ಅಧ್ಯಯನ ಲೇಖನ 47
ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಜಾಸ್ತಿ ಮಾಡ್ಕೊಳ್ಳಿ
“ನಾವು ಒಬ್ರನ್ನೊಬ್ರು ಪ್ರೀತಿಸ್ತಾ ಇರೋಣ. ಯಾಕಂದ್ರೆ ಪ್ರೀತಿ ದೇವರಿಂದ ಬಂದಿದೆ.”—1 ಯೋಹಾ. 4:7.
ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ
ಈ ಲೇಖನದಲ್ಲಿ ಏನಿದೆ? a
1-2. (ಎ) “ಪ್ರೀತಿನೇ ದೊಡ್ಡದು” ಅಂತ ಪೌಲ ಯಾಕೆ ಹೇಳಿದ? (ಬಿ) ನಾವು ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊತೀವಿ?
ಅಪೊಸ್ತಲ ಪೌಲ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಬಗ್ಗೆ ಮಾತಾಡುವಾಗ “ಪ್ರೀತಿನೇ ದೊಡ್ಡದು” ಅಂತ ಹೇಳಿದ. (1 ಕೊರಿಂ. 13:13) ಯಾಕೆ? ಹೊಸ ಲೋಕ ಬಂದಾಗ ಯೆಹೋವ ಕೊಟ್ಟ ಮಾತುಗಳೆಲ್ಲ ನಿಜ ಆಗಿರುತ್ತೆ. ನಾವು ಇಟ್ಕೊಂಡಿರೋ ನಿರೀಕ್ಷೆನೂ ನಡೆದು ಹೋಗಿರುತ್ತೆ. ಹಾಗಾಗಿ ಆಗ ನಮಗೆ ಅದ್ರ ಬಗ್ಗೆ ನಂಬಿಕೆ ಮತ್ತು ನಿರೀಕ್ಷೆ ಇಟ್ಕೊಬೇಕಾಗಿಲ್ಲ. ಆದ್ರೆ ಪ್ರೀತಿ ಬೇಕೇಬೇಕು. ಯೆಹೋವನ ಮೇಲೆ ಮತ್ತು ಜನ್ರ ಮೇಲೆ ನಮಗಿರೋ ಪ್ರೀತಿ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಇರ್ಬೇಕು.
2 ಹಾಗಾದ್ರೆ ಪ್ರೀತಿಯನ್ನ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? ಅದಕ್ಕೆ ಮೂರು ಪ್ರಶ್ನೆಗಳು ನಮಗೆ ಸಹಾಯ ಮಾಡುತ್ತೆ. ಅದನ್ನ ಈ ಲೇಖನದಲ್ಲಿ ನೋಡೋಣ. ಒಂದು, ನಾವ್ಯಾಕೆ ಒಬ್ರನ್ನೊಬ್ರು ಪ್ರೀತಿಸಬೇಕು? ಎರಡು, ನಾವು ಹೇಗೆ ಪ್ರೀತಿ ತೋರಿಸಬಹುದು? ಮೂರು, ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು?
ನಾವ್ಯಾಕೆ ಒಬ್ರನ್ನೊಬ್ರು ಪ್ರೀತಿಸಬೇಕು?
3. ನಾವ್ಯಾಕೆ ಸಹೋದರ ಸಹೋದರಿಯರನ್ನ ಪ್ರೀತಿಸಬೇಕು?
3 ನಾವ್ಯಾಕೆ ಒಬ್ರನ್ನೊಬ್ರು ಪ್ರೀತಿಸಬೇಕು? ಅದಕ್ಕೆ ತುಂಬ ಕಾರಣಗಳಿವೆ. ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸಿದ್ರೆ ನಾವು ನಿಜವಾದ ಕ್ರೈಸ್ತರು ಅಂತ ತೋರಿಸ್ತೀವಿ. ಯಾಕಂದ್ರೆ ಯೇಸು “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ” ಅಂತ ಹೇಳಿದ್ದಾನೆ. (ಯೋಹಾ. 13:35) ಅಷ್ಟೇ ಅಲ್ಲ, ನಾವು ಪ್ರೀತಿ ತೋರಿಸೋದ್ರಿಂದ ಎಲ್ರೂ ಒಗ್ಗಟ್ಟಾಗಿ ಇರ್ತೀವಿ. ಅದಕ್ಕೇ ಪೌಲ “ಎಲ್ರನ್ನೂ ಒಂದು ಮಾಡೋದು ಈ ಪ್ರೀತಿನೇ” ಅಂತ ಹೇಳಿದ. (ಕೊಲೊ. 3:14) ಆದ್ರೆ ಇದೆಲ್ಲಕ್ಕಿಂತ ಮುಖ್ಯವಾದ ಕಾರಣ ಏನು ಅಂತ ಅಪೊಸ್ತಲ ಯೋಹಾನ ಹೇಳಿದ್ದಾನೆ. “ದೇವರನ್ನ ಪ್ರೀತಿ ಮಾಡೋ ವ್ಯಕ್ತಿ ತನ್ನ ಸಹೋದರನನ್ನೂ ಪ್ರೀತಿಸಬೇಕು” ಅಂತ ಅವನು ಹೇಳಿದ. (1 ಯೋಹಾ. 4:21) ಅಂದ್ರೆ ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸಿದ್ರೆ ಯೆಹೋವನನ್ನೂ ಪ್ರೀತಿಸ್ತಿದ್ದೀವಿ ಅಂತ ತೋರಿಸಿ ಕೊಡ್ತೀವಿ.
