ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಲಾ ತಗ್ಗು ಅಥವಾ ಕಣಿವೆ

ದಾವೀದ ಗೊಲ್ಯಾತರ ಯುದ್ಧ—ನಿಜವಾಗಲೂ ನಡೆದಿತ್ತಾ?

ದಾವೀದ ಗೊಲ್ಯಾತರ ಯುದ್ಧ—ನಿಜವಾಗಲೂ ನಡೆದಿತ್ತಾ?

ದಾವೀದ ಮತ್ತು ಗೊಲ್ಯಾತರ ಯುದ್ಧ ನಿಜವಾಗಲೂ ನಡೆದಿತ್ತಾ ಅಥವಾ ಅದು ಬರೀ ಕಟ್ಟುಕಥೆನಾ ಎಂದು ಕೆಲವರು ಯೋಚಿಸುತ್ತಾರೆ. ಹಿಂದಿನ ಲೇಖನವನ್ನು ಓದುವಾಗ ನಿಮಗೂ ಈ ಸಂಶಯ ಬಂದಿತ್ತಾ? ಹಾಗಾದರೆ ಮುಂದಿನ ಮೂರು ಪ್ರಶ್ನೆಗಳನ್ನು ನೋಡಿ.

1 | ಒಬ್ಬ ಮನುಷ್ಯ ಸುಮಾರು ಒಂಭತ್ತುವರೆ ಅಡಿ (2.9 ಮೀ.) ಎತ್ತರ ಇರಲು ಸಾಧ್ಯನಾ?

ಗೊಲ್ಯಾತನು “ಆರೂವರೆ ಮೊಳ ಎತ್ತರವಾಗಿದ್ದನು” ಎನ್ನುತ್ತದೆ ಬೈಬಲ್‌. (1 ಸಮುವೇಲ 17:4) ಒಂದು ಮೊಳ 17.5 ಇಂಚುಗಳಿಗೆ (44.5 ಸೆಂ.ಮೀ.) ಸಮ. ಅರ್ಧ ಮೊಳ 8.75 ಇಂಚುಗಳಿಗೆ (22.2 ಸೆಂ.ಮೀ.) ಸಮ. ಹಾಗಾಗಿ, ಗೊಲ್ಯಾತನ ಎತ್ತರ ಸುಮಾರು ಒಂಭತ್ತುವರೆ ಅಡಿ (2.9 ಮೀ.) ಇತ್ತು. ಒಬ್ಬ ವ್ಯಕ್ತಿ ಅಷ್ಟು ಎತ್ತರ ಇರಲು ಸಾಧ್ಯನೇ ಇಲ್ಲ ಅಂತ ಕೆಲವರು ಹೇಳುತ್ತಾರೆ. ಆದರೆ, ನಮ್ಮ ಈ ದಿನಗಳಲ್ಲಿ ದಾಖಲಾಗಿರುವ ಅತಿ ಹೆಚ್ಚು ಎತ್ತರದ ವ್ಯಕ್ತಿ 8 ಅಡಿ 11 ಇಂಚು (2.7 ಮೀ.) ಇದ್ದಾನೆ. ಅಂದಮೇಲೆ, ಗೊಲ್ಯಾತನು ಇವನಿಗಿಂತ ಆರೇಳು ಇಂಚು (15 ಸೆಂ.ಮೀ.) ಜಾಸ್ತಿ ಎತ್ತರ ಇರಲು ಸಾಧ್ಯ ಇಲ್ವಾ? ಅಷ್ಟೇ ಅಲ್ಲದೆ, ಗೊಲ್ಯಾತನು ಅಸಾಮಾನ್ಯ ಗಾತ್ರಕ್ಕೆ ಹೆಸರುವಾಸಿಯಾಗಿದ್ದ ರೆಫಾಯರ ವಂಶದವನಾಗಿದ್ದನು. ಕಾನಾನಿನ ಬಲಾಢ್ಯ ಸೈನಿಕರು ಎಂಟು ಅಡಿಗಳಿಗಿಂತ ಹೆಚ್ಚು (2.4 ಮೀ.) ಎತ್ತರವಿದ್ದರು ಎಂದು ಕ್ರಿ.ಪೂ. 13⁠ನೇ ಶತಮಾನದ ಈಜಿಪ್ಟಿನ ಒಂದು ಶಾಸನ ತಿಳಿಸುತ್ತದೆ. ಆದ್ದರಿಂದ ಗೊಲ್ಯಾತನ ಎತ್ತರ ಅಸಾಮಾನ್ಯ ಎಂದೆನಿಸುವುದರೂ ಅಸಾಧ್ಯವಲ್ಲ.

