ಈ ಮೇಲಿನ ವಿಷಯಗಳನ್ನು ನೋಡುವಾಗ, ದ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸನ್‌ ಎಂಬ ಪತ್ರಿಕೆಯಲ್ಲಿ ವರದಿಸಿದ ಅಧ್ಯಯನವು ಈ ರೀತಿ ಹೇಳಿರುವುದರಲ್ಲಿ ಆಶ್ಚರ್ಯವೇ ಇಲ್ಲ. ಅದೇನೆಂದರೆ, “ಅಂದಾಜುಮಾಡಲಾಗಿರುವ ಶೇಕಡ 66ರಷ್ಟು ರಕ್ತಪೂರಣಗಳು ಅನುಚಿತ ರೀತಿಯಲ್ಲಿ ಕೊಡಲ್ಪಡುತ್ತವೆ.”

[ಪುಟ 5ರಲ್ಲಿರುವ ಚಿತ್ರ]

IIನೇ ಮಹಾಯುದ್ಧದ ಸಮಯದಲ್ಲಿ ರಕ್ತಕ್ಕಾಗಿರುವ ಬೇಡಿಕೆಯು ಹೆಚ್ಚಾಯಿತು

[ಕೃಪೆ]

Imperial War Museum, London

U.S. National Archives photos