4-5. ಯೆಹೋವ ದೇವರಿಗೆ ತೋರಿಸೋ ಪ್ರೀತಿಗೂ ಸಹೋದರ ಸಹೋದರಿಯರಿಗೆ ತೋರಿಸೋ ಪ್ರೀತಿಗೂ ಏನು ಸಂಬಂಧ? ಉದಾಹರಣೆ ಕೊಡಿ.
4 ಸಹೋದರ ಸಹೋದರಿಯರನ್ನ ಪ್ರೀತಿಸಿದ್ರೆ ಹೇಗೆ ಯೆಹೋವ ದೇವರನ್ನ ಪ್ರೀತಿಸಿದ ಹಾಗೆ ಆಗುತ್ತೆ? ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಒಬ್ಬ ಡಾಕ್ಟರ್ ನಿಮ್ಮ ಹೃದಯ ಆರೋಗ್ಯವಾಗಿ ಇದ್ಯಾ ಇಲ್ವಾ ಅಂತ ತಿಳ್ಕೊಳ್ಳೋಕೆ ಏನ್ ಮಾಡ್ತಾನೆ? ಮೊದಲು ನಿಮ್ಮ ಕೈ ಹಿಡಿದು ನಾಡಿಬಡಿತ ಚೆಕ್ ಮಾಡ್ತಾನೆ ಅಲ್ವಾ?
5 ಅದೇ ತರ ನಮಗೆ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ಯಾ ಅಂತ ಪರೀಕ್ಷಿಸ್ಕೊಂಡ್ರೆ ಯೆಹೋವನ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ಗೊತ್ತಾಗುತ್ತೆ. ಒಂದುವೇಳೆ ನಮ್ಮ ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಕಮ್ಮಿಯಾಗಿದೆ ಅಂತ ನಮಗೆ ಅನಿಸಿದ್ರೆ ಯೆಹೋವ ದೇವರ ಮೇಲಿರೋ ಪ್ರೀತಿನೂ ಕಮ್ಮಿಯಾಗಿದೆ ಅಂತ ಅರ್ಥ. ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ಯಾವಾಗ್ಲೂ ಪ್ರೀತಿ ತೋರಿಸ್ತಾ ಇರ್ಬೇಕು. ಆಗ ಯೆಹೋವನ ಮೇಲಿರೋ ಪ್ರೀತಿನೂ ಜಾಸ್ತಿ ಆಗ್ತಾ ಹೋಗುತ್ತೆ.
6. ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಕಮ್ಮಿ ಆದ್ರೆ ಏನಾಗುತ್ತೆ? (1 ಯೋಹಾ. 4:7-9, 11)
6 ಸಹೋದರ ಸಹೋದರಿಯರ ಮೇಲೆ ನಮಗಿರೋ ಪ್ರೀತಿ ಕಮ್ಮಿಯಾಗ್ತಾ ಇದೆ ಅಂದ್ರೆ ಯೆಹೋವನ ಜೊತೆ ಇರೋ ನಮ್ಮ ಫ್ರೆಂಡ್‌ಶಿಪ್‌ಗೆ ಅಪಾಯ ಇದೆ ಅಂತ ಅರ್ಥ. ಇದನ್ನ ಅಪೊಸ್ತಲ ಯೋಹಾನ ತುಂಬ ಸ್ಪಷ್ಟವಾಗಿ ಹೇಳಿದ್ದಾನೆ. “ಕಣ್ಣಿಗೆ ಕಾಣೋ ಸಹೋದರನನ್ನ ಪ್ರೀತಿ ಮಾಡಿಲ್ಲಾಂದ್ರೆ ಕಣ್ಣಿಗೆ ಕಾಣದ ದೇವರನ್ನ ಹೇಗೆ ಪ್ರೀತಿ ಮಾಡಕ್ಕಾಗುತ್ತೆ?” ಅಂತ ಅವನು ಕೇಳಿದ. (1 ಯೋಹಾ. 4:20) ಇದ್ರಿಂದ ನಮಗೇನು ಗೊತ್ತಾಗುತ್ತೆ? ನಾವು ‘ಒಬ್ರನ್ನೊಬ್ರು ಪ್ರೀತಿಸಿದ್ರೆ’ ಮಾತ್ರನೇ ಯೆಹೋವ ನಮ್ಮನ್ನ ಮೆಚ್ಕೊಳ್ತಾನೆ.—1 ಯೋಹಾನ 4:7-9, 11 ಓದಿ.