2 | ದಾವೀದನು ನಿಜವಾಗಿಯೂ ಇದ್ದನಾ?

ರಾಜ ದಾವೀದನು ನಿಜವಾಗಿ ಇರಲಿಲ್ಲ, ಅವನ ಬಗ್ಗೆ ಇರೋದೆಲ್ಲಾ ಕಟ್ಟು ಕಥೆ ಎಂದು ವಿದ್ವಾಂಸರು ಒಂದು ಸಮಯದಲ್ಲಿ ರುಜುಪಡಿಸಲು ಪ್ರಯತ್ನಿಸಿದ್ದರು. ಆದರೆ ಅವರು ವಿಫಲರಾದರು. ಭೂಅಗೆತಶಾಸ್ತ್ರಜ್ಞರಿಗೆ ‘ದಾವೀದನ ಮನೆತನದ’ ಬಗ್ಗೆ ತಿಳಿಸುವ ಒಂದು ಶಾಸನ ಸಿಕ್ಕಿದೆ. ಅಷ್ಟೇ ಅಲ್ಲದೆ, ಯೇಸುವಿನ ಮಾತುಗಳು ಸಹ ದಾವೀದನು ನಿಜವಾಗಿ ಇದ್ದನು ಎಂದು ತೋರಿಸುತ್ತವೆ. (ಮತ್ತಾಯ 12:3; 22:43-45) ಯೇಸುವೇ ಮೆಸ್ಸೀಯ ಎಂದು ಗುರುತಿಸಲು ಆತನ ವಂಶಾವಳಿಯ ಎರಡು ದಾಖಲೆಗಳನ್ನು ಬೈಬಲಿನಲ್ಲಿ ಕೊಡಲಾಗಿದೆ. ಅವು ಯೇಸು, ರಾಜ ದಾವೀದನ ವಂಶದವನೆಂದು ತೋರಿಸುತ್ತವೆ. (ಮತ್ತಾಯ 1:6-16; ಲೂಕ 3:23-31) ಆದ್ದರಿಂದ, ದಾವೀದನು ನಿಜವಾಗಿಯೂ ಇದ್ದ ಅನ್ನುವುದು ಸ್ಪಷ್ಟ.

3 | ಆ ಘಟನೆಯಲ್ಲಿ ತಿಳಿಸಲಾಗಿರುವ ಸ್ಥಳಗಳು ನಿಜವಾಗಿಯೂ ಇವೆಯಾ?

ಈ ಯುದ್ಧ ಏಲಾ ತಗ್ಗಿನಲ್ಲಿ ನಡೆಯಿತೆಂದು ಬೈಬಲ್‌ ಹೇಳುತ್ತದೆ. ಅದರಲ್ಲೂ ನಿರ್ದಿಷ್ಟವಾಗಿ, ಫಿಲಿಷ್ಟಿಯರು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಪರ್ವತ ಪ್ರದೇಶದಲ್ಲಿ ಪಾಳೆಯಮಾಡಿಕೊಂಡಿದ್ದರು ಮತ್ತು ಇಸ್ರಾಯೇಲ್ಯರು ಪರ್ವತ ಪ್ರದೇಶದ ಇನ್ನೊಂದು ಕಡೆಯಲ್ಲಿರುವ ಏಲಾ ತಗ್ಗಿನ ಉದ್ದಕ್ಕೂ ಪಾಳೆಯ ಮಾಡಿಕೊಂಡಿದ್ದರು ಎಂದೂ ಬೈಬಲ್‌ ತಿಳಿಸುತ್ತದೆ. ಈ ಸ್ಥಳಗಳು ನಿಜವಾಗಿಯೂ ಇವೆಯಾ?

