ನಿಮಗೆ ಗೊತ್ತಿತ್ತಾ?
ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರು ಯಾಕೆ ವಧುದಕ್ಷಿಣೆ ಕೊಡ್ತಿದ್ರು?
ಹಿಂದಿನ ಕಾಲದಲ್ಲಿ ಹೆಣ್ಣಿನ ಮನೆಯವರಿಗೆ ಗಂಡಿನ ಕಡೆಯವರು ವಧುದಕ್ಷಿಣೆ ಕೊಡ್ತಿದ್ರು. ಅವರು ಬೆಲೆಬಾಳೋ ವಸ್ತುಗಳನ್ನ, ಪ್ರಾಣಿಗಳನ್ನ ಅಥವಾ ದುಡ್ಡನ್ನ ಕೊಡ್ತಿದ್ರು. ಇನ್ನೂ ಕೆಲವರು ಹೆಣ್ಣಿನ ಮನೆಯವರಿಗೆ ಕೆಲಸ ಮಾಡಿಕೊಡೋ ರೂಪದಲ್ಲೂ ವಧುದಕ್ಷಿಣೆ ಕೊಡ್ತಿದ್ರು. ಉದಾಹರಣೆಗೆ ಯಾಕೋಬ ರಾಹೇಲಳನ್ನ ಮದುವೆ ಆಗೋಕೆ ಅವರ ಅಪ್ಪನ ಹೊಲದಲ್ಲಿ 7 ವರ್ಷ ಕೆಲಸ ಮಾಡಿದ. (ಆದಿ. 29:17, 18, 20) ಜನ ಯಾಕೆ ವಧುದಕ್ಷಿಣೆ ಕೊಡ್ತಿದ್ರು?
ಬೈಬಲ್ ಪಂಡಿತರಾದ ಕ್ಯಾರಲ್ ಮೇಯರ್ಸ್ ಇದರ ಬಗ್ಗೆ ಹೇಳಿದ್ದು, “ಇಷ್ಟು ದಿನ ಹೊಲದಲ್ಲಿ ಕೆಲಸ ಮಾಡ್ತಿದ್ದ ಮಗಳು ಗಂಡನ ಮನೆಗೆ ಹೋದ್ರೆ ಹೊಲದಲ್ಲಿ ಕೆಲಸ ಮಾಡೋಕೆ ಒಬ್ಬರು ಕಡಿಮೆ ಆಗ್ತಿದ್ರು. ಇದ್ರಿಂದ ಆದ ನಷ್ಟವನ್ನ ಸರಿದೂಗಿಸೋಕೆ ವಧುದಕ್ಷಿಣೆ ಪಡೆದುಕೊಳ್ತಿದ್ರು.” ವಧುದಕ್ಷಿಣೆ ಕೊಡೋದ್ರಿಂದ ಎರಡು ಕುಟುಂಬಗಳ ಸಂಬಂಧನೂ ಚೆನ್ನಾಗಿರುತ್ತಿತ್ತು. ಅವರಿಗೆ ಕಷ್ಟ ಬಂದಾಗ ಒಬ್ಬರಿಗೊಬ್ಬರು ಸಹಾಯ ಮಾಡೋಕೆ ಮುಂದೆ ಬರುತ್ತಿದ್ದರು. ವಧುದಕ್ಷಿಣೆ ಕೊಟ್ಟಾಗ ಒಂದು ಹೆಣ್ಣಿಗೆ ನಿಶ್ಚಿತಾರ್ಥ ಆಗಿದೆ, ಅವಳು ಬೇಗ ಗಂಡನ ಮನೆಗೆ ಹೋಗ್ತಾಳೆ ಅಂತ ಜನರಿಗೆ ಗೊತ್ತಾಗುತ್ತಿತ್ತು.