ನಾವು ಹೇಗೆ ಪ್ರೀತಿ ತೋರಿಸಬಹುದು?
7-8. ನಾವು ಒಬ್ರನ್ನೊಬ್ರು ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು?
7 ನಾವು “ಒಬ್ಬರನ್ನೊಬ್ರು ಪ್ರೀತಿಸ್ತಾ ಇರಬೇಕಂತ” ಬೈಬಲ್ ಯಾವಾಗ್ಲೂ ಹೇಳುತ್ತೆ. (ಯೋಹಾ. 15:12, 17; ರೋಮ. 13:8; 1 ಥೆಸ. 4:9; 1 ಪೇತ್ರ 1:22; 1 ಯೋಹಾ. 4:11) ಆದ್ರೆ ಈ ಪ್ರೀತಿ ನಮ್ಮ ಒಳಗಡೆ ಇರುತ್ತೆ. ಅಂದ್ರೆ ನಮ್ಮ ಹೃದಯದಲ್ಲಿರುತ್ತೆ. ಅದನ್ನ ಯಾರಿಗೂ ನೋಡೋಕೆ ಆಗಲ್ಲ. ಹಾಗಾದ್ರೆ ಅದು ಬೇರೆಯವ್ರಿಗೆ ಕಾಣಬೇಕು ಅಂದ್ರೆ ನಾವು ಏನು ಮಾಡಬೇಕು? ನಮ್ಮ ಮಾತಲ್ಲಿ ಮತ್ತು ನಡ್ಕೊಳ್ಳೋ ರೀತಿಯಲ್ಲಿ ಅದನ್ನ ತೋರಿಸಬೇಕು.
8 ನೀವು ಹೇಗೆ ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಬಹುದು? ‘ಒಬ್ಬರ ಜೊತೆ ಒಬ್ಬರು ಸತ್ಯನೇ ಮಾತಾಡಿ.’ (ಜೆಕ. 8:16) “ನಿಮ್ಮ ಮಧ್ಯ ಶಾಂತಿ ಕಾಪಾಡ್ಕೊಳ್ಳಿ.” (ಮಾರ್ಕ 9:50) “ಗೌರವ ತೋರಿಸೋದ್ರಲ್ಲಿ ಒಬ್ರಿಗಿಂತ ಒಬ್ರು ಮುಂದೆ ಬನ್ನಿ.” (ರೋಮ. 12:10) “ಒಬ್ರು ಇನ್ನೊಬ್ರನ್ನ ಸೇರಿಸ್ಕೊಳ್ಳಿ.” (ರೋಮ. 15:7) “ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.” (ಕೊಲೊ. 3:13) “ಒಬ್ರು ಇನ್ನೊಬ್ರ ಭಾರಗಳನ್ನ ಯಾವಾಗ್ಲೂ ಹೊತ್ಕೊಳ್ಳಿ.” (ಗಲಾ. 6:2) “ಒಬ್ರನ್ನೊಬ್ರು ಸಂತೈಸ್ತಾ ಇರಿ.” (1 ಥೆಸ. 4:18) “ಒಬ್ರನ್ನೊಬ್ರು . . . ಬಲಪಡಿಸ್ತಾ ಇರಿ.” (1 ಥೆಸ. 5:11) “ಒಬ್ರು ಇನ್ನೊಬ್ರ ಬಗ್ಗೆ ಪ್ರಾರ್ಥನೆ ಮಾಡಿ.”—ಯಾಕೋ 5:16.
9. ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ರೆ ನಾವು ಏನು ಮಾಡ್ತೀವಿ? (ಚಿತ್ರನೂ ನೋಡಿ.)
9 “ಒಬ್ರನ್ನೊಬ್ರು ಸಂತೈಸ್ತಾ ಇರಿ” ಅಂತ ಪೌಲ ಯಾಕೆ ಹೇಳಿದ? ಯಾಕಂದ್ರೆ ನಾವು ಬೇರೆಯವ್ರನ್ನ ಸಂತೈಸಿದಾಗ್ಲೇ ನಮಗೆ ಅವ್ರ ಮೇಲೆ ಪ್ರೀತಿ ಇದೆ ಅಂತ ತೋರಿಸೋಕೆ ಆಗೋದು. ಇಲ್ಲಿ ಪೌಲ “ಸಂತೈಸು” ಅಂತ ಹೇಳಿರೋದ್ರ ಅರ್ಥ ಏನು? ಇದ್ರ ಬಗ್ಗೆ ಒಂದು ಬೈಬಲ್ ರೆಫರೆನ್ಸ್ ಹೀಗೆ ಹೇಳುತ್ತೆ: “ಒಬ್ಬ ವ್ಯಕ್ತಿ ತುಂಬ ಕಷ್ಟದಲ್ಲಿ ಇರುವಾಗ ಅವನ ಪಕ್ಕದಲ್ಲಿ ನಿಂತು ಅವನನ್ನ ಪ್ರೋತ್ಸಾಹಿಸೋದು.” ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ಸಮಾಧಾನ ಮಾಡಿ ಅವ್ರಿಗೆ ಧೈರ್ಯ ತುಂಬೋಣ. ಆಗ ಅವ್ರನ್ನ ಮೇಲಕ್ಕೆ ಎತ್ತಿ ಜೀವದ ದಾರಿಲಿ ನಡೆಯೋಕೆ ಸಹಾಯ ಮಾಡಿದ ಹಾಗೆ ಆಗುತ್ತೆ. ಅವರು ಅಳುವಾಗ ಅವ್ರ ಕಣ್ಣೀರು ಒರೆಸೋಣ. ಹೀಗೆ ಅವ್ರ ಮೇಲೆ ನಮಗೆಷ್ಟು ಪ್ರೀತಿ ಇದೆ ಅಂತ ತೋರಿಸೋಣ.—2 ಕೊರಿಂ. 7:6, 7, 13.