ಇತ್ತೀಚೆಗೆ, ಈ ಪ್ರದೇಶಕ್ಕೆ ಭೇಟಿ ನೀಡಿದ ಒಬ್ಬ ವ್ಯಕ್ತಿ ಹೀಗೆ ಹೇಳುತ್ತಾನೆ: “ನಮ್ಮ ಟೂರ್‌ ಗೈಡ್‌ ನಮ್ಮನ್ನು ಏಲಾ ಕಣಿವೆಗೆ ಕರೆದುಕೊಂಡು ಹೋದನು. ನಾವು ಹತ್ತುತ್ತಾ ಒಂದು ಪರ್ವತದ ಮೇಲೆ ಹೋಗಿ ತಲುಪಿದೆವು. ಆ ಟೂರ್‌ ಗೈಡ್‌ ಧಾರ್ಮಿಕ ವ್ಯಕ್ತಿ ಆಗಿರಲಿಲ್ಲ. ಆದರೂ ನಾವು ಕಣಿವೆಯನ್ನು ನೋಡುತ್ತಿರುವಾಗ ಅವನು 1 ಸಮುವೇಲ 17:1-3⁠ನ್ನು ಓದಿದನು. ನಂತರ ಕಣಿವೆಯ ತೀರವನ್ನು ತೋರಿಸುತ್ತಾ, ‘ನಿಮ್ಮ ಎಡಗಡೆಗೆ ಇರುವುದು ಹಾಳುಬಿದ್ದಿರುವ ಸೋಕೋವ್‌ ಪ್ರದೇಶ, ನಿಮ್ಮ ಬಲಗಡೆಯಲ್ಲಿರುವುದು ಹಾಳುಬಿದ್ದಿರುವ ಅಜೇಕ ಪ್ರದೇಶ. ಫಿಲಿಷ್ಟಿಯರು ಈ ಎರಡು ಪ್ರದೇಶಗಳ ಮಧ್ಯದಲ್ಲಿ ಪಾಳೆಯ ಮಾಡಿಕೊಂಡಿದ್ದರು. ಅಂದರೆ, ಈ ಪರ್ವತ ಪ್ರದೇಶದಲ್ಲಿ ನಿಮಗೆ ಮುಖಮಾಡಿಕೊಂಡು ಪಾಳೆಯ ಮಾಡಿಕೊಂಡಿರಬೇಕು. ನಾವು ನಿಂತಿರುವುದು ಇಸ್ರಾಯೇಲ್ಯರು ಪಾಳೆಯ ಮಾಡಿಕೊಂಡಿದ್ದ ಸ್ಥಳದಲ್ಲಾಗಿರಬೇಕು’ ಅಂದನು. ಆಗ, ಸೌಲ ಮತ್ತು ದಾವೀದ ನಿಂತ ಸ್ಥಳದಲ್ಲಿ ನಾನು ನಿಂತಿದ್ದಿರಬೇಕು ಅಂತ ಅಂದುಕೊಂಡೆ. ನಂತರ ನಾವು ಕಣಿವೆಗೆ ಇಳಿದೆವು. ಅಲ್ಲಿ ನೀರು ಹರಿದು ಹೋಗಿದ್ದ ಜಾಗವನ್ನು ದಾಟಿದೆವು. ಆದರೆ, ಅದು ಒಣಗಿಹೋಗಿ, ಕಲ್ಲುಗಳಿಂದ ತುಂಬಿತ್ತು. ತಕ್ಷಣ ನನ್ನ ಮನಸ್ಸಿನಲ್ಲಿ ದಾವೀದನು ಬಗ್ಗಿ ಐದು ನುಣುಪಾದ ಕಲ್ಲುಗಳನ್ನು ಎತ್ತಿಕೊಳ್ಳುತ್ತಿರುವ ದೃಶ್ಯ ಮೂಡಿತು. ಅವುಗಳಲ್ಲೊಂದು ಕಲ್ಲಿಂದ ಗೊಲ್ಯಾತನು ಸತ್ತನು.” ಈ ವ್ಯಕ್ತಿಯಂತೆ, ಅಲ್ಲಿ ಭೇಟಿ ಮಾಡಿದ ಅನೇಕರು ಬೈಬಲಿನಲ್ಲಿರುವ ಭರವಸಾರ್ಹ ವಿವರಣೆಯನ್ನು ನೋಡಿ ತುಂಬ ಪ್ರಭಾವಿತರಾದರು.

ಈ ಐತಿಹಾಸಿಕ ದಾಖಲೆ ನಿಜವಾಗಿಯೂ ನಡೆದಿತ್ತಾ ಎಂದು ಸಂಶಯಪಡಲು ಯಾವುದೇ ಆಧಾರ ಇಲ್ಲ. ಇದರಲ್ಲಿ ತಿಳಿಸಲಾದ ಜನರು ಇದ್ದರು, ಸ್ಥಳಗಳು ಈಗಲೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ದೇವರ ಪ್ರೇರಿತ ವಾಕ್ಯದ ಒಂದು ಭಾಗ. ಅಂದರೆ ಇದು ಸತ್ಯ ದೇವರಿಂದ ಬಂದದ್ದು. ಆ ದೇವರು “ಸುಳ್ಳಾಡಲು ಸಾಧ್ಯವಿಲ್ಲ.”—ತೀತ 1:2; 2 ತಿಮೊಥೆಯ 3:16. ▪ (wp16-E No. 5)