ಆಶೀರ್ವಾದ ಪಡೆಯಲು ದೇವರ ಮಾತನ್ನ ಕೇಳಿ
ನಾವು ದೇವರ ಆಜ್ಞೆಗಳನ್ನ ಪಾಲಿಸಿದ್ರೆ ಆಶೀರ್ವಾದಗಳನ್ನ ಪಡೀಬಹುದು ಅಂತ ಪ್ರವಾದಿ ಮೋಶೆ ಹೇಳಿದ. (ಧರ್ಮೋಪದೇಶಕಾಂಡ 10:13; 11:27) ಕೆಲವರು ದೇವರ ಮಾತನ್ನ ಯಾಕೆ ಕೇಳ್ತಾರೆ ಅಂದ್ರೆ ಒಂದು ವೇಳೆ ದೇವರ ಮಾತು ಕೇಳಲಿಲ್ಲ ಅಂದ್ರೆ ಎಲ್ಲಿ ಅವನು ನಮ್ಮನ್ನ ಶಿಕ್ಷಿಸಿಬಿಡ್ತಾನೋ ಅನ್ನೋ ಭಯ ಅವರಲ್ಲಿ ಇದೆ. ಆದ್ರೆ ನಮಗೆ ದೇವರ ಮೇಲೆ ಪ್ರೀತಿ ಇರೋದ್ರಿಂದ ಮತ್ತು ದೇವರ ಮನಸ್ಸಿಗೆ ನೋವು ಮಾಡಬಾರದು ಅನ್ನೋ ಆಸೆ ಇರೋದ್ರಿಂದ ಆತನ ಮಾತನ್ನ ಕೇಳ್ತೀವಿ. ದೇವರಲ್ಲಿ ಎಷ್ಟು ಒಳ್ಳೇ ಗುಣಗಳಿವೆ ಅಂದ್ರೆ ದೇವರ ಮಾತನ್ನ ಕೇಳೋಕೆ ಮನಸ್ಸು ಹಾತೊರೆಯುತ್ತೆ. “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ” ಆಗಿದೆ.—1 ಯೋಹಾನ 5:3.
ದೇವರ ಮಾತನ್ನ ಕೇಳಿದ್ರೆ ಹಲವಾರು ಆಶೀರ್ವಾದಗಳನ್ನ ಪಡೀಬಹುದು. ಅದರಲ್ಲಿ ಎರಡನ್ನ ನಾವೀಗ ನೋಡೋಣ:
1. ದೇವರ ಮಾತನ್ನ ಕೇಳಿದ್ರೆ ವಿವೇಕಿಗಳಾಗ್ತೀವಿ
“ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.
ಯೆಹೋವ ದೇವರು ನಮ್ಮನ್ನ ಸೃಷ್ಟಿ ಮಾಡಿರೋದ್ರಿಂದ ಆತನಿಗೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತು. ಹಾಗಾಗಿ ನಮಗೆ ಬೇಕಾದ ಮಾರ್ಗದರ್ಶನಗಳನ್ನ ಕೊಡ್ತಾನೆ. ಆ ಮಾರ್ಗದರ್ಶನ ನಮಗೆ ಪವಿತ್ರ ಗ್ರಂಥದಲ್ಲಿ ಸಿಗುತ್ತೆ. ಅದನ್ನ ಓದಿ ಪಾಲಿಸಿದ್ರೆ ನಾವು ವಿವೇಕಿಗಳಾಗ್ತೀವಿ. ಸಮಸ್ಯೆಗಳು ಬಂದಾಗ ಸರಿಯಾದ ನಿರ್ಧಾರಗಳನ್ನ ಮಾಡ್ತೀವಿ.
2. ದೇವರ ಮಾತನ್ನ ಕೇಳಿದ್ರೆ ಜೀವನದಲ್ಲಿ ಖುಷಿಯಾಗಿ ಇರ್ತೀವಿ
“ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು.”—ಲೂಕ 11:28.
ಪವಿತ್ರ ಗ್ರಂಥದಲ್ಲಿ ಇರೋ ದೇವರ ಮಾತನ್ನ ಪಾಲಿಸೋ ಲಕ್ಷಾಂತರ ಜನ ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ. ಸ್ಪೇನ್ನಲ್ಲಿ ಇರೋ ಒಬ್ಬ ವ್ಯಕ್ತಿಯ ಉದಾಹರಣೆ ನೋಡಿ. ಅವನಿಗೆ ಮೂಗಿನ ತುದಿಲೇ ಕೋಪ. ಎಷ್ಟ್ರ ಮಟ್ಟಿಗಂದ್ರೆ ಅವನ ಹೆಂಡತಿ ಹತ್ರನೂ ಒರಟಾಗಿ ನಡಕೋತಿದ್ದ. ಒಂದು ದಿನ ಅವನು ಪ್ರವಾದಿ ಮೋಶೆ ಬರೆದಿರೋ ಪುಸ್ತಕದಲ್ಲಿ ಯಾಕೋಬನ ಮಗ ಯೋಸೇಫನ ಬಗ್ಗೆ ಓದಿದ. ಯೋಸೇಫನಿಗೆ ತುಂಬ ಅನ್ಯಾಯ ಆಯ್ತು. ಅವನನ್ನ ಗುಲಾಮನಾಗಿ ಮಾರಿದ್ರು, ಜೈಲಿಗೂ ಹಾಕಿದ್ರು. ಆದ್ರು ಅವನು ಕೋಪ ಮಾಡಿಕೊಳ್ಳಲಿಲ್ಲ ಸಮಾಧಾನದಿಂದ ಇದ್ದ. ಅನ್ಯಾಯ ಮಾಡಿದವರೆಲ್ಲರನ್ನೂ ಕ್ಷಮಿಸಿದ. (ಆದಿಕಾಂಡ, ಅಧ್ಯಾಯ 37-45) “ಯೋಸೇಫನ ಈ ಉದಾಹರಣೆ ಓದಿದ್ರಿಂದ ನಾನು ಸಮಾಧಾನ, ಕರುಣೆಯಂಥ ಗುಣಗಳನ್ನ ಬೆಳಸಿಕೊಂಡೆ. ಅಷ್ಟೆ ಅಲ್ಲ ಕೋಪನ ಹತೋಟೀಲಿ ಇಟ್ಟುಕೊಳ್ಳೋದು ಹೇಗೆ ಅಂತನೂ ಕಲಿತೆ. ಈಗ ಬೇರೆಯವರೊಟ್ಟಿಗೆ ನನ್ನ ಸ್ನೇಹ ಸಂಬಂಧನೂ ಚೆನ್ನಾಗಿದೆ, ನಾನು ಖುಷಿಯಾಗೂ ಇದೀನಿ” ಅಂತ ಸ್ಪೇನಿನ ಆ ವ್ಯಕ್ತಿ ಹೇಳ್ತಾರೆ.
ನಾವು ಬೇರೆಯವರ ಜೊತೆ ಹೇಗೆ ನಡಕೋಬೇಕು ಅನ್ನೋದಕ್ಕೆ ಪವಿತ್ರ ಗ್ರಂಥದಲ್ಲಿ ಇನ್ನು ಹೆಚ್ಚಿನ ಮಾಹಿತಿ ಇದೆ. ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.