10. ನಾವು ಬೇರೆಯವ್ರನ್ನ ಸಮಾಧಾನ ಮಾಡಬೇಕು ಅಂದ್ರೆ ನಮ್ಮಲ್ಲಿ ಯಾವ ಗುಣ ಇರಬೇಕು? ಮತ್ತು ಯಾಕೆ?
10 ಒಬ್ಬ ವ್ಯಕ್ತಿಗೆ ಅನುಕಂಪ ಇದ್ರೆನೇ ಬೆರೆಯವ್ರಿಗೆ ಸಮಾಧಾನ ಮಾಡೋಕೆ ಆಗೋದು. ಅವ್ರ ಕಷ್ಟ ಅರ್ಥ ಮಾಡ್ಕೊಂಡು ಅವ್ರಿಗೆ ಸಹಾಯ ಮಾಡೋಕೆ ಆಗೋದು. ಹಾಗಾಗಿ ನಮ್ಮಲ್ಲಿ ಅನುಕಂಪ ಅನ್ನೋ ಗುಣ ಇರಬೇಕು. ಯೆಹೋವನೂ ಅನುಕಂಪ ತೋರಿಸ್ತಾನೆ. ಅದಕ್ಕೇ ಪೌಲ ಯೆಹೋವ ದೇವರನ್ನ “ಕೋಮಲ ಕರುಣೆ ತೋರಿಸೋ ತಂದೆ, ಎಲ್ಲ ತರದ ಸಾಂತ್ವನ ಕೊಡೋ ದೇವರು” ಅಂತ ಹೇಳಿದ. (2 ಕೊರಿಂ. 1:3.) ಪೌಲ ಇಲ್ಲಿ ಯೆಹೋವನನ್ನ “ಕೋಮಲ ಕರುಣೆ ತೋರಿಸೋ ತಂದೆ” ಅಂತ ಹೇಳ್ತಿದ್ದಾನೆ. ಅಂದ್ರೆ ಆ ಗುಣ ಬಂದಿದ್ದೇ ಯೆಹೋವ ದೇವರಿಂದ. ಅನುಕಂಪ ಇರೋದ್ರಿಂದನೇ ಯೆಹೋವ ದೇವರು ನಮಗೆ ಏನೇ ಕಷ್ಟ ಬಂದ್ರೂ ನಮ್ಮನ್ನ ಸಮಾಧಾನ ಮಾಡ್ತಾನೆ. (2 ಕೊರಿಂ. 1:4) ತುಂಬ ಬಾಯಾರಿದವ್ರಿಗೆ ನೀರು ಸಿಕ್ಕಾಗ ಹೇಗೆ ಚೈತನ್ಯ ಸಿಗುತ್ತೋ ಹಾಗೇ ಕಷ್ಟದಲ್ಲಿರುವವ್ರಿಗೆ ಯೆಹೋವ ಸಮಾಧಾನ ಮಾಡ್ದಾಗ ಅವ್ರಿಗೆ ಧೈರ್ಯ ಸಿಗುತ್ತೆ. ನಾವೂ ಯೆಹೋವನ ತರನೇ ಬೇರೆಯವ್ರಿಗೆ ಅನುಕಂಪ ತೋರಿಸಬೇಕು. ಅವ್ರನ್ನ ಸಮಾಧಾನ ಮಾಡಬೇಕು. ಅದಕ್ಕೆ ಇನ್ನೂ ಕೆಲವು ಗುಣಗಳನ್ನ ಬೆಳೆಸ್ಕೊಬೇಕು. ಅದು ಯಾವುದು?
