ಜ್ಯೋತಿಷ ಮತ್ತು ಕಣಿಹೇಳುವುದು—ಭವಿಷ್ಯ ತಿಳಿಯುವ ಮೂಲಗಳಾ?
ಜ್ಯೋತಿಷ
ಜ್ಯೋತಿಷವು ಜನರು ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಬಳಸುವ ಒಂದು ವಿಧ. ಇದಕ್ಕನುಸಾರ ಭೂಮಿಯಲ್ಲಿರುವ ಜನರ ಬದುಕಿನ ಮೇಲೆ ನಕ್ಷತ್ರಗಳು, ಚಂದ್ರ, ಗ್ರಹಗಳು ತುಂಬ ಪ್ರಭಾವ ಬೀರುತ್ತವೆ. ಜ್ಯೋತಿಷಿಗಳು ಹೇಳುವುದೇನೆಂದರೆ, ಒಬ್ಬ ವ್ಯಕ್ತಿ ಹುಟ್ಟುವ ಗಳಿಗೆಯಲ್ಲಿ ಆ ಆಕಾಶಕಾಯಗಳು ಯಾವ ಸ್ಥಾನದಲ್ಲಿರುತ್ತವೆ ಎನ್ನುವುದು ಅವನ ಸ್ವಭಾವ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ.
ಜ್ಯೋತಿಷದ ಮೂಲವು ಪ್ರಾಚೀನ ಬ್ಯಾಬಿಲೋನ್ ಆಗಿದೆಯಾದರೂ ಅದು ಈಗಲೂ ಜನಪ್ರಿಯವಾಗಿದೆ. 2012ರಲ್ಲಿ ಅಮೆರಿಕದಲ್ಲಿ ನಡೆಸಲಾದ ಒಂದು ಸಮೀಕ್ಷೆಗನುಸಾರ, ಹೆಚ್ಚುಕಡಿಮೆ 33% ಜನರು ಜ್ಯೋತಿಷ “ಸ್ವಲ್ಪಮಟ್ಟಿಗೆ ವೈಜ್ಞಾನಿಕವಾಗಿದೆ” ಎಂದು ನೆನಸುತ್ತಿದ್ದರು. 10% ಜನರು ಅದು “ಪೂರ್ತಿ ವೈಜ್ಞಾನಿಕವಾಗಿದೆ” ಎಂದು ಹೇಳಿದರು. ಈ ಮಾತು ನಿಜನಾ? ಅಲ್ಲ. ಇದಕ್ಕೆ ಕಾರಣಗಳನ್ನು ನೋಡೋಣ.
-
ಜ್ಯೋತಿಷಿಗಳು ಹೇಳುವಂಥ ರೀತಿಯಲ್ಲಿ ಮಾನವರ ಮೇಲೆ ಪ್ರಭಾವ ಬೀರುವ ಯಾವುದೇ ಶಕ್ತಿ ಗ್ರಹಗಳಿಗೆ, ನಕ್ಷತ್ರಗಳಿಗೆ ಇಲ್ಲ.
-
ಹೆಚ್ಚಾಗಿ ಅವರು ಹೇಳುವ ಭವಿಷ್ಯನುಡಿಗಳು ಯಾವುದೇ ವ್ಯಕ್ತಿಗೆ ಅನ್ವಯವಾಗುವಂಥ ರೀತಿಯಲ್ಲಿರುತ್ತವೆ.
-
ಜ್ಯೋತಿಷದಲ್ಲಿ ಗ್ರಹಗಳು ಭೂಮಿಯ ಸುತ್ತ ತಿರುಗುತ್ತವೆಂಬ ಪ್ರಾಚೀನ ನಂಬಿಕೆಯನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ನಿಜವೇನೆಂದರೆ, ಗ್ರಹಗಳು ಸೂರ್ಯನ ಸುತ್ತ ತಿರುಗುತ್ತವೆ.
-
ಒಬ್ಬ ವ್ಯಕ್ತಿಯ ಬಗ್ಗೆ ಬೇರೆಬೇರೆ ಜ್ಯೋತಿಷಿಗಳು ಹೇಳಿದ ಭವಿಷ್ಯನುಡಿಗಳು ಒಂದಕ್ಕೊಂದು ಹೋಲುವುದಿಲ್ಲ.
