ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಔಷಧಿಶಾಸ್ತ್ರದ ಮೂಲಕರ್ತರು

ಔಷಧಿಶಾಸ್ತ್ರದ ಮೂಲಕರ್ತರು

ಔಷಧಿಶಾಸ್ತ್ರದ ಮೂಲಕರ್ತರು

ಬೆಲ್ಜಿಯಮ್‌ ದೇಶದಲ್ಲಿ ಯೂಪೇಯ್‌ ಎಂಬುದು ಒಂದು ಚಿಕ್ಕ ಪಟ್ಟಣ. ಅಲ್ಲಿನ 61 ವರ್ಷ ವಯಸ್ಸಿನ ಜೋಸ್‌ ಎಂಬ ವ್ಯಕ್ತಿಗೆ ಪಿತ್ತಜನಕಾಂಗವನ್ನು ಕಸಿ ಮಾಡುವ ಅಗತ್ಯವಿದೆಯೆಂದು ಹೇಳಲಾಯಿತು. “ಅದು ನನ್ನ ಜೀವನದ ಅತ್ಯಂತ ದೊಡ್ಡ ಆಘಾತವಾಗಿತ್ತು” ಎಂದು ಅವರು ಹೇಳುತ್ತಾರೆ. ಕೇವಲ 40 ವರ್ಷಗಳ ಹಿಂದೆ ಪಿತ್ತಜನಕಾಂಗದ ಕಸಿ ಮಾಡುವುದನ್ನು ಯಾರೂ ಕಲ್ಪನೆ ಕೂಡ ಮಾಡಿ ನೋಡುತ್ತಿರಲಿಲ್ಲ. ಅಷ್ಟೇ ಏಕೆ, 1970ರಲ್ಲೂ ಸಹ ಈ ಶಸ್ತ್ರಚಿಕಿತ್ಸೆಯ ನಂತರ ಬದುಕುಳಿಯುವ ಪ್ರಮಾಣವು ಕೇವಲ 30 ಪ್ರತಿಶತದಷ್ಟೇ ಆಗಿತ್ತು. ಆದರೆ ಇಂದು, ಪಿತ್ತಜನಕಾಂಗದ ಕಸಿ ಮಾಡುವುದು ಸಾಮಾನ್ಯವಾಗಿದೆ ಮತ್ತು ಇದನ್ನು ಅನೇಕರಿಗೆ ಹೆಚ್ಚು ಯಶಸ್ವಿಕರವಾಗಿಯೂ ಮಾಡಲಾಗುತ್ತಿದೆ.

ಆದರೂ ಕೂಡ, ಇದರಲ್ಲಿ ಒಂದು ದೊಡ್ಡ ಅನಾನುಕೂಲವಿದೆ. ಅದೇನೆಂದರೆ, ಹೆಚ್ಚಿನ ಸಮಯಗಳಲ್ಲಿ ಪಿತ್ತಜನಕಾಂಗದ ಕಸಿ ಮಾಡುವಾಗ ಅತಿಯಾದ ರಕ್ತಸ್ರಾವವಾಗುತ್ತದೆ. ಆದುದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಡಾಕ್ಟರರು ರಕ್ತಪೂರಣವನ್ನು ನೀಡುತ್ತಾರೆ. ಜೋಸ್‌ ವಿಷಯದಲ್ಲಿ ನೋಡುವಾಗ, ಅವರ ಧಾರ್ಮಿಕ ನಂಬಿಕೆಗಳ ಕಾರಣ ರಕ್ತ ತೆಗೆದುಕೊಳ್ಳುವುದು ಅವರಿಗೆ ಇಷ್ಟವಿಲ್ಲ. ಆದರೆ, ಅವರಿಗೆ ಪಿತ್ತಜನಕಾಂಗವನ್ನು ಕಸಿ ಮಾಡಿಸಿಕೊಳ್ಳಬೇಕಾಗಿತ್ತು. ಅದು ಸಾಧ್ಯವೇ ಇಲ್ಲ ಎಂದು ಕೆಲವರಿಗನಿಸಬಹುದು. ಆದರೆ, ಮುಖ್ಯ ಸರ್ಜನ್‌ ಹಾಗೂ ಅವರ ಸಹದ್ಯೋಗಿಗಳಿಗೆ ಹಾಗನಿಸಲಿಲ್ಲ. ಬದಲಿಗೆ ರಕ್ತವಿಲ್ಲದೆ ಯಶಸ್ವಿಕರವಾಗಿ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಇದು ಒಳ್ಳೇ ಅವಕಾಶವಾಗಿದೆ ಎಂದನಿಸಿತು ಮತ್ತು ಅವರು ಹಾಗೆಯೇ ಮಾಡಿದರು! ಶಸ್ತ್ರಚಿಕಿತ್ಸೆಯಾಗಿ ಕೇವಲ 25 ದಿನಗಳೊಳಗಾಗಿ ಜೋಸ್‌ ತಮ್ಮ ಹೆಂಡತಿ ಮತ್ತು ಮಗಳೊಂದಿಗೆ ಮನೆಗೆ ಹಿಂದಿರುಗಿದರು. *

“ಔಷಧಿಶಾಸ್ತ್ರದ ಮಹಾಪುರುಷರು” ಎಂದು ಟೈಮ್‌ ಪತ್ರಿಕೆಯು ಕರೆದ ಆ ನಿಪುಣ ವೈದ್ಯರ ಕೌಶಲಗಳ ಸಹಾಯದಿಂದಾಗಿ ಇಂದು ರಕ್ತರಹಿತ ಚಿಕಿತ್ಸೆಯು ಹೆಚ್ಚು ಸರ್ವಸಾಧಾರಣವಾಗಿದೆ. ಆದರೆ, ಈ ಚಿಕಿತ್ಸೆಗೆ ಏಕೆ ಇಷ್ಟೊಂದು ಬೇಡಿಕೆಯಿದೆ? ಈ ಪ್ರಶ್ನೆಯನ್ನು ಉತ್ತರಿಸಲು ರಕ್ತಪೂರಣಗಳಿಗೆ ಸಂಬಂಧಿಸಿರುವ ಸಮಸ್ಯೆಗಳ ಉದ್ದ ಚರಿತ್ರೆಯನ್ನು ನಾವು ಪರಿಶೀಲಿಸೋಣ.

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳು ಅಂಗಗಳ ಕಸಿ ಮಾಡಿಸಿಕೊಳ್ಳುವುದನ್ನು ಒಬ್ಬ ವ್ಯಕ್ತಿಯ ಸ್ವಂತ ತೀರ್ಮಾನವಾಗಿ ವೀಕ್ಷಿಸುತ್ತಾರೆ.

[ಪುಟ 3ರಲ್ಲಿರುವ ಚಿತ್ರ]

ಜಗತ್ತಿನಾದ್ಯಂತ ಈಗ ಸುಮಾರು 90,000ಕ್ಕಿಂತಲೂ ಹೆಚ್ಚು ಡಾಕ್ಟರರು, ಯೆಹೋವನ ಸಾಕ್ಷಿಗಳಿಗೆ ರಕ್ತರಹಿತ ಚಿಕಿತ್ಸೆ ನೀಡಲು ಸಿದ್ಧರಿದ್ದಾರೆಂಬುದನ್ನು ತೋರಿಸಿಕೊಟ್ಟಿದ್ದಾರೆ