11. ಪ್ರೀತಿ ತೋರಿಸೋಕೆ ನಾವು ಇನ್ನೂ ಯಾವ ಗುಣಗಳನ್ನ ಬೆಳೆಸ್ಕೊಬೇಕು? (ಕೊಲೊ. 3:12; 1 ಪೇತ್ರ 3:8)
11 ನಾವು “ಒಬ್ರನ್ನೊಬ್ರು ಸಂತೈಸ್ತಾ,” ಪ್ರೀತಿ ತೋರಿಸ್ತಾ ಇರಬೇಕಂದ್ರೆ ಏನು ಮಾಡಬೇಕು? ನಾವು ದಯೆ ಅನ್ನೋ ಗುಣ ಬೆಳೆಸ್ಕೊಬೇಕು, ಬೇರೆಯವ್ರ ನೋವನ್ನ ಅರ್ಥ ಮಾಡ್ಕೊಬೇಕು. ಒಂದೇ ಕುಟುಂಬದವ್ರ ತರ ಪ್ರೀತಿ ತೋರಿಸಬೇಕು. (ಕೊಲೊಸ್ಸೆ 3:12; 1 ಪೇತ್ರ 3:8 ಓದಿ.) ಈ ಗುಣಗಳನ್ನ ಮತ್ತು ಅನುಕಂಪವನ್ನ ನಾವು ಬೆಳೆಸ್ಕೊಂಡ್ರೆ ಕಷ್ಟದಲ್ಲಿ ಇರುವವ್ರನ್ನ ನೋಡಿದಾಗ ಸಹಾಯ ಮಾಡಬೇಕು ಅಂತ ನಮಗೇ ಅನಿಸುತ್ತೆ. ಅದಕ್ಕೇ ಯೇಸು “ಹೃದಯದಲ್ಲಿ ಇರೋದೇ ಬಾಯಲ್ಲಿ ಬರೋದು. ಒಳ್ಳೆಯವನು ಒಳ್ಳೇದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಒಳ್ಳೇದೇ ತುಂಬಿರುತ್ತೆ” ಅಂತ ಹೇಳಿದ. (ಮತ್ತಾ. 12:34, 35) ಹಾಗಾಗಿ ನಮ್ಮ ಸಹೋದರ ಸಹೋದರಿಯರ ಮೇಲೆ ನಮಗೆ ನಿಜವಾದ ಪ್ರೀತಿ ಇದ್ರೆ ಅವ್ರಿಗೆ ಸಮಾಧಾನ ಮಾಡ್ತೀವಿ, ಧೈರ್ಯ ತುಂಬ್ತೀವಿ.
ನಮ್ಮ ಮಧ್ಯ ಇರೋ ಪ್ರೀತಿ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು?
12. (ಎ) ನಾವ್ಯಾಕೆ ಹುಷಾರಾಗಿರಬೇಕು? (ಬಿ) ನಾವೀಗ ಏನು ತಿಳ್ಕೊತೀವಿ?
12 ನಾವೆಲ್ರೂ “ಒಬ್ರನ್ನೊಬ್ರು ಪ್ರೀತಿಸ್ತಾ” ಇರೋಕೆ ಇಷ್ಟ ಪಡ್ತೀವಿ. (1 ಯೋಹಾ. 4:7) ಆದ್ರೆ “ತುಂಬ ಜನ್ರ ಪ್ರೀತಿ ತಣ್ಣಗಾಗುತ್ತೆ” ಅಂತ ಯೇಸು ಹೇಳಿದ ಮಾತನ್ನ ನಾವು ಮರಿಬಾರದು. (ಮತ್ತಾ. 24:12) ಇಲ್ಲಿ ಯೇಸು, ತನ್ನ ಶಿಷ್ಯರೆಲ್ರೂ ಹೀಗೆ ಮಾಡ್ತಾರೆ ಅಂತ ಹೇಳ್ತಿಲ್ಲ. ಆದ್ರೂ ಪ್ರೀತಿನೇ ಇಲ್ಲದಿರೋ ಜನ್ರು ನಮ್ಮ ಸುತ್ತಮುತ್ತ ಇರೋದ್ರಿಂದ ಕೆಲವೊಮ್ಮೆ ನಾವೂ ಅವ್ರ ತರ ಆಗಿಬಿಡಬಹುದು. ಅದಕ್ಕೇ ಹುಷಾರಾಗಿರಬೇಕು. ನಮ್ಮ ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಕಮ್ಮಿ ಆಗೋಕೆ ಯಾವತ್ತೂ ಬಿಡಬಾರದು. ಒಂದುವೇಳೆ ಕಮ್ಮಿ ಆಗ್ತಿದ್ರೆ ಅದನ್ನ ಹೇಗೆ ಕಂಡು ಹಿಡಿಯೋದು?
13. ನಮಗೆ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ಯಾ ಅಂತ ಯಾವಾಗ ಗೊತ್ತಾಗುತ್ತೆ?