-
ಜ್ಯೋತಿಷವು ಒಬ್ಬ ವ್ಯಕ್ತಿ ಹುಟ್ಟಿದ ತಾರೀಖಿಗನುಸಾರ ಅವನನ್ನು/ಅವಳನ್ನು 12 ರಾಶಿಚಕ್ರ ಚಿಹ್ನೆಗಳಲ್ಲಿ ಯಾವುದಾದರೊಂದು ವರ್ಗಕ್ಕೆ ಸೇರಿಸುತ್ತದೆ. ಆಯಾ ರಾಶಿಯ ತಾರೀಖುಗಳಂದು ಯಾವ ನಕ್ಷತ್ರಮಂಡಲ ಕಾಣಿಸುತ್ತದೆಂದು ಹೇಳಲಾಗುತ್ತಿತ್ತೊ ಅದು ಈಗ ಆ ತಾರೀಖುಗಳಂದು ಕಾಣಿಸುವುದಿಲ್ಲ. ಯಾಕೆಂದರೆ, ಶತಮಾನಗಳಾದ್ಯಂತ ಅಂತರಿಕ್ಷದಲ್ಲಿ ಭೂಮಿಯ ಸ್ಥಾನ ಸ್ವಲ್ಪ ಬದಲಾಗಿದೆ.
ಈ ರಾಶಿಚಕ್ರ ಚಿಹ್ನೆಗಳು ಒಬ್ಬ ವ್ಯಕ್ತಿಯ ಸ್ವಭಾವದ ಬಗ್ಗೆ ಸುಳಿವುಗಳನ್ನು ಕೊಡುತ್ತವೆಂದು ಹೇಳಲಾಗುತ್ತದೆ. ಆದರೆ ನಿಜಾಂಶವೇನೆಂದರೆ, ಒಂದೇ ತಾರೀಖಿನಂದು ಹುಟ್ಟಿದ ಬೇರೆಬೇರೆ ವ್ಯಕ್ತಿಗಳಿಗೆ ಒಂದೇ ರೀತಿಯ ಸ್ವಭಾವ, ಗುಣಗಳಿರುವುದಿಲ್ಲ. ಒಬ್ಬ ವ್ಯಕ್ತಿ ಹುಟ್ಟಿದ ತಾರೀಖಿನಿಂದ ಅವನ ಅಥವಾ ಅವಳ ವ್ಯಕ್ತಿತ್ವದ ಬಗ್ಗೆ ಏನೂ ತಿಳಿಯುವುದಿಲ್ಲ. ಜನರು ಹೇಗಿದ್ದಾರೊ ಹಾಗೆಯೇ ನೋಡುವ ಬದಲಿಗೆ ಜ್ಯೋತಿಷಿಗಳು ಮುಂಚೆಯೇ ಮಾಡಿರುವ ಊಹೆಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯ ನಡವಳಿಕೆ ಮತ್ತು ಸ್ವಭಾವ ಎಂಥದ್ದೆಂದು ತಿಳಿಸುತ್ತಾರೆ. ಇದು ಒಂದು ರೀತಿಯ ಪೂರ್ವಗ್ರಹ ತಾನೇ?