ವಧುದಕ್ಷಿಣೆ ಕೊಡೋದು ಹೆಣ್ಣನ್ನ ಒಂದು ವಸ್ತು ತರ ಕಾಸು ಕೊಟ್ಟು ಕೊಂಡುಕೊಳ್ಳೋದು ಅಥವಾ ಮಾರೋದಲ್ಲ. ಇದರ ಬಗ್ಗೆ ಪ್ರಾಚೀನ ಇಸ್ರಾಯೇಲ್—ಅದರ ಜೀವನ ಮತ್ತು ಸಂಸ್ಥೆಗಳು (ಇಂಗ್ಲಿಷ್) ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ವಧುದಕ್ಷಿಣೆ ಅಂತ ಹಣ ಅಥವಾ ವಸ್ತುಗಳನ್ನ ಕೊಡೋದು ಆ ಹೆಣ್ಣನ್ನ ಕೊಂಡುಕೊಳ್ಳೋಕೆ ಅಂತ ಜನರಿಗೆ ಅನಿಸಬಹುದು. ಆದ್ರೆ ಅದು ಹಾಗಲ್ಲ. ವಧುದಕ್ಷಿಣೆಯನ್ನ ಆ ಹುಡುಗಿಯ ಬೆಲೆಯಾಗಿ ಅಲ್ಲ, ಆ ಹುಡುಗಿಯ ನಷ್ಟಭರ್ತಿಯಾಗಿ ಹೆಣ್ಣಿನ ಮನೆಯವರಿಗೆ ಕೊಡ್ತಿದ್ರು.”
ಕೆಲವು ದೇಶಗಳಲ್ಲಿ ಈಗಲೂ ವಧುದಕ್ಷಿಣೆ ಕೊಡೋ ಪದ್ಧತಿಯಿದೆ. ಒಂದುವೇಳೆ ಕ್ರೈಸ್ತರು ವಧುದಕ್ಷಿಣೆ ಕೇಳಿದ್ರೆ “ನಾನು ಹೇಳಿದ್ದೇ ಆಗಬೇಕು” ಅನ್ನೋ ತರ ಹೆಣ್ಣಿನ ಕಡೆಯವರು ಜಾಸ್ತಿ ದುಡ್ಡು ಕೇಳಬಾರದು. (ಫಿಲಿ. 4:5; 1 ಕೊರಿಂ. 10:32, 33) ಅವರು “ಹಣದಾಸೆ,” ದುರಾಸೆ ಇರೋರ ತರ ನಡಕೊಳ್ಳಬಾರದು. (2 ತಿಮೊ. 3:2) ಹಾಗೇನಾದ್ರೂ ಜಾಸ್ತಿ ಹಣ ಕೇಳಿದ್ರೆ ಗಂಡು ಮದುವೆಯನ್ನ ಮುಂದೂಡಬೇಕಾಗಿ ಬರಬಹುದು. ಅಥವಾ ವಧುದಕ್ಷಿಣೆ ಕೊಡೋಕೆ ಅಂತ ಪಯನೀಯರ್ ಸೇವೆಯನ್ನ ಬಿಟ್ಟು ಹಣ ಸಂಪಾದನೆ ಮಾಡೋಕೋಸ್ಕರ ದುಡಿಬೇಕಾದ ಪರಿಸ್ಥಿತಿ ಬರಬಹುದು.
ಕೆಲವು ದೇಶಗಳಲ್ಲಿ ವಧುದಕ್ಷಿಣೆ ಬಗ್ಗೆ ಸರ್ಕಾರನೇ ಕಾನೂನು ಮಾಡಿರುತ್ತೆ. ಅದನ್ನ ಕ್ರೈಸ್ತರು ಪಾಲಿಸಬೇಕು. ಯಾಕಂದ್ರೆ “ಎಲ್ರೂ ಅಧಿಕಾರಿಗಳ ಮಾತು ಕೇಳಬೇಕು” ಮತ್ತು ಯೆಹೋವ ದೇವರ ನಿಯಮಗಳಿಗೆ ವಿರುದ್ಧವಾಗಿರದ ಕಾನೂನನ್ನ ಪಾಲಿಸಬೇಕು ಅಂತ ಬೈಬಲ್ ಹೇಳುತ್ತೆ.—ರೋಮ. 13:1; ಅ. ಕಾ. 5:29.