13 ನಮ್ಮ ಜೀವನದಲ್ಲಿ ಕೆಲವು ಸನ್ನಿವೇಶಗಳು ಬಂದಾಗ ಸಹೋದರ ಸಹೋದರಿಯರ ಮೇಲೆ ಎಷ್ಟು ಪ್ರೀತಿ ಇದೆ ಅಂತ ನಮಗೆ ಗೊತ್ತಾಗುತ್ತೆ. (2 ಕೊರಿಂ. 8:8) ಅಂಥ ಒಂದು ಸನ್ನಿವೇಶದ ಬಗ್ಗೆ ಅಪೊಸ್ತಲ ಪೇತ್ರ ಹೀಗೆ ಹೇಳಿದ: “ಮುಖ್ಯವಾಗಿ ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು. ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.” (1 ಪೇತ್ರ 4:8) ಹಾಗಾಗಿ ಬೇರೆಯವರು ತಪ್ಪು ಮಾಡಿದಾಗ, ನಮ್ಮ ಮನಸ್ಸು ನೋಯಿಸಿದಾಗ ನಾವು ಹೇಗೆ ನಡ್ಕೊಳ್ತೀವೋ ಅದ್ರಿಂದ ಅವ್ರ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ಗೊತ್ತಾಗುತ್ತೆ.
14. ನಾವು ಎಂಥ ಪ್ರೀತಿ ತೋರಿಸಬೇಕು ಅಂತ 1 ಪೇತ್ರ 4:8 ಹೇಳುತ್ತೆ? ವಿವರಿಸಿ.
14 ನಾವೀಗ ಪೇತ್ರನ ಮಾತುಗಳಿಗೆ ಸ್ವಲ್ಪ ಗಮನ ಕೊಡೋಣ. 8ನೇ ವಚನದ ಮೊದಲನೇ ಭಾಗದಲ್ಲಿ ನಾವು “ತುಂಬ ಪ್ರೀತಿ” ತೋರಿಸಬೇಕು ಅಂತ ಹೇಳುತ್ತೆ. “ತುಂಬ” ಅನ್ನೋ ಪದದ ಅಕ್ಷರಾರ್ಥ “ಹಾಸೋದು”. ಆ ವಚನದ ಎರಡನೇ ಭಾಗದಲ್ಲಿ “ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ” ಅಂತ ಹೇಳುತ್ತೆ. ಅಂದ್ರೆ ಅವ್ರ ಪಾಪಗಳನ್ನ ಮುಚ್ಚುತ್ತಾನೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ನಿಮ್ಮ ಮನೇಲಿ ನೋಡೋಕೆ ತುಂಬ ಗಲೀಜಾಗಿರೋ ಒಂದು ಟೇಬಲ್ ಇದೆ ಅಂತ ಅಂದ್ಕೊಳ್ಳಿ. ಅದ್ರ ಮೇಲೆ ನೀವೊಂದು ಬಟ್ಟೆಯನ್ನ ಹಾಸಿದಾಗ ಅದ್ರಲ್ಲಿರೋ ಒಂದೆರಡು ಮಾತ್ರ ಅಲ್ಲ ಎಲ್ಲಾ ಗಲೀಜನ್ನ ಅಥವಾ ಕಲೆಯನ್ನ ಆ ಬಟ್ಟೆ ಮುಚ್ಚಿಬಿಡುತ್ತೆ. ಹಾಗೇನೇ ಸಹೋದರ ಸಹೋದರಿಯರ ಮೇಲೆ ನಮಗೆ “ತುಂಬ ಪ್ರೀತಿ” ಇದ್ರೆ ಅವ್ರು ಒಂದಲ್ಲಾ, ಎರಡಲ್ಲಾ ‘ಎಷ್ಟೇ ತಪ್ಪುಗಳನ್ನ’ ಮಾಡಿದ್ರೂ ಕ್ಷಮಿಸಿ ಬಿಡ್ತೀವಿ.
15. ಸಹೋದರ ಸಹೋದರಿಯರ ಮೇಲೆ ನಮಗೆ ತುಂಬ ಪ್ರೀತಿ ಇದ್ರೆ ನಾವೇನು ಮಾಡ್ತೀವಿ? (ಕೊಲೊಸ್ಸೆ 3:13)
15 ಸಹೋದರ ಸಹೋದರಿಯರ ಮೇಲೆ ನಮಗೆ ತುಂಬ ಪ್ರೀತಿ ಇದ್ರೆ ಅದೆಷ್ಟೇ ಕಷ್ಟ ಆದ್ರೂ ನಾವು ಅವ್ರನ್ನ ಕ್ಷಮಿಸ್ತೀವಿ. (ಕೊಲೊಸ್ಸೆ 3:13 ಓದಿ.) ಹೀಗೆ ಮಾಡುವಾಗ ಅವ್ರ ಮೇಲೆ ನಮಗೆಷ್ಟು ಪ್ರೀತಿ ಇದೆ ಅಂತ ತೋರಿಸೋದಷ್ಟೇ ಅಲ್ಲ, ಯೆಹೋವನನ್ನ ಮೆಚ್ಚಿಸೋ ಆಸೆನೂ ಇದೆ ಅಂತ ತೋರಿಸ್ತೀವಿ. ಕೆಲವೊಮ್ಮೆ ಸಹೋದರ ಸಹೋದರಿಯರು ಕಿರಿಕಿರಿ ಆಗೋ ತರ ನಡ್ಕೊಂಡ್ರೂ ನಮಗೆ ಅವ್ರನ್ನ ಕ್ಷಮಿಸೋಕೆ ಆಗುತ್ತೆ. ಅದಕ್ಕೆ ಯಾವುದು ಸಹಾಯ ಮಾಡುತ್ತೆ ಅಂತ ನೋಡೋಣ.