ಕಣಿಹೇಳುವುದು
ಪ್ರಾಚೀನಕಾಲದಿಂದಲೂ ಜನರು ಕಣಿಹೇಳುವವರ ಬಳಿ ಹೋಗಿ ತಮ್ಮ ಭವಿಷ್ಯದ ಬಗ್ಗೆ ವಿಚಾರಿಸಿದ್ದಾರೆ. ಕಣಿಹೇಳುವವರಲ್ಲಿ ಕೆಲವರು, ಪ್ರಾಣಿಗಳ ಮತ್ತು ಮಾನವರ ದೇಹದೊಳಗಿನ ಅಂಗಗಳನ್ನು ಅಥವಾ ಹುಂಜ ಕಾಳನ್ನು ಕುಕ್ಕುವ ರೀತಿಯನ್ನು ನೋಡಿ ಅದಕ್ಕೆ ಒಂದು ಅರ್ಥ ಕೊಡುತ್ತಿದ್ದರು. ಇನ್ನೂ ಕೆಲವರು ಚಹಾ ಎಲೆಗಳಲ್ಲಿ ಅಥವಾ ಕಾಫಿ ಮಡ್ಡಿಯಲ್ಲಿ ಕಂಡುಬರುವ ವಿನ್ಯಾಸಗಳನ್ನು ನೋಡಿ ಭವಿಷ್ಯ ನುಡಿಯುತ್ತಿದ್ದರು. ಈಗಿನ ಕಾಲದಲ್ಲಿ ಕಣಿಹೇಳುವವರು ಟ್ಯಾರೋ ಕಾರ್ಡ್‌ಗಳನ್ನು, ಸ್ಫಟಿಕ ಗೋಲವನ್ನು, ದಾಳವನ್ನು, ಚೀಟಿ ಎತ್ತಿಕೊಡುವ ಗಿಳಿಯನ್ನು ಅಥವಾ ಬೇರೆ ವಸ್ತುಗಳನ್ನು ಬಳಸಿ ಒಬ್ಬ ವ್ಯಕ್ತಿಯ ಭವಿಷ್ಯ ತಿಳಿಸುತ್ತಾರೆ. ಇವರ ಮಾತುಗಳನ್ನು ನಂಬಲಿಕ್ಕಾಗುತ್ತದಾ? ಇಲ್ಲ. ಯಾಕೆ ಎನ್ನುವುದರ ಬಗ್ಗೆ ಸ್ವಲ್ಪ ಚರ್ಚಿಸೋಣ.
ಈ ವಿಷಯದ ಬಗ್ಗೆ ಯೋಚಿಸಿ. ಕಣಿಹೇಳುವ ಬೇರೆಬೇರೆ ವಿಧಾನಗಳನ್ನು ಬಳಸಿ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಗುವ ಭವಿಷ್ಯನುಡಿಗಳು ಹೆಚ್ಚಾಗಿ ಒಂದಕ್ಕೊಂದು ವಿರುದ್ಧ ಇರುತ್ತವೆ. ಬೇರೆಬೇರೆ ವ್ಯಕ್ತಿಗಳು ಒಂದೇ ವಿಧಾನ ಬಳಸಿದರೂ ಭಿನ್ನಭಿನ್ನ ಭವಿಷ್ಯ ನುಡಿಯುತ್ತಾರೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಒಂದೇ ವಿಧದ ಕಾರ್ಡ್‌ಗಳನ್ನು ಬಳಸುವ ಇಬ್ಬರು ಕಣಿಹೇಳುವವರ ಬಳಿ ತನ್ನ ಭವಿಷ್ಯದ ಬಗ್ಗೆ ಒಂದೇ ಪ್ರಶ್ನೆ ಕೇಳಿದರೆ, ಅವರಿಬ್ಬರ ಉತ್ತರ ಒಂದೇ ಆಗಿರಬೇಕು. ಆದರೆ ಹೆಚ್ಚಾಗಿ ಹಾಗಿರುವುದಿಲ್ಲ.
