ಹುಲ್ದ ತಮ್ಮ ಗುರಿ ಮುಟ್ಟಿದ್ರು
ಇಂಡೊನೇಶಿಯದ ಸ್ಯಾಂಗಿರ್ ಬೇಸಾರ್ ಅನ್ನೋ ಒಂದು ಚಿಕ್ಕ ದ್ವೀಪದಲ್ಲಿ ಮೂರು ಸಹೋದರಿಯರಿದ್ರು. ನೀವು ಕೆಲವು ವರ್ಷಗಳ ಹಿಂದೆ ಅಲ್ಲಿಗೆ ಹೋಗಿದಿದ್ರೆ, ಸಮುದ್ರ ತೀರದ ಹತ್ರ ಇವರು ಯಾವಾಗ್ಲೂ ಸಿಹಿಸುದ್ದಿ ಸಾರೋದನ್ನ ನೋಡಬಹುದಿತ್ತು. ಇವರು ಸೇವೆಯಷ್ಟೇ ಅಲ್ಲ ಇನ್ನೊಂದು ಕೆಲಸಾನೂ ಮಾಡ್ತಿದ್ರು. ಅದೇನು ಗೊತ್ತಾ?
ಮೊದ್ಲು ಇವರು ಸಮುದ್ರದ ಒಳಗೆ ಹೋಗಿ ದೊಡ್ಡದೊಡ್ಡ ಕಲ್ಲುಗಳನ್ನ ತಗೊಂಡು ಬರ್ತಿದ್ರು. ಕೆಲವು ಕಲ್ಲುಗಳಂತೂ ಫುಟ್ ಬಾಲ್ನಷ್ಟು ಇರ್ತಿದ್ವು. ಆಮೇಲೆ ಅವರು ಸ್ಟೂಲ್ ಮೇಲೆ ಕೂತ್ಕೊಂಡು ಸುತ್ತಿಗೆಯಿಂದ ಆ ಕಲ್ಲುಗಳನ್ನ ಹೊಡೆದು ಪುಡಿಪುಡಿ ಮಾಡ್ತಿದ್ರು. ಅದಾದ್ಮೇಲೆ ಆ ಕಲ್ಲಿನ ಚುರುಗಳನ್ನ ಒಂದು ಪ್ಲಾಸ್ಟಿಕ್ ಬಕೆಟ್ನಲ್ಲಿ ತುಂಬಿಸಿ ಮನೆಗೆ ತಗೊಂಡು ಹೋಗ್ತಿದ್ರು. ಆಮೇಲೆ ಅದನ್ನ ಒಂದು ಬ್ಯಾಗಿಗೆ ಹಾಕಿ ಟ್ರಕ್ನಲ್ಲಿ ಕಳಿಸ್ತಿದ್ರು. ಈ ಕಲ್ಲುಗಳನ್ನ ರೋಡ್ ಮಾಡೋಕೆ ಬಳಸ್ತಿದ್ರು.
ಈ ಕೆಲಸನ ಹುಲ್ದನೂ ಮಾಡ್ತಿದ್ರು. ಅವ್ರಿಗೆ ತುಂಬ ಸಮಯ ಇದ್ದಿದ್ರಿಂದ ಬೇರೆಯವ್ರಿಗಿಂತ ಜಾಸ್ತಿ ಹೊತ್ತು ಈ ಕೆಲಸ ಮಾಡ್ತಿದ್ರು. ಇದ್ರಿಂದ ಬರ್ತಿದ್ದ ಹಣದಿಂದ ಅವರು ಮನೆ ನೋಡ್ಕೊಳ್ತಿದ್ರು. ಈ ಸಹೋದರಿ ಒಂದು ಗುರಿ ಇಟ್ರು. ಅದೇನು ಗೊತ್ತಾ? ಅವ್ರಿಗೆ ಒಂದು ಟ್ಯಾಬ್ ತಗೊಳ್ಳೋ ಆಸೆ ಇತ್ತು. ಯಾಕಂದ್ರೆ ಸಿಹಿಸುದ್ದಿ ಸಾರುವಾಗ JW ಲೈಬ್ರರಿ ಆ್ಯಪ್ ಬಳಸಿ ಜನ್ರಿಗೆ ಇನ್ನೂ ಕಲಿಸಬಹುದು, ಅದ್ರಿಂದ ವಿಡಿಯೋಗಳನ್ನ ತೋರಿಸಬಹುದು ಅಂದ್ಕೊಂಡ್ರು. ಅಷ್ಟೇ ಅಲ್ಲ ಬೈಬಲಿಂದ ಅವ್ರೂ ತುಂಬ ವಿಷ್ಯಗಳನ್ನ ತಿಳ್ಕೊಬಹುದು ಅಂತ ಯೋಚಿಸಿದ್ರು. ಅದಕ್ಕೇ ಟ್ಯಾಬ್ ತಗೊಳ್ಳೋಕೆ ಅವರು ಇನ್ನೂ ಜಾಸ್ತಿ ಕೆಲಸ ಮಾಡಬೇಕಿತ್ತು.
ಹುಲ್ದ ಒಂದೂವರೆ ತಿಂಗಳು ಪ್ರತಿದಿನ ಬೆಳಿಗ್ಗೆ 2 ತಾಸು ಜಾಸ್ತಿ ಕೆಲಸ ಮಾಡಿದ್ರು. ಇದ್ರಿಂದ ಅವರು ಒಂದು ಚಿಕ್ಕ ಟ್ರಕ್ ತುಂಬುವಷ್ಟು ಕಲ್ಲನ್ನ ಕೂಡಿಸಿದ್ರು. ಹೀಗೆ ಅದ್ರಿಂದ ಸಿಕ್ಕ ಹಣದಿಂದ ಟ್ಯಾಬ್ ತಗೊಂಡ್ರು.
“ನಾನು ಈ ತರ ಕಷ್ಟ ಪಟ್ಟು ದುಡೀತಾ ಇದ್ದಿದ್ರಿಂದ ತುಂಬ ಸುಸ್ತಾಗ್ತಿತ್ತು, ಮೈ ಕೈ ನೋವು ಬರ್ತಿತ್ತು. ಆದ್ರೆ ನನಗೀಗ ಬೇಜಾರಿಲ್ಲ. ಯಾಕಂದ್ರೆ ನನ್ನ ಕೈಯಲ್ಲಿ ಟ್ಯಾಬ್ ಇದೆ. ಇದ್ರಿಂದ ನಾನು ಮುಂಚೆಗಿಂತ ಚೆನ್ನಾಗಿ ಸೇವೆ ಮಾಡೋಕೆ ಆಗ್ತಿದೆ. ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡೋಕೂ ಆಗ್ತಿದೆ” ಅಂತ ಹುಲ್ದ ಹೇಳ್ತಾರೆ. ಅಷ್ಟೇ ಅಲ್ಲ ಟ್ಯಾಬ್ ತಗೊಂಡಿದ್ರಿಂದ ಕೋವಿಡ್ ಬಂದಾಗ ಕೂಟಗಳಿಗೆ ಹಾಜರಾಗೋಕೆ, ಸೇವೆ ಮಾಡೋಕೆ ಸುಲಭ ಆಯ್ತು ಅಂತ ಅವರು ಹೇಳಿದ್ರು. ಹುಲ್ದ ತಮ್ಮ ಗುರಿ ಮುಟ್ಟಿದ್ದನ್ನ ನೋಡುವಾಗ ನಮಗೂ ಖುಷಿಯಾಗುತ್ತೆ ಅಲ್ವಾ?