16-17. ಬೇರೆಯವರು ಚಿಕ್ಕಪುಟ್ಟ ತಪ್ಪುಗಳನ್ನ ಮಾಡಿದಾಗ ನಾವೇನು ಮಾಡಬೇಕು? ಉದಾಹರಣೆ ಕೊಡಿ. (ಚಿತ್ರನೂ ನೋಡಿ.)
16 ನಾವು ಸಹೋದರ ಸಹೋದರಿಯರು ಮಾಡೋ ತಪ್ಪುಗಳನ್ನಲ್ಲ, ಅವರು ಇಲ್ಲಿ ತನಕ ಏನೆಲ್ಲಾ ಒಳ್ಳೇದನ್ನ ಮಾಡಿದ್ದಾರೋ ಅದನ್ನ ನೆನಪಿಸ್ಕೊಬೇಕು. ಒಂದು ಉದಾಹರಣೆ ನೋಡಿ. ನೀವು ಮತ್ತು ಸಹೋದರ ಸಹೋದರಿಯರೆಲ್ಲಾ ಒಂದು ಗೆಟ್ ಟುಗೆದರ್‌ಗೆ ಬಂದಿದ್ದೀರಾ ಅಂದ್ಕೊಳ್ಳಿ. ಅಲ್ಲಿ ನೀವೆಲ್ರೂ ಚೆನ್ನಾಗಿ ಸಮಯ ಕಳಿತೀರ, ಆಮೇಲೆ ಮನೆಗೆ ಹೋಗೋಕೆ ಮುಂಚೆ ಫೋಟೋ ತಗೊಳ್ತೀರ. ಆಗ ನೀವು ಒಂದಲ್ಲ, ಎರಡು ಮೂರು ಫೋಟೋ ತಗೊಳ್ತೀರ. ಆದ್ರೆ ಒಂದು ಫೋಟೋದಲ್ಲಿ ಒಬ್ಬ ಸಹೋದರನ ಮುಖ ಚೆನ್ನಾಗಿ ಬಂದಿಲ್ಲಾ ಅಂದ್ರೆ ಆ ಫೋಟೋ ಡಿಲೀಟ್ ಮಾಡಿ ಚೆನ್ನಾಗಿರೋದನ್ನ ಇಟ್ಕೊಳ್ತೀರ ಅಲ್ವಾ?
17 ಈಗ ನಾವು ಫೋನಲ್ಲಿ ಇಟ್ಕೊಳ್ಳೋ ಫೋಟೋಗಳನ್ನ ನಮ್ಮ ನೆನಪಿಗೆ ಹೋಲಿಸೋಣ. ನಮ್ಮ ನೆನಪಲ್ಲಿ ಸಹೋದರ ಸಹೋದರಿಯರ ಜೊತೆ ಕಳೆದಿರೋ ಎಷ್ಟೋ ಒಳ್ಳೇ ಕ್ಷಣಗಳನ್ನ ಇಟ್ಕೊಂಡಿರ್ತೀವಿ. ಆದ್ರೆ ಅವರು ಕೆಲವೊಮ್ಮೆ ನಮಗೆ ಬೇಜಾರಾಗೋ ತರ ಮಾತಾಡಿ ಬಿಡಬಹುದು ಅಥವಾ ನಡ್ಕೊಂಡು ಬಿಡಬಹುದು. ಆಗ ನಾವೇನು ಮಾಡಬೇಕು? ಅವ್ರ ಜೊತೆ ಕಳೆದಿರೋ ಒಳ್ಳೇ ಕ್ಷಣಗಳನ್ನ ಜೋಪಾನವಾಗಿ ಇಟ್ಕೊಬೇಕು, ಅವರು ಮಾಡಿರೋ ಚಿಕ್ಕಪುಟ್ಟ ತಪ್ಪುಗಳನ್ನ ಡಿಲೀಟ್ ಮಾಡಿಬಿಡಬೇಕು.—ಜ್ಞಾನೋಕ್ತಿ 19:11; ಎಫೆಸ 4:32.
ಈಗ ನಾವ್ಯಾಕೆ ಜಾಸ್ತಿ ಪ್ರೀತಿ ತೋರಿಸಬೇಕು?
18. ನಾವು ಈ ಲೇಖನದಲ್ಲಿ ಏನು ಕಲಿತ್ವಿ?