ಕಣಿಹೇಳುವವರು ಬಳಸುವ ವಿಧಾನಗಳ ಬಗ್ಗೆ ಅಥವಾ ಅವರ ಉದ್ದೇಶಗಳ ಬಗ್ಗೆ ಈಗೀಗ ಅನೇಕರಿಗೆ ಅನುಮಾನ ಬರುತ್ತಿದೆ. ಟೀಕಾಕಾರರು ಹೇಳುವುದೇನೆಂದರೆ, ಆ ಕಾರ್ಡ್‌ಗಳನ್ನು ಇಲ್ಲವೇ ಸ್ಫಟಿಕಗೋಲಗಳನ್ನು ಅವರು ತಮ್ಮ ಪ್ರದರ್ಶನದಲ್ಲಿ ಸುಮ್ಮನೆ ಮುಂದಿಡುತ್ತಾರೆ ಅಷ್ಟೇ. ಅವರು ಈ ವಸ್ತುಗಳನ್ನು ನೋಡಿ ಅಲ್ಲ ಬದಲಾಗಿ ತಮ್ಮ ಮುಂದೆ ಕೂತಿರುವ ವ್ಯಕ್ತಿಯ ಪ್ರತಿಕ್ರಿಯೆಗಳನ್ನು ಗಮನಿಸಿ ಭವಿಷ್ಯ ನುಡಿಯುತ್ತಾರಂತೆ. ಉದಾಹರಣೆಗೆ, ನಿಪುಣನಾದ ಕಣಿಹೇಳುವವನು ಸಾಮಾನ್ಯವಾದ ಪ್ರಶ್ನೆಗಳನ್ನು ಕೇಳಿ, ತನ್ನ ಗಿರಾಕಿ ಬಗ್ಗೆ ಏನಾದರೂ ತಿಳಿಸಿಕೊಡುವ ಸುಳಿವುಗಳು ಅವರ ಮಾತಿನಿಂದ ಅಥವಾ ಹಾವಭಾವಗಳಿಂದ ಸಿಗುತ್ತದಾ ಅಂತ ಹುಷಾರಾಗಿ ಗಮನಿಸುತ್ತಿರುತ್ತಾನೆ. ಹೀಗೆ ಅವನು ಆ ಗಿರಾಕಿಗೇ ಗೊತ್ತಾಗದ ರೀತಿಯಲ್ಲಿ ನಿಜಾಂಶಗಳು ಮತ್ತು ಸನ್ನಿವೇಶಗಳ ಬಗ್ಗೆ ಮಾಹಿತಿಯನ್ನು ಹೊರಸೆಳೆಯುತ್ತಾನೆ. ನಂತರ ಈ ಮಾಹಿತಿಯನ್ನು ತನಗೆ ಮೊದಲೇ ಗೊತ್ತಿದ್ದಂತೆ ಹೇಳುತ್ತಾನೆ. ಹೀಗೆ ಗಿರಾಕಿಯ ಭರವಸೆ ಸಂಪಾದಿಸಿದ ನಂತರ ಕೆಲವು ಕಣಿಹೇಳುವವರು ಗಿರಾಕಿಗಳಿಂದ ದೊಡ್ಡ ಮೊತ್ತದ ಹಣವನ್ನು ಸುಲಿಯುತ್ತಾರೆ.
ಬೈಬಲ್ ಏನು ಹೇಳುತ್ತದೆ?
ಜ್ಯೋತಿಷ ಮತ್ತು ಕಣಿಹೇಳುವ ಆಚಾರವು ನಮ್ಮ ಭವಿಷ್ಯ ಮುಂಚೆಯೇ ನಿರ್ಧರಿಸಲ್ಪಟ್ಟಿದೆ ಎಂಬರ್ಥ ಕೊಡುತ್ತದೆ. ಇದು ನಿಜನಾ? ಬೈಬಲ್ ಹೇಳುವುದೇನೆಂದರೆ ನಾವೇನು ನಂಬಬೇಕು, ನಂಬಬಾರದು ಅಥವಾ ನಾವೇನು ಮಾಡಬೇಕು, ಮಾಡಬಾರದೆಂದು ಆಯ್ಕೆ ಮಾಡುವ ಸಾಮರ್ಥ್ಯ ನಮಗಿದೆ. ನಮ್ಮ ಆಯ್ಕೆಗಳಿಂದಲೇ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ.—ಯೆಹೋಶುವ 24:15.
ದೇವರ ಆರಾಧಕರು ಜ್ಯೋತಿಷ ಮತ್ತು ಕಣಿಹೇಳುವುದನ್ನು ತಿರಸ್ಕರಿಸಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಭವಿಷ್ಯ ತಿಳಿಯಲು ಮನುಷ್ಯರು ಬಳಸುವ ಎಲ್ಲ ವಿಧಾನಗಳನ್ನು ದೇವರು ಖಂಡಿಸುತ್ತಾನೆಂದು ಬೈಬಲ್ ಹೇಳುತ್ತದೆ: “ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.” a—ಧರ್ಮೋಪದೇಶಕಾಂಡ 18:10-12.
a “ಭೂಲೋಕದಲ್ಲೆಲ್ಲಾ ಸರ್ವೋನ್ನತ” ಆಗಿರುವಾತನ ಹೆಸರು ಯೆಹೋವ.—ಕೀರ್ತನೆ 83:18.