18 ನಾವು ಒಬ್ರನ್ನೊಬ್ರು ಯಾಕೆ ಪ್ರೀತಿಸಬೇಕು? ನಾವು ಸಹೋದರ ಸಹೋದರಿಯರನ್ನ ಪ್ರೀತಿಸಿದ್ರೆ ಯೆಹೋವ ದೇವರನ್ನ ಪ್ರೀತಿಸ್ತೀವಿ ಅಂತ ಅರ್ಥ. ಆದ್ರೆ ಆ ಪ್ರೀತಿಯನ್ನ ತೋರಿಸೋದು ಹೇಗೆ? ಅವರು ಕಷ್ಟದಲ್ಲಿ ಇದ್ದಾಗ ಸಮಾಧಾನ ಮಾಡಬೇಕು, ಅವ್ರಿಗೆ ಧೈರ್ಯ ತುಂಬಬೇಕು. ನಮ್ಮಲ್ಲಿ ಅನುಕಂಪ ಅನ್ನೋ ಗುಣ ಇದ್ರೆ “ಒಬ್ರನ್ನೊಬ್ರು ಸಂತೈಸ್ತಾ” ಇರೋಕೆ ಆಗುತ್ತೆ. ಈ ಪ್ರೀತಿ ಇನ್ನೂ ಜಾಸ್ತಿ ಆಗಬೇಕು ಅಂದ್ರೆ ಏನು ಮಾಡಬೇಕು? ಎಷ್ಟೇ ಕಷ್ಟ ಆದ್ರೂ ಬೇರೆಯವರು ಮಾಡೋ ಚಿಕ್ಕಪುಟ್ಟ ತಪ್ಪುಗಳನ್ನ ಕ್ಷಮಿಸೋಕೆ ನಾವು ರೆಡಿ ಇರಬೇಕು.
19. ನಾವು ಮುಂಚೆಗಿಂತ ಈಗ ಯಾಕೆ ಒಬ್ರನ್ನೊಬ್ರು ಜಾಸ್ತಿ ಪ್ರೀತಿಸಬೇಕು?
19 ನಾವ್ಯಾಕೆ ಮುಂಚೆಗಿಂತ ಈಗ ಜಾಸ್ತಿ ಪ್ರೀತಿ ತೋರಿಸಬೇಕು? ಅದಕ್ಕೆ ಉತ್ರ ಪೇತ್ರ ಹೇಳಿದ ಮಾತಲ್ಲಿದೆ. ಅವನು “ಎಲ್ಲಾ ಕೊನೆಯಾಗೋ ಸಮಯ ಹತ್ರ ಆಗಿದೆ. ಹಾಗಾಗಿ . . . ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು” ಅಂತ ಹೇಳಿದ. (1 ಪೇತ್ರ 4:7, 8) ಅಂತ್ಯ ಹತ್ರ ಆಗ್ತಿದ್ದಂತೆ ಏನಾಗುತ್ತೆ? “ನೀವು ನನ್ನ ಶಿಷ್ಯರಾಗಿರೋ ಕಾರಣ ಎಲ್ಲ ದೇಶದವರು ನಿಮ್ಮನ್ನ ದ್ವೇಷಿಸ್ತಾರೆ” ಅಂತ ಯೇಸು ಹೇಳಿದ್ದಾನೆ. (ಮತ್ತಾ. 24:9) ಹಾಗಾಗಿ ಅಂತ್ಯ ಹತ್ರ ಆಗ್ತಾ ಹೋದ ಹಾಗೆ ಈ ದ್ವೇಷ ಇನ್ನೂ ಜಾಸ್ತಿ ಆಗುತ್ತೆ. ಇದನ್ನ ಸಹಿಸ್ಕೊಬೇಕಂದ್ರೆ ನಾವು ಒಬ್ರಿಗೊಬ್ರು ಪ್ರೀತಿ ತೋರಿಸಬೇಕು. “ಯಾಕಂದ್ರೆ ಎಲ್ರನ್ನೂ ಒಂದು ಮಾಡೋದು ಈ ಪ್ರೀತಿನೇ.” ಹೀಗೆ ನಾವು ಒಗ್ಗಟ್ಟಾಗಿದ್ರೆ ಸೈತಾನ ಏನೇ ಪ್ರಯತ್ನ ಮಾಡಿದ್ರು ಅದು ಮಣ್ಣುಮುಕ್ಕುತ್ತೆ.—ಕೊಲೊ. 3:14; ಫಿಲಿ. 2:1, 2.
ಗೀತೆ 77 ಕ್ಷಮಿಸುವವರಾಗಿರಿ
a ನಾವು ಮುಂಚೆಗಿಂತ ಈಗ ಸಹೋದರ ಸಹೋದರಿಯರನ್ನ ಜಾಸ್ತಿ ಪ್ರೀತಿಸಬೇಕು. ಯಾಕೆ? ಆ ಪ್ರೀತಿಯನ್ನ ಹೇಗೆ ತೋರಿಸಬಹುದು?